ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ರಾ.ಹ.ದೇಶಪಾಂಡೆಯವರ ಕ್ಷಮೆ ಕೋರಿ ಸಿರಿಗನ್ನಡಂ ಬೇಗಲ್ʼಗೆ !

ಕನ್ನಡ ಸಮ್ಮೇಳನದಲ್ಲೂ ಬಿಸಿಬಿಸಿ ಇಡ್ಲಿ-ವಡೆ, ಉಪ್ಪಿಟ್ಟು-ಕೇಸರಿಭಾತ್ ಚಪ್ಪರಿಸಲಾಗದೆ ಒಣಕಲು ಬೇಗಲ್ ತಿನ್ನಬೇಕಾಗಿ ಬಂದ ನಾವುಗಳು ಬೇರೆ ಉಪಾಯವಿಲ್ಲದೆ “ಸಿರಿಗನ್ನಡಂ ಬೇಗಲ್ಗೆ!" ಎಂದು ಮನಸ್ಸಿಲ್ಲದ ಮನಸ್ಸಿನಿಂದ ಸಂಭ್ರಮಿಸಿದ್ದೆವು. ಆವತ್ತಿಂದ ನನಗೆ ಸಿರಿಗನ್ನಡಂ ಗೆಲ್ಗೆ ಎಂದುಕೊಂಡಾಗಲೆಲ್ಲ ನೆನಪಾಗುವುದು ಸಿರಿಗನ್ನಡಂ ಬೇಗಲ್‌ಗೆ ಘೋಷಣೆಯೇ.

ತಿಳಿರು ತೋರಣ

ಬೇಗಲ್ ಎಂಬುದು ಅಮೆರಿಕದಲ್ಲಿ ಸಾಮಾನ್ಯವಾಗಿ ಬೆಳಗಿನ ಒಂದು ತಿಂಡಿ ಪದಾರ್ಥ. ನಮ್ಮ ದೇಶದಲ್ಲಿ ಇಡ್ಲಿ ಇದ್ದಂತೆ ಎಂದು ಹೇಳಬಹುದು. ಇಡ್ಲಿಗಿಂತಲೂ ವಡೆ ಇದ್ದಂತೆ ಎಂದರೆ ಮತ್ತೂ ಸಮಂಜಸ. ಏಕೆಂದರೆ ಬೇಗಲ್ ಕೂಡ ಉದ್ದಿನ ವಡೆಯದೇ ಆಕಾರ. ನಡುವೆ ತೂತು ಸಹ ವಡೆಯಂತೆಯೇ. ಗಾತ್ರದಲ್ಲಿ ಬೇಗಲ್ ಉದ್ದಿನ ವಡೆಗಿಂತ ತುಸು ದೊಡ್ಡದು. ವಡೆಯನ್ನು ನಾವು ಎಣ್ಣೆಯಲ್ಲಿ ಕರಿದು ಮಾಡುತ್ತೇವಾದರೆ ಬೇಗಲ್ ತಯಾರಿಕೆಯ ವಿಧಾನ ಕೊಂಚ ಭಿನ್ನ.

ಅಮೆರಿಕದಲ್ಲೂ ಈಗ ಕನ್ನಡ ಮಾಸಾಚರಣೆಯ ಭರಾಟೆ. ಈ ಸಲ ನವೆಂಬರ್ ೧ನೆಯ ತಾರೀಕು ವಾರಾಂತ್ಯದಲ್ಲಿಯೇ ಬಂದಿದ್ದರಿಂದ ಇಲ್ಲಿನ ಕೆಲವು ಕನ್ನಡ ಸಂಘಗಳು ನವೆಂಬರ್ ೧ರಂದೇ ಯಥಾಯೋಗ್ಯವಾಗಿ ಕನ್ನಡ ನುಡಿಹಬ್ಬ ಆಚರಿಸುವುದು ಸಾಧ್ಯ ವಾಯಿತು. ಹೀಗೇಕೆ ಹೇಳಿದೆನೆಂದರೆ ಇಲ್ಲಿ ಸಾಮಾನ್ಯವಾಗಿ ಯಾವುದೇ ಹಬ್ಬ/ಉತ್ಸವದ ಆಚರಣೆಗಾದರೂ ಸ್ವಲ್ಪ ಡೇಟ್ ಅಡ್ಜಸ್ಟ್‌ಮೆಂಟ್ ಮಾಡಬೇಕಾಗಿ ಬರುತ್ತದೆ.

ಸ್ವಂತ ಕಟ್ಟಡ, ಸಭಾಂಗಣ ಇತ್ಯಾದಿ ಯಾವ ಕನ್ನಡ ಸಂಘದ ಬಳಿಯೂ ಇಲ್ಲವಾದ್ದರಿಂದ 400-500 ಜನ ಕುಳಿತುಕೊಳ್ಳಲಿಕ್ಕೆ ಆಗುವಷ್ಟು ದೊಡ್ಡ ಸಭಾಂಗಣ ನಗರದ ಯಾವ ಮಿಡ್ಲ್ ಸ್ಕೂಲ್/ಹೈಸ್ಕೂಲ್‌ನಲ್ಲಿ ಯಾವ ವಾರಾಂತ್ಯದಂದು ಬಾಡಿಗೆಗೆ ಲಭ್ಯವಿರುತ್ತದೆಯೋ (ಅದನ್ನೂ ೨-೩ ತಿಂಗಳ ಮೊದಲೇ ಕಾಯ್ದಿರಿಸಬೇಕು) ಆವತ್ತೇ ಆಚರಣೆ; ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಷ್ಕಳವಾಗಿ ಹಬ್ಬದೂಟ ಇತ್ಯಾದಿ.

