ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಸೈಕಲ್‌ ತುಳಿದು ಮೈಕ್ರೋಸಾಫ್ಟ್‌ʼಗೇ ಸವಾಲೆಸೆದ ಟೆಕ್‌ ಉದ್ಯಮಿ

ಅರಟ್ಟೈ ಎಂಬ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಈಗ ಸುದ್ದಿಯಲ್ಲಿದೆ. ವಾಟ್ಸಾಪ್‌ಗೆ ಇದು ಭಾರತದ ಪರ್ಯಾಯವಾಗಬಲ್ಲದೇ? ಎಂಬ ಬಗ್ಗೆ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಕೆಲ ದಿನಗಳಿಂದ ಅರಟ್ಟೈನ ಟ್ರಾಫಿಕ್ ನೂರು ಪಟ್ಟು ವೃದ್ಧಿಸಿದೆ. ಸೈನ್ ಅಪ್‌ಗಳು ದಿನಕ್ಕೆ ಸರಾಸರಿ 3500ರಿಂದ 350000ಕ್ಕೆ ಜಿಗಿದಿವೆ!

ಮನಿ ಮೈಂಡೆಡ್

keshavaprasadb@gmail.com

ಜೋಹೊದ ಬಗ್ಗೆ ಅಪರಿಮಿತ ವಿಶ್ವಾಸ ಹೊಂದಿರುವ ಶ್ರೀಧರ್ ವೆಂಬು, “ಜಗತ್ತಿನಲ್ಲಿ ಮೈಕ್ರೊಸಾಫ್ಟ್‌ ಗೆ ಸವಾಲೊಡ್ಡಬಲ್ಲ ಏಕೈಕ ಕಂಪನಿ ಇದ್ದರೆ ಅದು ಜೋಹೊ. ಮೈಕ್ರೊ ಸಾಫ್ಟ್‌ ನ ಪ್ರಾಡಕ್ಟ್‌ಗಳನ್ನೂ ಮೀರಿಸಬಲ್ಲ ಸಾಮರ್ಥ್ಯ ಜೋಹೊಗೆ ಇದೆ ಎಂಬುದನ್ನು ಸಾಬೀತುಪಡಿಸಲಿದ್ದೇವೆ" ಎಂದು ಬಹಿರಂಗ ಸವಾಲೊಡ್ಡಿದ್ದಾರೆ.

ಅರಟ್ಟೈ ಎಂಬ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಈಗ ಸುದ್ದಿಯಲ್ಲಿದೆ. ವಾಟ್ಸಾಪ್‌ಗೆ ಇದು ಭಾರತದ ಪರ್ಯಾಯವಾಗಬಲ್ಲದೇ? ಎಂಬ ಬಗ್ಗೆ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಕೆಲ ದಿನಗಳಿಂದ ಅರಟ್ಟೈನ ಟ್ರಾಫಿಕ್ ನೂರು ಪಟ್ಟು ವೃದ್ಧಿಸಿದೆ. ಸೈನ್ ಅಪ್‌ಗಳು ದಿನಕ್ಕೆ ಸರಾಸರಿ 3500ರಿಂದ 350000ಕ್ಕೆ ಜಿಗಿದಿವೆ!

ಮತ್ತೊಂದು ಕಡೆ, ಟ್ವಿಟರ್‌ಗೆ ಪರ್ಯಾಯ ಆಗಬಲ್ಲದು ಎಂಬ ಹೈಪ್ ಸೃಷ್ಟಿಸಿದ್ದ ‘ಕುಹೂ’ ಥರ ಇದು ಕೂಡ ಕ್ರಮೇಣ ಕಣ್ಮರೆಯಾಗುವ ಅಪಾಯವೂ ಇದೆ, ಕಾದು ನೋಡೋಣ ಎಂಬ ಮಾತು ಗಳನ್ನೂ ಕೆಲವರು ಆಡುತ್ತಿದ್ದಾರೆ. ಆದರೆ ಇದರ ಹಿಂದೆ ಒಬ್ಬ ವಿಶಿಷ್ಟ ವ್ಯಕ್ತಿಯಿದ್ದಾರೆ!

