ಇದೇ ಅಂತರಂಗ ಸುದ್ದಿ
ಒಮಾನ್ ದೇಶದ ರಾಜಧಾನಿ ಮಸ್ಕತ್‌ನಲ್ಲಿರುವ ಯಾರೇ ಕನ್ನಡಿಗರ ಜತೆ ಮಾತಾಡಿ, ಅವರು ದಿವಂಗತ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಬಗ್ಗೆ ಅಭಿಮಾನದಿಂದ ಮಾತಾಡುತ್ತಾರೆ. ಅವರ ಬಗ್ಗೆ ಹತ್ತಾರು ಕಥೆ, ಪ್ರಸಂಗಗಳನ್ನು ಹೇಳುತ್ತಾರೆ. ಅಷ್ಟೇ ಅಲ್ಲ, ಯಾವ ಕನ್ನಡಿಗರ ಮನೆ ಗಳಿಗೆ ಹೋದರೂ, ಪ್ರವೇಶ ದ್ವಾರದಲ್ಲಿ ಸುಲ್ತಾನ್ ಕಬೂಸ್ ಅವರ ದೊಡ್ಡ ಭಾವಚಿತ್ರವನ್ನು ಕಾಣಬಹುದು. ಅವರು ಬದುಕಿದ್ದಾಗ ಮತ್ತು ನಂತರ ಒಮಾನಿನ ಜನ ಅವರನ್ನು ದೇವರಂತೆ ಕಂಡಿದ್ದು ಸುಳ್ಳಲ್ಲ.
ಸುಲ್ತಾನ ಕಬೂಸ್ ಕೇವಲ ಒಬ್ಬ ರಾಜನಾಗಿರಲಿಲ್ಲ, ಅವರು ಆಧುನಿಕ ಒಮಾನ್‌ನ ಶಿಲ್ಪಿ. ಅರಬ್ ಜಗತ್ತಿನಲ್ಲಿ ಅತಿ ಹೆಚ್ಚು ಕಾಲ ಅಂದರೆ ಸುಮಾರು 50 ವರ್ಷಗಳ ಕಾಲ ಆಳ್ವಿಕೆ ನಡೆಸಿದ ನಾಯಕ ಎಂಬ ಹೆಗ್ಗಳಿಕೆ ಇವರದ್ದು. 2020ರಲ್ಲಿ ಅವರು ನಿಧನರಾದಾಗ, ಇಡೀ ದೇಶವೇ ಕಣ್ಣೀರು ಹಾಕಿತ್ತು. ಜಗತ್ತಿನ ಎಲ್ಲ ದೇಶಗಳ ನಾಯಕರೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದು ವಿಶೇಷ ವಾಗಿತ್ತು.
ಇದಕ್ಕೆ ಕಾರಣ ಅವರ ವ್ಯಕ್ತಿತ್ವ ಮತ್ತು ಅವರು ಸಾಮ್ರಾಜ್ಯ ಕಟ್ಟಿದ ರೀತಿ. ಸಾಮಾನ್ಯವಾಗಿ ಅರಬ್ ಶೇಖ್ ಎಂದರೆ ತೈಲ ಬಾವಿ, ಚಿನ್ನದ ಕಾರುಗಳು, ವೈಭವೋಪೇತ ಜೀವನ ಎಂದು ನಾವು ಅಂದು ಕೊಳ್ಳುತ್ತೇವೆ. ಆದರೆ ಸುಲ್ತಾನ್ ಕಬೂಸ್ ಇವೆಲ್ಲಕ್ಕಿಂತ ಭಿನ್ನವಾಗಿದ್ದರು. ಅವರು ಶಾಂತಿಪ್ರಿಯರು, ಸಂಗೀತ ಆರಾಧಕರು, ವಿಶಿಷ್ಟ ಚಿಂತನೆಯುಳ್ಳವರಾಗಿದ್ದರು. ಅವರು ಭಾರತಕ್ಕೆ ಅತ್ಯಾಪ್ತ ರಾಗಿದ್ದರು.
ಇದನ್ನೂ ಓದಿ: Vishweshwar Bhat Column: ಸಿಡ್ನಿ-ಲಂಡನ್ ಇಪ್ಪತ್ತೆರಡು ಗಂಟೆಗಳ ನೇರ ವಿಮಾನ ಪ್ರಯಾಣ ಹೇಗಿರಬಹುದು ?
ಸುಲ್ತಾನ್ ಕಬೂಸ್ ಅವರಿಗೆ ಭಾರತದ ಬಗ್ಗೆ ವಿಶೇಷವಾದ ಪ್ರೀತಿ ಇತ್ತು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಅವರ ಆರಂಭಿಕ ಶಿಕ್ಷಣ ನಡೆದದ್ದೇ ಭಾರತದಲ್ಲಿ. ಕಬೂಸ್ ಅವರು ಪುಣೆಯ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅಚ್ಚರಿಯ ಸಂಗತಿಯೆಂದರೆ, ಭಾರತದ ಮಾಜಿ ರಾಷ್ಟ್ರಪತಿ ಡಾ.ಶಂಕರ್ ದಯಾಳ್ ಶರ್ಮಾ ಅವರು ಪುಣೆಯಲ್ಲಿ ಕಬೂಸ್ ಅವರಿಗೆ ಪಾಠ ಹೇಳಿ ಕೊಟ್ಟ ಗುರುಗಳಾಗಿದ್ದರು!
