ವಿಶ್ವವನಿತೆ
ರವೀ ಸಜಂಗದ್ದೆ
ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, ವಿಶ್ವಕಪ್ ಗೆದ್ದ ಶ್ರೇಯಸ್ಸಿನ ಮೊದಲ ಪಾಲು ನಾಯಕಿ ಹರ್ಮನ್ ಪ್ರೀತ್ ಕೌರ್‌ಗೆ ಸಲ್ಲಬೇಕು. 36ರ ಹರೆಯದ ಕೌರ್ ಹಲವಾರು ಏಳು ಬೀಳುಗಳನ್ನು ಕಂಡರೂ, ತಮ್ಮ ನಿರಂತರ-ದಿಟ್ಟ ಹೋರಾಟ, ಸಮರ್ಪಣಾ ಭಾವದ ಫಲವಾಗಿ ಈಗ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ.
ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾಟಗಳ 52 ವರ್ಷಗಳ ಇತಿಹಾಸದಲ್ಲಿ, ಸುವರ್ಣ ಅಕ್ಷರಗಳಲ್ಲಿ ಬರೆಯಬೇಕಾದ ಅಧ್ಯಾಯವೊಂದು ಸೃಷ್ಟಿಯಾಗಿದೆ; ಭಾರತದ ಸಿಂಹಿಣಿಯರು ಈ ಬಾರಿಯ ವಿಶ್ವಕಪ್ ಫೈನಲ್ ಪಂದ್ಯವನ್ನು 52 ರನ್ನುಗಳಿಂದ ಗೆದ್ದಿರುವುದೇ ಈ ಹೊಸ ಅಧ್ಯಾಯ.
ತಾಯ್ನೆಲದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಹಲವು ಏರಿಳಿತಗಳಿದ್ದವು. ಲೀಗ್ ಹಂತದಲ್ಲಿನ ಸತತ ೩ ಸೋಲುಗಳು, ಟೀಕೆಗಳು, ಒತ್ತಡಗಳು, ಪಂದ್ಯ ವೀಕ್ಷಿಸಲು ನೆರೆದಿದ್ದ ಸಾವಿರಾರು ಜನರ ಉದ್ಗಾರ ಗಳು/ಧಿಕ್ಕಾರಗಳು ಹೀಗೆ ಎಲ್ಲವನ್ನೂ ಸಹಿಸಿಕೊಂಡು, ತಾಳ್ಮೆ, ಸಮರ್ಪಣಾಭಾವ ಮತ್ತು ಪರಿಶ್ರಮ ವನ್ನು ಹೊಮ್ಮಿಸಿದ್ದರ ಫಲವಾಗಿ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಗೆದ್ದ ಈ ಸಿಂಹಿಣಿ ಯರು ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವಂತಾಯಿತು. ಈ ದೃಶ್ಯವನ್ನು ಕಂಡು ದೇಶವೇ ಸಂಭ್ರಮಿ ಸಿತು. ಈ ಪಂದ್ಯಾವಳಿಯ ಆರಂಭಕ್ಕೂ ಮುನ್ನ, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪಟ್ಟಿಯಲ್ಲಿನ ಮೊದಲ ೪ ಸ್ಥಾನಗಳಲ್ಲಿ ಭಾರತ ಇರಲೇ ಇಲ್ಲ!
