ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ಹಳ್ಳಿಯಲ್ಲಿ ಕುಸಿದುಬಿದ್ದ ಟೆಂಟ್‌ ಸಿನೆಮಾ

ನಾನು ಬಾಲ್ಯದಲ್ಲಿದ್ದಾಗ ‘ಜೈ ಪಾತಾಳ ಭೈರವಿ’ ಎಂಬ ತೆಲುಗು ಚಲನಚಿತ್ರವನ್ನು ಟೆಂಟ್ ಸಿನಿಮಾದಲ್ಲೇ ನೋಡಿದ ನೆನಪಿದೆ. ಅದೇ ರೀತಿ ಇನ್ನೂ ಹಲವು ಸಿನಿಮಾಗಳನ್ನು ಟೆಂಟ್‌ನಲ್ಲಿ ಕುಳಿತು, ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ನೋಡಿದ ನೆನಪು; ಆಗ ಅಂತದ್ದೊಂದು ಟೆಂಟ್ ನಮ್ಮ ಮನೆಗೆ ಸಾಕಷ್ಟು ಸಮೀಪದಲ್ಲೇ ಇತ್ತು! ಆಗ ನಾವೆಲ್ಲಾ ದೂರದ ಧರ್ಮಾವರಂನಲ್ಲಿ ಇದ್ದವು; ಒಮ್ಮೊಮ್ಮೆ ಟೆಂಟ್ ಸಿನಿಮಾಕ್ಕೆ, ಇನ್ನೊಮ್ಮೆ ಸ್ವಲ್ಪ ದೂರದ ಥಿಯೇಟರ್‌ಗೆ ನಮ್ಮಪ್ಪ ಕರೆದುಕೊಂಡು ಹೋಗುತ್ತಿದ್ದರು.

ಶಶಾಂಕಣ

ಈಗಿನ ಜೆನ್ ಜೀ ಅನುಭವಕ್ಕೆ ಅಷ್ಟಾಗಿ ಬಾರದ, ಸಂಪೂರ್ಣ ಇಪ್ಪತ್ತನೆಯ ಶತಮಾನದ ಹಳೆನೆನಪುಗಳು ಎನ್ನಬಹುದಾದ, ಒಂದು ಮನರಂಜನಾ ತಾಣವು, ಹಿಂದೆ ಬಹು ಜನಪ್ರಿಯ ವಾಗಿತ್ತು. ಅದೇ ‘ಟೆಂಟ್ ಸಿನಿಮಾ’! ಹಳ್ಳಿ, ಪಟ್ಟಣ, ನಗರ, ಜಾತ್ರೆಗಳಲ್ಲಿ ಅದೆಷ್ಟೋ ಜನರಿಗೆ ಸಿನಿಮಾ ತೋರಿಸಿ, ಮನರಂಜನೆ ನೀಡುತ್ತಿದ್ದ ಟೆಂಟ್ ಸಿನಿಮಾ, ಅದೇಕೆ ಮರೆಯಾಗಿದೆ ಎಂದರೆ, ಇಂದಿನ ಮಲ್ಟಿಪ್ಲೆಕ್ಸ್ ಮತ್ತು ಮೊಬೈಲ್ ಯುಗದ ಮಹಿಮೆ ಹಾಗಿದೆ! ನಮ್ಮಲ್ಲಿನ ಹಿರಿಯ ತಲೆಮಾರಿನ ಬಹುಪಾಲು ಮಂದಿ ಟೆಂಟ್ ಸಿನಿಮಾ ನೋಡಿ ಬೆಳೆದವರೇ! ಯಾವ್ಯಾವುದೋ ಹಳೆಯ ಸಿನಿಮಾಗಳನ್ನು ಟೆಂಟ್ ಸಿನಿಮಾದಲ್ಲಿ ನೋಡಿ ಆನಂದಿಸಿದವರೇ!

ಇನ್ನೂ ಸ್ವಲ್ಪ ಮುಂದೆ ಬಂದರೆ, ಟೆಂಟ್ ಸಿನಿಮಾಗಿಂತ ಸ್ವಲ್ಪ ಉತ್ತಮ ಎನ್ನಬಹುದಾದ ಸಿಂಗಲ್ ಸ್ಕ್ರೀನ್ ಹೊಂದಿರುವ ಹಳೆಯ ಕಾಲದ ಥಿಯೇಟರ್‌ಗಳು. ಅಲ್ಲಿ ಹಲವು ಕ್ಲಾಸುಗಳಿದ್ದವು; ಗಾಂಧಿ ಕ್ಲಾಸಿನಿಂದ ಹಿಡಿದು ಬಾಲ್ಕನಿ ತನಕ. ಆದರೆ ಕಾಲದ ಪ್ರವಾಹದಲ್ಲಿ, ಟೆಂಟ್ ಸಿನಿಮಾ ಬಿಡಿ, ಗಟ್ಟಿಮುಟ್ಟಾದ ಹಳೆಯ ಥಿಯೇಟರ್‌ಗಳೇ ಬಾಗಿಲು ಹಾಕಿಕೊಂಡು ಸಪ್ಪೆಮೋರೆ ಹಾಕಿಕೊಂಡಿವೆ, ಬೇರೆ ಬೇರೆ ಆಧುನಿಕ ಕಟ್ಟಡಗಳಿಗೆ, ಮನರಂಜನಾ ಮಾಧ್ಯಮಕ್ಕೆ ದಾರಿ ಮಾಡಿಕೊಟ್ಟಿವೆ.

