ವಿದೇಶವಾಸಿ
ಸಾಮಾನ್ಯವಾಗಿ ದಾಖಲೆ ಬರೆಯುವಾಗ ಸುಲಭವಾಗಿದ್ದನ್ನು ಆಯ್ದುಕೊಳ್ಳುವುದು ರೂಢಿ. ಆದರೆ ತನುಶ್ರೀ ಕಷ್ಟಕರವಾದ ಆಸನಗಳನ್ನು ಆಯ್ದುಕೊಂಡಿದ್ದಳು. ಅದನ್ನು ನಿರ್ಣಾಯ ಕರೇ ಒಪ್ಪಿ ಕೊಂಡಿದ್ದರು. ವಿಶೇಷವೆಂದರೆ, ಆರಂಭದ ಲಾಗಾಯ್ತು ಕೊನೆಯವರೆಗೂ ಆಕೆಯ ಕೈ ಕಾಲು ಒಮ್ಮೆಯೂ ನಡುಗಲಿಲ್ಲ, ಮುಖದ ಮೇಲಿನ ನಗು ಮಾಸಲಿಲ್ಲ.
ನಿಮ್ಮದೇ ದಾಖಲೆಯನ್ನು ನೀವು ಮುರಿಯಬೇಕೆಂದರೆ ಏನು ಮಾಡಬೇಕು? ಮೊದಲು ಒಂದು ದಾಖಲೆ ಮಾಡಬೇಕು! ಜೀವಮಾನದಲ್ಲಿ ಯಾವುದೇ ವಿಷಯದಲ್ಲಿ ಒಂದೇ ದಾಖಲೆ ಮಾಡಿದರೂ ಜೀವನ ಸಾರ್ಥಕ. ಆ ಒಂದೇ ದಾಖಲೆ ಮಾಡಬೇಕೆಂದಾದರೂ ಸತತ, ಕಠಿಣ ಪರಿಶ್ರಮ ಬೇಕು. ನಿಮ್ಮ ದಾಖಲೆಯನ್ನು ನೀವು ಮತ್ತೆ ಮತ್ತೆ ಮುರಿಯಬೇಕೆಂದರೆ ಏನು ಮಾಡಬೇಕು? ಮತ್ತೆ ಮತ್ತೆ ದಾಖಲೆಯನ್ನು ಮಾಡುತ್ತಿರಬೇಕು!
ನೀವು ಎರಡು ಗಿನ್ನಿಸ್ ದಾಖಲೆಯೂ ಸೇರಿದಂತೆ ಒಟ್ಟೂ ಹತ್ತು ವಿಶ್ವ ದಾಖಲೆ ಮಾಡಬೇಕು ಎಂದರೆ ಏನು ಮಾಡಬೇಕು? ತನುಶ್ರೀ ಪಿತೋಡಿಯಾಗಿ ಹುಟ್ಟಬೇಕು!
ಅಕ್ಟೋಬರ್ ೨೪, ೨೦೨೫. ಕನ್ನಡ ಸಂಘ ಬಹ್ರೈನ್, ಬಹ್ರೈನ್ ಯೋಗ ಕಮ್ಯೂನಿಟಿ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇತಿಹಾಸದ ಪುಟಗಳಲ್ಲಿ ಒಂದು ದಾಖಲೆ ನಿರ್ಮಾಣ ವಾಯಿತು. ಆ ದಾಖಲೆಯನ್ನು ನಿರ್ಮಿಸಿದ್ದು, ಹದಿನಾರು ವರ್ಷದ ಬಾಲಕಿ. ನೂತನ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ಅಜಿತ್ ಬಂಗೇರ ಅವರು ಸುಮಾರು ಎರಡು ತಿಂಗಳ ಹಿಂದೆ ಈ ರೀತಿಯ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೇವೆ ಎಂದಾಗಲೇ ಸಾಕಷ್ಟು ಕುತೂಹಲ ಕೆರಳಿತ್ತು.
ಇದನ್ನೂ ಓದಿ: Kiran Upadhyay Column: ಇರುವಲ್ಲಿಯೇ ಆನಂದ ಕಾಣುವ ಒಳಿತಲ್ಲವೇ ?
ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದೆ. ಭಾರತದ ಆತ್ಮಸಂತಾನವಾದ ಯೋಗ ಇಂದು ವಿದೇಶಗಳಲ್ಲೂ ಪಸರಿಸಿ, ನೂರ ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಪ್ರತಿಷ್ಠಾಪನೆಗೊಂಡಿದೆ. ಅದಕ್ಕೆ ಸೌದಿ ಅರೇಬಿಯಾದಂಥ ದೇಶಗಳೂ ಹೊರತಾಗಿಲ್ಲ. ಬಹುತೇಕ ದೇಶಗಳು ಅದರ ಮಹತ್ವವನ್ನು ಅರಿತು, ತಮ್ಮ ಬಾಹುಗಳನ್ನು ಚಾಚಿ, ಬಾಚಿ ಬಂಧಿಸಿ ಕೊಂಡಿವೆ. ಆದರೆ ಭಾರತದ ಯೋಗಶಾಸ್ತ್ರಕ್ಕೆ ವಿದೇಶದಲ್ಲಿ ದಾಖಲೆ ಬರೆಯುವ ಭಾಗ್ಯ ಈ ಮೊದಲು ಎಷ್ಟು ಲಭಿಸಿದೆಯೋ ಗೊತ್ತಿಲ್ಲ, ಮೊನ್ನೆಯಂತೂ ಒಂದು ದಾಖಲೆಯ ಸೃಷ್ಟಿಯಾಗಿದೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಲ್ಲಿ ಮೊನ್ನೆ ದಾಖಲಾದ ಯೋಗ ಪ್ರದರ್ಶನ, ಕೊಲ್ಲಿ ರಾಷ್ಟ್ರಗಳಲ್ಲಷ್ಟೇ ಅಲ್ಲ, ವಿಶ್ವದ ಮೊದಲು. ದಾಖಲೆ ಬರೆದ ಬಾಲಕಿ, ಉಡುಪಿಯ ತನುಶ್ರೀ ಪಿತ್ರೋಡಿ. ಮೊನ್ನೆಯ ದಾಖಲೆಯ ಕುರಿತು ಹೇಳಿ ಮುಂದುವರಿಯುತ್ತೇನೆ. ಈ ದಾಖಲೆಯ ಪ್ರದರ್ಶನಕ್ಕೆ ವೇದಿಕೆಯಾದದ್ದು, ಹಲವಾರು ಮೊದಲ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲು ಹೆಸರಾದ ಕನ್ನಡ ಸಂಘ ಬಹ್ರೈನ್. ಅದಕ್ಕೆ ಬಹ್ರೈನ್ ಯೋಗ ಕಮ್ಯೂನಿಟಿಯ ಅಧ್ಯಕ್ಷರಾದ ಫಾತಿಮಾ ಅಲ್ ಮನ್ಸೂರಿಯವರೂ ಕೈಜೋಡಿಸಿದರು.
ಹಿಂದೊಮ್ಮೆ ಸೌದಿ ಅರೇಬಿಯಾದ ನೌಫ್ ಮರ್ವಾಯಿಯವರ ಕಥೆ ಮತ್ತು ಅವರ ಯೋಗಾ ಭ್ಯಾಸದ ಕುರಿತು ಬರೆದಿದ್ದೆ. ಅದೇ ರೀತಿ ಬಹ್ರೈನ್‌ನಲ್ಲಿ ಹಠಯೋಗದಲ್ಲಿ ಸಾಧನೆ ಮಾಡಿದ ಒಮೇರಾ ಅಲ್ ಒಬೇದ್ಲಿ ಮತ್ತು ಪ್ರಾಪ್ ಯೋಗದಿಂದ ಜನರಿಗೆ ಚಿಕಿತ್ಸೆ ನೀಡುತ್ತಿರುವ ಹಸನ್ ಎಹ್ಸಾನ್ ಕುರಿತಾಗಿಯೂ ಬರೆದಿದ್ದೆ. ಈಗ ಫಾತಿಮಾ ಅವರ ಕುರಿತು ಬರೆಯಬೇಕು, ಇಂದಿನ ವಿಷಯ ಅದಲ್ಲ ವಾದದ್ದರಿಂದ ಮುಂದೊಮ್ಮೆ ಬರೆಯುತ್ತೇನೆ. ಈ ಕಾರ್ಯಕ್ರಮಕ್ಕೆ ಗೋಲ್ಡನ್ ಬುಕ್ ಕಡೆಯಿಂದ ಡಾ. ಮನೀಶ್ ವೈಶ್ನೋಯಿ ನಿರ್ಣಾಯಕರಾಗಿ ಆಗಮಿಸಿದ್ದರು.
