ಮನಿ ಮೈಂಡೆಡ್
ಭಾರತವು ಜಗತ್ತಿನ ಎದುರು ದೃಢವಾಗಿ ನಿಲ್ಲದ ಹೊರತು, ಯಾರೂ ನಮಗೆ ಗೌರವಿಸುವುದಿಲ್ಲ. ಈ ಜಗತ್ತಿನಲ್ಲಿ ಭಯಕ್ಕೆ ಸ್ಥಾನವಿಲ್ಲ. ನಾವು ಬಲಶಾಲಿಗಳಾಗದಿದ್ದರೆ ಯಾರೂ ನಮ್ಮನ್ನು ಗೌರವಿಸುವು ದಿಲ್ಲ. ಕೇವಲ ಶಕ್ತಿಯು ಮಾತ್ರ ಶಕ್ತಿಯನ್ನು ಗೌರವಿಸುತ್ತದೆ- ಇದು ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಆಗಾಗ್ಗೆ ಹೇಳುತ್ತಿದ್ದ ಮಾತು. ಭಾರತದಂತಹ ಬೃಹತ್ ರಾಷ್ಟ್ರವು ವಿಶ್ವ ಮಟ್ಟದಲ್ಲಿ ಮುಂಚೂಣಿಗೆ ಬರಬೇಕಾದರೆ, ಮಾಹಿತಿ ತಂತ್ರಜ್ಞಾನ, ಕೃಷಿ, ಉತ್ಪಾದನೆ ಮಾತ್ರವಲ್ಲದೆ ರಕ್ಷಣಾ ತಂತ್ರಜ್ಞಾನದಲ್ಲೂ ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ನಂಬಿದ್ದರು.
‘ಅಗ್ನಿ’ ಮತ್ತು ‘ಪೃಥ್ವಿ’ಯಂತಹ ಕ್ಷಿಪಣಿಗಳ ನಿರ್ಮಾಣದಲ್ಲಿ ಅವರು ನೇತೃತ್ವ ವಹಿಸಿದ್ದೇ ದೇಶದ ರಕ್ಷಣಾ ಸಾಮರ್ಥ್ಯವನ್ನು ಗಟ್ಟಿಗೊಳಿಸಲು. ರಕ್ಷಣಾ ಕ್ಷೇತ್ರದಲ್ಲಿ ಬಲವಾಗಿರುವುದು ಯುದ್ಧಕ್ಕಲ್ಲ, ಬದಲಿಗೆ ದೇಶದಲ್ಲಿ ಶಾಂತಿ ನೆಲೆಸಲು ಮತ್ತು ಆರ್ಥಿಕ ಚಟುವಟಿಕೆಗಳು ಯಾವುದೇ ಅಡೆತಡೆ ಯಿಲ್ಲದೆ ಸಾಗಲು ಭದ್ರತೆ ಅತ್ಯವಶ್ಯಕ ಎಂಬುದು ಅವರ ದೂರದೃಷ್ಟಿಯಾಗಿತ್ತು. ಯಾವುದೇ ದೇಶವು ಆರ್ಥಿಕವಾಗಿ ಬಲಗೊಳ್ಳಬೇಕಾದರೆ, ಆ ದೇಶದ ನಾಗರಿಕರು ಸುರಕ್ಷಿತವಾಗಿರಬೇಕು ಮತ್ತು ವ್ಯವಹಾರಗಳು ನಿರ್ಭಿತಿಯಿಂದ ನಡೆಯಬೇಕು.
