ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಮೊರಾರ್ಜಿ ಹೇಳಿದ ಆ ಪ್ರಸಂಗ

ಆ ಪರಿಸ್ಥಿತಿಯಲ್ಲಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟುವುದು ಅಸಾಧ್ಯವಾಗಿದ್ದರಿಂದ ವಿಮಾನ ವನ್ನು ಮರಳಿ ಶಾನನ್‌ಗೇ ತರಬೇಕಾಯಿತು. ಒಂದು ಎಂಜಿನ್ ಹಾಳಾಗಿದ್ದರಿಂದ, ವಿಮಾನವನ್ನು ಇಳಿಸುವ ಮುನ್ನ ಅದರಲ್ಲಿರುವ ಎಲ್ಲ ಪೆಟ್ರೋಲ್ ಅನ್ನು ಖಾಲಿ ಮಾಡಬೇಕಾಗಿತ್ತು. ಇಲ್ಲದಿದ್ದರೆ ಅಪಘಾತದ ಭಯವಿತ್ತು. ಈ ವಿಷಯವನ್ನು ಎಲ್ಲ ಪ್ರಯಾಣಿಕರಿಗೂ ತಿಳಿಸಲಾಗಿತ್ತು

ಸಂಪಾದಕರ ಸದ್ಯಶೋಧನೆ

ದಿವಂಗತ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ The Story Of My Life ಪುಸ್ತಕವನ್ನು ಓದುತ್ತಿದ್ದೆ. ಸುಮಾರು ಐವತ್ತೆರಡು ವರ್ಷಗಳ ಹಿಂದೆ ಪ್ರಕಟವಾದ ಈ ಪುಸ್ತಕ ಮೊರಾರ್ಜಿಯವರ ಜೀವನದ ಅನೇಕ ಸಂಗತಿಗಳನ್ನು ಹೇಳುತ್ತವೆ. ಮೊರಾರ್ಜಿಯವರು ಹಣಕಾಸು ಸಚಿವರಾಗಿ ಮೊದಲ ಬಾರಿಗೆ ಲಂಡನ್‌ನಿಂದ ಅಮೆರಿಕಕ್ಕೆ ಹೋದ ಅನುಭವವನ್ನು ಸ್ವಾರಸ್ಯವಾಗಿ ಹಂಚಿ ಕೊಂಡಿದ್ದಾರೆ. ಈ ಘಟನೆಯೇನಾದರೂ ಇಂದು ಸಂಭವಿಸಿದ್ದಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿತ್ತು.

ಅದನ್ನು ಅವರ ಮಾತುಗಳಲ್ಲಿಯೇ ಕೇಳೋಣ-‘ಲಂಡನ್ ಪ್ರವಾಸವನ್ನು ಮುಗಿಸಿದ ನಂತರ ನಾನು ಅಮೆರಿಕಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದೆ. ಲಂಡನ್‌ನಿಂದ ವಾಷಿಂಗ್ಟನ್‌ಗೆ ಸಾಗಿದ ನನ್ನ ಈ ಪ್ರಯಾಣವು ಕೆಲವು ಅಸಾಮಾನ್ಯ ಅನುಭವಗಳನ್ನು ನೀಡಿತು. ನಾನು ಲಂಡನ್‌ನಲ್ಲಿ ರಾತ್ರಿಯ ವೇಳೆ ಬಿ.ಓ.ಎ.ಸಿ (BOAC) ವಿಮಾನವನ್ನು ಹತ್ತಿದೆ.

ನಾವು ನೇರವಾಗಿ ನ್ಯೂಯಾರ್ಕ್‌ಗೆ ಹಾರಬೇಕಿತ್ತು. ಇದು ನನ್ನ ಮೊದಲ ಅಮೆರಿಕ ಪ್ರವಾಸವಾಗಿತ್ತು ಮತ್ತು ಆ ವಿಮಾನದಲ್ಲಿ ಮಲಗುವ ಸೀಟಿನ (sleeping berth) ಸೌಲಭ್ಯವಿದ್ದಿದ್ದರಿಂದ ನಾನು ಒಂದನ್ನು ಕಾಯ್ದಿರಿಸಿದ್ದೆ. ನಾನು ರಾತ್ರಿ ಸುಮಾರು 10 ಅಥವಾ 10.30ರ ಸುಮಾರಿಗೆ ಮಲಗಿದೆ. ರಾತ್ರಿ 1.30ಕ್ಕೆ ನಿದ್ದೆ ಕಣ್ಣು ತೆರೆದಾಗ ವಿಮಾನದಲ್ಲಿ ಸಂಪೂರ್ಣ ನಿಶ್ಯಬ್ದವಿತ್ತು.

