ವಿಶ್ಲೇಷಣೆ
ಡಾ.ದಯಾನಂದ ಲಿಂಗೇಗೌಡ
ಇದು ಕೆಲ ವರ್ಷಗಳ ಹಿಂದಿನ ಕಥೆ. ಆಗ್ರಾದಲ್ಲಿ ಸಮ್ಮೇಳನ ಮುಗಿಸಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗಿದ್ದೆವು. ಹಾಗೆಯೇ ಶ್ರೀಕೃಷ್ಣ ಹುಟ್ಟಿದ ಮನೆ ಮತ್ತು ಅದರ ಪರಿಸರವನ್ನು ನೋಡಲು ಗೋಕುಲಕ್ಕೆ ಭೇಟಿ ನೀಡಿದ್ದೆವು. ಆ ಸ್ಥಳವನ್ನು ತಲುಪುತ್ತಿದ್ದಂತೆ ಹಲವಾರು ಸ್ಥಳೀಯರು ನಮ್ಮೊಂದಿಗೆ ಮಾತಿಗಿಳಿದರು, ಸಲಿಗೆಯಿಂದ ನಡೆದುಕೊಳ್ಳಲು ಆರಂಭಿಸಿದರು.
ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ಮಾಹಿತಿ-ಮಾರ್ಗದರ್ಶನ ನೀಡತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಹಣಕ್ಕೆ ಬೇಡಿಕೆಯಿಟ್ಟರು. ಕಾರಣ ಕೇಳಿದಾಗ, ತಾವು ಗೈಡ್ ಕೆಲಸ ಮಾಡಿದ್ದಾಗಿ ಹೇಳಿಕೊಂಡರು. ನಮ್ಮ ಅನುಮತಿಯಿಲ್ಲದೆ ಗೈಡ್ ಪಾತ್ರವನ್ನು ನಿರ್ವಹಿಸಿ ನಂತರ ಹೀಗೆ ಹಣ ಕೇ(ಕೀ) ಳುವುದಿದೆಯಲ್ಲಾ, ಇದೊಂಥರಾ ದಂಧೆ ಅಥವಾ ಗಳಿಕೆಯ ಅಡ್ಡದಾರಿ. ಇದು ಒಬ್ಬರ ಕಥೆಯಲ್ಲ, ಒಂದಿಡೀ ಗೋಕುಲವೇ ‘ಕಳ್ಳರ ಸಂತೆ’ಯಂತೆ ಭಾಸವಾಯಿತು.
ಇನ್ನು, ಕೃಷ್ಣನ ಮನೆಯೊಳಗೆ ಮತ್ತೊಂದು ಅನುಭವ. ನೀವು ದಕ್ಷಿಣದವರು ಎಂಬುದು ಅಲ್ಲಿಯ ಪೂಜಾರಿಗೆ ಗೊತ್ತಾದರೆ ವಿಶೇಷ ಆಸಕ್ತಿ ತೋರಿಸುತ್ತಾರೆ. ಕೃಷ್ಣನ ವಿಗ್ರಹದ ಮುಂಭಾಗದಲ್ಲಿ ಕುಳ್ಳಿರಿಸಿ ಕೆಲವು ಮಂತ್ರಗಳನ್ನು ಜಪಿಸಲು ಹೇಳುತ್ತಾರೆ.
ನಂತರ ನಿಮ್ಮಿಂದ ದೇವರಿಗೆ ಸಲ್ಲಬೇಕಾದ ಕೋರಿಕೆಗಳನ್ನು ಮಾಡಿಸುತ್ತಾರೆ, ಅದೇ ಹರಿವಿನಲ್ಲಿ ‘ದೇವರಿಗೆ ಇಷ್ಟು ಹಣ ಕೊಡುತ್ತೇನೆ’ ಅಂತ ನಿಮ್ಮ ಬಾಯಿಂದ ಹೇಳಿಸಿ ಬಿಡುತ್ತಾರೆ. ಏನಾಗುತ್ತಿದೆಯೆಂಬುದು ನಿಮಗೆ ಅರಿವಾಗುವಷ್ಟರಲ್ಲಿ ಈ ಮಾತು ನಿಮ್ಮಿಂದ ಹೊಮ್ಮಿರುತ್ತದೆ.
