ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಸುಭಾಷಿತ, ನಮ್ಮಲ್ಲಾಗಲಿ ಅಂತರ್ಗತ

ಅದು ಕಾಕತಾಳಿಯವೋ, ಭಾಷೆಯನ್ನು ಆಯ್ದುಕೊಂಡ ಮಕ್ಕಳ ಬುದ್ಧಿಮತ್ತೆಯೋ ಅಥವಾ ಆ ಕಾಲ ಘಟ್ಟದಲ್ಲಿನ ಸತ್ಯವೋ ಗೊತ್ತಿಲ್ಲ. ಆದರೆ ಇದರಿಂದಾಗಿ ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಮುಂದೊಂದು ದಿನ ಸಂಸ್ಕೃತವನ್ನು ಸ್ವಲ್ಪ ಮಟ್ಟಿಗಾದರೂ ಓದಬೇಕು ಎನ್ನುವ ಹಂಬಲ ಉಂಟಾಗಿತ್ತು

ವಿದೇಶವಾಸಿ

dhyapaa@gmail.com

ನಾವು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಕನ್ನಡ ಪ್ರಥಮ ಭಾಷೆಯಾಗಿತ್ತು. ನಾಲ್ಕನೆಯ ತರಗತಿಯವರೆಗೂ ಬೇರೆ ಯಾವ ಭಾಷೆಯ ಗಂಧ-ಗಾಳಿಯೂ ನಮಗೆ ತಿಳಿದಿರಲಿಲ್ಲ. ಐದನೇ ತರಗತಿಯಲ್ಲಿ ಮೊದಲ ಬಾರಿಗೆ ಇಂಗ್ಲಿಷ್ ಪಠ್ಯಪುಸ್ತಕ ನಮ್ಮ ಚೀಲದಲ್ಲಿ ಸೇರಿಕೊಂಡಿತ್ತು. ಪ್ರಾಥಮಿಕ ಶಾಲೆ ಮುಗಿಸುವ ಹೊತ್ತಿಗೆ, ತೃತೀಯ ಭಾಷೆಯಾಗಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಪ್ರಶ್ನೆ ನಮ್ಮೆಲ್ಲರ ಮನದಲ್ಲಿ ಸಾಮಾನ್ಯವಾಗಿ ಮೂಡುತ್ತಿತ್ತು.

ಆ ಕಾಲದಲ್ಲಿ ಈಗಿನಂತೆ ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್, ಮಲಯಾಳಂ, ತಮಿಳು ಇತ್ಯಾದಿ ಆಯ್ಕೆಗಳಿರಲಿಲ್ಲ. ನಮ್ಮ ಮುಂದೆ ಆಗ ಇದ್ದ ಆಯ್ಕೆ ಎರಡೇ. ಹಿಂದಿ ಅಥವಾ ಸಂಸ್ಕೃತ. ‘ಭಾರತ ದಲ್ಲಿ ಬಹುಜನರು ಬಳಸುವ ಭಾಷೆ ಹಿಂದಿ, ಅದನ್ನು ಆಯ್ದುಕೊಂಡರೆ ಒಳಿತು’ ಎನ್ನುವುದು ಕೆಲವರ ಸಲಹೆಯಾಗಿದ್ದರೆ, ‘ಸಂಸ್ಕೃತ ದೈವಭಾಷೆ. ಅಷ್ಟೇ ಅಲ್ಲ, ಸಂಸ್ಕೃತದಲ್ಲಿ ಹೆಚ್ಚಿನ ಅಂಕ ತೆಗೆದುಕೊಳ್ಳಬಹುದು’ ಎಂಬ ಮಾತಿತ್ತು.

