ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

M J Akbar Column: ಐದು ಸಮುದ್ರಗಳ ನಡುವಿನ 21ನೇ ಶತಮಾನದ ಯುದ್ಧ

ಯುರೇಷಿಯಾದಿಂದ ಹಿಡಿದು ಮಧ್ಯ ಏಷ್ಯಾದವರೆಗೆ ಬೇರೆ ಬೇರೆ ಯುದ್ಧಗಳು ಬೇರೆ ಬೇರೆ ಕಾರಣಕ್ಕೆ ನಡೆಯುತ್ತಿವೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಬೆಂಕಿಯುಗುಳುತ್ತಿದೆ. 2022ರಲ್ಲಿ ಮೊದಲಿಗೆ ಉಕ್ರೇನ್‌ನಲ್ಲಿ ರಷ್ಯಾ ಬೆಂಕಿ ಹಚ್ಚಿತು. 2023ರಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಹಮಾಸ್ ಬಂಡುಕೋರರು ಇನ್ನೊಂದು ಕಡೆ ಬೆಂಕಿ ಹಚ್ಚಿದರು.

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

20ನೇ ಶತಮಾನವನ್ನು ನಾವು ನೆನಪಿಸಿಕೊಳ್ಳುವುದು ವಿಶ್ವ ಮಹಾಯುದ್ಧಗಳಿಂದಾಗಿ. ಅವುಗಳನ್ನು ವಿಶ್ವ ಮಹಾಯುದ್ಧ ಎಂದು ಕರೆದಿರುವುದು ಆ ಯುದ್ಧದಲ್ಲಿ ಇಡೀ ಜಗತ್ತು ಭಾಗಿಯಾಗಿತ್ತು ಎಂಬ ಕಾರಣಕ್ಕಾಗಿ ಅಲ್ಲ, ಬದಲಿಗೆ ಪಾಶ್ಚಾತ್ಯ ಸಾಮ್ರಾಜ್ಯಗಳು ಜಗತ್ತನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯುದ್ಧ ನಡೆಸುತ್ತಿದ್ದವು ಎಂಬ ಕಾರಣಕ್ಕಾಗಿ. ಆಗ ಒಂದು ದೇಶವನ್ನು ವಶಪಡಿಸಿಕೊಳ್ಳುವ ಉದ್ದೇಶ ದಿಂದ ಇನ್ನೊಂದು ದೇಶವು ಯುದ್ಧ ಸಾರುವುದು ನ್ಯಾಯಸಮ್ಮತವೇ ಆಗಿತ್ತು.

ಬ್ರಿಟಿಷ್ ಸಾಮ್ರಾಜ್ಯವು ಜಗತ್ತಿನ ಮೇಲೆ ನಿಯಂತ್ರಣ ಸಾಧಿಸಲು ಎಲ್ಲ ಅನೈತಿಕ ಮಾರ್ಗಗಳನ್ನೂ ಬಳಸುತ್ತಿತ್ತು. ಆದರೆ, ಯಾವತ್ತೂ ಅದು ಅಕ್ರಮ ಮಾರ್ಗಗಳನ್ನು ಬಳಸುತ್ತಿರಲಿಲ್ಲ. ಈಗ 21ನೇ ಶತಮಾನ ಕೂಡ ಜಗತ್ತಿನಾದ್ಯಂತ ಯುದ್ಧಗಳಿಗೆ ಸಾಕ್ಷಿಯಾಗಿದೆ. ಎಲ್ಲರೂ ತಮ್ಮ ತಮ್ಮ ಉದ್ದೇಶದ ಸಾಧನೆಗಾಗಿ ಯುದ್ಧ ಮಾಡುತ್ತಿದ್ದಾರೆ. ಹೀಗಾಗಿ, ಕಳೆದ ಎಂಟು ದಶಕಗಳ ಕಾಲ ಕಾಯ್ದುಕೊಂಡು ಬಂದಿದ್ದ ಸ್ಥಿರತೆ ಈಗ ಕರಗುತ್ತಿದೆ.

ಯುರೇಷಿಯಾದಿಂದ ಹಿಡಿದು ಮಧ್ಯ ಏಷ್ಯಾದವರೆಗೆ ಬೇರೆ ಬೇರೆ ಯುದ್ಧಗಳು ಬೇರೆ ಬೇರೆ ಕಾರಣಕ್ಕೆ ನಡೆಯುತ್ತಿವೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಬೆಂಕಿಯುಗುಳುತ್ತಿದೆ. 2022ರಲ್ಲಿ ಮೊದಲಿಗೆ ಉಕ್ರೇನ್‌ನಲ್ಲಿ ರಷ್ಯಾ ಬೆಂಕಿ ಹಚ್ಚಿತು. 2023ರಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಹಮಾಸ್ ಬಂಡುಕೋರರು ಇನ್ನೊಂದು ಕಡೆ ಬೆಂಕಿ ಹಚ್ಚಿದರು.

