ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಮಗುವು ಒಂದು ಕುಟುಂಬದ ಭವಿಷ್ಯ, ಸಮಾಜದ ಆಸ್ತಿಯೂ ಆಗಿದೆ. ಮಗುವಿನ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗಳು ಸಮತೋಲನದಲ್ಲಿ ನಡೆದಾಗ ಮಾತ್ರ ಅದು ಸಂಪೂರ್ಣ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತದೆ. ಇಂದಿನ ವೇಗದ ಯುಗದಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ, ಲಸಿಕೆ, ವೈದ್ಯಕೀಯ ಆರೈಕೆ- ಎಲ್ಲವನ್ನೂ ಒದಗಿಸುವ ಪ್ರಯತ್ನದಲ್ಲಿzರೆ. ಆದರೂ ಮಕ್ಕಳಲ್ಲಿ ಪದೇಪದೆ ಕಾಡುವ ಜ್ವರ-ನೆಗಡಿ, ಅಲರ್ಜಿ, ಜೀರ್ಣದೋಷ, ಏಕಾಗ್ರತೆಯ ಕೊರತೆ, ಸ್ಮರಣಶಕ್ತಿ ಕುಂದುವಿಕೆ ಮುಂತಾದ ಸಮಸ್ಯೆಗಳು ಹೆಚ್ಚುತ್ತಿರುವುದು ವಾಸ್ತವ.
ಈ ಹಿನ್ನೆಲೆಯಲ್ಲಿ ಆಯುರ್ವೇದವು ಸಾವಿರಾರು ವರ್ಷಗಳ ಮುನ್ನವೇ ಪರಿಚಯಿಸಿದ ಒಂದು ಅಮೂಲ್ಯ ಸಂಸ್ಕಾರ ಇಂದಿಗೂ ಪ್ರಸ್ತುತತೆ ಯನ್ನು ಉಳಿಸಿಕೊಂಡಿದೆ- ಅದೇ ಸ್ವರ್ಣಪ್ರಾಶನ.
ಸ್ವರ್ಣಪ್ರಾಶನವೆಂದರೇನು?
‘ಸ್ವರ್ಣ’ ಎಂದರೆ ಚಿನ್ನ, ‘ಪ್ರಾಶನ’ ಎಂದರೆ ತಿನ್ನಿಸುವುದು. ಅಂದರೆ ಶಾಸ್ತ್ರೋಕ್ತ ವಿಧಾನ ದಲ್ಲಿ ಸಂಸ್ಕರಿಸಲಾದ ಸ್ವರ್ಣವನ್ನು ಅತಿ ಸೂಕ್ಷ್ಮ ಪ್ರಮಾಣದಲ್ಲಿ ಮಗುವಿಗೆ ನೀಡುವುದು ಸ್ವರ್ಣಪ್ರಾಶನ. ಇದು ಕೇವಲ ಚಿನ್ನವನ್ನು ತಿನ್ನಿಸುವ ಪದ್ಧತಿಯಲ್ಲ. ಸಂಸ್ಕರಿತ, ಶೋಧಿತ, ಭಸ್ಮೀಕೃತ ಸ್ವರ್ಣವನ್ನು ಔಷಧಿಯ ರೂಪದಲ್ಲಿ ನೀಡುವ ರಸಾಯನ ಕ್ರಮ.
ಶಾಸೀಯ ಆಧಾರ
ಸ್ವರ್ಣಪ್ರಾಶನದ ಉಲ್ಲೇಖವು ಕಾಶ್ಯಪ ಸಂಹಿತಾ ಸಮೇತ ಎಲ್ಲಾ ಬೃಹತಯಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅಲ್ಲಿ ‘ಸ್ವರ್ಣಪ್ರಾಶನಂ ಮೇಧಾಗ್ನಿಬಲವರ್ಧನಮ’ ಎಂದು ಹೇಳಿ, ಸ್ವರ್ಣ ಸೇವನೆಯಿಂದ ಮೇಧಾಶಕ್ತಿ (ಬುದ್ಧಿಶಕ್ತಿ), ಅಗ್ನಿ (ಜೀರ್ಣಶಕ್ತಿ) ಮತ್ತು ದೇಹಬಲವು ವೃದ್ಧಿಯಾಗುತ್ತದೆ ಎಂದು ವಿವರಿಸಲಾಗಿದೆ. ಇದು ಕೇವಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲ, ಜತೆಗೆ ಸಮಗ್ರ ಬೆಳವಣಿಗೆಗೂ ಸಹಾಯಕವೆಂದು ಶಾಸ್ತ್ರದಲ್ಲಿ ವರ್ಣಿಸ ಲಾಗಿದೆ.
