ಭಕ್ತಿ-ಭಾವ
ನರೇಂದ್ರ ಮೋದಿ
2026ರ ಆರಂಭದಲ್ಲಿ, ಸೋಮನಾಥ ದೇವಾಲಯದ ಮೇಲಿನ ಮೊದಲ ದಾಳಿಗೆ ಸಾವಿರ ವರ್ಷಗಳು ತುಂಬಿದ ನೆನಪಿಗಾಗಿ ನಡೆದ ‘ಸೋಮನಾಥ ಸ್ವಾಭಿಮಾನ ಪರ್ವ’ದಲ್ಲಿ ನಾನು ಭಾಗವಹಿಸಿದ್ದೆ. ಈಗ, ಭಾರತದ ಅಂದಿನ ರಾಷ್ಟ್ರಪತಿಗಳಾದ ಡಾ.ರಾಜೇಂದ್ರ ಪ್ರಸಾದ್ ಅವರು ಪುನರ್ನಿರ್ಮಿತ ದೇವಾಲಯವನ್ನು ಉದ್ಘಾಟಿಸಿ 75 ವರ್ಷಗಳಾದ ಸಂದರ್ಭದಲ್ಲಿ, ಮೇ.11ರಂದು ನಾನು ಮತ್ತೆ ಸೋಮನಾಥಕ್ಕೆ ಭೇಟಿ ನೀಡಲಿದ್ದೇನೆ. ಅರ್ಧ ವರ್ಷದೊಳಗೆ, ಸೋಮನಾಥಕ್ಕೆ ಸಂಬಂಧಿಸಿದ ಎರಡು ಪ್ರಮುಖ ಮೈಲಿಗಲ್ಲುಗಳಿಗೆ ಮತ್ತು ಅದರ ವಿನಾಶದಿಂದ ಪುನರುತ್ಥಾನದವರೆಗೆ ಅಥವಾ ನಾವು ‘ವಿಧ್ವಂಸದಿಂದ ಸೃಜನೆ’ಯತ್ತ ಎಂದು ಕರೆಯುವ ಪಯಣಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ.
ಸೋಮನಾಥವು ನಮಗೆ ನಾಗರಿಕತೆಯ ಸಂದೇಶ ನೀಡುತ್ತದೆ. ಅದರ ಮುಂದಿರುವ ವಿಶಾಲ ಸಮುದ್ರವು ಕಾಲಾತೀತತೆಯ ಭಾವವನ್ನು ಮೂಡಿಸುತ್ತದೆ. ಎಂತಹ ಭೀಕರ ಬಿರುಗಾಳಿಗಳೇ ಇರಲಿ ಅಥವಾ ಸಮುದ್ರದ ಅಲೆಗಳು ಎಷ್ಟೇ ಪ್ರಕ್ಷುಬ್ಧವಾಗಿರಲಿ, ಮನುಷ್ಯ ಯಾವಾಗಲೂ ಘನತೆ ಮತ್ತು ಶಕ್ತಿಯೊಂದಿಗೆ ಮರಳಿ ಮೇಲೆದ್ದು ಬರಬಹುದು ಎಂದು ಆ ಅಲೆಗಳು ನಮಗೆ ಸಾರುತ್ತಿವೆ.
ಕಡಲ ಅಲೆಗಳು ಮತ್ತೆ ತೀರಕ್ಕೆ ಮರಳುವ ರೀತಿ, ಜನರ ಚೈತನ್ಯವನ್ನು ದೀರ್ಘಕಾಲದವರೆಗೆ ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಪ್ರತಿ ಪೀಳಿಗೆಗೂ ನೆನಪಿಸುವಂತಿದೆ. ನಮ್ಮ ಪುರಾತನ ಗ್ರಂಥಗಳು ಹೇಳುವಂತೆ: ಪ್ರಭಾಸಂ ಚ ಪರಿಕ್ರಮ್ಯ ಪೃಥಿವೀಕ್ರಮಸಂಭವಮ. ಇದರರ್ಥ, ಪವಿತ್ರ ಪ್ರಭಾಸ ಕ್ಷೇತ್ರದ (ಸೋಮನಾಥ) ಪ್ರದಕ್ಷಿಣೆಯು ಇಡೀ ಭೂಮಂಡಲದ ಪ್ರದಕ್ಷಿಣೆಗೆ ಸಮಾನ ವಾದುದು!