ಕಬೂಸ್ ಅವರು ಸುಲ್ತಾನ್ ಆದ ನಂತರ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಶಂಕರ್ ದಯಾಳ್ ಶರ್ಮಾ ಅವರು ಭಾರತದ ರಾಷ್ಟ್ರಪತಿಯಾಗಿದ್ದರು. ವಿಮಾನ ನಿಲ್ದಾಣದಲ್ಲಿ ಪ್ರೋಟೋ ಕಾಲ್ (ಶಿಷ್ಟಾಚಾರ) ಪ್ರಕಾರ, ರಾಷ್ಟ್ರಪತಿಗಳು ಯಾರನ್ನೂ ಬರಮಾಡಿಕೊಳ್ಳಲು ಹೋಗುವುದಿಲ್ಲ. ಆದರೆ, ತನ್ನ ಶಿಷ್ಯ ಬರುತ್ತಿದ್ದಾನೆ ಎಂದು ತಿಳಿದ ಶರ್ಮಾ ಅವರು ನಿಯಮ ಮುರಿದು ವಿಮಾನದ ಬಾಗಿಲವರೆಗೂ ಹೋದರು.
ಇದನ್ನು ಕಂಡ ಸುಲ್ತಾನ್ ಕಬೂಸ್, ತಾನು ರಾಜನೆಂಬುದನ್ನೂ ಮರೆತು, ಶರ್ಮಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಇದು ಭಾರತೀಯ ಸಂಸ್ಕೃತಿಯ ಮೇಲಿನ ಅವರ ಗೌರವಕ್ಕೆ ಸಾಕ್ಷಿ. ಅದೇ ರೀತಿ ಡಾ.ಶರ್ಮಾ ಅವರು ಒಮಾನಿಗೆ ಭೇಟಿ ನೀಡಿದಾಗ, ವಿಮಾನ ನಿಲ್ದಾಣಕ್ಕೆ ಹೋಗಿ ತಮ್ಮ ಗುರು ವನ್ನು ಸುಲ್ತಾನ್ ಕಬೂಸ್ ಬರಮಾಡಿಕೊಂಡಿದ್ದರು.
ವಿಮಾನ ನಿಲ್ದಾಣದಿಂದ ಖುದ್ದಾಗಿ ತಾವೇ ಕಾರನ್ನು ಡ್ರೈವ್ ಮಾಡಿಕೊಂಡು ಡಾ.ಶರ್ಮಾ ಅವರನ್ನು ತಮ್ಮ ಅರಮನೆಗೆ ಕರೆದುಕೊಂಡು ಬಂದಿದ್ದರು. ಇಂದು ನಾವು ನೋಡುವ ಒಮಾನ್ ಸುಂದರ ರಸ್ತೆಗಳು, ಕಟ್ಟಡಗಳಿಂದ ಕೂಡಿದೆ. ಆದರೆ 1970ರಲ್ಲಿ ಕಬೂಸ್ ಅವರು ಅಧಿಕಾರಕ್ಕೆ ಬರುವ ಮೊದಲು ಒಮಾನ್ ಸ್ಥಿತಿ ಮಧ್ಯಕಾಲೀನ ಯುಗದಂತಿತ್ತು.
ಅವರ ತಂದೆ ಸೈದ್ ಬಿನ್ ತೈಮೂರ್ ಅವರ ಆಳ್ವಿಕೆ ಅತ್ಯಂತ ಕಠೋರವಾಗಿತ್ತು. ಆಗ ಇಡೀ ಒಮಾನ್ ದೇಶದಲ್ಲಿ ಇದ್ದದ್ದು ಕೇವಲ ಮೂರು ಸರಕಾರಿ ಶಾಲೆಗಳು! ಇಡೀ ದೇಶದಲ್ಲಿ ಇದ್ದ ಡಾಂಬರು ರಸ್ತೆ ಕೇವಲ 10 ಕಿಮೀ ಮಾತ್ರ-
ಅದು ಮಸ್ಕತ್ʼನಿಂದ ಅರಮನೆಗೆ ಹೋಗುವ ದಾರಿ. ದೇಶದಲ್ಲಿ ರೇಡಿಯೋ ಕೇಳುವುದು, ಸನ್ ಗ್ಲಾಸ್ ಧರಿಸುವುದು ನಿಷೇಧವಾಗಿತ್ತು. ರಾತ್ರಿ ವೇಳೆ ಕತ್ತಲಾದ ಮೇಲೆ ನಗರದ ಗೇಟುಗಳನ್ನು ಮುಚ್ಚ ಲಾಗುತ್ತಿತ್ತು. ವಿದ್ಯುತ್ ಪೂರೈಕೆ ಕೇವಲ ಕೆಲವೇ ಶ್ರೀಮಂತರ ಮನೆಗಳಲ್ಲಿತ್ತು. ಒಮಾನ್ ಅನ್ನು ‘ಕತ್ತಲ ದೇಶ’ ಎಂದೇ ಕರೆಯುತ್ತಿದ್ದರು.