ಇದನ್ನೂ ಓದಿ: Dr Sadhanashree Column: ಬಾಧಿಸುವ ಬಾಯಿಹುಣ್ಣು: ವಿಟಮಿನ್ ಕೊರತೆಯೇ ?
ಖನಿಜವನ್ನು ನೇರವಾಗಿ ಸೇವಿಸಬಹುದೇ?
ಪ್ರಕೃತಿಯಲ್ಲಿ ದೊರೆಯುವ ಚಿನ್ನವನ್ನು ನೇರವಾಗಿ ಸೇವಿಸುವುದು ಆಯುರ್ವೇದದ ದೃಷ್ಟಿ ಯಲ್ಲಿ ಯೋಗ್ಯವಲ್ಲ. ಯಾಕೆಂದರೆ ಅದು ದೇಹಕ್ಕೆ ಅವಶ್ಯಕವಾದ ರೀತಿಯಲ್ಲಿ ಪರಿವರ್ತಿತ ವಾಗುವುದಿಲ್ಲ. ಶರೀರವು ಪಂಚಭೂತಗಳ ಸಮನ್ವಯದಿಂದ ನಿರ್ಮಿತವಾಗಿದೆ- ಭೂಮಿ, ಆಪ್, ತೇಜಸ್, ವಾಯು ಮತ್ತು ಆಕಾಶ. ಇದೇ ರೀತಿಯಾಗಿ ಖನಿಜವೂ ಭೌತಿಕ ಗುಣಗಳನ್ನು ಹೊಂದಿದೆ.
‘ಸಂಸ್ಕಾರೋ ಹಿ ಗುಣಾಂತರಾಧಾನಮ್’- ಸಂಸ್ಕಾರವು ಗುಣವನ್ನು ಪರಿವರ್ತಿಸುತ್ತದೆ. ಚಿನ್ನವನ್ನು ದೇಹಕ್ಕೆ ಗ್ರಾಹ್ಯವಾಗುವ, ಸೂಕ್ಷ್ಮವಾಗುವ ಮತ್ತು ಧಾತುಪೋಷಣೆಗೆ ಯೋಗ್ಯ ವಾಗುವ ಸ್ಥಿತಿಗೆ ತರುವುದೇ ಸಂಸ್ಕಾರದ ಉದ್ದೇಶ.
ಶೋಧನ ಮತ್ತು ಸಂಸ್ಕಾರ
ಆಯುರ್ವೇದದಲ್ಲಿ ಲೋಹಗಳು ಮತ್ತು ಖನಿಜಗಳನ್ನು ಔಷಧ ರೂಪದಲ್ಲಿ ಬಳಸುವ ಮುನ್ನ ಅವುಗಳನ್ನು ಶೋಧನ (ಶುದ್ಧೀಕರಣ) ಮತ್ತು ಮಾರಣ (ಭಸ್ಮೀ ಕರಣ) ಎಂಬ ಪ್ರಕ್ರಿಯೆಗಳಿಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಗಳು ಕೇವಲ ಭೌತಿಕ ಶುದ್ಧೀಕರಣವಲ್ಲ; ಅವು ಔಷಧದ ಗುಣಗಳನ್ನು ಪರಿವರ್ತಿಸಿ, ದೇಹಕ್ಕೆ ಸೂಕ್ಷ್ಮವಾಗಿ ಪ್ರವೇಶಿಸುವ ಶಕ್ತಿಯನ್ನು ನೀಡುತ್ತವೆ. ಶೋಧನ ಪ್ರಕ್ರಿಯೆಯಲ್ಲಿ ಲೋಹವನ್ನು ವಿವಿಧ ದ್ರವ್ಯಗಳಲ್ಲಿ ಸಂಸ್ಕರಿಸ ಲಾಗುತ್ತದೆ.
ಇದರಿಂದ ಅಶುದ್ಧಿಗಳು ನಿವಾರಣೆಯಾಗುತ್ತವೆ ಮತ್ತು ಅದರ ದೋಷಕಾರಿ ಅಂಶಗಳು ಕಡಿಮೆ ಯಾಗುತ್ತವೆ. ನಂತರ ಮಾರಣ ಪ್ರಕ್ರಿಯೆಯಲ್ಲಿ ನಿಯಂತ್ರಿತ ವಿಧಾನದಲ್ಲಿ ಭಸ್ಮ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಈ ಭಸ್ಮವು ಸೂಕ್ಷ್ಮಕಣಗಳಾಗಿ ರೂಪುಗೊಂಡು ದೇಹಕ್ಕೆ ಸುಲಭವಾಗಿ ಗ್ರಾಹ್ಯವಾಗುತ್ತದೆ. ಈ ರೀತಿಯಾಗಿ ಸಂಸ್ಕರಿತವಾದ ಸ್ವರ್ಣವೇ ‘ಸ್ವರ್ಣ ಭಸ್ಮ’ ಎಂದು ಕರೆಯಲ್ಪಡುತ್ತದೆ. ಇದು ಕೇವಲ ಚಿನ್ನವಲ್ಲ; ಆಯುರ್ವೇದದ ದೀರ್ಘ ಸಂಸ್ಕಾರದ ಫಲವಾಗಿ ರೂಪುಗೊಂಡ ಔಷಧ.
