ಪ್ರತಿಧ್ವನಿ
ವಿನಯ ಶಿರಗಟ್ಟಿಮಠ
ಇತಿಹಾಸ ಎಂಬ ಪದಕ್ಕೆ ಎರಡು ಮುಖಗಳಿವೆ. ಒಂದು-ಅಧಿಕಾರದ ಕುರ್ಚಿಯಲ್ಲಿ ಕುಳಿತು, ತಾಮ್ರದ ಶಾಸನಗಳಲ್ಲಿ ಕೆತ್ತಿಸಿದ ಯಜಮಾನಿಕೆಯ ಅಧಿಕೃತ ಆವೃತ್ತಿ. ಇನ್ನೊಂದು-ಬಯಲಲ್ಲಿ ಬೆವರು ಸುರಿಸಿದ, ಕಾಡು-ಮೇಡುಗಳಲ್ಲಿ ಅಲೆದ, ರಾಗದ ಸಾಲು ಗಳಲ್ಲಿ ತಮ್ಮ ನೆನಪನ್ನು ಜತನದಿಂದ ಉಳಿಸಿಕೊಂಡ ತಳಸಮುದಾಯದ ಜನರ ಸತ್ಯ. ಈ ಎರಡರ ನಡುವಿನ ಅಂತರ ಬಲ್ಲವರು ಮಾತ್ರ ಖ್ಯಾತ ಜನಪದ ತಜ್ಞ ವಡ್ಡಗೆರೆ ನಾಗರಾಜಯ್ಯನವರ ಸಂಶೋಧನೆಯ ಅಸಲಿ ಮೌಲ್ಯ ಅರಿಯಬಲ್ಲರು.
ಆದರೆ, ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ‘ರವಿ ಹಂಜ್’ ಅವರ ಲೇಖನವನ್ನು ಓದಿದಾಗ ಮನದಲ್ಲಿ ಉದ್ಭವಿಸುವ ಪ್ರಶ್ನೆ ಒಂದೇ, ‘ಪಟ್ಟ ಭದ್ರ ಹಿತಾಸಕ್ತಿಗಳು ತಮ್ಮ ಸಾಂಸ್ಕೃತಿಕ ಅಧಿಪತ್ಯ ಕೈಜಾರುತ್ತಿದೆ ಎಂದು ಅರಿವಾದಾಗ, ಇಷ್ಟೊಂದು ಹತಾಶ ತರ್ಕಗಳಿಗೆ ಶರಣಾಗುತ್ತವೆಯೇ?’ರವಿ ಹಂಜ್ ಅವರ ಲೇಖನದ ಮೂಲ ತಕರಾರು ಬಹಳ ಸರಳವಾಗಿದೆ.
ರೇವಣಸಿದ್ಧರು ಹಾಲುಮತ ಕುರುಬ ಸಮಾಜದ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂಬ ವಸ್ತುನಿಷ್ಠ ಸಂಶೋಧನೆ ಅವರಿಗೆ ನುಂಗಲಾರದ ತುತ್ತಾಗಿದೆ. ಆದರೆ, ತಮ್ಮ ಈ ಅಸಹನೆ ಯನ್ನು ಸಮರ್ಥಿಸಿಕೊಳ್ಳಲು ಅವರು ಮತ್ತೆ ಅದೇ ‘ಶಾಸನಗಳ’ ಮೊರೆ ಹೋಗುವ ಹಳೆಯ ತಂತ್ರವನ್ನು ಬಳಸಿದ್ದಾರೆ.
ಶಾಸನಗಳೆಂಬುದು ಇತಿಹಾಸದ ಸಮಗ್ರ ಮತ್ತು ಅಂತಿಮ ಸಾಕ್ಷಿಯಲ್ಲ ಎಂಬ ಮೂಲ ಭೂತ ಸತ್ಯ ಅವರಿಗೆ ಗೊತ್ತಿಲ್ಲವೆಂದಲ್ಲ; ಗೊತ್ತಿದ್ದೂ ಆ ಸತ್ಯವನ್ನು ಮರೆಮಾಚಲು ಅವರು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದ್ದಾರೆ ಎಂದು ಶಂಕಿಸಬೇಕಾಗುತ್ತದೆ.