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊದಲೆರಡು ಸ್ಥಾನಗಳಲ್ಲಿದ್ದರೆ, ನಂತರದ ಸ್ಥಾನಗಳನ್ನು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಅಲಂಕರಿಸಿದ್ದವು. 1973ರಲ್ಲಿ ಆರಂಭವಾದ ಮಹಿಳಾ ವಿಶ್ವಕಪ್‌ನಲ್ಲಿ ಇದುವರೆಗೆ ಆಸ್ಟ್ರೇಲಿಯಾ (೭ ಬಾರಿ), ಇಂಗ್ಲೆಂಡ್ (೪ ಬಾರಿ) ಮತ್ತು ನ್ಯೂಜಿಲೆಂಡ್ (೧ ಬಾರಿ) ತಂಡಗಳು ಮಾತ್ರ ಪ್ರಶಸ್ತಿಯನ್ನು ಗೆದ್ದಿದ್ದವು. ಈ ಸಲ, ಮೂರನೆಯ ಬಾರಿ ಫೈನಲ್ ತಲುಪಿದ ಭಾರತ ತಂಡವು, ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಳ್ಳುವುದರೊಂದಿಗೆ ಮಹಿಳಾ ವಿಶ್ವಕಪ್ ಗೆದ್ದ ನಾಲ್ಕನೆಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪಯಣದ ಹಾದಿಯಲ್ಲಿ ಅನೇಕರಿಂದ ಹೊಮ್ಮಿದ ಪ್ರಯತ್ನ ಮತ್ತು ಹೋರಾಟಗಳು ಅವಿಸ್ಮರಣೀಯ.
ಇದನ್ನೂ ಓದಿ: Ravi Sajangadde Column: ನನ್ನ ದನಿಗೆ ನಿನ್ನ ದನಿಯು...
ಅವುಗಳ ಕಡೆಗೊಮ್ಮೆ ಕಣ್ಣು ಹಾಯಿಸೋಣ:
ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, ವಿಶ್ವಕಪ್ ಗೆದ್ದ ಶ್ರೇಯಸ್ಸಿನ ಮೊದಲ ಪಾಲು ನಾಯಕಿ ಹರ್ಮನ್ ಪ್ರೀತ್ ಕೌರ್‌ಗೆ ಸಲ್ಲಬೇಕು. 36ರ ಹರೆಯದ ಕೌರ್ ಹಲವಾರು ಏಳುಬೀಳುಗಳನ್ನು ಕಂಡರೂ, ತಮ್ಮ ನಿರಂತರ-ದಿಟ್ಟ ಹೋರಾಟ, ಸಮರ್ಪಣಾ ಭಾವದ ಫಲವಾಗಿ ಈಗ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಈ ಬಾರಿಯ ಸೆಮಿಫೈನಲ್ ಪಂದ್ಯದಲ್ಲಿ ಒತ್ತಡದ ರನ್ ಚೇಸಿಂಗ್‌ನಲ್ಲಿ 89 ರನ್ ಬಾರಿಸಿ, ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ ಕೀರ್ತಿ ಕೌರ್‌ಗೆ ಸಲ್ಲಬೇಕು.
ಫೈನಲ್ ಪಂದ್ಯದಲ್ಲಿ, ಹಿಮ್ಮುಖವಾಗಿ ಹೆಜ್ಜೆ ಹಾಕಿ ಕ್ಯಾಚ್ ಹಿಡಿದು, ದಕ್ಷಿಣ ಆಫ್ರಿಕಾದ ಹತ್ತನೆಯ ವಿಕೆಟ್ ಬೀಳಿಸುವ ಮೂಲಕ ಭಾರತವನ್ನು ಗೆಲ್ಲಿಸಿದ ಅವರು, ಆ ಕ್ಷಣವನ್ನು ಮೈದಾನವಿಡೀ ಓಡಿ ಸಂಭ್ರಮಿಸಿದ ಪರಿವರ್ಣನೆಗೆ ನಿಲುಕದ್ದು!
ಮಹಿಳಾ ಏಕದಿನ ನಾಕೌಟ್ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದ್ದ ಬೆಲಿಂಡಾ ಕ್ಲಾರ್ಕ್ ಹೆಸರಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಕೌರ್ ಬೀಗಿದ್ದಾರೆ.