ಆದ್ದರಿಂದಲೇ, ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆಯ ಸಂಪೂರ್ಣ ದಮನವು ಆರ್ಥಿಕ ಪ್ರಗತಿಯ ಮೊದಲ ಹೆಜ್ಜೆಯಾಗಿದೆ. ಯಾವುದೇ ಉದ್ಯಮಿ ಅಥವಾ ವಿದೇಶಿ ಹೂಡಿಕೆದಾರರಾಗಲಿ ಹಣ ಹೂಡಿಕೆ ಮಾಡಲು ಬಯಸುವುದು ರಾಜಕೀಯ ಮತ್ತು ಭದ್ರತಾ ಸ್ಥಿರತೆ ಇರುವ ದೇಶಗಳಲ್ಲಿ ಮಾತ್ರ. ಭಯೋತ್ಪಾದನೆಯ ಅಥವಾ ದಾಳಿಗಳ ಭೀತಿ ಇರುವ ಕಡೆ ಹೂಡಿಕೆದಾರರು ಬಂಡವಾಳ ಹೂಡಲು ಹಿಂದೇಟು ಹಾಕುತ್ತಾರೆ.
ಹೂಡಿಕೆಗಳು ನಿಂತುಹೋದರೆ ಅಥವಾ ಕಡಿಮೆಯಾದರೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿ ಯಾಗುವುದಿಲ್ಲ, ಇದು ನೇರವಾಗಿ ನಿರುದ್ಯೋಗ ಮತ್ತು ಆರ್ಥಿಕ ಹಿನ್ನಡೆಗೆ ದಾರಿ ಮಾಡಿಕೊಡುತ್ತದೆ. ಪ್ರವಾಸೋದ್ಯಮ ಕ್ಷೇತ್ರವು ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಸರ್ಕಾರಕ್ಕೆ ವಿದೇಶಿ ವಿನಿಮಯ ವನ್ನು ತಂದುಕೊಡುತ್ತದೆ.
ಇದನ್ನೂ ಓದಿ: Keshava Prasad B Column: ಜಪಾನಿಗರಿಗೆ ನಿವೃತ್ತಿಯಿಲ್ಲ, ಅದೇ ದೀರ್ಘಾಯುಷ್ಯದ ಗುಟ್ಟು !
ಭಯೋತ್ಪಾದನೆಯ ಭೀತಿ ಇರುವ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡಲು ಅಂಜುತ್ತಾರೆ. ಇದರಿಂದ ಹೋಟೆಲ್, ಸಾರಿಗೆ, ಕರಕುಶಲ ಮತ್ತು ಆತಿಥ್ಯ ರಂಗಗಳು ತೀವ್ರ ನಷ್ಟ ಅನುಭವಿಸುತ್ತವೆ. ಭಾರತದ ಭದ್ರತಾ ಇತಿಹಾಸದಲ್ಲಿ ಕಳೆದ ಒಂದು ದಶಕದಲ್ಲಿ ಒಂದು ಗಮನಾರ್ಹ ಬದಲಾವಣೆ ಯಾಗಿದೆ. ಹಿಂದೆ ಪಾಕಿಸ್ತಾನ ಅಥವಾ ಗಡಿಯಾಚೆಗಿಂದ ಉಗ್ರರ ದಾಳಿ ನಡೆದರೆ, ನಮ್ಮ ಪ್ರತಿಕ್ರಿಯೆ ಹೆಚ್ಚಾಗಿ ರಾಜತಾಂತ್ರಿಕ ಮತ್ತು ರಾಜಕೀಯ ಚೌಕಟ್ಟಿಗೆ ಮಾತ್ರ ಸೀಮಿತವಾಗಿರುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಭಾರತವು ಕೇವಲ ಸಹಿಸಿಕೊಂಡು ಕೂರುವ ಬದಲು, ತಕ್ಕ ಮತ್ತು ನೇರ ಉತ್ತರ ನೀಡುವ ಹೊಸ ನೀತಿಯನ್ನು ಅಳವಡಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್‌ನ ಹತ್ತನೇ ವರ್ಷದ ನೆನಪನ್ನು ಸ್ಮರಿಸುತ್ತಾ, ಇದು ಭಾರತದ ಭದ್ರತಾ ನೀತಿಯಲ್ಲಿ ಹೊಸ ಇತಿಹಾಸ ಬರೆದಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, 