ಶಾಸನಗಳನ್ನು ಬರೆಸಿದವರು ಯಾರು? ದರ್ಪದ ರಾಜರು, ದಾನ ಪಡೆದ ಮಠಾಧಿಪತಿಗಳು ಹಾಗೂ ಅಧಿಕಾರ ಹೊಂದಿದ್ದ ಮೇಲ್ವರ್ಗಗಳು. ಇಂಥವರ ಆಸ್ಥಾನದಲ್ಲಿ ಕುರುಬರ ಮಕ್ಕಳ ಕಾವ್ಯದ ಸಾಲುಗಳು ಶಾಸನದಲ್ಲಿ ಮೂಡಿಬರಲು ಹೇಗೆ ತಾನೇ ಸಾಧ್ಯ? ನೇಗಿಲು ಹಿಡಿದ ರೈತ, ಕುರಿ ಮೇಯಿಸುತ್ತಾ ಹಾಡಿದ ಕಾವ್ಯ, ಹಡೆದ ತಾಯಿ ಮಗುವಿಗೆ ಹೇಳಿದ ಕಥೆ. ಇವು ಯಾವ ರಾಜನ ಶಾಸನದಲ್ಲಿ ದಾಖಲಾಗುತ್ತವೆ? ಇಂತಹ ನೇರ ಪ್ರಶ್ನೆಗಳನ್ನು ತಮ್ಮ ಓದುಗರ ಮುಂದಿಡಲು ರವಿ ಹಂಜ್ ಅವರು ಸಿದ್ಧರಿಲ್ಲ. ಏಕೆಂದರೆ, ಆ ಪ್ರಶ್ನೆಗಳು ಅವರ ಇಡೀ ವಾದದ ಪೊಳ್ಳುತನವನ್ನು ಬೆತ್ತಲೆಗೊಳಿಸುತ್ತವೆ.
ಇದನ್ನೂ ಓದಿ: Vinay Shirahattimutt Column: ಇತಿಹಾಸದ ಚರ್ಚೆಗಳು ನಡೆಯಲಿ, ಆದರೆ ಅಸತ್ಯದ ನಿರ್ಮಾಣ ಬೇಡ !
ಮೌಖಿಕ ಪರಂಪರೆ: ತಲೆಮಾರುಗಳ ಸಜೀವ ದಾಖಲೆ, ಕಟ್ಟುಕಥೆಯಲ್ಲ: ವಿಶ್ವದಾ ದ್ಯಂತ ಮಾನ್ಯತೆ ಪಡೆದ ಇತಿಹಾಸಕಾರರು, ಮಾನವಶಾಸ್ತ್ರಜ್ಞರು ಮತ್ತು ಜನಪದ ಅಧ್ಯಯನಕಾರರು ಒಂದು ವಿಷಯದಲ್ಲಿ ಅತ್ಯಂತ ಸ್ಪಷ್ಟವಾಗಿದ್ದಾರೆ. ಅದೇನೆಂ ದರೆ, ಮೌಖಿಕ ಪರಂಪರೆ ಎಂಬುದು ಕೇವಲ ಕಥೆಯಲ್ಲ, ಅದೊಂದು ಸಮಾಜದ ‘ಸಾಮೂಹಿಕ ಸ್ಮೃತಿ’. ಅದು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಡುವ ಒಂದು ಸಜೀವ ಆರ್ಕೈವ್. ಸ್ವತಃ ಯುನೆಸ್ಕೋ ( UNESCO) ಸಂಸ್ಥೆ ಯೇ ಮೌಖಿಕ ಪರಂಪರೆಯನ್ನು ಅತ್ಯಮೂಲ್ಯ ಸಾಂಸ್ಕೃತಿಕ ಆಸ್ತಿ ಎಂದು ಗೌರವಿಸುತ್ತದೆ. ಆದರೆ, ರವಿ ಹಂಜ್ ಅವರ ಸಂಕುಚಿತ ದೃಷ್ಟಿ ಯಲ್ಲಿ ಶತಮಾನಗಳ ಕಾಲ ಕುರುಬ ಸಮಾಜ ತಲೆತಲೆಮಾರಿನಿಂದ ಉಸಿರಾಗಿಸಿಕೊಂಡು ಬಂದ ಬೀರಣ್ಣನ ಕಥೆ, ರೇವಣಸಿದ್ಧನ ಮಹಾಕಾವ್ಯ-ಇವೆಲ್ಲವೂ ಅಪ್ರಾಮಾಣಿಕ! ಅವರಿಗೆ ಮಠದ ಅರ್ಚಕ ಬರೆದ ಸ್ತೋತ್ರ ಮಾತ್ರ ಸತ್ಯವಾಗಿ ಕಾಣುತ್ತದೆ.