ಇಲ್ಲಿಗೆ ಜನರು ಪ್ರಾರ್ಥನೆ ಸಲ್ಲಿಸಲು ಬಂದಾಗಲೆ, ಎಂದಿಗೂ ಆರಿ ಹೋಗದ ನಾಗರಿಕತೆಯ ಜ್ವಾಲೆಯ ನಿರಂತರತೆಯನ್ನು ಅನುಭವಿಸಿದ್ದಾರೆ. ಸಾಮ್ರಾಜ್ಯಗಳು ಉದಯಿಸಿದವು ಮತ್ತು ಪತನ ಗೊಂಡವು, ಕಾಲದ ಅಲೆಗಳು ಬದಲಾದವು, ಇತಿಹಾಸವು ಆಕ್ರಮಣ ಮತ್ತು ಏರುಪೇರುಗಳ ನಡುವೆ ಸಾಗಿತು. ಆದರೂ, ಸೋಮನಾಥವು ನಮ್ಮ ಪ್ರಜ್ಞೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಬಂದಿದೆ.
ದಬ್ಬಾಳಿಕೆಯ ಮುಂದೆ ಎದೆಯುಬ್ಬಿಸಿ ನಿಂತ ಅಸಂಖ್ಯಾತ ಮಹನೀಯರನ್ನು ಸ್ಮರಿಸುವ ಸಮಯ ವಿದು. ಲಕುಲೀಶ ಮತ್ತು ಸೋಮ ಶರ್ಮನ್ ಅವರು ಪ್ರಭಾಸ ಕ್ಷೇತ್ರವನ್ನು ತತ್ವಶಾಸ್ತ್ರದ ಮಹಾನ್ ಕೇಂದ್ರವಾಗಿ ಪರಿವರ್ತಿಸಿದ್ದರು. ವಲ್ಲಭಿಯ ಚಕ್ರವರ್ತಿ ಮಹಾರಾಜ ನಾಲ್ಕನೇ ಧರ್ಮಸೇನ ಶತಮಾನಗಳ ಹಿಂದೆ ಇಲ್ಲಿ ಎರಡನೇ ದೇವಾಲಯವನ್ನು ನಿರ್ಮಿಸಿದನು.
ಆಕ್ರಮಣಗಳ ವಿರುದ್ಧ ನಾಗರಿಕತೆಯ ಗೌರವವನ್ನು ರಕ್ಷಿಸಿದ್ದಕ್ಕಾಗಿ ಭೀಮದೇವ, ಜಯಪಾಲ ಮತ್ತು ಆನಂದಪಾಲರನ್ನು ಯಾವಾಗಲೂ ಸ್ಮರಿಸಲಾಗುತ್ತದೆ. ರಾಜ ಭೋಜ ಕೂಡ ಪುನರ್ನಿರ್ಮಾಣ ಕಾರ್ಯದಲ್ಲಿ ನೆರವಾಗಿದ್ದನೆಂದು ಹೇಳಲಾಗುತ್ತದೆ.
ಗುಜರಾತ್ʼನ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಮರುಸ್ಥಾಪಿಸುವಲ್ಲಿ ಕರ್ಣ ದೇವ ಮತ್ತು ಸಿದ್ಧರಾಜ ಜಯಸಿಂಹ ಪ್ರಮುಖ ಪಾತ್ರ ವಹಿಸಿದ್ದರು. ಭಾವ ಬೃಹಸ್ಪತಿ, ಕುಮಾರಪಾಲ ಸೋಲಂಕಿ ಮತ್ತು ಪಾಶುಪತ ಆಚಾರ್ಯರು ಈ ಕ್ಷೇತ್ರವನ್ನು ಮಹಾನ್ ಆರಾಧನಾ ಮತ್ತು ಕಲಿಕಾ ಕೇಂದ್ರವಾಗಿ ಮರುನಿರ್ಮಿಸಿ, ಪೋಷಿಸಿದರು.
ವಿಶಾಲದೇವ ವಘೇಲಾ ಮತ್ತು ತ್ರಿಪುರಾಂತಕರು ಇದರ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಸಂಪ್ರದಾಯ ಗಳನ್ನು ರಕ್ಷಿಸಿದರು. ವಿನಾಶದ ನಂತರ ಪೂಜಾ ಕೈಂಕರ್ಯಗಳನ್ನು ಪುನಶ್ಚೇತನ ಗೊಳಿಸುವಲ್ಲಿ ಮಹಿಪಾಲದೇವ ಮತ್ತು ರಾ ಖಂಗಾರ್ ಅವರು ಕಾರಣಕರ್ತರಾದರು. ಕಠಿಣ ಸಂದರ್ಭಗಳಲ್ಲೂ ಭಕ್ತಿಯ ನಿರಂತರತೆಯನ್ನು ಖಚಿತಪಡಿಸಿದ ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ಶತಮಾನೋತ್ಸವವನ್ನು ಈಗ ಆಚರಿಸಲಾಗುತ್ತಿದೆ.