ಸಮಯದ ಓಟ ಆರಂಭವಾಯಿತು. ಅಂದು ಒಂದು ಗಂಟೆಯಲ್ಲಿ ತನುಶ್ರೀ ಮುನ್ನೂರು ಆಸನ ಗಳನ್ನು ಪ್ರದರ್ಶಿಸಬೇಕಾಗಿತ್ತು. ಈ ಮೊದಲು ಆಕೆ ನಲವತ್ತೈದು ನಿಮಿಷದಲ್ಲಿ ಇನ್ನೂರ ನಲವತ್ತೈದು ಆಸನ ಪ್ರದರ್ಶಿಸಿ ದಾಖಲೆ ಬರೆದಿದ್ದಳು. ಈಗ ಅದನ್ನೂ ಮೀರಿಸುವ ಸಮಯ. ಮೊದಲ ಹದಿನೈದು ನಿಮಿಷದಲ್ಲಿಯೇ ತನುಶ್ರೀ ನೂರು ಆಸನಗಳ ಪ್ರದರ್ಶನ ಮುಗಿಸಿದ್ದಳು.
ಮುಂದಿನ ಹದಿನೈದು ನಿಮಿಷದಲ್ಲಿ ಮತ್ತೆ ನೂರು ಆಸನಗಳು, ಅದಕ್ಕೂ ಮುಂದಿನ ಹದಿನೈದು ನಿಮಿಷದಲ್ಲಿ, ಅಂದರೆ, ನಲವತ್ತೈದು ನಿಮಿಷದಲ್ಲಿ ಮುನ್ನೂರು ಆಸನಗಳು ಪೂರ್ತಿಗೊಂಡಿದ್ದವು. ಆಗಲೇ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತ್ತು. ಆದರೆ ಆಕೆಯ ಆಸನಗಳ ಪ್ರದರ್ಶನ ಮುಂದು ವರಿದಿತ್ತು. ಐವತ್ತು ನಿಮಿಷ ಆಗುವ ಹೊತ್ತಿಗೆ ಬರೋಬ್ಬರಿ ಮುನ್ನೂರ ಮೂವತ್ತ ಮೂರು ಆಸನಗಳನ್ನು ಹಾಕಿ ತೋರಿಸಿದ್ದಳು ತನುಶ್ರೀ.