ಈ ತರ್ಕವು ವಿಶ್ವದಾದ್ಯಂತ ಒಪ್ಪಿತವಾದ ಯಾವ ಶೈಕ್ಷಣಿಕ ಶಾಸ್ತ್ರಕ್ಕೂ ನಿಲ್ಲುವಂತ ಹದ್ದಲ್ಲ. ವಡ್ಡಗೆರೆ ನಾಗರಾಜಯ್ಯನವರು ದಶಕಗಳ ಕಾಲ ಹಳ್ಳಿ-ಹಳ್ಳಿಗಳನ್ನು ಸುತ್ತಿ, ನಿರಂತರ ಕ್ಷೇತ್ರ ಕಾರ್ಯ ಮಾಡಿ, ಸಮುದಾಯದ ನಾಲಿಗೆಯ ಮೇಲಿರುವ ಜೀವಂತ ಸಾಕ್ಷ್ಯಗಳನ್ನು ಶಾಸ್ತ್ರೀಯ ಶಿಸ್ತಿನಿಂದ ದಾಖಲಿಸಿದ್ದಾರೆ. ಇಂತಹ ಭಗೀರಥ ಪ್ರಯತ್ನವನ್ನು ಒಂದೇ ಮಾತಿನಲ್ಲಿ ತಳ್ಳಿ ಹಾಕುವ ದುಸ್ಸಾಹಸ ರವಿ ಹಂಜ್ ಅವರ ಲೇಖನದ ತಿರುಳಾಗಿದೆ.
ಇದರ ಹಿಂದಿನ ಉದ್ದೇಶ ಬೌದ್ಧಿಕ ಪ್ರಾಮಾಣಿ ಕತೆಯಲ್ಲ, ಕೇವಲ ತಮ್ಮ ಸಾಂಸ್ಕೃತಿಕ ಅಽಕಾರದ ರಕ್ಷಣೆ ಎಂದೇ ಖಚಿತವಾಗಿ ಹೇಳಬೇಕಾಗುತ್ತದೆ.
ಅಸಲಿಗೆ ಇಲ್ಲಿ ‘ಹೈಜಾಕ್’ ಮಾಡಿದ್ದು ಯಾರು?
ರವಿ ಹಂಜ್ ಅವರು ತಮ್ಮ ಲೇಖನದಲ್ಲಿ ‘ಹೈಜಾಕ್’ ಎಂಬ ಪದವನ್ನು ಬಹಳ ಹಗುರವಾಗಿ ಬಳಸಿದ್ದಾರೆ. ರೇವಣಸಿದ್ಧರನ್ನು ಕುರುಬ ಸಮಾಜವು ತಮ್ಮವರು ಎನ್ನುವುದು ಅವರ ದೃಷ್ಟಿ ಯಲ್ಲಿ ಹೈಜಾಕ್ ಅಂತೆ! ಇಲ್ಲಿ ನಾವು ಒಮ್ಮೆ ಎಚ್ಚೆತ್ತುಕೊಂಡು ಯೋಚಿಸಬೇಕಿದೆ. ಒಬ್ಬ ದ್ರಾವಿಡ ಸಿದ್ಧ ಇದೇ ಮಣ್ಣಲ್ಲಿ ಹುಟ್ಟಿ, ಅಲೆಮಾರಿಗಳ ನಡುವೆ ಬೆಳೆದು, ಶ್ರಮಿಕರ ಕಷ್ಟ-ಕಾರ್ಪಣ್ಯಗಳಿಗೆ ಕಿವಿಯಾದ. ಕಾಲಾನಂತರದಲ್ಲಿ ಅಸ್ತಿತ್ವಕ್ಕೆ ಬಂದ ಸಾಂಸ್ಥಿಕ ಧರ್ಮ ವೊಂದು ಆತನನ್ನು ತನ್ನ ಪೀಠದ ಅಲಂಕಾರಿಕ ದೇವರನ್ನಾಗಿ ಮಾಡಿಕೊಂಡು, ಅವನ ಸ್ವಾಭಾವಿಕ ಶ್ರಮಿಕ ಬೇರುಗಳನ್ನು ಕತ್ತರಿಸಿ, ಅಲೌಕಿಕ ಕಥೆಗಳ ಮೂಲಕ ಅವನ ಅಪ್ಪಟ ಮನುಷ್ಯ ರೂಪವನ್ನು ಮರೆಮಾಚಿತು.
