ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗ ಮತ್ತು ವಿಮರ್ಶಕರ ಮಧ್ಯೆ ಕಿರಿಕ್ ಅನ್ನೋದು ಸರ್ವೇ ಸಾಧಾರಣ ಅನ್ನೋದು ಎಲ್ಲರಿಗೂ ಗೊತ್ತು. ಮೊದಲೆಲ್ಲ ಮಾಧ್ಯಮದವರು ಏನೇ ಬರೆದ್ರೂ ಅದನ್ನ ಸಮಾಧಾನ ಚಿತ್ತದಿಂದಲೇ ಚಿತ್ರತಂಡವರು ತಗೋತಾ ಇದ್ರು. ಅಸಮಾಧಾನ ಇದ್ರೂ ಅದನ್ನ ಹೇಳಬೇಕಾದ ರೀತಿಯಲ್ಲಿ ಹೇಳ್ತಾ ಇದ್ರು. ಈಗ ಅದು ಸಾಕಷ್ಟು ಬದಲಾಗಿದೆ.
ವಿಮರ್ಶೆ ಬರೆಯುವವರ ಬಗ್ಗೆ ಕೀಳಾಗಿ ಮಾತಾಡೋದು, ಅವರನ್ನ ಟ್ರೋಲ್ ಮಾಡೋದು ಆಗ್ತಿದೆ. ಅದರಲ್ಲೂ ಸ್ಟಾರ್ ಸಿನಿಮಾಗಳಾದ್ರೆ ಅವರ ಕಡೆಯವರು ಮತ್ತು ಪೇಯ್ಡ್ ಅಭಿಮಾನಿಗಳ ಕಾಟಕ್ಕೆ ವಿಮರ್ಶಕರು ಕಂಗಾಲಾಗಿzರೆ. ಇತ್ತೀಚಿಗೆ ಇದರ ಹಾವಳಿ ಹೆಚ್ಚಾಗಿದೆ. ಆದರೆ ಇದುವರೆಗೆ ಕೇವಲ ಒಳಗೊಳಗೇ ಇದ್ದ ಈ ಬೆಳವಣಿಗೆ ಈಗ ಇನ್ನೊಂದು ಆಯಾಮಕ್ಕೆ ತಿರುಗಿಕೊಂಡಿದೆ.
ಆ ವಾರ ಬಿಡುಗಡೆ ಆಗ್ತಾ ಇರೋ ಸ್ಟಾರ್ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರಾದ್ರೂ ನೆಗೆಟಿವ್ ಆಗಿ ಮಾತಾಡಿದ್ರೆ, ‘ನೀವು ಕನ್ನಡ ಸಿನಿಮಾಗಳನ್ನ ಬೆಂಬಲಿಸಲ್ಲ’ ಅಂತ ವರಾತ ತೆಗೆಯುತ್ತಾರೆ. ಕೆಲವು ಚಿತ್ರಗಳು ಈ ವಿಷಯದಲ್ಲಿ ಈಗ ಒಂದು ಹೆಜ್ಜೆ ಮುಂದೆ ಹೋಗಿವೆ. ಚಿತ್ರಕ್ಕೆ ಸಂಬಂಧಪಟ್ಟವರೊಬ್ಬರು ಎಲ್ಲ ವಿಮರ್ಶಕರಿಗೂ ಇದೊಂದು ರಿಕ್ವೆ ಅಂತ ಹೇಳುತ್ತಲೇ, ‘ಸಿನಿಮಾ ನೋಡಿ ಚೆನ್ನಾಗಿದೆ ಅನ್ನಿಸಿದ್ರೆ ಹಾಗೆ ರಿವ್ಯೂ ಮಾಡಿ, ಇಷ್ಟ ಆಗದಿದ್ರೆ ನಮಗೆ ಕಾಲ್ ಮಾಡಿ ಡಿಸ್ಕಸ್ ಮಾಡಿ, ನಾವು ನಿಮಗೆ ಎಕ್ಸ್‌ಪ್ಲೇನ್ ಮಾಡ್ತೀವಿ, ಅದಕ್ಕೆ ತಕ್ಕಂತೆ ರಿವ್ಯೂ ಮಾಡಿ; ಸುಮ್ನೆ ಸಿನಿಮಾ ನೋಡಿ ಹೆಂಗೆಂಗೋ ರಿವ್ಯೂ ಮಾಡಬೇಡಿ’ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತಾರೆ.