ಕೆಲವೊಮ್ಮೆ ಕರ್ನಾಟಕದಿಂದ ಪ್ರವಾಸದಲ್ಲಿ ಬಂದ ಕಲಾವಿದರಿದ್ದರೆ ಅವರ ಲಭ್ಯತೆ ಯನ್ನನುಸರಿಸಿ ದಿನಾಂಕ ನಿಗದಿ ಆಗುವುದೂ ಇದೆ. ಹಾಗೆ ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘದಲ್ಲಿ ಮೊನ್ನೆ ನವೆಂಬರ್ ೮ರಂದು ಆಚರಿಸಿದೆವು, ರಾಜ್ಯೋತ್ಸವ ಮತ್ತು ದೀಪಾವಳಿ ಒಟ್ಟು ಸೇರಿಸಿ. ಕೆನಡಾದ ಟೊರೊಂಟೊದಿಂದ ಯಕ್ಷ ಮಿತ್ರ ತಂಡದವರು ಬಂದು ‘ವಾಲಿವಧೆ’ ಯಕ್ಷಗಾನ ಪ್ರದರ್ಶನ ಮಾಡಿದರು.

ಇದನ್ನೂ ಓದಿ: Srivathsa Joshi Column: ಅವಭೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು

ಮತ್ತೆ ಇಲ್ಲಿನ ಮಕ್ಕಳಿಂದ, ಪುರುಷರಿಂದ ಸಮೂಹ ನೃತ್ಯಗಳು, ಯುವತಿಯರಿಂದ -ಷನ್ ಶೋ, ಕ್ರೀಡಾಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಇದ್ದವು. ಅಧ್ಯಕ್ಷೆ ಡಾ.ರೋಹಿಣಿ ಬಾಣಾವರ ಕನ್ನಡಪರ ನಾಲ್ಕಾರು ಸಿಹಿಮಾತುಗಳನ್ನಾಡಿದರು. ಆಮೇಲೆ ಜೋಳದರೊಟ್ಟಿ-ಎಣಗಾಯಿ ಪಲ್ಯ, ಪಲಾವ್, ಪಾಯಸ, ಐಸ್ ಕ್ರೀಮ್ ಇತ್ಯಾದಿ ವಿಶೇಷದ ರುಚಿಕರ ಊಟವಿತ್ತು.

ಒಂದಿಷ್ಟು ಹರಟೆ, ಕಾಲಕ್ಷೇಪ ಮುಗಿಸಿ ನಾವೆಲ್ಲ ಮನೆಗಳಿಗೆ ತೆರಳಿದೆವು. ಮಾರನೇ ದಿನವೋ ಏನೋ ಒಮ್ಮೆ ಹೀಗೇ ಯೋಚಿಸುತ್ತಿದ್ದಾಗ ನನಗನಿಸಿತು ಕನ್ನಡದ ಬಗ್ಗೆ ಭೀಷಣ ಭಾಷಣಗಳೇನೂ ಇಲ್ಲದೆಯೇ, ಏರುದನಿಯಲ್ಲಿ ಒಂದೆರಡು ಸರ್ತಿಯಾದರೂ “ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!" ಘೋಷಣೆಗಳೂ ಇಲ್ಲದೆಯೇ ರಾಜ್ಯೋತ್ಸವ ಆಚರಿಸಿದೆವಲ್ಲ, ಅದರಿಂದ ಭುವನೇಶ್ವರಿ ತಾಯಿ ಬೇಸರ ಮಾಡಿಕೊಂಡಿರಲಾರಳೇ? 1893ರಷ್ಟು ಹಿಂದೆಯೇ “ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!" ಘೋಷವಾಕ್ಯಗಳನ್ನು ಹುಟ್ಟು ಹಾಕಿದ, ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದ ಕನ್ನಡ ಭಕ್ತ ರಾಮಚಂದ್ರ ಹಣಮಂತರಾವ ದೇಶಪಾಂಡೆಯವರ ಆತ್ಮಕ್ಕೆ, ಆ ಘೋಷವಾಕ್ಯಗಳನ್ನು ನಾಡಿನೆಲ್ಲೆಡೆ ಪ್ರಚುರಪಡಿಸಿದ ಕನ್ನಡದ ಕಣ್ವ ಬಿಎಂಶ್ರೀಯವರ ಆತ್ಮಕ್ಕೆ ನಮ್ಮ ಸಿರಿಗನ್ನಡಂ ಗೆಲ್ಗೆ ಘೋಷಣೆರಹಿತ ರಾಜ್ಯೋತ್ಸವ ಆಚರಣೆಯಿಂದ ಬೇಸರವಾಗಿರಲಿ ಕ್ಕಿಲ್ಲವೇ? ಅಥವಾ, “ಅಬ್ಬಾ ಆ ಕಿವಿಗಡಚಿಕ್ಕುವ ಅಬ್ಬರಕ್ಕಿಂತ ಇದೇ ವಾಸಿ!" ಅಂತ ಅವರೆಲ್ಲ ಖುಷಿಪಟ್ಟಿರಬಹುದೇ? ನನ್ನ ಅನುಮಾನಕ್ಕೆ ಕಾರಣವೇನೆಂದರೆ ಕನ್ನಡಿಗರೆಲ್ಲ ಒಂದೇಕಡೆ ಸೇರಿ ಕನ್ನಡಹಬ್ಬದ ಆಚರಣೆ ಅಂದಮೇಲೆ ಅಲ್ಲಿ “ಸಿರಿಗನ್ನಡಂ ಗೆಲ್ಗೆ!" ಬಾರದಿದ್ದರೆ ಹೇಗೆ!? ಆಮೇಲೆ ನಾನೇ ಸಮಾಧಾನ ಮಾಡಿಕೊಂಡೆ “ಸಿರಿಗನ್ನಡಂ ಗೆಲ್ಗೆ!" ಅಂತ ಘೋಷಣೆ ಕೂಗೋದೊಂದೇ ಕನ್ನಡಪ್ರೀತಿಯ ಅಭಿವ್ಯಕ್ತಿ ಅಲ್ಲ, ನಾವು ಅಮೆರಿಕ ನ್ನಡಿಗರು “ಸಿರಿಗನ್ನಡಂ ಬೇಗಲ್‌ಗೆ!" ಎಂದು ಹೇಳಿದರೂ ತಾಯಿ ಭುವನೇಶ್ವರಿ ಸಂಪ್ರೀತ ಳಾಗುತ್ತಾಳೆ, ನಸುನಕ್ಕು ನಮ್ಮನ್ನು ಹರಸುತ್ತಾಳೆ, ಪಶ್ಚಾತ್ತಾಪ ಪಡುವಂಥದ್ದೇನಿಲ್ಲ ಅದರಲ್ಲಿ ಎಂದು.

