ವಿದ್ಯಮಾನ
ನಿಜವಾಗಿ ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸುವುದು ಕಷ್ಟದ ಕೆಲಸವಲ್ಲ, ಅದೇ ನಿದ್ರೆ ಬಂದವರ ಹಾಗೆ ನಟಿಸುತ್ತಿರುವವರನ್ನು ಎಬ್ಬಿಸುತ್ತೇನೆ ಅಂದರೆ ಅದು ಮೂರ್ಖತನದ ಕೆಲಸವೇ ಸರಿ. ಮತದಾರರ ಪಟ್ಟಿ ಪರಿಷ್ಕರಣೆಯ ವಿಷಯದಲ್ಲಿ ಆಗುತ್ತಿರುವುದೂ ಇದೇ, ಎಸ್ಐಆರ್ ವಿರೋಧಿಸು ವವರಿಗೂ ಗೊತ್ತು ಅಂಥಾದ್ದೇನೂ ಆಗಲಿಲ್ಲ ಅಂತ, ಆದರೂ ಒಂದಷ್ಟು ರಂಪಾಟ ಮಾಡಿದರೆ ಜನ ಅದನ್ನೇ ಸತ್ಯ ಅಂತ ನಂಬಬಹುದು ಎನ್ನುವುದು ಅವರ ಕಲ್ಪನೆ. ಆದರೆ ಕಾಲ ಬಹಳ ಬದಲಾಗಿದೆ, ಸರಿತಪ್ಪುಗಳ ನಡುವೆ -ರಕ್ಕು ಮಾಡುವುದು ಇಂದಿನ ಮಾಹಿತಿಗಳ ಯುಗದಲ್ಲಿ ಯಾರಿಗೂ ಕಷ್ಟದ ಕೆಲಸವೇನಲ್ಲ.
ತಥ್ಯ ಸುಲಭವಾಗಿ ಗೊತ್ತಾಗಿ ಹೋಗುತ್ತದೆ. ನೀಟ್ ಪರೀಕ್ಷೆಯ ಫಲಿತಾಂಶ ಹೊರಬಂದು ಕೆಲವು ದಿನಗಳ ನಂತರ ಕಾಕ್ರೋಚ್ ಜನತಾ ಪಕ್ಷಕ್ಕೆ ಭಯಾನಕ ಸ್ವಪ್ನವಾಗಿ ಎಚ್ಚರವಾಯ್ತು, ಅಲ್ಲಿಯ ವರೆಗೆ ಏನೂ ಆಗಿಲ್ಲದಂತೆ ಇದ್ದ ಕಾಂಗ್ರೆಸ್ ಪಕ್ಷಕ್ಕೆ ನಿದ್ರೆಯಲ್ಲಿದ್ದಾಗ ಯಾರಾದರೂ ಮುಖದ ಮೇಲೆ ನೀರು ಚೆಲ್ಲಿದಾಗ ಆಗುವ ಅನುಭವವಾಗಿ ಹೋರಾಟ ಶುರುವಾಯ್ತು.
ಕೊನೆಗೂ ಶಿಕ್ಷಣ ಮಂತ್ರಿಯೇನೋ ರಾಜೀನಾಮೆ ನೀಡಿದರು, ಆದರೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಯಶಸ್ಸು ಕಾಂಗ್ರೆಸ್ಸಿಗೆ ಸಿಗಲೇ ಇಲ್ಲ, ಅದರ ಶ್ರೇಯಸ್ಸೆಲ್ಲವೂ ಸಿಜೆಪಿಯ ಪಾಲಾಯ್ತು. ಮತ್ತೆ ಕಾಂಗ್ರೆಸ್ಸಿಗೆ ಕೆಲಸವಿಲ್ಲದಂತಾಯ್ತು. 2024ರಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ಯಾಗಿತ್ತು, ಆಗ ಅಲ್ಲಿ ಎಸ್ಐಆರ್ ಆಗಿರಲಿಲ್ಲ, 2025ರಲ್ಲಿ ಬಿಹಾರದಲ್ಲಿ ಚುನಾವಣೆಯಾಯ್ತು ಅಲ್ಲಿಯೂ ಎಸ್ಐಆರ್ ಆಗಿದ್ದು ಆಮೇಲೆಯೇ. ಆಗ ಏನೂ ಸದ್ದುಗದ್ದಲವಿಲ್ಲ, ಎಲ್ಲವೂ ಸರಿಯಾಗಿಯೇ ಇತ್ತು.