ಅದಕ್ಕೆ ಪುರಾವೆ ಎಂಬಂತೆ ಸಂಸ್ಕೃತ ಆಯ್ದುಕೊಂಡ ಮಕ್ಕಳಲ್ಲಿ ಕೆಲವರು ಐವತ್ತಕ್ಕೆ ಐವತ್ತು ಅಂಕ ಪಡೆದದ್ದು ನಮ್ಮ ಕಣ್ಣೆದುರಿಗೆ ಕಾಣುತ್ತಿತ್ತು. ಹಿಂದಿಯಲ್ಲಿ, ಬುದ್ಧಿವಂತರೆಂದು ಕರೆಸಿಕೊಂಡ ಮಕ್ಕಳು ನಲವತ್ತೆಂಟು, ನಲವತ್ತೊಂಬತ್ತು ಅಂಕ ಪಡೆದರೆ, ಸಾಮಾನ್ಯದವರು ನಲವತ್ತರ ಆಸುಪಾಸಿನಲ್ಲಿಯೇ ಇರುತ್ತಿದ್ದರು.

ಅದು ಕಾಕತಾಳಿಯವೋ, ಭಾಷೆಯನ್ನು ಆಯ್ದುಕೊಂಡ ಮಕ್ಕಳ ಬುದ್ಧಿಮತ್ತೆಯೋ ಅಥವಾ ಆ ಕಾಲಘಟ್ಟದಲ್ಲಿನ ಸತ್ಯವೋ ಗೊತ್ತಿಲ್ಲ. ಆದರೆ ಇದರಿಂದಾಗಿ ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಮುಂದೊಂದು ದಿನ ಸಂಸ್ಕೃತವನ್ನು ಸ್ವಲ್ಪ ಮಟ್ಟಿಗಾದರೂ ಓದಬೇಕು ಎನ್ನುವ ಹಂಬಲ ಉಂಟಾಗಿತ್ತು. ಅದರಲ್ಲೂ ಅಲ್ಲಲ್ಲಿ ಕೇಳುತ್ತಿದ್ದ ಮಂತ್ರಘೋಷಗಳು, ನಾವು ನೋಡುತ್ತಿದ್ದ ಯಕ್ಷಗಾನ, ತಾಳಮದ್ದಲೆಯಲ್ಲಿ ಪಾತ್ರಧಾರಿಗಳು ಬಳಸುತ್ತಿದ್ದ ಸಂಸ್ಕೃತ ಪದಗಳು ನನ್ನನ್ನಂತೂ ಆಕರ್ಷಿಸಿದ್ದು ಸುಳ್ಳಲ್ಲ.

ಇದನ್ನೂ ಓದಿ: Kiran Upadhyay Column: ಬಿದಿರಿನಂತೆ ಬೆಳೆದ ಭವ್ಯ ಭಾರತ...

ಇದರಿಂದಾಗಿ ನಾನು ಐದನೇ ತರಗತಿಯಲ್ಲಿರುವಾಗಲೇ, ಸಂಸ್ಕೃತವನ್ನು ಓದಬೇಕು ಎಂಬ ಹಂಬಲ ನನ್ನಲ್ಲಿ ಉತ್ಕಟವಾಗಿತ್ತು.

ಇಂತಿರ್ಪ ದಿನಗಳಲ್ಲಿ, ಪಕ್ಕದಲ್ಲಿಯೇ ಇರುವ ಪ್ರೌಢಶಾಲೆಯೊಂದರಲ್ಲಿ ಆಸಕ್ತ ಮಕ್ಕಳಿಗಾಗಿ, ಶಾಲಾ ವೇಳೆ ಮುಗಿದ ನಂತರ ಸಂಸ್ಕೃತವನ್ನು ಹೇಳಿಕೊಡುತ್ತಿದ್ದರು. ಅದೇನು ಇಡೀ ವರ್ಷ ನಡೆಯುವ ತರಗತಿಯಾಗಿರಲಿಲ್ಲ. ದಿನಕ್ಕೆ ಒಂದು ಗಂಟೆಯಂತೆ ವಾರದಲ್ಲಿ ಮೂರು ದಿನ, ಅಂದರೆ ವಾರಕ್ಕೆ ಒಟ್ಟು ಮೂರು ತರಗತಿ. ಮೂರು ತಿಂಗಳ ನಂತರ ಅದಕ್ಕೊಂದು ಪರೀಕ್ಷೆ. ಅದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಹೀಗೆ ಪರೀಕ್ಷೆಗಳಾಗುತ್ತಿದ್ದವು.