ಇದನ್ನು ಕೇಳಿ ಕಂಗಾಲಾಗೋ ಅನೇಕ ವಿಮರ್ಶಕರು ‘ಎಲ್ಲಿಗೆ ಬಂತಪ್ಪಾ ವಿಮರ್ಶೆಯ ಪರಿಸ್ಥಿತಿ, ಈ ಹುಟ್ಟಿಗೆ ವಿಮರ್ಶೆ ಬೇರೆ ಮಾಡ್ಬೇಕಾ’ ಅನ್ನುತ್ತಾ ‘ನಿಮ್ಮ ಸಿನಿಮಾ ನೋಡೋದೇ ಬೇಡ ಬಿಡಿ’ ಅನ್ನೋ ನಿರ್ಧಾರಕ್ಕೆ ಬರುತ್ತಿದ್ದಾರೆ.
ಇದನ್ನೂ ಓದಿ: Hari Paraak Column: ಬಾಕ್ಸ್ ಆಫೀಸ್ ಸೋಲ್ತಾನ್
ಲೂಸ್ ಟಾಕ್- ಜಸ್ಪ್ರೀತ್ ಬೂಮ್ರಾ
ಏನ್ ಸರ್, ನಿಮ್ದು ಆಡೋದಕ್ಕಿಂತ ಬರೀ ರೆಸ್ಟ್ ತಗೊಳ್ಳೇದೇ ಜಾಸ್ತಿ ಆಯ್ತಲ್ಲ?
- ನಿಜ ಬಿಡಿ. ಅದಕ್ಕೇ ಈಗ ಬಿಸಿಸಿಐನವರು ‘ನೀನು ಇಂಡಿಯಾಗೆ ಆಡೋದಕ್ಕಿಂತ ರೆಸ್ಟ್ ಆಫ್ ಇಂಡಿಯಾಗೆ ಆಡೋದೇ ಬೆಸ್ಟು’ ಅಂತಿದ್ದಾರೆ.
ಕರೆಕ್ಟಾಗೇ ಹೇಳಿದ್ದಾರೆ ಬಿಡಿ. ಅಂದಹಾಗೆ, ಗಂಭೀರ್ ಕಾಲದಲ್ಲಿ ಸೀನಿಯರ್ ಪ್ಲೇಯರ್ಸ್‌ಗೆ ಬೆಲೆನೇ ಇಲ್ವಂತೆ?
- ನಮ್ ದೇಶದಲ್ಲಿ ಸೀನಿಯರ್ ಸಿಟಿಜನ್ಸು, ಸೀನಿಯರ್ ಪ್ಲೇಯರ್ಸು ಯಾರಿಗೂ ಬೆಲೆ ಇಲ್ಲ ಬಿಡಿ
ನೆಕ್ಸ್ಟ್ ಮ್ಯಾಚ್ ಆಡ್ತೀರಾ ಅನ್ನೋ ಗ್ಯಾರಂಟಿನಾದ್ರೂ ಇದೆಯಾ ನಿಮಗೆ?
- ಇಂಡಿಯನ್ ಟೀಮಲ್ಲಿ ಹರ್ಷಿತ್ ರಾಣಾ ಪ್ಲೇಸ್ ಬಿಟ್ರೆ ಬೇರೆ ಯಾವ್ದಕ್ಕೂ ಜೀವನದಲ್ಲಿ ಗ್ಯಾರಂಟಿ ಇಲ್ಲ ಕಣ್ರೀ
ನೀವು ಅಷ್ಟು ಪರ್ ಫೆಕ್ಟ್ ಆಗಿ ಯಾರ್ಕರ್ ಹಾಕಿ ವಿಕೆಟ್ಸ್ ಎಗರಿಸ್ತೀರಲ್ಲ ಅದೆಂಗೆ ಸಾಧ್ಯ?