ಅಮೆರಿಕದ ತಂತ್ರಜ್ಞಾನ ದಿಗ್ಗಜ ಮೈಕ್ರೊಸಾಫ್ಟ್ ಕಂಪನಿಗೇ, “ನಿಮಗಿಂತ ಒಳ್ಳೆಯ ತಂತ್ರಜ್ಞಾನ ವನ್ನು ಅಭಿವೃದ್ಧಿಪಡಿಸಿ ಜನಪ್ರಿಯಗೊಳಿಸುತ್ತೇವೆ" ಎಂಬ ಸವಾಲನ್ನು ಒಡ್ಡಿದ್ದಾರೆ! ಅವರೇ, ಪದ್ಮಶ್ರೀ ಶ್ರೀಧರ್ ವೆಂಬು! ಚೆನ್ನೈ ಮೂಲದ ಜೋಹೊ ಎಂಬ ಐಟಿ ಸಾಫ್ಟ್‌ ವೇರ್ ಕಂಪನಿಯ ಸ್ಥಾಪಕ, ಪದ್ಮಶ್ರೀ ಶ್ರೀಧರ್ ವೆಂಬು ಅವರೇ ಇವತ್ತಿನ ಹೀರೊ. ಅವರ ಅರಟ್ಟೈ ಸಂಚಲನ ಮೂಡಿಸಿ‌ ದ್ದರೂ, ವಾಸ್ತವವಾಗಿ ಜೋಹೋಗೆ ಅದೇನು ದೊಡ್ಡ ಪ್ರಾಜೆಕ್ಟ್ ಆಗಿರಲಿಲ್ಲ! ‌

K Prasad

ಅದಕ್ಕಿಂತ ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಕಂಪನಿಯು ತೊಡಗಿಸಿಕೊಳ್ಳುತ್ತಿದೆ. “ಅರಟ್ಟೈ ಪ್ರಾಜೆಕ್ಟ್ ಆರಂಭವಾದಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಮ್ಮ ಉದ್ಯೋಗಿಗಳೇ‌ ಅದನ್ನು ‘ಮೂರ್ಖತನದ ಯೋಜನೆ’ ಎಂದು ಭಾವಿಸಿ ದ್ದರು. ಆದರೆ ಇಂಥ ಎಂಜಿನಿಯರಿಂಗ್ ಸಾಮರ್ಥ್ಯದ ಕೆಲಸ ಭಾರತದಲ್ಲೂ ಆಗಬೇಕು ಎಂಬು ದಷ್ಟೇ ನಮ್ಮ ಉದ್ದೇಶವಾಗಿತ್ತು" ಎನ್ನುತ್ತಾರೆ ಶ್ರೀಧರ್ ವೆಂಬು.

ಅರಟ್ಟೈ ವಾಟ್ಸಾಪ್‌ಗೆ ಪರ್ಯಾಯ ಆಗುತ್ತೋ ಇಲ್ಲವೋ, ಜೋಹೊ ಕಂಪನಿಯ ಭವಿಷ್ಯದ ಮಹತ್ತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಜನರು ಆಸಕ್ತಿಯಿಂದ ವಿಚಾರಿಸುವಂತಾಗಿದೆ. ವಿಜ್ಞಾನಿ ಮತ್ತು ತಂತ್ರಜ್ಞಾನ ಉದ್ಯಮಿಯಾಗಿರುವ ಶ್ರೀಧರ್ ವೆಂಬು ಅವರನ್ನು ನೋಡಿದರೆ ಬಹು ರಾಷ್ಟ್ರೀಯ ಐಟಿ ಕಂಪನಿಯ ಮಾಲೀಕ ಎಂದು ಯಾರಿಗೂ ಗೊತ್ತಾಗದು!

