ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srinivasmurthy Column: ಶಿಕ್ಷೆ ನೀಡುವ ಮುಂಚೆ ಶಿಕ್ಷಕರಿಗಿರಲಿ ವಿವೇಚನೆ

ರಾಜ್ಯ ಅಥವಾ ರಾಷ್ಟ್ರದಲ್ಲಿ ಈ ಘಟನೆಗಳು ಮಾತ್ರವೇ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ಯುನಿಸೆಫ್ ವರದಿ 2023ರ ಪ್ರಕಾರ ಭಾರತದಲ್ಲಿ ಶೇ.53ರಷ್ಟು ಮಕ್ಕಳು ಶಾಲೆಯಲ್ಲಿ ಯಾವುದಾ ದರೂ ಒಂದು ರೀತಿಯ ದೌರ್ಜನ್ಯ ಅನುಭವಿಸುತ್ತಿದ್ದಾರೆ. ಅದರಲ್ಲಿ ಶೇ.65ರಷ್ಟು ಮಕ್ಕಳು ಭಯದಿಂದ ಯಾರಿಗೂ ಹೇಳುವುದಿಲ್ಲ. ಎನ್‌ಸಿಆರ್‌ಬಿ ಅಂದರೆ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿಗಳ ಪ್ರಕಾರ ಪ್ರತಿ 15 ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೊಳ ಗಾಗುತ್ತಿದೆ ಮತ್ತು ಸರಾಸರಿ 50000ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಶೇ.30ರಷ್ಟು ಶಾಲೆ/ಟ್ಯೂಷನ್/ಹಾಸ್ಟೆಲ್‌ಗೆ ಸಂಬಂಧಿಸಿದವುಗಳಾಗಿವೆ.

ಶಿಕ್ಷಣ ಲೋಕ

ಶ್ರೀನಿವಾಸಮೂರ್ತಿ ಎನ್ ಸುಂಡ್ರಹಳ್ಳಿ

‘ಮಕ್ಕಳೆದೆಯ ಒಳಗೆ ಮಲಗಿರುವ ದೇವರನು ಎಬ್ಬಿಸಿ ನೋಡುವವನೇ ಗುರು’ ಎಂಬ ಮಾತಿದೆ. ಭಾರತೀಯ ಸಂಸ್ಕೃತಿಯು ಮಕ್ಕಳನ್ನು ದೇವರ ಸ್ವರೂಪ ಎಂದು ಲಾಗಾಯ್ತಿನಿಂದಲೂ ಭಾವಿಸಿದೆ. ಆದರೆ ಗುರು ಸ್ಥಾನದಲ್ಲಿರುವವರು ಅದೇ ದೇವರ ಮೇಲೆ ಅನುಮಾನ ಪಟ್ಟು ಅವಮಾನವೆಂಬ ಆಯುಧವನ್ನು ಝಳಪಿಸಿದರೆ ದೇವರು ಏನಾಗಬೇಡ!

