Srivathsa Joshi Column: ಕೊಟ್ಟಿದ್ದು ಚಿಕ್ಕ ಉಡುಗೊರೆ; ಪ್ರಭಾವಕ್ಕೊಳಗಾಗಿದ್ದು ಇಡೀ ಪ್ರಪಂಚ !

ಅದು ಕೃಷ್ಣನು ಸುದಾಮನ ಪ್ರೀತಿಗೆ ಪ್ರತಿಯಾಗಿ ಕೊಟ್ಟ ಉಡುಗೊರೆ. ಉಡುಗೊರೆ ಕೊಡು-ಪಡೆವುದು ಯುಗಯುಗಗಳಿಂದ ಬಂದಿರುವ ಸುಂದರ ಸಂಪ್ರದಾಯ. ಭಾರತೀಯ ಸಂಸ್ಕೃತಿ ಯಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಇರುವಂಥದ್ದೇ. ಈಗೀಗ ಮನುಷ್ಯಸಂಬಂಧಗಳು ಶಿಥಿಲಗೊಳ್ಳು ತ್ತಿವೆ, ಪ್ರತಿಯೊಂದನ್ನೂ ವಾಣಿಜ್ಯದೃಷ್ಟಿಯಿಂದ ನೋಡಲಾಗುತ್ತಿದೆ, ಉಡುಗೊರೆಯು ಪೊಳ್ಳು ಪ್ರತಿಷ್ಠೆಯ ಪ್ರತೀಕವಾಗುತ್ತಿದೆ

srivathsa-joshi column
Profile Ashok Nayak January 19, 2025

Source : Vishwavani Daily News Paper

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅವಲಕ್ಕಿ, ಅದೂ ಬರೀ ಒಂದು ಮುಷ್ಟಿಯಷ್ಟು, ಸುದಾಮನು ಕೃಷ್ಣನಿಗೆ ಪ್ರೀತಿಯಿಂದ ಕೊಟ್ಟ ಉಡುಗೊರೆ. ಕೃಷ್ಣನಿಂದ ಬೀಳ್ಕೊಂಡು ಮನೆಗೆ ಹಿಂದಿರುಗಿ ನೋಡುತ್ತಾನೆ, ಸುದಾ ಮನ ಬಡ ಗುಡಿಸಲಿನ ಜಾಗದಲ್ಲಿ ಭವ್ಯವಾದ ಅರಮನೆ ತಲೆಯೆತ್ತಿದೆ!

ಅದು ಕೃಷ್ಣನು ಸುದಾಮನ ಪ್ರೀತಿಗೆ ಪ್ರತಿಯಾಗಿ ಕೊಟ್ಟ ಉಡುಗೊರೆ. ಉಡುಗೊರೆ ಕೊಡು- ಪಡೆವುದು ಯುಗಯುಗಗಳಿಂದ ಬಂದಿರುವ ಸುಂದರ ಸಂಪ್ರದಾಯ. ಭಾರತೀಯ ಸಂಸ್ಕೃತಿಯಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಇರುವಂಥದ್ದೇ. ಈಗೀಗ ಮನುಷ್ಯಸಂಬಂಧಗಳು ಶಿಥಿಲಗೊಳ್ಳುತ್ತಿವೆ, ಪ್ರತಿಯೊಂದನ್ನೂ ವಾಣಿಜ್ಯದೃಷ್ಟಿಯಿಂದ ನೋಡಲಾಗುತ್ತಿದೆ, ಉಡುಗೊರೆಯು ಪೊಳ್ಳುಪ್ರತಿಷ್ಠೆಯ ಪ್ರತೀಕವಾಗುತ್ತಿದೆ, ನಿರೀಕ್ಷೆ-ಅಪೇಕ್ಷೆಗಳು ವಿಪರೀತ ವಾಗಿವೆ, ಉಡುಗೊರೆಗಳೇ ಮತ್ಸರ-ಮನಸ್ತಾಪಗಳಿಗೂ ಕಾರಣವಾಗುತ್ತವೆ, ಬೇಡಾದ ವಸ್ತು

ಗಳನ್ನು ಯಾಕಾದ್ರೂ ಕೊಡ್ತಾರಪ್ಪ ಎಂದು ವಾಕರಿಕೆ ಬರುವುದೂ ಇದೆ... ಅಂತೆಲ್ಲ ಉಡುಗೊರೆಗಳ ಬಗ್ಗೆ ನೇತ್ಯಾತ್ಮಕ ವಾದಗಳನ್ನೂ ಮಂಡಿಸಬಹುದು. ಆದರೂ ಒಟ್ಟಾರೆ ಯಾಗಿ ಉಡುಗೊರೆಯೆಂದರೆ ಅಕ್ಕರೆ-ಆಪ್ತತೆ ವ್ಯಕ್ತಗೊಳ್ಳುವ ಚಂದದ ರೀತಿ. ಬಂಧವನ್ನು ಬಂಧುರಗೊಳಿಸುವ ನವಿರು ತಂತು. ವೈಜ್ಞಾನಿಕವಾಗಿ ನೋಡಿದರೆ, ಅದೊಂದು ಭೌತಿಕ ವಸ್ತುವೇ ಆಗಿದ್ದರೂ ಆ ಪ್ರಕ್ರಿಯೆಯ ಹಿಂದಿರುವ ಮಾನಸಿಕ ಒಳಿತುಗಳು ಅನೇಕ.

ಉಡುಗೊರೆ ಕೊಡುವ ಮತ್ತು ಪಡೆವ ವ್ಯಕ್ತಿಗಳಿಬ್ಬರಿಗೂ ಆಕ್ಸಿಟಾಸಿನ್ ಅಂತಃಸ್ರಾವದ ಮಟ್ಟ ಒಂದೊಮ್ಮೆಗೆ ಏರುವುದರಿಂದ ತೃಪ್ತಿ-ಖುಷಿ-ಧನ್ಯತೆ ಉಕ್ಕಿಬಂದ ಅನುಭೂತಿ. ಆದ್ದರಿಂದಲೇ ಹಬ್ಬಗಳು, ಸಮಾರಂಭಗಳು, ವಿಶೇಷ ಸಂದರ್ಭಗಳು ಉಡುಗೊರೆ ವಿನಿಮ ಯ ವಿಲ್ಲದೆ ಅಪೂರ್ಣ. ‘ಆಶೀರ್ವಾದವೇ ಉಡುಗೊರೆ’ ಅಂತಾದರೂ ಆಗಲೇಬೇಕು.