- ಅದೂ, ನಾನು ಸಣ್ಣೋನಿದ್ದಾಗ ಲಗೋರಿ ಜಾಸ್ತಿ ಆಡ್ತಾ ಇದ್ದೆ.
ಕೊಹ್ಲಿ, ರೋಹಿತ್ ಇದ್ರೂನೂ ‘ಒನ್ ಡೇ’ ಮ್ಯಾಚ್‌ಗಳನ್ನ ಇಂಡಿಯಾ ಯಾಕೆ ಸೋಲ್ತಾ ಇದೆ?
- ಅವರ್ ಮಾತ್ರ ಆಡಿದ್ರೆ ಆಯ್ತಾ, ಉಳಿದೋರೂ ಆಡಬೇಕಲ್ವಾ. ಆದ್ರೂ ನಮ್ಗೂ ‘ಒಂದು ದಿನ’ ಬರುತ್ತೆ, ನೋಡ್ತಾ ಇರಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಕರೋನಾ ಕಾಲದಲ್ಲಿ ಇಡೀ ನೇಶನ್ ಕರೋನಾಗೆ ವ್ಯಾಕ್ಸಿನೇಶನ್ ಹಾಕಿಸಿಕೊಂಡು, ಈಗ ಯಾಕಾದರೂ ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡೆವೋ ಅಂತ ಪಶ್ಚಾತ್ತಾಪ ಪಡುವ ಧಾವಂತದಲ್ಲಿ ಇರುವಾಗ ಯಾವನೋ ಒಬ್ಬ ಹುಚ್ಚ ನಾನು ಎಲ್ಲರಿಗೂ ಏಡ್ಸ್ ಕಾಯಿಲೆ ಹರಡಿಸಿ ಬಿಡ್ತೀನಿ ಎನ್ನುವ ಕೆಟ್ಟಬುದ್ಧಿಗೆ ಇಳಿದಿದ್ದ. ಏಡ್ಸ್ ಸೋಂಕು ಇರೋ ಬ್ಲಡ್ ಅನ್ನು ಸಿರಿಂಜ್‌ನಲ್ಲಿ ಹಾಕಿಕೊಂಡು ರಸ್ತೆಯಲ್ಲಿ ಹೋಗೋ ಬರೋವ್ರಿಗೆ, ‘ಇದು ಎಚ್‌ಐವಿ ಪಾಸಿಟಿವ್ ಇರೋ ಬ್ಲಡ್ಡು, ಚುಚ್ಚಿಬಿಡ್ತೀನಿ, ಚುಚ್ಚಿಬಿಡ್ತೀನಿ’ ಅಂತ ಹೆದರಿಸ್ತಾ ಇದ್ದ. ಅವನನ್ನು ನೋಡಿ ಎಲ್ಲರೂ ದೂರ ಓಡಿಹೋಗುತ್ತಿದ್ದರು.
ಅಷ್ಟರಲ್ಲಿ ಸೋಮು ಬಂದು, ‘ಅಲ್ಲಿ ಯಾವನೋ ಹುಚ್ಚ ತಿರುಗಾಡ್ತಾ ಇದ್ದಾನೆ. ಏಡ್ಸ್ ಇರೋ ಬ್ಲಡ್‌ನ ಇಂಜೆಕ್ಷನ್ ಸಿರಿಂಜ್‌ಗೆ ಹಾಕ್ಕೊಂಡು, ಎಲ್ಲರಿಗೂ ಚುಚ್ಚಿ ಬಿಡ್ತೀನಿ, ಚುಚ್ಚಿ ಬಿಡ್ತೀನಿ ಅಂತ ಹೆದರಿಸ್ತಾ ಇದ್ದಾನೆ.