Screenshot_1 ok

ಕ್ಷಮಿಸಿ. ಇದನ್ನು ಅಷ್ಟೇನೂ ಸೀರಿಯಸ್ಸಾಗಿ ತಗೋಬೇಡಿ. ತಮಾಷೆಗೆ ಹಾಗಂದೆ ಅಷ್ಟೇ. ಆದರೂ ಒಮ್ಮೆ ತಮಾಷೆಗಂತಲೇ ನಾವೊಂದಿಷ್ಟು ಮಂದಿ ಆ ರೀತಿಯದೊಂದು ಘೋಷಣೆ ಯನ್ನು ಕಲ್ಪಿಸಿಕೊಂಡಿದ್ದು ನಿಜ. ಅದೇನಾಯ್ತೆಂದರೆ, ಕೆಲ ವರ್ಷಗಳ ಹಿಂದೆ ಇಲ್ಲಿ ನಡೆದಿದ್ದ ಒಂದು ವಿಶ್ವಕನ್ನಡ ಸಮ್ಮೇಳನದಲ್ಲಿ ಒಂದು ದಿನ ಬೆಳಗಿನ ತಿಂಡಿಗೆ ಏರ್ಪಾಡಾ ಗಿದ್ದ ಇಡ್ಲಿ-ವಡೆ ಎಲ್ಲ ಬೇಗಬೇಗ ಖಾಲಿಯಾಯ್ತು.

ಕೊನೆಕೊನೆಗೆ ಬಂದವರಿಗೆ ಇಡ್ಲಿಯೂ ಇಲ್ಲ ವಡೆಯೂ ಇಲ್ಲ ಎಂದಾಯ್ತು. ಚಟ್ನಿಯಂತೂ ಮೊದಲೇ ಮುಗಿದಿತ್ತು. ಸಂಘಟಕರು ಸಮಯಸ್ಪೂರ್ತಿಯಿಂದ ತುರ್ತಾಗಿ ಒಂದಿಷ್ಟು ಬೇಗಲ್ಸ್ ತರಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.

ಕನ್ನಡ ಸಮ್ಮೇಳನದಲ್ಲೂ ಬಿಸಿಬಿಸಿ ಇಡ್ಲಿ-ವಡೆ, ಉಪ್ಪಿಟ್ಟು-ಕೇಸರಿಭಾತ್ ಚಪ್ಪರಿಸಲಾಗದೆ ಒಣಕಲು ಬೇಗಲ್ ತಿನ್ನಬೇಕಾಗಿ ಬಂದ ನಾವುಗಳು ಬೇರೆ ಉಪಾಯವಿಲ್ಲದೆ “ಸಿರಿಗನ್ನಡಂ ಬೇಗಲ್ಗೆ!" ಎಂದು ಮನಸ್ಸಿಲ್ಲದ ಮನಸ್ಸಿನಿಂದ ಸಂಭ್ರಮಿಸಿದ್ದೆವು. ಆವತ್ತಿಂದ ನನಗೆ ಸಿರಿಗನ್ನಡಂ ಗೆಲ್ಗೆ ಎಂದುಕೊಂಡಾಗಲೆಲ್ಲ ನೆನಪಾಗುವುದು ಸಿರಿಗನ್ನಡಂ ಬೇಗಲ್‌ಗೆ ಘೋಷಣೆಯೇ. ಹಾಗಾಗಿ ಇಂದಿನ ಅಂಕಣದಲ್ಲೂ ಇನ್ನುಮುಂದೆ ಬೇಗಲ್ ಬಗೆಗೇ ಬರೆಯುತ್ತೇನೆ.

ಬೇಗಲ್ ಇಲ್ಲಿ ಅಮೆರಿಕದಲ್ಲಿ ಸಾಮಾನ್ಯವಾಗಿ ಬೆಳಗಿನ ಒಂದು ತಿಂಡಿ ಪದಾರ್ಥ. ನಮ್ಮ ದೇಶದಲ್ಲಿ ಇಡ್ಲಿ ಇದ್ದಂತೆ ಎಂದು ಹೇಳಬಹುದು. ಇಡ್ಲಿಗಿಂತಲೂ ವಡೆ ಇದ್ದಂತೆ ಎಂದರೆ ಮತ್ತೂ ಸಮಂಜಸ. ಏಕೆಂದರೆ ಬೇಗಲ್ ಕೂಡ ಉದ್ದಿನ ವಡೆಯದೇ ಆಕಾರ. ನಡುವೆ ತೂತು ಸಹ ವಡೆಯಂತೆಯೇ (ಇಲ್ಲೊಂದು ಸಾಮಾನ್ಯ ಜ್ಞಾನದ ಅಂಶ: ಟೆನ್ನಿಕಾಯ್ಟ್ ರಿಂಗ್, ಸ್ವಿಮ್ಮಿಂಗ್ ರಿಂಗ್, ಉದ್ದಿನ ವಡೆ, ಬೇಗಲ್ ಮುಂತಾದ ವಸ್ತುಗಳ ಆ ವಿಶಿಷ್ಟ ಆಕಾರಕ್ಕೆ ರೇಖಾಗಣಿತದಲ್ಲಿ Torus ಎಂದು ಹೆಸರು.