ಉಡುಗೊರೆಯು, ಕೊಡುವವರ ಮತ್ತು ಪಡೆಯುವವರ ಖುಷಿಗೆ ಕಾರಣವಾಗುವುದಂತೂ ಹೌದೇಹೌದು, ಆದರೆ ಸಿಂಪಲ್ ಉಡುಗೊರೆಯೊಂದು ಬರೀ ಆ ಇಬ್ಬರು ವ್ಯಕ್ತಿಗಳಿಗಷ್ಟೇ ಅಲ್ಲ, ಅದಕ್ಕಿಂತ ವ್ಯಾಪಕವಾಗಿ, ಕೆಲವೊಮ್ಮೆ ಇಡೀ ಪ್ರಪಂಚಕ್ಕೇ ಏನೋ ಒಂದು ಒಳ್ಳೆಯ ದನ್ನು ಮಾಡಿರುತ್ತದೆ. ಉಡುಗೊರೆ ಕೊಡುವವರಾಗಲಿ ಪಡೆದವರಾಗಲಿ ಆ ಕ್ಷಣದಲ್ಲಿ ಊಹಿಸಿರಲಾರದ ಮಹತ್ತ್ವ ಆ ಉಡುಗೊರೆಗೆ ಬಂದಿರುತ್ತದೆ. ಚರಿತ್ರೆಯುದ್ದಕ್ಕೂ ನಮಗಿದರ ನಿದರ್ಶನಗಳು ಸಿಗುತ್ತವೆ.

ಅಂಥ ಕೆಲವು ವಿಶೇಷ ಉಡುಗೊರೆಗಳ ವ್ಯಾಖ್ಯಾನ ಇಂದಿನ ತೋರಣದ ಹೂರಣ. ಕೆಲವ ದರ ವ್ಯಾಪ್ತಿ ಅಮೆರಿಕಕ್ಕಷ್ಟೇ ಸಂಗತ; ಮತ್ತೆ ಕೆಲವು ವಿಶ್ವವ್ಯಾಪ್ತಿಯವು, ವಿಶ್ವಖ್ಯಾತಿ ಯವು. ಒಕ್ಟಾವಿಯಾ ಇ. ಬಟ್ಲರ್ 1947ರಲ್ಲಿ ಅಮೆರಿಕದ ಲಾಸ್ಏಂಜಲೀಸ್ ಬಳಿಯ ಪ್ಯಾಸಡಿನಾ ನಗರದಲ್ಲಿ- ಈಗ ಕಾಳ್ಗಿಚ್ಚಿನಿಂದ ಉರಿಯುತ್ತಿದೆಯಲ್ಲ ಅದೇ ಪ್ಯಾಸಡಿ ನಾದಲ್ಲಿ- ಹುಟ್ಟಿದ ಆಫ್ರಿಕನ್ ಅಮೆರಿಕನ್ ಮಹಿಳೆ. ಅಮೆರಿಕದ ಸಾಹಿತ್ಯಲೋಕದಲ್ಲಿ ಸೈನ್ಸ್ ಫಿಕ್ಷನ್ ಬರಹ ಗಾರರೆಲ್ಲ ಬಿಳಿಯ ಪುರುಷರೇ ಆಗಿದ್ದವೇಳೆ ಅವರಿಗೆ ಸಡ್ಡುಹೊಡೆದು ಅದ್ಭುತ ವಿಜ್ಞಾನ ಕೃತಿಗಳನ್ನು ಬರೆದ, ‘ಆಫ್ರೋ ಫ್ಯೂಚರಿಸಮ್’ ಎಂಬ ಹೊಸ ಸಾಹಿತ್ಯ‌ ಶೈಲಿಯನ್ನು ಆರಂಭಿಸಿದ ಖ್ಯಾತಿ ಈಕೆಯದು.

1995ರಲ್ಲಿ ಪ್ರತಿಷ್ಠಿತ ಮೆಕಾರ್ಥರ್ ಫಾಲೊ ಶಿಪ್ ಪಡೆದ ಪ್ರಪ್ರಥಮ ಸೈನ್ಸ್ ಫಿಕ್ಷನ್ ಲೇಖಕಿ ಯೆನಿಸಿದವಳು. ಹತ್ತು ವರ್ಷದ ಬಾಲಕಿಯಾಗಿದ್ದಾಗ ತನಗೊಂದು ಟೈಪ್‌ರೈಟರ್ ಬೇಕೆಂದು ಅಮ್ಮನಲ್ಲಿ ಕೇಳಿದ್ದಳಂತೆ. ಕೂಲಿನಾಲಿ ಮಾಡಿಕೊಂಡು ಬಡತನದಲ್ಲಿದ್ದ ಅಮ್ಮ ಅದಕ್ಕೆಲ್ಲಿ ಹಣ ಹೊಂದಿಸಿಯಾಳು? ಅಷ್ಟು ಚಿಕ್ಕ ಹುಡುಗಿಗೇಕೆ ಟೈಪ್‌ರೈಟರ್? ತಂದರೂ ಅದನ್ನೆಲ್ಲಿ ಉಪಯೋಗಿಸುವಳು? ಕಪಾಟಿನಲ್ಲಿ ಧೂಳು ತಿನ್ನುತ್ತ ಇರುವುದ

ಕ್ಕೇಕೆ ದುಡ್ಡು ದಂಡ? ಎಂದು ಅಮ್ಮನ ಕೆಲ ಸ್ನೇಹಿತೆಯರು ಕಿವಿಯೂದಿದ್ದರಂತೆ. ಆದರೂ ಕರುಣಾಮಯಿ ಅಮ್ಮ ಅದು ಹೇಗೋ ಹಣ ಉಳಿಸಿ ಒಂದು ಟೈಪ್‌ರೈಟರ್ ಕೊಂಡುತಂದು

ಮಗಳಿಗೆ ಉಡುಗೊರೆಯಾಗಿತ್ತಳು. ಡಿಸ್ಲೆಕ್ಸಿಯಾದಿಂದಾಗಿ ಕೈಬರಹ ಸಾಧ್ಯವಿರದಿದ್ದ, ಕ್ರಮ ಬದ್ಧ ಟೈಪಿಂಗ್ ಕಲಿಯದಿದ್ದ ಒಕ್ಟಾವಿಯಾ ಎರಡು ತೋರುಬೆರಳುಗಳಿಂದ ಕೀಲಿಗಳನ್ನು ಅದುಮುತ್ತ ಟೈಪಿಸತೊಡಗಿದಳು.