2004ರಿಂದ 2014ರ ವರೆಗಿನ ಅವಧಿಗೆ ಹೋಲಿಸಿದರೆ, 2014ರಿಂದ 2024ರ ದಶಕದಲ್ಲಿ ಉಗ್ರರ ಚಟುವಟಿಕೆಗಳು ಗಣನೀಯವಾಗಿ ತಗ್ಗಿದೆ. ಒಟ್ಟು ಭಯೋ ತ್ಪಾದನಾ ಘಟನೆಗಳು ಶೇಕಡಾವಾರು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿಯ ಸಾವಿನ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ಹಿಂಸಾಚಾರದ ಘಟನೆಗಳು ಮತ್ತು ಸಾವು-ನೋವುಗಳು ಇಳಿಮುಖ ವಾಗಿರುವುದು ಶಾಂತಿ ಮರಳುತ್ತಿರುವ ಶುಭ ಸೂಚನೆಯಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಸೇನೆ ನಡೆಸಿದ ನಾಲ್ಕು ಪ್ರಮುಖ ಕಾರ್ಯಾಚರಣೆಗಳು ಜಾಗತಿಕ ಮಟ್ಟದಲ್ಲಿ ದೇಶದ ಬಲವನ್ನು ಸಾಬೀತುಪಡಿಸಿವೆ. 2015ರಲ್ಲಿ ನಡೆದ ಮ್ಯಾನ್ಮಾರ್ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸ ಲಾಯಿತು. 2016ರ ಸರ್ಜಿಕಲ್ ಸ್ಟ್ರೈಕ್ಸ್‌ನಲ್ಲಿ ಉರಿ ದಾಳಿಗೆ ಪ್ರತಿಕಾರವಾಗಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಲಾಯಿತು.
2019ರ ಬಾಲಕೋಟ್ ವೈಮಾನಿಕ ದಾಳಿ ಐತಿಹಾಸಿಕ. ಪುಲ್ವಾಮಾ ದಾಳಿಯ ನಂತರ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶ್ -ಎ-ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ವಾಯು ದಾಳಿ ನಡೆಸಿತು. 2025ರಲ್ಲಿ ಆಪರೇಷನ್ ಸಿಂದೂರ್ ನಡೆಯಿತು. ಪಹಲ್ಗಾಮ್ ದಾಳಿಯ ತರುವಾಯ, ಭಾರತವು ಅತ್ಯಂತ ತೀವ್ರವಾದ ಮಲ್ಟಿ-ಡೊಮೇನ್ ಕಾರ್ಯಾಚರಣೆ ಯನ್ನು ನಡೆಸಿ, ಗಡಿಯಾಚೆಗಿನ ಉಗ್ರರ ನೆಲೆಗಳು ಹಾಗೂ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನೂ ಧ್ವಂಸಗೊಳಿಸಿತು.
ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದಂತೆ, ಭಾರತದ ಹೊಸ ನೀತಿಯು ಮೂರು ಪ್ರಮುಖ ಸ್ತಂಭಗಳ ಮೇಲೆ ನಿಂತಿದೆ- ಭಾರತವು ತನಗೆ ಇಷ್ಟವಾದ ಸಮಯ ಮತ್ತು ರೀತಿಯಲ್ಲಿ ಪ್ರತಿಕ್ರಿಯಿ ಸುತ್ತದೆ. ಯಾವುದೇ ಪರಮಾಣು ಬೆದರಿಕೆಗೆ ಬಗ್ಗುವುದಿಲ್ಲ. ಉಗ್ರರಿಗೆ ಮತ್ತು ಅವರನ್ನು ಬೆಂಬಲಿಸು ವ ರಾಷ್ಟ್ರಗಳಿಗೆ ಯಾವುದೇ ವ್ಯತ್ಯಾಸವಿರುವುದಿಲ್ಲ.
