ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‌R T Vittalmurthy Column: ಯಡಿಯೂರೋತ್ಸವಕ್ಕೆ 114ರ ಟಾರ್ಗೆಟ್

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ನ ಜತೆಗೂಡಿ ಅಧಿಕಾರ ಹಿಡಿಯುವುದು ಗ್ಯಾರಂಟಿ ಎಂಬ ಲೆಕ್ಕಾಚಾರದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಇದೀಗ 114ರ ಟಾರ್ಗೆಟ್ ಮೇಲೆ ಕಣ್ಣಿಟ್ಟು ‘ಯಡಿಯೂರೋತ್ಸವ’ಕ್ಕೆ ಸಜ್ಜಾಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕಾರಣಕ್ಕೆ ಬಂದು ಐವತ್ತು ವರ್ಷವಾಗಿರುವ ಹಿನ್ನೆಲೆಯಲ್ಲಿ ಇಂಥ ಉತ್ಸವ ನಡೆಸಲು ಸಜ್ಜಾಗಿರುವ ಬಿಜೆಪಿ ನಾಯಕರಿಗೆ ಈಗ ಇದ್ದಕ್ಕಿದ್ದಂತೆ ಒಗ್ಗಟ್ಟಿನ ಅನಿವಾರ್ಯತೆ ಕಾಣತೊಡಗಿದೆ.

ಮೂರ್ತಿಪೂಜೆ

ಕಾಲದ ಹೋರಾಟದಿಂದಾಗಿ ಕರ್ನಾಟಕದಲ್ಲಿ ಪಕ್ಷವು ಅಧಿಕಾರ ಹಿಡಿಯಲು ಕಾರಣರಾದ ಯಡಿಯೂರಪ್ಪ ಅವರ ಹೆಸರಿಗೆ ಈಗಲೂ ಪವರ್ ಇದೆ. ಹೀಗಾಗಿ ಅ ಹೆಸರಿನ ಪವರ್ ಬಳಸಿ ಕೊಳ್ಳಲು ಸಜ್ಜಾಗಿರುವ ಬಿಜೆಪಿ ನಾಯಕರು ಮೇ ತಿಂಗಳ ಹೊತ್ತಿಗೆ ಚಿತ್ರದುರ್ಗದಲ್ಲಿ ‘ಯಡಿಯೂರೋತ್ಸವ’ ನಡೆಸಲು ತೀರ್ಮಾನಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ನ ಜತೆಗೂಡಿ ಅಧಿಕಾರ ಹಿಡಿಯುವುದು ಗ್ಯಾರಂಟಿ ಎಂಬ ಲೆಕ್ಕಾಚಾರದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಇದೀಗ 114ರ ಟಾರ್ಗೆಟ್ ಮೇಲೆ ಕಣ್ಣಿಟ್ಟು ‘ಯಡಿಯೂರೋತ್ಸವ’ಕ್ಕೆ ಸಜ್ಜಾಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕಾರಣಕ್ಕೆ ಬಂದು ಐವತ್ತು ವರ್ಷವಾಗಿರುವ ಹಿನ್ನೆಲೆಯಲ್ಲಿ ಇಂಥ ಉತ್ಸವ ನಡೆಸಲು ಸಜ್ಜಾಗಿರುವ ಬಿಜೆಪಿ ನಾಯಕರಿಗೆ ಈಗ ಇದ್ದಕ್ಕಿದ್ದಂತೆ ಒಗ್ಗಟ್ಟಿನ ಅನಿವಾರ್ಯತೆ ಕಾಣತೊಡಗಿದೆ.

ಕಳೆದ ವಿಧಾನಸಭಾ ಚುನಾವಣೆಯ ನಂತರ ಪ್ರತಿಪಕ್ಷದ ಸಾಲಿಗೆ ಬಂದು ಕುಳಿತರೂ ರಾಜ್ಯ ಬಿಜೆಪಿ ಯಲ್ಲಿ ಬಣ ಬಡಿದಾಟ ಎಂಬುದು ಕಾಯಂ ಆಗಿಯೇ ನಡೆದುಕೊಂಡು ಬಂತು. ಇಂಥ ಬಣ ಬಡಿದಾಟ ಜೀವಂತವಾಗಿರುವಾಗಲೇ ಬಿಜೆಪಿಯ ಬಹುತೇಕ ನಾಯಕರಿಗೆ ಒಗ್ಗಟ್ಟಿನ ಅನಿವಾರ್ಯತೆ ಅರ್ಥವಾಗತೊಡಗಿದೆ.