ಒಂದಾದ ಮೇಲೊಂದು ಸೈನ್ಸ್ ಫಿಕ್ಷನ್ ರಚಿಸಿದಳು. 2000ನೆಯ ಇಸವಿಯಲ್ಲಿ ಆಕೆಯ ‘ಪ್ಯಾರಬೆಲ್ ಆಫ್ ದ ಸೋವರ್’ ಕೃತಿಯು ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪಟ್ಟಿ ಯಲ್ಲಿ ಕಾಣಿಸಿಕೊಂಡಿತು!‌

ಅಮೆರಿಕದ ಪ್ರಖ್ಯಾತ ಜಾಝ್ ಕಲಾವಿದ ಲೂಯಿ ಆರ್ಮ್ ಸ್ಟ್ರಾಂಗ್ ಚಿಕ್ಕ ಹುಡುಗನಾಗಿ ದ್ದಾಗಿನ ಕಥೆಯೂ ಸ್ವಾರಸ್ಯಕರ. ಆತ ಕರ್ನೋಫ್‌ಸ್ಕಿ ಎಂಬ ಕುಟುಂಬಕ್ಕೆ ಕೆಲಸದ ಹುಡುಗನಾಗಿದ್ದ. ಆ ಕುಟುಂಬದ ಉದ್ಯಮದ ಬಗ್ಗೆ ಬೀದಿಪ್ರಚಾರ ಮಾಡುವುದು ಅವನ ಕೆಲಸ. ಬಾಯಿಂದ ಅರಚುವುದಕ್ಕಿಂತ ಆತ ಒಂದು ತಗಡಿನ ತುತ್ತೂರಿ ಮಾಡಿಕೊಂಡಿದ್ದ. ಹುಡುಗನಲ್ಲಿ ಸಂಗೀತದ ಅಭಿರುಚಿ ಇರುವುದನ್ನು ಕರ್ನೋಫ್‌ಸ್ಕಿ ಕುಟುಂಬ ಗಮನಿಸಿತು.

ಒಮ್ಮೆ ಗಿರವಿ ಅಂಗಡಿಯೊಂದರಲ್ಲಿ ಕಾರ್ನೆಟ್ ವಾದ್ಯ ಮಾರಾಟಕ್ಕಿರುವುದನ್ನು ಆರ್ಮ್‌ ಸ್ಟ್ರಾಂಗ್ ನೋಡಿದ. ಅದನ್ನು ಕೊಂಡುಕೊಳ್ಳುವ ಆಸೆ ಅವನಿಗಿತ್ತೆಂದು ಯಜಮಾನ ಮೊರಿಸ್ ಕರ್ನೋಫ್‌ಸ್ಕಿಗೂ ಗೊತ್ತಾಯ್ತು. ಒಡನೆಯೇ ಆತ 2 ಡಾಲರ್ ದುಡ್ಡನ್ನು ಆಮ್

ಸ್ಟ್ರಾಂಗ್‌ಗೆ ಕೊಟ್ಟು ನಿನ್ನಿಷ್ಟದ ವಾದ್ಯ ಕೊಂಡುಕೋ, ಅದು ನನ್ನಿಂದ ನಿನಗೊಂದು ಉಡುಗೊರೆ ಎಂದುಬಿಟ್ಟನು. ಆಮ್ ಸ್ಟ್ರಾಂಗ್ ಆ ಕಾರ್ನೆಟ್ ವಾದ್ಯ ಕೊಂಡುಕೊಂಡನು. ಅದು ಅವನ ಜಾಝ್ ಕಲಾತಪಸ್ಸಿನ ಮೂಲಸಾಧನವಾಯ್ತು. ಏಕಲವ್ಯನಂತೆ ಅಭ್ಯಾಸ ಮಾಡಿ ಬಹುದೊಡ್ಡ- ಅಮೆರಿಕದ ಜಾಝ್ ಪಿತಾಮಹ ಎನಿಸುವಂಥ - ಕಲಾವಿದನಾಗಿ ಬೆಳೆದನು. ಆತನ ಧ್ವನಿಮುದ್ರಣಗಳನ್ನು ಪ್ರಪಂಚದಾದ್ಯಂತ ಜಾಝ್ ರಸಿಕರು, ವಿದ್ಯಾರ್ಥಿ ಗಳು ಈಗಲೂ ಅಮೂಲ್ಯ ಆಸ್ತಿಯೆಂದು ಪರಿಗಣಿಸುತ್ತಾರೆ.

ರಾಕ್ -ಆಂಡ್-ರೋಲ್ ಸಂಗೀತದ ಅನಭಿಷಿಕ್ತ ದೊರೆ ಎನಿಸಿಕೊಂಡ ಎಲ್ವಿಸ್ ಪ್ರೆಸ್ಲೆಯೂ ಒಂದು ಸಾದಾ ಉಡುಗೊರೆಯಿಂದಲೇ ಉತ್ತೇಜಿತನಾದವನು. 11 ವರ್ಷದವನಿದ್ದಾಗ ಬರ್ತ್‌ಡೇ ಗಿಫ್ಟ್ ಒಂದೋ ಬೈಸಿಕಲ್ ಬೇಕು ಇಲ್ಲ ರೈಫಲ್ ಬೇಕು ಎಂದಿದ್ದನಂತೆ.‌ ಅವನಮ್ಮ ಅವೆರಡರ ಬದಲಿಗೆ ಏಳು ಡಾಲರ್ ಬೆಲೆಯ ಗಿಟಾರ್ ತಂದುಕೊಟ್ಟಳು. ಅದನ್ನು ಬಳಸಿಯೇ ಆತ ಸಂಗೀತ ಕಲಿತನು. ಮೊತ್ತಮೊದಲ ಹಾಡಿನ ಧ್ವನಿಮುದ್ರಣಕ್ಕೂ ಅದನ್ನೇ ಬಳಸಿದನು. ಆಮೇಲೆ ಅಪ್ರತಿಮ ಹಾಡುಗಾರನಾಗಿ, ಚಿತ್ರನಟನಾಗಿ, ಅಸಂಖ್ಯಾತ ಹುಡುಗಿಯರ ಕನಸಿನ ರಾಜಕುಮಾರನಾಗಿ ಖ್ಯಾತನಾದನು. 42 ವರ್ಷವಷ್ಟೇ ಬಾಳಿದ ನಾದರೂ ಎಲ್ವಿಸ್ ಪ್ರೆಸ್ಲೆಯ ಸಂಗೀತದ ಆಲ್ಬಮ್‌ಗಳು ಈಗಲೂ ಮಾರಾಟವಾಗುತ್ತವೆ. ಮರಣೋತ್ತರವಾಗಿಯೂ ಆತನಿಗೆ ಸ್ಟಾರ್‌ವಾಲ್ಯೂ ಇದೆ.