ಸ್ವರ್ಣದ ಗುಣಗಳು
ಸ್ವರ್ಣವನ್ನು ಆಯುರ್ವೇದದಲ್ಲಿ ‘ರಸಾಯನ ದ್ರವ್ಯ’ ವೆಂದು ಪರಿಗಣಿಸಲಾಗಿದೆ. ಅದರ ಗುಣಗಳು ಹೀಗಿವೆ:
ರಸ: ಮಧುರ, ಧಾತುಪೋಷಕ.
ಗುಣ: ಲಘು, ಸ್ನಿಗ್ಧ-ಸೂಕ್ಷ್ಮ ಸ್ರೋತಸ್ಸುಗಳಲ್ಲಿ ಪ್ರವೇಶಶಕ್ತಿ.
ವೀರ್ಯ: ಶೀತ, ಪಿತ್ತಶಮನಕಾರಿ.
ವಿಪಾಕ: ಮಧುರ, ಓಜೋವರ್ಧಕ.
ಪ್ರಭಾವ: ಮೇಧ್ಯ, ರಸಾಯನ, ಆಯುರ್ವರ್ಧಕ.
ಸ್ವರ್ಣವು ಓಜಸ್ಸನ್ನು ವೃದ್ಧಿಸಿ ವ್ಯಾಧಿಕ್ಷಮತ್ವವನ್ನು ಬಲಪಡಿಸುತ್ತದೆ.
ಯಾವ ಚಿನ್ನ ಉಪಯೋಗಿಸಬೇಕು?
ಸ್ವರ್ಣಪ್ರಾಶನಕ್ಕೆ ಅಪರಂಜಿ (24 ಕ್ಯಾರೆಟ್) ಶುದ್ಧ ಚಿನ್ನ ಬಳಸಬೇಕು. ಆಭರಣ ಚಿನ್ನದಲ್ಲಿ ತಾಮ್ರ ಮುಂತಾದ ಮಿಶ್ರಧಾತುಗಳಿರುತ್ತವೆ. ಆದ್ದರಿಂದ ಅದು ಔಷಧಿಯ ಉಪಯೋಗಕ್ಕೆ ಯೋಗ್ಯವಲ್ಲ. ಸಾಮಾನ್ಯವಾಗಿ ಸ್ವರ್ಣದ ಶೋಧನದಲ್ಲಿ ಅಪರಂಜಿ ಚಿನ್ನವನ್ನು ಕೆಂಪಾ ಗುವ ತನಕ ಕಾಯಿಸಿ, ನಂತರ ವಿವಿಧ ಔಷಧಿಯ ಕಷಾಯಗಳಲ್ಲಿ ಅದ್ದಿ ಶುದ್ಧಗೊಳಿಸ ಲಾಗುತ್ತದೆ. ಇಂಥ ಚಿನ್ನ ಬಳಸಲು ಯೋಗ್ಯ.
ಸ್ವರ್ಣಪ್ರಾಶನದ ವಿಧಾನಗಳು
ಉಜ್ಜಿ ನೀಡುವ ವಿಧಾನ: ಅಪರಂಜಿ ಚಿನ್ನವನ್ನು (ಬಳೆ/ಉಂಗುರ) ಒಂದು ಹನಿ ಜೇನು ತುಪ್ಪ ಮತ್ತು ತುಪ್ಪದೊಂದಿಗೆ ಸಾಣೆ ಕಲ್ಲಿನ ಮೇಲೆ ಉಜ್ಜಿ, ಮಗುವಿಗೆ ನಿತ್ಯವೂ ನೆಕ್ಕಿಸು ವುದು.