ಇದನ್ನೂ ಓದಿ: Roopa Gururaj Column: ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು
ನಂತರ ಧರ್ಮಸಂಕಟ- ‘ಈಗಾಗಲೇ ದೇವರಿಗೆ ಭಾಷೆ ಕೊಟ್ಟಿರುವುದರಿಂದ, ಹಣ ಕೊಡದಿ ದ್ದರೆ ದೇವರು ಮುನಿಸಿಕೊಳ್ಳುವನೇ?’ ಎಂಬ ಭಯ ಒಂದು ಕಡೆ; ಒಂದೊಮ್ಮೆ ಕೊಟ್ಟರೆ ‘ಮೋಸಹೋಗಿಬಿಟ್ಟೆನೇ?’ ಎಂಬ ವಿಷಾದಭಾವ ಇನ್ನೊಂದು ಕಡೆ! ಕೊನೆಯಲ್ಲಿ ಯೋಚಿ ಸುವ ಅವಕಾಶವಿಲ್ಲದೆ ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕೊಲ್ಕತ್ತಾದ ಮೂಲ ಕಾಳಿಮಂದಿರಕ್ಕೂ ಒಮ್ಮೆ ಭೇಟಿ ನೀಡಿದ್ದೆ. ಅಲ್ಲಂತೂ ಯಾವಾಗಲೂ ಜನಸಾಗರ. ಹಣ ಕೊಟ್ಟು ಹೋಗುವ ಪ್ರತ್ಯೇಕ ಸರದಿ ವ್ಯವಸ್ಥೆ ಇಲ್ಲ. ಜನರು ನೂಕು ನುಗ್ಗಲಿನಲ್ಲಿ ಮುಂದಕ್ಕೆ ಸಾಗುತ್ತಿದ್ದಂತೆ ಅಲ್ಲಿನ ಅರ್ಚಕರ ಕಾಟ ಶುರುವಾಗುತ್ತದೆ. ಹಣ ಕೊಟ್ಟರೆ ಸಾಕು ನಿಮ್ಮ ಕೈಹಿಡಿದು, ಸರದಿಯಲ್ಲಿರುವ ಜನರನ್ನು ನೂಕಿ ದೇವರ ಹತ್ತಿರಕ್ಕೆ ಕರೆದೊಯ್ಯುತ್ತಾರೆ.
ಗರ್ಭಗುಡಿಯ ವರೆಗೂ ಹೋಗುವ ಅವಕಾಶ ಸಿಗುತ್ತದೆ. ಆದರೆ ಅಲ್ಲಿ ವಿವಿಧ ಗುಂಪಿನ ಪೂಜಾರಿಗಳ ನಡುವೆಯೇ ಕಿತ್ತಾಟ. ತಮ್ಮೊಂದಿಗೆ ಬಂದ ಭಕ್ತರಿಗೆ ಪೂಜೆಗೆ ಅವಕಾಶ ನೀಡುವ ಸ್ಪರ್ಧೆಯಲ್ಲಿ ನೂಕಾಟ ಶುರುವಾಗುತ್ತದೆ. ದೇವರ ಮುಂದೆಯೇ ಹೀಗೆಲ್ಲಾ ನಡೆಯುವುದನ್ನು ನೋಡಿದಾಗ, ದೇವರ ಮೇಲೆ ಭಕ್ತಿಯಿರಲಿ ಕೋಪ ಬಾರದಿದ್ದರೆ ಅದೇ ನಿಮ್ಮ ಪುಣ್ಯ.