ರೊಚ್ಚಿಗೆದ್ದ ಇಸ್ರೇಲ್ ಆ ದಿನದಿಂದ ಆರಂಭಿಸಿ ಪ್ಯಾಲೆಸ್ತೀನಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಗಾಜಾ ಪಟ್ಟಿಯನ್ನು ಅಕ್ಷರಶಃ ನರಕವನ್ನಾಗಿಸಿದೆ. ಅಲ್ಲಿ ಈವರೆಗೆ 75000 ಜನರು ಸತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅಮೆರಿಕದ ಮನವೊಲಿಸಿದ ಇಸ್ರೇಲ್, ಆ ದೇಶದ ನೆರವಿ ನೊಂದಿಗೆ ಇರಾನ್ ಮೇಲೆ ದಾಳಿ ನಡೆಸಿತು. ಆ ಯುದ್ಧ ಲೆಬನಾನ್‌ಗೂ ಹರಡಿತು. ಮಧ್ಯಪ್ರಾಚ್ಯದ ಈ ಯುದ್ಧದ ಅಡ್ಡಪರಿಣಾಮ ಭೀಕರವಾಗಿದೆ.

ಇದನ್ನೂ ಓದಿ: MJ Akbar: ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂಜೆ ಅಕ್ಬರ್‌ ನೂತನ ಕೃತಿ ಬಿಡುಗಡೆ

ಡೊನಾಲ್ಡ್ ಟ್ರಂಪ್ ಅವರ ಆಪ್ತಮಿತ್ರ ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ. 2021ರ ಆಗಸ್ಟ್ 30ರಂದು ಅಫ್ಘಾನಿಸ್ತಾನದ ಬಗ್ರಾಮ್ ಸೇನಾನೆಲೆಯಿಂದ ಅಮೆರಿಕದ ಸೈನಿಕರು ಮರಳಿ ಹೋದ ನಾಲ್ಕು ವರ್ಷಗಳ ಬಳಿಕ ಈಗ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಕೊನೆಯ ವರದಿಗಳು ಬಂದಾಗ ಪಾಕಿಸ್ತಾನವು ಅಫ್ಘಾನಿಸ್ತಾನದ ಒಳಗೆ 14 ಕಿ.ಮೀ.ಯಷ್ಟು ನುಗ್ಗಿದೆ. ಅಂದರೆ ಈ ಯುದ್ಧ ಇನ್ನೂ ಬಹಳ ಕಾಲ ನಡೆಯುವುದಿದೆ.

ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ ಈಗಷ್ಟೇ ಕತಾರ್, ಸೌದಿ, ಯುಎಇ ಮತ್ತು ಜೋರ್ಡನ್ ದೇಶಗಳಿಗೆ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ನೀವು ಹಣ ಕೊಡುವುದಾದರೆ ನಾನು ಡ್ರೋನ್ ಕೊಡುವುದಕ್ಕೆ ಸಿದ್ಧ ಎಂದು ಆ ದೇಶಗಳ ನಾಯಕರಿಗೆ ಹೇಳಿದ್ದಾರೆ. ವರದಿಗಳ ಪ್ರಕಾರ, ಮಧ್ಯಪ್ರಾಚ್ಯದ ಯುದ್ಧದಲ್ಲಿ ರಷ್ಯಾದ ಉಪಗ್ರಹಗಳನ್ನು ಬಳಸಿ ಇರಾನಿಯನ್ನರು ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ.

ಉಕ್ರೇನ್‌ನಲ್ಲಿ ಆರಂಭವಾದ ಯುದ್ಧ ಈಗ ಐದು ಸಮುದ್ರಗಳ ಯುದ್ಧವಾಗಿ ಬೆಳೆದಿದೆ. ಮೆಡಿಟರೇನಿ ಯನ್ ಸಮುದ್ರ, ಕಪ್ಪು ಸಮದ್ರ, ಕ್ಯಾಸ್ಪಿಯನ್ ಸಮುದ್ರ, ಕೆಂಪು ಸಮದ್ರ ಮತ್ತು ಅರಬ್ಬಿ ಸಮುದ್ರ ಗಳಲ್ಲೀಗ ಯುದ್ಧ ನಡೆಯುತ್ತಿದೆ. ಪ್ರತಿಯೊಂದಕ್ಕೂ ಕಾರಣ ಬೇರೆ. ಆದರೆ, 1946ರಲ್ಲಿ ಏರ್ಪಟ್ಟಿದ್ದ ವಿಶ್ವ ಸಂಸ್ಥೆಯ ಒಪ್ಪಂದ ಮುರಿದು ಬಿದ್ದ ಪರಿಣಾಮವಾಗಿಯೇ ಈ ಎಲ್ಲ ಯುದ್ಧಗಳು ಆರಂಭ ವಾಗಿವೆ.

ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಏರ್ಪಟ್ಟ ಒಪ್ಪಂದದಲ್ಲಿ ಇನ್ನು ಮುಂದೆ ಜಗತ್ತಿನ ಪ್ರತಿಯೊಂದು ದೇಶದ ಸಾರ್ವಭೌಮತ್ವವನ್ನು ಇನ್ನೊಂದು ದೇಶ ಗೌರವಿಸಬೇಕು ಎಂಬ ನಿಯಮವನ್ನು ಎಲ್ಲ ದೇಶಗಳೂ ಒಪ್ಪಿದ್ದವು. ಮಾನವ ಕುಲದ ಇತಿಹಾಸದಲ್ಲೇ ಆಗ ಮೊದಲ ಬಾರಿಗೆ ಒಂದು ದೇಶದ ಮೇಲೆ ಇನ್ನೊಂದು ದೇಶವು ಯುದ್ಧ ನಡೆಸುವುದನ್ನು ಅಕ್ರಮ ಎಂದು ಒಪ್ಪಿಕೊಳ್ಳಲಾಗಿತ್ತು.

ಆ ಒಪ್ಪಂದವೀಗ ಮುರಿದುಬಿದ್ದಿದೆ. ನಿಯಮವನ್ನು ಉಲ್ಲಂಸಿ ಒಬ್ಬರ ಮೇಲೊಬ್ಬರು ಯುದ್ಧ ನಡೆಸುತ್ತಿದ್ದಾರೆ. ಬ್ರಿಟನ್‌ನ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಈ ಹಿಂದೆಯೇ ಇದನ್ನೂ ಊಹಿಸಿದ್ದರು. 1981ರಲ್ಲಿ ಇರಾಕ್‌ನ ಪರಮಾಣು ಸ್ಥಾವರದ ಮೇಲೆ ಇಸ್ರೇಲ್ ದಾಳಿ ನಡೆಸಿದಾಗ ‘ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ಥ್ಯಾಚರ್ ಹೇಳಿದ್ದರು. ಅಂದು ‘ಜೂಯಿಷ್ ಕ್ರೋನಿಕಲ್ ಪತ್ರಿಕೆಗೆ ಆಕೆ ನೀಡಿದ್ದ ಸಂದರ್ಶನದ ಒಂದೊಂದು ಅಕ್ಷರವೂ ಕಲ್ಲಿನಲ್ಲಿ ಕೆತ್ತಿಡುವಂತಿದೆ.’

‘ನಾವು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಬದುಕುವುದಿಲ್ಲ ಎಂದಾದರೆ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಅರಾಜಕತೆಯಲ್ಲಿ ಬದುಕಬೇಕಾಗುತ್ತದೆ. ಆಗ ಜಗತ್ತಿನ ಯಾವ ಮೂಲೆಯಲ್ಲಿ ರುವ ವ್ಯಕ್ತಿಯೂ ಸುರಕ್ಷಿತವಾಗಿರುವುದಿಲ್ಲ’ ಎಂದು ಥ್ಯಾಚರ್ ಹೇಳಿದ್ದರು.

1946ರಲ್ಲಿ ವಿಶ್ವ ಸಂಸ್ಥೆಯ ಒಪ್ಪಂದವನ್ನು ರೂಪಿಸಿದ್ದೇ ಅಮೆರಿಕ. ಅದನ್ನು ಬೆಂಬಲಿಸಿದ್ದು ರಷ್ಯಾ. ಈಗ ಪ್ಯಾಕ್ಸ್ ಅಮೆರಿಕದಾ ಎಂಬುದು ಅನುಮಾನವಾಗಿದೆ. ಅಮೆರಿಕವನ್ನು ಆಳುತ್ತಿರುವವರು ರಾಷ್ಟ್ರೀಯ ಹಿತಾಸಕ್ತಿಯೆಂಬ ಸಂಕುಚಿತ ಮನೋಭಾವದಿಂದ ಪ್ರೇರಣೆ ಪಡೆದು ಇನ್ನಿತರ ದೇಶಗಳ ಸಾರ್ವಭೌಮ ಹಕ್ಕುಗಳನ್ನು ಹೊಸಕಿಹಾಕುತ್ತಿದ್ದಾರೆ.