ಒಂದು ಗಂಟೆ ಪೂರ್ತಿ ಮಾಡಿದ್ದರೆ ಈ ಸಂಖ್ಯೆ ಖಂಡಿತವಾಗಿಯೂ ಮುನ್ನೂರ ಐವತ್ತರ ಗಡಿ ದಾಟುತ್ತಿತ್ತು. ಸಾಮಾನ್ಯವಾಗಿ ದಾಖಲೆ ಬರೆಯುವಾಗ ಸುಲಭವಾಗಿದ್ದನ್ನು ಆಯ್ದುಕೊಳ್ಳುವುದು ರೂಢಿ. ಆದರೆ ಮೊನ್ನೆ ತನುಶ್ರೀ ಕಷ್ಟಕರವಾದ ಆಸನಗಳನ್ನು ಆಯ್ದುಕೊಂಡಿದ್ದಳು. ಅದನ್ನು ನಿರ್ಣಾಯಕರೇ ಒಪ್ಪಿಕೊಂಡಿದ್ದರು. ವಿಶೇಷವೆಂದರೆ, ಆರಂಭದ ಲಾಗಾಯ್ತು ಕೊನೆಯವರೆಗೂ ಆಕೆಯ ಕೈ ಕಾಲು ಒಮ್ಮೆಯೂ ನಡುಗಲಿಲ್ಲ, ಆಕಾರ ತಪ್ಪಲಿಲ್ಲ, ಉಸಿರಾಟ ಏರು- ಪೇರಾಗಲಿಲ್ಲ,
ಮುಖದ ಮೇಲಿನ ನಗು ಮಾಸಲಿಲ್ಲ. ಆಕೆಗೆ ಪ್ರತಿ ಕ್ಷಣವೂ ಜೇನಧಾರೆಯಂತೆ ಸ್ನಿಗ್ಧ, ಬೆಣ್ಣೆಯಿಂದ ನೂಲು ಹೊರಗೆ ತೆಗೆದಷ್ಟೇ ಸರಳ. ಅಷ್ಟೇ ಅಲ್ಲ, ಐವತ್ತು ನಿಮಿಷ ನಿರಂತರ ಪ್ರದರ್ಶನದ ನಂತರ ಆಕೆ ಯೋಗದ ಕುರಿತಾಗಿ, ಆಸನದ ಕುರಿತಾಗಿ ಮಾತನ್ನೂ ಆಡಿದಳು. ಅಲ್ಲಿ ಕೂಡ ಒಮ್ಮೆಯೂ ದಮ್ಮು ಕಟ್ಟಲಿಲ್ಲ. ಐದು ನಿಮಿಷ ಕುಣಿದ ನಂತರ ಮಾತನಾಡುವುದಲ್ಲ, ನಿಲ್ಲಲೂ ಆಗದ ಸ್ಥಿತಿಯಲ್ಲಿರುವವರನ್ನು ನಾವು ನೋಡುತ್ತೇವೆ.
ಹಾಗಿರುವಾಗ, ಸುಮಾರು ಒಂದು ಗಂಟೆ ಮೈ ಕೈ ಸುರುಟಿ-ಮುರುಟಿ ನಿಂತ ಮೇಲೂ ನಿರರ್ಗಳವಾಗಿ ಮಾತನಾಡಬಹುದಾದರೆ, ಅದರ ಹಿಂದಿನ ಪರಿಶ್ರಮ ಏನು, ಎಷ್ಟು ಎಂಬುದರ ಅರಿವಾಗುತ್ತದೆ. ಹಾಗಾದರೆ ಅವರಿಗೆ ಸುಸ್ತಾಗುವುದಿಲ್ಲವೇ? ನೋವಾಗುವುದಿಲ್ಲವೇ? ಆರಂಭದಲ್ಲಿ ಎರಡೂ ಆಗು ತ್ತದೆ. ಆದರೆ ನಿರಂತರ ಅಭ್ಯಾಸದಿಂದ ಆ ಆಯಾಸವನ್ನು ಮೆಟ್ಟಿ ನಿಲ್ಲಬಹುದು.
ಆಗ ನೋವೇ ನಲಿವಾಗಿ ಮಾರ್ಪಾಡಾಗುತ್ತದೆ ಎನ್ನುವುದಕ್ಕೆ ತನುಶ್ರೀಯಂಥವರು ಸಾಕ್ಷಿ. ತನುಶ್ರೀ ಪ್ರಯಾಣದ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ, ಆಕೆ ಮೂರು ವರ್ಷದವಳಿzಗ ಛದ್ಮವೇಷ ಮಾಡುತ್ತಿದ್ದಳಂತೆ. ಸಿನಿಮಾ ನೃತ್ಯಗಳಲ್ಲಿ ಭಾಗವಹಿಸುತ್ತಿದ್ದಳಂತೆ. ಐದು ವರ್ಷವಾಗುವ ಹೊತ್ತಿಗೆ ಭರತ ನಾಟ್ಯ ಕಲಿಯಲು ಆರಂಭಿಸಿದಳಂತೆ. ನೃತ್ಯ ಮಾಡುವಾಗ ಅದರಲ್ಲಿ ಲಾಗ ಹಾಕುವುದು, ಪಲ್ಟಿ ಹೊಡೆಯುವುದು ಇತ್ಯಾದಿ ಸ್ಟಂಟ್ ಮಾಡುತ್ತಿದ್ದಳಂತೆ. ಅದರಲ್ಲಿ ಕೆಲವು ಯೋಗಾಸನದ ಭಂಗಿಗಳೂ ಇರುತ್ತಿದ್ದವಂತೆ.