ಸೀದಾ ಸಾದಾ ಪಂಚೆ, ಅಂಗಿ ಧರಿಸುತ್ತಾರೆ. ಸೈಕಲ್‌ನಲ್ಲಿಯೇ ಚೆನ್ನೈ ಬಳಿಯ ಹಳ್ಳಿಗಳಲ್ಲಿ ಸಂಚರಿಸುತ್ತಾರೆ. ಆದರೆ ಫೋರ್ಬ್ಸ್‌ ಪ್ರಕಾರ ಅವರು 2024ರಲ್ಲಿ ಭಾರತದ 39ನೇ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿ! ಅವರ ನಿವ್ವಳ ಸಂಪತ್ತು 5.85 ಶತಕೋಟಿ ಡಾಲರ್. ರುಪಾಯಿ ಲೆಕ್ಕದಲ್ಲಿ 50000 ಕೋಟಿ ರುಪಾಯಿ ಆಸುಪಾಸಿನಲ್ಲಿದೆ! ಆದರೆ ತಮಿಳುನಾಡಿನ ಹಳ್ಳಿಗಾಡಿನಲ್ಲಿ ಸರಳ ಜೀವನ ನಡೆಸುತ್ತಾರೆ.

ಇದನ್ನೂ ಓದಿ: Keshava Prasad B Column: ಸೆನ್ಸೆಕ್ಸ್‌ ಶೂನ್ಯ ಸಂಪಾದನೆಗೆ ಚಿಂತೆ ಏಕೆ ? ಬಫೆಟ್‌ ಸೂತ್ರ ಓದಿ

ಉದ್ದೇಶಪೂರ್ವಕವಾಗಿಯೇ, ತೆಂಕಾಸಿ, ತಂಜಾವೂರಿನ ನಿಸರ್ಗ ರಮಣೀಯ ಗ್ರಾಮೀಣ ಪ್ರದೇಶ ವನ್ನೇ ತಮ್ಮ ನೆಲೆಯನ್ನಾಗಿಸಿದ್ದಾರೆ. ಯಾವತ್ತಾದರೂ ನೀವು ಅಲ್ಲಿಗೆ ಹೋದಾಗ, ನಿಮ್ಮ ಕಾರಿನ ಪಕ್ಕವೇ ಇವರ ಸೈಕಲ್ ಸವಾರಿ ಹಾದುಹೋದರೂ ಅಚ್ಚರಿಯಿಲ್ಲ. ಹೊಲದ ಬದುವಿನಲ್ಲಿ ಬೈಹುಲ್ಲಿನ ರಾಶಿ ಮೇಲೆ ಕುಳಿತು ಸೂರ್ಯಾಸ್ತವನ್ನು ಎಂಜಾಯ್ ಮಾಡುತ್ತಿರುವ ವೆಂಬು ಅವರನ್ನು ನೋಡಿದರೆ ದಿಗ್ಭ್ರಮೆಪಡಬೇಕಿಲ್ಲ.

ಏಕೆಂದರೆ ಅವರು ಇರೋದೇ ಹಾಗೆ. ಆದರೆ ಅವರ ಜೋಹೊ ಕಾರ್ಪೊರೇಷನ್ ಕಂಪನಿಯ ದೂರ ದೃಷ್ಟಿಯ ಬಗ್ಗೆ ಕೇಳಿದರೆ ರೋಮಾಂಚನವಾಗುತ್ತದೆ. ಜೋಹೊದಲ್ಲಿ ಈಗಾಗಲೇ ಮಹತ್ವದ ಸಂಶೋಧನೆಗಳು ನಡೆಯುತ್ತಿವೆ. “ಕಂಪ್ಲೈಯರ್ಸ್, ಡೇಟಾಬೇಸ್, ಆಪರೇಟಿಂಗ್ ಸಿಸ್ಟಮ್ಸ್, ಸೆಕ್ಯುರಿಟಿ, ಹಾರ್ಡ್‌ವೇರ್, ಚಿಪ್ ಡಿಸೈನ್, ರೊಬಾಟಿಕ್ಸ್ ಮುಂತಾದ ವಲಯಗಳಲ್ಲಿ ಸಂಶೋಧನೆ ನಡೆಸುತ್ತಿದ್ದೇವೆ. ‌

