ಒಂದೊಳ್ಳೆ ಮಾತು
ರಾಜಸ್ಥಾನದ ಧಗಧಗಿಸುವ ಬಿಸಿಲು, ಮೈ ಸುಡುವ ಮರಳುಗಾಡು, ಬಾಯಾರಿಕೆಯಿಂದ ಒಣಗುವ ಗಂಟಲು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೇವಲ ಒಂದು ಲೋಟ ತಣ್ಣೀರು ಸಿಕ್ಕರೆ ಅದು ಅಮೃತಕ್ಕೆ ಸಮಾನ. ಇಂತಹ ಅಮೃತವನ್ನು ಕಳೆದ 21 ವರ್ಷಗಳಿಂದ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಪ್ರತಿಯೊಬ್ಬ ಹಾದಿಹೋಕರಿಗೂ ಉಣಿಸುತ್ತಿರುವ ಅಪರೂಪದ ಮಾನವತಾವಾದಿ, 77 ವರ್ಷದ ವೃದ್ಧ ಠಾಣಾ ರಾಮ್ ಕಡ್ವಾಸರ.
ಯಾವುದೇ ಬ್ಯಾನರ್‌ಗಳಿಲ್ಲ, ಪ್ರಚಾರದ ಹಪಾಹಪಿಯಿಲ್ಲ, ದೇಣಿಗೆಯ ಹಂಗೂ ಇಲ್ಲ. ಕೇವಲ ‘ಯಾರೂ ಬಾಯಾರಿಕೆಯಿಂದ ಬಳಲಬಾರದು’ ಎಂಬ ಒಂದೇ ಒಂದು ಉದಾತ್ತ ಉದ್ದೇಶದಿಂದ ಈ ಹಿರಿಯ ಜೀವ ರಾಜಸ್ಥಾನದ ಹೆದ್ದಾರಿಯೊಂದರ ಬದಿಯಲ್ಲಿ ಪ್ರತಿದಿನ ಬಂದು ನಿಲ್ಲುತ್ತದೆ. ಬಸ್ ಪ್ರಯಾಣಿಕರು, ಲಾರಿ ಚಾಲಕರು, ದಿನಗೂಲಿ ಕಾರ್ಮಿಕರು, ಪ್ರವಾಸಿಗರು ಹೀಗೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಪ್ರೀತಿಯಿಂದ ತಣ್ಣೀರನ್ನು ನೀಡಿ ಇವರ ಮುಖದಲ್ಲಿ ನೆಮ್ಮದಿ ಕಾಣುವುದೇ ಕಡ್ವಾಸರ ಅವರ ದಿನಚರಿ.
ಇದನ್ನೂ ಓದಿ: Roopa Gururaj Column: ಪವಿತ್ರ ಗಂಡಕೀ ನದಿ ಮತ್ತು ದಿವ್ಯ ಸಾಲಿಗ್ರಾಮಗಳ ಪುರಾಣ ಕಥೆ
ಇಂದಿನ ಆಧುನಿಕ ಜಗತ್ತಿನಲ್ಲಿ ಬಿಸ್ಲರಿ ಬಾಟಲಿಗಳಿಗೆ ಹಣ ತೆರಬೇಕಾದ ಪರಿಸ್ಥಿತಿ ಇದೆ. ನೀರು ಕೂಡ ಒಂದು ದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿರುವ ಈ ಕಾಲದಲ್ಲಿ, ಠಾಣಾ ರಾಮ್ ಅವರ ಈ ಕಾರ್ಯ ನಿಜಕ್ಕೂ ಒಂದು ಪವಾಡದಂತೆ ತೋರುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರತಿದಿನ ಬೆಳಗ್ಗೆ ಎದ್ದು, ತಣ್ಣೀರನ್ನು ತುಂಬಿಕೊಂಡು ರಸ್ತೆ ಬದಿಗೆ ಬರುವುದು ಸಾಮಾನ್ಯದ ಮಾತಲ್ಲ. ವಯಸ್ಸು ಎಪ್ಪತ್ತೇಳರ ಗಡಿ ದಾಟಿದ್ದರೂ, ದೇಹ ದಣಿದರೂ, ಅವರ ಮನಸ್ಸಿನಲ್ಲಿರುವ ಸೇವಾ ಮನೋಭಾವ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ.