ಕಾರಣ? ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಬಿಜೆಪಿಯ ಬಗ್ಗೆ ಅಷ್ಟು ಉತ್ಸುಕತೆ ತೋರುತ್ತಿಲ್ಲ. ‘ಅಲ್ಲಿ ದಿನ ಬೆಳಗಾದರೆ ಪಕ್ಷಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನಿಳಿಸಿ ಅಂತಲೋ, ವಿಜಯೇಂದ್ರ ಅವರನ್ನು ಮುಂದುವರಿಸಿ ಅಂತಲೋ ಬೇಡಿಕೆ ಮುಂದಿಟ್ಟುಕೊಂಡು ಬರುತ್ತಿರುವ ನಾಯಕರು ಹೆಚ್ಚಿದ್ದಾರೆಯೇ ವಿನಾ, ಕರ್ನಾಟಕದಲ್ಲಿ ಅಡಳಿತಾರೂಢ ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವ, ಮುಂಬರುವ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಕಾರ್ಯತಂತ್ರಗಳೊಂದಿಗೆ ಬರುವವರೇ ಇಲ್ಲ’ ಎಂಬುದು ನರೇಂದ್ರಮೋದಿ ಮತ್ತು ಅಮಿತ್ ಶಾ ಅವರ ಅಸಮಾಧಾನ.

ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಏನೇ ಗೊಂದಲ ಕಾಣಿಸಿಕೊಂಡರೂ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರನ್ನು ಕರ್ನಾಟಕಕ್ಕೆ ಕಳಿಸುವ, ತೇಪೆ ಹಚ್ಚುವ ಕೆಲಸ ಮಾಡುತ್ತಿರುವ ಮೋದಿ-ಅಮಿತ್ ಶಾ ಜೋಡಿ ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯುವ ವಿಷಯಕ್ಕೆ ಸಂಬಂಧಿಸಿದಂತೆ, ಜೆಡಿಎಸ್ ನಾಯಕ, ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೆಚ್ಚು ನಂಬಿಕೊಂಡಿದೆ.

ಇದನ್ನೂ ಓದಿ: R T Vittalmurthy Column: ಪರಂ-ಕುಮಾರಸ್ವಾಮಿ ತಾಜ್‌ ಮೀಟಿಂಗ್‌ ರಹಸ್ಯವೇನು ?

ಅಂದ ಹಾಗೆ, ಬಿಜೆಪಿ ಜತೆಗಿನ ಮೈತ್ರಿ ವಿಷಯದಲ್ಲಿ ಲಾಯಲ್ಟಿ ತೋರಿಸುತ್ತಾ, ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯಲು ಏನೇನು ಮಾಡಬಹುದು ಎಂಬುದನ್ನು ಬ್ಲೂ ಪ್ರಿಂಟ್ ಸಮೇತ ವಿವರಿಸುತ್ತಿರುವ ಕುಮಾರಸ್ವಾಮಿ ಅವರು, ಮುಂಬರುವ ಚುನಾವಣೆಯಲ್ಲಿ ಮಿತ್ರಕೂಟವು ನೂರೈವತ್ತಕ್ಕೂ ಹೆಚ್ಚು ಸ್ಥಾನಗಳನ್ನು ಹೇಗೆ ಗೆಲ್ಲಬಹುದು ಎಂಬುದನ್ನು ಅಂಕಿ-ಅಂಶಗಳ ಸಮೇತ ಮೋದಿ-ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ.

ಹೀಗೆ ಭವಿಷ್ಯದ ಗೆಲುವಿನ ಮೇಲೆ ಕಣ್ಣಿಟ್ಟು, ರೂಪಿಸಬೇಕಾದ ರಣತಂತ್ರಗಳ ಬಗ್ಗೆ ಮಾತ್ರ ಮಾತ ನಾಡುವ ಕುಮಾರಸ್ವಾಮಿ ಅವರು ಸಹಜವಾಗಿಯೇ ಮೋದಿ-ಅಮಿತ್ ಶಾ ಅವರಿಗೆ ಇಷ್ಟವಾಗಿ ದ್ದಾರೆ.