ಘಟನೆ ಒಂದು: ಆನೇಕಲ್ ಬಳಿಯ ಹಳ್ಳಿಯೊಂದರ ಸರಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ 13 ವರ್ಷದ ಮಧುಶ್ರೀ ಎಂಬ ಹೆಸರಿನ ಮಗು ಡೆತ್ ನೋಟ್‌ನಲ್ಲಿ ಬರೆಯುತ್ತಾಳೆ: ‘ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿದರು. ಅವಮಾನ ಸಹಿಸಿಕೊಂಡು ಬದುಕಲು ಆಗುತ್ತಿಲ್ಲ. ನನಗೆ ಈ ಭೂಮಿಯ ಮೇಲೆ ಬದುಕುವ ಅರ್ಹತೆ ಇಲ್ಲ. ನನ್ನ ಅಮ್ಮನನ್ನು ಯಾರೂ ಬೈಯಬೇಡಿ, ಎಲ್ಲರೂ ನನ್ನನ್ನು ಕ್ಷಮಿಸಿ...’ ಹೀಗೆ ಮೂರು ಪುಟಗಳನ್ನು ಬರೆದು ನೇಣಿಗೆ ಕೊರಳೊಡ್ಡಿದ್ದಾಳೆ. ಆ ಹೆಣ್ಣು ಮಗಳ ಮನಸ್ಸನ್ನು ಆರೋಪಕ್ಕೆ ಗುರಿಯಾಗಿರುವ ಆ ಶಿಕ್ಷಕಿ ಒಮ್ಮೆ ಓದಬಹುದಿತ್ತು. ಹಾಗೆ ಓದಿದ್ದಿದ್ದರೆ ಇಡೀ ಸಮಾಜ ಡೆತ್ ನೋಟ್ ಓದುವ ಸ್ಥಿತಿ ಬರುತ್ತಿರಲಿಲ್ಲ. ಆಕೆಯನ್ನು ಅವಮಾನಿ ಸುವ ಮೊದಲು ಆಕೆಯ ಜಾಗದಲ್ಲಿ ನಿಂತು ಒಮ್ಮೆ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕಿತ್ತು. ಹಾಗೆ ನಿಂತು ಅವಲೋಕಿಸಿದ್ದಿದ್ದರೆ ಇಂದು ಆ ಶಿಕ್ಷಕಿ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಪ್ರಮೇಯ ಬರುತ್ತಿರಲಿಲ್ಲ.

ಘಟನೆ ಎರಡು: ಬೆಂಗಳೂರು ಉತ್ತರ ತಾಲ್ಲೂಕಿನ ಕಾಡಯರ್ರಪನಹಳ್ಳಿಯ ಖಾಸಗಿ ವಸತಿ ಶಾಲೆ ಯಲ್ಲಿ ಒಬ್ಬ ವಿದ್ಯಾರ್ಥಿ ಶೌಚಾಲಯ ಮುಗಿಸಿ ಬೆಳಗಿನ ವ್ಯಾಯಾಮಕ್ಕೆ ಬರಲು ತಡವಾಗಿದೆ. ಇದೇ ಕಾರಣಕ್ಕೆ ದೈಹಿಕ ಶಿಕ್ಷಕರು ವಿವೇಚನೆ ಕಳೆದುಕೊಂಡು ಮನಬಂದಂತೆ ಕ್ರೂರವಾಗಿ ಹೊಡೆ ದಿದ್ದಾರೆ. ಇದರ ಪರಿಣಾಮ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಎರಡೂ ಘಟನೆಗಳು ತನಿಖಾ ಹಂತದಲ್ಲಿವೆ.

ರಾಜ್ಯ ಅಥವಾ ರಾಷ್ಟ್ರದಲ್ಲಿ ಈ ಘಟನೆಗಳು ಮಾತ್ರವೇ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ಯುನಿಸೆಫ್ ವರದಿ 2023ರ ಪ್ರಕಾರ, ಭಾರತದಲ್ಲಿ ಶೇ.53ರಷ್ಟು ಮಕ್ಕಳು ಶಾಲೆಯಲ್ಲಿ ಯಾವುದಾ ದರೂ ಒಂದು ರೀತಿಯ ದೌರ್ಜನ್ಯ ಅನುಭವಿಸುತ್ತಿದ್ದಾರೆ. ಅದರಲ್ಲಿ ಶೇ.65ರಷ್ಟು ಮಕ್ಕಳು ಭಯ ದಿಂದ ಯಾರಿಗೂ ಹೇಳುವುದಿಲ್ಲ. ಎನ್‌ಸಿಆರ್‌ಬಿ ಅಂದರೆ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿಗಳ ಪ್ರಕಾರ ಪ್ರತಿ 15 ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೊಳ ಗಾಗುತ್ತಿದೆ ಮತ್ತು ಸರಾಸರಿ 50000ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಶೇ.30ರಷ್ಟು ಶಾಲೆ/ಟ್ಯೂಷನ್/ಹಾಸ್ಟೆಲ್‌ಗೆ ಸಂಬಂಧಿಸಿದವುಗಳಾಗಿವೆ.