ಉಡುಗೊರೆಯಿಂದ ಉತ್ತೇಜನ ಪಡೆದ ಇನ್ನೊಂದು ಉದಾಹರಣೆ ಅಮೆರಿಕದ ಖ್ಯಾತ ಖಗೋಳವಿಜ್ಞಾನಿ ಕಾರ್ಲ್ ಸೇಗನ್. ಬಹುಶಃ ಆಲ್ಬರ್ಟ್ ಐನ್‌ಸ್ಟೀನ್‌ನ ಬಳಿಕ ಜಗತ್ತು ಕಂಡ ಅತಿಮೇಧಾವಿ ಖಗೋಳ ದಾರ್ಶನಿಕ ಎಂದು ಸೇಗನ್‌ನನ್ನು ಬಿಂಬಿಸಲಾಗಿತ್ತು. ಬರೀ ವಿಜ್ಞಾನಿಯಷ್ಟೇ ಆಗಿರದೆ ವಿಜ್ಞಾನ ಸಂಬಂಧಿ ಟಿವಿ ಕಾರ್ಯಕ್ರಮಗಳ ನಿರ್ಮಾಪಕನೂ, ಲೇಖಕನೂ ಆಗಿದ್ದರಿಂದ ಜನಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವ ಮಹತ್ತರ ಕೆಲಸ ಮಾಡಿದವನು ಕಾರ್ಲ್ ಸೇಗನ್.

ಆತನ ಟಿವಿ ಸರಣಿ ಕಾಸ್ಮೋಸ್, ಪುಲಿಟ್ಜರ್ ಪ್ರಶಸ್ತಿವಿಜೇತ ಕೃತಿಗಳಾದ ಡ್ರಾಗನ್ಸ್ ಆಫ್ ಈಡನ್, ಪೇಲ್ ಬ್ಲೂ ಡಾಟ್ ಮುಂತಾದುವು ಸುಪ್ರಸಿದ್ಧ. 1939ರಲ್ಲಿ ಕಾರ್ಲ್ ಸೇಗನ್ ಆಗಿನ್ನೂ ನಾಲ್ಕು ವರ್ಷದ‌ ಹುಡುಗನಾಗಿದ್ದಾಗ ತಂದೆತಾಯಿ ಅವನನ್ನು ನ್ಯೂಯಾರ್ಕ್‌ಗೆ

ವರ್ಲ್ಡ್ ಫಾರ್ ವಸ್ತುಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದರಂತೆ. ಅವರು ಶ್ರೀಮಂತ ರೇನಲ್ಲ, ಆದರೂ ವಿಜ್ಞಾನಿಯಾಗುತ್ತೇನೆಂದು ಕನಸಿದ್ದ ಮಗನ ಆಸೆಯನ್ನು ಪೋಷಿಸಿ ದರು. ವಸ್ತುಪ್ರದರ್ಶನದಲ್ಲಿ ಕೆಮೆಸ್ಟ್ರಿ ಸೆಟ್ ಎಂಬ ವಿಜ್ಞಾನ ಆಟಿಕೆಯನ್ನು ಮಗನಿಗೆ ಉಡುಗೊರೆ ಕೊಟ್ಟರು. ವಿಜ್ಞಾನಸಾಗರದಲ್ಲಿ ಧುಮುಕಲಿಕ್ಕೆ ಅದು ಹಾರುಹಲಗೆ ಆಯ್ತು ಕಾರ್ಲ್ ಸೇಗನ್‌ಗೆ.

ವಿಜ್ಞಾನ ಆಟಿಕೆಗಳ ವಿಷಯ ಬಂದಾಗ ಸ್ಟೀವ್ ಜಾಬ್ಸ್‌ನ ಉದಾಹರಣೆಯೂ ಉಲ್ಲೇಖಾ ರ್ಹವೇ. ಆಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಚಿಕ್ಕ ಹುಡುಗನಾಗಿದ್ದಾಗ ಆತನ

ಹೆತ್ತವರು ಕೊಡಿಸುತ್ತಿದ್ದ ಆಟಿಕೆ-ಉಡುಗೊರೆಗಳು ತಂತ್ರಜ್ಞಾನದಲ್ಲಿ ಆಸಕ್ತಿ ಕೆರಳಿಸು ವಂಥವೇ ಆಗಿದ್ದುವು. ಅದಕ್ಕಿಂತ ಮುಖ್ಯ ವಾಗಿ, ಅವರ ಪಕ್ಕದಮನೆಯಲ್ಲಿ ವಾಸಿಸುತ್ತಿದ್ದ ಲ್ಯಾರಿ ಲ್ಯಾಂಗ್ ಎಂಬೊಬ್ಬ ಎಂಜಿನಿಯರ್ ಆಗ ಹ್ಯೂಲೆಟ್-ಪಕಾರ್ಡ್ ಕಂಪನಿಗೆ ಕೆಲಸ ಮಾಡುತ್ತಿದ್ದವನು ಸ್ಟೀವ್‌ನ ಅಚ್ಚುಮೆಚ್ಚಿನ ಅಂಕಲ್ ಆಗಿದ್ದನಂತೆ.

