ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ಇಷ್ಟು ದಿನ ಟಗರು ಇನ್ಮೇಲೆ ಟಗರು ಶಿವ

ಸಿಕ್ಕರೂ ನಾಯಕನ ಪಾತ್ರಕ್ಕೆ ಸ್ಕೋಪ್ ಇರಲ್ಲ, ಅದನ್ನು ಸ್ಟಾರ್ ನಟರು ಮಾಡಲ್ಲ ಅನ್ನೋ ಕಾರಣಕ್ಕೆ ಸಿಗಬಹುದು ಅಥವಾ ಯಾರೋ ದೊಡ್ಡ ಹೆಸರಿರುವ ಫ್ಯಾಮಿಲಿಯ ಹೀರೋಗೆ ಸಿಗಬಹುದು ಅಷ್ಟೇ. ಅಲ್ಲದೆ, ಒಂದು ಸಿನಿಮಾ ಸೋತರೆ ನಿರ್ಮಾಪಕರು ಅದರ ಸೋಲನ್ನು ನಾಯಕಿಯ ತಲೆಗೆ ಕಟ್ಟೋ ದಿಲ್ಲ. ಅದರಿಂದ ನಾಯಕಿಯ ಮುಂದಿನ ಸಿನಿಮಾ ಸಂಭಾವನೆ ಕೂಡಾ ತೀರಾ ಕಡಿಮೆ ಆಗೋದಿಲ್ಲ. ಆದರೆ, ನಾಯಕನ ಪರಿಸ್ಥಿತಿ ಹಾಗಲ್ಲ. ಹಿಂದಿನ ಸಿನಿಮಾ ಗೆದ್ರೆ ಹಬ್ಬ, ಸೋತ್ರೆ ಮುಂದೈತೆ ಮಾರಿ ಹಬ್ಬ ಅನ್ನೋ ಪರಿಸ್ಥಿತಿ.

ತುಂಟರಗಾಳಿ

ಸಿನಿಗನ್ನಡ

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಕೇಳಿ ಬರುವ ಮಾತಿನಂತೆ, ಸಿನಿಮಾ ಸಮಾಜದಲ್ಲೂ ಕೇಳಿ ಬರುವ ಮಾತು ಅಂದ್ರೆ ಇಲ್ಲಿ ಎಲ್ಲವೂ ಪುರುಷ ಪ್ರಧಾನ ಅನ್ನೋದು. ಅದು ತಕ್ಕ ಮಟ್ಟಿಗೆ ನಿಜ ಕೂಡ. ಆದ್ರೆ ಷರತ್ತುಗಳು ಅನ್ವಯಿಸುತ್ತವೆ ಅನ್ನೋ ಮಾತನ್ನು ಈ ಸಂಪ್ರದಾಯದೊಂದಿಗೆ ಸೇರಿಸ ಲೇಬೇಕಾಗುತ್ತದೆ. ಅದಕ್ಕೂ ಕಾರಣಗಳು ಹಲವು. ಇಲ್ಲಿ ನಾಯಕರಿಗೆ ಸಿಕ್ಕಷ್ಟು ಸಂಭಾವನೆ ನಾಯಕಿ ಯರಿಗೆ ಸಿಗೊಲ್ಲ ಅನ್ನೋ ಮಾತಿದೆ.

ಅದು ನಿಜ ಕೂಡಾ. ಅದಕ್ಕೆ ತಕ್ಕಂತೆ ಅವರಿಗೆ ಸಿಗೋ ಮರ್ಯಾದೆ ಕೂಡಾ ಇವರಿಗೆ ಸಿಗಲ್ಲ. ಆದರೆ, ಕೆಲವೊಮ್ಮ ಇದು ನಾಯಕಿಯರಿಗೆ ವರದಾನ ಆಗಿರುವ ಉದಾಹರಣೆಗಳೂ ಉಂಟು. ಅದಕ್ಕೆ ಇಂಬು ಕೊಡುವಂತೆ ಇಲ್ಲಿ ಒಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಹೊಸ ನಟಿಯೊಬ್ಬಳಿಗೆ ಸುಲಭ ವಾಗಿ ಅವಕಾಶ ಸಿಗುತ್ತದೆ. ಆದರೆ, ಅದೇ ಒಬ್ಬ ಸ್ಟಾರ್ ಹೀರೋಯಿನ್ ಜತೆ ಹೊಸ ಹುಡುಗನಿಗೆ ಹೀರೋ ಆಗೋ ಅವಕಾಶ ಸಿಗುತ್ತಾ ಅನ್ನೋದು ಪ್ರಶ್ನೆ.