ಇದನ್ನೂ ಓದಿ: ‌Srinivasmurthy N S Column: ಪ್ರಾಗೈತಿಹಾಸಿಕ ನೆಲೆಯ ಹುಡುಕಾಟದಲ್ಲಿ

ಕೆಎಸ್‌ಸಿಪಿಸಿಆರ್ (ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ) ದ ಪ್ರಕಾರ ಕರ್ನಾಟಕ ದಲ್ಲಿ 2023-24ರಲ್ಲಿ 87 ಕಾರ್ಪೋರಲ್ ಪನಿಷ್ಮೆಂಟ್ ದೂರುಗಳು ದಾಖಲಾಗಿವೆ. 2022ರಿಂದ 25ರ ನಡುವೆ 200ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 18 ವರ್ಷದೊಳಗಿನ 1800 ವಿದ್ಯಾರ್ಥಿಗಳು ಶಾಲೆಗಳಲ್ಲಿನ ಒತ್ತಡ, ಅವಮಾನಗಳಂತಹ ಪ್ರಮುಖ ಮತ್ತು ಭಾಗಶಃ ಇವೇ ಕಾರಣಗಳು ಸೇರಿದಂತೆ ವಿವಿಧ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2025ರ ಕರ್ನಾಟಕ ಚೈಲ್ಡ್ ರೈಟ್ಸ್ ಆಬ್ಸರ್ವೇಟರಿ ನಡೆಸಿದ ಅಧ್ಯಯನದಲ್ಲಿ 150 ಶಾಲೆಗಳ ವಿದ್ಯಾರ್ಥಿಗಳಲ್ಲಿ 38% ಮಕ್ಕಳು ತಮ್ಮ ಮೇಲೆ ದೈಹಿಕ ಶಿಕ್ಷೆ ಅಥವಾ ಸಾರ್ವಜನಿಕ ಅವಮಾನ, ಬೈಗುಳ, ಬೆತ್ತದಿಂದ ಹೊಡೆಯುವುದು ಮೊದಲಾದ ಶಿಕ್ಷೆಗಳು ನಡೆದಿವೆ ಎಂದು ತಿಳಿಸಿದ್ದಾರೆ. ಗ್ರಾಮೀಣ ಶಾಲೆಗಳಲ್ಲಿ ಇದು 45% ಇದ್ದರೆ, ನಗರ ಪ್ರದೇಶಗಳಲ್ಲಿ 32% ಎಂದು ವರದಿಯಾಗಿದೆ.

ಕರ್ನಾಟಕ ಸರಕಾರವು ವಸತಿ ಶಾಲೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಮಾನಸಿಕ ಹಿಂಸೆ, ದೈಹಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಮಕ್ಕಳ ಮುಂದೆಯೇ ಅವಮಾನ, ನಿರ್ಲಕ್ಷ್ಯ, ಇವೇ ಮೊದಲಾದ ದೌರ್ಜನ್ಯ ಗಳಿಂದ ರಕ್ಷಿಸಲು ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಜಾರಿಗೊಳಿಸಿದೆ. ಅಲ್ಲದೆ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಲು ಸೂಚಿಸಿದೆ. ಆದರೆ ಇದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಆರ್‌ಟಿಇ (ಶಿಕ್ಷಣದ ಹಕ್ಕು ಕಾಯ್ದೆ, 2009 ಸೆಕ್ಷನ್ 17 (1) ರ ಪ್ರಕಾರ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನಿಷೇಧ, ಮಾನಸಿಕ ಕಿರುಕುಳ ನಿಷೇಧ, ಏಕಾಂತ ಶಿಕ್ಷೆ ನಿಷೇಧ, ಜಾತಿ, ಧರ್ಮ, ಬಡತನ, ಅಂಕಗಳ ಆಧಾರದ ಮೇಲೆ ತಾರತಮ್ಯ ಮತ್ತು ಅವಮಾನ ನಿಷೇಧ ಇದೆ. ಆದರೆ ಯಾರೂ ಅದನ್ನು ಪಾಲಿಸುತ್ತಿಲ್ಲ.

