ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಜಾಣ್ಮೆಯಿಂದ ಸಮಸ್ಯೆಗಳ ನಿವಾರಣೆ

ತಮ್ಮನ್ನು ಆನೆಯ ಹಾವಳಿಯಿಂದ ಕಾಪಾಡಿ ಪ್ರಾಣ ರಕ್ಷಣೆ ಮಾಡಿದ ಬಿಳಿ ಮೊಲವನ್ನು ಉಳಿದೆಲ್ಲಾ ಮೊಲಗಳು ಹಾಡಿ ಹೊಗಳಿ ಕೊಂಡಾಡಿ, ತಮ್ಮ ನಾಯಕನನ್ನಾಗಿ ಮಾಡಿಕೊಂಡವು. ಕೆಲವೊಮ್ಮೆ ನಮ್ಮನ್ನು ಕಾಡಿಸುವವರು ನಮಗಿಂತ ನೂರು ಪಟ್ಟು ಬಲಿಷ್ಠರಾಗಿರುತ್ತಾರೆ, ಹಾಗೆಂದು ಸಮಸ್ಯೆಗೆ ಪರಿಹಾರವೇ ಇಲ್ಲ ಎಂದಿಲ್ಲ. ಧೃತಿಗೆಡದೆ ಸಮಯೋಚಿತವಾಗಿ ಬುದ್ಧಿವಂತಿಕೆಯಿಂದ ಯೋಚಸಿದರೆ ಎಂತಹ ಸಮಸ್ಯೆಗೂ ಕೂಡ ಪರಿಹಾರ ಕಂಡುಕೊಳ್ಳಬಹುದು.

ಜಾಣ್ಮೆಯಿಂದ ಸಮಸ್ಯೆಗಳ ನಿವಾರಣೆ

ಒಂದೊಳ್ಳೆ ಮಾತು

rgururaj628@gmail.com

ಒಂದು ಕಾಡಿನಲ್ಲಿ ಆನೆಗಳ ದೊಡ್ಡ ಗುಂಪಿತ್ತು. ಒಂದು ಸಲ ಸರಿಯಾಗಿ ಮಳೆಯಾಗದೆ, ನೀರಿನ ಕೆರೆಗಳೆಲ್ಲಾ ಬತ್ತಿ ಹೋಗಿ ಅವುಗಳ ಕುಡಿಯುವ ನೀರಿಗೆ ಬಹಳ ತೊಂದರೆ ಉಂಟಾಯಿತು. ಆನೆಗಳು ತಮ್ಮ ರಾಜನ ಬಳಿಗೆ ಹೋಗಿ ಸಮಸ್ಯೆಯನ್ನು ಹೇಳಿಕೊಂಡವು.

‘ಮಹಾಪ್ರಭೂ, ಕುಡಿಯಲು ನೀರು ಸಿಗದೇ ನಾವೆಲ್ಲ ಸಾಯುವ ಪರಿಸ್ಥಿತಿಯಲ್ಲಿ ಇದ್ದೇವೆ, ಈ ಕಾಡಿನ ಕೆರೆಗಳೆಲ್ಲಾ ಬತ್ತಿ ಹೋಗಿವೆ, ದಯವಿಟ್ಟು ನಮ್ಮನ್ನು ನೀರಿರುವ ಬೇರೆ ಜಾಗಕ್ಕೆ ಕರೆದುಕೊಂಡು ಹೋಗಿ’ ಎಂದು ಬೇಡಿಕೊಂಡವು. ಆನೆಗಳ ರಾಜನು ಅವುಗಳನ್ನೆಲ್ಲಾ ದೂರದ ಇನ್ನೊಂದು ಕಾಡಿಗೆ ಕರೆದುಕೊಂಡು ಹೋಯಿತು. ದೊಡ್ಡದಾದ ಸರೋವರವನ್ನು ಕಂಡು ಅವುಗಳೆಲ್ಲಾ ಅಲ್ಲೇ ಬೀಡು ಬಿಟ್ಟವು. ತಮ್ಮ ಮನಸ್ಸಿಗೆ ಬಂದಷ್ಟು ನೀರು ಕುಡಿದು, ಸ್ವೇಚ್ಛೆಯಿಂದ ಅಲ್ಲಿನ ಹುಲ್ಲಿನ ಮೇಲೆ ಬಿದ್ದು ಹೊರಳಾಡುತ್ತಿದ್ದವು.