ನಾನು ಬಾಲ್ಯದಲ್ಲಿದ್ದಾಗ ‘ಜೈ ಪಾತಾಳ ಭೈರವಿ’ ಎಂಬ ತೆಲುಗು ಚಲನಚಿತ್ರವನ್ನು ಟೆಂಟ್ ಸಿನಿಮಾದಲ್ಲೇ ನೋಡಿದ ನೆನಪಿದೆ. ಅದೇ ರೀತಿ ಇನ್ನೂ ಹಲವು ಸಿನಿಮಾಗಳನ್ನು ಟೆಂಟ್‌ನಲ್ಲಿ ಕುಳಿತು, ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ನೋಡಿದ ನೆನಪು; ಆಗ ಅಂತದ್ದೊಂದು ಟೆಂಟ್ ನಮ್ಮ ಮನೆಗೆ ಸಾಕಷ್ಟು ಸಮೀಪದಲ್ಲೇ ಇತ್ತು! ಆಗ ನಾವೆಲ್ಲಾ ದೂರದ ಧರ್ಮಾವರಂನಲ್ಲಿ ಇದ್ದವು; ಒಮ್ಮೊಮ್ಮೆ ಟೆಂಟ್ ಸಿನಿಮಾಕ್ಕೆ, ಇನ್ನೊಮ್ಮೆ ಸ್ವಲ್ಪ ದೂರದ ಥಿಯೇಟರ್‌ಗೆ ನಮ್ಮಪ್ಪ ಕರೆದುಕೊಂಡು ಹೋಗುತ್ತಿದ್ದರು.

ಇದನ್ನೂ ಓದಿ: Shashidhara Halady Column: ಪರಿಸರ ರಕ್ಷಿಸಲು ಇಂಥ ಕೆಲಸ ಮಾಡಬೇಕಾಗಿದೆ !

ಥಿಯೇಟರ್‌ಗೆ ಹೋಗಲು ತುಸು ದೂರ ನಡೆಯಬೇಕಿತ್ತು ಅಥವಾ ಜಟಕಾದಲ್ಲಿ ಕುಳಿತು ಹೋಗಬೇಕಿತ್ತು. ಅಲ್ಲಿನ ಥಿಯೇಟರ್‌ನಲ್ಲಿ ‘ಮನುಷುಲು ಮಾರಾಲಿ’ ಎಂಬ ತೆಲುಗು ಸಿನಿಮಾ ನೋಡಿದ ನೆನಪಿದೆ. ಅದೆಲ್ಲಾ ಕಪ್ಪುಬಿಳುಪು ಯುಗ; ಜತೆಗೆ, ಮುಖ್ಯವಾಗಿ, ಡಬ್ಬದಲ್ಲಿರುವ ಹತ್ತಾರು ರೀಲುಗಳನ್ನು ಹೊರ ತೆಗೆದು, ಪ್ರೊಜೆಕ್ಟರ್‌ಗೆ ಸಿಕ್ಕಿಸಿ, ತಿರುಗಿಸಿ, ಪರದೆಯ ಮೇಲೆ ಪ್ರೊಜೆಕ್ಟ್ ಮಾಡುವ ಯುಗ. ನಾನು ಆ ಊರಿನಲ್ಲಿದ್ದುಕೊಂಡು, ಟೆಂಟಿನಲ್ಲಿ ಸಾಕಷ್ಟು ತೆಲುಗು ಸಿನಿಮಾಗಳನ್ನು ನೋಡಿದ್ದೆ; ಆದರೆ ಅವೆಲ್ಲವುಗಳ ಹೆಸರುಗಳು ನೆನಪಿಲ್ಲದವನಷ್ಟು ಚಿಕ್ಕವನಾಗಿದ್ದೆ. ಆ ಸಮಯದಲ್ಲಿ ನಮ್ಮಪ್ಪ ಒಂದು ನಿರ್ಣಯ ತೆಗೆದುಕೊಂಡರು: ನಾನು ತೆಲುಗು ಕಲಿತಿದ್ದು ಸಾಕು, ಕನ್ನಡವನ್ನು ಜಾಸ್ತಿ, ಓದಲಿ, ಕನ್ನಡ ಬರೆಯಲಿ ಎಂದು, ಅಲ್ಲಿಂದ ಬಹುದೂರದಲ್ಲಿರುವ, ಕರ್ನಾಟಕದ ಕರಾವಳಿಯ ನಮ್ಮ ಪುಟ್ಟ ಹಳ್ಳಿಗೆ ಕರೆತಂದು, ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದರು; ಅದರಿಂದ ಒಮ್ಮೆಗೇ ನನಗೆ ಸಿನಿಮಾಗಳ ಸಂಪರ್ಕ ಪೂರ್ತಿ ಕಡಿದು ಹೋಯಿತು!