62 ok

ಬಹುತೇಕ ಶಾಲೆಗಳಲ್ಲಿ ಸಿಸಿಟಿವಿ, ದೂರು ಪೆಟ್ಟಿಗೆ, ಆಪ್ತ ಸಮಾಲೋಚಕರು ಇಲ್ಲದ ಕಾರಣ ಬಹಳಷ್ಟು ಪ್ರಕರಣಗಳು ಆಚೆಗೆ ಬರುವುದಿಲ್ಲ. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016ರ ಪ್ರಕಾರ, ಪ್ರತಿ ಶಾಲೆಯಲ್ಲಿ 5 ರಿಂದ 7 ಜನರ ಮಕ್ಕಳ ರಕ್ಷಣಾ ಸಮಿತಿ ಇರಬೇಕು. ಮಕ್ಕಳ ಹೆಸರು ನಮೂದಿಸದೇ ದೂರು ಹಾಕಲು ದೂರು ಪೆಟ್ಟಿಗೆ ಇರಬೇಕು. ಶಾಲೆಗಳ ಕಾರಿಡಾರ್, ಗ್ರೌಂಡ್, ತರಗತಿ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು.

ಮಾನಸಿಕ ತಜ್ಞರು ಮತ್ತು ಆಪ್ತ ಸಮಾಲೋಚಕರಿಂದ ಮಕ್ಕಳನ್ನು ವಾರಕ್ಕೊಮ್ಮೆ ಸಮಾಲೋಚನೆ ಗೊಳಪಡಿಸಬೇಕು. ಪ್ರತಿ 3 ತಿಂಗಳಿಗೊಮ್ಮೆ ಟೀಚರ್ ಮತ್ತು ಸಿಬ್ಬಂದಿಗೆ ಪೋಕ್ಸೋ ನಿಯಮಗಳ ತರಬೇತಿ ನೀಡಬೇಕು. ಮಗು ಗಾಯಗೊಂಡರೆ ಅಥವಾ ಅಸ್ವಸ್ಥತೆಗೊಳಗಾದರೆ 2 ಗಂಟೆಗಳೊಳಗೆ ಪೋಷಕರಿಗೆ ಮಾಹಿತಿ ನೀಡಬೇಕು- ಇಷ್ಟೆಲ್ಲಾ ನಿಯಮಗಳಿವೆ.

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಸಮೀಕ್ಷೆ ಪ್ರಕಾರ ಶೇ. 30ರಿಂದ 40 ಶಾಲೆಗಳು ಮಾತ್ರವೇ ಇದನ್ನು ಪೂರ್ಣವಾಗಿ ಜಾರಿ ಮಾಡಿವೆ. ಶಿಕ್ಷಕರಿಗೆ ಮೊದಲು ಬೇಕಾದುದು ಸಂವೇದನಾ ಶೀಲತೆ ಮತ್ತು ತಾಳ್ಮೆ. ಪರಿಸ್ಥಿತಿಗಳನ್ನು ಅವಲೋಕಿ ಸುವ ನಯಗಾರಿಕೆ. ಯಾವುದೇ ಶಿಕ್ಷಕನಾಗಲೀ ತಾನು ಶಿಕ್ಷೆ ಕೊಡುವ ಮುಂಚೆ ಒಂದಿಷ್ಟು ತಿತಿಕ್ಷೆ ಯನ್ನು ಹೊಂದಿರಬೇಕು. ಹೊಡೆಯಲೇಬೇಕಾದ ಅನಿವಾರ್ಯತೆ ಬಂದಾಗ ವಿದ್ಯಾರ್ಥಿ ಮಾಡಿರುವ ತಪ್ಪಾದರೂ ಯಾವುದು? ಯಾಕಾಗಿ ಹೊಡೆಯು ತ್ತಿದ್ದೇನೆ, ಹೇಗೆ, ಯಾವುದರಲ್ಲಿ ಮತ್ತು ಯಾವ ಭಾಗಕ್ಕೆ ಹೊಡೆಯುತ್ತಿದ್ದೇನೆ ಎಂಬ ಪರಿಜ್ಞಾನ ಇರಬೇಕು. ಬೈಯಲು ಬಳಸುವ ಮಾತುಗಳಲ್ಲಿ ಸಂಸ್ಕಾರ ಇರಬೇಕು. ಮಾತುಗಳು ಮಕ್ಕಳ ಮನಸ್ಸಿನ ಪರಿವರ್ತನೆಗೆ ಕಾರಣವಾಗಬೇಕೇ ಹೊರತು ಜೀವಕ್ಕೇ ಕುತ್ತು ತರುವಂತಿರ ಬಾರದು.