ಸ್ವರ್ಣ ಸಂಸ್ಕರಿತ ಹಾಲು: ಅಕ್ಕಸಾಲಿಗರ ಬಳಿ ಅಪರಂಜಿ ಚಿನ್ನದ ಹಾಳೆಯನ್ನು ಪಡೆದು, ಆ ಚಿನ್ನದ ಹಾಳೆಯನ್ನು ಅರ್ಧ ಅಂಶ ಹಾಲು, ಅರ್ಧ ಅಂಶ ನೀರಿನಲ್ಲಿ 2-3 ನಿಮಿಷ ಕುದಿಸಿ ನಂತರ ಆ ಹಾಲನ್ನು ನಿತ್ಯವೂ ಸೇವಿಸುವುದು. ಈ ಹಾಲು ರಸಾಯನವಾಗಿ ಎಲ್ಲಾ ಧಾತುಗಳನ್ನು ಪೋಷಿಸುತ್ತದೆ. ಗರ್ಭಾವಸ್ಥೆಯಲ್ಲಿ- ಗರ್ಭಿಣಿಯರು ಸ್ವರ್ಣ ಸಂಸ್ಕರಿತ ಹಾಲನ್ನು ನಿತ್ಯವೂ ಸೇವಿಸುವುದು ಭ್ರೂಣದ ಬೆಳವಣಿಗೆಗೆ ಪೂರಕವೆಂದು ಪರಿಗಣಿಸ ಲಾಗಿದೆ.
ವಚಾ-ಸ್ವರ್ಣ ವಿಧಾನ: ಬಜೆ ಬೇರಿನ ಕಡ್ದಿಯ ಒಳಗೆ ಸುಸಂಸ್ಕರಿತ ಚಿನ್ನದ ಕಡ್ಡಿಯನ್ನು ಅಳವಡಿಸಿ, ಇದನ್ನು ನಿತ್ಯವೂ ಜೇನುತುಪ್ಪ ಮತ್ತು ತುಪ್ಪದ ಜತೆ ತೇಯ್ದು ಮಗುವಿಗೆ ನೆಕ್ಕಿಸುವುದು.
ಸ್ವರ್ಣಬಿಂದು ಪ್ರಾಶನ: ನುರಿತ ಆಯುರ್ವೇದ ವೈದ್ಯರು ನಿಗದಿತ ಪ್ರಮಾಣದ ಸ್ವರ್ಣ ಭಸ್ಮ + ಮೇಧ್ಯ ತುಪ್ಪ + ಜೇನುತುಪ್ಪಗಳನ್ನು ಹನಿ ಪ್ರಮಾಣದಲ್ಲಿ ಮಿಶ್ರಣ ಮಾಡಿ ನೀಡುವರು. ಪುಷ್ಯ ನಕ್ಷತ್ರದಂದು ತಿಂಗಳಿಗೆ ಒಮ್ಮೆ ನೀಡುವುದು ಜನಪ್ರಿಯ. ತಿಂಗಳಿ ಗೊಮ್ಮೆ ನೀಡುವ ಸ್ವರ್ಣಬಿಂದು ಪ್ರಾಶನವು ಹೆಚ್ಚು ಪ್ರಚಲಿತದಲ್ಲಿದ್ದರೂ ನಿತ್ಯಪ್ರಾಶನವೇ ಹೆಚ್ಚು ಪರಿಣಾಮಕಾರಿ.
ಉತ್ತಮ ಕಾಲ ಯಾವುದು?
ಆಯುರ್ವೇದದಲ್ಲಿ ಔಷಧಿಯ ಫಲಪ್ರದತೆ ಕೇವಲ ಅದರ ಗುಣಧರ್ಮದಿಂದ ಮಾತ್ರ ನಿರ್ಧಾರವಾಗುವುದಿಲ್ಲ; ಕಾಲ (ಸಮಯ) ಕೂಡ ಅಷ್ಟೇ ಮುಖ್ಯ. ಸರಿಯಾದ ಕಾಲದಲ್ಲಿ ನೀಡಿದ ಔಷಧಿಯೇ ಭೇಷಜ (ಔಷಧ)ವಾಗಿ ಕಾರ್ಯನಿರ್ವಹಿಸುತ್ತದೆ. ಸ್ವರ್ಣ ಪ್ರಾಶನವು ‘ರಸಾಯನ’ ಕ್ರಮವಾಗಿರುವುದರಿಂದ, ಅದನ್ನು ನೀಡುವ ಸಮಯವೂ ‘ರಸಾಯನ ಕಾಲ’ ದ ಇರಬೇಕು.
ರಸಾಯನ ಕಾಲ ಎಂದರೇನು? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಅಂದರೆ ರಾತ್ರಿ ವಿಶ್ರಾಂತಿಯ ನಂತರ, ಜಠರಾಗ್ನಿ ಸ್ವಾಭಾವಿಕವಾಗಿ ಸಮಸ್ಥಿತಿಯಲ್ಲಿ ಇರುವ ಸಮಯವನ್ನು ಆಯು ರ್ವೇದದಲ್ಲಿ ರಸಾಯನ ಕಾಲ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಸ್ರೋತಸ್ಸುಗಳು ಸ್ವಚ್ಛವಾಗಿರುತ್ತವೆ, ಅಗ್ನಿಯು ಜೀರ್ಣಕ್ಕೆ ಸಿದ್ಧವಾಗಿರುತ್ತದೆ.