ಮಾತ್ರವಲ್ಲದೆ, ಇದೇ ರೀತಿ ಸಂಶೋಧನೆಯಲ್ಲಿ ನಿರತವಾಗಿರುವ ಮತ್ತು ಸದ್ಯದ ಭವಿಷ್ಯದಲ್ಲಿ ಅವುಗಳಿಂದ ಯಾವುದೇ ಹಣವನ್ನು ಮಾಡದ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದೇವೆ. ಜೋಹೊ ಒಂದು ರೀತಿಯಲ್ಲಿ ಕೈಗಾರಿಕಾ ಪ್ರಯೋಗಾಲಯದಂತೆ ಕಾರ್ಯನಿರ್ವಹಿಸುತ್ತಿದೆ. ನಾವು ಅಲ್ಪಾ ವಧಿಗೆ ಸಿಗಬಲ್ಲ ಲಾಭದ ಬಗ್ಗೆ ಲಕ್ಷ್ಯ ವಹಿಸುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಉಪಯುಕ್ತ ಫಲಿತಾಂಶ ಪಡೆಯಬೇಕು.

ಇಸ್ರೋದಲ್ಲಿಯೂ ಒಳ್ಳೆಯ ವಿಜ್ಞಾನಿಗಳು ಸರಳ ಜೀವನ ನಡೆಸುತ್ತಾರೆ. ಅದುವೇ ನಿಜವಾದ ಭಾರತದ ಸಾರ. ಜಪಾನ್ ಮಾದರಿಯಲ್ಲಿ ಭಾರತ ಕೂಡ ಅಭಿವೃದ್ಧಿ ಹೊಂದಬೇಕು" ಎನ್ನುತ್ತಾರೆ ವೆಂಬು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಗುರಿಯಾಗಿಟ್ಟುಕೊಂಡು ಸುಂಕ ಸಮರ ಘೋಷಿಸಿದ ಬಳಿಕ ಕೇಂದ್ರ ಸರಕಾರವು ಸ್ವದೇಶಿ ಉತ್ಪನ್ನ, ತಂತ್ರಜ್ಞಾ ಮತ್ತು ಸೇವೆಗಳ ಬಳಕೆ ಹಾಗೂ ವ್ಯಾಪಕವಾದ ಅಭಿವೃದ್ಧಿಗೆ ಕರೆ ಕೊಟ್ಟಿದೆ.

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಇತ್ತೀಚೆಗೆ ಶ್ರೀಧರ್ ವೆಂಬು ಅವರ ಕಂಪನಿ ತಯಾರಿಸಿದ್ದ ‘ಜೋಹೊ ಶೋ’ ಎಂಬ ಅಪ್ಲಿಕೇಶನ್‌ಗಳ ಮೂಲಕ ಕ್ಯಾಬಿನೆಟ್ ನಿರ್ಧಾರಗಳನ್ನು ಮಾಧ್ಯಮಗಳೆದುರು ವಿವರಿಸಿದ್ದರು. ಒಂದು ಕಡೆ ನಾನಾ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿರುವ ಭಾರತ, ಮತ್ತೊಂದು ಕಡೆ ಸ್ವದೇಶಿ ಉತ್ಪಾದನೆ ಮತ್ತು ಮಾರುಕಟ್ಟೆಗೆ ಒತ್ತು ನೀಡುತ್ತಿದೆ.