ಶಿಕ್ಷಕ ಇರುವುದು ಶಿಕ್ಷಣ ನೀಡಲೇ ಹೊರತು ಶಿಕ್ಷೆ ನೀಡಲು ಅಲ್ಲ. ಶಾಲೆ ಮತ್ತು ಶಿಕ್ಷಕ ಇರುವುದು ಮಕ್ಕಳನ್ನು ತಿದ್ದಿ ತೀಡುವ ಮೂಲಕ ಕಲಿಸುವುದಕ್ಕೇ ಹೊರತು, ಶಾಶ್ವತವಾಗಿ ಮನೆಗೋ ಅಥವಾ ಪರಲೋಕಕ್ಕೋ ಕಳಿಸುವಂತಹ ಸನ್ನಿವೇಶ ಸೃಷ್ಟಿಸುವುದಕ್ಕಲ್ಲ. ಶಿಕ್ಷಕರಿಗೆ ಮನೆಯಲ್ಲಿ ಮತ್ತು ಬದುಕಿನಲ್ಲಿ ನೂರಾರು ಸಮಸ್ಯೆಗಳಿರಬಹುದು, ವೈಯುಕ್ತಿಕವಾಗಿ ಸಾವಿರಾರು ಒತ್ತಡಗಳಿರ ಬಹುದು. ಆದರೆ ಶಾಲಾ ಆವರಣ ಪ್ರವೇಶಿಸುವ ಮೊದಲು ಅವೆಲ್ಲವನ್ನೂ ಆಚೆಯೇ ಬಿಟ್ಟು ಕೇವಲ ಗುರುವಾಗಿ ಯಷ್ಟೇ ಪ್ರವೇಶಿಸಬೇಕು.

ಅಷ್ಟೇ ಅಲ್ಲ ತರಗತಿ ಪ್ರವೇಶಿಸುವ ಮೊದಲು ಕಚೇರಿ ರಾಜಕೀಯ, ಸಿಬ್ಬಂದಿಗಳ ನಡುವಿನ ಸಣ್ಣ ಸಣ್ಣ ಕಲಹಗಳು ಅಥವಾ ಇನ್ನಿತರೆ ತಿಕ್ಕಾಟಗಳು ಎಲ್ಲವನ್ನೂ ಬಿಟ್ಟು ಕೇವಲ ಅಂದರೆ ಕೇವಲ ಸದ್ಗುರುವಾಗಿ ಮಾತ್ರವೇ ಪ್ರವೇಶಿಸಬೇಕು. ಪಾಠ ಹೇಳವುದಕ್ಕಿಂತ ಮುಖ್ಯವಾಗಿ ಜೀವನದ ದಾರಿ ತೋರಿಸುವ ಕೈಗಂಬವಾಗಬೇಕು. ಬದುಕುವ ರೀತಿಯನ್ನು ಕಲಿಸುವುದರೊಂದಿಗೆ ತಾನೂ ಸನ್ಮಾರ್ಗ ದಲ್ಲಿ ನಡೆಯುವ ಮೂಲಕ ಅಕ್ಷರ, ಆಚಾರ ಮತ್ತು ಆತ್ಮಜ್ಞಾನ ಮೂರನ್ನೂ ಕೊಡಬೇಕು. ತನ್ನ ಮಾತು ಮತ್ತು ನಡತೆ ಎರಡರ ಮೂಲಕವೂ ಸನ್ಮಾರ್ಗ ತೋರಬೇಕು ಮತ್ತು ಸಂಸ್ಕಾರ ಕಲಿಸಬೇಕು.