ಹಿಂದಿನ ಆಹಾರ ಸಂಪೂರ್ಣ ಜೀರ್ಣವಾಗಿರುತ್ತದೆ, ಔಷಧಿಯ ಅವಶೋಷಣ ಶಕ್ತಿ ಹೆಚ್ಚು. ಹೀಗಾಗಿ ಸ್ವರ್ಣಪ್ರಾಶನವನ್ನು ಬೆಳಗ್ಗೆ ಮಗು ಎದ್ದ ಕೂಡಲೇ, ಯಾವುದೇ ಆಹಾರ ಅಥವಾ ಸ್ತನ್ಯಪಾನ ಮಾಡುವ ಮೊದಲು ನೀಡುವುದು ಅತ್ಯುತ್ತಮ.
ಸ್ವರ್ಣಪ್ರಾಶನ ನೀಡಿದ ಬಳಿಕ ಕನಿಷ್ಠ ಅರ್ಧ ಗಂಟೆ (30 ನಿಮಿಷ) ಅಂತರ ನೀಡಬೇಕು. ಈ ಅವಧಿಯಲ್ಲಿ ಔಷಧಿ ಜಠರಾಗ್ನಿಯಲ್ಲಿ ಸಂಸ್ಕರಿತವಾಗುತ್ತದೆ, ಸೂಕ್ಷ್ಮ ಕಣಗಳು ಸ್ರೋತಸ್ಸು ಗಳಲ್ಲಿ ಪ್ರವೇಶಿಸುತ್ತವೆ, ಧಾತುಮಟ್ಟದ ಕಾರ್ಯಾರಂಭವಾಗುತ್ತದೆ. ಆ ನಂತರವೇ ಆಹಾರ ಅಥವಾ ಸ್ತನ್ಯಪಾನ ನೀಡುವುದು ಯೋಗ್ಯ. ಇದನ್ನು ಪಾಲಿಸದಿದ್ದರೆ ಔಷಧಿಯ ಪರಿಣಾಮ ಕುಂಠಿತವಾಗುತ್ತದೆ.
ಯಾವ ಸಮಯದಲ್ಲಿ ನೀಡಬಾರದು?
ಆಹಾರದ ನಂತರ: ಆಹಾರದ ನಂತರ ಜಠರಾಗ್ನಿ ಆಗಲೇ ಆಹಾರ ಜೀರ್ಣದಲ್ಲಿ ತೊಡಗಿರುತ್ತದೆ. ಈ ಸಂದರ್ಭದಲ್ಲಿ ಸ್ವರ್ಣಪ್ರಾಶನ ನೀಡಿದರೆ ಅದು ಸರಿಯಾಗಿ ಅವಶೋಷಿತವಾಗದೆ, ಆಹಾರದೊಂದಿಗೆ ಬೆರೆತು ನಿಷ್ಪ್ರಯೋಜಕವಾಗುತ್ತದೆ.
ಹಸಿವಿಲ್ಲದಾಗ: ಅಗ್ನಿ ಮಂದವಾಗಿದ್ದರೆ ಔಷಧಿ ಜೀರ್ಣವಾಗದು. ಆಯುರ್ವೇದದ ಪ್ರಕಾರ ‘ಆಮ’ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ.
ಅಜೀರ್ಣ ಸ್ಥಿತಿ: ಅತಿಸಾರ, ಮಲಬದ್ಧತೆ, ಹೊಟ್ಟೆ ಉಬ್ಬರ, ಜೀರ್ಣದೋಷ ಇರುವಾಗ ನೀಡಬಾರದು.
ಜ್ವರ, ನೆಗಡಿ ಸಮಯದಲ್ಲಿ: ಜ್ವರ (ಜ್ವರಾವಸ್ಥೆ) ಅಥವಾ ನೆಗಡಿ ಇರುವಾಗ ದೇಹದ ಅಗ್ನಿ ವ್ಯತ್ಯಯಗೊಂಡಿರುತ್ತದೆ. ಈ ಸಂದರ್ಭದಲ್ಲಿ ರಸಾಯನ ನೀಡುವುದು ಯುಕ್ತವಲ್ಲ. ಮೊದಲು ಆ ತಾತ್ಕಾಲಿಕ ರೋಗಾವಸ್ಥೆ ನಿವಾರಣೆ ಅಗತ್ಯ.
ಯಾವ ವಯಸ್ಸಿನಲ್ಲಿ ನೀಡಬಹುದು?