ಮಹಿಳಾ ಕ್ರಿಕೆಟ್‌ನ ವಿರಾಟ್ ಕೊಹ್ಲಿ ಎಂದೇ ಜನಜನಿತರಾಗಿರುವ ಸ್ಮೃತಿ ಮಂಧಾನ ಅವರು ತಂಡದ ಮತ್ತೊಬ್ಬ ‘ಸ್ಟಾರ್ ಪರ್ಫಾಮರ್’. ಮಿಥಾಲಿ ರಾಜ್ ಹೆಸರಿನಲ್ಲಿದ್ದ, ವಿಶ್ವಕಪ್ ಆವೃತ್ತಿ ಯೊಂದರಲ್ಲಿನ ಭಾರತದ ಪರ ಅತಿಹೆಚ್ಚು ರನ್ ಗಳಿಕೆಯನ್ನು (409), 434 ರನ್ನುಗಳನ್ನು ಕಲೆ ಹಾಕುವ ಮೂಲಕ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ಇವರು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎದುರಾಳಿ ತಂಡದ ಓಪನಿಂಗ್ ಬೌಲರುಗಳನ್ನು ಇನ್ನಿಲ್ಲದಂತೆ ಕಾಡಿದ ಹೆಗ್ಗಳಿಕೆ ಇವರದ್ದು. ನಿರ್ಭೀತ ಆಟಕ್ಕೆ ಮಂಧಾನಾ ಹೆಸರುವಾಸಿ.
ಜೆಮಿಮಾ ರೋಡ್ರಿಗ್ರಸ್ ಎನ್ನುವ ಹೆಸರೀಗ ದೇಶದಲ್ಲಿ ಹೊಸ ‘ಸೆನ್ಸೇಷನ್’. ಈಕೆ ಈಗ ‘ನ್ಯಾಷನಲ್ ಕ್ರಷ್’! ಕ್ಷೇತ್ರರಕ್ಷಣೆಯಲ್ಲಿನ ಚುರುಕುತನದ ಜತೆಜತೆಗೆ ಸಂದರ್ಭಾನುಸಾರವಾಗಿ ಸಂಯಮದ ಬ್ಯಾಟಿಂಗ್ ಮಾಡುವ ತಂತ್ರಗಾರಿಕೆಗೆ ಈ ಪಂದ್ಯಾವಳಿಯಲ್ಲಿ ಅಮೋಘ ಆಲ್‌ರೌಂಡರ್ ಆಗಿ ಹೊರ ಹೊಮ್ಮಿ, ತಂಡದ ಗೆಲುವಿನಲ್ಲಿ ‘ಸವ್ಯಸಾಚಿ’ ಎನ್ನುವ ಬಿರುದಿಗೆ ಪಾತ್ರರಾದವರು ಎಡಗೈ ಬ್ಯಾಟರ್ ಮತ್ತು ಬಲಗೈ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ.
ಮಹಿಳಾ ಏಕದಿನ ಆವೃತ್ತಿಯೊಂದರಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು 22 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ವಿನೂತನ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡವರು ಈಕೆ; ತಮ್ಮ ಈ ಸಾಧನೆಗಾಗಿ ‘ಸರಣಿ ಶ್ರೇಷ್ಠ ಆಟಗಾರ್ತಿ’ ಪ್ರಶಸ್ತಿ ಪಡೆದಾಕೆ. ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್ ಹಣಾಹಣಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಜೆಮಿಮಾ ವಿಕೆಟ್ ಉಳಿಸಲು ಈಕೆ ತಾವು ರನೌಟ್ ಆಗಿ ‘ಕ್ರೀಡಾಸ್ಪೂರ್ತಿ’ ಮೆರೆದುದನ್ನು ಮರೆಯಲಾಗದು.
ಈಕೆ ವಿಶ್ವಕಪ್ ನಾಕೌಟ್ (ಸೆಮಿಫೈನಲ್ /ಫೈನಲ್) ಹಂತದಲ್ಲಿ ಅರ್ಧಶತಕ ಮತ್ತು ೫ ವಿಕೆಟ್ ಗಳಿಸಿದ ಏಕೈಕ ಆಟಗಾರ್ತಿ. ಅನ್ಯ ಕಾರಣಗಳಿಂದಾಗಿ ಸತತ ೩ ವರ್ಷಗಳಿಂದ ಕಳಪೆ ಫಾರ್ಮ್ ನಲ್ಲಿದ್ದು, ಬಗೆಬಗೆಯ ಟೀಕೆಗೆ ಗುರಿಯಾಗಿದ್ದವರು ಶೆಫಾಲಿ ಶರ್ಮಾ. ಇದರಿಂದಾಗಿ ಈಕೆ ಒಂದೆರಡು ಸಲ ಪಂದ್ಯದಿಂದ ಹೊರಗುಳಿಯಬೇಕಾಯಿತು. ಆದರೆ, ಫೈನಲ್ ಪಂದ್ಯದಲ್ಲಿ ‘ಹಸಿವಿನಿಂದ ಬಳಲಿ ಬೇಟೆಗೆ ಸಿದ್ಧವಾಗಿದ್ದ ಸಿಂಹಿಣಿ’ಯಂತೆ ಅವರು ಭಾಸವಾದರು!