ತಮ್ಮ ತಂದೆಯ ಆಳ್ವಿಕೆಯಲ್ಲಿ ದೇಶದ ಪ್ರಗತಿ ಕುಂಠಿತವಾಗುತ್ತಿರುವುದನ್ನು ಕಂಡ ಸುಲ್ತಾನ್ ಕಬೂಸ್, 1970ರಲ್ಲಿ ಬ್ರಿಟಿಷರ ಸಹಾಯದೊಂದಿಗೆ ಒಂದು ‘ರಕ್ತರಹಿತ ಕ್ರಾಂತಿ’ ನಡೆಸಿದರು. ತಂದೆ ಯನ್ನು ಅಧಿಕಾರದಿಂದ ಕೆಳಗಿಳಿಸಿ, ದೇಶದ ಚುಕ್ಕಾಣಿ ಹಿಡಿದರು. ಅಂದು ಅವರು ರೇಡಿಯೋ ಮೂಲಕ ದೇಶವಾಸಿಗಳಿಗೆ ಹೇಳಿದ್ದು ಇಷ್ಟೇ: “ನನ್ನ ಜನರೇ, ನಾನು ನಿಮಗೆ ಹೊಸ ಕನಸನ್ನು ಸಾಕಾರ ಮಾಡಿ ತೋರಿಸುತ್ತೇನೆ, ಹೊಸ ಯುಗವನ್ನು ನೀಡುತ್ತೇನೆ".
ಅಕ್ಷರಶಃ ಅವರು ನುಡಿದಂತೆ ನಡೆದರು. ಮೂರೇ ಶಾಲೆಗಳಿದ್ದ ದೇಶದಲ್ಲಿ ಸಾವಿರಾರು ಶಾಲೆಗಳನ್ನು ತೆರೆದರು. ಹತ್ತು ಕಿಮೀ ರಸ್ತೆಯಿದ್ದ ದೇಶದಲ್ಲಿ ಹೈವೇಗಳ ಜಾಲವನ್ನೇ ನಿರ್ಮಿಸಿದರು. ತೈಲ ಸಂಪತ್ತನ್ನು ಸಂಪೂರ್ಣವಾಗಿ ದೇಶದ ಅಭಿವೃದ್ಧಿಗೆ ಬಳಸಿದರು. ಅರಬ್ ರಾಷ್ಟ್ರಗಳಲ್ಲಿ ಸದಾ ಒಂದಿಂದು ಯುದ್ಧ, ಜಗಳಗಳು ಇದ್ದೇ ಇರುತ್ತಿತ್ತು. ಆದರೆ ಸುಲ್ತಾನ್ ಕಬೂಸ್ ಅವರ ವಿದೇಶಾಂಗ ನೀತಿ ಬಹಳ ವಿಶಿಷ್ಟವಾಗಿತ್ತು.
ಅವರ ನೀತಿಯ ಹೆಸರು- ‘ಎಲ್ಲರೊಂದಿಗೂ ಸ್ನೇಹ, ಯಾರೊಂದಿಗೂ ದ್ವೇಷವಿಲ್ಲ’ (Friend to all, enemy to none). ಅಮೆರಿಕ ಮತ್ತು ಇರಾನ್ ಎರಡೂ ಬದ್ಧ ವೈರಿಗಳು. ಆದರೆ ಈ ಎರಡೂ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಏಕೈಕ ನಾಯಕ ಅಂದ್ರೆ ಕಬೂಸ್. ಅಮೆರಿಕದ ಒತ್ತೆಯಾಳು ಗಳು ಇರಾನ್‌ನಲ್ಲಿ ಸಿಕ್ಕಿಹಾಕಿಕೊಂಡಾಗ, ಅವರನ್ನು ಬಿಡುಗಡೆಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದು ಇದೇ ಸುಲ್ತಾನ್ ಕಬೂಸ್.
ಅರಬ್ ಜಗತ್ತಿನಲ್ಲಿ ಒಮಾನ್ ಅನ್ನು ‘ಸ್ವಿಜರ್ಲೆಂಡ್’ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ತಟಸ್ಥ ನೀತಿಯನ್ನು ಅನುಸರಿಸುತ್ತದೆ. ಒಮಾನ್ ಯಾರೊಂದಿಗೂ ಕಾದಾಡುವುದಿಲ್ಲ. ಯಾರ ಜತೆಗೂ ತಕರಾರು ಇಲ್ಲ. ಇದ್ದರೆ ಪ್ರೀತಿ-ವಿಶ್ವಾಸ ಮಾತ್ರ.