ಇಂದಿನ ಭಾರತವು ಉಗ್ರರ ದಾಳಿಗಳನ್ನು ಕೇವಲ ಮೌನವಾಗಿ ಸಹಿಸಿಕೊಳ್ಳುವ ದೇಶವಲ್ಲ. ಬದಲಿಗೆ ಪ್ರತಿಯೊಂದು ದಾಳಿಗೂ ನೇರ ಮತ್ತು ತೀವ್ರವಾದ ಆರ್ಥಿಕ, ರಾಜತಾಂತ್ರಿಕ ಹಾಗೂ ಮಿಲಿಟರಿ ಬೆಲೆಯನ್ನು ತೆರಲೇಬೇಕಾದ ಗಟ್ಟಿ ನಿಲುವನ್ನು ತಳೆದಿದೆ. ಶತ್ರುಗಳು ನಮ್ಮ ನಿಯಮಗಳನ್ನು ನಿರ್ಧರಿಸುವ ಬದಲು, ನಮ್ಮದೇ ನಿಯಮಗಳ ಮೇರೆಗೆ ಪ್ರತಿಕ್ರಿಯೆ ಇರುತ್ತದೆ ಎಂಬ ದಿಟ್ಟ ಸಂದೇಶ ವನ್ನು ಈ ದಶಕದ ಕಾರ್ಯತಂತ್ರವು ಜಗತ್ತಿಗೆ ಸ್ಪಷ್ಟವಾಗಿ ಸಾರಿದೆ.
ಈ ಹೊಸ ಶಕೆಯು ಭಾರತವನ್ನು ಹೆಚ್ಚು ಸುರಕ್ಷಿತ ಮತ್ತು ಬಲಶಾಲಿ ರಾಷ್ಟ್ರವನ್ನಾಗಿ ರೂಪಿಸುತ್ತಿದೆ. ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಕನಸು ಕಂಡಿದ್ದ ‘ಸ್ವಾವಲಂಬಿ ಮತ್ತು ಬಲಿಷ್ಠ ಭಾರತ’ದ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಠಿಣ ನಿರ್ಧಾರಗಳು ಮತ್ತು ಕಾರ್ಯತಂತ್ರಗಳ ಮೂಲಕ ಅಕ್ಷರಶಃ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಮೋದಿಯವರ ಬಗ್ಗೆ ಜನರಿಗೆ ಅಚಲ ವಿಶ್ವಾಸ ಇರುವುದಕ್ಕೆ ಮೊದಲ ಕಾರಣವೇ, ದೇಶದ ಭದ್ರತೆಯ ವಿಚಾರದಲ್ಲಿ ಅವರು ಕೈಗೊಂಡಿರುವ ದೃಢ ನಿರ್ಧಾರಗಳು ಮತ್ತು ಜಾರಿಗೊಳಿಸಿರುವ ಯೋಜನೆಗಳು. ಡಾ. ಕಲಾಂ ಅವರು ಭಾರತವು ರಕ್ಷಣಾ ಉಪಕರಣಗಳಿಗಾಗಿ ಇತರ ದೇಶಗಳನ್ನು ಅವಲಂಬಿಸದೆ ಸ್ವಾವಲಂಬಿ ಯಾಗಬೇಕು ಎಂದು ಸತತವಾಗಿ ಪ್ರತಿಪಾದಿಸುತ್ತಿದ್ದರು.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇಂದು ಭಾರತವು ರಕ್ಷಣಾ ರಂಗದಲ್ಲಿ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದಡಿ ಶಸ್ತ್ರಾಸ್ತ್ರಗಳು, ತೇಜಸ್ ಯುದ್ಧವಿಮಾನಗಳು, ಕ್ಷಿಪಣಿಗಳು ಮತ್ತು ನೌಕೆಗಳನ್ನು ಸ್ವತಃ ತಯಾರಿಸುತ್ತಿದೆ. ಅಷ್ಟೇ ಅಲ್ಲದೆ, ಜಗತ್ತಿನ ಇತ್ತೀಚಿನ ಹಲವು ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಮಟ್ಟಕ್ಕೆ ಭಾರತ ಬೆಳೆದಿರುವುದು ಕಲಾಂ ಅವರ ಕನಸಿನ ಸಾಕ್ಷಾತ್ಕಾರವಾಗಿದೆ.