ವರ್ಷಕ್ಕೆ ಒಂದೇ ಪರೀಕ್ಷೆ ಬರೆಯಬಹುದಾಗಿತ್ತು. ಪ್ರಥಮ ಮುಗಿದ ನಂತರ ದ್ವಿತೀಯ, ನಂತರ ತೃತೀಯ, ಹೀಗೆ. ಐದನೇ ತರಗತಿಯಲ್ಲಿರುವಾಗ ಇದಕ್ಕೆ ಸೇರಿಕೊಂಡ ನಾನು ಏಳನೇ ತರಗತಿ ಮುಗಿಸುವ ಹೊತ್ತಿಗೆ ತೃತೀಯ ಪರೀಕ್ಷೆಯನ್ನು ಪಾಸಾಗಿದ್ದೆ. ಹಾಗಾಗಿ ಪ್ರೌಢಶಾಲೆಗೆ ಹೋಗುವಾಗ ಮೂರನೆಯ ಭಾಷೆಯಾಗಿ ನಾನು ಸಂಸ್ಕೃತವನ್ನು ಆಯ್ದುಕೊಂಡಿದ್ದೆ.

ಮೊದಲೇ ಸ್ವಲ್ಪಮಟ್ಟಿನ ಸಂಸ್ಕೃತ ತಿಳಿದಿದ್ದ ಕಾರಣ ಪ್ರೌಢಶಾಲೆಯಲ್ಲಿ ಸಂಸ್ಕೃತ ನನಗೆ ‘ಕಬ್ಬಿಣದ ಕಡಲೆ’ ಎಂದು ಅನಿಸಿರಲಿಲ್ಲ. ನನ್ನಂತೆಯೇ ಇನ್ನೂ ಕೆಲವು ವಿದ್ಯಾರ್ಥಿಗಳು ಅದೇ ರೀತಿಯ ಪರೀಕ್ಷೆ ಮುಗಿಸಿ ಬಂದಿದ್ದರು. ಅವರನ್ನು ಹೊರತುಪಡಿಸಿದರೆ, ಉಳಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಿಂತ ಸಂಸ್ಕೃತ ’ನನ್ನ ತಲೆಗೆ ಬೇಗ ಹತ್ತುತ್ತದೆ’ ಎಂಬ ಒಂದು ಸಣ್ಣ ಡೌಲು ನನ್ನಲ್ಲಿಯೂ ಇತ್ತು.

ಒಂಬತ್ತು ಮತ್ತು ಹತ್ತನೇ ತರಗತಿಗೆ ಬರುವಾಗ ಅದೇ ಸಂಸ್ಕೃತದಲ್ಲಿ, ನನ್ನ ಸಹಪಾಠಿಗಳಲ್ಲಿ ಹಲವರು ನನಗಿಂತ ಮುಂದೆ ಹೋದಾಗ ನನ್ನ ಡೌಲು ಅಡಗಿದ್ದೂ ಸುಳ್ಳಲ್ಲ. ಐದನೇ ತರಗತಿ ಯಲ್ಲಿರುವಾಗ ಸಂಸ್ಕೃತ ಅಭ್ಯಾಸಕ್ಕೆ ತೊಡಗಿದೆ ಎಂದಿದ್ದೆನಲ್ಲ, ಆ ತರಗತಿಯಲ್ಲಿ ನನಗೆ ಅತ್ಯಂತ ಆಸಕ್ತಿದಾಯಕ ಎನಿಸಿದ್ದು ಸುಭಾಷಿತಗಳು. ಇನ್ನೂ ನೆನಪಿದೆ, ನಾನು ಕಲಿತ ಮೊದಲ ಸುಭಾಷಿತ-