ಸಿಕ್ಕರೂ ನಾಯಕನ ಪಾತ್ರಕ್ಕೆ ಸ್ಕೋಪ್ ಇರಲ್ಲ, ಅದನ್ನು ಸ್ಟಾರ್ ನಟರು ಮಾಡಲ್ಲ ಅನ್ನೋ ಕಾರಣಕ್ಕೆ ಸಿಗಬಹುದು ಅಥವಾ ಯಾರೋ ದೊಡ್ಡ ಹೆಸರಿರುವ ಫ್ಯಾಮಿಲಿಯ ಹೀರೋಗೆ ಸಿಗಬಹುದು ಅಷ್ಟೇ. ಅಲ್ಲದೆ, ಒಂದು ಸಿನಿಮಾ ಸೋತರೆ ನಿರ್ಮಾಪಕರು ಅದರ ಸೋಲನ್ನು ನಾಯಕಿಯ ತಲೆಗೆ ಕಟ್ಟೋದಿಲ್ಲ. ಅದರಿಂದ ನಾಯಕಿಯ ಮುಂದಿನ ಸಿನಿಮಾ ಸಂಭಾವನೆ ಕೂಡಾ ತೀರಾ ಕಡಿಮೆ ಆಗೋದಿಲ್ಲ. ಆದರೆ, ನಾಯಕನ ಪರಿಸ್ಥಿತಿ ಹಾಗಲ್ಲ. ಹಿಂದಿನ ಸಿನಿಮಾ ಗೆದ್ರೆ ಹಬ್ಬ, ಸೋತ್ರೆ ಮುಂದೈತೆ ಮಾರಿ ಹಬ್ಬ ಅನ್ನೋ ಪರಿಸ್ಥಿತಿ.

ನಾಯಕಿಗೆ ಸಂಭಾವನೆ ಕಮ್ಮಿ ಸಿಕ್ರೂ ಆಕೆ ಆ ಫ್ಲಾಪ್ ಸಿನಿಮಾದಲ್ಲಿ ನಟಿಸಿದ್ದಳು ಅನ್ನೋದು ಮೂರು ದಿನಕ್ಕೆ ಎಲ್ಲರಿಗೂ ಮರೆತುಹೋಗುತ್ತದೆ. ಆದೆ ನಾಯಕನಿಗೆ ಅದು ಜೀವನ ಪರ್ಯಂತ ಅವನೇ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಫ್ಲಾಪ್ ಸಿನಿಮಾ. ಅದರಿಂದ ಅವನ ಇಡೀ ಕೆರಿಯರ್‌ ನಲ್ಲಿ ಏರುಪೇರು ಆಗುತ್ತದೆ. ನಿರ್ಮಾಪಕ ಈ ಸ್ಟಾರ್ ನಟನನ್ನು ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್ ಶೀಟ್ ಕೊಡು ಅಂತ ಕೇಳ್ತಾನೆ. ಆದರೆ, ಅಪ್ಪಿ ತಪ್ಪಿ ಈ ಮಾತನ್ನ ಈತ ನಾಯಕಿಗೆ ಕೇಳೋ ದಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಇಂಥ ನಟನ ಫ್ಲಾಪ್ ಸಿನಿಮಾ ಅಂತಲೇ ಅದು ದಾಖಲಾಗು ತ್ತದೆ. ಇಷ್ಟೆಲ್ಲಾ ಇರುವಾಗ ಸಿನಿಮಾರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ.

ಇದನ್ನೂ ಓದಿ: Hari Paraak Column: ಬಂಡೆ ಥರ ಇದ್ದೀನಿ, ಆದ್ರೆ ಭಂಡತನ ಮಾಡಲ್ಲ

ಲೂಸ್‌ ಟಾಕ್-‌ ಡಿ.ಕೆ.ಶಿವಕುಮಾರ್

ಏನ್ ಸಾರ್, ನೀವು ಮುಖ್ಯಮಂತ್ರಿ ಆದ ಕೂಡಲೇ ನಿಮ್ಮ ಪಕ್ಷದ ಹಿರಿಯರೆಲ್ಲಾ ಖಾತೆ ಕ್ಯಾತೆ ತೆಗೀತಾ ಇದ್ದಾರಲ್ಲ?

- ಅವ್ರು ತೆಗೀತಾ ಇರೋದು, ಕ್ಯಾತೆ ಅಲ್ಲ ನಮ್ಮ ಪಕ್ಷದ ಮಾನ ಮರ್ಯಾದೆ ಅಂತ ಅವರಿಗೆ ಗೊತ್ತಿಲ್ಲ, ಏನ್ ಮಾಡೋದು?