ಹಿಂದೆ ಇದೇ ಸಿದ್ಧಾಂತವು ಜಗತ್ತನ್ನು ಪರಮಾಣು ಯುಗದ ಅಪಾಯಗಳಿಂದ ರಕ್ಷಿಸುತ್ತಿತ್ತು. ಈಗ ಇದೇ ಸಿದ್ಧಾಂತವು ಅಣ್ವಸ್ತ್ರಗಳ ಅಪಾಯವನ್ನೇ ಮುಂದೊಡ್ಡಿ 1946ರ ವಿಶ್ವಸಂಸ್ಥೆಯ ಒಪ್ಪಂದ ವನ್ನು ಛಿದ್ರಗೊಳಿಸಿದೆ. ಅಂತಾರಾಷ್ಟ್ರೀಯ ಭದ್ರತೆಗೆ ನಾವೇ ಯಜಮಾನರು ಎಂದು ಹೇಳಿಕೊಳ್ಳು ವವರು ತಾವೇ ರೂಪಿಸಿದ ಸಿದ್ಧಾಂತವನ್ನು ಗಾಳಿಗೆ ತೂರಿದಾಗ ಅರಾಜಕತೆ ಬರಲೇಬೇಕಲ್ಲವೇ? ತನ್ನದೇ ಪ್ರಜೆಗಳನ್ನು ಬೇಕಾಬಿಟ್ಟಿಯಾಗಿ ಹಿಂಸಿಸಿದ ಮತ್ತು ಬಹಳ ಕುತೂಹಲದಿಂದ ಪ್ಯಾಲೆಸ್ತೀನಿ ಯನ್ನರ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಸರ್ವಾಧಿಕಾರಿ ಸದ್ದಾಂ ಹುಸೇನ್‌ನ ನಡೆಗಳು ಥ್ಯಾಚರ್‌ಗೆ ಅಪಾಯಕಾರಿಯಾಗಿ ಕಂಡಿದ್ದವು.

ಅದಕ್ಕಿಂತ ಕೇವಲ ಎರಡು ವರ್ಷಗಳ ಮೊದಲು ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಇಸ್ಲಾಮಿಕ್ ಕ್ರಾಂತಿ ನಾಟಕೀಯವಾಗಿ ಯಶಸ್ವಿಯಾಗುವ ಮೂಲಕ ಹೊಸ ಯುಗವೊಂದು ಆರಂಭಗೊಂಡಿತ್ತು. ಅದು ಪಶ್ಚಿಮ ಏಷ್ಯಾದ ವ್ಯೂಹಾತ್ಮಕ ನಕ್ಷೆಯನ್ನು ಪುನರ್‌ರಚನೆ ಮಾಡಿತ್ತು. 1979ರವರೆಗೆ ಇರಾನ್‌ನ ರಾಜ ಮೊಹಮ್ಮದ್ ರೇಜಾ ಪಹ್ಲಾವಿ ಅಮೆರಿಕದ ಅತ್ಯಂತ ನಂಬಿಕಸ್ಥ ಸ್ನೇಹಿತನಾಗಿದ್ದ. ಏಕೆಂದರೆ 1953ರಲ್ಲಿ ಆತನನ್ನೂ, ಆತನ ಸಿಂಹಾಸನವನ್ನೂ ಅಮೆರಿಕದ ಸಿಐಎ ರಕ್ಷಿಸಿತ್ತು.

ಅಮೆರಿಕನ್ನರಿಗೆ ನಿಷ್ಠನಾಗಿದ್ದ ಪಹ್ಲಾವಿ 1967 ಮತ್ತು 1973ರಲ್ಲಿ ಇಸ್ರೇಲ್ ಮತ್ತು ಅದರ ನೆರೆ ದೇಶ ಗಳ ನಡುವೆ ನಡೆದ ಯುದ್ಧಗಳಿಂದ ದೂರವೇ ಉಳಿದಿದ್ದ. 1973ರಲ್ಲಿ ತನ್ನ ಗೆಲುವಿನಿಂದ, ಈಜಿಪ್ಟ್ ದೇಶ ಅಮೆರಿಕ ಮತ್ತು ಇಸ್ರೇಲ್ ಜತೆಗೆ 1987ರಲ್ಲಿ ಒಪ್ಪಂದ ಮಾಡಿಕೊಂಡು ಮಧ್ಯಪ್ರಾಚ್ಯ ದಲ್ಲಿ ರಷ್ಯಾದ ರಕ್ಷಣೆಯಲ್ಲಿರುವ ಕೊನೆಯ ದೇಶವನ್ನಾಗಿ ಸಿರಿಯಾವನ್ನು ಬಿಟ್ಟಿತ್ತು.