ಕಾಕಃ ಕೃಷ್ಣಃ ಪಿಕಃ ಕೃಷ್ಣಃ

ಕೋ ಭೇದಃ ಪಿಕಾಕಾಕಯೊಃ |

ವಸಂತಕಾಲೆ ಸಂಪ್ರಾಪ್ತೆ

ಕಾಕಃ ಕಾಕಃ ಪಿಕಃ ಪಿಕಃ ||

ಅಂದು ಕಲಿತ ಈ ಸುಭಾಷಿತ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತಿದೆ. ಅಂದರೆ, “ಕಾಗೆಯೂ ಕಪ್ಪು, ಕೋಗಿಲೆಯು ಕಪ್ಪು, ಮೇಲ್ನೋಟಕ್ಕೆ ಇವೆರಡರಲ್ಲಿ ಯಾವ ಭೇದವೂ ಕಾಣುವು ದಿಲ್ಲ. ವಸಂತಕಾಲ ಬಂದಾಗ ಕಾಗೆ ಯಾವುದು, ಕೋಗಿಲೆ ಯಾವುದು ಎಂಬುದು ತಿಳಿಯುತ್ತದೆ" ಎಂಬುದು ಇದರ ಅರ್ಥ.

ವಸಂತಕಾಲದಲ್ಲಿ ಗಿಡಮರಗಳು ಚಿಗುರೊಡೆದಾಗ ಕೋಗಿಲೆ ಹಾಡುತ್ತದೆ, ಆ ಧ್ವನಿಯಿಂದಾಗಿ ಕೋಗಿಲೆ ಮತ್ತು ಕಾಗೆಯ ನಡುವಿನ ಭೇದವನ್ನು ಗುರುತಿಸಬಹುದು ಎಂಬ ತಾತ್ಪರ್ಯ. ಆಗ ಇದರ ಅರ್ಥವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇಂದಿನ ಕಾಲಕ್ಕಂತೂ ಅದು ನೂರಕ್ಕೆ ನೂರರಷ್ಟು ಸತ್ಯ.

ಇತ್ತೀಚಿನ ದಿನಗಳಲ್ಲಂತೂ ಒಬ್ಬ ವ್ಯಕ್ತಿಯನ್ನು ಹೊರಗಿನಿಂದ ಅಳೆಯುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಕೆಲವೊಮ್ಮೆ ನಮಗೆ ಎಲ್ಲರೂ ಒಳ್ಳೆಯವರಾಗಿಯೇ ಕಾಣುತ್ತಾರೆ ಅಥವಾ ಎಲ್ಲರೂ ಒಳ್ಳೆಯವರಂತೆ ನಟಿಸುತ್ತಾರೆ. ಸರಿಯಾದ ಸಂದರ್ಭದಲ್ಲಿ ಅಂಥವರ ನಿಜವಾದ ಬಣ್ಣ ಬಯಲಾಗುತ್ತದೆ.

ನನಗೆ ಅಚ್ಚುಮೆಚ್ಚಿನ ಇನ್ನೊಂದು ಸುಭಾಷಿತ:

ವಿದ್ಯಾ ದದಾತಿ ವಿನಯಂ ವಿನಯಾದ್ ಯಾತಿ

ಪಾತ್ರತಾಮ |

ಪಾತ್ರತ್ವಾದ್ ಧನಮಾಪ್ನೋತಿ ಧನಾದ್ಧರ್ಮಂ ತತಃ ಸುಖಮ್ ||

ಅಂದರೆ, “ವಿದ್ಯೆ ವಿನಯವನ್ನು ಕೊಡುತ್ತದೆ, ನಮ್ಮನ್ನು ವಿನಮ್ರನನ್ನಾಗಿ ಮಾಡುತ್ತದೆ; ವಿನಯ ಅಥವಾ ವಿನಮ್ರತೆ ನಮ್ಮ ಮೌಲ್ಯವನ್ನು, ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಯೋಗ್ಯತೆಯಿಂದ ನಾವು ಹಣ ಸಂಪಾದಿಸುತ್ತೇವೆ, ಆ ಹಣದಿಂದ ಧರ್ಮಕಾರ್ಯಗಳನ್ನು ಮಾಡುತ್ತೇವೆ. ಧರ್ಮ ನಮಗೆ ತೃಪ್ತಿ ನೀಡುತ್ತದೆ" ಎಂಬುದು ಇದರರ್ಥ.

