ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಟಾಟಾ ಸಾಮ್ರಾಜ್ಯದ ನೈತಿಕ ಅಡಿಪಾಯ ಸೂನಿ ಟಾಟಾ

ಕೌಟುಂಬಿಕ ಏರಿಳಿತಗಳು, ವೈಯಕ್ತಿಕ ನೋವುಗಳು ಎದುರಾದಾಗಲೂ ಸೂನಿ ಅವರು ಕುಗ್ಗಲಿಲ್ಲ. ಅವರ ವ್ಯಕ್ತಿತ್ವದಲ್ಲಿ ಒಂದು ‘ಘನತೆ’ ಇತ್ತು. ಸಾರ್ವಜನಿಕವಾಗಿ ಅವರು ಎಂದೂ ಪ್ರಚಾರ ಬಯಸ ಲಿಲ್ಲ. ಕ್ಯಾಮೆರಾಗಳ ಫ್ಲ್ಯಾಶ್ʼಲೈಟ್‌ಗಳಿಗಿಂತ ಮನೆಯ ಒಳಗಿನ ದೀಪದ ಬೆಳಕಿನಲ್ಲಿ ಮಕ್ಕಳ ಭವಿಷ್ಯ ರೂಪಿಸುವುದೇ ಅವರಿಗೆ ಮುಖ್ಯವಾಗಿತ್ತು.

ಒಂದೊಳ್ಳೆ ಮಾತು

ಮುಂಬೈನ ಸಾಗರದ ಅಲೆಗಳು ಪ್ರತೀ ಬಾರಿಯೂ ದಡಕ್ಕೆ ಬಂದು ಮುತ್ತಿಕ್ಕುವಾಗ ಒಂದು ಬಗೆಯ ನಿಶ್ಯಬ್ದವಿರುತ್ತದೆ, ಅದರಲ್ಲಿ ಒಂದು ಶಕ್ತಿಯಿದೆ. ರತನ್ ಟಾಟಾ ಅವರ ಬದುಕಿನಲ್ಲೂ ಅಂತಹದ್ದೇ ಒಂದು ಮೌನ ಶಕ್ತಿ ಇತ್ತು, ಅದುವೇ ಅವರ ತಾಯಿ ಸೂನಿ ಟಾಟಾ. ಬೃಹತ್ ಉದ್ಯಮ ಸಾಮ್ರಾಜ್ಯದ ಅಡಿಪಾಯ ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಆಗಿರಲಿಲ್ಲ, ಅದು ತಾಯಿ ನೀಡಿದ ಮೌಲ್ಯಗಳ ಸಂಸ್ಕಾರದಿಂದ ನಿರ್ಮಾಣವಾಗಿತ್ತು.

ಸೂನಿ ಅವರು ಟಾಟಾ ಕುಟುಂಬದ ಸೊಸೆಯಾಗಿ ಬಂದಾಗ, ಅವರ ಮುಂದೆ ವೈಭವೋಪೇತ ಜೀವನದ ಎಲ್ಲ ಬಾಗಿಲುಗಳೂ ತೆರೆದಿದ್ದವು, ಆದರೆ ಅವರು ಆರಿಸಿಕೊಂಡಿದ್ದು ಮಾತ್ರ ಸರಳತೆ ಮತ್ತು ಗಾಂಭೀರ್ಯದ ಹಾದಿ.

ರತನ್ ಟಾಟಾ ಅವರು ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡುವಾಗ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಅದು ರಜಾ ದಿನಗಳ ಸಮಯ. ರತನ್ ಮತ್ತು ಅವರ ಸಹೋದರ ವಿದೇಶಕ್ಕೆ ಪ್ರವಾಸ ಹೋಗಲು ಸಿದ್ಧರಾಗುತ್ತಿದ್ದರು. ಆ ಸಮಯದಲ್ಲಿ ಅವರ ತಾಯಿ ಸೂನಿ ಟಾಟಾ ಅವರು ಮಕ್ಕಳನ್ನು ಹತ್ತಿರ ಕರೆದು, ‘ನೋಡಿ ಮಕ್ಕಳೇ, ನೀವು ಎಲ್ಲಿಗೆ ಹೋದರೂ, ಎಷ್ಟು ದೊಡ್ಡವರಾ ದರೂ ಸರಿ, ಎಂದಿಗೂ ನಿಮ್ಮ ಘನತೆಯನ್ನು ಬಿಟ್ಟು ಕೊಡಬೇಡಿ. ಸಂಕಷ್ಟದ ಸಮಯದಲ್ಲಿಯೂ ಕೂಡ ನಿಮ್ಮ ಮೌಲ್ಯಗಳ ಜೊತೆ ರಾಜಿ ಮಾಡಿಕೊಳ್ಳಬೇಡಿ’ ಎಂದು ತಿಳಿ ಹೇಳಿದ್ದರು.