ಸಾಮಾನ್ಯವಾಗಿ ಶಿಕ್ಷಕರಾದವರು ಮಕ್ಕಳಿಗೆ ಶಿಕ್ಷೆ ನೀಡುವುದು ಹೋಂ ವರ್ಕ್ ಮಾಡದೇ ಇದ್ದಾಗ, ಕಿರು ಪರೀಕ್ಷೆ ಅಥವಾ ಘಟಕ ಪರೀಕ್ಷೆಗಳಲ್ಲಿ ಕಾಪಿ ಮಾಡಿದ್ದಾಗ, ಓದುವುದರಲ್ಲಿ ಹಿಂದುಳಿದಿದ್ದಾಗ ಇವೇ ವಿಚಾರಗಳಿಗೆ. ಕಾಪಿ ಮಾಡುವುದನ್ನು ಕಲಿಸಿದವರು ಅಥವಾ ಆ ರೀತಿಯ ಮನಸ್ಥಿತಿ ಬರುವ ಹಾಗೆ ಮಾಡಿದವರು ಯಾರು? ಮಕ್ಕಳ ಮೇಲೆ ಅಂಕಗಳಿಗೆ ಒತ್ತಡ ಹೆಚ್ಚಾದಾಗ, ಆ ಅಂಕಗಳು ಬಾರದೇ ಹೋದಾಗ ಶಿಕ್ಷೆ ನೀಡುವುದು ಕಾಮನ್ ಆದಾಗ, ಆ ಶಿಕ್ಷೆಯಿಂದ ಪಾರಾಗಲು (ಓದಿನಲ್ಲಿ ಹಿಂದುಳಿದವರು) ಕಾಪಿ ಮಾರ್ಗವನ್ನು ಹಿಡಿಯುತ್ತಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಶಿಕ್ಷಕರು, ಒಂದು ವೇಳೆ ವಿದ್ಯಾರ್ಥಿ ಪಕ್ಕಕ್ಕೆ ತಿರುಗಿದ್ದರು ಅಥವಾ ಪೆನ್ಸಿಲ್, ಎರೇಸರ್ ಪಡೆಯಲು ಪಕ್ಕದವರನ್ನು ಮಾತಾಡಿಸಿದರು ಎಂದ ಮಾತ್ರಕ್ಕೆ, ಕಾಪಿ ಮಾಡಿಲ್ಲ ಎಂಬ ಸತ್ಯವನ್ನು ಮಕ್ಕಳು ಪ್ರಾಮಾಣಿಕವಾಗಿ ಒಪ್ಪಿಕೊಂಡರೂ ಕೇಳಿಸಿಕೊಳ್ಳುವ ಅಥವಾ ಅದನ್ನು ಒಪ್ಪಿಕೊಳ್ಳುವ ದೊಡ್ಡತನ ಮೆರೆಯುವುದಿಲ್ಲ. ನಾನಷ್ಟೇ ಸರಿ ಮತ್ತು ನಾನು ಹೇಳಿದ್ದಷ್ಟೇ ಸರಿ ಎಂಬ ಸ್ವ-ಪ್ರತಿಷ್ಠೆಗೆ ಬೀಳುತ್ತಾರೆ.

ಇತ್ತೀಚೆಗೆ ನನಗೆ ಗೊತ್ತಿರುವ ಒಬ್ಬ ವಿದ್ಯಾರ್ಥಿಗೆ ಹೀಗೇ ಆಗಿತ್ತು, ಆ ವಿದ್ಯಾರ್ಥಿ ಕಾಪಿ ಮಾಡಿರಲಿಲ್ಲ. ಈ ಹಿಂದೆ ಮಾಡಿದ ಉದಾಹರಣೆಗಳೂ ಇಲ್ಲ. ತರಗತಿ ಹಂತದ ಕಿರು ಪರೀಕ್ಷೆ ಬರೆಯುವಾಗ ಹಿಂದಿನವರು ಮಾತಾಡಿಸಿದರು ಎಂದು ಈಕೆ ಹಿಂದೆ ತಿರುಗಿದ್ದಾಳೆ. ಅದನ್ನು ಗಮನಿಸಿದ ಶಿಕ್ಷಕಿ ಕಾಪಿ ಮಾಡಿದ್ದೀಯ ಎಂದು ಎಲ್ಲಾ ವಿದ್ಯಾರ್ಥಿಗಳ ಮುಂದೆ ಬಹಳ ವಾದಿಸಿದ್ದಾರೆ. ಆಗ ಆ ವಿದ್ಯಾರ್ಥಿ ಬೇಕಿದ್ದಲ್ಲಿ ಸಿಸಿ ಕೆಮರಾ ಪರಿಶೀಲಿಸಿ ಮ್ಯಾಡಂ ಎಂದಿದ್ದಾರೆ.