ರಾಹುಲ್ ಗಾಂಧಿ ಅವರು ರಾಜೀನಾಮೆ ಅಂಗೀಕರಿಸಿ ಅಂತ ಹೇಳಿದ್ದಾರಂತಲ್ಲ, ಮಾಡೋದು ತಾನೇ?

- ಪಾಪ, ಅವರೇನ್ ಮಾಡ್ತಾರೆ ಮತ್ತೆ. ಕೊಟ್ಟ ಅಂಗಿ ತೊಡದವನು ವೀರನೂ ಅಲ್ಲ, ಶೂರನೂ ಅಲ್ಲ, ಈ ವಯಸ್ಸಾದ ನಾಯಕರು ನಂಗೆ ಅಂಗಿ ಬೇಡ, ಟೀ-ಶರ್ಟ್ ಬೇಕು ಅಂದ್ರೆ ಹೆಂಗೆ.

ಆದ್ರೆ ಬಿಜೆಪಿಯವರಿಗೆ ಆಡಿಕೊಳ್ಳೋಕೆ ಒಂದು ದಾರಿ ಆಯ್ತಲ್ಲ?

- ಅಯ್ಯೋ, ಅವರಿಗೆ ಆಡಿಕೊಳ್ಳೋಕೂ ಬರಲ್ಲ ಬಿಡಿ. ಅಶೋಕ್ ಅವರ ಹೇಳಿಕೆ ನೋಡಿದ್ರಾ, ಶಿವಕುಮಾರ್ ಮಂತ್ರಿಮಂಡಲದಲ್ಲಿ ಕಾಣದ ಕೈಗಳ ಕೈವಾಡ ಇರೋದು ಸ್ಪಷ್ಟವಾಗಿ ಕಾಣ್ತಾ ಇದೆ ಅಂತ ಹೇಳಿದ್ದಾರೆ. ಅವರು ಹೇಳೋದು ಅವರಿಗೇ ಅರ್ಥ ಆಗ್ಬೇಕು.

ಅದೂ ಸರಿನೇ. ಹೋಗ್ಲಿ, ಇಷ್ಟ್ ದಿನ ಇದ್ದ ಸಿದ್ದರಾಮಯ್ಯ ಅವರನ್ನ ಟಗರು ಅಂತ ಕರೀತಿದ್ರು. ನಿಮ್ಮನ್ನ ಏನಂತ ಕರೀಬೇಕು?

- ಶಿವಣ್ಣನ ಟಗರು ಶಿವ ನೋಡಿಲ್ವಾ, ಅದರ ಥರ ಟಗರು ಶಿವ ಅಂತ ಕರೀರಿ.

ಅಂದಹಾಗೆ, ನಮ್ ಪೇಪರ್ ನಲ್ಲಿ ನಿಮ್ಮನ್ನ ಲಾರ್ಡ್ ಶಿವನ ಥರ ತೋರಿಸಿದ್ದಕ್ಕೆ ಕೆಲವರು ಕಾಲೆಳೆಯೋಕೆ ಬರ್ತಾ ಇದ್ದಾರೆ. ಅದರ ಬಗ್ಗೆ ಏನಂತೀರ?

- ಅಯ್ಯೋ, ಬಿಡಿ. ನೀವೇನು ಗಣೇಶನ್ನ ಮಾಡೋಕೆ ಹೋಗಿ ಅವರಪ್ಪನ್ನ ಮಾಡಿದ್ದಲ್ಲ. ಅವರಪ್ಪನ್ನೇ ಮಾಡೋಕೆ ಹೋಗಿದ್ದು, ಅವರಪ್ಪನ್ನೇ ಮಾಡಿದ್ದು. ಅದರಲ್ಲಿ ತಪ್ಪೇನಿದೆ?