ಸಾಮಾನ್ಯವಾಗಿ ಅರಬ್ ರಾಜರು ಒಂಟೆ ಓಟ ಅಥವಾ ಗಿಡುಗಗಳ (ಫಾಲ್ಕನ್) ಮೇಲೆ ಆಸಕ್ತಿ ಹೊಂದಿರುತ್ತಾರೆ. ಆದರೆ ಸುಲ್ತಾನ್ ಕಬೂಸ್ ಅವರಿಗೆ ‘ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ’ ಅಂದರೆ ಪಂಚಪ್ರಾಣ. ಅವರು ಸ್ವತಃ ಉತ್ತಮ ಆರ್ಗನ್ ವಾದಕರಾಗಿದ್ದರು. ಮಸ್ಕತ್ ನಗರದಲ್ಲಿ ಅವರು ‘ರಾಯಲ್ ಒಪೇರಾ ಹೌಸ್’ ನಿರ್ಮಿಸಿದರು.
ಇದು ಇಡೀ ಮಧ್ಯಪ್ರಾಚ್ಯದಲ್ಲಿಯೇ ಅತ್ಯಂತ ಸುಂದರ ಮತ್ತು ಏಕೈಕ ಒಪೇರಾ ಹೌಸ್ ಎನಿಸಿ ಕೊಂಡಿದೆ. ಅವರು ‘ರಾಯಲ್ ಒಮಾನ್ ಸಿಂಫನಿ ಆರ್ಕೆಸ್ಟ್ರಾ’ವನ್ನು ಸ್ಥಾಪಿಸಿದರು. ಇದರ ವಿಶೇಷ ವೇನೆಂದರೆ, ಇದರಲ್ಲಿರುವ ಎಲ್ಲ ವಾದಕರೂ ಒಮಾನ್ ದೇಶದವರೇ ಆಗಿರಬೇಕು ಎಂಬ ನಿಯಮ ಮಾಡಿದರು. ಇದಕ್ಕಾಗಿ ಯುವಕರಿಗೆ ವಿದೇಶದಿಂದ ತಜ್ಞರನ್ನು ಕರೆಸಿ ತರಬೇತಿ ಕೊಡಿಸಿದರು.
ಸುಲ್ತಾನ್ ಕಬೂಸ್ ಅವರಿಗೆ ಸುಗಂಧ ದ್ರವ್ಯಗಳೆಂದರೆ ಎಲ್ಲಿಲ್ಲದ ಪ್ರೀತಿ. ಜಗತ್ತಿನ ಅತ್ಯುತ್ತಮ ಸುಗಂಧ ದ್ರವ್ಯ ತಮ್ಮ ದೇಶದಿಂದಲೇ ಬರಬೇಕು ಎಂದು ಅವರು ಬಯಸಿದರು. 1983ರಲ್ಲಿ ಅವರು ‘ಅಮುವಾಜ್’ ಎಂಬ ಪರ್ಫ್ಯೂಮ್ ಬ್ರಾಂಡ್ ಅನ್ನು ಸ್ಥಾಪಿಸಿದರು. ಇದನ್ನು ‘ದಿ ಗಿಫ್ಟ್ ಆಫ್ ಕಿಂಗ್ಸ್’ ಎಂದು ಕರೆಯಲಾಗುತ್ತದೆ.
ಒಮಾನ್‌ನಲ್ಲಿ ದೊರೆಯುವ ಬೆಲೆಬಾಳುವ ಸಾಂಬ್ರಾಣಿ ಮತ್ತು ವಿಶೇಷ ಹೂವುಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಪರ್ಫ್ಯೂಮ್‌ಗಳಲ್ಲಿ ಇದೂ ಒಂದು. ಆರಂಭದಲ್ಲಿ ಇದನ್ನು ಕೇವಲ ರಾಜರು ತಮ್ಮ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲು ತಯಾರಿ ಸುತ್ತಿದ್ದರು, ನಂತರ ಇದು ಮಾರುಕಟ್ಟೆಗೆ ಬಂತು.
