ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಸೂರ್ಯ ನಮಸ್ಕಾರ

ದಂಡಾಸನ ಮತ್ತು ಸಾಷ್ಟಾಂಗ ನಮಸ್ಕಾರ ಮಾಡುವಾಗ, ಓಂ ಖಗಾಯ ನಮಃ ಮತ್ತು ಓಂ ಪೂಷ್ಣೇ ನಮಃ ಎಂದು ಜಪಿಸಿದರು. ಭೂತಾಯಿ ನಿನ್ನನ್ನು ತಾಯಿಯಂತೆ ಪೋಷಿಸುತ್ತಿದ್ದಾಳೆ. ನೀನು ಬಲಹೀನನಲ್ಲ, ಈ ಸೃಷ್ಟಿಯ ಶಕ್ತಿ ನಿನ್ನ ಬೆನ್ನಿಗಿದೆ, ಎಂಬ ಮಾತುಗಳು ರಾಜೀವನ ಕಣ್ಣಲ್ಲಿ ನೀರು ಹೆಪ್ಪುಗಟ್ಟಿತ್ತು. ಅದು ದುಃಖದ ಹನಿಗಳಲ್ಲ, ಕೃತಜ್ಞತೆಯ ಕಣ್ಣೀರಾಗಿತ್ತು.

ಒಂದೊಳ್ಳೆ ಮಾತು

ಬೆಳಗಿನ ಜಾವದ ತಂಪಾದ ಗಾಳಿ ಬೀಸುತ್ತಿದ್ದರೂ, ರಾಜೀವನ ಮನಸ್ಸಿನಲ್ಲಿ ಮಾತ್ರ ಬಿರುಗಾಳಿ ಎದ್ದಿತ್ತು. ಜೀವನದ ಸೋಲುಗಳು, ಕೆಲಸದ ಒತ್ತಡ ಮತ್ತು ಭವಿಷ್ಯದ ಚಿಂತೆಗಳು ಅವನನ್ನು ಕುಗ್ಗಿಸಿದ್ದವು. ಅಂದು ನಿದ್ದೆ ಬಾರದೆ ಮನೆಯ ತಾರಸಿಯ ಮೇಲೆ ಕುಳಿತು ಶೂನ್ಯವನ್ನೇ ನೋಡುತ್ತಿದ್ದ ರಾಜೀವನ ಕಣ್ಣುಗಳಲ್ಲಿ ಹತಾಶೆ ತುಂಬಿತ್ತು.

ಅವನ ತಾತ, ಸದಾ ಪ್ರಶಾಂತವಾಗಿರುವ ಹಿರಿಯ ಜೀವ, ರಾಜೀವನ ಭುಜದ ಮೇಲೆ ಮೆಲ್ಲನೆ ಕೈ ಇಟ್ಟರು. ರಾಜೀವ, ಕತ್ತಲೆ ಎಷ್ಟೇ ದಟ್ಟವಾಗಿದ್ದರೂ, ಸೂರ್ಯೋದಯವನ್ನು ತಡೆ ಯಲು ಅದಕ್ಕೆ ಸಾಧ್ಯವಿಲ್ಲ. ಬಾ, ಇಂದು ಆ ಸೂರ್ಯನ ಅಪ್ಪುಗೆಯಲ್ಲಿ ನಿನ್ನ ನೋವನ್ನು ಕರಗಿಸೋಣ, ಎಂದರು.

ತಾತ ಅವನನ್ನು ಪೂರ್ವ ದಿಕ್ಕಿಗೆ ನಿಲ್ಲಿಸಿ, ಸೂರ್ಯ ನಮಸ್ಕಾರದ ಸಂಸ್ಕಾರವನ್ನು ಅವನಿಗೆ ಧಾರೆ ಎರೆದರು. ರಾಜೀವ ಕೈಗಳನ್ನು ಜೋಡಿಸಿ ನಿಂತನು. ತಾತ ಹೇಳಿದರು, ರಾಜೀವ, ಮೊದಲ ಮಂತ್ರ ‘ಓಂ ಮಿತ್ರಾಯ ನಮಃ’. ಇದರರ್ಥ ಸೂರ್ಯ ಎಲ್ಲರಿಗೂ ಮಿತ್ರ. ನೀನು ಒಂಟಿಯಲ್ಲ, ಈ ಪ್ರಕೃತಿ ನಿನ್ನ ಜೊತೆಗಿದೆ ಎಂದು ಭಾವಿಸು. ರಾಜೀವನಿಗೆ ತಾನು ಏಕಾಂಗಿ ಯಲ್ಲ ಎಂಬ ಸಣ್ಣ ಧೈರ್ಯ ಮೂಡಿತು.