ಪುರಿ ಜಗನ್ನಾಥ ರಥಯಾತ್ರೆಯ ವೇಳೆ ಇನ್ನೊಂದು ವಿಭಿನ್ನ ದೃಶ್ಯವನ್ನು ಕಂಡಿದ್ದೆ. ರಥದ ಮೇಲಿನ ದೇವರಿಗೆ ಹಾಕಿರುವ ಮಾಲೆಯನ್ನು ಪಡೆಯಲು ಭಕ್ತರಲ್ಲಿ ಪೈಪೋಟಿಯಿರುತ್ತದೆ. ಇದನ್ನು ದುರುಪಯೋಗ ಪಡಿಸಿಕೊಳ್ಳುವ ರಥದ ಮೇಲಿನ ಪೂಜಾರಿಗಳು, ಹಾರವನ್ನು ನಿಯತವಾಗಿ ಬದಲಾಯಿಸುತ್ತಿರುತ್ತಾರೆ.
ದೇವರ ಮೇಲಿಂದ ತೆಗೆದ ಹಾರವನ್ನು ಅಲ್ಲೇ ಜನಸಾಗರದಲ್ಲಿ ಹರಾಜುಮಾಡುತ್ತಾರೆ. ಬೆರಳೆತ್ತುವ ಸನ್ನೆಯ ಮೂಲಕ, ಯಾರ ಬೆಲೆ ಹೆಚ್ಚು ಎಂದು ತಿಳಿದು ಕೊಳ್ಳುತ್ತಾರೆ. ಸುತ್ತಮುತ್ತ ನಿಂತಿರುವ ಪೊಲೀಸರ ಮೂಲಕ ಆ ಮಾಲೆಯು ಅವರಿಗೆ ತಲುಪುತ್ತದೆ, ಹಣದ ವಿನಿಮಯವೂ ಅಲ್ಲೇ ನಡೆಯುತ್ತದೆ.
ಇವೆಲ್ಲವೂ ರಾಷ್ಟ್ರೀಯ ವಾಹಿನಿಗಳ ಕ್ಯಾಮರಾಗಳ ಮುಂದೆ ನಡೆಯುತ್ತಿದ್ದರೂ ಯಾರಿಗೂ ಸಂಕೋಚವಿರುವುದಿಲ್ಲ. ಈ ಹಣವು ಮಂದಿರಕ್ಕೆ ಹೋಗುವುದಿಲ್ಲ ಎಂಬುದು ಸ್ಪಷ್ಟ. ಸಾಮಾನ್ಯ ದಿನಗಳಲ್ಲಿ ಪುರಿ ಜಗನ್ನಾಥ ಮಂದಿರಕ್ಕೆ ಹೋದರೂ ಇದೇ ಗೊಂದಲ. ಜನರು ಒಬ್ಬರನ್ನೊಬ್ಬರು ತಳ್ಳುತ್ತಾ ಸಾಗುವ ಗೋಜಿನಲ್ಲಿ ಗರ್ಭಗುಡಿಯ ದೇವರ ಕ್ಷಣಮಾತ್ರದ ದರ್ಶನವಾಗುತ್ತದೆ.
ದೇವರಿಗೆ ಅರ್ಪಿಸಲು ಕೈಯಲ್ಲಿ ಹಿಡಿದ ಹಣವನ್ನು ಭಕ್ತರು ಹುಂಡಿಗೆ ಹಾಕುವ ಮೊದಲು ಪೂಜಾರಿಗಳೇ ಕಿತ್ತುಕೊಳ್ಳುವ ದೃಶ್ಯ ಸಾಮಾನ್ಯ. ಈ ಎಲ್ಲಾ ಅನುಭವದ ನಂತರ ದೇವರ ಮುಂದೆ ಬಂದ ತೃಪ್ತಿ ಇಲ್ಲದೆಯೇ ಹೊರಗೆ ಬರಬೇಕಾಗುತ್ತದೆ. ಅಲ್ಲದೆ, ‘ಭೋಗ್’ ಎಂದು ಕರೆಯಲ್ಪಡುವ ಪ್ರಸಾದದ ಮಾರಾಟವೂ ಅವ್ಯವಸ್ಥಿತ. ಸ್ವಚ್ಛತೆಯು ನಿರೀಕ್ಷೆಯಂತಿರುವು ದಿಲ್ಲ.