ಸುಲ್ತಾನ್ ಕಬೂಸ್ ಅವರ ವೈಯಕ್ತಿಕ ಜೀವನವೂ ನಿಗೂಢವಾಗಿತ್ತು. ಅವರು 1976ರಲ್ಲಿ ತಮ್ಮ ಸಂಬಂಧಿಯನ್ನೇ ಮದುವೆಯಾಗಿದ್ದರು. ಆದರೆ ಮೂರೇ ವರ್ಷದಲ್ಲಿ ಆ ಮದುವೆ ವಿಚ್ಛೇದನದಲ್ಲಿ ಅಂತ್ಯವಾಯಿತು. ಆನಂತರ ಅವರು ಮದುವೆಯಾಗಲಿಲ್ಲ ಮತ್ತು ಅವರಿಗೆ ಮಕ್ಕಳಿರಲಿಲ್ಲ. ಒಬ್ಬ ರಾಜನಿಗೆ ಮಕ್ಕಳಿಲ್ಲದಿದ್ದರೆ ಮುಂದಿನ ರಾಜ ಯಾರು ಎಂಬ ಪ್ರಶ್ನೆ ಬರುವುದು ಸಹಜ. ಆದರೆ ಕಬೂಸ್ ಈ ಬಗ್ಗೆ ಬಹಿರಂಗವಾಗಿ ಯಾರ ಹೆಸರನ್ನೂ ಹೇಳಿರಲಿಲ್ಲ. ಇದು ದೇಶದಲ್ಲಿ ಗೊಂದಲ ಉಂಟುಮಾಡಬಹುದೇ ಎಂಬ ಆತಂಕವಿತ್ತು.
ಆದರೆ ಸುಲ್ತಾನರು ಬಹಳ ಬುದ್ಧಿವಂತಿಕೆಯಿಂದ ಒಂದು ವ್ಯವಸ್ಥೆ ಮಾಡಿದ್ದರು. ಸುಲ್ತಾನ್ ಕಬೂಸ್ ತೀರಿಕೊಂಡ ನಂತರ ಮುಂದಿನ ರಾಜ ಯಾರಾಗಬೇಕು ಎಂಬುದನ್ನು ಅವರು ನಿರ್ಧರಿಸಿದ್ದರು, ಆದರೆ ಅದನ್ನು ಯಾರಿಗೂ ಹೇಳಿರಲಿಲ್ಲ! ಅವರು ಎರಡು ಪ್ರತ್ಯೇಕ ಲಕೋಟೆಗಳಲ್ಲಿ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಬರೆದಿಟ್ಟಿದ್ದರು.
ಒಂದು ಮಸ್ಕತ್‌ನಲ್ಲಿ ಮತ್ತು ಇನ್ನೊಂದು ಸಲಾಲಾ ಅರಮನೆಯಲ್ಲಿ. ನಿಯಮದ ಪ್ರಕಾರ, ರಾಜ ಕುಟುಂಬದ ಹಿರಿಯರು ಸೇರಿ ಮೂರು ದಿನಗಳಲ್ಲಿ ಹೊಸ ರಾಜನನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಅವರಿಗೆ ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದರೆ ಮಾತ್ರ ಸುಲ್ತಾನರು ಬರೆದಿಟ್ಟ ಲಕೋಟೆ ಯನ್ನು ತೆರೆಯಬೇಕು ಎಂದು ಆದೇಶವಿತ್ತು.
ಆದರೆ, ಸುಲ್ತಾನ್ ಕಬೂಸ್ ಮೇಲಿದ್ದ ಅಪಾರ ಗೌರವದಿಂದ, ಅವರು ತೀರಿಕೊಂಡ ತಕ್ಷಣ ರಾಜ ಕುಟುಂಬದವರು ಸಭೆ ನಡೆಸಿ, ‘ನಾವು ಯಾರನ್ನೂ ಆಯ್ಕೆ ಮಾಡುವುದಿಲ್ಲ, ಸುಲ್ತಾನರ ಆಯ್ಕೆಯೇ ಅಂತಿಮ’ ಎಂದು ನಿರ್ಧರಿಸಿ ಲಕೋಟೆಯನ್ನು ತೆರೆದರು. ಅದರಲ್ಲಿ ಅವರ ದಾಯಾದಿ ಸಹೋದರ ಹೈದಮ್ ಬಿನ್ ತಾರಿಕ್ ಅವರ ಹೆಸರಿತ್ತು. ಹೀಗೆ ಅತ್ಯಂತ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ವಾಯಿತು.
ಒಮಾನ್ ದೇಶವು ಗಲ್ಫ್ ರಾಷ್ಟ್ರಗಳ ಅತ್ಯಂತ ಸ್ವಚ್ಛವಾದ ದೇಶ ಎಂದು ಹೆಸರುವಾಸಿಯಾಗಿದೆ. ಇದಕ್ಕೆ ಕಾರಣ ಸುಲ್ತಾನ್ ಕಬೂಸ್ ಅವರ ಕಟ್ಟುನಿಟ್ಟಿನ ನಿಯಮಗಳು. ಒಮಾನ್‌ನಲ್ಲಿ ಕಾರುಗಳು ಗಲೀಜಾಗಿದ್ದರೆ ಪೊಲೀಸರು ದಂಡ ಹಾಕುತ್ತಾರೆ!