ನಿಜ ಹೇಳಿ, ಆ ಪ್ರಕ್ರಿಯೆ ‘ಹೈಜಾಕ್’ ಅಲ್ಲವೇ?ರಕ್ತ-ಮಾಂಸಗಳಿಂದ ಕೂಡಿದ ಐತಿಹಾಸಿಕ ವ್ಯಕ್ತಿಯೊಬ್ಬನನ್ನು ಆತನ ಮೂಲ ಸಾಂಸ್ಕೃತಿಕ ನೆಲೆಯಲ್ಲಿ ಮರು ಸ್ಥಾಪಿಸುವ ಶೈಕ್ಷಣಿಕ ಪ್ರಯತ್ನ ‘ಹೈಜಾಕ್’ ಎಂದಾದರೆ, ಅದೇ ವ್ಯಕ್ತಿಯ ನ್ನು ಮಠದ ಗರ್ಭಗುಡಿಯ ಮೂಲೆ ಯಲ್ಲಿ ಕೂರಿಸಿ, ತಮ್ಮ ಸಂಸ್ಥೆಯ ರಕ್ಷಣಾಕವಚವನ್ನಾಗಿ ಮಾಡಿಕೊಂಡ ಮೌಢ್ಯದ ಕ್ರಿಯೆಗೆ ನಾವು ಯಾವ ಹೆಸರು ಕೊಡಬೇಕು?
ಅಯೋನಿಜ ಪ್ರಶ್ನೆ ಮತ್ತು ಕಳೆದುಹೋದ ಬೌದ್ಧಿಕ ಧೈರ್ಯ: ವಡ್ಡಗೆರೆಯವರು ಎತ್ತಿರುವ ಒಂದು ತಾರ್ಕಿಕ ಪ್ರಶ್ನೆಯು ರವಿ ಹಂಜ್ ಅವರನ್ನು ಅತೀವವಾಗಿ ಕಾಡಿದಂತಿದೆ. ರೇಣುಕಾಚಾರ್ಯ ಮತ್ತಿತರ ಪಂಚಾಚಾರ್ಯರ ‘ಅಯೋನಿಜ’ (ತಾಯಿಯ ಗರ್ಭದಿಂದ ಹುಟ್ಟದವರು) ಎಂಬ ಹುಟ್ಟು ವೈಜ್ಞಾನಿಕವೇ ಎಂಬುದು ಆ ಪ್ರಶ್ನೆ. ಒಬ್ಬ ಸಂಶೋಧಕ ಇಂತಹ ಮೂಲಭೂತ ಪ್ರಶ್ನೆ ಕೇಳಿದಾಗ, ಬೌದ್ಧಿಕ ಪ್ರಾಮಾಣಿಕತೆ ಇರುವ ಯಾರೇ ಆಗಲಿ ಅದನ್ನು ನೇರವಾಗಿ ಎದುರಿಸಬೇಕು. ಆದರೆ, ರವಿ ಹಂಜ್ ಅವರು ಆ ಪ್ರಶ್ನೆಗೆ ಉತ್ತರಿಸುವ ಧೈರ್ಯ ತೋರದೆ, ವಡ್ಡಗೆರೆಯವರ ಮೇಲೆಯೇ ಅಸಂಬದ್ಧ ಆರೋಪಗಳನ್ನು ಹೊರಿಸುವ ಹತಾಶ ಯತ್ನ ಮಾಡಿದ್ದಾರೆ. ಇಲ್ಲಿ ವಡ್ಡಗೆರೆಯವರ ಉದ್ದೇಶ ಹಗಲಿನಷ್ಟೇ ಸ್ಪಷ್ಟವಾಗಿದೆ. ಪೌರಾಣಿಕ ಅಲೌಕಿಕತೆಯ ಮಂಜಿನ ಮರೆಯಲ್ಲಿ ಅಡಗಿರುವ ಐತಿಹಾಸಿಕ ಮನುಷ್ಯನನ್ನು ಹೊರತರುವುದು.