ಬಾಹ್ಯಾಕಾಶ ಮತ್ತು ಕ್ಷಿಪಣಿ ತಂತ್ರeನದಲ್ಲಿ ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡಬೇಕು ಎಂಬ ಕಲಾಂ ಅವರ ದೂರದೃಷ್ಟಿಗೆ ತಕ್ಕಂತೆ, ಇಸ್ರೊ ಮತ್ತು ಡಿಆರ್ ಡಿಒ, ಎಚ್‌ಎಎಲ್ ಸಂಸ್ಥೆಗಳಿಗೆ ಮೋದಿ ಸರ್ಕಾರವು ಮುಕ್ತ ಸ್ವಾತಂತ್ರ್ಯ ಹಾಗೂ ಭಾರಿ ಪ್ರಮಾಣದ ಆರ್ಥಿಕ ಬೆಂಬಲವನ್ನು ನೀಡಿದೆ. ಚಂದ್ರಯಾನ-3ರ ಯಶಸ್ಸು ಭಾರತ ಸಾಧಿಸುತ್ತಿರುವ ಮುನ್ನಡೆಗೆ ಸಾಕ್ಷಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಯಾದ ಬದಲಾವಣೆಗಳಾಗಿವೆ. ಹಿಂದೆ ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಆರ್ಡನೆನ್ಸ್ ಫ್ಯಾಕ್ಟರಿಗಳು ಮಾತ್ರ ಏಕಸ್ವಾಮ್ಯ ಹೊಂದಿದ್ದವು. ಆದರೆ ಮೋದಿ ಸರ್ಕಾರವು ಈ ಕ್ಷೇತ್ರವನ್ನು ಖಾಸಗಿ ವಲಯ ಮತ್ತು ಸ್ಟಾರ್ಟಪ್‌ಗಳಿಗೆ ಮುಕ್ತಗೊಳಿಸುವ ಮೂಲಕ ರಕ್ಷಣಾ ರಂಗದಲ್ಲಿ ‘ಆತ್ಮನಿರ್ಭರತೆ’ ಸಾಧಿಸಲು ಬಲವಾದ ಅಡಿಪಾಯ ಹಾಕಿದೆ.
ವಿದೇಶಿ ನೇರ ಹೂಡಿಕೆ ಮಿತಿಯನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಮೂಲಕ ದೊಡ್ಡ ಕಾರ್ಪೊರೇಟ್ ಕಂಪನಿ ಗಳು ಭಾರತದ ರಕ್ಷಣಾ ಉಪಕರಣಗಳನ್ನು ತಯಾರಿಸಲು ಉತ್ತೇಜನ ನೀಡಲಾಯಿತು. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವಿಶೇಷ ‘ರಕ್ಷಣಾ ಕೈಗಾರಿಕಾ ಕಾರಿಡಾರ್’ಗಳನ್ನು ಸ್ಥಾಪಿಸಲಾಗಿದ್ದು, ಇದು ಹೂಡಿಕೆಯನ್ನು ಆಕರ್ಷಿಸಲು ಮತ್ತು ಸ್ಥಳೀಯ ಉತ್ಪಾದನೆಗೆ ಅಗತ್ಯ ವಾದ ಮೂಲಭೂತ ಸೌಕರ್ಯ ಗಳನ್ನು ಒದಗಿಸಲು ಸಹಕಾರಿಯಾಗಿದೆ.
ನೂರಾರು ಪ್ರಮುಖ ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಆಮದನ್ನು ಹಂತ ಹಂತವಾಗಿ ನಿಷೇಧಿಸಿ, ಅವುಗಳನ್ನು ಕಡ್ಡಾಯವಾಗಿ ಭಾರತದ ತಯಾರಿಸಬೇಕು ಎಂಬ ನಿಯಮ ತರಲಾಯಿತು. ಇದು ದೇಶೀಯ ಉತ್ಪಾದಕರಿಗೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಟ್ಟಿತು. ಒಂದು ಕಾಲದಲ್ಲಿ ಶಸ್ತ್ರಾಸ್ತ್ರಗಳನ್ನು ಕೇವಲ ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಇಂದು ಜಗತ್ತಿನ ಹಲವಾರು ದೇಶಗಳಿಗೆ ಅತ್ಯಾಧುನಿಕ ಶಸಾಸಗಳು, ಕ್ಷಿಪಣಿಗಳು, ಕರಾವಳಿ ಕಾವಲು ನೌಕೆಗಳು, ರಾಡಾರ್‌ಗಳು ಮತ್ತು ‘ಬ್ರಹ್ಮೋಸ್’ನಂತಹ ಕ್ಷಿಪಣಿಗಳನ್ನು ರಫ್ತು ಮಾಡುತ್ತಿದೆ.