ಹುಟ್ಟಿದ ದಿನದಿಂದ 16 ವರ್ಷಗಳವರೆಗೆ ಸ್ವರ್ಣಪ್ರಾಶನವನ್ನು ನೀಡಬಹುದು. ಆದರೆ ವಯಸ್ಸು, ದೇಹಪ್ರಕೃತಿ (ವಾತ-ಪಿತ್ತ-ಕಫ), ಜೀರ್ಣಶಕ್ತಿ, ಆರೋಗ್ಯ ಸ್ಥಿತಿ- ಇವುಗಳನ್ನು ಪರಿಗಣಿಸಿ ವೈದ್ಯರ ಸಲಹೆಯೊಂದಿಗೆ ನೀಡಬೇಕು.
ಸ್ವರ್ಣಪ್ರಾಶನದ ಲಾಭಗಳು
ಆಯುರ್ವೇದದ ದೃಷ್ಟಿಯಲ್ಲಿ, ಬಾಲ್ಯವು ದೇಹ- ಮನಸ್ಸಿನ ಅತ್ಯಂತ ಸೂಕ್ಷ್ಮ ಮತ್ತು ರೂಪುಗೊಳ್ಳುವ ಹಂತ. ಈ ಸಮಯದಲ್ಲಿ ಸರಿಯಾದ ಪೋಷಣೆಯೂ, ಸಂಸ್ಕಾರಗಳೂ ಇದ್ದರೆ ಭವಿಷ್ಯದಲ್ಲಿ ಸ್ವಾಸ್ಥ್ಯದ ಬುನಾದಿ ಬಲವಾಗುತ್ತದೆ.
ಮೇಧಾ ವರ್ಧನ (ಬುದ್ಧಿವರ್ಧನೆ): ಮೇಧಾ ಎಂದರೆ ಕೇವಲ ಓದಿನಲ್ಲಿ ಚೆನ್ನಾಗಿರುವುದು ಅಲ್ಲ. ಅದು- ಗ್ರಹಣ ಶಕ್ತಿ, ಧಾರಣ ಶಕ್ತಿ, ಸ್ಮರಣೆ, ವಿವೇಕ, ಏಕಾಗ್ರತೆ. ಸ್ವರ್ಣವು ‘ಮೇಧ್ಯ ರಸಾಯನ’ದ ಗುಣ ಹೊಂದಿದೆ. ಇದು ಮನಸ್ಸು ಮತ್ತು ಬುದ್ಧಿಗೆ ಪೋಷಕ. ಆಯುರ್ವೇದದ ಪ್ರಕಾರ ಬುದ್ಧಿಯ ಆಧಾರ ‘ಸಾತ್ವಿಕ ಮನಸ್ಸು’ ಮತ್ತು ‘ಉತ್ತಮ ಓಜಸ್ಸು’.
ಸ್ವರ್ಣವು ಓಜಸ್ಸನ್ನು ವೃದ್ಧಿಸುವುದರಿಂದ, ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ಥಿರತೆ ಮತ್ತು ಸ್ಪಷ್ಟ ಚಿಂತನೆ ಬೆಳೆಯುತ್ತದೆ. ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ- ಒಂದು ತಿಂಗಳ ನಿಯತ ಸ್ವರ್ಣ ಪ್ರಾಶನವು ಮಗುವನ್ನು ಬುದ್ಧಿವಂತನನ್ನಾಗಿ ಮಾಡಿದರೆ, ಆರು ತಿಂಗಳ ನಿತ್ಯಸೇವನೆಯು ಮಗುವನ್ನು ‘ಶ್ರುತಧರ’ನನ್ನಾಗಿ ಮಾಡುತ್ತದೆ (ಕೇಳಿದುದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ). ಇದು ವಿಶೇಷವಾಗಿ ವಿದ್ಯಾಭ್ಯಾಸದ ಪ್ರಾರಂಭದ ಹಂತದಲ್ಲಿರುವ ಮಕ್ಕಳಿಗೆ ಪೂರಕ.
ಅಗ್ನಿ ವರ್ಧನ (ಜೀರ್ಣಶಕ್ತಿ ವೃದ್ಧಿ): ಆಯುರ್ವೇದದಲ್ಲಿ ಅಗ್ನಿಯೇ ಆರೋಗ್ಯದ ಮೂಲ. ಅಗ್ನಿ ದುರ್ಬಲವಾದರೆ- ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ, ಪೌಷ್ಟಿಕಾಂಶ ಶೋಷಣದ ಕೊರತೆ, ಮರುಮರು ಜ್ವರ, ನೆಗಡಿಗೆ ಕಾರಣವಾಗುತ್ತದೆ. ಸ್ವರ್ಣಪ್ರಾಶನವು ಜಠರಾಗ್ನಿಯನ್ನು ಉತ್ತೇಜಿಸಿ, ಸಮಪ್ರಜ್ವಲಿತ ಸ್ಥಿತಿಯಲ್ಲಿ ಇಡುತ್ತದೆ. ಅಗ್ನಿ ಸುಸ್ಥಿರ ವಾಗಿದ್ದರೆ- ಆಹಾರ ಸರಿಯಾಗಿ ಜೀರ್ಣವಾಗಿ, ಧಾತುಪೋಷಣೆ ಉತ್ತಮವಾಗಿ, ಮಗು ಚುರುಕಾಗುತ್ತದೆ.
