ಸಂಪಾದಕರ ಸದ್ಯಶೋಧನೆ
(ನಿನ್ನೆ ಸಂಚಿಕೆಯಿಂದ)
1978ರಲ್ಲಿ ದೇಶವನ್ನೇ ತಲ್ಲಣಗೊಳಿಸಿದ ಜಗಜೀವನರಾಂ ಪುತ್ರ ಸುರೇಶ್ ರಾಮ್ ಮತ್ತು ಸುಷ್ಮಾ ಚೌಧರಿ ಹಗರಣ ಮುಂದೇನಾಯಿತು? ಇದು ಕೇವಲ ರಾಜಕೀಯ ಚದುರಂಗದಾಟದ ದಾಳ ವಾಗಷ್ಟೇ ಉಳಿಯಲಿಲ್ಲ. ರಾಜಕೀಯವಾಗಿ ಧೀಮಂತ ನಾಯಕರಾಗಿದ್ದ ಜಗಜೀವನ್ ರಾಮ್ ವರ್ಚಸ್ಸನ್ನು ಮಣ್ಣುಪಾಲು ಮಾಡಿದ ಈ ಘಟನೆ, ತೆರೆಮರೆಯಲ್ಲಿ ಇಬ್ಬರು ವ್ಯಕ್ತಿಗಳ ವೈಯಕ್ತಿಕ ಬದುಕನ್ನು ಘಾಸಿಗೊಳಿಸಿತು.
ಹಗರಣ ಸ್ಫೋಟಗೊಂಡ ಸಮಯದಲ್ಲಿ ಸುರೇಶ್ ರಾಮ್ ವಿವಾಹಿತರಾಗಿದ್ದರು ಹಾಗೂ ಅವರಿಗೆ ಒಬ್ಬ ಹೆಣ್ಣುಮಗಳಿದ್ದಳು. ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದ ರಕ್ಷಣಾ ಸಚಿವರ ಮಗನಾಗಿ ಸಂತೃಪ್ತ ಜೀವನ ನಡೆಸುತ್ತಿದ್ದ ಅವರ ಇಡೀ ಕುಟುಂಬ ಈ ಘಟನೆಯಿಂದ ಬೀದಿಗೆ ಬಂದಿತು. ಅವರ ಮೊದಲ ಪತ್ನಿ ಮತ್ತು ಮಗಳು ಸಮಾಜ ತಲೆ ಎತ್ತಿ ಓಡಾಡದ ಪರಿಸ್ಥಿತಿ ನಿರ್ಮಾಣವಾಯಿತು.
ಇನ್ನೊಂದೆಡೆ, ಕೇವಲ ಇಪ್ಪತ್ತೆರಡು ವರ್ಷದ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಸುಷ್ಮಾ ಚೌಧರಿ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಹರಿಯಾಣದ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದಿದ್ದ ಆಕೆ, ತಾನು ಪ್ರೀತಿಸಿದ ವ್ಯಕ್ತಿಯೊಂದಿಗೆ ಕಳೆದ ಅತ್ಯಂತ ಖಾಸಗಿ ಕ್ಷಣಗಳು 'ಸೂರ್ಯ' ಪತ್ರಿಕೆಯ ಮೂಲಕ ದೇಶದ ಮೂಲೆ ಮೂಲೆಗೂ ತಲುಪಿದಾಗ ಸಂಪೂರ್ಣವಾಗಿ ಜರ್ಜರಿತರಾದಳು. ಇಡೀ ದೇಶವೇ ಆಕೆಯನ್ನು ದೂಷಿಸುತ್ತಿದ್ದಾಗ, ಮಾಧ್ಯಮಗಳ ತೀಕ್ಷ್ಣ ಪ್ರಶ್ನೆಗಳು ಮತ್ತು ಸಾರ್ವಜನಿಕರ ಕ್ರೂರ ನೋಟಗಳಿಂದಾಗಿ ಆಕೆ ತೀವ್ರ ಖಿನ್ನತೆಗೆ ಜಾರಿದಳು.
ಇದನ್ನೂ ಓದಿ: Vishweshwar Bhat Column; ಮಣ್ಣುಪಾಲಾದ ಮರ್ಯಾದೆ
ಒಬ್ಬ ಯುವತಿಯ ಖಾಸಗಿತನವನ್ನು ರಾಜಕೀಯ ಲಾಭಕ್ಕಾಗಿ ಹೇಗೆ ಕ್ರೂರವಾಗಿ ಹರಾಜು ಹಾಕಬಹುದು ಎಂಬುದಕ್ಕೆ ಆಕೆ ಜೀವಂತ ಸಾಕ್ಷಿಯಾಗಿದ್ದಳು. ಸಾಮಾನ್ಯವಾಗಿ ಇಂಥ ಹಗರಣಗಳು ಬಹಿರಂಗವಾದಾಗ ಸಂಬಂಧಪಟ್ಟ ವ್ಯಕ್ತಿಗಳು ಪರಸ್ಪರ ದೂರವಾಗುತ್ತಾರೆ ಅಥವಾ ಆ ಫೋಟೋ ಗಳು ನಕಲಿ ಎಂದು ವಾದಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಸುರೇಶ್ ರಾಮ್ ಮತ್ತು ಸುಷ್ಮಾ ಚೌಧರಿ ನಾಟಕೀಯ ನಿರ್ಧಾರ ಕೈಗೊಂಡರು. ಅವರಿಬ್ಬರೂ ತಮ್ಮ ನಡುವಿನ ಪ್ರೀತಿ ಮತ್ತು ಸಂಬಂಧವನ್ನು ನಿರಾಕರಿಸಲೇ ಇಲ್ಲ!