ಭಾರತದ ರಕ್ಷಣಾ ರ- ಮೌಲ್ಯವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಸ್ಟಾರ್ಟಪ್‌ಗಳು ಕೃತಕ ಬುದ್ಧಿಮತ್ತೆ, ಡ್ರೋನ್ ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ಸ್ವಾಯತ್ತ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಅದ್ಭುತ ಸಾಧನೆ ಮಾಡುತ್ತಿವೆ. ಇವು ಭಾರತೀಯ ಸೇನೆಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಆಧುನಿಕ ಪರಿಹಾರಗಳನ್ನು ಒದಗಿಸುತ್ತಿವೆ. ಟಾಟಾ, ಲಾರ್ಸನ್ ಆಂಡ್ ಟ್ಯೂಬ್ರೊ, ಕಲ್ಯಾಣಿ ಗ್ರೂಪ್ ಮುಂತಾದ ದೊಡ್ಡ ಖಾಸಗಿ ದಿಗ್ಗಜರ ಜತೆಗೆ ನೂರಾರು ಸ್ಟಾರ್ಟಪ್‌ಗಳು ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವುದರಿಂದ ದೇಶದ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಮತ್ತು ವಿದೇಶಿ ವಿನಿಮಯ ಉಳಿತಾಯವಾಗಿದೆ.
ದೇಶದಲ್ಲಿ ಬಾಂಬ್ ಸ್ಫೋಟಗಳು ಅಥವಾ ಭದ್ರತೆಯ ಆತಂಕ ತಪ್ಪಿದಾಗ ಜಾಗತಿಕ ಹೂಡಿಕೆದಾರ ರಿಗೆ ದೇಶದ ಬಗ್ಗೆ ವಿಶ್ವಾಸ ಹೆಚ್ಚುತ್ತದೆ. ಭಾರತವು ಸುರಕ್ಷಿತ ಮಾರುಕಟ್ಟೆ ಎಂಬ ಸಂದೇಶ ತೆರಳುವು ದರಿಂದ ಅಂತರರಾಷ್ಟ್ರೀಯ ಬಂಡವಾಳ ಮತ್ತು ದೊಡ್ಡ ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬರುತ್ತಿವೆ. ಮುಂಬಯಿ, ಬೆಂಗಳೂರು ಹಾಗೂ ದಿಲ್ಲಿಯಂತಹ ಮಹಾನಗರಗಳಲ್ಲಿ ಆಹೋರಾತ್ರಿ ವ್ಯಾಪಾರ-ವ್ಯವಹಾರ ಗಳು, ಐಟಿ ವಲಯ, ಹೋಟೆಲ್ ಹಾಗೂ ಮನರಂಜನಾ ಉದ್ಯಮಗಳು ಯಾವುದೇ ಭಯವಿಲ್ಲದೆ ಸಾಗಲು ಸುರಕ್ಷಿತ ವಾತಾವರಣವೇ ಕಾರಣ.
ಇದರಿಂದ ಸೇವಾ ಕ್ಷೇತ್ರ ಮತ್ತು ಚಿಲ್ಲರೆ ವ್ಯಾಪಾರ ವೇಗವಾಗಿ ಬೆಳೆದಿವೆ. ಹೀಗಾಗಿ ಭಯೋತ್ಪಾದನೆಯ ದಮನವು ಕೇವಲ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದಲ್ಲ, ಅದೊಂದು ಮಹಾ ಆರ್ಥಿಕ ಸುಧಾರಣೆಯೂ ಹೌದು.