ರೇವಣಸಿದ್ಧ ಎಂಬುವವನು ಯಾವ ದೇವರ ಅವತಾರವೂ ಅಲ್ಲ, ಅವನು ಮಣ್ಣಿನ ಕಣಕಣದಲ್ಲೂ ಬೆರೆತ ಒಬ್ಬ ಶ್ರೇಷ್ಠ ಮನುಷ್ಯ. ಈ ಗ್ರಹಿಕೆಯು ಸಂಪೂರ್ಣವಾಗಿ ಐತಿಹಾಸಿಕ ಹಾಗೂ ಬೌದ್ಧಿಕ ವಿಧಾನವಾಗಿದೆ. ಇದನ್ನು ‘ಕಮ್ಯುನಿಸ್ಟ್ ಪಿತೂರಿ’ ಎಂದೋ, ‘ಆರ್ಯ-ದ್ರಾವಿಡ ವಿಭಜನೆ’ ಎಂದೋ ಹಣೆಪಟ್ಟಿ ಕಟ್ಟಲು ಹೊರಟಿರುವುದು ರವಿ ಹಂಜ್ ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ತರ್ಕವಿಲ್ಲದ ಕಡೆ ಕೃತಕ ಭಾವನೆಯನ್ನು ಬಳಸುವ ಹಳೆಯ ಚಾಳಿ ಇದು.
ಚಂದ್ರಕಾಂತ ಬಿಜ್ಜರಗಿ ಮತ್ತು ವ್ಯಕ್ತಿ-ನಿಂದನೆಯ ಅಗ್ಗದ ತಂತ್ರ: ಲೇಖನದ ಬಹು ಪಾಲು ಜಾಗವನ್ನು ಚಂದ್ರಕಾಂತ ಬಿಜ್ಜರಗಿ ಅವರ ವೈಯಕ್ತಿಕ ಜೀವನ, ಅವರ ವೃತ್ತಿ, ಆಚರಣೆ ಹಾಗೂ ಅವರ ಪ್ರಶಸ್ತಿ ವಿವಾದಗಳ ಮೇಲೆ ಕೇಂದ್ರೀಕರಿ ಸಲಾಗಿದೆ. ಇದು ಖಂಡಿತವಾಗಿಯೂ ಒಂದು ಆರೋಗ್ಯಕರ ಬೌದ್ಧಿಕ ಚರ್ಚೆಯ ಭಾಷೆಯಲ್ಲ. ವಾದದಲ್ಲಿ ಸೋತಾಗ ಎದುರಾಳಿಯನ್ನು ವೈಯಕ್ತಿಕವಾಗಿ ಅವಮಾನಿಸಿ ಗೆಲ್ಲಲು ಹೊರಡುವುದು ದುರ್ಬಲ ಮನಸ್ಥಿತಿಯ ಸಂಕೇತ.
ಬಿಜ್ಜರಗಿಯವರ ವೈಯಕ್ತಿಕ ನಂಬಿಕೆಗಳಿಗೂ ಮತ್ತು ವಡ್ಡಗೆರೆ ನಾಗರಾಜಯ್ಯನವರ ವಸ್ತುನಿಷ್ಠ ಶೈಕ್ಷಣಿಕ ಸಂಶೋ ಧನೆಗೂ ಇರುವ ಅಜಗಜಾಂತರವನ್ನು ಲೇಖಕರು ಮರೆ ಮಾಚಿದ್ದಾರೆ. ದಶಕಗಳ ಕಾಲದ ಕಠಿಣ ಕ್ಷೇತ್ರಕಾರ್ಯ, ನೂರಾರು ಜನರ ಸಂದರ್ಶನ, ಮತ್ತು ಶೈಕ್ಷಣಿಕ ವಿಮರ್ಶೆಯನ್ನು ಎದುರಿಸಿ ನಿಂತ ಒಂದು ಘನತೆಯುಕ್ತ ಸಂಶೋಧನೆ ಯನ್ನು, ಬೇರೊಬ್ಬ ವ್ಯಕ್ತಿಯ ವರ್ತನೆಯ ಮೂಲಕ ಅಪಮಾನಿಸಲು ಹೊರಡುವುದು ಬೌದ್ಧಿಕ ಅಪ್ರಾಮಾಣಿಕತೆಯ ಪರಮಾವಧಿ. ತಾನೇ ಹುಲ್ಲಿನ ಗೊಂಬೆ ಮಾಡಿ, ಅದಕ್ಕೆ ಹಸಿ ಬಣ್ಣ ಹಚ್ಚಿ ಬೆಂಕಿ ಇಟ್ಟು ನಾನು ಗೆದ್ದೆ ಎಂದು ಬೀಗುವ ಮಕ್ಕಳ ಆಟವಿದು.