ಅದೇ ಸರೋವರದ ತೀರದಲ್ಲಿ ನೂರಾರು ಮೊಲಗಳು ವಾಸವಾಗಿದ್ದವು. ಆನೆಗಳ ಗುಂಪು ಅಲ್ಲಿಗೆ ಬಂದಿದ್ದರಿಂದ, ಆನೆಗಳ ಕಾಲ್ತುಳಿತಕ್ಕೆ ಸಿಲುಕಿ ಅನೇಕ ಮರಿ ಮೊಲಗಳು ಸತ್ತು ಹೋದವು. ಆಗ ಕಂದು ಬಣ್ಣದ ವಯಸ್ಸಾದ ಮೊಲವೊಂದು ತನ್ನ ಬಳಗದವರನ್ನು ಸಭೆಗೆ ಕರೆದು ಬಹಳ ಬೇಸರ ದಿಂದ, ‘ಈ ಆನೆಗಳ ಹಿಂಡು ಇನ್ನೂ ಕೆಲವು ದಿನ ಇಲ್ಲೇ ಇದ್ದರೆ, ನಮ್ಮ ವಂಶವೇ ನಾಶವಾಗುತ್ತದೆ. ಅದನ್ನು ತಪ್ಪಿಸಲು ಏನಾದರೂ ಪರಿಹಾರ ಕಂಡುಹಿಡಿಯಬೇಕು’ ಎಂದಿತು.

ಇದನ್ನೂ ಓದಿ: Roopa Gururaj Column: ದಾನ ಮಾಡಿದ ಅಕ್ಕಿಯ ಕಾಳು ಬಂಗಾರವಾದಾಗ

ಆಗ ಆ ಮೊಲಗಳ ಗುಂಪಿನಲ್ಲಿದ್ದ ಒಂದು ಬಿಳಿ ಬಣ್ಣದ ಮೊಲ ಒಂದು ದೊಡ್ಡ ಬೆಟ್ಟವನ್ನು ಹತ್ತಿ ನಿಂತು ಆನೆಗಳ ರಾಜನಿಗೆ ಕೇಳುವಂತೆ, ‘ಸಲಗರಾಜ, ನಾನು ಚಂದ್ರದೇವನ ದೂತ. ಚಂದ್ರದೇವ ನಿನಗೊಂದು ಸಂದೇಶವನ್ನು ಕಳಿಸಿದ್ದಾನೆ ಕೇಳಿಸಿಕೋ’ಎಂದಿತು. ಆಗ ಆನೆಗಳ ರಾಜ, ‘ಅದೇನು ಹೇಳು?’ ಎಂದಿತು. ‘ಚಂದ್ರದೇವ ಹೇಳುತ್ತಾನೆ, ಇದು ಅವನ ಸರೋವರ.

ಇದರ ರಕ್ಷಣೆಗಾಗಿ ಇರಿಸಿರುವ ಈ ಮೊಲಗಳನ್ನು ನೀವು ಅಹಂಕಾರದಿಂದ ತುಳಿದು ಸಾಯಿಸಿರುವಿ. ಈ ಮೊಲಗಳು ನನ್ನವು, ಅದಕ್ಕಾಗಿಯೇ ನನಗೆ ಶಶಾಂಕನೆಂದು ಹೆಸರು ಬಂದಿರುವುದು, ಇನ್ನು ಮುಂದೆ ನೀವು ಇವುಗಳ ಜೊತೆ ಅಹಂಕಾರದಿಂದ ವರ್ತಿಸಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ನಾನು ನಿಮಗೆ ವಿಧಿಸಬೇಕಾಗುತ್ತದೆ’ ಎಂದು ಹೇಳಿತು.