ಟೆಂಟೂ ಇಲ್ಲ ಥಿಯೇಟರೂ ಇಲ್ಲ: ಏಕೆಂದರೆ ಮಲೆನಾಡಿನ ಅಂಚಿನಲ್ಲಿದ್ದ ನಮ್ಮ ಹಳ್ಳಿಯ ಸುತ್ತಮುತ್ತ, ರಸ್ತೆಗಳೇ ಇರಲಿಲ್ಲ, ವಿದ್ಯುತ್ ಸಂಪರ್ಕ ಸಹ ಇರಲಿಲ್ಲ: ಇನ್ನು ಟೆಂಟು, ಟೂರಿಂಗ್ ಸಿನಿಮಾಗಳು ಬರುವುದಾದರೂ ಹೇಗೆ? ಅಲ್ಲೇ ವಿದ್ಯಾಭ್ಯಾಸ ಮುಗಿಸಿ, ಬಯಲು ಸೀಮೆಯ ಹೃದಯಭಾಗದಲ್ಲಿರುವ ಒಂದು ಹಳ್ಳಿಗೆ ಉದ್ಯೋಗವನ್ನರಸಿ ಬರಬೇಕಾಯಿತು. ಆ ಪುಟ್ಟ ಹಳ್ಳಿಯ ಹೆಸರು ಕಣಕಟ್ಟೆ; ಅಲ್ಲಿಗೆ ಬಂದು, ಅಲ್ಲೇ ಉದ್ಯೋಗ ಮಾಡಿ, ಅದೇ ಹಳ್ಳಿಯಲ್ಲಿ ವಾಸಿಸತೊಡಗಿದ ನಂತರ, ಮತ್ತೊಮ್ಮೆ ಟೆಂಟ್ ಸಿನಿಮಾದ ಸಂಪರ್ಕ ನನಗೆ ಒದಗಿಬಂತು. ಅಲ್ಲಿನ ವಿಶಾಲವಾದ ಕೆರೆಯ ಒಂದು ಅಂಚಿನಲ್ಲಿ, ಸಂತೆ ಮಾರ್ಕೆಟಿಗೆ ಹೊಂದಿಕೊಂಡಂತೆ ದೊಡ್ಡದಾದ ಟೆಂಟ್ ಸಿನಿಮಾ ಇತ್ತು.

WhatsApp Image 2026-11-12 at 19.54.19 (3) ಹಾಲಾದಯ

ನಿಷ್ಪಕ್ಷಪಾತವಾಗಿ ನೋಡಿದರೆ, ಅದು ಟೆಂಟ್ ಅಲ್ಲ, ಅದರ ಚಾವಣಿಗೆ ತೆಳು ಆಸ್ಬೆಸ್ಟಾಸ್ ಶೀಟುಗಳನ್ನು ಹೊದಿಸಿದ್ದರು. ಆದರೆ ಅದನ್ನು ದೂರದಿಂದ ನೋಡಿದರೆ ಟೆಂಟ್ ತರವೇ ಕಾಣುತ್ತಿತ್ತು; ಅದೊಂದು ತಾತ್ಕಾಲಿಕ ಶೆಡ್ ಸ್ವರೂಪದ ಕಟ್ಟೋಣ; ಆದ್ದರಿಂದ ಅದನ್ನು ಟೆಂಟ್ ಸಿನಿಮಾ ಎನ್ನಲು ಯಾವುದೇ ಅಡ್ಡಿ ಇಲ್ಲ. ಅದೇ ಊರಿನಲ್ಲಿ ನಾನು ರೂಮು ಮಾಡಿಕೊಂಡು ಇದ್ದುದರಿಂದ, ನನಗೆ ಲಭ್ಯವಿದ್ದ ಅಲ್ಲಿನ ಕೆಲವೇ ಮನೋರಂಜನಾ ಅವಕಾಶಗಳಲ್ಲಿ ಈ ಟೆಂಟ್ ಸಿನಿಮಾವೂ ಒಂದು.