ದೇಶವೇ ಇವರ ನೈತಿಕತೆಯನ್ನು ಪ್ರಶ್ನಿಸುತ್ತಿದ್ದಾಗ, ಅವರಿಬ್ಬರೂ ಪರಸ್ಪರ ಕೈಬಿಡದೇ ಜತೆಯಾಗಿ ನಿಲ್ಲಲು ನಿರ್ಧರಿಸಿದರು. ಹಗರಣದ ಕಹಿ ದಿನಗಳು ತಿಳಿಯಾಗುತ್ತಿದ್ದಂತೆ, ಸುರೇಶ್ ರಾಮ್ ತಮ್ಮ ಮೊದಲ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದರು. ನಂತರ, ಎಲ್ಲ ಸಾಮಾಜಿಕ ವಿರೋಧ ಮತ್ತು ರಾಜಕೀಯ ಒತ್ತಡಗಳನ್ನು ಬದಿಗಿಟ್ಟು ಸುಷ್ಮಾಳನ್ನು ಕಾನೂನುಬದ್ಧವಾಗಿ ವಿವಾಹ ವಾದರು.
ಆ ಮೂಲಕ ತಮ್ಮ ನಡುವೆ ಇದ್ದದ್ದು ಕೇವಲ ದೈಹಿಕ ಆಕರ್ಷಣೆಯಲ್ಲ, ಬದಲಿಗೆ ಅದೊಂದು ಗಂಭೀರವಾದ ಪ್ರೇಮ ಸಂಬಂಧ ಎಂಬುದನ್ನು ಸಾಬೀತುಪಡಿಸಿ ತಮ್ಮ ಪ್ರೀತಿಯನ್ನು ಅಧಿಕೃತ ಗೊಳಿಸಿದರು. ವಿವಾಹದ ಮೂಲಕ ಅವರಿಬ್ಬರೂ ಒಂದಾದರಾದರೂ, ಸುರೇಶ್ ರಾಮ್ ರಾಜಕೀಯ ಭವಿಷ್ಯ ಅಲ್ಲಿಗೇ ಸಮಾಪ್ತಿಯಾಯಿತು. ಜಗಜೀವನ್ ರಾಮ್ ಏಕೈಕ ಪುತ್ರನಾಗಿದ್ದ ಸುರೇಶ್, ಅಂದಿನ ದಿನಗಳಲ್ಲಿ ತಂದೆಯ ರಾಜಕೀಯ ಉತ್ತರಾಧಿಕಾರಿಯಾಗಿ ಬೆಳೆಯಬೇಕಿತ್ತು. ಆದರೆ ಈ ಒಂದೇ ಒಂದು ಹಗರಣ ಅವರ ಇಡೀ ರಾಜಕೀಯ ಭವಿಷ್ಯವನ್ನೇ ನುಂಗಿಹಾಕಿತು.
ಅವರು ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ದೂರ ಸರಿದರು. ಈ ಕೌಟುಂಬಿಕ ಮತ್ತು ರಾಜಕೀಯ ದುರಂತದ ಕಥೆ ಮತ್ತೊಂದು ತಿರುವು ಪಡೆಯಿತು. ಹಗರಣ ನಡೆದು ಕೇವಲ ಏಳು ವರ್ಷಗಳಾಗಿದ್ದಾಗ, 1985ರಲ್ಲಿ ಸುರೇಶ್ ರಾಮ್ ಅವರು ತಮ್ಮ ದೆಹಲಿಯ ನಿವಾಸದಲ್ಲಿ ನಿಗೂಢ ವಾಗಿ ನಿಧನರಾದರು. ವೈದ್ಯಕೀಯ ವರದಿಗಳ ಪ್ರಕಾರ ಅದು ತೀವ್ರ ಹೃದಯಾಘಾತ ಎಂದು ಹೇಳಲಾಯಿತಾದರೂ, ಅಷ್ಟು ಬೇಗ ಅವರು ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು.
ಸತತ ರಾಜಕೀಯ ಅವಮಾನ, ಸಮಾಜದಿಂದ ಎದುರಿಸಿದ ಬಹಿಷ್ಕಾರ ಮತ್ತು ಮಾನಸಿಕ ಒತ್ತಡ ಗಳೇ ಅವರ ಅಕಾಲಿಕ ಸಾವಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಯಿತು. ಸುರೇಶ್ ರಾಮ್ ಅವರ ಸಾವಿನೊಂದಿಗೆ ಭಾರತೀಯ ರಾಜಕೀಯದ ಅತ್ಯಂತ ಕರಾಳ ಹಗರಣವೊಂದು ತಣ್ಣಗಾಯಿತು.