ಗಣಿತದ ವಿಚಾರ ಇಷ್ಟು ಸಾಕು. ಇಲ್ಲವಾದರೆ ಗಣಿತದ್ವೇಷಿಗಳು ನನಗೆ ಹಿಡಿಶಾಪ ಹಾಕು ವರು). ಗಾತ್ರದಲ್ಲಿ ಬೇಗಲ್ ಉದ್ದಿನ ವಡೆಗಿಂತ ತುಸು ದೊಡ್ಡದು (ಹಾಂ... ಅಮೆರಿಕದಲ್ಲಿ ಎಲ್ಲವೂ ಬಿಗ್ ಸೈಜ್ ತಾನೆ? ಸ್ಟಾರ್‌ಬಕ್ಸ್ ಕಾಫಿಶಾಪ್‌ನಲ್ಲಿ ಲಾರ್ಜ್- ಮೀಡಿಯಂ-ಸ್ಮಾಲ್ ಪೈಕಿ ಸ್ಮಾಲ್ ಕಪ್ ಕಾಫಿ ತಗೊಂಡರೂ ಅದು ಬೆಂಗಳೂರಿನ ಕಾಫಿ ಕಪ್‌ನ ಹತ್ತು ಪಟ್ಟು ಇರುತ್ತದೆ). ವಡೆಯನ್ನು ನಾವು ಎಣ್ಣೆಯಲ್ಲಿ ಕರಿದು ಮಾಡುತ್ತೇವಾದರೆ ಬೇಗಲ್ ತಯಾರಿಕೆ ಯ ವಿಧಾನ ಭಿನ್ನ. ಬ್ರೆಡ್ ಹಿಟ್ಟನ್ನು ವಡೆ ಆಕಾರಕ್ಕೆ ತಂದು ಕೊತಕೊತ ಕುದಿಯುವ ನೀರಿ ನಲ್ಲಿ ಅದ್ದಿ ತೆಗೆದು ಆಮೇಲೆ ಬೇಯಿಸುವುದು.

ಸಾಮಾನ್ಯವಾಗಿ ಮನೆಗಳಲ್ಲಿ ಯಾರೂ ಬೇಗಲ್ ತಯಾರಿಸುವು ದಿಲ್ಲ, ಬೇಕರಿಗಳಲ್ಲಿ ಮಾಡಿದ್ದನ್ನು ಬೇಗಲ್ ಸ್ಟೋರ್‌ಗಳಿಂದ ಅಥವಾ ಸೂಪರ್ ಮಾರ್ಕೆಟ್‌ಗಳಿಂದ ತರುತ್ತಾರೆ. ಸುಮಾರು 400 ವರ್ಷಗಳ ಹಿಂದೆ ಯುರೋಪ್‌ನ ಪೋಲಂಡ್ ದೇಶದಲ್ಲಿ ಹುಟ್ಟಿಕೊಂಡ ಈ ಬ್ರೆಡ್ ಮಾದರಿಯು ಯಹೂದ್ಯ ವಲಸೆಗಾರರ ಜತೆಗೆ ಉತ್ತರ ಅಮೆರಿಕ ಖಂಡಕ್ಕೆ ಬಂದದ್ದು.

ಈಗಲೂ ಯಹೂದ್ಯರ ಸಂಖ್ಯೆ ಸಾಂದ್ರವಾಗಿರುವ ನ್ಯೂಯಾರ್ಕ್, ಶಿಕಾಗೊ, ಕೆನಡಾದ ಮಾಂಟ್ರಿಯಲ್ ಮುಂತಾದ ದೊಡ್ಡದೊಡ್ಡ ನಗರಗಳಲ್ಲಿ ಬೇಗಲ್ ಉತ್ಪಾದನೆ ಮತ್ತು ಬಳಕೆ ಅತಿ ಹೆಚ್ಚು. ಕಳೆದ ಕೆಲ ದಶಕಗಳಿಂದೀಚೆಗೆ ದೇಶವ್ಯಾಪಿಯಾಗಿ ಎಲ್ಲರ ಅಚ್ಚು ಮೆಚ್ಚು. ಬೇಗಲ್ ಅನ್ನು ಹಾಗೆಯೇ ತಿನ್ನಬಹುದು, ಟೋಸ್ಟರ್‌ನಲ್ಲಿ ಬಿಸಿ ಮಾಡಿ ಎರಡು ಹೋಳುಗಳಾಗಿಸಿ ಬೆಣ್ಣೆ ಅಥವಾ ಕ್ರೀಮ್ ಚೀಸ್ ಹಚ್ಚಿಕೊಂಡೂ ತಿನ್ನಬಹುದು.

ಪುರಂದರದಾಸರು ‘ವಿಠಲನಾಮ ತುಪ್ಪವ ಬೆರೆಸಿ ಬಾಯ ಚಪ್ಪರಿಸಿರೋ...’ ಎಂದು ಹಾಡಿರುವಂತೆ ನನ್ನೊಬ್ಬ ಅಮೆರಿಕನ್ನಡಿಗ ಸ್ನೇಹಿತ ಕ್ಯಾಲಿಫೋರ್ನಿಯಾದಲ್ಲಿರುವ ಮಧುಕಾಂತ ಕೃಷ್ಣಮೂರ್ತಿ ಬೇಗಲ್ ಕುರಿತು ಒಂದು ಪದ್ಯ ಹೊಸೆದಿದ್ದಾರೆ: “ಕೆಂಪಗೆ ಕಾಯಿಸಿ ಬೆಣ್ಣೆಯ ಲೇಪಿಸಿ| ಮಸಾಲೆದೋಸೆ ಎಂದೇ ಭಾವಿಸಿ| ಟೋಸ್ಟರ್ ಎಂಬ ಕಾವಲಿ ಯಿಂದ| ಬೇಗಲ್ ಎಂಬ ಒಣಕಲು ಬನ್ನನು| ಬೇಗನೆ ತೆಗೆದು ಮರೆಯಲಿ ಕುಳಿತು| ಬಾಯ ಚಪ್ಪರಿಸಿರೋ ಮಂಕುದಿಣ್ಣೆಗಳೇ..." ಎಂದು. ಅವರೊಂದು ವೇಳೆ ಕನಕದಾಸರನ್ನು ಅನುಕರಿಸಿ ಪದ್ಯ ಕಟ್ಟಿದ್ದಿದ್ದರೆ ಅದು “ಬಾಗಿಲನು ತೆರೆದು ಬೇಗಲನು ಕೊಡೊ ಹರಿಯೇ..." ಎಂದಿರುತ್ತಿತ್ತೋ ಏನೋ.