ಬಲವರ್ಧನ (ಶಾರೀರಿಕ ಬಲ ಮತ್ತು ರೋಗ ನಿರೋಧಕ ಶಕ್ತಿ): ಓಜಸ್ಸನ್ನು ಹೆಚ್ಚಿಸು ತ್ತದೆ ಮತ್ತು ವ್ಯಾಧಿಕ್ಷಮತ್ವವನ್ನು (ಐಞಞ್ಠ್ಞಜಿಠಿqs) ಬಲಪಡಿಸುತ್ತದೆ. ದೇಹದ ಸೂಕ್ಷ್ಮ ಸ್ರೋತಸ್ಸುಗಳಲ್ಲಿ ಪ್ರವೇಶಿಸಿ ಧಾತುಮಟ್ಟದಲ್ಲಿ ಕಾರ್ಯನಿರ್ವಹಿಸುವುದರಿಂದ, ಇದು ಆಂತರಿಕ ಬಲವನ್ನು ವೃದ್ಧಿಸುತ್ತದೆ.
ಆಯುಷ್ಯ ವರ್ಧನ (ದೀರ್ಘಾಯುಷ್ಯ): ಸ್ವರ್ಣವು ‘ರಸಾಯನ ದ್ರವ್ಯ’. ರಸಾಯನಗಳ ಮುಖ್ಯ ಉದ್ದೇಶವೆಂದರೆ ಧಾತು ಪುನರುಜ್ಜೀವನ, ವಯೋವೃದ್ಧಿ ನಿಧಾನಗೊಳಿಸುವುದು ಮತ್ತು ಜೀವಕಾಂತಿಯನ್ನು ಕಾಪಾಡುವುದು. ಬಾಲ್ಯದಲ್ಲಿ ಸ್ವರ್ಣ ಪ್ರಾಶನವು ಧಾತು ನಿರ್ಮಾಣದ ಪ್ರಕ್ರಿಯೆಯನ್ನು ಸಮತೋಲನಗೊಳಿಸುತ್ತದೆ. ಧಾತುಗಳು ಬಲವಾಗಿದ್ದರೆ, ಮುಂದಿನ ಜೀವನದಲ್ಲಿ ದೇಹದ ಸ್ಥೈರ್ಯ ಉತ್ತಮವಾಗಿರುತ್ತದೆ.
ಮಂಗಳ, ಪುಣ್ಯ (ಶುಭ-ಲಕಾರಿತ್ವ): ಸ್ವರ್ಣವು ಭಾರತೀಯ ಸಂಸ್ಕೃತಿಯಲ್ಲಿ ಶುದ್ಧತೆ, ಶ್ರೇಷ್ಠತೆ ಮತ್ತು ಮಂಗಳದ ಪ್ರತೀಕ. ಆಧ್ಯಾತ್ಮಿಕವಾಗಿ: ಸಾತ್ವಿಕ ಗುಣ ವೃದ್ಧಿ, ಮನಃಶಾಂತಿ ಮತ್ತು ಸಕಾರಾತ್ಮಕ ಸ್ಪಂದನೆಗೆ ಸಹಾಯಕಾರಿ. ಬಾಲ್ಯದಲ್ಲಿ ಸಾತ್ವಿಕ ಸಂಸ್ಕಾರಗಳು ಅತ್ಯಂತ ಪರಿಣಾಮಕಾರಿ. ಸ್ವರ್ಣಪ್ರಾಶನವನ್ನು ಸಂಸ್ಕಾರ ರೂಪದಲ್ಲಿ ಮಾಡುವುದರಿಂದ, ಅದು ಕೇವಲ ಔಷಧಿಯ ಲಾಭವಷ್ಟೇ ಅಲ್ಲ- ಸಾಂಸ್ಕೃತಿಕ -ಮಾನಸಿಕ ಪ್ರಭಾವವನ್ನೂ ಉಂಟುಮಾಡುತ್ತದೆ.
ವೃಷ್ಯ (ಪ್ರಜನನ ಶಕ್ತಿ ಪೋಷಣೆ): ‘ವೃಷ್ಯ’ ಎಂದರೆ ಪ್ರಜನನ ಧಾತುಗಳನ್ನು ಪೋಷಿಸು ವುದು. ಬಾಲ್ಯದಲ್ಲಿ ನೀಡಿದ ರಸಾಯನಗಳು ಶರೀರ ಧಾತುಗಳ ಸಮತೋಲನವನ್ನು ಸಾಧಿಸಿ, ಭವಿಷ್ಯದಲ್ಲಿ ಸುಸ್ಥಿರ ಪ್ರಜನನ ಆರೋಗ್ಯಕ್ಕೆ ಸಹಾಯಕಾರಿ. ಇದು ತಕ್ಷಣದ ಪರಿಣಾಮವಲ್ಲ; ದೀರ್ಘಕಾಲದ ಧಾತು ಪೋಷಣೆಯ ಫಲ.