ಅಲ್ಲಿನ ಗ್ರಾಮದೇವತೆಯಾದ ವೀರಭದ್ರೇಶ್ವರನ ಹೆಸರನ್ನು ಹೊತ್ತಿದ್ದ ಆ ಟೆಂಟ್ ಸಿನಿಮಾದಲ್ಲಿ, ಅತಿ ಹಳೆಯ ಕನ್ನಡ ಸಿನಿಮಾಗಳೇ ಪ್ರದರ್ಶನಗೊಳ್ಳುತ್ತಿದ್ದು ಜಾಸ್ತಿ. ಅಪರೂಪಕ್ಕೊಮ್ಮೆ ಹೊಸ ಕನ್ನಡ ಚಿತ್ರಗಳ ಪ್ರದರ್ಶನ: ಆದರೆ ಅವೆಲ್ಲವೂ ಕಮರ್ಷಿಯಲ್ ಸ್ವರೂಪದ, ತೀರಾ ಸಾಧಾರಣವಾದ ಹಳೆಯ ಚಲನಚಿತ್ರಗಳು - ಆದ್ದರಿಂದ ಅಲ್ಲಿಗೆ ನನ್ನ ಭೇಟಿ ಪದೇಪದೇ ಇರಲಿಲ್ಲ: ಆಗೊಮ್ಮೆ ಈಗೊಮ್ಮೆ ಮಾತ್ರ. ಕುಳಿತುಕೊಳ್ಳಲು ತೀರಾ ಸರಳ ಎನಿಸುವ ಮರದ ಬೆಂಚುಗಳು, ಮುಂಭಾಗದಲ್ಲಿ ಗಾಂಧಿ ಕ್ಲಾಸು, ಅಂದರೆ ಸಿಮೆಂಟ್ ಹಾಕದೇ ಇದ್ದ ಮಣ್ಣು ನೆಲ, ಬೀಡಿ ಸೇದುತ್ತಾ ಹರಟುವ ಪ್ರೇಕ್ಷಕರು, ಹೊರಗಡೆ ಜೋರಾಗಿ ಗಾಳಿ ಬೀಸಿದರೆ ಒಳಗೂ ನುಸುಳುವ ಥಂಡಿ - ಪಕ್ಕಾ ಗ್ರಾಮೀಣ ಪ್ರದೇಶದ ಒಂದು ‘ಟೆಂಟ್ ಸಿನಿಮಾ’ ಹೇಗಿರಬೇಕೋ ಹಾಗೆಯೇ ಇತ್ತು ಆ ಟೆಂಟು.

ದೂರದ ಬೆಂಗಳೂರಿನಿಂದ ಆ ಊರಿಗಿದ್ದ ಒಂದೇ ಒಂದು ನೇರ ಸಂಪರ್ಕದ ಬೆಂಗಳೂರು ಬಸ್‌ನಲ್ಲಿ ಅಥವಾ ಮೈಸೂರು ಬಸ್‌ನಲ್ಲಿ, ಸಿನಿಮಾದ ರೀಲುಗಳನ್ನು ತುಂಬಿಕೊಂಡ ಡಬ್ಬಗಳು (‘ಡಬ್ಬ ಸಿನಿಮಾ’ ಎಂಬ ಪದ ನೆನಪಾಯಿತೇ?) ಆ ಊರಿಗೆ ಬಂದಿಳಿಯುವುದು, ಒಂದು ದೊಡ್ಡ ಸುದ್ದಿ! ಯಾವ ಸಿನಿಮಾದ ಡಬ್ಬಗಳು ಯಾವ ಬಸ್ಸಿನಲ್ಲಿ ಬಂದವು, ಅದನ್ನು ಯಾರು ಕೆಳಗಿಳಿಸಿಕೊಂಡು ಟೆಂಟಿಗೆ ಕೊಂಡೊಯ್ದರು, ಎಷ್ಟು ಡಬ್ಬಗಳಿದ್ದವು ಎಂಬುದನ್ನೆಲ್ಲ ಗುರುತಿಸಿ, ಅರ್ಧ ದಿನವಿಡೀ ಅದರ ಕುರಿತು ಚರ್ಚಿಸುವುದರಲ್ಲಿ ಆ ಹಳ್ಳಿಯ ಯುವಕರಿಗೆ, ಹುಡುಗರಿಗೆ ಬಹಳ ಆಸಕ್ತಿ!