ಸಿಕ್ಕಿದ ಅಪರೂಪದ, ಅಷ್ಟೇ ಒತ್ತಡದ ಸಂದರ್ಭದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ದಕ್ಷಿಣ ಆಫ್ರಿಕಾದ ಬೇಟೆಗೆ ತಮ್ಮ ಕೊಡುಗೆ ನೀಡಿದರು. ‘ಲೇಡಿ ಸೆಹ್ವಾಗ್’ ಖ್ಯಾತಿಯ ಇವರು ಮತ್ತೊಂದು ಹೆಸರು. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ಎದುರು ಜೆಮಿಮಾ ಹಿಡಿದ ಕ್ಯಾಚ್ ಅದ್ಭುತ. ಸೆಮಿಫೈನಲ್ ಪಂದ್ಯದಲ್ಲಿ ಅದೇ ಆಸ್ಟ್ರೇಲಿಯಾ ಎದುರು ಇವರು ಕಟ್ಟಿದ ಇನ್ನಿಂU ಅಜರಾಮರ! ಪೂರ್ಣ 50 ಓವರ್ ಚುರುಕಾದ ಫೀಲ್ಡಿಂಗ್ ನಡೆಸಿ, ಮೂರನೆಯ ಓವರಿನಲ್ಲಿ ಬ್ಯಾಟಿಂಗಿಗೆ ಬಂದು ಕೊನೆವರೆಗೂ ದಣಿವರಿಯದೆ ನಿಂತು, ಬಹುತೇಕ ಸೋಲುವಂತಿದ್ದ ಪಂದ್ಯವನ್ನು ಇವರು ಗೆಲ್ಲಿಸಿದಾಗ, ಪಂದ್ಯ ನೋಡುತ್ತಿದ್ದ ನನ್ನನ್ನೂ ಸೇರಿಸಿ ಎಲ್ಲರ ಕಂಗಳೂ ತೇವವಾಗಿದ್ದು ಸುಳ್ಳಲ್ಲ. ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ‘ಜೈಂಟ್ ಕಿಲ್ಲರ್’ ಆಕೆ!
ಇವರು ಫೈನಲ್ ಪಂದ್ಯದಲ್ಲಿ 87 ರನ್ ಗಳಿಸಿ, ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಜತೆಗೆ, ವಿಶ್ವಕಪ್ ಫೈನಲ್ ಪಂದ್ಯದಲ್ಲಿ (ಪುರುಷ ಮತ್ತು ಮಹಿಳಾ ಎರಡೂ ಪ್ರಕಾರಗಳಲ್ಲಿ) ಅರ್ಧಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಎಂಬ ವಿಶಿಷ್ಟ ದಾಖಲೆಯನ್ನೂ ಮಾಡಿದರು. ಫೈನಲ್ ಪಂದ್ಯ ದಲ್ಲಿ ಬೌಲಿಂಗ್‌ಗೆ ಇಳಿದು, ನಿರ್ಣಾಯಕ ಹಂತದಲ್ಲಿ ೨ ವಿಕೆಟ್ ಗಳಿಸಿ ‘ಆಲ್‌ರೌಂಡರ್’ ಎನಿಸಿ ಕೊಂಡರು.