ಒಮ್ಮೆ ಬೆಂಗಳೂರಿಗೆ ಹೋದಾಗ ಖುಷಿ ಎಂಬುವವರು ಒಂದು ನಿಮಿಷದಲ್ಲಿ ಹದಿನಾಲ್ಕು ನಿರಾಲಂಬ ಚಕ್ರಾಸನ ಹಾಕಿ ವಿಶ್ವದಾಖಲೆ ಮಾಡಿದ್ದನ್ನು ನೋಡಿದರಂತೆ. ತಂದೆಯವರು ‘ಇದನ್ನು ನೀನೂ ಪ್ರಯತ್ನಿಸು’ ಎಂದಾಗ, ಒಂದು ನಿಮಿಷದಲ್ಲಿ ಒಂಬತ್ತು ಬಾರಿ ಮಾಡಿದ್ದಳಂತೆ. ಹಾಗೆಯೇ ಪ್ರತಿನಿತ್ಯ ಪ್ರಯತ್ನಿಸಿ ಒಂದು ನಿಮಿಷದಲ್ಲಿ ಹತ್ತೊಂಬತ್ತು ಬಾರಿ ನಿರಾಲಂಬ ಚಕ್ರಾಸನ ಹಾಕಿ ಮೊದಲ ವಿಶ್ವ ದಾಖಲೆ ಆಯಿತಂತೆ.
ಅಲ್ಲಿಂದ ಯೋಗದ ಕಡೆಗೆ ಇನ್ನೂ ಹೆಚ್ಚು ಆಸಕ್ತಿ ಉಂಟಾಯಿತಂತೆ. ಯುಟ್ಯೂಬ್‌ನಲ್ಲಿ ಯೋಗಾ ಸನ ನೋಡಿ ಕಲಿಯಲು ಆರಂಭಿಸಿದಳಂತೆ. ಎರಡು ವರ್ಷ ಯುಟ್ಯೂಬ್ ಶಿಕ್ಷಣದ ನಂತರ ಎರಡು ವರ್ಷ ಹರಿರಾಜ ಕುನ್ನಿಗೋಳಿಯವರಿಂದ ಯೋಗಾಭ್ಯಾಸ ಮಾಡಿ, ನಂತರ ಸುದರ್ಶನ ಕಾರ್ಕಳ ಅವರಲ್ಲಿ ಅಭ್ಯಾಸ ಮುಂದುವರಿಸಿದಳಂತೆ.
ಮೊದಲ ದಾಖಲೆ ಬರೆಯುವಾಗ ಏಳು ವರ್ಷದವಳಾಗಿದ್ದ ತನುಶ್ರೀ, ಈಗ ಹದಿನಾರು ವರ್ಷದ ವಳಾಗಿದ್ದು, ಒಂಬತ್ತು ದಾಖಲೆ ಬರೆದಿದ್ದಾಳೆ. ನಮಗೆಲ್ಲ ವರ್ಷಕ್ಕೊಮ್ಮೆ ದೀಪಾವಳಿ ಹಬ್ಬ ಬರುವಂತೆ ಅವಳಿಗೆ ವರ್ಷಕ್ಕೊಮ್ಮೆ ದಾಖಲೆ ಬರೆಯಬೇಕು. ಅದು ಬೇರೆಯವರ ದಾಖಲೆ ಮುರಿಯುವುದಾದರೂ ಸರಿ, ತನ್ನ ದಾಖಲೆಯನ್ನೇ ಉತ್ತಮಗೊಳಿಸಿಕೊಳ್ಳುವುದಾದರೂ ಸರಿ.