ಪ್ರಾಂಶುಪಾಲರ ಸಮ್ಮುಖದಲ್ಲಿ ಪರಿಶೀಲನೆಯೂ ನಡೆದಿದೆ. ಅಲ್ಲಿ ಸತ್ಯ ಸಾಬೀತಾಗಿದೆ. ಆದರೆ ಶಿಕ್ಷಕಿಗೆ ಈಗೋ ಹರ್ಟ್ ಆಗಿರಬಹುದು, ವಿದ್ಯಾರ್ಥಿಯ ಡೈರಿಯಲ್ಲಿ ನಿಮ್ಮ ಮಗಳು ಕಾಪಿ ಮಾಡಿ ದ್ದಾಳೆ, ಆಕೆಗೆ ಬುದ್ಧಿ ಹೇಳಿ ಎಂದು ಬರೆದು ಪೋಷಕರಿಗೆ ಕಳಿಸಿದ್ದಾರೆ. ಹಾಗೆಯೇ ಯೋಚಿಸಿ ನೋಡಿ, ಕೌಮಾರ್ಯವನ್ನಿನ್ನೂ ದಾಟಿರದ ವಿದ್ಯಾರ್ಥಿಯ ಸೂಕ್ಷ್ಮ ಮನಸ್ಸಿನಲ್ಲಿ ಎಂತಹ ಪ್ರಕ್ಷುಬ್ಧತೆ ಉಂಟಾಗಿರಬಹುದು! ತನ್ನ ಸಹಪಾಠಿಗಳ ಮುಂದೆ ತನಗೆ ಅವಮಾನವಾಯಿತೆಂದು ಇಂತಹ ಸಂದರ್ಭಗಳಲ್ಲಿ ಮಕ್ಕಳು ಕೆಟ್ಟ ನಿರ್ಧಾರಗಳಿಗೆ ಮುಂದಾಗುವುದಿಲ್ಲವೇ? ಇಂತಹ ಪ್ರಚೋದನೆಗಳು ಬೇಕಂತಲೇ ಆಗುವುದಿಲ್ಲ.

ಯಾವ ಶಿಕ್ಷಕರಿಗೂ ಆ ಕೆಟ್ಟ ಮನಸ್ಥಿತಿ ಇರುವುದಿಲ್ಲ. ಆದರೆ ಶಿಕ್ಷಕರಲ್ಲಿ ವಿವೇಚನೆ ಕೈಕೊಟ್ಟಾಗ, ತಾಳ್ಮೆ ಇಲ್ಲದೇ ಹೋದಾಗ, ಇಗೋ ಎಂಬ ಎರಡಕ್ಷರ ಬೃಹದಾಕಾರವಾಗಿ ಬೆಳೆದು ನಿಂತಾಗ ಇಂತಹ ಅಪಸವ್ಯಗಳು ಜರುಗುತ್ತವೆ. ಸರಕಾರವಾಗಲೀ, ಆಡಳಿತ ಮಂಡಳಿಗಳಾಗಲೀ ಶಿಕ್ಷಕರನ್ನು ತರಗತಿಗಳಿಗೆ ಬಿಡುವ ಮುಂಚೆ ಅವರಿಗೆ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ, ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸುವ, ಮಕ್ಕಳ ಮನಸ್ಸನ್ನು ಅರಿತುಕೊಳ್ಳುವ, ಅವರನ್ನೂ ತನ್ನ ಸ್ವಂತ ಮಕ್ಕಳಂತೆಯೇ ಕಕ್ಕುಲಾತಿ ತೋರುವ ತರಬೇತಿಗಳನ್ನು ನೀಡಲೇಬೇಕಾದ ಅನಿವಾರ್ಯತೆ ಮತ್ತು ಜರೂರತ್ತು ಎರಡೂ ಇವೆ.