ಮಾನವ ಜನ್ಮ ಸಿಕ್ಕಿರುವುದು ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಲು. ಒಬ್ಬ ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು ನೀಡುವುದಕ್ಕಿಂತ ಮಿಗಿಲಾದ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂಬುದು ಅವರ ಅಚಲ ನಂಬಿಕೆ. ಇಂದಿನ ದಿನಗಳಲ್ಲಿ ಸಣ್ಣದೊಂದು ಸಮಾಜ ಸೇವೆ ಮಾಡಿ ದರೂ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವವರೇ ಹೆಚ್ಚು. ಆದರೆ, ಕಡ್ವಾಸರ ಅವರು ಇವೆಲ್ಲದರಿಂದ ಬಹುದೂರ. ಅವರ ಹತ್ತಿರ ಯಾವುದೇ ದೊಡ್ಡ ಸಂಘಟನೆಯಿಲ್ಲ, ಸರಕಾರದ ಅನುದಾನವಿಲ್ಲ.
ಕೇವಲ ತಮ್ಮದೇ ಆದ ಪುಟ್ಟ ಸಂಪನ್ಮೂಲಗಳನ್ನು ಬಳಸಿಕೊಂಡು ಈ ಜಲಸೇವೆಯನ್ನು ನಿರಂತರ ವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಬಾಯಾರಿದ ಪ್ರತಿಯೊಬ್ಬ ವ್ಯಕ್ತಿಯ ಮುಖದಲ್ಲಿ ಮೂಡುವ ತೃಪ್ತಿಯ ನಗು ಮತ್ತು ಅವರು ನೀಡುವ ಆಶೀರ್ವಾದವೇ ಅವರಿಗೆ ಸಿಗುವ ಅತಿ ದೊಡ್ಡ ಪ್ರಶಸ್ತಿ. ಸಮಾಜದಲ್ಲಿ ಬದಲಾವಣೆ ತರಲು ದೊಡ್ಡ ಸಂಸ್ಥೆಗಳೇ ಬೇಕಾಗಿಲ್ಲ, ಕೋಟ್ಯಂತರ ರುಪಾಯಿ ಹಣದ ಅಗತ್ಯವಿಲ್ಲ; ಬದಲಿಗೆ ಕೇವಲ ಒಂದು ಶುದ್ಧವಾದ ಮನಸ್ಸು ಮತ್ತು ಸಮಾಜದ ಮೇಲಿನ ಕಾಳಜಿ ಇದ್ದರೆ ಸಾಕು. ಇವರ ಈ ನಿಸ್ವಾರ್ಥ ಸೇವೆ ಕೇವಲ ನೀರು ಕೊಡುವುದಕ್ಕೆ ಮಾತ್ರ ಸೀಮಿತ ವಾಗಿಲ್ಲ, ಬದಲಿಗೆ ಇಂದಿನ ಯುವ ಪೀಳಿಗೆಗೆ ‘ಮಾನವೀಯತೆ’ಯ ನಿಜವಾದ ಅರ್ಥವನ್ನು ತಿಳಿಸುತ್ತಿದೆ.
ರಾಜಸ್ಥಾನದ ತಪ್ತ ಮರು ಭೂಮಿಯಲ್ಲಿ ಕಡ್ವಾಸರ ಅವರು ಕೇವಲ ನೀರಿನ ಬಾಟಲಿಗಳನ್ನು ಹಿಡಿದು ನಿಂತಿಲ್ಲ, ಬದಲಿಗೆ ಜೀವಂತ ಮಾನವೀಯತೆಯ ಸಂಕೇತವಾಗಿ ನಿಂತಿದ್ದಾರೆ. ಇಂತಹ ಪುಣ್ಯಜೀವಿಗೆ ಕೋಟಿ ಕೋಟಿ ನಮನಗಳು. ಯಾರಿಗಾದರೂ ಸಹಾಯ ಮಾಡುವ ಮುನ್ನ ಬಹಳಷ್ಟು ಯೋಚಿಸಬೇಕಾಗಿಲ್ಲ.
ನಾವಿರುವ ಪರಿಸ್ಥಿತಿಯಲ್ಲಿ ನಮ್ಮ ಕೈಲಿ ಏನಾಗುತ್ತದೋ ಅಷ್ಟನ್ನು ಮಾಡಿದರು ಕೂಡ ಅದು ಮತ್ತೊಬ್ಬರಿಗೆ ಸಹಾಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮತ್ತೊಬ್ಬರಿಗೆ ಹಣ ಕೊಡುವುದು ಮಾತ್ರ ಸಹಾಯ ಅಲ್ಲ. ಮನುಷ್ಯರಾಗಿ ಮನುಷ್ಯರೊಂದಿಗೆ ಬದುಕಲು ನಾನಾ ರೀತಿಯ ದಾರಿಗಳಿವೆ. ಅದರಲ್ಲಿ ನಮ್ಮದನ್ನು ನಾವು ಕಂಡುಕೊಂಡರಾಯಿತು.