ತಂಡದ ಗೆಲುವಿನ ಪಯಣದಲ್ಲಿ ಶ್ರಮವಹಿಸಿ ದುಡಿದ ಇನ್ನೂ ಅನೇಕರಿದ್ದಾರೆ. ಬೌಲಿಂಗ್-ಫೀಲ್ಡಿಂಗ್ ವಿಭಾಗದಲ್ಲಿ ಮಿಂಚಿ ಅನುಪಮ ಕೊಡುಗೆ ನೀಡಿದವರಲ್ಲಿ ರೇಣುಕಾ, ಕ್ರಾಂತಿ, ಶ್ರೀಚರಣಿ, ಅಮನ್ ಜೋತ್, ರಾಧಾ ಪ್ರಮುಖರು. ವಿಕೆಟ್ ಹಿಂದೆ ಅತ್ಯುತ್ತಮ ಪ್ರದರ್ಶನ ನೀಡಿದ ರೀಚಾ ಘೋಷ್‌ರನ್ನು ‘ಲೇಡಿ ಧೋನಿ’ ಎಂದರೆ ತಪ್ಪಾಗಲಾರದು.
ಇನ್ನು ತೆರೆಯ ಹಿಂದಿನಿಂದ ಕೋಚ್ ಮತ್ತು ಸಿಬ್ಬಂದಿ ವರ್ಗದಿಂದ ದಕ್ಕಿದ ನಿರಂತರ ಬೆಂಬಲವೂ ತಂಡದ ಗೆಲುವಿಗೆ ಬಲ ನೀಡಿದೆ ಎನ್ನಲಡ್ಡಿಯಿಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರೋಡ್ರಿ ಗ್ರಸ್ ಅವರು ಆಸ್ಟ್ರೇಲಿಯಾದಿಂದ ಗೆಲುವನ್ನು ಕಸಿದುಕೊಂಡರು. ಅದ್ಭುತ ಫಾರ್ಮ್ ನಲ್ಲಿದ್ದ ಆಫ್ರಿಕಾ ತಂಡದ ನಾಯಕಿ ಲೌರಾ ಓಲ್ವಾರ್ಡ್ ಅದಾಗಲೇ ಶತಕ ಬಾರಿಸಿ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದ ಸಂದರ್ಭದಲ್ಲಿ, ದೀಪ್ತಿಯವರು ಎಸೆದ 42ನೇ ಓವರಿನ ಮೊದಲ ಚೆಂಡನ್ನು ಬಾರಿಸಿದಾಗ, ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಅಮನ್‌ಜೋತ್ ಓಡೋಡಿ ಬಂದು, ಕೈಯಿಂದ ಜಾರುತ್ತಿದ್ದ ಚೆಂಡನ್ನು ಮೂರನೆಯ ಪ್ರಯತ್ನದಲ್ಲಿ ಬಿದ್ದು ಹಿಡಿದಾಗ, ಭಾರತವು ವಿಶ್ವಕಪ್ ಅನ್ನು ಹಿಡಿದಷ್ಟು ಮಟ್ಟಿಗಿನ ಸಂಭ್ರಮ!
ಭಾರತದ ಮಹಿಳಾ ಕ್ರಿಕೆಟ್ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಿಥಾಲಿ ರಾಜ್, ಗೌಹರ್ ಸುಲ್ತಾನಾ, ವೇದಾ ಕೃಷ್ಣಮೂರ್ತಿ, ಜೂಲನ್ ಗೋಸ್ವಾಮಿ, ಅಂಜುಂ ಚೋಪ್ರಾ, ಪೂರ್ಣಿಮಾ ರಾವ್ ಮುಂತಾದವರು ತೋರಿದ never giveup ಮನೋಧರ್ಮದ ಸುಧಾರಿತ ಅವತರಣಿಕೆಯನ್ನು ಈಗಿನ ತಂಡ ಹೊರ ಹೊಮ್ಮಿಸಿದ ಕಾರಣಕ್ಕೆ ವಿಶ್ವಕಪ್ ಅನ್ನು ದಕ್ಕಿಸಿಕೊಂಡು ಬೀಗಿದೆ.