ಹೀಗೆ ದಿಲ್ಲಿ ಲೆವೆಲ್ಲಿನಲ್ಲಿ ಕುಮಾರಸ್ವಾಮಿ ಪವರ್ರು ಹೆಚ್ಚಿಸಿಕೊಳ್ಳುತ್ತಾ ನಡೆದಿರುವ ಕಾಲದಲ್ಲಿ ತಾವು ಮೈ ಮರೆತರೆ ಕಷ್ಟದ ಸ್ಥಿತಿ ಎದುರಾಗಬಹುದು ಎಂಬ ಆತಂಕದಲ್ಲಿರುವ ರಾಜ್ಯ ಬಿಜೆಪಿ ನಾಯಕರು, ಈಗ ಮೈ ಕೊಡವಿಕೊಂಡು ಏಳಲು ಸಜ್ಜಾಗಿದ್ದಾರೆ.

bs yediyurappa

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅವರಿಗೆ ಐಕಾನ್ ಆಗಿ ಕಾಣುತ್ತಿರುವುದು ಈ ಕಾರಣಕ್ಕಾಗಿ. ದಶಕಗಳ ಕಾಲದ ಹೋರಾಟದಿಂದಾಗಿ ಕರ್ನಾಟಕದಲ್ಲಿ ಪಕ್ಷವು ಅಧಿಕಾರ ಹಿಡಿಯಲು ಕಾರಣರಾದ ಯಡಿಯೂರಪ್ಪ ಅವರ ಹೆಸರಿಗೆ ಈಗಲೂ ಪವರ್ ಇದೆ. ಹೀಗಾಗಿ ಅ ಹೆಸರಿನ ಪವರ್ ಬಳಸಿಕೊಳ್ಳಲು ಸಜ್ಜಾಗಿರುವ ಬಿಜೆಪಿ ನಾಯಕರು ಮೇ ತಿಂಗಳ ಹೊತ್ತಿಗೆ ಚಿತ್ರದುರ್ಗದಲ್ಲಿ ‘ಯಡಿಯೂರೋತ್ಸವ’ ನಡೆಸಲು ತೀರ್ಮಾನಿಸಿದ್ದಾರೆ.

ಅಂದ ಹಾಗೆ, ಒಬ್ಬ ಜನನಾಯಕನ ಹೆಸರಿನಲ್ಲಿ ಉತ್ಸವ ನಡೆಸಿದರೆ ಎಷ್ಟು ಶಕ್ತಿ ಸಿಗುತ್ತದೆ ಎಂಬು ದಕ್ಕೆ ಈ ಹಿಂದೆ ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮೋತ್ಸವ’ವೇ ಸಾಕ್ಷಿ. ಅವತ್ತು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅವರ ಹೆಸರೇ ಟಾನಿಕ್ ಆಗಿ ಕಾಣಿಸಿತ್ತು. ಹೀಗಾಗಿ ಅವತ್ತು ಕಾಂಗ್ರೆಸ್ ಪಕ್ಷವು ದಾವಣಗೆರೆಯಲ್ಲಿ ನಡೆಸಿದ ಸಿದ್ದರಾಮೋತ್ಸವ 2023ರ ಚುನಾವಣೆಗೆ ಪೂರ್ವಭಾವಿ ತಯಾರಿಯಾಗಿದ್ದಲ್ಲದೆ, ಅದರ ಗೆಲುವಿಗೆ ರಹದಾರಿಯೂ ಆಯಿತು. ಇವತ್ತು ಬಿಜೆಪಿಯ ನಾಯಕರು ಒಗ್ಗೂಡಿ ಯಡಿಯೂರೋತ್ಸವ ನಡೆಸಲು ಕೈಗೊಂಡಿರುವ ತೀರ್ಮಾನಕ್ಕಿರುವುದೂ ಇದೇ ಲೆಕ್ಕಾಚಾರ.

ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ-ಜೆಡಿಎಸ್ ಮಿತ್ರಕೂಟ ನೂರೈವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಕನಸಿಟ್ಟುಕೊಳ್ಳುವುದು ಬೇರೆ. ಆದರೆ ಇಂಥ ಗೆಲುವು ಸಾಧ್ಯವಾಗುವ ಕಾಲಕ್ಕೆ ಪಕ್ಷವು ಏಕಾಂಗಿಯಾಗಿ 114 ಕ್ಷೇತ್ರಗಳಲ್ಲಿ ಗೆಲ್ಲುವುದು ಅನಿವಾರ್ಯ ಎಂಬುದು ಇದರ ಹಿಂದಿರುವ ಮುಖ್ಯ ಉದ್ದೇಶ.

ಹಾಗೊಂದು ವೇಳೆ ಮುಂದಿನ ಚುನಾವಣೆಯಲ್ಲಿ 114 ಎಂಬ ಮ್ಯಾಜಿಕ್ ನಂಬರಿಗೆ ತಲುಪದಿದ್ದರೆ ಯಥಾಪ್ರಕಾರ ಮಿತ್ರಪಕ್ಷದ ಕೈ ಮೇಲಾಗುತ್ತದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ಈಗಿರುವ ಮಾಹಿತಿಯ ಪ್ರಕಾರ, ಮೋದಿ-ಅಮಿತ್ ಶಾ ಜೋಡಿಯು ಮಿತ್ರಪಕ್ಷ ಜೆಡಿಎಸ್‌ಗೆ ಹೆಚ್ಚು ಆದ್ಯತೆ ನೀಡುವುದು ಗ್ಯಾರಂಟಿ. ಆದರೆ ಅದೇ ಕಾಲಕ್ಕೆ ರಾಜ್ಯ ಬಿಜೆಪಿಯ ಶಕ್ತಿ ಟಾಪ್ ಲೆವೆಲ್ಲಿನಲ್ಲಿದೆ ಎಂದು ತೋರಿಸುವುದು ಈ ನಾಯಕರ ಉದ್ದೇಶ.

ಅದೇನೇ ಇದ್ದರೂ ಕಳೆದ 33 ತಿಂಗಳುಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದ ರಾಜ್ಯ ಬಿಜೆಪಿಯ ಬಣ ಬಡಿದಾಟಕ್ಕೆ ‘ಯಡಿಯೂರೋತ್ಸವ’ ಬ್ರೇಕ್ ಹಾಕಿರುವುದು ಮಾತ್ರ ನಿಜ.

ಮೇಡಂ ಒಪ್ತಿಲ್ಲ ಅಂದ್ರಾ ಖರ್ಗೆ?

ಈ ಮಧ್ಯೆ ‘ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಆಗುವುದೇ ಆದರೆ ಸಿದ್ದರಾಮಯ್ಯ ಅವರ ಜಾಗಕ್ಕೆ ನೀವೇ ಬನ್ನಿ’ ಅಂತ ರಾಜ್ಯ ಕಾಂಗ್ರೆಸ್‌ನ ಕೆಲ ನಾಯಕರು ನೀಡಿದ ಸಂದೇಶಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ‘ಅದು ಕಷ್ಟ’ ಎಂದಿದ್ದಾರಂತೆ. ಅಂದ ಹಾಗೆ, ಮಲ್ಲಿಕಾರ್ಜುನ ಖರ್ಗೆಯವರಿಗೆ ಇಂಥ ಸಂದೇಶವನ್ನು ತಲುಪಿಸಿದವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಿದ್ದು ಬ್ರಿಗೇಡ್‌ನ ಕಮಾಂಡರ್ ಕೆ.ಎನ್.ರಾಜಣ್ಣ.

“ಸರ್, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಬಾರದು. ಹಾಗೊಂದು ವೇಳೆ ಅವರನ್ನು ಕೆಳಗಿಳಿಸುವುದು ಹೈಕಮಾಂಡ್ ಆಯ್ಕೆಯಾದರೆ ಆ ಜಾಗಕ್ಕೆ ಡಿ.ಕೆ.ಶಿವಕುಮಾರ್ ಬರುವುದು ನಮಗೆ ಇಷ್ಟವಿಲ್ಲ. ಬದಲಿಗೆ ನೀವೇ ಕರ್ನಾಟಕದ ಮುಖ್ಯಮಂತ್ರಿ ಹುzಗೆ ಬನ್ನಿ. ನೀವು ಸಿಎಂ ಆದರೆ ನಾವು ಸಂತೋಷಪಡುತ್ತೇವೆ" ಎಂದಿದ್ದಾರಂತೆ ಅವರು.