ಇದು ಸುಲ್ತಾನರ ಆದೇಶವಾಗಿತ್ತು. ನಗರ ನೋಡಲು ಸುಂದರವಾಗಿ ಕಾಣಬೇಕು ಎಂಬುದು ಅವರ ಹಂಬಲ. ಅವರು ಸ್ವತಃ ತಮ್ಮ ಕಾರನ್ನು ಚಲಾಯಿಸಿಕೊಂಡು ದೇಶದ ಮೂಲೆ ಮೂಲೆಗೆ ಹೋಗು ತ್ತಿದ್ದರು. ಇದನ್ನು ‘ಮೀಟ್ ದಿ ಪೀಪಲ್’ (ಜನಸಂಪರ್ಕ) ಪ್ರವಾಸ ಎನ್ನಲಾಗುತ್ತಿತ್ತು. ಹಳ್ಳಿಯ ಸಾಮಾನ್ಯ ಜನರ ಬಳಿ ಕುಳಿತು ಅವರ ಕಷ್ಟಗಳನ್ನು ಆಲಿಸುತ್ತಿದ್ದರು.
ಸುಲ್ತಾನ್ ಕಬೂಸ್ ಕೇವಲ ಒಬ್ಬ ಆಡಳಿತಗಾರನಾಗಿರಲಿಲ್ಲ, ಅವರು ಒಮಾನ್ ದೇಶದ ಪಾಲಿಗೆ ಒಬ್ಬ ತಂದೆಯಂತಿದ್ದರು. 50 ವರ್ಷಗಳ ಕಾಲ ಆಳ್ವಿಕೆ ನಡೆಸಿ, ಮಧ್ಯಕಾಲೀನ ಕತ್ತಲಲ್ಲಿದ್ದ ದೇಶ ವನ್ನು ಆಧುನಿಕ ಜಗತ್ತಿನ ಮುಂಚೂಣಿಗೆ ತಂದ ಅವರ ಸಾಧನೆ ಅಪ್ರತಿಮ. ಯುದ್ಧಗಳಿಂದ ಜರ್ಜರಿತವಾದ ಮಧ್ಯಪ್ರಾಚ್ಯದಲ್ಲಿ ಶಾಂತಿಯ ದ್ವೀಪದಂತೆ ಒಮಾನ್ ಅನ್ನು ರೂಪಿಸಿದ ಅವರ ಧೀಮಂತ ವ್ಯಕ್ತಿತ್ವ ಮತ್ತು ಚಾಕಚಕ್ಯತೆ ಇತಿಹಾಸದಲ್ಲಿ ಸದಾ ಹಸಿರಾಗಿರುತ್ತದೆ. ಭಾರತದೊಂದಿಗೆ ಅವರು ಹೊಂದಿದ್ದ ಆತ್ಮೀಯ ಸಂಬಂಧವಂತೂ ಎರಡು ದೇಶಗಳ ನಿರಂತರ ಸ್ನೇಹಕ್ಕೆ ಭದ್ರ ಬುನಾದಿ ಹಾಕಿದೆ.
ಪ್ರಾರ್ಥನಾ ಮಂದಿರವಲ್ಲ, ಕಲಾಕೃತಿ
ಸುಲ್ತಾನ್ ಕಬೂಸ್ ಅವರ ಜೀವನ ಒಂದು ತೆರೆದ ಪುಸ್ತಕವಿದ್ದಂತೆ, ಪುಟ ತಿರುಗಿಸಿದಷ್ಟು ಹೊಸ ಮತ್ತು ರೋಚಕ ಸಂಗತಿಗಳು ಸಿಗುತ್ತವೆ. ಮಸ್ಕತ್‌ನಲ್ಲಿರುವ ‘ಸುಲ್ತಾನ್ ಕಬೂಸ್ ಗ್ರಾಂಡ್ ಮಾಸ್ಕ್’ ಕೇವಲ ಪ್ರಾರ್ಥನಾ ಮಂದಿರವಲ್ಲ, ಅದೊಂದು ಕಲಾಕೃತಿ. ಇದನ್ನು ನಿರ್ಮಿಸುವಾಗ ಸುಲ್ತಾನರು ಜಗತ್ತಿನ ಅತ್ಯುತ್ತಮವಾದದ್ದೇ ಇಲ್ಲಿರಬೇಕು ಎಂದು ಬಯಸಿದ್ದರು. ಈ ಮಸೀದಿಯ ಪ್ರಮುಖ ಆಕರ್ಷಣೆ ಅಲ್ಲಿರುವ ನೆಲಹಾಸು.
ಇದನ್ನು ಇರಾನ್ ದೇಶದ 600 ಪರಿಣತ ನೇಕಾರರು ಸೇರಿ ಬರೋಬ್ಬರಿ 4 ವರ್ಷಗಳ ಕಾಲ ಕೈ ಯಿಂದಲೇ ನೇಯ್ದರು! ಇದು ಒಂದೇ ತುಂಡಿನ ಕಾರ್ಪೆಟ್ ಆಗಿದ್ದು, 21 ಟನ್ ತೂಕವಿತ್ತು. ಇತ್ತೀಚೆಗೆ ಅಬುಧಾಬಿಯ ಮಸೀದಿ ಇದನ್ನು ಮೀರಿಸುವವರೆಗೂ ಇದೇ ಜಗತ್ತಿನ ಅತಿದೊಡ್ಡ ಕಾರ್ಪೆಟ್ ಆಗಿತ್ತು. ಮಸೀದಿಯ ಮಧ್ಯಭಾಗದಲ್ಲಿ ತೂಗುಹಾಕಿರುವ ದೀಪಗುಚ್ಛವು 800 ಟನ್ ತೂಕವಿದೆ. ಇದರಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವರೋವ್ಸ್ಕಿ ಹರಳುಗಳನ್ನು ಬಳಸಲಾಗಿದೆ.