ನೀನು ಮಾತ್ರ ಆ ಕಡೆ ಹೋಗ್ಬೇಡ’ ಅಂತ ಖೇಮುಗೆ ಹೇಳಿದ. ಅದಕ್ಕೆ ಖೇಮು, ‘ಅಯ್ಯೋ ಅಂಥವರಿಗೆ ನಾನು ತಲೆಕೆಡಿಸಿಕೊಳ್ಳಲ್ಲ, ನಾನ್ ನೋಡ್ಕೊತೀನಿ ಬಿಡು’ ಅಂತ ಆ ಹುಚ್ಚ ಓಡಾಡ್ತಾ ಇದ್ದ ರೋಡಿಗೇ ಹೋದ. ‘ಲೋ, ಬ್ಯಾಡ ಕಣೋ, ಅವನೇನಾದ್ರೂ ಚುಚ್ಚಿಬಿಟ್ರೆ ನಿಂಗೆ ಏಡ್ಸ್ ಬರುತ್ತೆ’ ಅಂತ ಜತೆಗಿದ್ದವರು ಹೇಳಿದರೂ ಕೇಳದೇಹೋದ ಖೇಮು.
ಅವನ ಹತ್ರ ಬಂದ ಹುಚ್ಚ, ಎಲ್ಲರಿಗೂ ಹೆದರಿಸಿದಂತೆಯೇ ಅವನಿಗೂ, ‘ಚುಚ್ಚಿ ಬಿಡ್ತೀನಿ, ಚುಚ್ಚಿಬಿಡ್ತೀನಿ’ ಅಂತ ಹೆದರಿಸಿದ. ಅದಕ್ಕೆ ಖೇಮು ಕೂಲಾಗಿ, ‘ಆಯ್ತು ಚುಚ್ಕೋ’ ಅಂದ.
ಹುಚ್ಚನಿಗೆ ಕೊಂಚ ಗಾಬರಿ ಆಯ್ತು. ‘ಲೋ, ಇದು ಏಡ್ಸ್ ಇರೋ ರಕ್ತ, ಚುಚ್ಚಿದ್ರೆ ನಿಂಗೂ ಏಡ್ಸ್ ಬರುತ್ತೆ, ಸತ್ತೋಗ್ತೀಯ’ ಅಂದ. ಅದಕ್ಕೆ ಖೇಮು ಇನ್ನೂ ಕೂಲಾಗಿ ಹೇಳಿದ ‘ಅಯ್ಯೋ, ಚುಚ್ಕೊಳ್ಳೊಲೇ, ನಾನ್ ಕಾಂಡೋಮ್ ಹಾಕ್ಕೊಂಡಿದೀನಿ’.
ಲೈನ್ ಮ್ಯಾನ್
ಕುಡಿದು ಟೈಟ್ ಆದವರನ್ನ ಮಾತಾಡಿಸುವಾಗ ಏನಂತ ಸಂಬೋಧಿಸಬೇಕು?
- ಯುವರ್ ‘ಹೈ’ ನೆಸ್
ಫಿಲಾಸಫಿ
- ಮನುಷ್ಯ ಸತ್ತಾಗ ಅವನು ಹೇಗೆ ಬದುಕಿದ ಅನ್ನೋ ‘ಪ್ರಶ್ನೆ’ಗಿಂತ ಅವನ ‘ಉತ್ತರ’ಕ್ರಿಯೆ ಬಗ್ಗೆನೇ ಎಲ್ಲರೂ ಜಾಸ್ತಿ ತಲೆ ಕೆಡಿಸ್ಕೊತಾರೆ
ಕೆಲವು ಹೋಟೆಲ್‌ಗಳ ಚಿಕನ್ ಡಿಶ್‌ಗಳಲ್ಲಿ ನಾರಿನ ಪೀಸೇ ಜಾಸ್ತಿ ಇರುತ್ತೆ
- ಮಾಂಸದ ಜತೆ ನಾರೂ ಹೊಟ್ಟೆ ಸೇರಿತು ಅನ್ನೋ ಥರ
ಮನೆ ಕಟ್ಟೋ ಕೂಲಿ ಕಾರ್ಮಿಕರ ಕಷ್ಟ
- ‘ಕಟ್ಟು’ಪಾಡು
ಎಣ್ಣೆ ಹೊಡೆದು ಕವನ ಹೇಳಿ ಟಾರ್ಚರ್ ಕೊಡುವ ಸಾಹಿತಿಯ ಪುಣ್ಯಕೋಟಿ ಗೋವಿನ ಸ್ಟೈಲ್ ‘ನೋವಿನ ಹಾಡು’
- ಗದ್ಯವಿದೆಕೋ...