ಇವನ್ನೆಲ್ಲ ನೋಡಿದಾಗ, ‘ತನ್ನ ಮುಂದೆಯೇ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ಗಮನವಿಲ್ಲದ ದೇವರು ನಮ್ಮನ್ನು ಕಾಪಾಡುತ್ತಾನೆಯೇ?’ ಎಂಬ ಆಲೋಚನೆ ಮೂಡು ತ್ತದೆ. ಇಂಥ ಘಟನೆಗಳನ್ನು ಕಂಡಾಗ, ನಮ್ಮನ್ನು ನಾವೇ ಸಮಾಧಾನಿಸಿ ಕೊಳ್ಳಬೇಕಾಗು ತ್ತದೆ.
ತಾವು ದಿನವೂ ಪೂಜಿಸುವ ದೇವರ ಮಹತ್ವವು ಬಹುಶಃ ಪೂಜಾರಿಗಳಿಗೆ ಗೊತ್ತಾಗುವು ದಿಲ್ಲವೇನೋ? ಹೋಲಿಕೆಯೊಂದಿಗೆ ಸರಳವಾಗಿ ಹೇಳುವುದಾದರೆ, ಎಷ್ಟು ಹೊತ್ತು ಸಾರಿ ನಲ್ಲೇ ಮುಳುಗಿದ್ದರೂ ಸೌಟಿಗೆ ಅದರ ರುಚಿ ಸಿಗುವುದಿಲ್ಲ; ಹಾಗೆಯೇ ಗರ್ಭಗುಡಿಯಲ್ಲಿ ದೇವರ ಸಾಂಗತ್ಯದಲ್ಲೇ ಇದ್ದವರಿಗೆ ಅಲ್ಲಿನ ದಿವ್ಯತೆಯ ಅನುಭವವೇ ಆಗದಿರಬಹುದು. ಅಧರ್ಮದ ನಡವಳಿಕೆಯಿಂದ ಆಗುವ ಲೋಪವನ್ನು ಧಾರ್ಮಿಕ ಆಚರಣೆಗಳಿಂದ ನಿವಾರಿಸಿಕೊಳ್ಳಬಹುದು ಎಂಬ ನಂಬಿಕೆಯೂ ಇದಕ್ಕೆ ಕಾರಣವಾಗಿರಬಹುದು.
‘ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು’ ಎಂಬ ಉದಾತ್ತ ಅರಿವನ್ನು ಇಂಥವರಲ್ಲಿ ಹುಡುಕುವುದು ತಪ್ಪೇ ಬಿಡಿ! ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಇಂಥ ಅವ್ಯವಸ್ಥೆಗಳು ಕಡಿಮೆ; ಇಲ್ಲಿ ಬಹುತೇಕ ಕಡೆ ಅರ್ಚಕರು ನಿಷ್ಠೆಯಿಂದ ನಡೆದು ಕೊಳ್ಳು ತ್ತಾರೆ, ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡುತ್ತಾರೆ. ಜನದಟ್ಟಣೆ ಇರುವ ಕಡೆ ಹಣ ಕೊಟ್ಟು ದರ್ಶನ ಮಾಡುವ ವ್ಯವಸ್ಥೆ ಒಂದು ರೀತಿಯಲ್ಲಿ ಒಳ್ಳೆಯದೇ.
ದೇವಾಲಯಗಳಲ್ಲಿ, ದೈವಸಾನ್ನಿಧ್ಯಕ್ಕೆ ಇಂಬುಕೊಡುವಂಥ ಮತ್ತು ಅದರ ಮಹತ್ವವನ್ನು ಮನವರಿಕೆ ಮಾಡಿಕೊಡುವಂಥ ಶಾಂತವಾದ ವಾತಾವರಣ ಇರಬೇಕಾದ್ದು ಮುಖ್ಯ. ಇದು ಕೇರಳದ, ಹೆಚ್ಚು ಪ್ರಸಿದ್ಧವಲ್ಲದ ಸಣ್ಣ ದೇಗುಲಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಅಲ್ಲಿನ ಹಳೆಯ ದೇವಳಗಳಲ್ಲಿ ಸಂಪ್ರದಾಯದಂತೆ ಗರ್ಭಗುಡಿಯಲ್ಲಿ ಕೃತಕ ಬೆಳಕುಗಳ ಬಳಕೆ ಕಡಿಮೆ. ದಿವ್ಯತೆಯನ್ನು ಹೆಚ್ಚಿಸಲು ಇಂಥ ಇನ್ನೂ ಅನೇಕ ಅಂಶಗಳು ಪೂರಕವಾಗುತ್ತವೆ.