ಅದರೆ ಸತೀಶ್ ಜಾರಕಿಹೊಳಿ ಮತ್ತು ರಾಜಣ್ಣ ಅವರಾಡಿದ ಮಾತನ್ನು ಕೇಳಿದ ಮಲ್ಲಿಕಾರ್ಜುನ ಖರ್ಗೆಯವರು, “ನೋ, ನೋ, ಈ ಪ್ರಪೋಸಲ್ಲನ್ನು ಸೋನಿಯಾ ಮೇಡಂ ಅವರು ಒಪ್ಪುತ್ತಿಲ್ಲ" ಎಂದರಂತೆ.

ಅಂದ ಹಾಗೆ, ಒಂದು ಬಾರಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೇರುವ ಆಕಾಂಕ್ಷೆ ಮಲ್ಲಿಕಾರ್ಜುನ ಖರ್ಗೆ ಅವರಲ್ಲೂ ಇದೆ. ಆದರೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಕರ್ನಾಟಕಕ್ಕೆ ಕಳಿಸುವ ಇಚ್ಛೆ ಸೋನಿಯಾ ಗಾಂಧಿ ಅವರಲ್ಲಿಲ್ಲ.

ಕಾರಣ? ಮೊದಲನೆಯದಾಗಿ ದಲಿತ ನಾಯಕರೊಬ್ಬರನ್ನು ಅವಧಿಗೂ ಮುಂಚೆ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ದೇಶಕ್ಕೆ ರಾಂಗ್ ಮೆಸೇಜು ಹೋಗುತ್ತದೆ ಎಂಬುದು ಸೋನಿಯಾ ಗಾಂಧಿ ಅವರ ಆತಂಕ. ಅವರ ಈ ಆತಂಕಕ್ಕೆ ಮತ್ತೊಂದು ಟ್ವಿಸ್ಟೂ ಇದೆ. ಅದೆಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಳಗಿಳಿಸಿದ ಕೂಡಲೇ ಅವರ ಜಾಗಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ತಂದು ಕೂರಿಸ ಬೇಕು ಎಂಬ ಕೂಗು ಶುರುವಾಗುತ್ತದೆ.

ವಾಸ್ತವವಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರುಚೈತನ್ಯ ನೀಡಲು ಗಾಂಧಿ ಕುಟುಂಬದವರೇ ಎಐಸಿಸಿ ಅಧ್ಯಕ್ಷರಾಗಬೇಕು ಎಂಬ ಕೂಗು ಹಲವು ಮೂಲಗಳಿಂದ ಕೇಳಿ ಬರುತ್ತಲೇ ಇದೆ. ಮತ್ತಿದೇ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಕರ್ನಾಟಕದ ರಾಜಕಾರಣಕ್ಕೆ ಕಳಿಸಿ ಮುಖ್ಯಮಂತ್ರಿ ಪಟ್ಟ ನೀಡಬೇಕು, ಆ ಮೂಲಕ ಏಕಕಾಲಕ್ಕೆ ಎರಡು ಗುರಿಗಳನ್ನು ಸಾಧಿಸಿಕೊಳ್ಳಬೇಕು ಎಂಬುದು ದಿಲ್ಲಿಯ ಹಲ ನಾಯಕರ ಅಭಿಪ್ರಾಯ.

ಅವರ ಪ್ರಕಾರ, ಕರ್ನಾಟಕದಲ್ಲಿ ನಡೆಯುತ್ತಿರುವ ಕುರ್ಚಿ ಕಾಳಗಕ್ಕೆ ಸುಖಾಂತ್ಯ ಹಾಡಬೇಕು ಎಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಹುದ್ದೆಗೆ ತರಬೇಕು. ಹೀಗೆ ತಮ್ಮನ್ನಿಳಿಸಿ ಆ ಜಾಗಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ತಂದರೆ ಸಿದ್ದರಾಮಯ್ಯ ಅವರಾಗಲೀ, ಅವರ ಜತೆಗಿರುವವ ರಾಗಲೀ ತಕರಾರು ಮಾಡುವುದಿಲ್ಲ. ಇದೇ ರೀತಿ ಖರ್ಗೆಯವರು ಸಿಎಂ ಹುದ್ದೆಗೆ ಬಂದರೆ ಅವರ ನೇತೃತ್ವದ ಸರಕಾರವನ್ನು ದಿಲ್ಲಿಯ ಬಿಜೆಪಿ ನಾಯಕರೂ ಮುಟ್ಟುವುದಿಲ್ಲ.