ಯಾತ್ರಾರ್ಥಿಗಳ ಹಕ್ಕುಗಳನ್ನು ರಕ್ಷಿಸಿದ ಬರೋಡಾದ ಗಾಯಕ್ವಾಡ್‌ಗಳೂ ಇದ್ದರು ಮತ್ತು ಮುಖ್ಯ ವಾಗಿ, ಸೋಮನಾಥದ ಜೀವಂತ ಸ್ಮೃತಿಯ ಭಾಗವಾಗಿರುವ ತಮ್ಮ ತ್ಯಾಗ ಮತ್ತು ಸಾಹಸಕ್ಕಾಗಿ ವೀರ ಹಮೀರ್ಜಿ ಗೋಹಿಲ್ ಮತ್ತು ವೀರ ವೆಗ್ಡಾಜಿ ಭೀಲ್ ಅವರಂತಹ ಶೂರ ವ್ಯಕ್ತಿಗಳನ್ನು ಪೋಷಿಸಿದ ನಮ್ಮ ಮಣ್ಣು ಧನ್ಯವಾದುದು.
1940ರ ದಶಕದಲ್ಲಿ, ಭಾರತದಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹರಡಿದ್ದಾಗ ಮತ್ತು ಸರ್ದಾರ್ ಪಟೇಲ ರಂತಹ ಮಹೋನ್ನತ ನಾಯಕರ ನೇತೃತ್ವದಲ್ಲಿ ಹೊಸ ಗಣರಾಜ್ಯಕ್ಕೆ ಅಡಿಪಾಯ ಹಾಕುವಾಗ, ಒಂದು ವಿಷಯವು ಅವರನ್ನು ಗಾಢವಾಗಿ ಕಾಡುತ್ತಲೇ ಇತ್ತು... ಅದು ಸೋಮನಾಥದ ಸ್ಥಿತಿ. 1947ರ ನವೆಂಬರ್ 13ರಂದು, ದೀಪಾವಳಿಯ ಸಮಯದಲ್ಲಿ, ಅವರು ದೇವಾಲಯದ ಶಿಥಿಲಗೊಂಡ ಅವಶೇಷಗಳ ಪಕ್ಕದಲ್ಲಿ ನಿಂತು, ಕೈಯಲ್ಲಿ ಸಮುದ್ರದ ನೀರನ್ನು ಹಿಡಿದು ಹೀಗೆ ಹೇಳಿದರು- ಹೊಸ ವರ್ಷದ ಈ ಶುಭ ದಿನದಂದು, ಸೋಮನಾಥವನ್ನು ಪುನರ್ನಿರ್ಮಿಸಬೇಕೆಂದು ನಾವು ನಿರ್ಧರಿಸಿ ದ್ದೇವೆ.
ಸೌರಾಷ್ಟ್ರದ ಜನರೇ, ನೀವು ನಿಮ್ಮ ಕೈಲಾದಷ್ಟು ಶ್ರಮಿಸಬೇಕು. ಇದು ಎಲ್ಲರೂ ಪಾಲ್ಗೊಳ್ಳಬೇಕಾದ ಪವಿತ್ರ ಕಾರ್ಯವಾಗಿದೆ. ಸರ್ದಾರ್ ಪಟೇಲರ ಈ ಒಂದು ಸ್ಪಷ್ಟ ಕರೆಗೆ, ಕೇವಲ ಗುಜರಾತ್ ನ ಜನತೆ ಮಾತ್ರವಲ್ಲದೆ ಇಡೀ ಭಾರತದ ಜನತೆಯೂ ಉತ್ಸಾಹದಿಂದ ಸ್ಪಂದಿಸಿದರು. ದುರದೃಷ್ಟವಶಾತ್, ಸರ್ದಾರ್ ಪಟೇಲರು ಅತೀವ ಆಸಕ್ತಿಯಿಂದ ಕಂಡ ಕನಸಿನ ಸಾಕಾರವನ್ನು ಕಣ್ಣಾರೆ ಕಾಣಲು ವಿಧಿ ಅವರಿಗೆ ಅವಕಾಶ ನೀಡಲಿಲ್ಲ.