ಧರ್ಮ ಒಡೆಯುತ್ತಿರುವವರು ಅಸಲಿಗೆ ಯಾರು?
ರವಿ ಹಂಜ್ ಅವರು ಲೇಖನದ ಕೊನೆಯಲ್ಲಿ ‘ಧರ್ಮ ಭಂಜನೆ’ ಎಂಬ ಪದವನ್ನು ಬಳಸಿ ಓದುಗರಲ್ಲಿ ಭಾವನಾತ್ಮಕ ಅಲೆ ಎಬ್ಬಿಸಲು ಯತ್ನಿಸುತ್ತಾರೆ. ಆದರೆ, ಇತಿಹಾಸದ ಪುಟ ಗಳನ್ನು ತಿರುವಿ ಹಾಕಿ ಯೋಚಿಸಿ ನೋಡಿದರೆ, ಬಸವಾದಿ ಶರಣರು ಕಟ್ಟಿದ ಅಪ್ಪಟ ಸಮಾನತೆಯ ಆಶಯ ಏನಾಯಿತು? ಶ್ರಮಿಕರ ಪರವಾಗಿ ನಿಂತ ಆ ಮಹಾನ್ ಚಳವಳಿಯ ಮೌಲ್ಯಗಳು ಇಂದು ಯಾವ ಮಠದ ಆಡಳಿತದಲ್ಲಿ ಮುಕ್ತವಾಗಿ ಉಸಿರಾಡುತ್ತಿವೆ? ಸಮಾಜದ ಮೂಲ ಆಶಯಗಳನ್ನು ತಮ್ಮ ಸಾಂಸ್ಥಿಕ ಶಕ್ತಿಗಾಗಿ ಅಪಹರಿಸಿ, ಶರಣರ ತತ್ವಗಳಿಗೆ ತಿಲಾಂಜಲಿ ಇಟ್ಟ ನಂತರ, ‘ಈಗ ಧರ್ಮ ರಕ್ಷಣೆ’ ಎಂದು ಕೂಗಿಕೊಳ್ಳುವ ನೈತಿಕ ಅರ್ಹತೆ ಇರುವವರು ಯಾರು? ಈ ಪ್ರಶ್ನೆಯನ್ನು ರವಿ ಹಂಜ್ ಅವರು ತಮಗೆ ತಾವೇ ಕೇಳಿ ಕೊಳ್ಳಬೇಕಿದೆ. ತೋಂಟದ ಸಿದ್ದರಾಮ ಶ್ರೀಗಳಂತಹ ವಿದ್ವತ್ಪೂರ್ಣ ಸ್ವಾಮಿಗಳು ವಡ್ಡಗೆರೆ ಯವರ ಈ ಸಾಂಸ್ಕೃತಿಕ ಶೋಧನೆಯನ್ನು ಬೆಂಬಲಿಸಿದ್ದರೆ, ಆ ನಿಲುವು ಧರ್ಮವನ್ನು ಒಡೆಯುವುದಕ್ಕಲ್ಲ; ಬದಲಾಗಿ ಧರ್ಮವನ್ನು ಅದರ ಮರೆತು ಹೋದ ಮೂಲ ಆಶಯದತ್ತ ಮರಳಿಸುವ ಕಳಕಳಿಯಾಗಿದೆ. ಈ ಅತ್ಯಂತ ಸರಳ ಸತ್ಯವನ್ನು ರವಿ ಹಂಜ್ ಅವರಿಗೆ ಅರ್ಥ ಮಾಡಿಸಲು ಇನ್ನು ಎಷ್ಟು ಶಬ್ದಗಳು ಬೇಕು?