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ. 1983ರಲ್ಲಿ ‘ಫೇವರಿಟ್’ಗಳ ಪಟ್ಟಿಯಲ್ಲೇ ಇಲ್ಲದಿದ್ದ ಕಪಿಲ್ ದೇವ್ ನೇತೃತ್ವದ ಪುರುಷರ ತಂಡವು, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್‌ನಂಥ ದಿಗ್ಗಜ ತಂಡಗಳನ್ನು ಮಣಿಸಿ, ವಿಶ್ವಕಪ್ ಅನ್ನು ಗೆದ್ದು ಸಂಭ್ರಮಿಸಿತ್ತು. ಅದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭವಾದ ಸುದಿನ. ಮಹಿಳಾ ಕ್ರಿಕೆಟ್ ಪಾಲಿಗೂ ಅಂಥದೇ ಸುದಿನ ಈಗ ಒದಗಿರು ವುದು ಹೆಮ್ಮೆಯ ಸಂಗತಿ. ಮಹಿಳಾ ಕ್ರಿಕೆಟ್‌ನ ಭವಿಷ್ಯಕ್ಕೆ ಈ ಗೆಲುವು ಭದ್ರಬುನಾದಿಯಾಗಲಿದೆ.
ಅತ್ಯುನ್ನತ ಸ್ಥಾನವನ್ನು ದಕ್ಕಿಸಿಕೊಳ್ಳುವುದು ಎಷ್ಟು ಕಷ್ಟವೋ, ಸತತವಾಗಿ ಸ್ಥಿರ ಪ್ರದರ್ಶನವನ್ನು ನೀಡಿ ಆ ಸ್ಥಾನವನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಕಷ್ಟ! ಪುರುಷರ ಕ್ರಿಕೆಟ್‌ಗೆ ಸಿಗುವಷ್ಟೇ ಪ್ರಾಮುಖ್ಯವು ಮಹಿಳಾ ಕ್ರಿಕೆಟ್‌ಗೂ ಸಿಕ್ಕಲ್ಲಿ ಇದು ಸಾಧ್ಯವಾದೀತು. ಈ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನಗಳಾಗುತ್ತಿದ್ದರೂ ಸಾಗಬೇಕಾದ ದಾರಿ ದೂರವಿದೆ. ಮಹಿಳಾ ಕ್ರಿಕೆಟ್ ಮಾತ್ರವಲ್ಲದೆ ಒಟ್ಟಾರೆ ಯಾಗಿ ಮಹಿಳಾ ಕ್ರೀಡೆಗಳಿಗೆ ಇನ್ನಷ್ಟು ಅವಕಾಶಗಳು, ಹಣಕಾಸು ನೆರವು ಮತ್ತು ಸಾಂಸ್ಥಿಕ ಬೆಂಬಲ ದಕ್ಕಬೇಕಿದೆ.
ಯಾವುದೇ ಯಶಸ್ಸು ಒಂದಿಷ್ಟು ತ್ಯಾಗಗಳನ್ನು ಬೇಡುತ್ತದೆ. ಮಹಿಳಾ ವಿಶ್ವಕಪ್ ಗೆಲುವಿನ ಹಿಂದೆಯೂ ಆಟಗಾರರು ಬಸಿದ ಬೆವರು, ವಿನಿಯೋಗಿಸಿದ ಪರಿಶ್ರಮ, ಆಪ್ತರಿಂದ ದೂರವಿದ್ದು ಛಲಬಿಡದೆ ಮಾಡಿದ ಕಠಿಣ ಅಭ್ಯಾಸ ಇವೆಲ್ಲವೂ ಇದೆ. ದೇಶದ ಉದ್ದಗಲಕ್ಕೂ ಇಂಥ ಮಹಿಳಾ ಕ್ರಿಕೆಟ್ ಪ್ರತಿಭೆಗಳು ಸಾಕಷ್ಟು ಇದ್ದಿರಬಹುದು; ಪೋಷಕರು ದಿಟ್ಟ ನಿರ್ಧಾರ ತೆಗೆದುಕೊಂಡು ತಂತಮ್ಮ ಮನೆಯ ಹೆಣ್ಣು ಮಕ್ಕಳನ್ನು ಈ ನಿಟ್ಟಿನಲ್ಲಿ ತೊಡಗಿಸುವ ಛಾತಿ ತೋರಬೇಕಿದೆ. ಆಗಲೇ ನಿಜವಾದ ಸಾರ್ಥಕತೆ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)