ಗ್ರಹಾಪಹ (ಅಶುಭ ಪ್ರಭಾವ ನಿವಾರಣೆ): ಶಾಸಗಳಲ್ಲಿ ‘ಗ್ರಹ’ ಎಂಬ ಪದವನ್ನು ಹಲವು ಅರ್ಥಗಳಲ್ಲಿ ಬಳಸಲಾಗಿದೆ. ಅಸ್ಪಷ್ಟ ಮನೋವೈಕಲ್ಯ, ಅತಿಭಯ, ಚಂಚಲತೆ, ಅಸಹಜ ವರ್ತನೆ ಎಂಬ ಅರ್ಥಗಳಿವೆ. ಸ್ವರ್ಣಪ್ರಾಶನವು ಮನಸ್ಸನ್ನು ಸ್ಥಿರಗೊಳಿಸುತ್ತದೆ, ಭಯ-ಚಿಂತೆಗಳನ್ನು ಕಡಿಮೆ ಮಾಡಿ ನಿದ್ರೆಯನ್ನು ಸುಧಾರಿಸುತ್ತದೆ. ಇದರಿಂದ ಮಗುವಿನ ವರ್ತನೆ ಸಮತೋಲನದಲ್ಲಿ ಇರುತ್ತದೆ.
ಒಟ್ಟಾರೆ ಸ್ವರ್ಣಪ್ರಾಶನವು ಕೇವಲ ಒಂದು ಔಷಧವಲ್ಲ. ಅದು ಬುದ್ಧಿ, ಜೀರ್ಣಶಕ್ತಿ, ರೋಗ ನಿರೋಧಕ ಶಕ್ತಿ, ಧಾತುಪೋಷಣೆ, ಮಾನಸಿಕ ಸ್ಥೈರ್ಯ ಇವುಗಳ ಸಮನ್ವಯದ ಮೂಲಕ ಸರ್ವಾಂಗೀಣ ಬೆಳವಣಿಗೆಗೆ ದಾರಿಯಾಗುತ್ತದೆ. ಆದರೆ, ಇದು ವೈದ್ಯರ ಮಾರ್ಗ ದರ್ಶನ ದಲ್ಲಿ, ಶಾಸ್ತ್ರೋಕ್ತ ಸಂಸ್ಕರಿತ ಸ್ವರ್ಣದಿಂದ, ಸರಿಯಾದ ಕಾಲ ಮತ್ತು ಪ್ರಮಾಣದಲ್ಲಿ ನೀಡಿದಾಗ ಮಾತ್ರ ಪೂರ್ಣ ಫಲಪ್ರದ.
ಸ್ನೇಹಿತರೆ, ಸ್ವರ್ಣಪ್ರಾಶನವು ಕೇವಲ ಒಂದು ಆಚರಣೆ ಅಲ್ಲ; ಅಥವಾ ಯಾವುದೋ ಅಡಗೂಲಜ್ಜಿಯ ಕಥೆಯಲ್ಲ. ಇದು ಶುದ್ಧ ವಿeನ. ಇದು ಖನಿಜವನ್ನು ಔಷಧವಾಗಿಸುವ ಆಯುರ್ವೇದದ ಜ್ಞಾನ.
ಸರಿಯಾದ ಸಂಸ್ಕಾರ, ಸರಿಯಾದ ಕಾಲ, ಸರಿಯಾದ ಪ್ರಮಾಣ- ಇವುಗಳ ಸಮನ್ವಯದ ಅದರ ಪೂರ್ಣಫಲ ದೊರೆಯುತ್ತದೆ. ಬಾಲ್ಯದಲ್ಲಿ ಬಿತ್ತಿದ ಆರೋಗ್ಯದ ಬೀಜಗಳು ಜೀವನ ಪೂರ್ಣ ಫಲ ನೀಡುತ್ತವೆ. ಸ್ವರ್ಣಪ್ರಾಶನವು ಅಂಥ ಸುವರ್ಣಮಯ ರಸಾಯನ ಸಂಸ್ಕಾರ- ದೇಹ, ಮನಸ್ಸು ಮತ್ತು ಬುದ್ಧಿಯ ಸಮಗ್ರ ಬೆಳವಣಿಗೆಗೆ ದಾರಿದೀಪ.