ಇದನ್ನೂ ಓದಿ: Roopa Gururaj Column: ಅಂತರ್ಶಕ್ತಿ ಒಂದೇ ಬದುಕಲು ಪ್ರೇರಣೆ

ಕೌಟುಂಬಿಕ ಏರಿಳಿತಗಳು, ವೈಯಕ್ತಿಕ ನೋವುಗಳು ಎದುರಾದಾಗಲೂ ಸೂನಿ ಅವರು ಕುಗ್ಗಲಿಲ್ಲ. ಅವರ ವ್ಯಕ್ತಿತ್ವದಲ್ಲಿ ಒಂದು ‘ಘನತೆ’ ಇತ್ತು. ಸಾರ್ವಜನಿಕವಾಗಿ ಅವರು ಎಂದೂ ಪ್ರಚಾರ ಬಯಸ ಲಿಲ್ಲ. ಕ್ಯಾಮೆರಾಗಳ ಫ್ಲ್ಯಾಶ್ʼಲೈಟ್‌ಗಳಿಗಿಂತ ಮನೆಯ ಒಳಗಿನ ದೀಪದ ಬೆಳಕಿನಲ್ಲಿ ಮಕ್ಕಳ ಭವಿಷ್ಯ ರೂಪಿಸುವುದೇ ಅವರಿಗೆ ಮುಖ್ಯವಾಗಿತ್ತು.

ರತನ್ ಟಾಟಾ ಅವರು ತಮ್ಮ ಜೀವನದ ಸಂಧ್ಯಾಕಾಲದಲ್ಲೂ ನನ್ನ ತಾಯಿ ಕಲಿಸಿದ ಪಾಠಗಳು ನನ್ನನ್ನು ನಡೆಸುತ್ತಿವೆ, ನನ್ನ ತಾಯಿ ಮತ್ತು ಅಜ್ಜಿ ನಮಗೆ ಕಲಿಸಿದ್ದು ಕೇವಲ ಬದುಕುವುದನ್ನಲ್ಲ, ಬದಲಾಗಿ ಘನತೆಯಿಂದ ಬದುಕುವುದನ್ನು. ನಾವು ಶಾಲೆಗೆ ಹೋಗುವಾಗ ಅಥವಾ ಗೆಳೆಯ ರೊಂದಿಗೆ ಇರುವಾಗ ನಮಗೆ ಸೌಲಭ್ಯಗಳ ಕೊರತೆ ಇರಲಿಲ್ಲ, ಆದರೆ ನಮಗೆ ಲಭ್ಯವಿದ್ದದ್ದು ಕೇವಲ ಶಿಸ್ತು ಮತ್ತು ಸಂಸ್ಕಾರ ಮಾತ್ರ’ ಎಂದು ನೆನೆಯುತ್ತಿದ್ದರು.

ಸೋಲನ್ನು ಹೇಗೆ ವಿನಮ್ರವಾಗಿ ಸ್ವೀಕರಿಸಬೇಕು ಮತ್ತು ಗೆಲುವನ್ನು ಹೇಗೆ ಸಮಾಜಕ್ಕೆ ಅರ್ಪಿಸಬೇಕು ಎಂಬ ಪಾಠ ಅವರಿಗೆ ಸಿಕ್ಕಿದ್ದು ಸೂನಿ ಅವರ ಮಡಿಲಲ್ಲೇ. ಸೂನಿ ಟಾಟಾ, ರತನ್ ಟಾಟಾ ಅವರು ಇಂದು ಭೌತಿಕವಾಗಿ ನಮ್ಮ ನಡುವೆ ಇಲ್ಲದಿರಬಹುದು, ಆದರೆ ಭಾರತದಾದ್ಯಂತ ಹರಡಿರುವ ಟಾಟಾ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಲಕ್ಷಾಂತರ ಜನರ ಬದುಕಿನಲ್ಲಿ ಮಿಂಚುವ ಭರವಸೆಯ ಕಂಗಳಲ್ಲಿ ಅವರ ಪ್ರತಿಬಿಂಬವಿದೆ.