ಸತ್ಯವಿರುವುದು ಶಾಸನದ ಭಾಷೆಯಲ್ಲಲ್ಲ, ತಳ ಸಮುದಾಯದ ಉಸಿರಿನಲ್ಲಿ:
ರೇವಣಸಿದ್ಧ ಎಂಬ ಮಹಾಪುರುಷನನ್ನು ಕೇವಲ ಒಂದು ಪೀಠದ ನಿರ್ಜೀವ ವಿಗ್ರಹವಾಗಿ ಮಾತ್ರ ಬಂಧಿಸಿಡುವ ಶಕ್ತಿ ಕಾಲಕ್ಕೂ ಇಲ್ಲ, ಯಾವ ಸಾಂಸ್ಥಿಕ ವ್ಯವಸ್ಥೆಗೂ ಇಲ್ಲ. ಅವರು ಸಾವಿರಾರು ವರ್ಷಗಳಿಂದ ಕುರುಬ ಸಮಾಜದ ಹಾಡುಗಳಲ್ಲಿ, ಅಲೆಮಾರಿಗಳ ನಿತ್ಯದ ಬದುಕಿನಲ್ಲಿ, ಮತ್ತು ಶ್ರಮಿಕರ ರಾತ್ರಿ ಯ ಕಿಚ್ಚಿನ ಬೆಳಕಿನಲ್ಲಿ ಸಜೀವವಾಗಿ ಉಸಿರಾಡು ತ್ತಿದ್ದಾರೆ. ಆ ಅಸ್ಮಿತೆಗೆ ಯಾವ ತಾಮ್ರ-ಶಿಲಾ ಶಾಸನಗಳ ಅಧಿಕೃತತೆಯ ಹಂಗೂ ಇಲ್ಲ. ವಡ್ಡಗೆರೆ ನಾಗರಾಜಯ್ಯನವರ ಸಂಶೋಧನೆ ಮಾಡುತ್ತಿರುವುದು ಈ ಜೀವಂತ ಪರಂಪರೆ ಯ ದನಿಗೆ ವೈಜ್ಞಾನಿಕ ಮತ್ತು ಶಾಸ್ತ್ರೀಯ ಭಾಷೆ ಕೊಡುವ ಐತಿಹಾಸಿಕ ಜವಾಬ್ದಾರಿ ಯನ್ನು. ಅದನ್ನು ನಿಮ್ಮ ಅಗ್ಗದ ವಾದಗಳಿಂದಾಗಲೀ, ವೈಯಕ್ತಿಕ ತೇಜೋವಧೆ ಯಿಂದಾಗಲೀ ತಳ್ಳಿ ಹಾಕಲು ಸಾಧ್ಯ ವಿಲ್ಲ. ರವಿ ಹಂಜ್ ಅವರಂತಹ ಪ್ರಬುದ್ಧ ಹಿರಿಯ ಲೇಖಕರು ತಾವು ಕಲ್ಪಿಸಿಕೊಂಡಿರುವ ‘ಅಸ್ಮಿತೆ’ಯ ಗೂಡಿನಿಂದ ಹೊರ ಬಂದು, ಜನಪದದ ಬಯಲಿನಲ್ಲಿ ನಿಂತು ಇತಿಹಾಸವನ್ನು ನೋಡುವ ಧೈರ್ಯ ಮಾಡಬೇಕಾಗಿದೆ.
ಸತ್ಯ ಯಾವಾಗಲೂ ಶಾಸನಗಳ ಭಾಷೆಗಿಂತ ಹೆಚ್ಚಾಗಿ, ಜನರ ನಾಲಿಗೆಯ ಮೇಲೆ ಉಳಿದು ಕೊಂಡಿರುತ್ತದೆ ಎಂಬುದನ್ನು ಅರಿಯುವುದು ಇಂದಿನ ತುರ್ತು. ಸಕಲಜೀವಾತ್ಮರಿಗೆ ಲೇಸಾಗಲೆಂದು, ಅನ್ನದಾತನಿಗೆ/ಕಾಯಕ ಜೀವಿಗಳಿಗೆ ಜಯವಾಗಲೆಂದು ಪ್ರಾರ್ಥಿಸುತ್ತ, ಬಸವಾದಿ ಶರಣರಿಗೆ ಶರಣಾರ್ಥಿ ಹೇಳುವೆ.