ಇದನ್ನೂ ಓದಿ:

ಕೈಗಳನ್ನು ಮೇಲಕ್ಕೆತ್ತಿ ಹಿಂದಕ್ಕೆ ಬಾಗುವಾಗ (ಹಸ್ತೌತ್ತನಾಸನ), ಓಂ ರವಯೇ ನಮಃ ಎನ್ನುತ್ತಾ, ನಿನ್ನ ದುಃಖದ ಭಾರವನ್ನು ಇಳಿಸಿ, ರವಿಯಂತೆ ಪ್ರಕಾಶಿಸಲು ಸಿದ್ಧನಾಗು, ಎಂದರು. ರಾಜೀವ ಆಕಾಶದ ಕಡೆ ಮುಖ ಮಾಡಿದಾಗ, ಅವನ ಎದೆಯಲ್ಲಿದ್ದ ಭಾರ ಹಗುರಾದಂತೆ ಭಾಸವಾಯಿತು.

ಮುಂದಕ್ಕೆ ಬಾಗಿ ಪಾದಗಳನ್ನು ಮುಟ್ಟುವಾಗ (ಹಸ್ತಪಾದಾಸನ), ಓಂ ಸೂರ್ಯಾಯ ನಮಃ ಎಂದರು. ನಿನ್ನ ಸೋಲಿನ ಕತ್ತಲೆಯನ್ನು ಆ ಸೂರ್ಯನಿಗೆ ಒಪ್ಪಿಸಿಬಿಡು ರಾಜೀವ, ಅವನು ಕತ್ತಲೆ ನಿವಾರಕ, ಎಂದ ಮಾತು ರಾಜೀವನ ಮನ ಮುಟ್ಟಿತು. ಕಾಲನ್ನು ಹಿಂದಕ್ಕೆ ಚಾಚಿ ತಲೆ ಎತ್ತಿದಾಗ (ಅಶ್ವ ಸಂಚಲನಾಸನ), ಓಂ ಭಾನವೇ ನಮಃ ಎಂಬ ಮಂತ್ರ ಬಂತು. ನೋಡು ರಾಜೀವ, ಕತ್ತಲೆಯನ್ನು ಸರಿಸಿ ಬರುವ ಆ ಭಾನುವಿನ ತೇಜಸ್ಸು ನಿನ್ನಲ್ಲೂ ಇದೆ, ಎಂದರು ತಾತ.

ದಂಡಾಸನ ಮತ್ತು ಸಾಷ್ಟಾಂಗ ನಮಸ್ಕಾರ ಮಾಡುವಾಗ, ಓಂ ಖಗಾಯ ನಮಃ ಮತ್ತು ಓಂ ಪೂಷ್ಣೇ ನಮಃ ಎಂದು ಜಪಿಸಿದರು. ಭೂತಾಯಿ ನಿನ್ನನ್ನು ತಾಯಿಯಂತೆ ಪೋಷಿಸು ತ್ತಿದ್ದಾಳೆ. ನೀನು ಬಲಹೀನನಲ್ಲ, ಈ ಸೃಷ್ಟಿಯ ಶಕ್ತಿ ನಿನ್ನ ಬೆನ್ನಿಗಿದೆ, ಎಂಬ ಮಾತುಗಳು ರಾಜೀವನ ಕಣ್ಣಲ್ಲಿ ನೀರು ಹೆಪ್ಪುಗಟ್ಟಿತ್ತು. ಅದು ದುಃಖದ ಹನಿಗಳಲ್ಲ, ಕೃತಜ್ಞತೆಯ ಕಣ್ಣೀರಾಗಿತ್ತು.

ಹಾವಿನಂತೆ ಹೆಡೆ ಎತ್ತಿ (ಭುಜಂಗಾಸನ) ಓಂ ಹಿರಣ್ಯ ಗರ್ಭಾಯ ನಮಃ ಎಂದಾಗ, ತಾತ ಗಟ್ಟಿಯಾಗಿ ಹೇಳಿದರು, ರಾಜೀವ, ನಿನ್ನೊಳಗೆ ಒಂದು ಚಿನ್ನದಂತಹ ಸುಂದರ ಮನಸ್ಸಿದೆ. ಸೋಲುಗಳು ಅದನ್ನು ಮರೆಮಾಚಿರಬಹುದು, ಆದರೆ ನಾಶಮಾಡಲು ಸಾಧ್ಯವಿಲ್ಲ. ಈ ಮಾತು ರಾಜೀವನ ಎದೆಯಲ್ಲಿದ್ದ ನಡುಕವನ್ನು ನಿಲ್ಲಿಸಿ, ಆತ್ಮವಿಶ್ವಾಸವನ್ನು ತುಂಬಿತು.