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಜಟಕಾ ಗಾಡಿ ಓಡಿಸ್ತಾ ಜೀವನ ಮಾಡ್ತಾ ಇದ್ದ. ಒಂದಿನ ಅವನು ಹೈ-ವೇ ನಲ್ಲಿ ಹೋಗು ವಾಗ ಅವನ ಗಾಡಿಗೆ ಕಾರೊಂದು ಬಂದು ಗುದ್ದಿ, ಖೇಮು ಗಂಭೀರವಾಗಿ ಗಾಯಗೊಂಡ, ಅವನ ಜಟಕಾದ ಕುದುರೆ ಸತ್ತು ಹೋಯಿತು. ಖೇಮುಗೆ ಇದರಿಂದ ತುಂಬಾ ಲಾಸ್ ಆಯ್ತು. ಅದಕ್ಕೆ ಅವನು ಆಸ್ಪತ್ರೆ ಸೇರಿ, ಹುಷಾರಾದ ಮೇಲೆ ಕೋರ್ಟ್‌ಗೆ ಮೊರೆ ಹೋದ. ನನ್ನ ಗಾಡಿಗೆ ಗುದ್ದಿ ಈ ಕಾರಿನವನು ನಂಗೆ ಲಾಸ್ ಮಾಡಿದ್ದಾನೆ, ನನ್ನ ಆಸ್ಪತ್ರೆ ಬಿಲ್ ಕೂಡ ಸಿಕ್ಕಾಪಟ್ಟೆ ಆಗಿದೆ, ಹಾಗಾಗಿ ನಂಗೆ ಪರಿಹಾರ ಕೊಡಿಸಿ ಅಂತ. ಕೋರ್ಟ್‌ನಲ್ಲಿ ವಿಚಾರಣೆ ಶುರುವಾಯ್ತು. ಕೇಸಿನಲ್ಲಿ ಇನ್‌ವಾಲ್ವ್ ಆಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಕೋರ್ಟಿನಲ್ಲಿ ಬಂದು, ಖೇಮು ಸುಳ್ಳು ಹೇಳ್ತಾ ಇದ್ದಾನೆ.

ಆಕ್ಸಿಟೆಂಟ್ ಆಗಿ ಬಿದ್ದಿದ್ದಾಗ ನಾನೇ ಅವನನ್ನು ಹೋಗಿ ಆರ್ ಯೂ ಓಕೆ? ಅಂತ ಕೇಳಿದೆ. ಆಗ ಅವನು ಐ ಆಮ್ ಫ್ಯಾನ್ ಅಂತ ಹೇಳಿದ್ದ. ಈಗ ಮಾತ್ರ ಹಣಕ್ಕಾಗಿ ಅವನು ಸುಳ್ಳು ಹೇಳ್ತಾಇದ್ದಾನೆ ಅಂತ ವಾದಿಸಿದ. ಅದಕ್ಕೆ ಖೇಮು, ಅಲ್ಲಾ ಸಾರ್ ನನ್ನ ಕುದುರೆ... ಅಂತ ಹೇಳೋಕೆ ಹೊರಟ ತಕ್ಷಣ ಆಪೋಸಿಟ್ ಲಾಯರ್ ಅಥವಾ ಇನ್ಸ್‌ಪೆಕ್ಟರ್ ಬಾಯ್ ಮುಚ್ಚು ಅಂತ ಬೈತಾ ಇದ್ರು. ಹಾಗಾಗಿ ಖೇಮು ಎಷ್ಟೇ ಕಷ್ಟಪಟ್ಟರೂ ಹೇಳ ಬೇಕಾದ್ದನ್ನು ಹೇಳೋಕಾಗಲಿಲ್ಲ. ಆಗ ಅವನ ಪಾಡು ನೋಡಿದ ಜಡ್ಜ್ ಅವನೇನೋ ಹೇಳ್ತಾ ಇದ್ದಾನೆ ಹೇಳೋಕ್ ಬಿಡಿ ಅಂದ್ರು. ಆಗ ಖೇಮು ಹೇಳೋಕ್ ಶುರು ಮಾಡಿದ. ಮಹಾಸ್ವಾಮಿ, ನಾನು ಆಕ್ಸಿಡೆಂಟ್ ಆಗಿ ಬಿದ್ದಿದ್ದೆ. ನಾನು ಬದುಕ್ತೀನಿ ಅನ್ನೋ ನಂಬಿಕೆನೂ ನನಗಿರಲಿಲ್ಲ. ಆಗಲೋ ಈಗಲೋ ಸಾಯೋ ಥರ ಇದ್ದೆ. ಆ ಸಮಯದಲ್ಲಿ ಈ ಇನ್ಸ್‌ಪೆಕ್ಟರ್ ಅಲ್ಲಿಗೆ ಬಂದ್ರು. ಮೊದಲು ನನ್ನ ಕುದುರೆ ಹತ್ರ ಹೋಗಿ, ಅದನ್ನ ಆರ್ ಯೂ ಓಕೆ? ಅಂತ ಮಾತಾಡಿಸಿದ್ರು. ಅದು ಅಲ್ಲಾಡಲಿಲ್ಲ. ಆದ್ರೆ ಅದು ಉಸಿರಾಡುತ್ತಿತ್ತು. ಮೈ ತುಂಬಾ ಗಾಯ ಆಗಿದ್ವು. ತುಂಬಾ ನರಳಾಡ್ತಾ ಇತ್ತು. ಅದನ್ನು ನೋಡಿದ ಈ ಇನ್ಸ್‌ಪೆಕ್ಟರ್, ನೀನು ಬದುಕಿದ್ದು ಕಷ್ಟ ಪಡೋಕ್ಕಿಂತ ಸಾಯೋದೇ ಮೇಲು ಅಂತ ಅದಕ್ಕೆ ಗುಂಡು ಹಾರಿಸಿ ಕೊಂದರು. ಆ ನಂತರ ನನ್ನತ್ರ ಬಂದು ಆರ್ ಯೂ ಓಕೆ? ಅಂತ ಕೇಳಿದ್ರು. ನೀವೇ ಹೇಳಿ ಮಹಾಸ್ವಾಮಿ ಆ ಸಮಯದಲ್ಲಿ ನನಗೆ ಐ ಆಮ್ ಓಕೆ ಅಂತ ಹೇಳದೆ ಬೇರೆ ದಾರಿ ಇತ್ತಾ ?