ಇದನ್ನೂ ಓದಿ: Vishweshwar Bhat Column: ʼಅಗಸ್ತ್ಯ ನೆರಳುʼ ಎಂದರೇನು ?

ಇದು ನನಗೆ ಆಶ್ಚರ್ಯವನ್ನುಂಟು ಮಾಡಿತು. ನಾನು ನನ್ನ ಸೀಟಿನಿಂದ ಎದ್ದು ನೋಡಿದಾಗ ವಿಮಾನದಲ್ಲಿ ಬೇರೆ ಯಾವುದೇ ಪ್ರಯಾಣಿಕರಿಲ್ಲದಿರುವುದನ್ನು ಕಂಡು ದಿಗ್ಭ್ರಮೆಗೊಂಡೆ. ಅಲ್ಲಿ ಕೇವಲ ಒಬ್ಬಉಸ್ತುವಾರಿ (caretaker) ಮಾತ್ರ ಇದ್ದ. ನಾವು ಎಲ್ಲಿದ್ದೇವೆ ಎಂದು ನಾನು ಅವನನ್ನು ಕೇಳಿದೆ. ನಾವು ‘ಶಾನನ್’ (ಐರ್ಲೆಂಡ್‌ನ ಒಂದು ವಿಮಾನ ನಿಲ್ದಾಣ) ನಲ್ಲಿ ಇಳಿದಿದ್ದೇವೆ ಮತ್ತು ಶೀಘ್ರದ ಇಲ್ಲಿಂದ ಹೊರಡಲಿದ್ದೇವೆ ಎಂದು ಅವನು ತಿಳಿಸಿದ. ಅವನು ಅದಕ್ಕಿಂತ ಹೆಚ್ಚೇನನ್ನೂ ಹೇಳಲಿಲ್ಲ ಮತ್ತು ನಾನೂ ಸಹ ಅವನನ್ನು ಮುಂದಿನ ಯಾವುದೇ ಮಾಹಿತಿ ಕೇಳದೆ ಮತ್ತೆ ಮಲಗಿದೆ.

ಬೆಳಗ್ಗೆ ಏಳು ಗಂಟೆಗೆ ನಾನು ಎದ್ದಾಗಲೂ ವಿಮಾನವು ಹಿಂದಿನ ರಾತ್ರಿ ಎಲ್ಲಿತ್ತೋ ಅ ಇರುವುದನ್ನು ಕಂಡೆ. ಏನಾಗಿದೆಯೆಂದು ನಾನು ವಿಚಾರಿಸಿದಾಗ, ಅಲ್ಲಿದ್ದ ಅಧಿಕಾರಿಯು ವಿಮಾನದಲ್ಲಿ ಏನೋ ತಾಂತ್ರಿಕ ದೋಷ ಕಂಡುಬಂದಿದೆ ಮತ್ತು ಈ ವಿಮಾನವು ಮುಂದೆ ಸಾಗಲು ಸಾಧ್ಯವಿಲ್ಲದ ಕಾರಣ ಉಳಿದ ಎಲ್ಲ ಪ್ರಯಾಣಿಕರು ವಿಮಾನ ನಿಲ್ದಾಣದ ಒಳಗೆ ಹೋಗಿದ್ದಾರೆ ಎಂದು ತಿಳಿಸಿದ. ಲಂಡನ್‌ ನಿಂದ ಮತ್ತೊಂದು ವಿಮಾನ ಬಂದ ನಂತರವಷ್ಟೇ ನಾವು ಮುಂದೆ ಹೋಗಲು ಸಾಧ್ಯವಿತ್ತು.

ನಾನು ಸಹ ವಿಮಾನದಿಂದ ಇಳಿದು, ನನ್ನ ಸಹ-ಪ್ರಯಾಣಿಕರೆಲ್ಲರೂ ಕುಳಿತಿದ್ದ ವಿಮಾನ ನಿಲ್ದಾಣ ದ ಕಡೆಗೆ ಹೋದೆ. ಏನಾಯಿತು ಎಂದು ನಾನು ಅವರನ್ನು ಕೇಳಿದಾಗ, ವಿಮಾನವು ಶಾನನ್ ದಾಟಿ ಸ್ವಲ್ಪ ದೂರ ಹೋದ ತಕ್ಷಣ ಅದರಲ್ಲಿದ್ದ ಎಂಜಿನ್‌ಗಳಲ್ಲಿ ಒಂದು ಕೈಕೊಟ್ಟಿತು ಎಂದು ಅವರು ಹೇಳಿದರು.