ಅಂದ ಹಾಗೆ ಭಾರತದಲ್ಲಿ ಅಥವಾ ಇಲ್ಲಿಯ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಸಾದಾ ದೋಸೆ, ಈರುಳ್ಳಿ ದೋಸೆ, ಮಸಾಲೆ ದೋಸೆ ಮುಂತಾಗಿ ದೋಸೆಯ ವಿಧಗಳು ಇರುವಂತೆ ಬೇಗಲ್‌ನಲ್ಲೂ ನಾನಾ ನಮೂನೆಗಳಿರುತ್ತವೆ. ಪ್ಲೈನ್(ಸಾದಾ) ಬೇಗಲ್, ಆನಿಯನ್ (ಈರುಳ್ಳಿ) ಬೇಗಲ್, ಸಿನ್ನಮನ್(ದಾಲ್ಚೀನಿ) ಬೇಗಲ್, ಸೆಸಮೆ(ಎಳ್ಳು) ಬೇಗಲ್, ಬ್ಲೂಬೆರ್ರಿ ಬೇಗಲ್ ಇತ್ಯಾದಿ.

ಮತ್ತೊಂದು ‘ಎವೆರಿಥಿಂಗ್’ ಬೇಗಲ್ ಕೂಡ ಇದೆ, ಹೆಸರೇ ಸೂಚಿಸುವಂತೆ ಅದರಲ್ಲಿ ಎಲ್ಲವೂ ಇರುತ್ತದೆ. ಬೇಗಲ್‌ನ ಬಗ್ಗೆ ಮತ್ತೊಂದಿಷ್ಟು ಸ್ವಾರಸ್ಯಕರ ಸಂಗತಿಗಳನ್ನು ಸೇರಿಸುವುದಾದರೆ- ಬೇಗಲ್‌ನ ಆಕಾರ ಮತ್ತು ಹೆಚ್ಚೂ ಕಡಿಮೆ ಗಾತ್ರ ಸಹ ಒಂದೇ ರೀತಿ ಇರಬೇಕು, ಏನೇನೋ ಪ್ರಯೋಗಗಳನ್ನು ಮಾಡಿ ಚೌಕ ಬೇಗಲ್ ತಯಾರಿಸುತ್ತೇನೆ ಅಂತೆಲ್ಲ ಹೊರಟರೆ ಆಗದು.

ಬೇಗಲ್‌ನ ಆಕಾರ ಇರದಿದ್ದರೆ ಅದು ಬೇಗಲ್ಲೇ ಅಲ್ಲ. ಸ್ವಾದಗಳನ್ನು ಬದಲಾಯಿಸಲಿಕ್ಕೆ ಅಡ್ಡಿಯಿಲ್ಲ. ಬೇಗಲ್ ಮತ್ತು ಕಾಫಿ ಪ್ರತ್ಯೇಕ ಸೇವನೆ ಬೇಡವೆನಿಸುವವರಿಗೆ ಕಾಫಿ ಸ್ವಾದದ ಮತ್ತು ಕೆಫೀನ್ ಇರುವ ಬೇಗಲ್‌ಗಳೇ ಸಿಗುತ್ತವೆ. 2008ರಲ್ಲಿ ಗಗನಯಾತ್ರಿ ಗ್ರೆಗ್ ಚೆಮಿಟಾ- 14 ದಿನಗಳ ಬಾಹ್ಯಾಕಾಶ ಯಾತ್ರೆಗೆ ಹೋಗುವಾಗ ತನ್ನ ಜತೆ ಒಂದೂವರೆ ಡಜನ್‌ನಷ್ಟು ಬೇಗಲ್‌ಗಳನ್ನೂ ಒಯ್ದಿದ್ದನು.

ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ ಇದುವರೆಗಿನ ಅತಿದೊಡ್ಡ ಬೇಗಲ್ 2004ರ ಆಗಸ್ಟ್‌ನಲ್ಲಿ ಬ್ರ್ಯೂಗರ್ಸ್ ಬೇಗಲ್ಸ್ ಕಂಪನಿ ತಯಾರಿಸಿದ್ದು 868 ಪೌಂಡ್ ತೂಕವಿತ್ತು. ಸುಮಾರು 1100 ಪೌಂಡ್ ಹಿಟ್ಟು, 900 ಗ್ಯಾಲನ್ ನೀರು ಬಳಕೆಯಾಗಿ ಅದನ್ನು ಪೂರ್ತಿ ಬೇಯಿಸಲಿಕ್ಕೆ ೧೦ ಗಂಟೆಗಳು ಹಿಡಿದವಂತೆ.

ಅಮೆರಿಕದಲ್ಲಿ ಪ್ರತಿವರ್ಷ ಜನವರಿ 15ರಂದು ನ್ಯಾಷನಲ್ ಬೇಗಲ್ಸ್ ಡೇ ಎಂದು ಆಚರಿಸ ಲಾಗುತ್ತದೆ. ಕೆಲವು ಬೇಕರಿಗಳು ಆವತ್ತು ತಿಂಡಿಪೋತ ಗ್ರಾಹಕರಿಗೆ ಉಚಿತವಾಗಿ ಬೇಗಲ್‌ಗಳನ್ನು ಹಂಚುತ್ತವೆ. ಬೇಗಲ್ ಪುರಾಣವನ್ನು ಮುಂದುವರಿಸುವ ಮುನ್ನ ಈಗ ಉಪಕಥೆಯಾಗಿ ಸ್ವಲ್ಪ ಗಸಗಸೆ ಉದುರಿಸುತ್ತೇನೆ. ಬೇಗಲ್ ಎಂದರೇನಂತ ಗೊತ್ತಿಲ್ಲದವ ರಿಗೂ ಗಸಗಸೆ ಖಂಡಿತ ಗೊತ್ತಿರುತ್ತದೆ.