ಪದ್ಯವಿದೆಕೋ..
ಗುಂಡೆದೆಯ ಬಿಸಿ ಮದ್ಯವಿದೆಕೋ..
ಕಂಡ ಕಂಡವರನ್ನು ಕಾಡುವ ಅಖಂಡ ಕಾವ್ಯವ ಸಹಿಸಿಕೋ...
ಟಿಕೆಟ್ ರೇಟ್ ದುಬಾರಿ ಮಾಡಿ, ‘ಕನ್ನಡ ಸಿನಿಮಾ ನೋಡಿ, ಕನ್ನಡ ಸಿನಿಮಾ ಬೆಳೆಸಿ’ ಅನ್ನೋ ಚಿತ್ರತಂಡದವರಿಗೆ ಒಂದು ಪ್ರಶ್ನೆ
- ಅಷ್ಟೊಂದು ಖರ್ಚು ಮಾಡಿಕೊಂಡು ನಿಮ್ಮನ್ನ ಬೆಳೆಸೋಕೆ ನಾವೇನು ಅಂಬಾನಿ ವಂಶಸ್ಥರಾ, ಇಲ್ಲ ಮೈಸೂರು ಅಂಬಾರಿ ವಂಶಸ್ಥರಾ?
ಸ್ಲೀಪ್ ಸೈಕಲ್ ಸರಿ ಮಾಡಿಕೊಂಡು, ನಿದ್ದೆ ಮಾಡೋದು ಹೇಗೆ ಅಂತ ಹೇಳಿಕೊಡೋ ಕ್ಲಾಸಸ್ ಮಾಡ್ತಾ ಇರೋ ಕಾಲ ಇದು
- ನಮ್ ಕಾಲದಲ್ಲಿ ನಾವು ಸ್ಕೂಲಿಗೆ ಹೋದಾಗ ಕ್ಲಾಸ ನಿದ್ದೆ ಮಾಡ್ತಿದ್ವಪ್ಪ
ಒಬ್ಬ ‘ಸುಳ್ಳು’ ಹೇಳೋದ್ ನೋಡಿ ಅವನ ಜತೆಗಿರೋ ಜನರೆಲ್ಲ ಅಂಥವರೇ ಅಂತ ಡಿಸೈಡ್ ಮಾಡೋದು
- ‘ಜನ’ರ‘ಲೈಸ್’
‘ತುಪ್ಪ’ ತಿಂದು ಕೊಬ್ಬು ಜಾಸ್ತಿ ಆದವರು ಏನ್ ಮಾಡ್ತಾರೆ?
- ‘ಘೀ’ಳಿಡುತ್ತಾರೆ
ಕುರುಡನೊಬ್ಬನ ಮೇಲೆ ಯಾರಾದ್ರೂ ಕೇಸು ಹಾಕಿದ್ರೆ, ವಿಚಾರಣೆ ಎಲ್ಲಿ ನಡೆಯುತ್ತೆ?
- ‘ಐ’ ಕೋರ್ಟ್‌ನಲ್ಲಿ
ಕುಡುಕನೊಬ್ಬನ ಮೇಲೆ ಯಾರಾದ್ರೂ ಕೇಸು ಹಾಕಿದ್ರೆ, ವಿಚಾರಣೆ ಎಲ್ಲಿ ನಡೆಯುತ್ತೆ?
- ‘ಹೈ’ ಕೋರ್ಟ್ ನಲ್ಲಿ