ಆದರೆ, ಇರಾಕ್ ಹುಸಿ ಅಲಿಪ್ತ ನೀತಿಯನ್ನು ಪ್ರದರ್ಶಿಸುತ್ತಾ ಉಳಿದಿತ್ತು. ವಾಷಿಂಗ್ಟನ್ ರಾಜತಾಂತ್ರಿ ಕತೆ ಮತ್ತು ಮಾತುಕತೆಗಳ ಮೂಲಕ ಇಸ್ಲಾಮಿಕ್ ಇರಾನ್ ಜತೆಗಿನ ವ್ಯವಹಾರಗಳನ್ನು ಸರಿಪಡಿಸಿ ಕೊಳ್ಳಲು ಅವಕಾಶವಿತ್ತು. ಆದರೆ, 1979ರ ನವೆಂಬರ್ 4ರಂದು ತೆಹ್ರಾನ್ ದೂತಾವಾಸದಲ್ಲಿ ಕೆಲಸ ಮಾಡುವ 52 ಅಮೆರಿಕನ್ನರನ್ನು ಇರಾನ್‌ನ ಕ್ರಾಂತಿಕಾರಿ ವಿದ್ಯಾರ್ಥಿಗಳ ಪಡೆ ಒತ್ತೆಯಾಳಾಗಿ ಇರಿಸಿ ಕೊಂಡು ಆ ಸಾಧ್ಯತೆಗಳನ್ನೆಲ್ಲ ಹಾಳುಗೆಡವಿತು.

ಸರಿಯಾದ ಕಾರಣಗಳೇ ಇಲ್ಲದೆ ಇಸ್ರೇಲ್ ಮತ್ತು ಅಮೆರಿಕವನ್ನು ಸರ್ವನಾಶಗೊಳಿಸುವ ಘೋಷಣೆ ಗಳನ್ನು ಇರಾನ್‌ನ ಕ್ರಾಂತಿಕಾರಿಗಳು ಕೂಗತೊಡಗಿದರು. ಜಗತ್ತಿನ ಸೂಪರ್ ಪವರ್ ದೇಶಕ್ಕೇ ಅವರು ಸವಾಲೆಸೆದಿದ್ದರು. ಅದು ಅಮೆರಿಕದ ಪ್ರತಿಷ್ಠೆಯನ್ನು ಕೆಣಕಿತ್ತು. 1980ರ ಏಪ್ರಿಲ್‌ನಲ್ಲಿ ಒತ್ತೆಯಾಳು ಗಳನ್ನು ಬಿಡಿಸಿಕೊಳ್ಳುವ ಪ್ರಯತ್ನ ವಿಫಲವಾದಾಗ ಅಮೆರಿಕ ಇನ್ನಷ್ಟು ಸಿಟ್ಟಿಗೆದ್ದಿತು.

ಅಮೆರಿಕ ನಡೆಸಿದ ‘ಆಪರೇಷನ್ ಈಗಲ್ ಕ್ಲಾ’ ಅಡಿ ಎಂಟರ ಪೈಕಿ ಕೇವಲ ಐದು ಹೆಲಿಕಾಪ್ಟರ್‌ಗಳು ಮಾತ್ರ ಸುಸ್ಥಿತಿಯಲ್ಲಿ ಮರಳಿ ಅಮೆರಿಕವನ್ನು ತಲುಪಿದ್ದವು. ಅಮೆರಿಕ ದ ಆಗಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಆ ಕಾರ್ಯಾಚರಣೆಯನ್ನೇ ಅಸ್ತವ್ಯಸ್ತವಾಗಿ ನಿಲ್ಲಿಸಬೇಕಾಗಿ ಬಂದಿತ್ತು. ಹದ್ದು ಗಾಯ ಗೊಂಡಿತ್ತು.

ಜಿಮ್ಮಿ ಕಾರ್ಟರ್ ಬಳಿಕ ಅಮೆರಿಕದ ಅಧ್ಯಕ್ಷರಾದ ರೊನಾಲ್ಡ್ ರೇಗನ್ ಪುನಃ ತಮ್ಮ ಹದ್ದು ತಲೆ ಯೆತ್ತಿ ಹಾರುವಂತೆ ಮಾಡುವ ಪಣ ತೊಟ್ಟರು. ಇರಾನ್‌ಗೆ ರೇಗನ್ ನೀಡಿದ ಪ್ರತಿಕ್ರಿಯೆ ಬಹಳ ಸೂಕ್ಷ್ಮವಾಗಿತ್ತು. ಸೂಕ್ತ ಅಂತರ ಕಾಯ್ದುಕೊಂಡೇ ಅವರು ಯುದ್ಧವ್ಯೂಹ ರಚಿಸಿದರು. 1980ರ ಸೆಪ್ಟೆಂಬರ್‌ನಲ್ಲಿ ಅಪ್ರಚೋದಿತವಾಗಿ ಅಥವಾ ಹೇಳಿಕೊಳ್ಳುವಂಥ ಯಾವುದೇ ಕಾರಣವಿಲ್ಲದೆ ಇರಾನ್ ಮೇಲೆ ಇರಾಕ್ ದಾಳಿ ನಡೆಸಿತು. ಇರಾನ್ ಆಗ ಅಣ್ವಸ ದೇಶವಾಗಿರಲಿಲ್ಲ.