ಭಾರತದಲ್ಲಿ ಗೂಗಲ್, ಅಮೆಜಾನ್, ಯುಟ್ಯೂಬ್, ಫೇಸ್‌ಬುಕ್ ಮಾದರಿಯ ದಿಗ್ಗಜ ಕಂಪನಿಗಳೇಕೆ ಹುಟ್ಟುತ್ತಿಲ್ಲ? ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟ ನಡೆಯುತ್ತಿರುವಾಗ ಈ ಹಿರಿಯ ವಿಜ್ಞಾನಿಯ ಸಂದೇಶ, ವಿಚಾರಧಾರೆಗಳು ಸಕಾಲಿಕವಾಗುತ್ತವೆ. ಜೋಹೊದ ಬಗ್ಗೆ ಅಪರಿಮಿತ ವಿಶ್ವಾಸ ಹೊಂದಿರುವ ಶ್ರೀಧರ್ ವೆಂಬು ಅವರು, “ಜಗತ್ತಿನಲ್ಲಿ ಮೈಕ್ರೊಸಾಫ್ಟ್‌ ಗೆ ಸವಾಲೊಡ್ಡಬಲ್ಲ ಏಕೈಕ ಕಂಪನಿ ಇದ್ದರೆ ಅದು ಜೋಹೊ.

ಮೈಕ್ರೊಸಾಫ್ಟ್‌ ನ ಪ್ರಾಡಕ್ಟ್‌ಗಳನ್ನೂ ಮೀರಿಸಬಲ್ಲ ಸಾಮರ್ಥ್ಯ ಜೋಹೊಗೆ ಇದೆ ಎಂಬುದನ್ನು ಸಾಬೀತುಪಡಿಸಲಿದ್ದೇವೆ" ಎಂದು ‘ಎಕ್ಸ್’ ಜಾಲತಾಣದಲ್ಲಿ ಬಹಿರಂಗ ಸವಾಲೊಡ್ಡಿದ್ದಾರೆ. ಶ್ರೀಧರ್ ವೆಂಬು ನಡೆದು ಬಂದ ಹಾದಿ ವಿಸ್ಮಯಕರ. 1989ರಲ್ಲಿ ಐಐಟಿ ಮದ್ರಾಸ್‌ನಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಗಳಿಸಿದ ಬಳಿಕ ಅಮೆರಿಕದಲ್ಲಿ ಪಿಎಚ್‌ಡಿ ಪಡೆದರು.

ಅಲ್ಲಿ ಕ್ವಾಲ್ಕಾಮ್ ಕಂಪನಿಯಲ್ಲಿ ಉದ್ಯೋಗಿಯಾದರು. ಆದರೆ ಭಾರತದಲ್ಲಿಯೇ ಸ್ವಂತ ಕಂಪನಿ ಸ್ಥಾಪಿಸಬೇಕು ಎಂಬ ಆಕಾಂಕ್ಷೆಯೊಂದಿಗೆ ತವರಿಗೆ ಮರಳಿದರು. ಭಾರತವು ಉದಾರೀಕರಣದ ಹೊಸ್ತಿಲು ದಾಟಿದ ಸಂದರ್ಭವದು. ಶ್ರೀಧರ್ ವೆಂಬು ಅವರು ಉತ್ಸಾಹದಿಂದ ಸ್ನೇಹಿತರೊಡನೆ ಚೆನ್ನೆ ನಲ್ಲಿ ‘ಅಡ್ವೆಂಟ್ ನೆಟ್’ ಎಂಬ ಐಟಿ ಕಂಪನಿ ಸ್ಥಾಪಿಸಿದರು. ಅದುವೇ 2009ರಲ್ಲಿ ಜೋಹೊ ಕಾರ್ಪೊರೇಷನ್ ಆಗಿ ಅಭಿವೃದ್ಧಿ ಆಯಿತು.

ಈಗ ಇದು ಭಾರತದ ಪ್ರಮುಖ ಐಟಿ ಕಂಪನಿಗಳಂದು. ವಿಶ್ವಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಕಂಪನಿಯ ಮೌಲ್ಯ 1 ಲಕ್ಷದ 4 ಸಾವಿರ ಕೋಟಿ ರುಪಾಯಿ. 55ಕ್ಕೂ ಹೆಚ್ಚು ಸಾಫ್ಟ್‌ ವೇರ್ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಿದೆ. 180 ದೇಶಗಳಲ್ಲಿ ಇದಕ್ಕೆ ಗ್ರಾಹಕರಿದ್ದಾರೆ.