ಮಕ್ಕಳು ಮಣ್ಣಿನ ಮುದ್ದೆಯಂತೆ ಅದಕ್ಕೆ ಸುಂದರ ರೂಪ ಕೊಡುವ ಜವಾಬ್ದಾರಿ ಹೆತ್ತವರಿಗಿಂತ ಶಿಕ್ಷಕರಿಗೇ ಜಾಸ್ತಿ. ಹೀಗಾಗಿಯೇ ಶಿಕ್ಷಣಕ್ಕೆ ಇನ್ನಿಲ್ಲದ ಮಹತ್ವವನ್ನು ಈ ಸಮಾಜ ನೀಡುತ್ತಿದೆ. ಹಾಗಾಗಿ ಶಿಕ್ಷಕರಾದವರು ಮಾಡಬೇಕಾದ ಮೊದಲ ಕೆಲಸ ಮಕ್ಕಳಿಗೆ ಬದುಕಿನ ಮೇಲೆ ಪ್ರೀತಿ ಹುಟ್ಟಿಸುವುದು, ಕಲಿಕೆಯ ಮೇಲೆ ಆಸಕ್ತಿ ಮೂಡಿಸುವುದು. ಸೋಲನ್ನು ಒಪ್ಪಿಕೊಳ್ಳುವುದು ಮತ್ತು ಅದನ್ನು ಎದುರಿಸುವುದು, ಅಂಕಗಳೇ ಮುಖ್ಯ ವಲ್ಲ, ಅಂಕಗಳಿಂದಾಚೆಗೂ ಬದುಕು ಇದೆ ಎಂಬ ವಾಸ್ತವವನ್ನು ಅರಿವಾಗಿಸುವುದು.

ಶಿಸ್ತು ಎಂಬ ಹೆಸರಿನಲ್ಲಿ ನಡೆಯುವ ದೌರ್ಜನ್ಯ ಶಿಕ್ಷಣವಲ್ಲ, ಅದು ಮಕ್ಕಳ ಮನಸ್ಸು ಮತ್ತು ಭವಿತ ವ್ಯದ ಮೇಲಿನ ದಾಳಿ. ಮಕ್ಕಳಿರುವುದೇ ತಪ್ಪು ಮಾಡಲು. ‘ತಪ್ಪು ಮಾಡಲೂ ಸ್ವಾತಂತ್ರ್ಯ ಇಲ್ಲದ ಮೇಲೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ’ ಎಂಬ ಮಾತಿದೆ. ಹಾಗಾಗಿ ಮಕ್ಕಳ ತಪ್ಪುಗಳನ್ನು ತಿದ್ದಿ ಮತ್ತು ಅದನ್ನು ತಿಳಿ ಹೇಳಬೇಕಾದ ಹೊಣೆಗಾರಿಕೆ ಶಿಕ್ಷಕರದ್ದು.

ತಪ್ಪಿಗೆ ಶಿಕ್ಷೆ ನೀಡುತ್ತಾ ಹೋದರೆ ಭರಿಸಲಾರದವರು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಭರಿಸಿದವರು ಮುಂದೆ ತಪ್ಪಿಗೆ ಶಿಕ್ಷೆ ನೀಡಲೇಬೇಕು ಎಂದು ಅವರೂ ಕೂಡ ಶಿಕ್ಷೆ ನೀಡಲು ಪ್ರಾರಂಭಿಸುತ್ತಾರೆ. ಶಾಲೆ ಶಿಕ್ಷಣ ಕೊಡುವ ಮತ್ತು ಸ್ವೀಕರಿಸುವ ಜಾಗ, ಜೈಲಲ್ಲ. ಅಲ್ಲಿಗೆ ಮಕ್ಕಳು ಕನಸುಗಳೊಂದಿಗೆ ಹೋಗಬೇಕೇ ಹೊರತು ಭಯದಿಂದಲ್ಲ. ಶಾಲೆಗಳಲ್ಲಿ ಒತ್ತಡ ರಹಿತ ಮತ್ತು ಭಯ ರಹಿತ ವಾತಾವರಣ ನಿರ್ಮಾಣವಾಗಬೇಕು.