ಇಷ್ಟಾಗಿಯೂ ಅವಳಿಗಾಗಲಿ, ಪ್ರೋತ್ಸಾಹಿಸುವ ಅವಳ ತಂದೆ ಉದಯ್ ಕುಮಾರ್, ತಾಯಿ ಸಂಧ್ಯಾ ಅವರಿಗಾಗಲಿ, ದಾಖಲೆಯ ಅಹಂಕಾರ ತಲೆಯ ಮೇಲೆ ಹತ್ತಿ ಕುಳಿತುಕೊಳ್ಳಲಿಲ್ಲ. ಅವರೆಲ್ಲ ಇಂದಿಗೂ ವಿಧೇಯರಾಗಿಯೇ, ಭೂಮಿಯ ಮೇಲೇ ಇzರೆ. ಅದು ಇನ್ನೂ ಹೆಚ್ಚಿನ ಸಂತೋಷ. ಜತೆಗೆ, ನಾಗರಾಜ ವರ್ಕಾಡಿ, ರಾಘವೇಂದ್ರ ದೇವಾಡಿಗರಂಥವರು ಸಹಾಯಕ್ಕೆ ನಿಂತಿರುವುದೂ ಶ್ಲಾಘನೀಯ.
ಕಾರ್ಯಕ್ರಮ ಮುಗಿಯುವ ಹೊತ್ತಿಗೆ ನನಗನಿಸಿದ್ದು ಏನು ಗೊತ್ತೇ? ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೋ ಯಾರಿಗೋ ಬೈದವರು, ಒಂದು ಹಾಡು, ಒಂದು ನೃತ್ಯವನ್ನು ರೀಲ್ಸ್ ಮಾಡಿ ವೈರಲ್ ಆದವರು, ಹುಚ್ಚಾಪಟ್ಟೆ ಮಾತಾಡಿ ಜನರಿಂದ ಛೀ... ಥೂ... ಎಂದು ಉಗಿಸಿ ಕೊಂಡವರು, ಅತಿ ಕಮ್ಮಿ ಬಟ್ಟೆ ತೊಟ್ಟು ರಸ್ತೆಯಲ್ಲಿ ನಡೆದವರು, ತಲೆಕೆಟ್ಟವರಂತೆ ವರ್ತನೆ ಮಾಡುವವರು ಇತ್ಯಾದಿ ಇತ್ಯಾದಿಗಳೆಲ್ಲ ಬಿಗ್ ಬಾಸ್‌ನಂಥ ಕಾರ್ಯಕ್ರಮ ಅಥವಾ ಇನ್ಯಾವುದೋ ರಿಯಾಲಿಟಿ ಶೋಗಳಿಗೆ ಪ್ರವೇಶ ಪಡೆಯುತ್ತಾರೆ.
ತಿಂಗಳುಗಟ್ಟಲೆ ಒಂದು ಮನೆಯಲ್ಲಿ ಕುಳಿತರೂ ಇವರಿಗೆ ಜಗಳವೇ ಜೀವಾಳ, ಬೈಗುಳವೇ ಬಂಡವಾಳ, ಬಿಟ್ಟರೆ ಇನ್ನೇನೂ ಇಲ್ಲ. ಕಾಲು ಕೆರೆದು ಜಗಳ ಮಾಡಿಕೊಳ್ಳುತ್ತಾ ಕಾಲ ಕಳೆಯುತ್ತಾರೆ. ಜನರೂ ಅದನ್ನು ಹುಚ್ಚರಂತೆ ನೋಡುತ್ತಾರೆ. ಇಂಥ ಮನೆಗೆ ನಿಜವಾದ ಸಾಧಕರು ಯಾಕೆ ಬರುವುದಿಲ್ಲ? ತನುಶ್ರೀ ಒಬ್ಬಳೇ ಅಂತಲ್ಲ, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರು ನಮ್ಮಲ್ಲಿದ್ದಾರೆ.