ನೋಡಿ, ಇಲ್ಲಿ ಓದಿದ ಮಾತ್ರಕ್ಕೆ ಸಂತೋಷ ಸಿಗುತ್ತದೆ ಎಂದು ಹೇಳಲಿಲ್ಲ. ಹಣ ಸಿಕ್ಕಿದ ಕಾರಣಕ್ಕೆ ಅಥವಾ ಶ್ರೀಮಂತನಾದ ಮಾತ್ರಕ್ಕೆ ಸುಖವಾಗಿರಬಹುದು ಎಂದೂ ಹೇಳಲಿಲ್ಲ. ಇಲ್ಲಿ ಯಾವುದೇ ಶಾರ್ಟ್‌ಕಟ್ ವ್ಯವಹಾರ, ಉಪದೇಶ ಇಲ್ಲ. ಇತ್ತೀಚಿನ ಜಾಹೀರಾತುಗಳಲ್ಲಿ ನೋಡುವಂತೆ, ’ಒಂದೇ ತಿಂಗಳಿನಲ್ಲಿ ಶ್ರೀಮಂತರಾಗುವ ಬಗೆ, ಮನೆಯ ಕುಳಿತು ಹಣ ಗಳಿಸುವ ವಿಧಾನ’ ಹೇಳಲಿಲ್ಲ.

ಬದಲಾಗಿ, ವಿದ್ಯೆಯಿಂದ ಸುಖದ ಕಡೆಗಿನ ಪ್ರಯಾಣವನ್ನು ವಿಸ್ತಾರವಾಗಿ ಹೇಳಿದ್ದಾರೆ. ವಿನಯ ದಿಂದ, ಯೋಗ್ಯತೆಯಿಂದ ಹಣ ಗಳಿಸಬೇಕು; ಹಣ ಸಂಪಾದಿಸಿದರೆ ಸಾಲದು, ಅದನ್ನು ಧರ್ಮ ಮಾರ್ಗದಲ್ಲಿ ಬಳಸಿದಾಗ ಮಾತ್ರ ಸಂತೃಪ್ತಿ ಎಂದಿದ್ದಾರೆ. ಇಂದು ಬಹುತೇಕ ಶ್ರೀಮಂತರು ಸಂತೋಷದಿಂದ ಇರದಿರಲು ಕಾರಣ ಇದೇ ಇದ್ದರೂ ಇರಬಹುದು!

ಇನ್ನೊಂದು ಲೋಕಪ್ರಿಯ ಸುಭಾಷಿತ ಹೇಳುತ್ತದೆ:

ಪರೋಪಕಾರಾಯ ಫಲಂತಿ ವೃಕ್ಷಾಃ

ಪರೋಪಕಾರಾಯ ವಹನ್ತಿ ನದ್ಯಃ |

ಪರೋಪಕಾರಾಯ ದುಹಂತಿ ಗಾವಃ

ಪರೋಪಕಾರಾರ್ಥಮಿದಂ ಶರೀರಮ್ ||

ಅಂದರೆ, “ಇತರರಿಗೆ ಉಪಕಾರ ಮಾಡುವುದಕ್ಕಾಗಿ ಮರಗಳು ಹಣ್ಣು ಬಿಡುತ್ತವೆ, ಪರರಿಗೆ ಉಪಕಾರ ಮಾಡುವುದಕ್ಕಾಗಿ ನದಿಗಳು ಹರಿಯುತ್ತವೆ, ಪರೋಪಕಾರ ಮಾಡುವುದಕ್ಕೆಂದು ಹಸುಗಳು ಹಾಲು ಕೊಡುತ್ತವೆ. ಮನುಷ್ಯನ ಶರೀರ ಕೂಡ ಪರೋಪಕಾರಕ್ಕಾಗಿಯೇ ಇದೆ" ಎಂಬುದು ಇದರರ್ಥ.