ಪುನರ್ನಿರ್ಮಿತ ಸೋಮನಾಥ ದೇವಾಲಯವು ಭಕ್ತರಿಗಾಗಿ ತನ್ನ ಬಾಗಿಲುಗಳನ್ನು ತೆರೆಯುವ ಮೊದಲೇ ಅವರು ಈ ಲೋಕವನ್ನು ಅಗಲಿದ್ದರು. ಆದರೂ, ಅವರ ಪ್ರಭಾವವು ಪ್ರಭಾಸ ಪಟ್ಟಣದ ಪವಿತ್ರ ತೀರಗಳಲ್ಲಿ ಅನುರಣಿಸುತ್ತಲೇ ಇತ್ತು. ಅವರ ದೃಷ್ಟಿಕೋನವನ್ನು ಕೆ.ಎಂ.ಮುನ್ಶಿಯವರು ಮುಂದುವರಿಸಿದರು ಮತ್ತು ಅವರಿಗೆ ನವನಗರದ ಜಾಮ್‌ಸಾಹೇಬರು ಸಮರ್ಥ ಬೆಂಬಲ ನೀಡಿದರು.
1951ರಲ್ಲಿ ದೇವಾಲಯದ ನಿರ್ಮಾಣ ಪೂರ್ಣಗೊಂಡಾಗ, ಉದ್ಘಾಟನಾ ಸಮಾರಂಭಕ್ಕೆ ಭಾರತದ ರಾಷ್ಟ್ರಪತಿಗಳಾದ ಡಾ.ರಾಜೇಂದ್ರ ಪ್ರಸಾದ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಅಂದಿನ ಪ್ರಧಾನಮಂತ್ರಿ ಪಂಡಿತ್ ನೆಹರೂ ಅವರ ತೀವ್ರ ವಿರೋಧವನ್ನೂ ಮೀರಿ, ಡಾ. ಪ್ರಸಾದ್ ಅವರು ಸಮಾರಂಭದಲ್ಲಿ ಭಾಗವಹಿಸಿದರು. ತನ್ಮೂಲಕ ಆ ಕ್ಷಣವನ್ನು ಮತ್ತಷ್ಟು ವಿಶೇಷ ಮತ್ತು ಐತಿಹಾಸಿಕವಾಗಿಸಿದರು.
ನನ್ನ ಮನಸ್ಸು 2001ರ ಅಕ್ಟೋಬರ್ ತಿಂಗಳಿಗೂ ಮರಳುತ್ತಿದೆ, ಆಗಷ್ಟೇ ನಾನು ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡಿದ್ದೆ. 2001ರ ಅಕ್ಟೋಬರ್ 31, ಸರ್ದಾರ್ ಪಟೇಲರ ಜಯಂತಿಯ ದಿನದಂದು, ಸೋಮನಾಥ ದೇವಾಲಯವು ತನ್ನ ಬಾಗಿಲುಗಳನ್ನು ತೆರೆದು 50 ವರ್ಷಗಳಾದ ಸವಿನೆನಪಿಗಾಗಿ ಕಾರ್ಯಕ್ರಮವೊಂದನ್ನು ಆಯೋಜಿಸುವ ಗೌರವ ಗುಜರಾತ್ ಸರ್ಕಾರಕ್ಕೆ ಲಭಿಸಿತ್ತು.