ಇದನ್ನೂ ಓದಿ: Vinayaka M Bhat Column: ನ್ಯೂನಾತಿರೇಕಗಳಿಲ್ಲದ ಸರಳ ಸುಲಭ ಮಾನಸ ಪೂಜೆ
ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ವರದಿಯೊಂದು ಪ್ರಕಟವಾಗುತ್ತಿದ್ದಂತೆ ಸಿಜೆಪಿ ಮತ್ತೆ ಎದ್ದು ಕುಂತು ಸಿಇಸಿಯ ರಾಜೀನಾಮೆಗೆ ಗಡುವು ನೀಡಿತು. ಆದರೆ ಈ ಬಾರಿ ಮೊದಲಿನಂತಾಗಲಿಲ್ಲ, ದೆಹಲಿ ಪೋಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರು, ಬಂಧಿಸಬೇಕಾದವರನ್ನು ಬಂಧಿಸಿ ಮೊದಲೇ ಮೂಗುದಾರ ಹಾಕಲಾಗಿತ್ತು.
‘ಕಾಕ್ರೋಚ್ ಪ್ರೆಶರ್ ಗ್ರೂಪ್’ ಸ್ವಲ್ಪ ಮೆತ್ತಗಾಗಿತ್ತು. ನ್ಯಾಯಾಲಯದಲ್ಲಿ ‘ಪೀಸ್ ಬಾಂಡ್’ ಸಹಿ ಮಾಡಿ ಹೊರಗೆ ಬಂದಿದ್ದವರು ಅಂಡುಸುಟ್ಟ ಬೆಕ್ಕಿನಂತಾಗಿದ್ದರು. ಸಾರ್ವಜನಿಕರೂ ಕಂಡಕಂಡಲ್ಲಿ ಸಿಜೆಪಿಗೆ ಹಿಡಿಶಾಪ ಹಾಕಲು ಮೊದಲ್ಗೊಂಡರು. ಇವೆಲ್ಲ ವಿದ್ಯಮಾನಗಳ ನಡುವೆ, ಕಾಂಗ್ರೆಸ್ ಸುಮ್ಮನೆ ಕೂರಲಾದೀತೆ? ತಂಡ ಕಟ್ಟಿಕೊಂಡು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮತಗಳ ವಾಗುತ್ತಿದೆ ಎಂದು ಗೋಳಿಟ್ಟಿತು. ಮತಗಳವಿಗೆ ನಿಮ್ಮಲ್ಲಿ ಪುರಾವೆ ಏನಾದರೂ ಇದ್ದರೆ ಕೊಡಿ ಎಂದು ರಾಷ್ಟ್ರಪತಿಗಳು ಕೇಳಿರುವುದು ರಾಹುಲ್ ಗಾಂಧಿಗೆ ಅಚ್ಚರಿಯಾಯಿತಂತೆ.
ಮುಂದೆ ಚುನಾವಣಾ ಆಯೋಗದ ಕಛೇರಿ, ನಿರ್ವಾಚನ್ ಭವನಕ್ಕೆ ಒಂದು ಬೃಹತ್ ಮೆರವಣಿಗೆ ಹೊರಟಿತ್ತು, ಏನಾಯಿತೋ ಏನೋ ಗೊತ್ತಿಲ್ಲ, ಆದರೆ ರಾಹುಲ್ ಮಾರ್ಗಮಧ್ಯದಲ್ಲಿ ಸಿಗುವ ಆಕಾಶವಾಣಿ ಭವನದ ಗೇಟಿಗೆ ಕೈಇಟ್ಟು ಸುದ್ದಿಯಾದರು. ನಂತರ ಸುಪ್ರೀಮ್ ಕೊರ್ಟಿನ ಮುಖ್ಯ ನ್ಯಾಯಾಧೀಶರ ಸಮಯ ಕೇಳಿ ಇಂಡಿ ಒಕ್ಕೂಟ ಪತ್ರ ಕಳಿಸಿತು. ನೀವು ಏನು ಹೇಳುವುದಿದ್ದರೂ ಲಿಖಿತ ದೂರಿನ ಮುಖಾಂತರ ಹೇಳಬಹುದು ಎಂದು ಹೇಳಿ ವಾಪಸ್ ಕಳುಹಿಸಿತು.