ಮನುಷ್ಯನ ಬದುಕನ್ನು ತಿದ್ದುವ, ಹಸನಾಗಿಸುವ, ಮಾರ್ಗದರ್ಶಿಯಾಗಿರುವ ಇಂಥ ಸಾವಿರಾರು ಸುಭಾಷಿತಗಳು, ಶ್ಲೋಕಗಳು ಸಂಸ್ಕೃತದಲ್ಲಿವೆ. ಪುರಾತನ ಭಾಷೆಯ ಈ ಸುಭಾಷಿತಗಳು ಹಿಂದಿಯ ದೋಹಾ, ಕನ್ನಡದ ವಚನ, ಕಗ್ಗ ಇತ್ಯಾದಿಗಳಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಭಾರತದ ಕೆಲವು ಭಾಷೆಗಳಿಗೆ ಸಂಸ್ಕೃತವೇ ಮೂಲ ಅಥವಾ ಅನೇಕ ಭಾಷೆಯ ಕೆಲವು ಪದಗಳು ಸಂಸ್ಕೃತ ದಿಂದ ಬಂದವು ಅಥವಾ ಕೆಲವು ಪದಗಳಲ್ಲಿ ಸಂಸ್ಕೃತದ ಛಾಯೆ ಇದೆ,

ಇಂಗ್ಲಿಷ್‌ನ ಕೆಲವು ಪದಗಳು ಕೂಡ ಸಂಸ್ಕೃತದಿಂದ ಹುಟ್ಟಿಕೊಂಡವು ಎಂಬ ಮಾತುಗಳನ್ನು ನಾವು ಸಣ್ಣವರಾಗಿದ್ದಾಗಿನಿಂದಲೂ ಕೇಳುತ್ತಿದ್ದೆವು. ಆ ಕಾಲದಲ್ಲಿ ಮಕ್ಕಳಾದ ನಮ್ಮಲ್ಲಿ ಭಾಷಾ ತಾರತಮ್ಯ ಇದ್ದಿರಲಿಲ್ಲ. ನಮ್ಮ ಶಾಲೆಯ ಪಠ್ಯಪುಸ್ತಕದ ಹೊರತಾಗಿ ಸಂಸ್ಕೃತ, ಹಿಂದಿ, ರಾಮಾಯಣ, ಮಹಾಭಾರತ, ಪಂಚತಂತ್ರ ಇತ್ಯಾದಿಗಳನ್ನು ಓದಿ, ಪರೀಕ್ಷೆಗೆ ಕುಳಿತುಕೊಳ್ಳುತ್ತಿದ್ದೆವು. ಇವೆಲ್ಲದರಲ್ಲೂ ಸಂಸ್ಕೃತದ ಛಾಯೆ ಎದ್ದು ಕಾಣುತ್ತದೆ.

ಪಂಚತಂತ್ರದ ಕಥೆಗಳಲ್ಲೂ ಸುಭಾಷಿತಗಳು ಕಾಣಿಸಿಕೊಳ್ಳುತ್ತವೆ. ಹಾಗಾದರೆ ಇಷ್ಟೊಂದು ಸುಭಾಷಿತಗಳನ್ನು ಬರೆದವರಾದರೂ ಯಾರು ಎಂದು ಹುಡುಕುತ್ತ ಹೊರಟರೆ ಸಿಗುವ ಉತ್ತರ ಮಾತ್ರ ಸೋಜಿಗ. ಬಹುತೇಕ ಸುಭಾಷಿತಗಳ ಕರ್ತೃ ಯಾರು ಎಂಬುದು ಇಂದಿಗೂ ಅಗೋಚರ. ನಮ್ಮ ಜನಪದದಂತೆಯೇ ಇವುಗಳು ಕೂಡ ಅಂದಿನ ಅನುಭವಗಳ ಬುನಾದಿಯ ಮೇಲೇ ನಿಂತದ್ದು.