ಅಂಥವರಿಗೆಲ್ಲ ‘ದೊಡ್ಡೊಡೆ ಯನ ಮನೆ’ (ದಡ್ಡ ಒಡೆಯನ ಮನೆ!)ಯಲ್ಲಿ ಜಾಗವೂ ಇಲ್ಲ, ಪ್ರವೇಶವೂ ಇಲ್ಲ ಏಕೆ? ಏಕೆಂದರೆ ಇಂಥವರಿಗೆ ದೇಹವನ್ನು ಹುರಿಗೊಳಿಸುವುದು ಗೊತ್ತು ಬಿಟ್ಟರೆ ನಾಲಿಗೆಯನ್ನು ಹರಿತಗೊಳಿಸುವುದು ಗೊತ್ತಿಲ್ಲ. ರಿಯಾಲಿಟಿ ಶೋಗಳು ಎಂದು ಹೇಳಿಕೊಳ್ಳುವ ಮನೆಯಲ್ಲಿ ಪ್ರತಿನಿತ್ಯ ಯೋಗ ಮಾಡಿದರೆ ನೋಡುವವರಾದರೂ ಯಾರು? ಅಲ್ಲಿ ದೇಹ ಮತ್ತು ಮನಸ್ಸು ಸರಿ ಇರುವವರಿಗಿಂತ, ಸರಿ ಇಲ್ಲದವರಿಗೇ ಹೆಚ್ಚಿನ ಪ್ರಾಶಸ್ತ್ಯ ಎಂದು ಅನಿಸುವುದಿಲ್ಲವೇ? ನನಗೆ ಖುಷಿ ಮತ್ತು ಸಮಾಧಾನವಾದದ್ದು ಯಾಕೆಂದರೆ, ಇಂಥ ಶೋಗಳ ಅಬ್ಬರದ ಮಧ್ಯ ದಲ್ಲಿಯೂ ತನುಶ್ರೀಯಂಥ ಯುವಕ-ಯುವತಿಯರು, ಬಾಲಕ-ಬಾಲಕಿಯರು ಇನ್ನೂ ಯೋಗ ಭ್ಯಾಸ, ಧ್ಯಾನ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಗಾಯನ ಮೊದಲಾದವುಗಳ ಕಡೆಗೆ ತಮ್ಮ ಶ್ರದ್ಧೆ ಯನ್ನು ಕೇಂದ್ರೀಕರಿಸಿದ್ದಾರೆ.
ನೃತ್ಯವಾಗಲಿ, ದೇಹ ದಂಡಿಸುವ ಯೋಗವಾಗಲಿ, ಇವುಗಳ ಕಡೆ ಅಪಾರ ಶ್ರದ್ಧೆ ಇಲ್ಲದಿದ್ದರೆ ಸಾಧನೆ ಮತ್ತು ಪ್ರತಿಫಲ ಎರಡೂ ದುಸ್ತರ. ಸುಲಭವಾದದ್ದರ ಕಡೆಗೆ ಮನುಷ್ಯನ ಮನಸ್ಸು ಹೊರಳುವುದು ಸಹಜ.
ಕಷ್ಟವನ್ನು ಯಾರು ತಾನೇ ಮೈಮೇಲೆ ಎಳಿದುಕೊಳ್ಳಲು ಇಷ್ಟಪಡುತ್ತಾರೆ ಹೇಳಿ? ಆದರೆ ಕಷ್ಟದ ಕೊನೆಯಂದು ಸುಖವಿದೆ, ಆನಂದವಿದೆ ಎಂದು ಅರಿತವನು ಮಾತ್ರ ಮೊದಲು ಕಷ್ಟಪಡಲು ಇಷ್ಟಪಡುತ್ತಾನೆ. ಮೊದಲಿನಿಂದಲೇ ಸುಖವಾಗಿ ಬಯಸಲು ಶಾರ್ಟ್ ಕಟ್ ಹಿಡಿಯುವವರಿಗೆ ಸಿದ್ಧಿಯಂತೂ ಲಭಿಸುವುದಿಲ್ಲ, ಪ್ರಸಿದ್ಧಿ ಕೂಡ ಕಟ್ ಶಾರ್ಟ್ ಆಗಿಯೇ ಇರುತ್ತದೆ.