ಜೋಹೊ ಸಿಆರ್‌ಎಂ, ಆಫೀಸ್ ಡೆ, ಜೋಹೊ ಬುಕ್ಸ್, ಜೋಹೊ ಮೈಲ್, ಜೋಹೊ ಸೋಶಿಯಲ್ ಮೊದಲಾದ ಪ್ರಾಡಕ್ಟ್‌ಗಳನ್ನು ಹೊಂದಿದೆ. ಜಿ-ಮೇಲ್ ನಮಗೆ ಗೊತ್ತಿದೆ. ಜೋಹೊ ಕೂಡ ತನ್ನದೇ ಜೋಹೊ ಮೇಲ್ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತದೆ. “ಜೋಹೊದ ಎಲ್ಲ ಪ್ರಾಡಕ್ಟ್‌ಗಳು ಭಾರತದ ತಯಾರಾಗಿವೆ. ಪ್ರಧಾನ ಕಚೇರಿ ಚೆನ್ನೈನಲ್ಲಿದೆ. ಆದ್ದರಿಂದ ನಮ್ಮ ಜಾಗತಿಕ ಆದಾಯ ಕ್ಕೂ ಭಾರತದ ತೆರಿಗೆ ಕಟ್ಟುತ್ತೇವೆ. ಗ್ರಾಹಕರ ಡೇಟಾ ಕೂಡ ಮುಂಬಯಿ, ಚೆನ್ನೆ , ದಿಲ್ಲಿಯಲ್ಲಿರುವು ದರಿಂದ ವಿದೇಶಕ್ಕೆ ಹೋಗುವುದಿಲ್ಲ" ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ರೀಧರ್ ವೆಂಬು!

ಅವರು ಸೋಷಿಯಲ್ ಮೀಡಿಯಾದ ತಮ್ಮ ವಿಚಾರಗಳನ್ನು ಹೇಳುತ್ತಾರೆ. “ನಮ್ಮೆಲ್ಲ ಹಾರ್ಡ್‌ವೇರ್ ಮತ್ತು ಸಾಫ್ಟ್‌ ವೇರ್ ಫ್ರೇಮ್ ವರ್ಕ್‌ಗಳನ್ನು ಇಲ್ಲೇ ತಯಾರಿಸಿದ್ದೇವೆ. ಪ್ರತಿಯೊಂದು ದೇಶವೂ ರೀಜನಲ್ ಡೇಟಾ ಸೆಂಟರ್‌ಗಳನ್ನು ಹೊಂದಬೇಕು. ನಾವು ಎಲ್ಲ ದೇಶಗಳಲ್ಲೂ ಇದಕ್ಕೆ ಬದ್ಧರಾಗಿ ದ್ದೇವೆ. ಮುಕ್ತಾಂಶ ತಂತ್ರಜ್ಞಾನಗಳಾದ ಲಿನಕ್ಸ್ ಒಎಸ್ ಮತ್ತು ಪೋಸ್ಟ್‌ಗ್ರೆಸ್ ಡೇಟಾಬೇಸ್ ಮೂಲಗಳನ್ನು ಬಳಸುತ್ತೇವೆ.