ಅಕ್ಕಿಹಿಟ್ಟು ಬೆಲ್ಲದಪಾಕ ಸೇರಿಸಿ ಚಪ್ಪಟೆಯಾಗಿ ತಟ್ಟಿ ತುಪ್ಪದಲ್ಲಿ ಕರಿದು ‘ಅತಿರಸ’ ಮಾಡುವಾಗ ಒಂದಿಷ್ಟು ಗಸಗಸೆ ಉದುರಿಸುವುದಿದೆ. ಅದು ಅತಿರಸದ ರುಚಿಯನ್ನೂ, ಮೆರುಗನ್ನೂ ಹೆಚ್ಚಿಸುತ್ತದೆಯಂತೆ. ಗಸಗಸೆಯದ್ದೇ ಕಡಬು ಮತ್ತು ಹಲ್ವಾ ಸಹ ಮಾಡುತ್ತಾ ರೆಂದು ಕೇಳಿದ್ದೇನೆ, ನಾನಿದುವರೆಗೆ ಅವೆರಡನ್ನೂ ತಿಂದಿಲ್ಲ.

ಗಸಗಸೆ ಪಾಯಸವಂತೂ ನಿಮಗೆ ಗೊತ್ತೇ ಇರುತ್ತದೆ. ಇಲ್ಲವಾದರೂ ಕವಿ ಕೆ.ಎಸ್. ನರಸಿಂಹ ಸ್ವಾಮಿ ಅದನ್ನು ನೆನಪಿಸುತ್ತಾರೆ “ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೇ ಇಳಿದಿತ್ತು!" ಎಂದು. ಮಾವನ ಮನೆಗೆ ಬಂದ ರಾಯರಿಗೆ ಆವತ್ತು ರಾತ್ರಿ ಘಮಘಮಿಸುವ ಮೃಷ್ಟಾನ್ನ ಭೋಜನದಲ್ಲಿ ಗಸಗಸೆ ಪಾಯಸವೂ ಇತ್ತಂತೆ.

ಹೇಗೂ ಪದುಮಳು ಒಳಗಿರಲಿಲ್ಲ, ಅವಳ ಬಳೆಗಳ ದನಿಯಿರಲಿಲ್ಲ. ರಾಯರು ಗಸಗಸೆ ಪಾಯಸ ತಿಂದು ಗಡದ್ದಾಗಿ ನಿದ್ದೆ ಮಾಡಲಿ ಎಂದು ಬೇಕೆಂದೇ ಹಾಗೆ ಏರ್ಪಾಡಾಗಿತ್ತೋ ಏನೋ ಆ ಅತ್ತೆ-ಮಾವನಿಗೇ ಗೊತ್ತು. ಗಸಗಸೆ ಪಾಯಸ ನಿದ್ದೆ ತರಿಸುವುದಂತೂ ಹೌದು. ನಿದ್ದೆ ಬರಲಿಕ್ಕೆ ತೊಳಲಾಡುವವರಿಗೆ ಗಸಗಸೆ ಪಾಯಸ ಕುಡಿಸಿದರೆ ಅದೇ ದಿವ್ಯೌಷಧ.

ಇದನ್ನು ‘ವಸಂತಸೇನೆ’ ನಾಟಕ/ಸಿನಿಮಾದಲ್ಲಿ ಶಕಾರನ ಬಾಯಿಯಿಂದ ಕೇಳಬೇಕು. ‘ಸ’ ಅಕ್ಷರವನ್ನು ‘ಶ’ ಎನ್ನುವ ಆತ “ಬಿಶಿಬಿಶಿ ಗಶಗಶೆ ಪಾಯಶ ಶೇವಿಶಿದರೆ ಶೊಗಶಾಗಿ ನಿದ್ರೆ ಬರುತ್ತೆ..." ಎನ್ನುತ್ತಾನೆ!

ಗಸಗಸೆ ಉಪಕಥೆಯನ್ನು ನಾನಿಲ್ಲಿ ಸೇರಿಸಿದ್ದೇಕೆಂದರೆ ಗಸಗಸೆ ಬೇಗಲ್ (Poppy seeds bagel) ಅಂತನೂ ಒಂದು ವಿಧವಿದೆ, ಮತ್ತು ಅದರದ್ದೇ ಕೆಲವು ಸ್ವಾರಸ್ಯಕರ ಸಂಗತಿಗಳಿವೆ. ಅದನ್ನೂ ತಿಳಿದುಕೊಳ್ಳುವಂಥವರಾಗಿ ಈಗ. ಮಾದಕ ಪದಾರ್ಥಗಳ ಬಳಕೆಯನ್ನು ಪತ್ತೆ ಹಿಡಿಯಲು ಡ್ರಗ್ ಟೆಸ್ಟ್ ಮಾಡುತ್ತಾರಷ್ಟೆ? ಕ್ರಿಮಿನಲ್‌ಗಳು, ವ್ಯಭಿಚಾರಿಗಳು, ಅಷ್ಟೇಅಲ್ಲದೆ ಕ್ರೀಡಾಳುಗಳನ್ನು ಕೂಡ ಉದ್ದೀಪನ ಪರೀಕ್ಷೆಗೆ ಒಳಪಡಿಸುತ್ತಾರೆ.