ಸಂಜೆಯಾದ ನಂತರ ಅವುಗಳ ಪ್ರದರ್ಶನ ಹೇಗಿರಬಹುದು ಎಂಬುದರ ಚರ್ಚೆ! ಆದರೆ, ದೊಡ್ಡ ನಗರಗಳಲ್ಲಿ ಯಶಸ್ಸು ಕಾಣದ, ತೀರಾ ಸಾಧಾರಣ ಎಣಿಸುವ ಸಿನಿಮಾಗಳ ಡಬ್ಬಗಳೇ ಆ ಊರಿಗೆ ಬರುವುದು ಜಾಸ್ತಿ; ಏಕೆಂದರೆ ಜನಪ್ರಿಯ ಸಿನಿಮಾಗಳನ್ನು ತರಿಸಲು ಹೆಚ್ಚು ಬಾಡಿಗೆ ಕೊಡಬೇಕಾಗುತ್ತ ದಲ್ಲ! ಅಪರೂಪಕ್ಕೆ ಹಬ್ಬದ ಅಥವಾ ಜಾತ್ರೆಯ ಸಮಯದಲ್ಲಿ ತುಸು ಜನಪ್ರಿಯ ಸಿನಿಮಾ ಬರುತ್ತಿತ್ತು, ಅಷ್ಟೇ.

ಆದ್ದರಿಂದಲೇ, ಆ ಟೆಂಟ್ ಸಿನಿಮಾಕ್ಕೆ ನಾನು ಆಗಾಗ ಹೋಗಿದ್ದರೂ, ಸಿನಿಮಾ ನೋಡುವುದಕ್ಕಿಂತ ಹೆಚ್ಚಾಗಿ, ಸಹೋದ್ಯೋಗಿಗಳೊಂದಿಗೆ ಸಮಯ ಕಳೆಯಲು ಹೋಗಿದ್ದೇ ಜಾಸ್ತಿ ಎನ್ನಬಹುದು. ಇಂತಹ ನೀರಸ ವಾತಾವರಣದಲ್ಲಿ, ವೈಯಕ್ತಿಕವಾಗಿ ನನಗೆ ಒಂದು ಸಂತಸದ ಸುದ್ದಿ ಗೊತ್ತಾಯ್ತು: ಆದರೆ ಇಡೀ ಊರಿನಲ್ಲಿ, ಅದು ನನಗೊಬ್ಬನಿಗೆ ಮಾತ್ರ ಸಂತಸದ ಸುದ್ದಿ ಎಂದು ಆಮೇಲೆ ಗೊತ್ತಾಯ್ತು!

ಏನೆಂದರೆ, ಅಂದು ಕಲಾತ್ಮಕ ಸಿನಿಮಾ ಎನಿಸಿದ್ದ ‘ಒಂದಾನೊಂದು ಕಾಲದಲ್ಲಿ’ ಚಲನಚಿತ್ರವು ಅಲ್ಲಿನ ಟೆಂಟ್ ಸಿನಿಮಾದಲ್ಲಿ ಪ್ರದರ್ಶನವಾಗುತ್ತದೆ ಎಂಬ ಸುದ್ದಿ! ಆ ದಿನಗಳಲ್ಲಿ ಕಲಾತ್ಮಕ ಚಿತ್ರಗಳನ್ನು ನೋಡುವುದೆಂದರೆ ನನಗೆ ಒಂದು ರೀತಿಯ ಸಂಭ್ರಮ, ಕುತೂಹಲ. ಅದು ಶಂಕರ್ ನಾಗ್ ಅವರ ಮೊದಲ ಸಿನಿಮಾ, ಗಿರೀಶ್ ಕಾರ್ನಾಡ್ ನಿರ್ದೇಶನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳಿಗೆ ಭಾಜನವಾದ ಸಿನಿಮಾ. ಕಲಾತ್ಮಕ ಚಲನಚಿತ್ರಗಳ ಕುರಿತು ಕುತೂಹಲ ಹೊಂದಿದ್ದ ನನಗಂತೂ ಆ ಸುದ್ದಿ ಕೇಳಿ ನಿಜಕ್ಕೂ ಖುಷಿಯಾಗಿತ್ತು. ನಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ ಸಂತಸದಿಂದ ಹೇಳಿದೆ : “ಒಂದಾನೊಂದು ಕಾಲದಲ್ಲಿ’ ಸಿನಿಮಾ ನಮ್ಮೂರ ಟೆಂಟ್‌ಗೆ ಬಂದಿದೆ, ಗಿರೀಶ್ ಕಾರ್ನಾಡ್ ನಿರ್ದೇಶನ. ಅದೊಂದು ಕಲಾತ್ಮಕ ಸಿನಿಮಾ.