ಇತರೆ ಅರಬ್ ರಾಷ್ಟ್ರಗಳಲ್ಲಿ ಅನ್ಯ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ಅನುಮತಿ ಸಿಗುವುದು ಕಷ್ಟ. ಆದರೆ ಸುಲ್ತಾನ್ ಕಬೂಸ್, ಒಮಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಮತ್ತು ಇತರರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು.
ಮಸ್ಕತ್‌ನಲ್ಲಿರುವ ಪುರಾತನ ಶಿವನ ದೇವಾಲಯ ಮತ್ತು ಕೃಷ್ಣನ ದೇವಾಲಯಕ್ಕೆ ಸುಲ್ತಾನರು ರಕ್ಷಣೆ ನೀಡಿದ್ದರು. ಅಷ್ಟೇ ಅಲ್ಲ, ಕ್ರಿಶ್ಚಿಯನ್ ಚರ್ಚ್‌ಗಳನ್ನು ಕಟ್ಟಲು ಸರಕಾರದಿಂದಲೇ ಜಾಗ ವನ್ನು ಉಡುಗೊರೆಯಾಗಿ ನೀಡಿದ್ದರು. ಒಮ್ಮೆ ಮಸ್ಕತ್‌ಗೆ ಭೇಟಿ ನೀಡಿದ್ದ ಪೋಪ್ ಅವರು, ಸುಲ್ತಾನರ ಈ ಉದಾರ ಗುಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅವರು ವಿಲಾಸಿ ನೌಕೆ ಹೊಂದಿದ್ದರು!
ಸುಲ್ತಾನ್ ಕಬೂಸ್ ಅವರಿಗೆ ಸಮುದ್ರಯಾನ ಇಷ್ಟವಿದ್ದ ಕಾರಣ, ಅವರು ‘ಅಲ್ ಸೈದ್’ ಹೆಸರಿನ ಬೃಹತ್ ನೌಕೆಯನ್ನು (Yacht) ಹೊಂದಿದ್ದರು. ಇದು ಜಗತ್ತಿನ ಅತಿದೊಡ್ಡ ವಿಲಾಸಿ ನೌಕೆಗಳಲ್ಲಿ ಒಂದು. ಇದರ ವಿಶೇಷವೇನೆಂದರೆ, ಇದು ಕೇವಲ ಐಷಾರಾಮಿ ಹಡಗಲ್ಲ. ಇದರೊಳಗೆ ಒಂದು ದೊಡ್ಡ ಕನ್ಸರ್ಟ್ ಹಾಲ್ ಇದೆ!
50-60 ಜನ ಸಂಗೀತಗಾರರ ತಂಡ ಹಡಗಿನ ಒಳಗೆ ಕುಳಿತು ಲೈವ್ ಆಗಿ ಸಂಗೀತ ನುಡಿಸಬಲ್ಲಷ್ಟು ದೊಡ್ಡ ವೇದಿಕೆ ಇದರಲ್ಲಿದೆ. ಸುಲ್ತಾನರು ಸಮುದ್ರದ ಮಧ್ಯೆ ಪ್ರಯಾಣಿಸುವಾಗಲೂ ತಮ್ಮಿಷ್ಟದ ಶಾಸೀಯ ಸಂಗೀತವನ್ನು ಆನಂದಿಸುತ್ತಿದ್ದರು.
2007ರಲ್ಲಿ ‘ಗೋನು’ ಎಂಬ ಭೀಕರ ಚಂಡಮಾರುತ ಒಮಾನ್ ಕರಾವಳಿಗೆ ಅಪ್ಪಳಿಸಿತ್ತು. ಮಸ್ಕತ್ ನಗರವೇ ನೀರಿನಲ್ಲಿ ಮುಳುಗಿತ್ತು. ಆಗ ಸುಲ್ತಾನ್ ಕಬೂಸ್ ಅರಮನೆಯಲ್ಲಿ ಕೂರಲಿಲ್ಲ. ಅವರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಇಳಿದರು. ವಿಶೇಷವೆಂದರೆ, ಚಂಡಮಾರುತದಿಂದ ಆದ ನಷ್ಟವನ್ನು ಭರಿಸಲು ಅವರು ವಿದೇಶಗಳಿಂದ ಯಾವುದೇ ಆರ್ಥಿಕ ಸಹಾಯವನ್ನು ಪಡೆಯಲು ನಿರಾಕರಿಸಿ ದರು.