ಒಂದೇ ವಾರದಲ್ಲಿ ತೆಹ್ರಾನ್ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿ ಸದ್ದಾಂ ಹುಸೇನ್ ಇದ್ದರು. ಬಳಿಕ ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವುದು ಅವರ ಗುರಿಯಾಗಿತ್ತು. ಈಗ ಐದೂವರೆ ದಶಕದ ಬಳಿಕವೂ ಅದೇ ಅಜೆಂಡಾ ಚಾಲ್ತಿಯಲ್ಲಿದೆ. ಒಂದು ವಾರದ ಬದಲು ಎಂಟು ವರ್ಷಗಳ ಕಾಲ ಯುದ್ಧ ನಡೆಯಿತು. ಐದು ಲಕ್ಷಕ್ಕೂ ಹೆಚ್ಚು ಜನರು ಸತ್ತರು. ಕೊನೆಗೆ ಆಗಿದ್ದೇನು ಅಂದರೆ ಯಥಾಸ್ಥಿತಿಯೇ ಉಳಿಯಿತು!

ಯುದ್ಧ ಎಲ್ಲಿಂದ ಆರಂಭವಾಗಿತ್ತೋ ಅಲ್ಲಿಗೇ ಬಂದು ನಿಂತಿತು. ಆದರೆ, ಆ ಸುದೀರ್ಘ ಯುದ್ಧ ಇರಾನ್‌ನ ಧಾರಣ ಶಕ್ತಿಯನ್ನು ಪರೀಕ್ಷಿಸಿ ತ್ತು. ಕೊನೆಗೂ ಇರಾನ್ ಗೆದ್ದಿತ್ತು. ಅದರ ಕಮಾಂಡರ್‌ ಗಳಲ್ಲಿ ಒಬ್ಬರಾದ ಅಲಿ ಖಮೇನಿ ಹೆಚ್ಚು ಕಮ್ಮಿ ಸಾವಿನ ಸನಿಹಕ್ಕೆ ಹೋಗಿ ಬದುಕುಳಿದಿದ್ದರು. ನಂತರ ಅವರೇ ಅಯೋತೊಲ್ಲಾ ಮತ್ತು ಸುಪ್ರೀಂ ಲೀಡರ್ ಆಗಿ ಹೊರಹೊಮ್ಮಿದರು. ಅವರನ್ನು ಈಗ 2026ರ ಯುದ್ಧದ ಮೊದಲ ವಾಯು ದಾಳಿಯಲ್ಲಿ ಹತ್ಯೆಗೈ ಯಲಾಯಿತು.

ಅಮೆರಿಕದ ಪ್ರಸಿದ್ಧ ರಾಜಕಾರಣಿ ಹೆನ್ರಿ ಕಿಸ್ಸಿಂಜರ್ ತಮ್ಮ ದೇಶದ ಅಜೆಂಡಾವನ್ನು ಕೊನೆಗೊಂದು ದಿನ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಹೇಳಿಬಿಟ್ಟರು. ಇರಾನ್ ಮತ್ತು ಇರಾಕ್ ಯುದ್ಧದ ಬಗ್ಗೆ ಅವರನ್ನು ಕೇಳಿದಾಗ ‘ಎರಡೂ ದೇಶಗಳಿಗೆ ಸೋಲಲು ಸಾಧ್ಯವಾಗಲಿಲ್ಲ ಎಂಬುದೇ ದುರ್ದೈವ’ ಎಂದು ಅವರು ಹೇಳಿದ್ದರು.

ನಂತರ ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಬಂದು ಇನ್ನೊಂದು ಅಪ್ರಚೋದಿತ ಯುದ್ಧದಲ್ಲಿ ಇರಾಕನ್ನು ಸರ್ವನಾಶ ಮಾಡಿದರು. 2003ರ ಮಾರ್ಚ್‌ನಲ್ಲಿ ಬ್ರಿಟನ್ ಜತೆ ಸೇರಿ ಅವರು ಇರಾಕ್ ಮೇಲೆ ದಾಳಿ ನಡೆಸಿದರು.