ಮುಜುಗರ ಅಷ್ಟಕ್ಕೇ ಸೀಮಿತವಾಗಲಿಲ್ಲ, ಸುಪ್ರೀಮ್ ಕೋರ್ಟಿನ ಅಸಾಸುರ ಮಸಾಸುರ ವಕೀಲ ರಾದ ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ ಮುಂತಾದವರು ತಯಾರಿಸಿ ಅಥವಾ ಪರಾಂಬರಿಸಿ ನೀಡಿದ ದೂರಿನಲ್ಲಿ ಅನೇಕ ತಾಂತ್ರಿಕ ದೋಷಗಳಿದ್ದವಂತೆ. ಹಾಗಾಗಿ ಅದನ್ನು ಹಿಂತಿರುಗಿಸಿ, ಕ್ರಮಬದ್ಧವಾಗಿ ದೂರನ್ನು ನೀಡುವಂತೆ ಸೂಚಿಸಲಾಯಿತು.
ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ಸರಿಯಾಗಿ ಭಾಗವಹಿಸದೇ ಪಲಾಯನ ಮಾಡುವ ವಿರೋಧ ಪಕ್ಷಗಳು, ಮೊನ್ನೆ ದೆಹಲಿಯ ಮಲ್ಲಿಕಾರ್ಜುನ ಖರ್ಗೆಯವರ ಮನೆಯಂಗಳದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ವಿನೂತನ ಅಣಕು ಸಂಸತ್ ನಡೆಸಿದವು. ಆ ಅಣಕು ಪ್ರದರ್ಶನದಲ್ಲಿ ಪ್ರಕಾಶ ರಾಜ್, ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ಇರಲಿಲ್ಲ ಅಂದಮೇಲೆ ಅದು ಅಣಕು ಹೇಗಾಗುತ್ತದೆ ಎನ್ನುವುದು ಮಾತ್ರ ತಿಳಿಯಲಿಲ್ಲ.
ರಾಹುಲ್ ಗಾಂಧಿ ಅಲ್ಲೂ ಪ್ರಧಾನಮಂತ್ರಿಗಳ ಪಾತ್ರ ವಹಿಸಲಾಗಲಿಲ್ಲ ಎನ್ನುವುದು. ಅಲ್ಲಿ ಇನ್ನೂ ಒಂದು ವಿಶೇಷವಿತ್ತು, ಸಂಸದೆ ಪ್ರಿಯಾಂಕಾ ಗಾಂಧಿಯವರಿಗೆ ಈ ಅಣಕು ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯ ಮಂಡಿಸುವ ಅವಕಾಶವನ್ನೇ ಕೊಡಲಿಲ್ಲ, ಬದಲಿಗೆ ಸಂಸದೆಯಲ್ಲದ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಪುಂಖಾನುಪುಂಖವಾಗಿ ಭಾಷಣ ಬಿಗಿದರು. ಮೊನ್ನೆ ರಾಮಲೀಲಾ ಮೈದಾನದ ಐತಿಹಾಸಿಕ ಸಭೆಯಲ್ಲೂ ನೇಹಾ ಬೋರಾಗೆ ಸಿಕ್ಕ ಸ್ಥಾನಮಾನ ಪ್ರಿಯಾಂಕಾಗೆ ಸಿಗಲಿಲ್ಲ. ಹತ್ತಾರು ವರ್ಷಗಳಿಂದ ಪಕ್ಷದಲ್ಲಿ ಮಣ್ಣು ಹೊತ್ತವರಿಗಿಂತ, ನಿನ್ನೆ ಮೊನ್ನೆ ಆಂದೋಲನ ದಲ್ಲಿ ಕಂಡುಬಂದ ಈಕೆಗೆ ಪಕ್ಷದ ವೇದಿಕೆಯಲ್ಲಿ ಪ್ರಾಮುಖ್ಯತೆ ಸಿಗುತ್ತಿದೆ ಎಂದು ಪಕ್ಷದವರೇ ಗೊಣಗುವಂತಾಯ್ತು.