ಮೊದಲ ದಿನವೇ ಹೋಗೋಣ!" ಆದರೆ, ನನ್ನ ಉತ್ಸಾಹದ ಮಾತು ಕೇಳಿ ಅವರೆಲ್ಲ ಮುಖಗಳನ್ನು ಒಂದು ರೀತಿ ಮಾಡಿಕೊಂಡರು. ‘ಅದನ್ಯಾರ್ರೀ ನೋಡ್ತಾರೆ? ಆರ್ಟ್ ಫಿಲಂ ಅಂತೆ! ಅದರಲ್ಲಿ ಒಂದು ಡ್ಯಾನ್ಸ್ ಇಲ್ವಂತೆ, ಒಂದು -ಟಿಂಗ್ ಇಲ್ವಂತೆ. ಅಂತಹ ಸಿನಿಮಾಗಳು ಬೆಂಗಳೂರು, ಮೈಸೂರಿಗೆ ಸರಿ. ಎಜುಕೇಟೆಡ್ ಜನ ನೋಡೋ ಸಿನಿಮಾ ಅದು. ಈ ಹಳ್ಳಿಯಲ್ಲಿ ಅದನ್ನು ಯಾರು ನೋಡುತ್ತಾರೆ. ಬಹಳ ಬೋರ್ ಅಂತೆ’ ಎಂದು ನನ್ನ ಉತ್ಸಾಹಕ್ಕೆ ತಣ್ಣೀರು ಎರಚಿದರು.

‘ಇರ್ಲಿ ಬಿಡಿ, ಒಂದ್ಸಲ ನೋಡೋಣ ಬನ್ನಿ. ಎಂತೆಂತಹದ್ದೋ ಡಬ್ಬಾ ಸಿನಿಮಾನ ನೋಡಿಲ್ಲವೇ ಅಲ್ಲಿ?’ ಅಂದೆ. ‘ಇಲ್ಲಪ್ಪ, ನೀವು ಹೋಗಿ. ನಿಮಗೆ ಅದು ಚಂದ ಕಾಣಬಹುದು. ನಾವು ಬರಲ್ಲಪ್ಪ’ ಎಂದರು ನಮ್ಮ ಸಹೋದ್ಯೋಗಿಗಳು. ಇರಲಿ, ಅವರು ಬರದಿದ್ದರೇನಾಯ್ತು, ಕಲಾತ್ಮಕ ಸಿನಿಮಾಗಳ ಕುರಿತು ವಿಶೇಷ ಅಭಿಮಾನ ಇಟ್ಟುಕೊಂಡಿದ್ದ ನಾನು, “ಒಂದಾನೊಂದು ಕಾಲದಲ್ಲಿ" ಸಿನಿಮಾದ ಮೊದಲ ಶೋಗೆ ಆ ಟೆಂಟ್ ಗೆ ಹೋದೆ. ಹಿಂದಿನ ದಿನ ಪಕ್ಕದ ಹಳ್ಳಿಯಲ್ಲಿ ಜಾತ್ರೆಯಂತೆ- ಜಾತ್ರೆಗೆ ಬಂದಿದ್ದ ಸಾಕಷ್ಟು ಜನ ಅಲ್ಲಿನ ಟೆಂಟ್ ಸಿನಿಮಾ ನೋಡುವ ಆಸೆಯಿಂದ ಬಂದಿದ್ದರು; ಅವರಿಗೆ ಒಟ್ಟು ಒಂದು ಸಿನಿಮಾ ನೋಡಬೇಕು, ಯಾವುದಾದರೇನು ಎಂಬ ಭಾವ.

ಆ ಟೆಂಟ್ ಸಿನಿಮಾದಲ್ಲಿ “ಒಂದಾನೊಂದು ಕಾಲದಲ್ಲಿ" ಶುರುವಾಯಿತು. ಅದರ ಟೈಟಲ್ ಕಾರ್ಡ್ ಪರದೆಯ ಮೇಲೆ ಮೂಡುವ ಸಮಯದಲ್ಲೇ, ಪ್ರೇಕ್ಷಕರಿಂದ ಗುಸುಗುಸು ಶುರುವಾಯಿತು. ‘ಇದೆಂತ ಸಿನಿಮಾನೋ? ಹಿಂಗೈತೆ! ಮ್ಯೂಸಿಕ್ ವಿಚಿತ್ರವಾಗಿದೆ. ನಟರ ಡ್ರೆಸ್ ಹಳ್ಳಿಯವರ ರೀತಿ ಇದೆ’ ಇತ್ಯಾದಿ ಇತ್ಯಾದಿ ಕಮೆಂಟುಗಳು!

ಸಿನಿಮಾ ಆರಂಭವಾಗಿ, ಶಂಕರ್ ನಾಗ್, ಸುಂದರ ಕೃಷ್ಣ ಅರಸ್, ಸುಂದರ ರಾಜ್ ಅವರು ಪುರಾತನ ಕಾಲದ ದಿರಿಸು ಧರಿಸಿ, ಓಡಾಡಲು ಆರಂಭವಾದಾಗ, ಪ್ರೇಕ್ಷಕರಲ್ಲಿ ಸಣ್ಣಗೆ ಗಲಾಟೆ ಶುರುವಾಯಿತು. ‘ಜಾತ್ರೆ ಅಂತ ಬಂದಿದ್ದೀವಿ, ಇದೆಂತ ಸಿನಿಮಾ ಹಾಕಿದಿಯಾ? ಫೈಟಿಂಗೇ ಇಲ್ವಲ್ಲೋ! ಹಾಡು, ಡ್ಯಾನ್ಸ್ ಇಲ್ವಲ್ಲೋ ಹೇ ಇದು ಬೇಡ ಕಣ್ಣಣೋ, ಬೇರೆ ಹಾಕು’ ಎಂಬ ಮಾತುಗಳು ಕೇಳತೊಡಗಿದವು. ಇಡೀ ಟೆಂಟಿನಲ್ಲಿ, ಮುಂದೇನು? ಎಂಬ ಕುತೂಹಲದಿಂದ ಸಿನಿಮಾ ನೋಡುತ್ತಿದ್ದವನು ನಾನೊಬ್ಬನೇ! ಕೆಲವೇ ನಿಮಿಷ ಗಳಲ್ಲಿ, ಟೆಂಟ್ ಒಳಗೆ ಜನರ ಓಡಾಟ ಶುರುವಾಯಿತು.

ಅರ್ಧಕ್ಕರ್ಧ ಜನ ಎದ್ದು ಹೋಗಿ, ಪಕ್ಕದ ಭಟ್ಟರ ಹೊಟೇಲ್‌ನಲ್ಲಿ ಟೀ ಕುಡಿದು, ಬೀಡಿ ಸೇದುತ್ತಾ ಅಲ್ಲಲ್ಲಿ ನಿಂತರು. ಇನ್ನೊಂದಷ್ಟು ಜನ ಪಿಚ್ಚರ್ ಬಿಡುವ ರೂಮಿಗೆ (ಅಂದರೆ ಪ್ರೊಜೆಕ್ಟರ್ ಇದ್ದ ಜಾಗ) ಹೋಗಿ, ‘ಅಣ್ಣಾ, ಈ ಸಿನಿಮಾ ನೋಡಕ್ಕೆ ಭಾರೀ ಬೋರು; ಜಾತ್ರೆಗೆ ಅಂತ ಬಂದಿದ್ದೀವಿ. ನಾಳೆ ನಮ್ಮೂರಿಗೆ ವಾಪಸ್ ಹೋಗಬೇಕು. ಬೇರೆ ಯಾವುದಾದರೂ ಒಳ್ಳೆ ಫೈಟಿಂಗ್ ಇರೋ ಪಿಕ್ಚರ್ ಹಾಕು ಕಣಣ್ಣ!’ ಎಂದು ವರಾತ ಶುರು ಹಚ್ಚಿಕೊಂಡರು. ‘ಇಲ್ಲಾಂದ್ರೆ ನಮ್ಮ ದುಡ್ಡು ವಾಪಸ್ ಕೊಡು, ನಾವು ಮನೆಗೆ ಹೋಗ್ತೀವೆ’ ಎಂದು ಕೆಲವರ ಧಮ್ಕಿ ಮತ್ತು ಹಕ್ಕೊತ್ತಾಯ ಆರಂಭವಾಯಿತು.

ಪ್ರೊಜೆಕ್ಟರ್ ರೂಮಿನಲ್ಲಿದ್ದ ಡಬ್ಬಗಳಲ್ಲಿ ಬೇರೆ ಸಿನಿಮಾದ ರೀಲುಗಳು ಇದ್ದುದನ್ನು ಅದಾಗಲೇ ಕೆಲವರು ಪತ್ತೆ ಹಚ್ಚಿದ್ದರು! ನಾನು ಟೆಂಟಿನ ಒಳಗೇ ಕುಳಿತಿದ್ದೆ; ಒಮ್ಮೆಗೇ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ದೃಶ್ಯಗಳು ಅದೃಶ್ಯವಾದವು! ಬೇರೆ ಯಾವುದೋ ಒಂದು ಹಳೆಯ ಕಪ್ಪು ಬಿಳುಪು ಕನ್ನಡ ಸಿನಿಮಾದ ದೃಶ್ಯಗಳು ಪರದೆ ಮೇಲೆ ಬರತೊಡಗಿದವು. ಅದಾವುದು ಎಂದೂ ನೋಡುವ ಕುತೂಹಲ ಉಳಿಯಲಿಲ್ಲ! ಜನರ ಹಕ್ಕೊತ್ತಾಯದಿಂದಾಗಿ, ಹಣ ವಾಪಸ್ ಕೊಡು ಎಂದು ಕೂಗಾಡಿದ್ದರಿಂದಾಗಿ, ಒಂದಾನೊಂದು ಕಾಲದಲ್ಲಿ ಚಿತ್ರವನ್ನು ತೋರಿಸುವುದನ್ನೇ ರದ್ದುಗೊಳಿಸಿದ್ದರು!