ದೇವಾಲಯಕ್ಕೆ ಹೋದಾಗ ಮನಸ್ಸಿಗೆ ಸಮಾಧಾನವೆನಿಸಿದರೆ, ಹುಂಡಿಗೆ ಹಣ ಹಾಕುವುದಕ್ಕೆ ಯಾರೂ ಹಿಂಜರಿಯುವುದಿಲ್ಲ. ಈಗ ಮುಜರಾಯಿ ದೇಗುಲಗಳಲ್ಲಿ, ‘ಮಂಗಳಾರತಿ ತಟ್ಟೆಗೆ ಹಾಕಿದ ಹಣ ಅರ್ಚಕರಿಗೆ, ಹುಂಡಿಗೆ ಹಾಕಿದ ಹಣ ದೇವರಿಗೆ’ ಎಂಬ ಗ್ರಹಿಕೆ ಸಾಮಾನ್ಯ. ದೇವರಿಗೆ ನಮ್ಮ ಹಣದ ಅವಶ್ಯಕತೆಯಿಲ್ಲ, ಆದರೆ ಅರ್ಚಕರಿಗೆ ಖಂಡಿತ ಇರುತ್ತದೆ.
ಕಾರಣ, ಅವರು ಲೌಕಿಕದ ಅವಶ್ಯಕತೆಗಳನ್ನು ಪೂರೈಸಿಕೊಂಡರೆ ನಿಯೋಜಿತ ಕೆಲಸದ ಬಗ್ಗೆ ಗಮನ ಕೊಡಬಹುದು. ಅರ್ಚಕರು ವೃತ್ತಿನಿಷ್ಠರಾಗಿದ್ದರೆ ದೇಗುಲದಲ್ಲಿನ ವ್ಯವಸ್ಥೆ/ಸ್ವಚ್ಛತೆ ಉತ್ತಮವಾಗಿರುತ್ತದೆ, ಭಕ್ತರಿಗೂ ಮನಶ್ಶಾಂತಿ ಸಿಗುತ್ತದೆ. ಹಾಗಾಗಿ ಭಕ್ತರು ದೇಗುಲದ ಹುಂಡಿಗೆ ಮಾತ್ರವಲ್ಲದೆ, ಆರತಿ ತಟ್ಟೆಗೂ ಹಣವನ್ನು ಹಾಕುವುದು ಮುಖ್ಯ.
ಆದರೆ ಇತ್ತೀಚೆಗೆ, ಡಿಜಿಟಲ್ ಪಾವತಿ ಹೆಚ್ಚಾದ ಕಾರಣ ಚಿಲ್ಲರೆಯ ಸಮಸ್ಯೆ ಉಂಟಾಗಿದೆ. ಎಟಿಎಂಗಳಲ್ಲಿ ಬಹುತೇಕವಾಗಿ ಸಿಗುವುದು ದೊಡ್ಡ ಮುಖಬೆಲೆಯ ನೋಟುಗಳೇ. ಹೀಗಾಗಿ ಮೊದಲಿನಂತೆ ಈಗ ಕಿಸೆಯಲ್ಲಿ ಚಿಲ್ಲರೆ ಹಣ ಇರುವುದಿಲ್ಲ. ಹಾಗಂತ ಪ್ರತಿ ಬಾರಿಯೂ ದೊಡ್ಡ ನೋಟುಗಳನ್ನು ದಕ್ಷಿಣೆಯಾಗಿ ಹಾಕುವುದು ಭಕ್ತರಿಗೆ ಕಷ್ಟವಾಗುತ್ತದೆ.