ಕಾಂಗ್ರೆಸ್ ನೇತೃತ್ವದ ಇಂಡಿ ಕೂಟದ ರಾಮಲೀಲಾ ಸಭೆಯಿಂದ ಸಿಜೆಪಿ ದೂರವುಳಿಯಿತು, ಕಾಂಗ್ರೆಸ್ನ ಜೊತೆ ಕೈಜೋಡಿಸಿ ತನ್ನ ‘ಐಡೆಂಟಿಟಿ’ ಕಳೆದುಕೊಳ್ಳಲು ಇಷ್ಟಪಡಲಿಲ್ಲ. ಒಂದು ರೀತಿಯಿಂದ ಇದನ್ನು ಸಿಜೆಪಿಯ ಜಾಣನಡೆ ಅಂತಲೇ ವಿಶ್ಲೇಷಿಸಲಾಯಿತು. ಪ್ರಕಾಶ್ ರಾಜ್ ಹೋಗಿದ್ದರಾದರೂ ಆ ಜನ ಸಮುದ್ರದಲ್ಲಿ ಅವರೂ ಒಬ್ಬರಾದರೇ ವಿನಃ ಯಾರೂ ಅವರನ್ನ ವಿಶೇಷ ದೇಕರೇಕ ಮಾಡಿದ ಹಾಗೆ ಕಾಣಲಿಲ್ಲ. ಸಿಜೆಪಿ ಪ್ರೊಟೆಸ್ಟ್ ಇರಲಿ, ಕಾಂಗ್ರೆಸ್ಸಿನ ಪ್ರೊಟೆಸ್ಟ್ ಇರಲಿ, ಕೊನೆಗೆ ಶಾಲಾಮಕ್ಕಳ ಪ್ರೊಟೆಸ್ಟ್ ಇರಲಿ ಯಾರು ಇಲ್ಲದೇ ಇದ್ರೂ, ಪ್ರಕಾಶ್ ರಾಜ್ ಮಾತ್ರ ಅಲ್ಲಿ ಇದ್ದೇ ಇರ್ತಾರೆ, ನಾಳೆ ಬಿಜೆಪಿ ಭಜರಂಗ ದಳದವರ ಆಂದೋಲನಲ್ಲಿಯೂ ಪ್ರಕಾಶ ರಾಜ್ ಕಾಣ್ದೇ ಇದ್ರೆ ಸಾಕು!
ಇಂಥವರ ವಿಷಯದಲ್ಲಿ ಹೆಚ್ಚು ಮಾತನಾಡುವುದಕ್ಕಿಂತ ನಕ್ಕು ಸುಮ್ಮನಾಗಿಬಿಡುವುದೊಳಿತು. ಆದರೆ, ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ ತಿಳಿಯುತ್ತಿಲ್ಲ. ಮೊನ್ನೆ ಬೆಂಗಳೂರಿನ ಫ್ರೀಡಂ ಪಾಕ್ ನಲ್ಲಿ ಎಸ್ಐಆರ್ ವಿರೋಧಿಸಿ ನಡೆದ ಪಕ್ಷದ ಹೋರಾಟದ ಸಭೆಯಲ್ಲಿ ಹಾಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಪಕ್ಷಾಧ್ಯಕ್ಷರು ಹಾಲೀ ಮಾಜಿ ಮಂತ್ರಿಗಳು ಎಲ್ಲ ಇರುವಾಗ, ಪಕ್ಷಕ್ಕೆ ಸಂಬಂಧವೇ ಇರದ ಪ್ರಕಾಶ್ ರಾಜ್ಗೆ ಅಗ್ರಪೂಜೆ ನೆರವೇರಿಸಿ ಭಾಷಣ ಮಾಡಿಸಲಾಯಿತು.
ಪಕ್ಷದಲ್ಲಿ ಯಾರೂ ಇರಲಿಲ್ವಾ ಎನ್ನುವ ಪ್ರಶ್ನೆ ಸ್ವಾಭಾವಿಕವಾಗಿ ಕಾರ್ಯಕರ್ತರಲ್ಲಿ ಏಳುತ್ತದೆ ತಾನೆ? ಅವರಾಡಿದ ಮಾತುಗಳಿಗೆ ಪಕ್ಷದ ಸಹಮತವಿದೆಯಾ ಅಂತ ಯಾರಾದರೂ ಕೇಳಬಹು ದಲ್ಲವೇ? ಉತ್ತರಪ್ರದೇಶದ ಹಾಗೂ ಪಂಜಾಬ್ ಚುನಾವಣೆಯ ತಯಾರಿ ಮಾಡಿಕೊಳ್ಳುವ ಬದಲು ಹೀಗೆ ತರ್ಕವಿಲ್ಲದ ಹೋರಾಟದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವಕ್ಕೆ, ವಿಶೇಷವಾಗಿ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರಿಗೆ ನಾವು ಕೇಳಲೇಬೇಕಾದ ಒಂದಷ್ಟು ಪ್ರಶ್ನೆಗಳಿವೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಉಚ್ಚ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ ನಂತರ ಅದರ ತೀರ್ಪು ಬರುವ ತನಕ ಕಾಯಬೇಕು ತಾನೆ? ಅದು ಬಿಟ್ಟು, ಒಂದು ದಿನ ರಾಮಲೀಲಾ, ಇನ್ನೊಂದು ದಿನ ಜಂತರ್ಮಂತರ್, ಮತ್ತೊಂದು ದಿನ ಆಕಾಶವಾಣಿ ಭವನ ಅಂತ ಆಂದೋಲನ ನಡೆಸಿದರೆ, ನ್ಯಾಯಾಲಯದ ಮೇಲೆ ಒತ್ತಡ ಹೇರುವ ಪ್ರಯತ್ನ ಅಂತ ಪರಿಗಣಿಸ ಲಾಗುವುದಿಲ್ಲವೆ? ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಲಯದ ಕುರಿತು ಗೌರವವಿಲ್ಲ ಅಥವಾ ಭಾರತೀಯ ನ್ಯಾಯವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಅಂತಾಗುವುದಿಲ್ಲವೆ? ಎಸ್ಐಆರ್ ಪ್ರಕ್ರಿಯೆಯಲ್ಲಿ ಮತ ಕಳೆದುಕೊಂಡ 13 ಕೋಟಿ ಜನರಲ್ಲಿ ಎಷ್ಟು ಕೋಟಿ ಜನ ಆಂದೋಲನಕ್ಕೆ ಬೆಂಬಲವಾಗಿ ಕಾಂಗ್ರೆಸ್ ಅಥವಾ ಸಿಜೆಪಿಯ ಪರವಾಗಿ ಪಾಲ್ಗೊಂಡಿದ್ದಾರೆ? ಎಷ್ಟು ಕೋಟಿ ಜನ ಇಲ್ಲಿಯವರೆಗೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎನ್ನುವ ಲೆಕ್ಕವೇನಾದರೂ ಇದೆಯಾ? ಇಷ್ಟೆಲ್ಲ ಬೀದಿ ರಂಪ ಮಾಡುವ ಬದಲು, ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾನದ ಹಕ್ಕು ಕಳೆದುಕೊಂಡ 13 ಕೋಟಿ ಜನರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸುವಲ್ಲಿ ಮನೆಮನೆಗೆ ಹೋಗಿ ಸಹಾಯ ಮಾಡಿದ್ದರೆ,
ಆಗ ಆ ಹದಿಮೂರು ಕೊಟಿ ಜನ ಖುಷಿಯಿಂದ ಕಾಂಗ್ರೆಸ್ಸಿಗೆ ಮತ ಹಾಕುತ್ತಿದ್ದರಲ್ಲವೇ? ನಿಮ್ಮ ಮಾತಿನ ಪ್ರಕಾರ ಕೇವಲ 3% ಮತದಿಂದ 2024ರಲ್ಲಿ ಕೇಂದ್ರದಲ್ಲಿ ಸರಕಾರ ರಚಿಸುವುದನ್ನು ತಪ್ಪಿಸಿಕೊಂಡಿದ್ದೇವೆ ಅಂತ ಹೇಳುವಾಗ, ಈ ಹದಿನೈದು ಪ್ರತಿಶತ ಮತ ಸಿಕ್ಕಿದರೆ 2029ರ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದಿತ್ತಲ್ಲವೇ? ಅರಾಜಕತೆಯನ್ನು ಸಮರ್ಥಿಸುವವರು, ಕಾಶ್ಮೀರವನ್ನು ಭಾರತ ಅಕ್ರಮವಾಗಿ ಆಕ್ರಮಿಸಿದೆ ಎನ್ನುವವರು, ಸ್ವತಃ ನಾಲ್ಕು ಮತದಾರರ ಚೀಟಿ ಹೊಂದಿರುವವರು ನಿಮ್ಮ ಚುನಾವಣಾ ಆಯೋಗದ ಶುದ್ಧೀಕರಣದ ಹೋರಾಟವನ್ನು ಮುನ್ನಡೆ ಸುತ್ತಿರುವುದನ್ನು ನೋಡುವಾಗ ನಿಮ್ಮ ಪಕ್ಷದಲ್ಲಿ ಸಮರ್ಥ ನಾಯಕರ ಕೊರತೆಯಿದೆ ಅಂತ ಅನಿಸುತ್ತಿದೆಯಾ? ಜೈಲುವಾಸದಲ್ಲಿರುವ ಉಮರ ಖಾಲೀದ್, ಶಾರ್ಜೀಲ್ ಇಮಾಮ್ ರಾಷ್ಟ್ರ ದ್ರೋಹಿಗಳಾ ಎನ್ನುವುದನ್ನು ನ್ಯಾಯಾಲಯ ತೀರ್ಮಾನಿಸುತ್ತೆ ಎನ್ನುತ್ತೀರಿ.