ಎಡಬ್ಲ್ಯುಎಸ್ ಅಥವಾ ಅಜ್ಯುರ್‌ನಲ್ಲಿ ನಮ್ಮ ಪ್ರಾಡಕ್ಟ್‌ಗಳನ್ನು ಇಡುವುದಿಲ್ಲ. ನಾವು ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದ ವರ್ಲ್ಡ್" ಎಂದು ಹೆಮ್ಮೆಯಿಂದ ವಿವರಿಸುತ್ತಾರೆ ಶ್ರೀಧರ್ ವೆಂಬು. ಶ್ರೀಧರ್ ವೆಂಬು ಅವರ ಪಾರದರ್ಶಕ ನಿಲುವುಗಳು, ಪ್ರಾಮಾಣಿಕತೆ ಗಮನಾರ್ಹ. ಅದಕ್ಕೊಂದು ತಾಜಾ ಉದಾ ಹರಣೆ ಇಲ್ಲಿದೆ. ಕಳೆದ ವರ್ಷದ ಜೂನ್‌ನಲ್ಲಿ ಜೋಹೊ ಕಂಪನಿಯು, ಭಾರತ ಸರಕಾರದ ಸೆಮಿಕಂಡಕ್ಟರ್ ಮಿಶನ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ‌

ಲಕ್ಷಾಂತರ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ಚಿಪ್ ಘಟಕ ನಿರ್ಮಾಣದ ಯೋಜನೆಯದು. ಸರಕಾರದಿಂದ ಭಾರಿ ಸಬ್ಸಿಡಿಯೂ ಅದಕ್ಕೆ ಸಿಗುವುದಿತ್ತು. ಹೀಗಿದ್ದರೂ, ವೆಂಬು ಅವರು ಯೋಜನೆ ಯಿಂದ ಹಿಂದೆ ಸರಿದರು. ಅದಕ್ಕೆ ಅವರು ನೀಡಿದ ಕಾರಣ ಅವರ ಕಾಳಜಿಯನ್ನು ತೋರಿಸುತ್ತದೆ.

“ನಮ್ಮ ಸೆಮಿಕಂಡಕ್ಟರ್ ಫೋರ್ಬ್ಸ್‌ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗೆ ಭಾರಿ ಬಂಡವಾಳದ ಅಗತ್ಯ ಇತ್ತು. ಸರಕಾರದ ಸಬ್ಸಿಡಿ ನೆರವು ಕೂಡ ಅದಕ್ಕೆ ಬೇಕಾಗುತ್ತದೆ. ಆದರೆ ತೆರಿಗೆದಾರರ ಹಣವನ್ನು(ಸಬ್ಸಿಡಿ) ಬಳಸುವುದಕ್ಕೆ ಮೊದಲು ನಮ್ಮ ತಂತ್ರeನ ಸರಿಯಾದ ಹಾದಿಯಲ್ಲಿದೆ ಎಂಬುದು ನೂರಕ್ಕೆ ನೂರು ಖಚಿತವಾಗಬೇಕಿತ್ತು. ಅದು ಆಗಿರಲಿಲ್ಲವಾದ್ದರಿಂದ ಪ್ರಾಜೆಕ್ಟ್‌ನಿಂದ ಹಿಂದೆ ಸರಿದೆವು" ಎಂದು ಪ್ರಾಮಾಣಿಕವಾಗಿ ಹೇಳಿದರು.

ಎಂಥಾ ಜನಪರ ಕಾಳಜಿ ನೋಡಿ. ಸ್ವತಃ ಸರಕಾರಗಳೇ ಸಾರ್ವಜನಿಕ ಕಂಪನಿಗಳನ್ನು ಮೇಲೆತ್ತಲು ತೆರಿಗೆದಾರರ ಹಣವನ್ನು ಪೋಲು ಮಾಡಿದ ನಿದರ್ಶನಗಳು ಇತಿಹಾಸದ ಪುಟಗಳಲ್ಲಿವೆ. ಆದರೆ ಖಾಸಗಿ ಕಂಪನಿಯೊಂದರ ಮಾಲೀಕರು, ತೆರಿಗೆದಾರರ ಹಣವಾದ ಸಬ್ಸಿಡಿ ಸಿಗುವ ಸಾಧ್ಯತೆ ಇದ್ದರೂ, ಬಾಚಿಕೊಳ್ಳುವ ಯೋಚನೆ ಮಾಡಲಿಲ್ಲ. ಬದಲಿಗೆ ತೆರಿಗೆದಾರರ ಹಣ ಪೂರ್ಣ ಬಳಕೆ ಯಾಗುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಂಡು ಹಿಂದೆ ಸರಿಯುವುದು ಇದೆಯಲ್ಲವೇ, ಅದು ಅಪರೂಪದ ಪ್ರಾಮಾಣಿಕತೆ ಎನ್ನಬಹುದು. ಇದು ಈ ಟೆಕ್ ಉದ್ಯಮಿಯನ್ನು ವಿಶಿಷ್ಟ ವ್ಯಕ್ತಿಯನ್ನಾಗಿಸಿದೆ.