ಎಷ್ಟೋ ಸಂದರ್ಭಗಳಲ್ಲಿ ಅವರು ಉದ್ದೀಪನ ದ್ರವ್ಯ ಸೇವಿಸಿರುವುದು ಪತ್ತೆಯೂ ಆಗುತ್ತದೆ. ಈಗೀಗ ದೊಡ್ಡ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ, ಉದ್ಯೋಗಿಗಳಾದವರಿಗೆ ಅನಂತರವೂ ಕಾಲಾನುಕಾಲಕ್ಕೆ ಡ್ರಗ್ ಟೆಸ್ಟ್ ಮಾಡಿಸುತ್ತಾರೆ. ವಿಶ್ವಾಸ, ನಿಷ್ಠೆ, ನಂಬಿಕೆ ಗಳೆಲ್ಲ ನಲುಗಿ ಹೋಗಿರುವ ಇಂದಿನ ಕಮರ್ಷಿಯಲ್ ಜಗತ್ತಿನಲ್ಲಿ ಯಾರು ಯಾವ ಮುಖ ವಾಡ ಧರಿಸಿ ಸುಭಗತನ ತೋರಿಸುತ್ತ ಒಳಗೆ ಎಷ್ಟು ಕೆಟ್ಟವರಾಗಿರುತ್ತಾರೋ ಬಲ್ಲವರಾರು? ಅದಕ್ಕಾಗಿ ಎಷ್ಟೆಲ್ಲ ಪರೀಕ್ಷೆಗಳು, ತಪಾಸಣೆಗಳು!

ಒಬ್ಬ ವ್ಯಕ್ತಿ ಮಾದಕದ್ರವ್ಯ ಸೇವಿಸಿದ್ದಾನೆಯೇ ಇಲ್ಲವೇ ಎಂದು ಆತನ ಮೂತ್ರಪರೀಕ್ಷೆ ಅಥವಾ ರಕ್ತಪರೀಕ್ಷೆಯ ಮೂಲಕ ಕಂಡುಕೊಳ್ಳಲಾಗುತ್ತದೆ. ಈ ಪರೀಕ್ಷೆಗಳು ಬಹುತೇಕ ವಾಗಿ ನಿಖರ ಮಾಹಿತಿ ಕೊಡುತ್ತವೆಯಾದರೂ ಕೆಲವೊಮ್ಮೆ ಮುಜುಗರ ತರುವಂಥ ಫಲಿತಾಂಶಗಳು, ಎಡವಟ್ಟುಗಳು ಆಗುವುದಿದೆ. ಗಸಗಸೆ ಉದುರಿಸಿದ ಬೇಗಲ್ ತಿಂದು ಮಾರನೆಯ ದಿನ ರಕ್ತಪರೀಕ್ಷೆ/ ಮೂತ್ರಪರೀಕ್ಷೆ ಮಾಡಿಸಿದರೆ ಅಮಲಿನ ಅಂಶ ಕಂಡು ಬಂದು ಟೆಸ್ಟ್ ಪಾಸಿಟಿವ್ ಎನಿಸಿಕೊಳ್ಳುವುದು ಅಂಥ ಎಡವಟ್ಟುಗಳಲ್ಲೊಂದು!

ಅತಿಯಾಗಿ ಸೇವಿಸಿದರೆ ಗಸಗಸೆ ನಿಜವಾಗಿಯೂ ಒಂದು ಮಾದಕ ಪದಾರ್ಥವೇ. ಗಸಗಸೆ ಬೀಜದಲ್ಲಿರುವ ಮೊರ್ಫಿನ್ ಮತ್ತು ಕೊಡೈನ್ ಅಂಶಗಳು (ಇವುಗಳನ್ನು Opiates ಎನ್ನು ತ್ತಾರೆ) ಮೂತ್ರದಲ್ಲಿ ಕರಗಿರುತ್ತವೆ. ಗಸಗಸೆ ಹಾಕಿರುವ ಒಂದು ಬೇಗಲ್ ತಿಂದರೂ ಸಾಕು, ಮುಂದಿನ 48 ಗಂಟೆಗಳೊಳಗೆ ಮೂತ್ರಪರೀಕ್ಷೆಗೊಳಗಾದರೆ ವ್ಯತಿರಿಕ್ತ ಫಲಿತಾಂಶವನ್ನು ತೋರಿಸಬಹುದು.

ಈಗ್ಗೆ ಹತ್ತಿಪ್ಪತ್ತು ವರ್ಷಗಳ ಹಿಂದೆ ಅಮೆರಿಕದ ಸೈಂಟ್ ಲೂಯಿಸ್ ನಗರದಲ್ಲಿ ಒಬ್ಬ ಪೊಲೀಸ್ ಆಫೀಸರ್‌ಗೆ ಹಾಗೇ ಆಯ್ತಂತೆ. ಯಾವೊಂದು ಕೆಟ್ಟ ಚಟಗಳಿಲ್ಲದೆ ಸೀದಾಸಾದಾ ಮನುಷ್ಯನಾಗಿದ್ದ ಆತ ಇಲಾಖೆಯ ಸರ್‌ಪ್ರೈಸ್ ಡ್ರಗ್‌ಟೆಸ್ಟ್‌ಗೆ ಒಳಗಾದ. ಅವನ ದುರದೃಷ್ಟ ವೋ ಎಂಬಂತೆ ಟೆಸ್ಟ್‌ಗೆ ಹಿಂದಿನ ದಿನವಷ್ಟೇ ಆತ ಮೂರ್ನಾಲ್ಕು ಗಸಗಸೆ ಬೇಗಲ್‌ಗಳನ್ನು ಚಪ್ಪರಿಸಿದ್ದನಂತೆ.

ಮೂತ್ರ ಪರೀಕ್ಷೆಯಾದಾಗ ಮೊರ್ಫಿನ್ ಅಂಶ ಕಂಡು ಬಂದುದರಿಂದ ಮಿಸ್ಟರ್ ಕ್ಲೀನ್ ಇಮೇಜ್‌ನ ಆ ಆಫೀಸರನನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಆಮೇಲೆ ಆತ ಸರಕಾರದ ಕ್ರಮದ ವಿರುದ್ಧ ವ್ಯಾಜ್ಯ ಹೂಡಿದನು. ಮೂತ್ರದಲ್ಲಿನ ಮೊರ್ಫಿನ್ ಅಂಶಕ್ಕೆ ಬೇಗಲ್‌ನಲ್ಲಿದ್ದ ಗಸಗಸೆ ಕಾರಣವೇ ಹೊರತು ಬೇರೆ ಮಾದಕದ್ರವ್ಯವನ್ನು ತಾನು ಸೇವಿಸಿರ ಲಿಲ್ಲವೆಂದು ಸಾಬೀತುಪಡಿಸಿದನು.