ಒಬ್ಬ ಉದ್ಯಮಿ ಕೇವಲ ಲಾಭದ ಬಗ್ಗೆ ಯೋಚಿಸದೆ, ದೇಶದ ಬಗ್ಗೆ ಯೋಚಿಸುವಂತೆ ಪ್ರೇರೇಪಿಸಿದ ಆ ಮೌನ ಸಂಸ್ಕೃತಿಯೇ ಸೂನಿ ಟಾಟಾ. ಅವರು ಕೇವಲ ಒಬ್ಬ ತಾಯಿಯಾಗಿರಲಿಲ್ಲ, ಅವರು ಭಾರತದ ಅತ್ಯಂತ ನೈತಿಕ ಉದ್ಯಮಿಯ ನೈತಿಕ ದಿಕ್ಸೂಚಿಯಾಗಿದ್ದರು.

ಪ್ರಚಾರವಿಲ್ಲದೆಯೇ ಒಬ್ಬ ವ್ಯಕ್ತಿ ಹೇಗೆ ಜಗತ್ತನ್ನು ಬದಲಿಸಬಲ್ಲ ಎಂಬುದಕ್ಕೆ ಸೂನಿ ಟಾಟಾ ಅವರ ಜೀವನವೇ ಒಂದು ಸುಂದರ ಉದಾಹರಣೆ. ಪ್ರಪಂಚಕ್ಕೆ ಕಾಣುವುದು ಕೇವಲ ಕಟ್ಟಡದ ಎತ್ತರ ಮಾತ್ರ, ಆದರೆ ಆ ಎತ್ತರಕ್ಕೆ ಕಾರಣವಾಗಿ ನೆಲದಡಿಯಲ್ಲಿ ಮೌನವಾಗಿ ಮಲಗಿರುವ ಅಡಿಪಾಯಕ್ಕೆ ತಾಯಿಯೆಂಬ ಹೆಸರಿರುತ್ತದೆ.

ಅನೇಕ ಸಂದರ್ಭಗಳಲ್ಲಿ ನಮಗೆ ಬಾಲ್ಯದಲ್ಲಿ ತಾಯಿ ಹೇಳಿಕೊಟ್ಟ ಶಿಸ್ತಿನ ಪಾಠಗಳು ಅವಳಿಂದ ಸಾವಿರಾರು ಮೈಲಿಗಳು ದೂರವಿದ್ದರೂ ನೆನಪಿರುತ್ತವೆ. ಪ್ರತೀ ಸಂದರ್ಭದಲ್ಲೂ ನಮಗೆ ಗೊತ್ತಿಲ್ಲದೆ ನಾವಾಡುವ ಮಾತುಗಳು, ತೋರಿಸುವ ಸಂಯಮ, ಅಗತ್ಯಬಿದ್ದಾಗ ಉಪಯೋಗಿಸುವ ಕೌಶಲ್ಯ ಎಲ್ಲವೂ ಅಮ್ಮನಿಂದ ಬಂದ ಬಳುವಳಿಗಳೇ.

ಆದ್ದರಿಂದಲೇ ಜೀವನದಲ್ಲಿ ಅದೇನೇ ಸಾಧನೆ ಮಾಡಿದರೂ ಅದು ನಮ್ಮದು ಎಂದು ಬೀಗುವ ಮುಂಚೆ, ನಮ್ಮನ್ನು ಅಷ್ಟರಮಟ್ಟಿಗೆ ಬೆಳೆಸಿದ ತಂದೆ-ತಾಯಿಯ ಕೊಡುಗೆಯನ್ನು ಸದಾ ಸ್ಮರಿಸ ಬೇಕು, ಈ ಕೃತಜ್ಞತೆ ಸದಾ ನಮ್ಮನ್ನು ಕಾಯಲಿ.

ರೂಪಾ ಗುರುರಾಜ್

View all posts by this author