ಇರಾಕ್‌ನಲ್ಲಿ ಸಮೂಹ ನಾಶಕ ಶಸ್ತ್ರಾಸ್ತ್ರಗಳಿವೆ ಎಂಬ ಹಸಿ ಸುಳ್ಳನ್ನು ಅವರು ತಮ್ಮ ದಾಳಿಗೆ ಸಮರ್ಥನೆಯಾಗಿ ಬಳಸಿಕೊಂಡಿದ್ದರು. ಸಮೂಹನಾಶಕ ಸ್ತ್ರಾಸ್ತ್ರ ಎಂದು ಅವರು ಹೇಳಿದ್ದು ಅಣ್ವಸ್ತ್ರಗಳಿಗೆ. ಆದರೆ, ಇರಾಕ್ ಬಳಿ ಅವು ಇರಲಿಲ್ಲ. ಒಂದು ವೇಳೆ ಇದ್ದರೂ 1981ರಲ್ಲಿ ಒಸಿರಾಕ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲೇ ಅವು ನಾಶವಾಗಿದ್ದವು. ಬುಷ್ ಅವರ ನಿಜವಾದ ಉದ್ದೇಶ ಇರಾಕ್‌ನ ಮಿಲಿಟರಿ ಸಾಮರ್ಥ್ಯವನ್ನು ನಾಶಪಡಿಸಿ, ಅಲ್ಲಿನ ತೈಲ ಸಂಪನ್ಮೂಲಗಳನ್ನು ವಶಕ್ಕೆ ತೆಗೆದು ಕೊಳ್ಳುವುದಾಗಿತ್ತು.

ಬಹಳ ದೊಡ್ಡ ಬೆಲೆ ತೆತ್ತು ಅಮೆರಿಕ ಆ ಯುದ್ಧವನ್ನು ಗೆದ್ದಿತ್ತು. ಜಾರ್ಜ್ ಡಬ್ಲ್ಯು ಬುಷ್ ಅವರು ಆ ದಾಳಿಯೊಂದಿಗೆ ಇರಾನ್ ಪರ ಬಂಡುಕೋರರು ಹುಟ್ಟಿಕೊಳ್ಳಲು ವೇದಿಕೆ ಸೃಷ್ಟಿಸಿದ್ದರು. ಇರಾಕ್ ಯುದ್ಧ ಹಲವು ತಲೆಮಾರುಗಳ ಕಾಲ ಜಗತ್ತು ನೆನಪಿನಲ್ಲಿರಿಸಿಕೊಳ್ಳುವ ಗಾಯವಾಗಿ ಕೊನೆ ಗೊಂಡಿತ್ತು. ಇರಾನ್ ಮೇಲೆ ನಡೆಸಿದ ದಾಳಿಯನ್ನು ಸಮರ್ಥಿಸಿಕೊಳ್ಳಲು ಡೊನಾಲ್ಡ್ ಟ್ರಂಪ್ ಜಾಣತನದ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಅಥವಾ ವೈರುಧ್ಯದ ಹೇಳಿಕೆಗಳನ್ನು ನೀಡಬಹುದು. ಆದರೆ, ಅಮೆರಿಕದ ಅಜೆಂಡಾ ಟ್ರಂಪ್ ಅವರ ರಾಜಕೀಯ ಕರಿಯರ್‌ಗಿಂತ ಹಳೆಯದು. ಬುಷ್ ಅಥವಾ ಬ್ಲೇರ್ ರೀತಿ ಸಂಜ್ಞೆಯಲ್ಲಿ ಮಾತನಾಡುವುದಕ್ಕೆ ಅವರ ಬಳಿ ಸಮಯ ವಿಲ್ಲ.

ಅಮೆರಿಕವನ್ನು ಕಳೆದ ಅರ್ಧ ಶತಮಾನದಲ್ಲಿ ಆಳಿದ ಡೆಮಾಕ್ರೆಟಿಕ್ ಅಧ್ಯಕ್ಷರು ಕೂಡ ಇರಾನ್‌ಗೆ ವಿರುದ್ಧವಾಗಿಯೇ ನಡೆದುಕೊಂಡಿದ್ದರು. ಆದರೆ, ಮಿಲಿಟರಿ ಸಾಹಸಗಳಿಗೆ ಕೈಹಾಕಿರಲಿಲ್ಲ. ಆದರೆ ಟ್ರಂಪ್ ಆಳ್ವಿಕೆಯಲ್ಲಿ ಅಮೆರಿಕವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಸ್ವತಃ ಟ್ರಂಪ್ ನಿರ್ಧರಿಸಿ ಬಿಟ್ಟಿದ್ದಾರೆ.

ನಾಲ್ಕು ವಾರಗಳ ಯುದ್ಧದ ಬಳಿಕ ಈ ಸಾಹಸ ಹುಳಿಯಾಗಿದೆ. ಅಂತಿಮ ಪರಿಣಾಮ ನಮಗೆ ಗೊತ್ತಿಲ್ಲ. ಪೆಂಟಗನ್ ಕಂಗಾಲಾಗಿದೆ. ಯುದ್ಧದ ಆರಂಭದಲ್ಲೇ ಇರಾನ್‌ನ ಮಿಲಿಟರಿ ಶಕ್ತಿ ಮತ್ತು ರಾಜಕೀಯ ಬದ್ಧತೆಯನ್ನು ನೋಡಿ ನನಗೆ ಆಶ್ಚರ್ಯವಾಗಿದೆ ಎಂದು ಟ್ರಂಪ್ ಹೇಳಿದ್ದರು. ಈಗ ಅವರಿಗೆ ಆಶ್ಚರ್ಯದ ಬದಲು ಶಾಕ್ ಆಗಿರಬೇಕು. ಯುದ್ಧದಲ್ಲಿ ಅಮೆರಿಕದ ಅತ್ಯಾಧುನಿಕ ಸ್ತ್ರಾಸ್ತ್ರ ಗಳಿಗೆ ಉಂಟಾದ ಹಾನಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ.