ಅಲ್ಲಲ್ಲಿ ಶಿಲಾಶಾಸನಗಳಲ್ಲಿ ದೊರೆತದ್ದು ಬಿಟ್ಟರೆ ಬಾಯಿಂದ ಬಾಯಿಗೆ ಬಂದದ್ದೇ ಹೆಚ್ಚು. ಆ ಕಾಲದಲ್ಲಿ ಬಾಯಿ ಪ್ರಮುಖ ಮಾಧ್ಯಮವಾಗಿತ್ತು ಬಿಡಿ. ಎರಡನೆಯ ಶತಮಾನದಿಂದ ಇಂದಿನ ವರೆಗೂ ಸುಭಾಷಿತಗಳು ಅಸ್ತಿತ್ವದಲ್ಲಿವೆ ಎಂದರೆ ಅವುಗಳಲ್ಲಿ ಅಡಗಿರುವ ತತ್ತ್ವ, ಸತ್ತ್ವ ಎಂಥದ್ದು ಎಂಬುದರ ಅರಿವಾಗುತ್ತದೆ. ಸಶಕ್ತವಾಗಿರದೇ ಜೊಳ್ಳು ಕಾಳುಗಳಾಗಿದ್ದರೆ ಅವು ನಶಿಸಿ ಹೋಗಿ ಶತಮಾನಗಳೇ ಕಳೆದಿರುತ್ತಿತ್ತು.

‘ಸು’ ಎಂದರೆ ಒಳ್ಳೆಯದು, ‘ಭಾಷಿತ’ ಎಂದರೆ ಮಾತನಾಡುವುದು. ಇದನ್ನು ಒಟ್ಟಾಗಿ ‘ಒಳ್ಳೆಯ ಮಾತು’ ಎಂದು ಹೇಳಬಹುದು. ಸಾಮಾನ್ಯವಾಗಿ ಎರಡು ಅಥವಾ ನಾಲ್ಕು ಸಾಲುಗಳಲ್ಲಿ ಇರುವ ಸುಭಾಷಿತಗಳು ಕಲಿಸುವ ಜೀವನಪಾಠಕ್ಕೆ ಮಾತ್ರ ಮಿತಿಯೇ ಇಲ್ಲ. ಬೆಲೆ ಕಟ್ಟಲಾಗದ ಸುಭಾಷಿತ ಗಳು, ಅಂತರ್ಗತ ನೈತಿಕತೆ, ಲೌಕಿಕ ಬುದ್ಧಿವಂತಿಕೆಯನ್ನು ಸೂಚಿಸುವ, ನೀತಿಪಾಠ ಹೇಳುವ ಶ್ಲೋಕಗಳಾಗಿ, ಸೂಕ್ತಿಗಳಾಗಿ, ಸಾಲುಗಳಾಗಿ ಹೆಸರುವಾಸಿಯಾಗಿವೆ. ಕೆಲವು ಸುಭಾಷಿತ ಗಳಂತೂ ಸಕ್ಕರೆ ಲೇಪಿತ ಕಹಿ ಔಷಧಿಗಳಿದ್ದಂತಿವೆ.

ಸುಭಾಷಿತಗಳು ವಿಭಿನ್ನ ವಿಷಯಗಳನ್ನು ಒಳಗೊಂಡಿರುತ್ತವೆ, ವಿವಿಧ ವಿಷಯಗಳೊಂದಿಗೆ ವ್ಯವಹರಿಸುತ್ತವೆ. ಪ್ರತಿಯೊಬ್ಬರೂ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ದೈನಂದಿನ ಅನುಭವ ಗಳನ್ನು ಒಳಗೊಂಡಿರುತ್ತವೆ. ಸುಭಾಷಿತಗಳು ಒಂದು ಭಾವನೆ, ಕಲ್ಪನೆ, ಸತ್ಯ, ಧರ್ಮ ಅಥವಾ ಸನ್ನಿವೇಶಗಳನ್ನು ಚಿತ್ರಿಸುತ್ತವೆ. ಮನುಷ್ಯನ ಜೀವನದ ಬರಡು ಬೊಡ್ಡೆಯ ಮೇಲೆ ಅನುಭವದ ನೀತಿಪಾಠಗಳ ಕಸಿ ಮಾಡಿ ಫಲಪ್ರದವಾಗುವಂತೆ ಮಾಡುತ್ತವೆ.