ಲೈನ್‌ ಮ್ಯಾನ್

ಆರ್ಟಿಫಿಶಿಯಲ್ ಪದದ ವಿರುದ್ಧ ಪದ ಯಾವುದು?

- ಹಾರ್ಟಿಫಿಶಿಯಲ್

ಫೋರ್ಜರಿ ಮಾಡಿ ಸಿಕ್ಕಿಬಿದ್ರೆ ಅದು

- ‘ಸಹಿ’ ಸುದ್ದಿ

ನೀವು ಫೋರ್ಜರಿ ಮಾಡಿಲ್ಲ ಅಂತ ಪ್ರೊವ್ ಮಾಡೋದು

- ‘ರುಜು’ವಾತು

ಅಪ್ಪ ಎಲ್ಲ ಆಸ್ತಿ ನನ್ನ ಹೆಸರಿಗೇ ‘ಬರೆಯಲಿ’ ಅಂತ ಆಸೆ ಪಡೋದು

- ‘ಸಹಿ’ತಾಸಕ್ತಿ

ಸಮಯಕ್ಕೆ ತಕ್ಕಂತೆ ಕಾಂಗ್ರೆಸ್ ಬಿಜೆಪಿ ಇಬ್ಬರ ಕಡೆಗೂ ಪ್ರೀತಿ ತೋರಿಸೋ ಕುಮಾರಸ್ವಾಮಿ

ಅವರಿಗೊಂದು ಬಿರುದು

- ಕಮಲಾ-ಕರ

ಲೇಟೆಸ್ಟ್ ಟ್ರೆಂಡ್

- ಕೆಲವರು ಐ ಸ್ಟಾಂಡ್ ವಿತ್ ಅನ್ನೋಕೆ ತುದಿಗಾಲ ನಿಂತಿರ್ತಾರೆ

ಮಾತೆತ್ತಿದರೆ, ಐ ಸ್ಟ್ಯಾಂಡ್ ವಿತ್ ಅನ್ನೋರದ್ದು

- ಸ್ಟ್ಯಾಂಡ್ ಅಪ್ ಕಾಮಿಡಿ

ಐ ಸ್ಟ್ಯಾಂಡ್ ವಿತ್ ಅನ್ನೋದು ಎಲ್ಲ ಟೈಮಲ್ಲೂ ಸಪೋರ್ಟ್ ಮಾಡಿದ ಹಾಗಾಗಲ್ಲ

- ಯಾಕಂದ್ರೆ, ಯಾರಾದ್ರೂ ಎಲೆಕ್ಷನ್ನಿಗೆ ನಿಂತಾಗ ಐ ಸ್ಟಾಂಡ್ ವಿತ್ ಅಂದ್ರೆ ನಾನು ಅವರ ವಿರುದ್ಧ ಸ್ಪರ್ಧೆ ಮಾಡ್ತಾ ಇದ್ದೀನಿ ಅಂತ ಅರ್ಥ

ಮತದಾರರು ರಾಜಕಾರಣಿಗಳನ್ನ ಹೇಗೆ ಹೆದರಿಸಬಹುದು?

- ನೀನ್ ಹಿಂಗೇ ಆಡ್ತಾ ಇದ್ರೆ, ನನ್ ಕೈ ಮಾತಾಡಲ್ಲ, ನನ್ ಬೆರಳು ಮಾತಾಡುತ್ತೆ ಅಷ್ಟೇ.

ಹರಿ ಪರಾಕ್‌

View all posts by this author