ಆತ ಸ್ಟೀವ್‌ಗೆ ಹೀತ್‌ಕಿಟ್ ಎಂಬ ಹೆಸರಿನ ಇಲೆಕ್ಟ್ರಾನಿಕ್ ಕಿಟ್ ಗಳನ್ನು ಉಚಿತವಾಗಿ ಒದಗಿ ಸುತ್ತಿದ್ದನು. ಅದರಿಂದ ರೇಡಿಯೊ, ಟಿವಿ ರಿಸೀವರ್‌ಗಳನ್ನೆಲ್ಲ ಕಟ್ಟಿಕೊಳ್ಳುವುದು ಸಾಧ್ಯ ವಾಗುತ್ತಿತ್ತು. ಕಷ್ಟವೇನಿಲ್ಲ, ಪ್ರಯತ್ನಪಟ್ಟರೆ ನಾವೂ ತಯಾರಿಸಬಹುದು ಎಂದೆನ್ನುವ ಆತ್ಮವಿಶ್ವಾಸ ಸ್ಟೀವ್‌ನಲ್ಲಿ ಅಂಕುರಿಸಿತು. ಒಮ್ಮೆ ಧೈರ್ಯದಿಂದ ಹ್ಯೂಲೆಟ್-ಪಕಾರ್ಡ್ ಕಂಪನಿಯ ಸಂಸ್ಥಾಪಕ ಬಿಲ್ ಹ್ಯೂಲೆಟ್ ನಿಗೇ ಕರೆ ಮಾಡಿ ತಾನೊಬ್ಬ ಹೈಸ್ಕೂಲ್ ಹುಡುಗನೆಂದೂ, ಫ್ರೀಕ್ವೆನ್ಸಿ ಕೌಂಟರ್ ಎಂಬ ಉಪಕರಣ ತಯಾರಿಸಲಿಕ್ಕೆ ಬಿಡಿಭಾಗ ಗಳಿದ್ದರೆ ಬೇಕಿತ್ತೆಂದೂ ಕೇಳಿದನಂತೆ!

ಸ್ಟೀವ್‌ನ ಆಸಕ್ತಿಯನ್ನು ಮೆಚ್ಚಿದ ಬಿಲ್ ಹ್ಯೂಲೆಟ್, ಬಿಡಿಭಾಗಗಳನ್ನು ಒದಗಿಸಿದನಷ್ಟೇ ಅಲ್ಲ, ಬೇಸಗೆ ಯಲ್ಲಿ ಕಲಿಕೆಲಸ (ಇಂಟರ್ನ್‌ಶಿಪ್) ಮಾಡಲಿಕ್ಕೂ ಅವಕಾಶವಿತ್ತನು. ಈಗ ಆಪಲ್ ಕಂಪನಿಯ ಭವ್ಯ ಇತಿಹಾಸ ಏಳಿಗೆ... ಎಲ್ಲ ನಮ್ಮ ಕಣ್ಣೆದುರಿಗಿದೆ. ಈ ಕಥಾನಕ ಮತ್ತೂ ಸ್ವಾರಸ್ಯದ್ದು. ಇದರಲ್ಲಿ ಉಡುಗೊರೆ ಪಡೆದವನಲ್ಲ, ಉಡುಗೊರೆ ಕೊಟ್ಟವನೇ ಉತ್ಸಾಹ ವರ್ಧಿಸಿಕೊಂಡು ಜಗದ್ವಿಖ್ಯಾತನಾದದ್ದು!

ಲಂಡನ್‌ನಿವಾಸಿ ಇಂಗ್ಲಿಷ್ ಲೇಖಕ ಆಲ್ಲನ್ ಅಲೆಗ್ಸಾಂಡರ್ ಮಿಲ್ನ್, 21 ಆಗಸ್ಟ್ 1921 ರಂದು ತನ್ನ ಒಂದು ವರ್ಷದ ಮಗ ಕ್ರಿಸ್ಟೋಫರ್ ರಾಬಿನ್ ಮಿಲ್ನ್‌ಗೆ ಕರಡಿಗೊಂಬೆ (ಟೆಡ್ಡಿ ಬೇರ್)ಯನ್ನು ಹುಟ್ಟುಹಬ್ಬದ ಉಡುಗೊರೆಯೆಂದು ತಂದುಕೊಟ್ಟನು. ಅದಕ್ಕೆ ಎಡ್ವರ್ಡ್ ಬೇರ್ ಎಂದು ಹೆಸರನ್ನೂ ಇಟ್ಟಿದ್ದನು. ಮಗನಿಗೆ ಆಟಿಕೆ ಮೆಚ್ಚುಗೆಯಾಯ್ತು, ಅದಕ್ಕಿಂತ ಹೆಚ್ಚಾಗಿ ತಂದೆಗೆ ಅದು ಹೊಸದೊಂದು ಕಲ್ಪನೆಯನ್ನು ತಂದುಕೊಟ್ಟಿತು. ಆ ಕಲ್ಪನೆ ಗರಿಗೆದರಿ ಹೊರಬಂದಿದ್ದೇ ವಿನ್ನಿ-ದ-ಪೂಹ್ ಎಂಬ ಸುಪ್ರಸಿದ್ಧ ಕಾಮಿಕ್ ಕಥಾಸರಣಿ. ಪ್ರಪಂಚದಾದ್ಯಂತ ಚಿಕ್ಕಮಕ್ಕಳನ್ನು ಮುದಗೊಳಿಸಿದ ಕರಡಿ ಕಥೆಗಳು.

ವಿನ್ನಿ ಎಂಬ ಹೆಸರು ಲಂಡನ್‌ನ ಪ್ರಾಣಿಸಂಗ್ರಹಾಲಯ ದಲ್ಲಿದ್ದ ವಿನ್ನಿಪೆಗ್ ಹೆಸರಿನ ಕಪ್ಪುಕರಡಿಯಿಂದ; ಪೂಹ್ ಎಂದು ಮಗ ಕ್ರಿಸ್ಟೋಫರ್ ಒಂದು ಮುದ್ದಿನ ಬಾತುಕೋಳಿ ಯನ್ನು ಕರೆಯುತ್ತಿದ್ದ ರೀತಿಯಿಂದ. ಅದೆರಡೂ ಸೇರಿ ವಿನ್ನಿ-ದ-ಪೂಹ್ ಆಯ್ತು. ಅದನ್ನು ಅತಿಹೆಚ್ಚು ಮೌಲ್ಯದ ಫಿಕ್ಷನಲ್ ಕ್ಯಾರೆಕ್ಟರ್ ಎಂದು ಫೋರ್ಬ್ಸ್ ಮ್ಯಾಗಜಿನ್ 2002ರಲ್ಲಿ ಘೋಷಿಸಿತು.