ಕೊನೆಗೂ ಆ ಕೇಸನ್ನು ಗೆದ್ದನು! ಕೆಲಸದಿಂದ ತೆಗೆದು ಹಾಕಿದ್ದ ಅವಧಿಯ ಸಂಬಳವನ್ನೂ ಕೊಟ್ಟು ಮತ್ತೆ ಅವನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಗಸಗಸೆಯಿದ್ದ ಬೇಗಲ್ಲೇ ಈ ಎಡವಟ್ಟಿಗೆ ಕಾರಣ ಎಂದು ಸಾಬೀತುಪಡಿಸಿದ್ದು ಇನ್ನೊಬ್ಬ ಆರೋಗ್ಯವಂತ ಪೊಲೀಸ್ ಆಫೀಸರನಿಗೆ ಅಂಥದೇ ಬೇಗಲ್ ತಿನ್ನಿಸಿ ಮಾರನೆಯ ದಿನ ಅವನ ಮೂತ್ರ ಪರೀಕ್ಷೆ ಮಾಡಿ ಮೊರ್ಫಿನ್ ಅಂಶ ಕಂಡುಕೊಳ್ಳುವುದರ ಮೂಲಕ. ಆಮೇಲೆ ನ್ಯೂಜೆರ್ಸಿ, ಫ್ಲೋರಿಡಾ ಮುಂತಾಗಿ ಬೇರೆಡೆಗಳಲ್ಲೂ ಇದೇ ರೀತಿಯ ಎಡವಟ್ಟು ಸಂಭವಿಸಿದ್ದು ಲಕ್ಷಗಟ್ಟಲೆ ಡಾಲರ್‌ಗಳ ಕೇಸುಗಳನ್ನು ಜಯಿಸಿಕೊಂಡಿದ್ದಾರೆ ಬೇಗಲ್ ಭಕ್ಷಕ ಆರಕ್ಷಕರು!

ಗಸಗಸೆ ಬೇಗಲ್‌ನ ಈ ಅವಾಂತರದ ನಂತರ ಈಗ ಅಮೆರಿಕದಲ್ಲಿ ಹೆಚ್ಚಿನ ಸಂಸ್ಥಾನ ಗಳಲ್ಲೆಲ್ಲ ಜೈಲುನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗಿದೆ. ಅದರ ಪ್ರಕಾರ ಜೈಲಿನಲ್ಲಿ ರುವ ಯಾವುದೇ ಕೈದಿಯು ಗಸಗಸೆಯಿರುವ ಆಹಾರಪದಾರ್ಥವನ್ನು ಸೇವಿಸುವಂತಿಲ್ಲ.

ಏಕೆಂದರೆ ಆ ನಿಯಮವಿಲ್ಲದಿದ್ದರೆ, ನಿಜವಾಗಿ ಅಫೀಮು ಸೇವಿಸಿ ಮಜಾ ಉಡಾಯಿಸಿ ದವರೂ ಮೂತ್ರಪರೀಕ್ಷೆಯಲ್ಲಿ ಸಿಕ್ಕಿಬಿದ್ದಾಗ, “ಇಲ್ಲಪ್ಪ ನಾನು ನಿನ್ನೆ ಒಂದೆರಡು ಬೇಗಲ್ಸ್ ತಿಂದಿದ್ದೆ, ಹಾಗಾಗಿ ಟೆಸ್ಟ್ ಪಾಸಿಟಿವ್ ಆಗಿರಬಹುದು" ಎನ್ನುವ ಸಂಭವವಿರುತ್ತದೆಯಲ್ಲ! ಜೈಲಿನ ಆವರಣದಲ್ಲಿ Poppy seeds prohibited ಎಂದ ಮೇಲೆ ಮುಗಿಯಿತು.

ಹಾಗಾಗಿ, ಅಮೆರಿಕದಲ್ಲಿ ‘ಮಾವನ ಮನೆ’ಗೆ ರಾಯರು ಬಂದರೆ ಅವರಿಗೆ ಬೆಳ್ಳಿಯ ಬಟ್ಟಲ ಗಸಗಸೆ ಪಾಯಸದ ಆತಿಥ್ಯ ಸಿಗುವುದಿಲ್ಲ; ಬಾಗಿಲನು ತೆರೆದು ಬೇಗಲನು ಕೊಡು ಎಂದು ಜೈಲರ್‌ನಲ್ಲಿ ಮೊರೆಯಿಟ್ಟರೆ ಅದೂ ಸಿಗುವುದಿಲ್ಲ! ಪರಂತು ನಾವು ಶ್ರೀಸಾಮಾನ್ಯ ಅಮೆರಿಕನ್ನಡಿಗರು ಈ ಕನ್ನಡಮಾಸದಲ್ಲಿ ಬೇಗಲ್ ಅಂಗಡಿಗೆ ಹೋಗಿ ‘ಸಿರಿಗನ್ನಡಂ ಬೇಗಲ್‌ಗೆ!’ ಎಂದು ನಗುಮೊಗದಿಂದ ಹೇಳಿದರೆ (ಘೋಷಣೆ ಕೂಗಿದರೆ ಅಲ್ಲ) ಬೇಗಲ್ ಸಿಗಲೂಬಹುದು, ಅಂಗಡಿಯಾತ ಒಮ್ಮೆ ಆಪಾದಮಸ್ತಕ ನಮ್ಮನ್ನು ನೋಡಿದ ಮೇಲೆ!

ಶ್ರೀವತ್ಸ ಜೋಶಿ

View all posts by this author