ಆ ಪರಿಸ್ಥಿತಿಯಲ್ಲಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟುವುದು ಅಸಾಧ್ಯವಾಗಿದ್ದರಿಂದ ವಿಮಾನ ವನ್ನು ಮರಳಿ ಶಾನನ್‌ಗೇ ತರಬೇಕಾಯಿತು. ಒಂದು ಎಂಜಿನ್ ಹಾಳಾಗಿದ್ದರಿಂದ, ವಿಮಾನವನ್ನು ಇಳಿಸುವ ಮುನ್ನ ಅದರಲ್ಲಿರುವ ಎಲ್ಲ ಪೆಟ್ರೋಲ್ ಅನ್ನು ಖಾಲಿ ಮಾಡಬೇಕಾ ಗಿತ್ತು. ಇಲ್ಲದಿದ್ದರೆ ಅಪಘಾತದ ಭಯವಿತ್ತು. ಈ ವಿಷಯವನ್ನು ಎಲ್ಲ ಪ್ರಯಾಣಿಕರಿಗೂ ತಿಳಿಸಲಾಗಿತ್ತು ಮತ್ತು ಪೆಟ್ರೋಲ್ ಸಂಪೂರ್ಣವಾಗಿ ಖಾಲಿಯಾಗುವವರೆಗೆ ವಿಮಾನವು ಗಾಳಿಯ ಸುತ್ತುತ್ತಿತ್ತು. ನಂತರ ವಷ್ಟೇ ಅದನ್ನು ಶಾನನ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಪ್ರಯಾಣಿಕರಿಗೆ ಈ ತುರ್ತು ಪರಿಸ್ಥಿತಿಯ ಮಾಹಿತಿ ನೀಡಿದಾಗ, ಅದು ನನ್ನ ನಿದ್ದೆಗೆ ಯಾವುದೇ ಭಂಗ ತರಲಿಲ್ಲ ಮತ್ತು ಯಾರೂ ನನ್ನನ್ನು ಎಬ್ಬಿಸಲೂ ಇಲ್ಲ!

ಈ ಘಟನೆಯಿಂದಾಗಿ ಉಳಿದ ಪ್ರಯಾಣಿಕರು ಬಹಳ ಆತಂಕಗೊಂಡಿರಬೇಕು ಮತ್ತು ಹೆದರಿರಬೇಕು. ಆದರೆ ನಾನು ಗಾಢ ನಿದ್ದೆಯಲ್ಲಿದ್ದ ಕಾರಣ ಮತ್ತು ಯಾರೂ ನನ್ನನ್ನು ಎಬ್ಬಿಸದ ಕಾರಣ, ನಾನು ಆ ಎಲ್ಲ ಆತಂಕ ಮತ್ತು ಕಳವಳಗಳಿಂದ ಪಾರಾಗಿದ್ದೆ. ಆ ಸಮಯದಲ್ಲಿ ನಾನು ನಿಜಕ್ಕೂ ಅತ್ಯಂತ ಗಾಢವಾದ ನಿದ್ದೆಯಲ್ಲಿದ್ದಿರಬೇಕು.

ನಾವು ಬೆಳಗ್ಗೆ 11.30ಕ್ಕೆ ಶಾನನ್‌ನಿಂದ ಹೊರಟು ಸಂಜೆ ಸುಮಾರು 5 ಗಂಟೆಗೆ ನ್ಯೂಯಾರ್ಕ್ ತಲುಪಿದೆವು. ಅಲ್ಲಿಂದ ನಾವು ತಕ್ಷಣ ವಾಷಿಂಗ್ಟನ್‌ಗೆ ಹೋಗುವ ವಿಮಾನವನ್ನು ಹಿಡಿಯಬೇಕಾ ಗಿತ್ತು. ನಾನು ಆ ವಿಮಾನದಲ್ಲಿ ಹೋಗಿ ಸೀಟಿನಲ್ಲಿ ಕುಳಿತ ತಕ್ಷಣವೇ, ಆ ವಿಮಾನವು ಹಾರುವುದಿಲ್ಲ ಮತ್ತು ನಾವು ಮತ್ತೊಂದು ವಿಮಾನವನ್ನು ಹತ್ತಬೇಕು ಎಂದು ನಮಗೆ ತಿಳಿಸಲಾಯಿತು. ಸಮಯ ಬಹಳ ಕಡಿಮೆ ಇದ್ದುದರಿಂದ, ನಾವು ಓಡುತ್ತಾ ಹೋಗಿ ಮತ್ತೊಂದು ವಿಮಾನವನ್ನು ಹತ್ತಿ ಕುಳಿತು ಕೊಳ್ಳಬೇಕಾಯಿತು. ಹೀಗಾಗಿ ನಾವು ನಿಗದಿತ ಸಮಯಕ್ಕಿಂತ ಹನ್ನೆರಡು ಗಂಟೆ ತಡವಾಗಿ ವಾಷಿಂಗ್ಟನ್ ತಲುಪಿದೆವು.’

ವಿಶ್ವೇಶ್ವರ ಭಟ್‌

View all posts by this author