ಅದೇ ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತರು ದೇಶದ್ರೋಹಿಗಳು ಅಂತ ಬೀದಿಯಲ್ಲಿ ನಿಂತು ನಾವೇ ತೀರ್ಮಾನ ಮಾಡುತ್ತೇವೆ ಎನ್ನುತ್ತೀರಿ, ಇದು ಯಾವ ನ್ಯಾಯ? ಅಣಕು ಸಂಸತ್ ಪ್ರದರ್ಶನ ಹಾಗೂ ರಾಮಲೀಲಾ ಮೈದಾನದ ಆಂದೋಲನದಲ್ಲಿ ಸಿಜೆಪಿಯನ್ನು ಏಕೆ ಆಮಂತ್ರಿಸಲಿಲ್ಲ? ಸಿಜೆಪಿ ಪಾಲ್ಗೊಂಡರೆ ಕಾಂಗ್ರೆಸ್ಸೇ ಸಿಜೆಪಿಯ ಬಿ ಟೀಮ್ ಥರಾ ಕಾಣಬಹುದೆಂಬ ಆತಂಕವಾ? ಮೂವರು ಆಯುಕ್ತರೂ ಬಿಜೆಪಿಯ ಅವಧಿಯ ನೇಮಕವಾಗಿದ್ದರೂ, ನೀವು ಕೇವಲ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಮಾತ್ರ ಕೇಳುವುದು ಹೇಗೆ ಸರಿ? ಮೂವರ ರಾಜೀನಾಮೆ ಕೇಳಿದ್ದರೆ ಹೆಚ್ಚು ಸಮರ್ಪಕವಾಗುತ್ತಿತ್ತಲ್ಲ? ಹಿಂದೆ ಹತ್ತು ಬಾರಿ ಎಸ್ಐಆರ್ ನಡೆದಿರುವುದು ಓಕೆ, ಆದರೆ ಈ ಬಾರಿ ಏಕೆ ಎನ್ನುವುದು ಹಾಸ್ಯಾಸ್ಪದವಲ್ಲವೇ? ಬೀದಿಯಲ್ಲಿ ನಿಂತು ಎಷ್ಟು ನಾಟಕವಾಡಿದರೂ ಚುನಾವಣಾ ಆಯುಕ್ತರು ಮಾತ್ರ ಒಂದೂ ಮಾತನಾಡದೇ, ದೂರನ್ನೂ ನೀಡದೇ ನಿಮ್ಮನ್ನು ಉದಾಸೀನ ಮಾಡಿದರು ಅಂತ ಅನಿಸುತ್ತಿಲ್ವಾ? ಇಷ್ಟೆಲ್ಲ ರಾದ್ಧಾಂತಗಳ ನಂತರವೂ ಸಿಇಸಿ ರಾಜೀನಾಮೆ ಕೊಡದಿದ್ದರೆ, ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಅಥವಾ ಚುನಾವಣೆಗಳಿಗೆ ಆಂದೋಲನಗಳ ಮೂಲಕ ಅಡ್ಡಿಪಡಿಸುವ ಆಲೋಚನೆಯಿದೆಯಾ? ಸಿಇಸಿಯನ್ನು ಕೆಳಗಿಳಿಸಲು ಮಹಾಭಿಯೋಗವೊಂದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ, ಮಹಾಭಿ ಯೋಗವನ್ನು ಮಂಡಿಸಿ ಗೆಲ್ಲುವಷ್ಟು ಸಂಖ್ಯಾಬಲ ನಿಮ್ಮಲ್ಲಿಲ್ಲ ಎನ್ನುವುದು ನಿಮಗೆ ಗೊತ್ತಿರಬೇಕಲ್ವಾ? ಮತಗಳ್ಳತನಕ್ಕೆ ನಮ್ಮ ಬಳಿ ಟನ್ಗಟ್ಟಲೆ ಸಾಕ್ಷಿ ಇದೆ ಎನ್ನುವಾಗ ಅವುಗಳನ್ನು ಕೋರ್ಟಿಗೆ ಸಲ್ಲಿಸಲು ಇರುವ ತೊಂದರೆಯಾದರೂ ಏನು? ಕಳೆದ ಕೆಲವು ಸ್ಥಳೀಯ ಚುನಾವಣೆ ಗಳಲ್ಲಿ ಮತಪತ್ರವನ್ನೇ ಬಳಸಿದರೂ ನಿಮ್ಮ ಪಕ್ಷಕ್ಕೆ ದೇಶಾದ್ಯಂತ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ, ಈಗ ಇವಿಎಮ್ ಬಳಕೆಯೇ ಒಳ್ಳೇದಿತ್ತು ಅನ್ನಿಸ್ತಾ ಇದೆಯಾ? ಇಂಡಿ ಒಕ್ಕೂಟದ ನಾಯಕತ್ವದ ಕೀಲಿಕೈ ನಿಮ್ಮ ಕೈಯ ಇಟ್ಟುಕೊಳ್ಳಲು ಇಷ್ಟೆಲ್ಲ ಹೋರಾಟ ಮಾಡುತ್ತಿದ್ದರೂ, ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ, ನಿಮ್ಮ ಪಕ್ಷದ ಭವಿಷ್ಯ ಸಮಾಜವಾದಿ ಪಕ್ಷದ ದಯಾಭಿಕ್ಷೆಯಲ್ಲಿಯೇ ಅಡಗಿದೆ ಅನಿಸುತ್ತಿದೆಯಾ? (ಮುಂಬರುವ ಉತ್ತರಪ್ರದೇಶ ಚುನಾವಣೆ ಯನ್ನು ಅತ್ಯಂತ ಆಸೆಗಣ್ಣಿಂದ ನೋಡುತ್ತಿರುವ ಕಾಂಗ್ರೆಸ್ಸಿನ ಸಾಧನೆಯನ್ನು ಒಮ್ಮೆ ನೋಡುವು ದಾದರೆ, 1993ರಲ್ಲಿ ಕೇವಲ 28, 1996ರಲ್ಲಿ ಬಿಎಸ್ಪಿ ಜೊತೆ ಸೇರಿದ್ದರಿಂದ 33, 2002ರಲ್ಲಿ 25, 2007ರಲ್ಲಿ 22 ಮತ್ತು 2012ರಲ್ಲಿ 28 ಸ್ಥಾನಗಳನ್ನು ಗೆದ್ದುಕೊಂಡಿತ್ತು.
2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಕೂಟದಲ್ಲಿ 102 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 7 ಸ್ಥಾನಗಳಿಗೆ ಕುಸಿದಿತ್ತು. 2022ರಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ಕೇವಲ 2 ಸ್ಥಾನಗಳಿಗೆ ಇಳಿಯಿತು. 2024ರಲ್ಲಿ ತಾನು ಸ್ಪರ್ಧಿಸಿದ್ದ 17 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿತ್ತು.
ಸಮಾಜವಾದಿ ಪಕ್ಷವನ್ನೂ ಸೇರಿ ಯಾರಿಗೂ ಅಲ್ಲಿ ಕಾಂಗ್ರೆಸ್ಸಿನ ಗೆಳೆತನ ಬೇಕಾಗಿಲ್ಲ. ಹಾಗಾಗಿ ಈ ಬಾರಿ ದೋಸ್ತಿ ಸುಲಭವಲ್ಲ ಎನ್ನುವ ವಾಸ್ತವದ ಅರಿವಿದೆಯಾ? ಉತ್ತರಪ್ರದೇಶ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿರುವುದು ಏಕೆ ಎನ್ನುವುದು ಗೊತ್ತಾ? ಈ ಎಲ್ಲ ವಿದ್ಯಮಾನಗಳನ್ನು ನೋಡುವಾಗ, ನೀವೆಲ್ಲ ಸೇರಿ ಉತ್ತರ ಪ್ರದೇಶದ ಚುನಾವಣೆಯನ್ನು ಕಾಣಿಕೆಯಾಗಿ ಯೋಗಿಜಿಯ ಜೋಳಿಗೆಗೆ ಹಾಕಿದಿರಿ ಅಂತ ಅನಿಸುತ್ತಿಲ್ವಾ? ‘ಮೋದಿಕಾ ಬಾಪ್ ಬೀ ಜಾಯೇಗಾ’ ಎನ್ನುವ ನಿಮ್ಮ ಪಕ್ಷದ ಅಧ್ಯಕ್ಷರ ಅಪವಕ್ತವ್ಯದ ನಂತರ, ‘ಮೋದಿ ಕಹಿ ನಹಿ ಜಾಯೇಗಾ’ ಆಂದೋಲನ ಶುರುವಾಯಿತಲ್ಲ, ಆ ಆಂದೋಲನದಲ್ಲಿ ನೀವು ನಂಬಿಕೊಂಡು ಬಂದಿರುವ ಸಮುದಾಯದ ಅನೇಕ ನಾಯಕರು ಮೋದಿಯ ಪರವಾಗಿ ಯೂ, ನಿಮ್ಮ ಪಕ್ಷದ ವಿರುದ್ಧವಾಗಿಯೂ ಬಹಿರಂಗವಾಗಿ ಮಾತನಾಡುತ್ತಿರುವುದನ್ನು ನೀವು ಗಮನಿಸಿದ್ದೀರಾ? 