“ನನ್ನ ದೇಶದ ಜನರನ್ನು ರಕ್ಷಿಸುವ ಶಕ್ತಿ ನನಗಿದೆ" ಎಂದು ಹೇಳಿ, ಸ್ವಂತ ಬೊಕ್ಕಸದಿಂದಲೇ ಇಡೀ ನಗರವನ್ನು ಕೆಲವೇ ತಿಂಗಳುಗಳಲ್ಲಿ ಮರುನಿರ್ಮಿಸಿದರು. ಕಬೂಸ್ ಅವರು ರಾಜರಾಗಿದ್ದರೂ, ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದರು. ಅವರು ಮಸ್ಕತ್ ನಗರದಲ್ಲಿ ಕಾರಿನಲ್ಲಿ ಹೋಗು ವಾಗ, ಟ್ರಾಫಿಕ್ ಸಿಗ್ನಲ್ ಬಿದ್ದರೆ ತಮ್ಮ ಬೆಂಗಾವಲು ಪಡೆಯನ್ನೂ ನಿಲ್ಲಿಸುತ್ತಿದ್ದರು.
ಕೆಂಪು ದೀಪ ಹಸಿರಾಗುವವರೆಗೂ ರಾಜರ ಕಾರು ಸಾಮಾನ್ಯರ ಕಾರಿನಂತೆಯೇ ಕಾಯುತ್ತಿತ್ತು! ಇದು ಅಲ್ಲಿನ ಜನರಿಗೆ ಅವರ ಮೇಲಿದ್ದ ಗೌರವವನ್ನು ಇಮ್ಮಡಿಗೊಳಿಸಿತ್ತು. ಒಮಾನ್‌ನಲ್ಲಿ ಮರ ಕಡಿಯುವುದನ್ನು ಅವರು ಕಟ್ಟುನಿಟ್ಟಾಗಿ ನಿಷೇಧಿಸಿದ್ದರು. ಮರುಭೂಮಿಯ ದೇಶದಲ್ಲಿ ಹಸಿರು ಉದ್ಯಾನವನಗಳನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಕೊನೆಯಲ್ಲಿ ಏಕಾಂಗಿ
ಅಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ ಸುಲ್ತಾನರ ವೈಯಕ್ತಿಕ ಜೀವನ ಕೊನೆಯಲ್ಲಿ ಬಹಳ ಒಂಟಿ ಯಾಗಿತ್ತು. ಅವರಿಗೆ ಕ್ಯಾನ್ಸರ್ ಕಾಯಿಲೆ ಇತ್ತು. ಚಿಕಿತ್ಸೆಗಾಗಿ ಅವರು ಜರ್ಮನಿಗೆ ಹೋಗುತ್ತಿದ್ದರು. ಆದರೆ ಕೊನೆಯ ದಿನಗಳಲ್ಲಿ ಅವರು ಯಾರನ್ನೂ ಹೆಚ್ಚು ಭೇಟಿಯಾಗುತ್ತಿರಲಿಲ್ಲ. ಅವರು ತೀರಿ ಕೊಂಡಾಗ ಅವರ ಅಂತ್ಯಕ್ರಿಯೆ ಅತ್ಯಂತ ಸರಳವಾಗಿ ನಡೆಯಿತು. ಬಂಗಾರದ ಗೋರಿ ಅಥವಾ ಸ್ಮಾರಕಗಳನ್ನು ಕಟ್ಟದಂತೆ ಅವರು ಮೊದಲೇ ಹೇಳಿದ್ದರು. ಮಸ್ಕತ್‌ನ ರಾಯಲ್ ಸ್ಮಶಾನದಲ್ಲಿ ಸಾಮಾನ್ಯ ಕಲ್ಲಿನ ಗುರುತಿನೊಂದಿಗೆ ಅವರನ್ನು ಮಣ್ಣು ಮಾಡಲಾಯಿತು.
ಸುಲ್ತಾನ್ ಕಬೂಸ್ ಅವರು ಭಾರತದ ಪುಣೆಯಲ್ಲಿ ಕಲಿತ ಶಿಸ್ತು, ಬ್ರಿಟನ್‌ನಲ್ಲಿ ಕಲಿತ ಮಿಲಿಟರಿ ತರಬೇತಿ ಮತ್ತು ಅರಬ್ ಮಣ್ಣಿನ ಸಂಸ್ಕೃತಿ- ಈ ಮೂರನ್ನೂ ಬೆರೆಸಿ ಒಮಾನ್ ಎಂಬ ಸುಂದರ ದೇಶವನ್ನು ಕಟ್ಟಿದರು. ಅವರೊಬ್ಬ ರಾಜನಿಗಿಂತ ಹೆಚ್ಚಾಗಿ ಒಬ್ಬ ‘ದಾರ್ಶನಿಕ’ ಆಗಿದ್ದರು.