ಮುಂದಿನ ಆಸನಗಳಲ್ಲಿ ಓಂ ಮರೀಚಯೇ ನಮಃ, ಓಂ ಆದಿತ್ಯಾಯ ನಮಃ, ಓಂ ಸವಿತ್ರೇ ನಮಃ ಮತ್ತು ಓಂ ಅರ್ಕಾಯ ನಮಃ ಎಂದು ಹೇಳುತ್ತಾ, ರಾಜೀವ ತನ್ನ ಅಸ್ತಿತ್ವವನ್ನು ಬ್ರಹ್ಮಾಂಡದ ಶಕ್ತಿಗೆ ಜೋಡಿಸಿದನು.

ಕೊನೆಯದಾಗಿ, ಮತ್ತೆ ನೇರವಾಗಿ ನಿಂತು (ತಾಡಾಸನ) ಓಂ ಭಾಸ್ಕರಾಯ ನಮಃ ಎಂದು ಕೈ ಮುಗಿದಾಗ, ದಿಗಂತದಲ್ಲಿ ಸೂರ್ಯ ಪೂರ್ತಿಯಾಗಿ ಮೂಡಿ ಬಂದಿದ್ದನು. ಬರೀ ಆಗಸದಲ್ಲಿ ಮಾತ್ರವಲ್ಲ, ರಾಜೀವನ ಮನಸ್ಸಿನಲ್ಲೂ ಸೂರ್ಯೋದಯವಾಗಿತ್ತು. ರಾಜೀವ ದೀರ್ಘವಾಗಿ ಉಸಿರು ಬಿಟ್ಟನು. ಅವನ ಕೆನ್ನೆಯ ಮೇಲೆ ಹರಿಯುತ್ತಿದ್ದ ಆನಂದ ಭಾಷ್ಪ ಬೆಳಗಿನಜಾವದ ಸೂರ್ಯನ ಕಿರಣಗಳು ತಾಗಿ ಮಿನುಗುತ್ತಿತ್ತು. ಅವನು ತಾತನ ಪಾದ ಮುಟ್ಟಿ, ತಾತ, ಇಷ್ಟು ದಿನ ನಾನು ಕತ್ತಲನ್ನೇ ನೋಡುತ್ತಿದ್ದೆ, ಇಂದು ನನ್ನೊಳಗಿನ ಬೆಳಕನ್ನು ತೋರಿಸಿದಿರಿ, ಎಂದನು.

ಪ್ರತಿ ಬಾರಿ ಬಿದ್ದಾಗಲೂ, ಸೂರ್ಯನಂತೆ ಮತ್ತೆ ಏಳಬಹುದು ಎಂಬ ಸತ್ಯವನ್ನು ರಾಜೀವ ಕಂಡುಕೊಂಡನು. ಭಾರತೀಯ ಸನಾತನ ಧರ್ಮದಿಂದ, ಪದ್ಧತಿಗಳಿಂದ ನಮಗೆ ಸಿಕ್ಕ ಯೋಗ, ಸೂರ್ಯ ನಮಸ್ಕಾರ ಮುಂತಾದ ಸಂಸ್ಕಾರಗಳು ಬರೀ ದೈಹಿಕವಾಗಿ ಅಲ್ಲ ಮಾನಸಿಕವಾಗಿ ಅದಕ್ಕೂ ಮಿಗಿಲಾಗಿ ಸರ್ವತೋಮುಖವಾಗಿ ನಮ್ಮ ಮನುಷ್ಯ ಜನ್ಮವನ್ನು ಔನ್ನತ್ಯಕ್ಕೆ ಕರೆದೊಯ್ಯುವ ಸಾಮರ್ಥ್ಯವಿರುವ ಹಿರಿಯರ ಆಶೀರ್ವಾದ ರೂಪದ ವರಗಳು.

ರೂಪಾ ಗುರುರಾಜ್

View all posts by this author