ಅರ್ಚಕರಿಗೆ ವೈಯಕ್ತಿಕ ‘ಕ್ಯೂಆರ್’ ಕೋಡ್ ಲಗತ್ತಿಸಲು ಅವಕಾಶವಿಲ್ಲದ ಕಾರಣ ನೇರ ವಾಗಿ ಕೊಡುವುದು ಕಷ್ಟ. ಅಪರೂಪಕ್ಕೆ ಹೋಗುವ ದೇಗುಲಗಳಲ್ಲಾದರೆ ನೋಟು ನೀಡ ಬಹುದು; ಆದರೆ ಪದೇಪದೆ ಹೋಗುವ ದೇಗುಲಗಳಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ ಬರಿಗೈಯಲ್ಲಿ ಆರತಿ ತೆಗೆದುಕೊಳ್ಳಲು ಮುಜುಗರ.
ಇತ್ತೀಚೆಗೆ ಆಸ್ಪತ್ರೆಯೊಂದರ ಕನಕಪುರ ಶಾಖೆಯ ಉದ್ಘಾಟನೆ ನಡೆಯಿತು. ಆಗ ಹಲವು ದೇವರ ವಿಗ್ರಹಗಳನ್ನು ತರಿಸಿ ವಿಜೃಂಭಣೆಯಿಂದ ಪೂಜೆ ಮಾಡಲಾಗಿತ್ತು. ಇದನ್ನು ಕಂಡ ರೋಗಿಗಳು, ‘ವೈದ್ಯರು ದೇವರನ್ನು ನಂಬುತ್ತಾರಾ?’ ಎಂದು ಆಶ್ಚರ್ಯಪಟ್ಟರು. ವೈದ್ಯರು ದೇವರನ್ನು ನಂಬುವುದಿಲ್ಲ ಎಂಬ ಅಭಿಪ್ರಾಯ ಜನರಲ್ಲಿ ಸಾಮಾನ್ಯವಾಗಿ ಇರಬಹುದು; ಆದರೆ ವೈದ್ಯರೂ ಜನರ ನಡುವಿಂದಲೇ ಬಂದವರೇ.
ಇವರಲ್ಲಿ ಕೆಲವರು ದೇವರನ್ನು ಗಾಢವಾಗಿ ನಂಬಿದರೆ, ಮತ್ತೆ ಕೆಲವರು ಎಷ್ಟು ಬೇಕೋ ಅಷ್ಟು ನಂಬುತ್ತಾರೆ. ಕೆಲ ವೈದ್ಯರು ಪ್ರತಿ ಶಸಚಿಕಿತ್ಸೆಗೂ ಮುನ್ನ ದೇವರನ್ನು ಪ್ರಾರ್ಥಿಸು ತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಸಂಕಷ್ಟದಲ್ಲಿದ್ದಾನೆಂಬ ಸುದ್ದಿ ಬಂದಾಗಲೂ ‘ಈ ಜೀವ ಉಳಿಯಲಿ’ ಎಂದು ದೇವರನ್ನು ಮೊರೆಯಿಡುವ ವೈದ್ಯರಿದ್ದಾರೆ. ರೋಗಿಯ ನೋವನ್ನು ಹಂಚಿಕೊಳ್ಳುವವರೂ ಇದ್ದಾರೆ. ನಿದ್ರೆಯನ್ನು ಕೈಬಿಟ್ಟು ಹಗಲು-ರಾತ್ರಿ ಕಳವಳದಿಂದ ಕಳೆಯುವ ವೈದ್ಯರಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ, ಎಲ್ಲ ಪ್ರಯತ್ನ ಗಳ ಬಳಿಕವೂ ರೋಗಿ ಕೈತಪ್ಪಿದರೆ, ಆ ನೋವು ಅವರನ್ನು ಇನ್ನಿಲ್ಲದಂತೆ ಕಾಡುವುದಿದೆ. ಇಂಥ ವೇಳೆ ಕೆಲವರು ಮೌನವಾಗಿ ಅಳುತ್ತಾರೆ.