ಆನೆಗಳ ರಾಜನಿಗೆ ಈಗ ಬಹಳ ಭಯವಾಯಿತು. ನಮಗೆ ತಿಳಿಯದೇ ಏನೋ ತಪ್ಪಾಗಿ ಹೋಗಿದೆ, ಕ್ಷಮಿಸಿಬಿಡಿ. ಚಂದ್ರದೇವ, ಇನ್ನು ಮುಂದೆ ಹಾಗಾಗುವುದಿಲ್ಲ’ ಎಂದು ಹೇಳಿತು ಆನೆಗಳ ರಾಜ. ‘ಹಾಗಾದರೆ ನೀವು ಈಗ ಚಂದ್ರದೇವನಿಗೆ ನಮಸ್ಕಾರ ಮಾಡಿ ಇಲ್ಲಿಂದ ಈ ಕ್ಷಣ ಹೊರಟುಹೋಗಿ’ ಎಂದಿತು ಬಿಳಿ ಮೊಲ.

ಆನೆಗಳ ರಾಜನು ‘ಚಂದ್ರನೆಲ್ಲಿ?’ ಎಂದು ಮೇಲೆ ನೋಡಿ ಹುಡುಕುತ್ತಿದ್ದಾಗ ಜಾಣ ಮೊಲ, ಸರೋವರದಲ್ಲಿದ್ದ ಚಂದ್ರಬಿಂಬವನ್ನು ತೋರಿಸಿ, ‘ಇಲ್ಲಿದ್ದಾನೆ, ನೋಡಿ’ ಎಂದಿತು. ಸಲಗ ರಾಜ ನೀರಿನಲ್ಲಿ ಕಂಡ ಚಂದ್ರ ಬಿಂಬಕ್ಕೆ ನಮಸ್ಕರಿಸಿತು. ನಮ್ಮಿಂದ ತಪ್ಪಾಗಿದೆ, ನಮ್ಮನ್ನು ಕ್ಷಮಿಸು ಚಂದ್ರದೇವಾ’ ಎಂದು ಹೇಳಿತು. ಆನೆಗಳ ಹಿಂಡನ್ನು ಕರೆದುಕೊಂಡು ಬೇರೆ ಕಡೆಗೆ ಹೊರಟು ಹೋಯಿತು.

ತಮ್ಮನ್ನು ಆನೆಯ ಹಾವಳಿಯಿಂದ ಕಾಪಾಡಿ ಪ್ರಾಣ ರಕ್ಷಣೆ ಮಾಡಿದ ಬಿಳಿ ಮೊಲವನ್ನು ಉಳಿದೆಲ್ಲಾ ಮೊಲಗಳು ಹಾಡಿ ಹೊಗಳಿ ಕೊಂಡಾಡಿ, ತಮ್ಮ ನಾಯಕನನ್ನಾಗಿ ಮಾಡಿಕೊಂಡವು. ಕೆಲವೊಮ್ಮೆ ನಮ್ಮನ್ನು ಕಾಡಿಸುವವರು ನಮಗಿಂತ ನೂರು ಪಟ್ಟು ಬಲಿಷ್ಠರಾಗಿರುತ್ತಾರೆ, ಹಾಗೆಂದು ಸಮಸ್ಯೆಗೆ ಪರಿಹಾರವೇ ಇಲ್ಲ ಎಂದಿಲ್ಲ. ಧೃತಿಗೆಡದೆ ಸಮಯೋಚಿತವಾಗಿ ಬುದ್ಧಿವಂತಿಕೆಯಿಂದ ಯೋಚಸಿದರೆ ಎಂತಹ ಸಮಸ್ಯೆಗೂ ಕೂಡ ಪರಿಹಾರ ಕಂಡುಕೊಳ್ಳಬಹುದು.

ಪ್ರತಿ ಸಮಸ್ಯೆಗೂ ಶಕ್ತಿಯಿಂದಲೇ ಪರಿಹಾರ ಸಿಗುವುದಿಲ್ಲ, ಕೆಲವೊಂದಕ್ಕೆ ಯುಕ್ತಿಯ ಅಗತ್ಯವೂ ಇರುತ್ತದೆ. ಇಂತಹ ಜಾಣ ಮಾತುಗಳನ್ನು ನಾವೂ ತಿಳಿದು ನಮ್ಮ ಮಕ್ಕಳಿಗೂ ಕಥೆಯ ರೂಪದಲ್ಲಿ ಹೇಳಿಕೊಟ್ಟಾಗ ಖಂಡಿತ ಅವರು ಬಂದದ್ದನ್ನು ಆತ್ಮಸ್ಥೈರ್ಯದಿಂದ ಎದುರಿಸುತ್ತಾರೆ.