ಇದು ಸರ್ದಾರ್ ಪಟೇಲರ 125ನೇ ಜನ್ಮ ಜಯಂತಿಯ ಆಚರಣೆಯ ಸಮಯವೂ ಆಗಿತ್ತು. ಅಂದಿನ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಂದಿನ ಗೃಹ ಸಚಿವರಾದ ಎಲ್.ಕೆ. ಆಡ್ವಾಣಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1951ರ ಮೇ 11ರಂದು ನೀಡಿದ ತಮ್ಮ ಭಾಷಣದಲ್ಲಿ, ಡಾ.ರಾಜೇಂದ್ರ ಪ್ರಸಾದ್ ಅವರು ಸೋಮನಾಥ ದೇವಾಲಯವು ಜಗತ್ತಿಗೆ ಸಾರುವು ದೇನೆಂದರೆ, ಅಪ್ರತಿಮ ನಂಬಿಕೆ ಮತ್ತು ಪ್ರೀತಿಯನ್ನು ಹೊಂದಿರುವ ಯಾವುದನ್ನೇ ಆಗಲಿ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ದೇವಾಲಯವು ಜನರ ಹೃದಯಗಳಲ್ಲಿ ನೆಲೆಸಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿ ದರು. ದೇವಾಲಯದ ಪುನರ್ನಿರ್ಮಾಣವು ಸರ್ದಾರ್ ಪಟೇಲರ ಕನಸಿನ ಸಾಕಾರವಾಗಿದೆ. ಆದರೆ, ಅದೇ ಸ್ಪೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ಜನರ ಜೀವನದಲ್ಲಿ ಸಮೃದ್ಧಿಯನ್ನು ಮರಳಿ ತರುವುದು ಮುಖ್ಯ ಎಂದು ಅವರು ಹೇಳಿದರು. ಇವು ಅವರು ನೀಡಿದ ಪ್ರಮುಖ ಮತ್ತು ಸ್ಪೂರ್ತಿದಾಯಕ ಸಂದೇಶಗಳಾಗಿವೆ.
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾವು ಇದೇ ಹಾದಿಯಲ್ಲಿ ಸಾಗುತ್ತಿದ್ದೇವೆ. ‘ವಿಕಾಸದ ಜೊತೆಗೆ ಪರಂಪರೆ’ (ವಿಕಾಸ್ ಭಿ, ವಿರಾಸತ್ ಭಿ) ಎಂಬ ತತ್ವದಿಂದ ಸ್ಪೂರ್ತಿ ಪಡೆದು, ಸೋಮ ನಾಥದಿಂದ ಕಾಶಿಯವರೆಗೆ, ಕಾಮಾಖ್ಯದಿಂದ ಕೇದಾರ ನಾಥದವರೆಗೆ, ಅಯೋಧ್ಯೆಯಿಂದ ಉಜ್ಜಯಿನಿಯವರೆಗೆ ಹಾಗೂ ತ್ರಯಂಬಕೇಶ್ವರದಿಂದ ಶ್ರೀಶೈಲದವರೆಗೆ, ನಮ್ಮ ಆಧ್ಯಾತ್ಮಿಕ ಕೇಂದ್ರಗಳ ಸಾಂಪ್ರದಾಯಿಕ ಸ್ವರೂಪವನ್ನು ಸಂರಕ್ಷಿಸುತ್ತಲೇ ಅವುಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸುವ ಅವಕಾಶ ನಮ್ಮ ತಂಡಕ್ಕೆ ಲಭಿಸಿರುವುದನ್ನು ನಾನು ನನ್ನ ಸೌಭಾಗ್ಯವೆಂದು ಪರಿಗಣಿಸುತ್ತೇನೆ.
ಇದರೊಂದಿಗೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನಗಳು ಹೆಚ್ಚಿನ ಜನರು ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ಖಚಿತಪಡಿಸುತ್ತವೆ. ಇದು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸು ತ್ತದೆ, ಜೀವ ನೋಪಾಯವನ್ನು ಭದ್ರಪಡಿಸುತ್ತದೆ ಮತ್ತು ‘ಏಕ್ ಭಾರತ, ಶ್ರೇಷ್ಠ ಭಾರತ’ದ ಸ್ಪೂರ್ತಿ ಯನ್ನು ಗಾಢವಾಗಿಸುತ್ತದೆ. ಸೋಮನಾಥವನ್ನು ರಕ್ಷಿಸಲು ಪ್ರಾಣ ಅರ್ಪಿಸಿದವರ ಮತ್ತು ಅದನ್ನು ಪದೇ ಪದೆ ಪುನರ್ನಿರ್ಮಿಸಿದವರ ಹೋರಾಟಗಳು ಮತ್ತು ತ್ಯಾಗಗಳನ್ನು ಎಂದಿಗೂ ಮರೆಯ ಲಾಗುವುದಿಲ್ಲ.
ಭಾರತದ ವಿವಿಧ ಮೂಲೆಗಳಿಂದ ಬಂದ ಅಸಂಖ್ಯಾತ ವ್ಯಕ್ತಿಗಳು ಅದರ ವೈಭವವನ್ನು ಮರು ಸ್ಥಾಪಿಸಲು ಕೊಡುಗೆ ನೀಡಿದ್ದಾರೆ. ಅವರು ಭಾರತದ ಪ್ರತಿಯೊಂದು ಭಾಗವನ್ನೂ ಪವಿತ್ರ ವೆಂದು ಕಂಡರು, ಭೌಗೋಳಿಕತೆಯನ್ನು ಮೀರಿದ ಏಕತೆಯ ಭಾವನೆಯಿಂದ ಅವರು ಒಂದಾಗಿದ್ದರು.