ಆಗತಾನೆ ವಿನ್ನಿ-ದ-ಪೂಹ್ ವಾರ್ಷಿಕ ವಹಿವಾಟು 600 ಕೋಟಿ ಡಾಲರ್‌ಗಳಷ್ಟು ಆಗಿತ್ತು. ಹಾಲಿವುಡ್‌ನ ವಾಕ್ ಆಫ್ ಫೋಮ್ ಓಣಿಯಲ್ಲಿ ವಿನ್ನಿ-ದ-ಪೂಹ್‌ಗೂ ಸ್ವಂತ ನಕ್ಷತ್ರದ ಗೌರವ ಸಿಕ್ಕಿದೆ. ಮಕ್ಕಳನ್ನು ರಂಜಿಸುತ್ತಿರುವ ವಿನ್ನಿ-ದ-ಪೂಹ್‌ನ ಕಥೆ ಅದಾದರೆ, ಮಕ್ಕಳು-ದೊಡ್ಡವರೆನ್ನದೆ ಎಲ್ಲರ ಮನಕಲುಕುವ ಆನ್ ಫ್ರಾಂಕ್‌ಳ ಡೈರಿಯ ಹಿಂದೆಯೂ ಉಡು ಗೊರೆಯದೇ ಪ್ರಧಾನ ಭೂಮಿಕೆಯಿರುವುದು. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ವಾಸಿಸುತ್ತಿದ್ದ ಹದಿಹರೆಯದ ಯಹೂದ್ಯ ಹುಡುಗಿ ಆನ್ ಫ್ರಾಂಕ್ 12 ಜೂನ್ 1942ರಂದು ತನ್ನ 13ನೆಯ ಹುಟ್ಟುಹಬ್ಬದಂದು ಹೆತ್ತವರಿಂದ ಒಂದು ಚಿಕ್ಕ ಡೈರಿಯನ್ನು ಉಡುಗೊರೆಯಾಗಿ ಪಡೆದಳು.

ನಿಜವಾಗಿ ಅದು ಡೈರಿಯೂ ಅಲ್ಲ, ಆಟೊಗ್ರಾಫ್ ಪುಸ್ತಕವನ್ನೇ ದಿನಾಂಕ ನಮೂದಿಸಿ ಡೈರಿಯಾಗಿಸಿದ್ದು. ಹುಟ್ಟು‌ಹಬ್ಬಕ್ಕೆ ಅದೇ ಉಡುಗೊರೆ ಆಗಬಹುದು ಎಂದು ಅವಳೇ ಆಯ್ಕೆ ಮಾಡಿದ್ದಂತೆ, ಮತ್ತು ಅದು ತನಗೆ ಸಿಕ್ಕಿದ ಅತ್ಯಮೂಲ್ಯ ಉಡುಗೊರೆ ಎಂದು ಅವಳಿಗೆ ತುಂಬ ಹೆಮ್ಮೆಯಿತ್ತಂತೆ. ಅದಾಗಿ ಒಂದು ತಿಂಗಳೊಳಗೇ ಆನ್ ಮತ್ತವಳ ಕುಟುಂಬಸ್ಥರನ್ನೆಲ್ಲ ನಾತ್ಸಿಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಒಂದು ಅಡಗುದಾಣದಲ್ಲಿ ಇಡಲಾಯ್ತು.

ಆಗಸ್ಟ್ 1944ರಲ್ಲಿ ಅದರ ಮೇಲೆ ದಾಳಿ ನಡೆಯಿತು. ಅದಾದ ಮೇಲೆ ಬರ್ಜನ್-ಬೆಲ್ಸನ್ ಸೆರೆಮನೆಯಲ್ಲಿ ಕೆಲದಿನ ವಾಸವಾಗಿದ್ದ ಆನ್ ಫ್ರಾಂಕ್ ಅಲ್ಲಿಯೇ ಟೈಫಸ್ ರೋಗಕ್ಕೆ ಬಲಿಯಾದಳು. ಎರಡು ವರ್ಷ ಕಾಲ ಪ್ರತಿದಿನದ ದಾರುಣ ಅವಸ್ಥೆಯನ್ನು ಆನ್ ತನ್ನ ಡೈರಿಯಲ್ಲಿ ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದಳು. 1947ರಲ್ಲಿ ಅದು ‘ದ ಡೈರಿ ಆಫ್ ಎ ಯಂಗ್ ಗರ್ಲ್’ ಎಂಬ ಹೆಸರಿನಲ್ಲಿ‌ ಪ್ರಕಟವಾಯಿತು.

ಜಗತ್ತಿನ 67 ಭಾಷೆಗಳಲ್ಲಿ ಒಟ್ಟು ಸುಮಾರು 3 ಕೋಟಿ ಪ್ರತಿಗಳು ಮಾರಾಟವಾದವು. ಈ ಪುಸ್ತಕವು ಹೊಲೊಕಾಸ್ಟ್ ನರಕಯಾತನೆಯ ಬಗೆಗಿನ ಅತ್ಯಮೂಲ್ಯ ದಾಖಲೆಯೆನಿಸಿತು. ಅಮೆರಿಕಾಧ್ಯಕ್ಷ ಜಾನ್ ಎಫ್ ಕೆನಡಿಯಂತೂ ಆನ್ ಫ್ರಾಂಕ್‌ಳ‌ ಡೈರಿಯನ್ನು- ಸಂಕಟ ಸಮಯದಲ್ಲಿ ಮನುಷ್ಯನ ಘನತೆ-ಗೌರವ ಹೇಗೆ ಘಾಸಿಗೊಳ್ಳುತ್ತದೆಂದು ಇದರಷ್ಟು ಮಾರ್ಮಿಕವಾಗಿ ಮತ್ತೆಲ್ಲೂ ದಾಖಲಿಸಿಲ್ಲ ಎಂದು- ವಿಶೇಷ ಪದಗಳಿಂದ ಕೊಂಡಾಡಿ ದ್ದಾರೆ.