ವಿಷಯ ತಿಳಿದ ನಾನು ಪೆಚ್ಚು ಮೋರೆ ಹಾಕಿಕೊಂಡು ಎದ್ದು ಬಂದೆ. ಆ ಹಳ್ಳಿಯ ಜನರಿಗೆ ಒಂದಾನೊಂದು ಕಾಲದಲ್ಲಿ ರೀತಿಯ ಕಲಾತ್ಮಕ ಸಿನಿಮಾವನ್ನು ತೋರಿಸಲು, ಪಾಪ, ಆ ಟೆಂಟ್ ಸಿನಿಮಾದವರಿಗೆ ಕೊನೆಗೂ ಸಾಧ್ಯವಾಗಲೇ ಇಲ್ಲ. ಅದರ ರೀಲುಗಳು ಡಬ್ಬದಲ್ಲಿ ಭದ್ರವಾಗಿ ಕುಳಿತು, ಮರುದಿನದ ಬೆಂಗಳೂರು ಬಸ್ಸಿನ ಛಾವಣಿ ಏರಿ, ವಾಪಸ್ ಬೆಂಗಳೂರು ತಲುಪಿದವು. ನನ್ನ ಸಹೋದ್ಯೋಗಿಗಳು ‘ಏನ್ರೀ, ಒಂದಾನೊಂದು ಕಾಲದಲ್ಲಿ ಹ್ಯಾಗಿತ್ತು?’ ಎಂದು ತಮಾಷೆ ಮಾಡತೊಡಗಿದರು. ಇದಾಗಿ ಕೆಲವು ತಿಂಗಳುಗಳ ನಂತರ, ಒಂದು ದಿನ ಇದ್ದಕ್ಕಿದ್ದಂತೆ ಟೆಂಟ್ ಸಿನಿಮಾ ಪ್ರದರ್ಶನ ನಿಂತು ಹೋಯಿತು. ಏಕೆ ಎಂದು ವಿಚಾರಿಸಿದಾಗ, ಅದರ ಪರವಾನಿಗೆ ನವೀಕರಣ ಆಗಲಿಲ್ಲವಂತೆ, ಇನ್ನೇನು ಕೆಲವೇ ದಿನಗಳಲ್ಲಿ ನವೀಕರಣ ಆಗುತ್ತದಂತೆ ಎಂದು ಹೇಳಿದರು. ಆದರೆ ಆ ದಿನ ಬರಲೇ ಇಲ್ಲ; ಅಷ್ಟರಲ್ಲಿ ಮಳೆಗಾಲ ಬಂತು; ಅಲ್ಲಿ ಮಳೆಗಾಲದಲ್ಲಿ ಬಿರುಸಾದ ಗಾಳಿ ಮಾತ್ರ ಬೀಸುವುದು ಜಾಸ್ತಿ, ಹೊರತು ಮಳೆ ಕಡಿಮೆ.

ಒಂದು ನಡು ಮಧ್ಯಾಹ್ನ, ಅದರ ಚಾವಣಿಗೆ ಹಾಕಿದ್ದ ಆಸ್ಪಸ್ಟಾಸ್ ಶೀಟುಗಳು ಒಮ್ಮೆಗೇ ಕುಸಿದು ಬಿದ್ದವು! ಹೀಗೆ, ಆ ಹಳ್ಳಿಯಲ್ಲಿದ್ದ ಟೆಂಟ್ ಸಿನಿಮಾ ಧರಾಶಾಹಿಯಾಯ್ತು! ಈಗಿನ ಆಧುನಿಕ ಯುಗದಲ್ಲಿ, ಮಲ್ಟಿಪ್ಲೆಕ್ಸ್ ಸಿನಿಮಾ, ಮೊಬೈಲ್‌ನಲ್ಲಿ ಸಿನಿಮಾ ಎಲ್ಲವೂ ಹೆಚ್ಚು ಜನಪ್ರಿಯವಾಗಿರುವ ಕಾಲದಲ್ಲಿ, ಟೆಂಟ್ ಸಿನಿಮಾವನ್ನು ಯಾರು ನೋಡ್ತಾರೆ, ಅಲ್ಲವೇ?

**

ಶಶಿಧರ ಹಾಲಾಡಿ

View all posts by this author