76 ವಸಂತಗಳ ಸಾರ್ಥಕ ಪೂರ್ಣಾಯುಷ್ಯ, ಇಪ್ಪತ್ತೈದು ವರ್ಷಗಳ ಯಶಸ್ವೀ ಅಧಿಕಾರ ರಾಜಕಾರಣ, 15 ವರ್ಷಗಳ ದಾಖಲೆಯ ಪ್ರಧಾನಮಂತ್ರಿ ಸ್ಥಾನ, 36 ದೇಶಗಳ ಸರ್ವೋ ನ್ನತ ನಾಗರಿಕ ಪ್ರಶಸ್ತಿ, ಜಗತ್ತಿನಾದ್ಯಂತ ಇರುವ ಭಾರತೀಯ ಜನಮಾನಸದಲ್ಲಿ ಶಾಶ್ವತ ಸ್ಥಾನ. ಅಗಾಧ ನೈತಿಕ ಸ್ಥೈರ್ಯ ಹಾಗೂ ಸದೃಢ ಆರೋಗ್ಯ, ಸಾಕು ಎನ್ನುವ ಸನ್ಯಸ್ತ ಮನಸ್ಥಿತಿ, ಹೀಗೆ ಎಲ್ಲವನ್ನೂ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಅವಧಿಯಲ್ಲಿಯೇ ಅಥವಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೇ ವಿಶ್ರಾಂತಿಯತ್ತ ಮುಖಮಾಡುತ್ತಿದ್ದರೇನೋ!
ಯಾರಿಂದಲೂ ಹೇಳಿಸಿಕೊಳ್ಳದೇ ತಾನಾಗಿಯೇ ಸಂತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದರೋ ಏನೋ! ಆದರೆ, ‘ಮೋದಿಕಾ ಬಾಪ್ ಬೀ ಜಾಯೇಗಾ’ ಎನ್ನುವ ಒಂದು ಮಾತು ಮತ್ತು ಅದರ ವಿರುದ್ಧವಾಗಿ ದೇಶಾದ್ಯಂತ ಎದ್ದ ಮೋದಿ ಪರ ಧ್ವನಿ, ಮೋದಿಯವರ ಮನಸ್ಸಿನ ಕವಾಟವನ್ನು ತಟ್ಟಿದ ಹಾಗೆ ಕಾಣುತ್ತಿದೆ, ಕೊನೆಯುಸಿರಿರುವವರೆಗೆ ಸಾರ್ವಜನಿಕ ಜೀವನದಲ್ಲಿದ್ದು ಜನಸೇವೆ ಮಾಡುತ್ತೇನೆ ಎಂದಿದ್ದಾರೆ
ಮೋದಿ. ಈ ರೀತಿ ಸಲ್ಲದ ಮಾತುಗಳನ್ನಾಡಿ, ನಿಮ್ಮ ತಲೆಯಮೇಲೆ ನೀವೇ ಚಪ್ಪಡಿಕಲ್ಲು ಎಳೆದು ಕೊಂಡೆವು ಅಂತ ಅನಿಸುವುದಿಲ್ವಾ? ಕೇಳಲಿಕ್ಕೆ ಜನರ ಮನಸ್ಸಿನಲ್ಲಿ ಉತ್ತರಿಸಲಾಗದ ಇಂಥಾ ನೂರಾರು ಪ್ರಶ್ನೆಗಳಿವೆ. ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲ ಅಂತ ಭಾವಿಸಿ, ಯದ್ವಾತದ್ವಾ ನಡೆದುಕೊಳ್ಳುತ್ತಾ ನಾವು ಮಾಡಿದ್ದೇ ಸರಿ ಎನ್ನುವವರಿಂದ ಉತ್ತರವನ್ನು ನಿರೀಕ್ಷೆ ಮಾಡುವುದೇ ಸರಿಯಲ್ಲವೇನೋ !