ಇವಿಷ್ಟು ವ್ಯಕ್ತಿ-ವ್ಯಕ್ತಿ ನಡುವಿನ ಉಡುಗೊರೆಗಳಾದರೆ ರಾಷ್ಟ್ರ-ರಾಷ್ಟ್ರಗಳ ನಡುವಿನ ಉಡುಗೊರೆಗಳ ಪೈಕಿ ವಿಶೇಷ ವಾದವುಗಳನ್ನೂ ಇಲ್ಲಿ ನೆನಪಿಸಿಕೊಳ್ಳಲೇಬೇಕು. ಮೊದಲನೆ

ಯದು, ನ್ಯೂಯಾರ್ಕ್‌ನಲ್ಲಿ ಪ್ರವಾಸಿಗರನ್ನು ಸ್ವಾಗತಿಸುವ, ಅಮೆರಿಕದ ಹೆಗ್ಗುರುತು ಎನಿಸಿ ಕೊಂಡಿರುವ ಸ್ಟಾಚ್ಯೂ ಆಫ್‌ ಲಿಬರ್ಟಿ. ಇದು ಅಮೆರಿಕಕ್ಕೆ ಫ್ರಾನ್ಸ್ ದೇಶದ ಉಡುಗೊರೆ. ಫ್ರೆಂಚ್ ಕವಿ ಎದುಆರ್ ದ್ಲಬುಲೆ ಎಂಬಾತ 1865ರಲ್ಲಿ ಅಮೆರಿಕದ ಸ್ವಾತಂತ್ರ ಶತಮಾನೋ ತ್ಸವ ಹತ್ತಿರ ಬರುತ್ತಿದ್ದುದರಿಂದ ಮತ್ತು ಆಗಷ್ಟೇ ಅಮೆರಿಕದಲ್ಲಿ ಗುಲಾಮಗಿರಿ ಪದ್ಧತಿ ನಿರ್ಮೂಲವಾಗಿದ್ದರಿಂದ ಇಂಥದೊಂದು ಉಡುಗೊರೆ ಕೊಡಬೇಕೆಂದು ಸಲಹೆಯಿತ್ತನು.

ಫ್ರೆದೆರಿಕ್ ಒಗೂಸ್ತ್ ಬಾರ್ತೋಲ್ದಿ ಇದರ ಪ್ರಧಾನ ಶಿಲ್ಪಿ. ಒಳಗಿನ ಸಂರಚನೆಯ ವಿನ್ಯಾ ಸಕ್ಕೆ ಅಲೆಕ್ಸೊಂದರ್ ಗುಸ್ತಾವ್ ಈ-ಲ್ ಎಂಬ ವಾಸ್ತುಶಿಲ್ಪಿಯ ನೆರವನ್ನೂ ಪಡೆಯಲಾ ಗಿತ್ತು. ಫ್ರಾನ್ಸ್‌ನಿಂದ ಅಮೆರಿಕಕ್ಕೆ ಹಡಗಿನಲ್ಲಿ ಬಿಡಿಭಾಗಗಳನ್ನೆಲ್ಲ ತಂದು ಇಲ್ಲಿ ಪ್ರತಿಮೆ ಯನ್ನು ಜೋಡಿಸಿ ನಿಲ್ಲಿಸಲಾಯ್ತು. 28 ಅಕ್ಟೋಬರ್ 1886ರಂದು ಅದು ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡಿತು.

ಎರಡನೆಯದು, ವಾಷಿಂಗ್ಟನ್ ಡಿಸಿ.ಯಲ್ಲಿ ಶ್ವೇತ ಭವನದ ಓವಲ್ ಆಫೀಸ್‌ನಲ್ಲಿರುವ ರೆಸೊಲ್ಯುಟ್ ಡೆಸ್ಕ್ ಎಂಬ ಹೆಸರಿನ ಮೇಜು. ಅದರ ಕಥೆಯೂ ರೋಮಾಂಚಕಾರಿಯಾಗಿದೆ.

1852ರಲ್ಲಿ ಇಂಗ್ಲೆಂಡ್‌ನಿಂದ ಉತ್ತರಧ್ರುವದ ಆರ್ಕ್ಟಿಕ್‌ಗೆ ಹೊರಟ ಜಾನ್ ಫ್ರಾಂಕ್ಲಿನ್‌ನ ನೌಕೆ ನಾಪತ್ತೆಯಾದಾಗ ಅದರ ಹುಡುಕಾಟಕ್ಕೆಂದು ರೆಸೊಲ್ಯೂಟ್ ಹೆಸರಿನ ಇನ್ನೊಂದು ಹಡಗು ಅಲ್ಲಿಗೆ ಧಾವಿಸಿತು. ದುರದೃಷ್ಟವಶಾತ್ ಆ ಹಡಗು ಹಿಮಗಡ್ಡೆಗಳೊಳಗೆ ಹೂತು ಹೋಗಿದ್ದರಿಂದ ನಾವಿಕರು ಅದನ್ನು ಅಲ್ಲಿಯೇ ತೊರೆದು ರಕ್ಷಣಾದೋಣಿಗಳಲ್ಲಿ ಹಿಂದಿರುಗಬೇಕಾಯ್ತು.

1855ರಲ್ಲಿ ಅಮೆರಿಕದ ಒಂದು ಹಡಗು ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ಪಾಳುಬಿದ್ದಿದ್ದ ರೆಸೊಲ್ಯೂಟ್ ಹಡಗನ್ನು ಕಂಡಿತು. ಅದನ್ನಲ್ಲಿಂದ ಹೊರತೆಗೆದು ಇಂಗ್ಲೆಂಡ್‌ನ ರಾಣಿ ವಿಕ್ಟೋರಿಯಾಳ ಸುಪರ್ದಿಗೆ ಮರಳಿಸಿತು. 1880ರಲ್ಲಿ ಆ ಹಡಗನ್ನು ಸಂಪೂರ್ಣ ಕಳಚ ಲಾಯಿತು.