ಮಹಾನ್ ವಿದ್ವಾಂಸರಾದ ಕಾಳಿದಾಸ, ಕಲ್ಲಣ, ಭರ್ತೃಹರಿ, ಭವಭೂತಿ, ಚಾಣಕ್ಯ ಮುಂತಾದ ಪ್ರಾಚೀನ ಭಾರತೀಯರ ಕೃತಿಗಳಲ್ಲಿ ಅಮೂಲ್ಯವಾದ ಸುಭಾಷಿತಗಳು ಇವೆ ಎಂದು ಹೇಳಲಾಗು ತ್ತದೆ. ಅಲ್ಲದೆ, ಪಂಚತಂತ್ರ, ಹಿತೋಪದೇಶ ಕಥೆಗಳು, ಭಗವದ್ಗೀತೆ, ಭಾಗವತ, ಪುರಾಣಗಳು, ವೇದಗಳು, ರಾಮಾಯಣ, ಮಹಾಭಾರತದಂಥ ಗ್ರಂಥಗಳು ಸುಭಾಷಿತಗಳ ಪ್ರಮುಖ ಮೂಲಗಳು.

ಹಾಗಾಗಿ, ಸುಭಾಷಿತಗಳೆಂದರೆ, ಬಗೆದಷ್ಟೂ ಬಾಳುವ, ಅಗೆದಷ್ಟೂ ಆಳುವ ದಿವ್ಯೌಷಧಿ! ಅಂದ ಹಾಗೆ, ಇದೇ ಆಗ 6ರಿಂದ 12ನೆಯ ತಾರೀಖಿನವರೆಗೆ ಈ ವರ್ಷದ ಸಂಸ್ಕೃತ ಸಪ್ತಾಹ. ಈ ಸಂದರ್ಭದಲ್ಲಿ ಜೀವನಿಧಿಯಾದ ಸುಭಾಷಿತ ಸೂಕ್ತಿಯನ್ನು ನೆನೆಸಿಕೊಳ್ಳುವುದು ಸೂಕ್ತ ಎಂದೆನಿಸಿತು.

ಕೊನೆಯಲ್ಲಿ ಒಂದು ಸುಭಾಷಿತದೊಂದಿಗೆ ಈ ಲೇಖನವನ್ನು ಮುಗಿಸುತ್ತೇನೆ. ಇದೊಂದನ್ನೇ ಅರ್ಥ ಮಾಡಿಕೊಂಡರೂ ಸಾಕು, ಇಡೀ ಜೀವನವನ್ನೇ ಅರ್ಥಪೂರ್ಣವಾಗಿಸಿಕೊಳ್ಳಬಹುದು.

ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ

ಸುಭಾಷಿತಮ್ |

ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾ

ವಿಧೇ ||

ಇದರ ಅರ್ಥ: “ಈ ಭೂಮಿಯಲ್ಲಿ ಮೂರು ಬಗೆಯ ರತ್ನಗಳಿವೆ ನೀರು, ಅನ್ನ (ಆಹಾರ) ಮತ್ತು ಸುಭಾಷಿತ. ಆದರೆ ಮೂರ್ಖನಾದವನು ಕಲ್ಲಿನ ತುಂಡುಗಳನ್ನು ರತ್ನಗಳೆಂದು ತಿಳಿದು ಅದರ ಹಿಂದೆ ಓಡುತ್ತಾನೆ".

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author