700 ಮಿಲಿಯನ್ ಡಾಲರ್ ಮೌಲ್ಯದ ಅವಾಕ್ಸ್ ಯುದ್ಧ ವಿಮಾನ, ಬಿಲಿಯನ್ ಡಾಲರ್‌ಗೂ ಹೆಚ್ಚು ಬೆಲೆ ಬಾಳುವ ರಾಡಾರ್ ವ್ಯವಸ್ಥೆ, ಯುಎಸ್‌ಎಸ್ ಗೆರಾಲ್ಡ್ ಫೋರ್ಡ್ ಏರ್‌ಕ್ರಾಫ್ಟ್‌ ಕ್ಯಾರಿಯರ್ ಹಡಗು ಬೆಂಕಿ ಹೊತ್ತಿಸಿಕೊಂಡು ಮರಳಿ ಓಡಿಬಂದಿದ್ದು, ಅದರ ಮೇಲಿದ್ದ 200 ಯೋಧರು ಗಾಯ ಗೊಂಡಿದ್ದು, ಯುಎಸ್‌ಎಸ್ ಅಬ್ರಹಾಂ ಲಿಂಕನ್ ಏರ್‌ಕ್ರಾಫ್ಟ್ ಕ್ಯಾರಿಯರ್ ಹಡಗಿಗೆ ಕ್ಷಿಪಣಿಗಳು ಬಂದು‌ ಬಡಿದಿದ್ದು, ಮಧ್ಯಪ್ರಾಚ್ಯದಲ್ಲಿರುವ ಪ್ರತಿಯೊಂದು ಅಮೆರಿಕನ್ ಸೇನಾ ನೆಲೆಯ ಮೇಲೂ ದಾಳಿ ನಡೆದಿರುವುದು, ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿಗಳಿಂದ ಇಸ್ರೇಲ್‌ನ ಪ್ರಸಿದ್ಧ ಐರನ್ ಡೋಮ್‌ಗೆ ಹಾನಿಯಾಗಿರುವುದು, ಇಲ್ಲಿಯವರೆಗೆ ನಡೆದ ಯಾವುದೇ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ದೊಡ್ಡ ನಗರಗಳ ಮೇಲೆ ಭಯಾನಕ ದಾಳಿಗಳು ನಡೆದಿರುವುದು ಮತ್ತು ಮೂಲ ಸೌಕರ್ಯಕ್ಕೆ ಹಾನಿಯಾಗಿರುವುದು, ಇಸ್ರೇಲ್‌ನ ಪರಮಾಣು ಯೋಜನೆಗಳ ಕೇಂದ್ರವಾಗಿರುವ ಡಿಮೋನಾ ಮೇಲೆ ನಡೆದ ಬಾಂಬ್ ದಾಳಿ, ತನ್ಮೂಲಕ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಇಸ್ರೇಲ್ ನ ಸೂಕ್ಷ್ಮ ಆಸ್ತಿಗಳು ಕೂಡ ಅಪಾಯದಲ್ಲಿವೆ ಎಂಬುದು ಜಗಜ್ಜಾಹೀರಾಗಿರು ವುದು ಇವೆಲ್ಲವುಗಳಿಂದ ಖಂಡಿತ ಟ್ರಂಪ್ ಬೆಚ್ಚಿದ್ದಾರೆ.

ಹುಟ್ಟಿಗಿಂತ ಮರುಹುಟ್ಟು ಇನ್ನೂ ಕಷ್ಟ. 2026ರ ಅರಾಜಕತೆಯು ಹೊಸ ಜಾಗತಿಕ ವ್ಯವಸ್ಥೆಗೆ ಹಿಂಸಾತ್ಮಕ ಗರ್ಭವಾಗಿರಬಹುದು. ಆ ಹೊಸ ಜಗತ್ತಿನ ಜುಟ್ಟು ಎರಡನೇ ವಿಶ್ವ ಮಹಾಯುದ್ಧದ ವಿಜೇತರ ಕೈಯಲ್ಲೊಂದೇ ಇರುವುದಿಲ್ಲ.

ಲೇಖಕರ ಪರಿಚಯ: ಹಿರಿಯ ಪತ್ರಕರ್ತರು