ಅದರದೇ ಕೆಲವು ಮರಮಟ್ಟುಗಳಿಂದ ಒಳ್ಳೆಯದೊಂದು ಡೆಸ್ಕ್ ರಚಿಸಿ, ಉಪಕಾರ ಸ್ಮರಣೆ ಯೆಂದು ಅಮೆರಿಕಕ್ಕೆ ಕೃತಜ್ಞತಾಪೂರ್ವಕ ಕಳಿಸಲಾಯ್ತು. ಆಗಿನ ಅಮೆರಿಕಾಧ್ಯಕ್ಷ ರುದರ್ ಫೋರ್ಡ್ ಹೇಯ್ಸ್ ಅದನ್ನು ಸ್ವೀಕರಿಸಿ ಶ್ವೇತಭವನದಲ್ಲಿ ಸ್ಥಾಪಿಸಿದರು. ಆಮೇಲಿನ ಅಮೆರಿಕಾಧ್ಯಕ್ಷರೆಲ್ಲ ಅದೆಷ್ಟೋ ವಿಧೇಯಕಗಳನ್ನು, ಒಪ್ಪಂದಗಳನ್ನು ಆ ಮೇಜಿನ ಮೇಲೆ ಕಾಗದ ಪತ್ರಗಳನ್ನಿಟ್ಟು ಸಹಿ ಹಾಕಿದ್ದಾರೆ.

ಮೂರನೆಯದು ಕೂಡ ರಾಜಧಾನಿ ವಾಷಿಂಗ್ಟನ್ ಡಿಸಿ.ಗೆ ಸಂಬಂಧಿಸಿದ್ದೇ. ಇಲ್ಲಿ ಪ್ರತಿವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಅರಳುವ ಚೆರ್ರಿ ಬ್ಲಾಸಮ್ ಮರಗಳು. ಅವು ಅಮೆರಿಕಕ್ಕೆ ಜಪಾನ್ ದೇಶದ ಉಡುಗೊರೆ. 1885ರಲ್ಲಿ ಜಪಾನ್‌ಗೆ ಪ್ರವಾಸ ಹೋಗಿಬಂದ ಅಮೆರಿಕನ್ ಲೇಖಕಿ ಎಲಿಝಾ ಸ್ಕಿಡ್‌ಮೋರ್ ಅಲ್ಲಿನ ಸಾಕುರಾ ಮರಗಳ ಚೆಲುವನ್ನು ಕೊಂಡಾಡಿ ಬರೆದಳು. ಅಮೆರಿಕದ ರಾಜಧಾನಿಯಲ್ಲೂ ಅಂಥ ಮರಗಳಿದ್ದರೆ ಚೆನ್ನಾಗಿರುತ್ತದೆ ಎಂದು ಕೊಂಡಳು.

ಆಗಿನ ಪ್ರಥಮ ಮಹಿಳೆ ಹೆಲೆನ್ ಟಾಫ್ಟ್‌ ಳ ಮನವೊಲಿಸಿದಳು. ಅದೇ ಸಂದರ್ಭದಲ್ಲಿ ಜಪಾನ್‌ ನ ವಿಜ್ಞಾನಿ ಡಾ.ಜೊಕಿಚಿ ಟಕಮಿನ್ ಅಮೆರಿಕ ರಾಜಧಾನಿಗೆ ರಾಜತಾಂತ್ರಿಕ ಭೇಟಿಯಿತ್ತಾಗ ಪ್ರಥಮ ಮಹಿಳೆ ಹೆಲೆನ್ ಟಾ- ಆತನಲ್ಲಿ ಈ ವಿಚಾರ ಪ್ರಸ್ತಾವಿಸಿದಳು. ಆತ ಟೋಕಿಯೊಗೆ ಹಿಂದಿರುಗಿದ ಮೇಲೆ ಮೇಯರ್ ಯುಕ್ಯೊ ಒಜಾಕಿಯ ಬಳಿ ವಿಚಾರಿಸಿದನು. ಯುಕ್ಯೊನ ಖುಷಿಯ ಒಪ್ಪಿಗೆಯಂತೆ ಸಾಕುರಾ ಗಿಡಗಳಿದ್ದ ಹಡಗು ಜಪಾನ್‌ನಿಂದ ಅಮೆರಿಕಕ್ಕೆ ಹೊರಟಿತು.

ದುರದೃಷ್ಟವಶಾತ್ ಆ ಗಿಡಗಳು ಕೀಟಬಾಧೆಗೆ ಒಳಗಾದ್ದರಿಂದ ಸುಟ್ಟು ನಾಶಪಡಿಸ ಬೇಕಾಯ್ತು. 1912ರಲ್ಲಿ ಮತ್ತೊಮ್ಮೆ ಸುಮಾರು 3000ದಷ್ಟು ಸಾಕುರಾ ಗಿಡಗಳನ್ನು ಜಪಾನ್‌ ನಿಂದ ವಾಷಿಂಗ್ಟನ್ ಡಿಸಿ.ಗೆ ತರುವ ಪ್ರಯತ್ನ ಫಲಿಸಿತು. ಈಗ ಪ್ರತಿವರ್ಷ ಮಾರ್ಚ್-ಏಪ್ರಿಲ್ ಅವಽಯಲ್ಲಿ ಚೆರ್ರಿ ಬ್ಲಾಸಮ್ ಫೆಸ್ಟಿವಲ್ ಅಮೆರಿಕ ರಾಜಧಾನಿಯ ಪ್ರಮುಖ ಆಕರ್ಷಣೆ. ಪ್ರಕೃತಿಯ ಸುಂದರ ದೃಶ್ಯಾವಳಿ ನೋಡಲೆಂದು ದೇಶವಿದೇಶಗಳಿಂದ ಪ್ರವಾಸಿಗರು ಬಂದುಸೇರುವ ಜನಪ್ರಿಯ ಜಾತ್ರೆ. ಹೀಗಿದೆ ನೋಡಿ ಉಡುಗೊರೆಗಳ ಮಹಾತ್ಮೆ!

ಆದ್ದರಿಂದ, ಉಡುಗೊರೆ ಬಗ್ಗೆ ತಾತ್ಸಾರ ಸಲ್ಲದು. ಯಾವ ಉಡುಗೊರೆಯು ಯಾರಿಗೆ ಯಾವ ನಮೂನೆಯ ಉತ್ಸಾಹ- ಉತ್ತೇಜನ ತಂದು ವರ್ಲ್ಡ್ ಫೇಮಸ್ ಆಗಿಸುತ್ತದೆಯೋ ಯಾರಿಗೆ ಗೊತ್ತು!?

ಇದನ್ನೂ ಓದಿ: Srivathsa Joshi Column: ಕೊಟ್ಟಿದ್ದು ಚಿಕ್ಕ ಉಡುಗೊರೆ; ಪ್ರಭಾವಕ್ಕೊಳಗಾಗಿದ್ದು ಇಡೀ ಪ್ರಪಂಚ !

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