ವಿಭಜನೆಗಳಿಂದ ಕೂಡಿದ ಇಂದಿನ ಜಗತ್ತಿನಲ್ಲಿ, ಈ ಏಕತೆಯ ಮನೋಭಾವವು ಎಂದಿ ಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಏಕತೆಯ ಭಾವನೆ ಮತ್ತು ಸಾಮೂಹಿಕ ನಾಗರಿಕ ಪ್ರಜ್ಞೆ ಜೀವಂತವಾಗಿರುವುದರಿಂದ, ಸೋಮನಾಥವು ತನ್ನೆಲ್ಲಾ ವೈಭವ ದೊಂದಿಗೆ ಅಚಲವಾಗಿ ನಿಲ್ಲುವುದನ್ನು ಮುಂದುವರಿಸುತ್ತದೆ. ಇದಕ್ಕೆ ಗೌರವ ಸಲ್ಲಿಸುವ ಸಲುವಾಗಿ, ಸಾವಿರ ವರ್ಷಗಳ ಅಸಾಧಾರಣ ಶೌರ್ಯವನ್ನು ಸ್ಮರಿಸುತ್ತಾ, ಮುಂದಿನ ಸಾವಿರ ದಿನಗಳ ಕಾಲ ಸೋಮನಾಥದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಈ ಪೂಜೆಗಳಿಗಾಗಿ ಅನೇಕ ಜನರು ದೇಣಿಗೆ ನೀಡುತ್ತಿರುವುದು ಸಂತಸ ತಂದಿದೆ.
ಈ ವಿಶೇಷ ಸಮಯದಲ್ಲಿ ಸೋಮನಾಥಕ್ಕೆ ಪ್ರಯಾಣಿಸಬೇಕೆಂದು ನಾನು ಭಾರತೀಯರಲ್ಲಿ ವಿನಂತಿಸುತ್ತೇನೆ. ನೀವು ಸೋಮ ನಾಥದ ತೀರದಲ್ಲಿ ನಿಂತಾಗ, ಅಲ್ಲಿನ ಪ್ರಾಚೀನ ಪ್ರತಿಧ್ವನಿಗಳು ನಿಮ್ಮೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಿ. ನೀವು ಕೇವಲ ಭಕ್ತಿಪರವಶರಾಗುವುದು ಮಾತ್ರವಲ್ಲದೆ, ಎಂದಿಗೂ ಮಾಸದ, ಅಖಂಡವಾದ ಮತ್ತು ಅಚಲವಾದ ನಾಗರಿಕತೆಯ ಚೇತನದ ಬಲಿಷ್ಠ ನಾಡಿಮಿಡಿತವನ್ನು ಅನುಭವಿಸುವಿರಿ.
ನೀವು ಭಾರತದ ಅಜೇಯ ಚೇತನವನ್ನು ಅನುಭವಿಸುವಿರಿ ಮತ್ತು ಎಷ್ಟೇ ಪ್ರಯತ್ನಗಳ ಹೊರತಾ ಗಿಯೂ ನಮ್ಮ ಸಂಸ್ಕೃತಿಯು ಏಕೆ ಪರಾಜಯಗೊಳ್ಳದೆ ಉಳಿಯಿತು ಎಂಬುದನ್ನು ಅರ್ಥಮಾಡಿ ಕೊಳ್ಳುವಿರಿ; ಅಷ್ಟೇ ಅಲ್ಲದೆ, ಶಾಶ್ವತ ವಿಜಯದ ದರ್ಶನವನ್ನು ಪಡೆಯುವ ಅವಕಾಶ ನಿಮ್ಮದಾ ಗಲಿದೆ. ಇದು ಖಂಡಿತವಾಗಿಯೂ ಮರೆಯಲಾಗದ ಅನುಭವವಾಗಲಿದೆ.
ಜೈ ಸೋಮನಾಥ.
(ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಸೋಮನಾಥ ಟ್ರಸ್ಟ್ʼನ ಅಧ್ಯಕ್ಷರೂ ಆಗಿದ್ದಾರೆ)