ರಾಜ್ಯ ಕಾಂಗ್ರೆಸ್‌ನಲ್ಲೂ ಭಿನ್ನರ ಪಡೆ ಮೇಲೇಳುವುದಿಲ್ಲ. ಇದು ಒಂದು ಗುರಿಯಾದರೆ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದ ರಾಜಕಾರಣಕ್ಕೆ ವಾಪಸಾದ ನಂತರ ಎಐಸಿಸಿ ಪಟ್ಟಕ್ಕೆ ಪ್ರಿಯಾಂಕಾ ಗಾಂಧಿ ಬಂದು ಕುಳಿತರೂ ದೇಶದ ದಲಿತ ಸಮುದಾಯಕ್ಕೆ ರಾಂಗ್ ಮೆಸೇಜು ಹೋಗು ವುದಿಲ್ಲ ಎಂಬುದು ಎರಡನೆಯದು.

ಹಾಗಂತ ಇಂಥವರು ಹೇಳುತ್ತಿದ್ದರೂ ಸೋನಿಯಾ ಗಾಂಧಿ ಅವರಿಗೆ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯುವುದು ಬೇಕಿಲ್ಲ. ಯಾಕೆಂದರೆ ಈ ಪಟ್ಟದಿಂದ ಕೆಳಗೆ ಇಳಿಯುವ ಖರ್ಗೆ ಯವರೇನೋ ಕರ್ನಾಟಕಕ್ಕೆ ಹೋಗಬಹುದು. ಅದರೆ ಒಂದು ಕಡೆಯಿಂದ ದಲಿತರಿಗೆ ಹೋಗುವ ಸಂದೇಶ, ಮತ್ತೊಂದು ಕಡೆಯಿಂದ ಪುನಃ ತಮಗೆ ಅಂಟಿಕೊಳ್ಳುವ ವಂಶಪಾರಂಪರ್ಯ ರಾಜಕಾರಣದ ಹಣೆಪಟ್ಟಿ ಸೋನಿಯಾ ಗಾಂಧಿ ಅವರಿಗೆ ಬೇಕಿಲ್ಲ.

ಇದೇ ಕಾರಣಕ್ಕಾಗಿ ಅವರು ಇಂಥ ಪ್ರಪೋಸಲ್ಲಿಗೆ ಒಪ್ಪಿಗೆ ಕೊಡುತ್ತಿಲ್ಲ. ಹೀಗಾಗಿ ಖರ್ಗೆಯವರ ಮುಂದೆ ಪ್ರಪೋಸಲ್ಲು ಇಟ್ಟು ಬಂದಿರುವ ಸತೀಶ್ ಜಾರಕಿಜೊಳಿ ಮತ್ತು ಕೆ.ಎನ್.ರಾಜಣ್ಣ ಈ ಕುರಿತು ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.

ಫೀಲ್ಡಿಗೆ ಪರಂ, ಇಲ್ಲವೇ ಮಹದೇವಪ್ಪ?

ಅಂದ ಹಾಗೆ, ಸತೀಶ್ ಜಾರಕಿಹೊಳಿ ಮತ್ತು ಕೆಎನ್.ರಾಜಣ್ಣ ಅವರು ಕೊಟ್ಟ ಪ್ರಪೋಸಲ್ಲಿಗೆ ಮಲ್ಲಿಕಾರ್ಜುನ ಖರ್ಗೆ ಅಸಹಾಯಕತೆ ವ್ಯಕ್ತಪಡಿಸಿದ ನಂತರ ಮುಂದಿನ ದಿನಗಳ ಹೋರಾಟಕ್ಕೆ ಸಿದ್ದು ಬಣದ ನೇತೃತ್ವವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಲ್ಲವೇ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಹಿಸುವುದು ಬಹುತೇಕ ಖಚಿತವಾಗಿದೆ.