ಅಮೆರಿಕದ ಸುಂಕ ಸಮರ, ಎಚ್-1ಬಿ ವೀಸಾ ಶುಲ್ಕದ ಅಪರಿಮಿತ ಹೆಚ್ಚಳ, ಜಾಗತಿಕ ನಿಶ್ಚಿತತೆಯ ನಡುವೆ ಎಲ್ಲೂ ಸ್ವದೇಶಿ ಅಭಿಯಾನ, ಮೇಕ್ ಇನ್ ಇಂಡಿಯಾದ ಜಪ ನಡೆಯುತ್ತಿದೆ. ಈ ಸಂದರ್ಭ ಸದ್ದಿಲ್ಲದೆ ಈ ಆದರ್ಶವನ್ನೇ ದಶಕಗಟ್ಟಲೆ ಕಾಲದಿಂದ ಪಾಲಿಸಿದ ಶ್ರೀಧರ್ ವೆಂಬು ಮಾದರಿಯಾಗಿದ್ದಾರೆ.

ಇಂಥ ತಂತ್ರಜ್ಞಾನಿ ಉದ್ಯಮಶೀಲರಿಗೆ ಸರಕಾರಗಳೂ ಬೆಂಬಲಿಸಬೇಕು ಅಲ್ಲವೇ? ಸಾರ್ವಜನಿಕ ವಲಯದ ಉದ್ದಿಮೆಗಳೂ ಬೇಕು. ಆದರೆ ಅವುಗಳಿಗೆ ಕೋಟ್ಯಂತರ ರುಪಾಯಿಗಳನ್ನು ಸುರಿಯುವ ಸರಕಾರಗಳು, ಖಾಸಗಿ ವಲಯದ ತಂತ್ರಜ್ಞಾನ ಕಂಪನಿಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಭಾರಿ ಬಂಡವಾಳದ ನೆರವನ್ನು ಸ್ವಲ್ಪವಾದರೂ ನೀಡಬೇಕು.

ಅವುಗಳಿಗೆ ಆಸರೆಯದರೆ, ಗೂಗಲ್, ಅಮೆಜಾನ್, ಮೆಟಾದಂಥ ಕಂಪನಿಗಳು ಭಾರತದಲ್ಲೂ ಹುಟ್ಟಿಕೊಳ್ಳುವ ವಾತಾವರಣ ಸೃಷ್ಟಿಯಾಗಲಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ದೃಷ್ಟಿ ಯಿಂದಲೂ ಅತ್ಯಂತ ನಿರ್ಣಾಯಕ. ಏಕೆಂದರೆ ಈಗ ತಂತ್ರಜ್ಞಾನ ಕಂಪನಿಗಳು ಜಗತ್ತಿನ ಟಾಪ್ 10 ಕಂಪನಿಗಳಲ್ಲಿ ಅಗ್ರಪಾಲನ್ನು ಹೊಂದಿವೆ. ಒಂದೊಂದು ಕಂಪನಿಗಳ ಸಂಪತ್ತೂ ಹಲವಾರು ದೇಶಗಳ ಜಿಡಿಪಿಗಿಂತಲೂ ಜಾಸ್ತಿ!!

ಕೇಶವ ಪ್ರಸಾದ್​ ಬಿ

View all posts by this author