ಒಂದಂತೂ ಸತ್ಯ, ಶಾಸಬದ್ಧವಾಗಿ ನಾವು ಏನನ್ನೇ ಕಲಿಯಬೇಕೆಂದರೂ ಕಠಿಣ ಪರಿಶ್ರಮ ಬೇಕೇ ಬೇಕು. ಸಿದ್ಧಿಸಲು ಬಹಳ ಶ್ರಮವಹಿಸಬೇಕು, ಅದಕ್ಕೆ ಬಹಳ ಸಮಯವೇ ಬೇಕು. ಆದರೆ ಅದರಿಂದ ಸಿಗುವ ಆನಂದವೂ ಅಷ್ಟೇ ವಿಸ್ತಾರದ್ದಾಗಿರುತ್ತದೆ. ಕ್ಷಣಮಾತ್ರದಲ್ಲಿ ಸಿದ್ಧಿಸಿದ ಪ್ರಸಿದ್ಧಿ ಅಷ್ಟೇ ಮೊಟುಕೂ ಆಗಿರುತ್ತದೆ.
ಕೊನೆಯದಾಗಿ, ಅಲ್ಲ, ಮೊದಲನೆಯದಾಗಿ ತನುಶ್ರೀ ತೋರಿಸಿದ ಮುನ್ನೂರ ಮೂವತ್ತಮೂರು ಆಸನ ಬಿಡಿ, ನಮ್ಮಲ್ಲಿ ಎಷ್ಟು ಜನರಿಗೆ ಮೂವತ್ತ ಮೂರು ಆಸನದ ಹೆಸರು ಥಟ್ಟನೆ ಹೇಳಲು ಬರುತ್ತದೆ ಎಂದು ಎದೆಯ ಮೇಲೆ ಕೈ ಇಟ್ಟುಕೊಂಡು ಪ್ರಾಮಾಣಿಕವಾಗಿ ಹೇಳಿ.
ಇನ್ನೊಂದು, ಆಕೆ ಮಾಡಿದಂತೆ ಹತ್ತು ವಿಶ್ವ ದಾಖಲೆ ಬೇಡ, ಕೊನೇ ಪಕ್ಷ, ಪ್ರತಿನಿತ್ಯ ಕನಿಷ್ಠ ಹತ್ತು ಆಸನಗಳನ್ನಾದರೂ ಹಾಕುವ ಪಣವನ್ನು ತೊಡೋಣ. ಒಂದು ಸೂರ್ಯ ನಮಸ್ಕಾರದಲ್ಲಿ ಎಂಟು ಬಗೆಯ ಆಸನಗಳಿವೆ. ಎಲ್ಲರಿಗೂ ಪ್ರಿಯವಾದ ಶವಾಸನವಂತೂ ಇದ್ದೇ ಇದೆ.
ಅನೇಕರು ‘ನನಗೆ ಶವಾಸನ ಒಂದು ಬರುತ್ತದೆ’ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ನಿಜವಾಗಿ ನೋಡಿದರೆ ಶವಾಸನಕ್ಕೂ ಒಂದು ಕ್ರಮವಿದೆ, ನಿಯಮವಿದೆ. ನಾವು ಆ ನಿಯಮವನ್ನೂ ಸರಿಯಾಗಿ ಪಾಲಿಸುವುದಿಲ್ಲ. ಕೊನೇ ಪಕ್ಷ ಅದನ್ನಾದರೂ ನಿಯಮಬದ್ಧವಾಗಿ ಮಾಡಿದರೆ ಅಷ್ಟೇ ಸಾಕು ಎಂದೆ ನಿಸುತ್ತದೆ. ಈಗಾಗಲೇ ಸುಮಾರು ಮೂವತ್ತೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ- ವಿದ್ಯಾರ್ಥಿನಿಯ ರಿಗೆ ಪ್ರೇರಣೆಯ ಮಾತುಗಳನ್ನಾ ಡಿರುವ ತನುಶ್ರೀ ಯಂಥವರು ಹಿರಿಯರಿಗೂ ಮಾದರಿಯಾಗಲಿ. ಯೋಗಾಸಕ್ತರಿಗೆ ಸ್ಪೂರ್ತಿಯ ಸೆಲೆಯಾಗಲಿ...