ಮಾನವ ದೇಹದಲ್ಲಿರುವ ಲಕ್ಷಾಂತರ ರಾಸಾಯನಿಕ ಕ್ರಿಯೆಗಳು ಇಂದಿಗೂ ವೈದ್ಯರನ್ನು ವಿಸ್ಮಯಗೊಳಿಸುತ್ತವೆ. ಮಾನವ ದೇಹದೊಳಗಿದ್ದು ನೈಸರ್ಗಿಕವಾಗಿ ಕೆಲಸ ಮಾಡುವ ಅಂಗಗಳನ್ನು ಸಂಪೂರ್ಣ ಹೋಲುವಂತೆ ತಯಾರಿಸಲು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ದೇಹದ ಈ ಅದ್ಭುತ ವಿಜ್ಞಾನವನ್ನು ಕಂಡಿರುವ ಯಾವ ವೈದ್ಯನೂ ದೇವರನ್ನು ಧಿಕ್ಕರಿಸ ಲಾರ.
ಇನ್ನು, ‘ಶರೀರೇ ಜರ್ಜರೀಭೂತೇ, ವ್ಯಾಽಗ್ರಸ್ತೇ ಕಳೇಬರೇ| ಔಷಧಂ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ||’ ಎಂಬ ಶ್ಲೋಕಕ್ಕೆ ಬರೋಣ. ‘ಶರೀರಕ್ಕೆ ಮುಪ್ಪಡರಿದಾಗ, ಕಾಯಿಲೆಗಳು ಕಾಡಿದಾಗ ಗಂಗಾಜಲವೇ ಔಷಧ, ನಾರಾಯಣನೇ ವೈದ್ಯ’ ಎಂಬುದು ಇದರ ಅರ್ಥ. ಈ ಶ್ಲೋಕದಲ್ಲಿ ವೈದ್ಯನನ್ನು ‘ನಾರಾಯಣನಂತೆ’ ಎಂದು ಹೇಳಿಲ್ಲ, ಬದಲಿಗೆ ‘ಕೊನೆಗಾಲದಲ್ಲಿ ನಾರಾಯಣನೇ ನಿಜವಾದ ವೈದ್ಯ’ ಎಂದು ಹೇಳಲಾಗಿದೆ.
‘ವೈದ್ಯರೇ ದೇವರು’ ಎನ್ನುವ ರೋಗಿಗಳು ಉಂಟು. ಅಹಂಕಾರಿ ವೈದ್ಯರಿರಬಹುದು, ಆದರೆ ‘ನಾನೇ ದೇವರು’ ಎಂದುಕೊಳ್ಳುವ ವೈದ್ಯನನ್ನು ನಾನು ಕಂಡಿಲ್ಲ!
ವಿಜ್ಞಾನಕ್ಕೆ ಇದುವರೆಗೆ ದೇವರ ಅಸ್ತಿತ್ವವನ್ನು ಸಾಬೀತುಪಡಿಸಲೂ ಆಗಿಲ್ಲ ಅಥವಾ ತಳ್ಳಿ ಹಾಕಲೂ ಆಗಿಲ್ಲ. ಆದರೆ ಅದು, ದೇವರಂಥ ಯಾವುದೋ ಅಜ್ಞಾತ ಶಕ್ತಿಯ ಅಸ್ತಿತ್ವ ವಿರುವುದನ್ನು ವಿಭಿನ್ನ ಪರಿಕಲ್ಪನೆಗಳ ಮೂಲಕ ಒಪ್ಪಿಕೊಳ್ಳುತ್ತದೆ. ಅದರ ಒಂದು ಉದಾಹರಣೆಯಾಗಿ ‘ಥರ್ಡ್ ಮ್ಯಾನ್ ಸಿಂಡ್ರೋಮ್’ ಎಂಬ ಪರಿಕಲ್ಪನೆ ಮನೋ ವಿಜ್ಞಾನ ದಲ್ಲಿದೆ.