ಯಥಾಪ್ರಕಾರ ಈ ನಾಯಕರು ಕೂಡಾ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಇಳಿಯ ಬಾರದು ಎಂದೇ ಪಟ್ಟು ಹಿಡಿಯುತ್ತಾರೆ. ಆದರೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಸನ್ನಿವೇಶ ಎಮರ್ಜ್ ಆದರೆ, ಸಿದ್ದರಾಮಯ್ಯ ಇಳಿಯುವ ಅನಿವಾರ್ಯತೆ ಸೃಷ್ಟಿಯಾದರೆ, ಪರಮೇಶ್ವರ್ ಅಥವಾ ಮಹದೇವಪ್ಪ ಪರ್ಯಾಯ ನಾಯಕತ್ವದ ರೇಸಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಪೈಕಿ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ ವರು. ಸಹಜವಾಗಿಯೇ ಅವರ ಹಿರಿತನ ಕೆಲಸ ಮಾಡುತ್ತದೆ. ಇನ್ನು ಮಹದೇವಪ್ಪ ಅವರು ಕಾಂಗ್ರೆ ಸ್ ಬಯಸುವ ಸಾಮಾಜಿಕ ನ್ಯಾಯದ ವಿಷಯದಲ್ಲಿ ಪವರ್‌ಪುಲ್ ಆಗಿರುವವರು. ಸಾಮಾಜಿಕ ನ್ಯಾಯದ ರಥವನ್ನು ಸಿದ್ದರಾಮಯ್ಯ ಅವರ ನಂತರ ಎಳೆಯಬಲ್ಲ ಸಮರ್ಥ ನಾಯಕ ಎಂಬ ಹಣೆಪಟ್ಟಿ ಅವರಿಗಿದೆ. ಅದರೆ ಇದೆಲ್ಲವೂ ನಿಕ್ಕಿಯಾಗಲು ಇನ್ನೂ ಕೆಲ ಕಾಲ ಬೇಕು.

ಫೈನಾನ್ಸು ಬಿಲ್ಲಿಗೆ ಡಿಕೆ ಗುದ್ದು?

ಅಂದ ಹಾಗೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಪಾಳಯದಿಂದ ಕೇಳಿಬರುತ್ತಿರುವ ಸುದ್ದಿಗಳು ಇಂಟರೆಸ್ಟಿಂಗ್ ಅಗಿವೆ. ಸಿಎಂ ಪಾಳಯದ ಪ್ರಕಾರ, ಬಜೆಟ್ ಅಧಿವೇಶನ ಮುಗಿದ ತಕ್ಷಣ ಸಿದ್ದರಾಮಯ್ಯ ದಿಲ್ಲಿಗೆ ಧಾವಿಸಲಿದ್ದಾರಲ್ಲದೆ, ‘ಒಂದೋ ಸಂಪುಟ ಪುನಾರಚನೆಗೆ ಅನುಮತಿ ಕೊಡಿ, ಇಲ್ಲವೇ ನಾನು ಕೆಳಗಿಳಿಯಲು ಬಿಡಿ’ ಎಂದು ರಾಹುಲ್ ಗಾಂಧಿಯವರಿಗೆ ಹೇಳಲಿದ್ದಾರೆ.

ಇನ್ನು ಡಿಕೆಶಿ ಪಾಳಯದ ಪ್ರಕಾರ, ಬಜೆಟ್ ಅಧಿವೇಶನ ಪೂರ್ಣಗೊಳ್ಳುವ ಮುನ್ನವೇ ತಮಗೆ ಖಚಿತ ಭರವಸೆ ದೊರೆಯದಿದ್ದರೆ, ಅಧಿವೇಶನದಲ್ಲಿ ಫೈನಾನ್ಸ್ ಬಿಲ್ಲು ಬಿದ್ದು‌ ಹೋಗುವಂತೆ, ಆ ಮೂಲಕ ಸರಕಾರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಲು ಡಿಕೆಶಿ ರಣತಂತ್ರ ರೂಪಿಸಿದ್ದಾರೆ ಮತ್ತು ಇದಕ್ಕೆ ಪೂರಕವಾದ ಆಟ ಗೋವಾದಲ್ಲಿ ನಡೆಯಲಿದೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author