ದುರ್ಗಮ ಪರ್ವತದ ಆರೋಹಿಗಳು ಅಥವಾ ಅಂಟಾರ್ಕ್ಟಿಕಾದಂಥ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡ ಅನೇಕರು ತಮ್ಮ ಜತೆಯಲ್ಲಿ ಯಾವುದೋ ಮೂರನೇ ವ್ಯಕ್ತಿ ಇದ್ದಂಥ, ಆಪ್ತಶಕ್ತಿಯೊಂದು ಮಾರ್ಗದರ್ಶನ ಮಾಡುತ್ತಿದ್ದಂಥ ಅನುಭವವನ್ನು ಹೊಂದಿರುವುದಾಗಿ ಹೇಳಿರುವುದುಂಟು. ಈ ಅನುಭವವನ್ನು ವಿಜ್ಞಾನಲೋಕದಲ್ಲಿ ದಾಖಲಿಸಲಾಗಿದೆ. ನಂಬಿಕೆಯ ದೃಷ್ಟಿಯಲ್ಲಿ ನೋಡಿದರೆ ಇದು- ದೇವರ ಕಲ್ಪನೆಯೇ ಆಗಿದೆ ಎನ್ನಬಹುದು.
ಕೊನೆಯ ಮಾತು: ಅನೇಕರಿಗೆ, ಎಲ್ಲೆಡೆ ಪ್ರತ್ಯಕ್ಷನಾಗುವ ದೇವರ ಪರಿಕಲ್ಪನೆ ಅಸಂಭವ ಎಂದು ತೋರುತ್ತದೆ. ಆದರೆ, ಇತ್ತೀಚೆಗೆ ನೊಬೆಲ್ ಪುರಸ್ಕಾರವನ್ನು ಪಡೆದ ‘ಕ್ವಾಂಟಮ್ ಟನಲಿಂಗ್’ ಭೌತಶಾಸದ ತತ್ವವು ಅದಕ್ಕೆ ವೈಜ್ಞಾನಿಕ ವಿವರಣೆ ನೀಡಿ ‘ಇದು ಸಾಧ್ಯ’ ಎನ್ನುತ್ತದೆ. ಈ ನಿಯಮದ ಪ್ರಕಾರ, ‘ವಸ್ತುಗಳು ತರಂಗಗಳಾಗಿ ರೂಪಾಂತರಗೊಂಡರೆ ಯಾವುದೇ ಬಾಹ್ಯ ಅಡೆತಡೆಗಳು ಇರುವುದಿಲ್ಲ; ತರಂಗದ ರೂಪ ಪಡೆದ ಯಾವುದೇ ವಸ್ತುವು, ಯಾವುದೇ ಸ್ಥಳದಲ್ಲಿ ಏಕಾಏಕಿ ಕಾಣಿಸಿಕೊಳ್ಳಬಹುದು ಮತ್ತು ಮಾಯವಾಗ ಬಹುದು’. ‘ಇದನ್ನು ಎಲ್ಲೋ ಕೇಳಿದ ಹಾಗಿದೆಯಲ್ಲಾ..’ ಎಂದು ನಿಮಗೆ ಅನಿಸುತ್ತಿರ ಬಹುದು.
ಬಹುಶಃ ವಿಜ್ಞಾನವು ಅದನ್ನು ‘ಕ್ವಾಂಟಮ್ ಫಿಸಿಕ್ಸ್’ ಎಂದು ಕರೆಯುತ್ತದೆ; ಆದರೆ ಆಸ್ತಿಕ ಮಹಾಶಯರು ‘ಸರ್ವಾಂತರ್ಯಾಮಿ ಶಕ್ತಿ’ ಎನ್ನುತ್ತಾರೆ. ಭಾಷೆ ಮಾತ್ರ ಬೇರೆ, ಆದರೆ ಭಾವ ಒಂದೇ!
(ಲೇಖಕರು ರೇಡಿಯಾಲಜಿಸ್ಟ್)