ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಎಐ ಯುಗ: ಅವಕಾಶಗಳು, ಸವಾಲುಗಳು ಮತ್ತು ಭಾರತದ ಪಾತ್ರ

ಈಗ ಪ್ರತಿಯೊಂದು ಮೀಡಿಯಾಗಳಲ್ಲೂ ಹಾಗೂ ಸಾರ್ವಜನಿಕ ಸಂಭಾಷಣೆಗಳಲ್ಲೂ ಚರ್ಚೆಯಾಗುತ್ತಿರುವ ಕೇಂದ್ರೀಕೃತ ವಿಷಯವೆಂದರೆ ಕೃತಕ ಬುದ್ಧಿಮತ್ತೆಯೆಂಬ ಪೆಡಂಭೂತ. ಬಹುಜನರ ತಿಳಿವಳಿಕೆಯಲ್ಲಿ ಇದು ದೆವ್ವವಾದರೆ, ತಿಳಿದವರಲ್ಲಿ ಇದು ದೇವತೆ. ಅಂಥ ತಿಳಿದವರಲ್ಲಿ ದಿಗ್ಗಜರೆನಿಸಿದ ಟಾಟಾ ಸನ್ಸ್‌ನ ಅಧ್ಯಕ್ಷರಾದ ನಟರಾಜನ್ ಚಂದ್ರಶೇಖರನ್, ಎಐ ಕುರಿತು ಇತ್ತೀಚೆಗೆ ನಡೆದ ಚರ್ಚೆಯೊಂದರಲ್ಲಿ ಸರಳವಾಗಿ ವಿವರಿಸುತ್ತಾ, “ಎಐ ಒಂದು ಮೂಲಭೂತ ನಾಗರಿಕ ಹಾಗೂ ಮೂಲಸೌಕರ್ಯಾತ್ಮಕ ಬುದ್ಧಿಮತ್ತೆಯ ಬದಲಾವಣೆ.

ಸ್ವಯಂಪ್ರಕಾಶ

ಪ್ರಕಾಶ ಹೆಗಡೆ

ಚರ್ಮ ಕುಟೀರದ ಶ್ರಮಿಕ ಬೂಟ್ ಪಾಲಿಷ್ ಮಾಡುತ್ತ ಕೇಳಿದ- “ಎಐನಿಂದ ನನ್ನ ಮಗನ ಕೆಲಸಕ್ಕೇನಾದರೂ ತೊಂದರೆಯಾಗತ್ತಾ ಸರ್?". ಸುಕ್ಕುಗಟ್ಟಿದ ಮುಖದಲ್ಲಿ ಆತಂಕದ ಗೆರೆಗಳಿದ್ದವು. ಅವನ ಮಗ ಕಂಪನಿಯೊಂದರಲ್ಲಿ ಸಾ-ವೇರ್ ಎಂಜಿನಿಯರ್. ಆ ಶ್ರಮಿಕನಿಗೆ ಸಂದರ್ಭಕ್ಕನುಗುಣವಾಗಿ ಸಮಾಧಾನಕರ ಉತ್ತರ ಕೊಟ್ಟು ಹೊರಟೆನಾದರೂ, ಕೃತಕ ಬುದ್ಧಿಮತ್ತೆಯ (ಎಐ) ‘ಮಿಥ್’ ಅಥವಾ ಜಿಜ್ಞಾಸೆಯ ಕುರಿತಾಗಿ ಸಾಮಾನ್ಯರಿಗೆ ಅದಷ್ಟು ಸರಳವಾಗಿ ತಿಳಿಸುವ ಪ್ರಯತ್ನ ಮಾಡಬೇಕೆನಿಸಿತು.

ಈಗ ಪ್ರತಿಯೊಂದು ಮೀಡಿಯಾಗಳಲ್ಲೂ ಹಾಗೂ ಸಾರ್ವಜನಿಕ ಸಂಭಾಷಣೆಗಳಲ್ಲೂ ಚರ್ಚೆಯಾಗುತ್ತಿರುವ ಕೇಂದ್ರೀಕೃತ ವಿಷಯವೆಂದರೆ ಕೃತಕ ಬುದ್ಧಿಮತ್ತೆಯೆಂಬ ಪೆಡಂಭೂತ. ಬಹುಜನರ ತಿಳಿವಳಿಕೆಯಲ್ಲಿ ಇದು ದೆವ್ವವಾದರೆ, ತಿಳಿದವರಲ್ಲಿ ಇದು ದೇವತೆ. ಅಂಥ ತಿಳಿದವರಲ್ಲಿ ದಿಗ್ಗಜರೆನಿಸಿದ ಟಾಟಾ ಸನ್ಸ್‌ನ ಅಧ್ಯಕ್ಷರಾದ ನಟರಾಜನ್ ಚಂದ್ರಶೇಖರನ್, ಎಐ ಕುರಿತು ಇತ್ತೀಚೆಗೆ ನಡೆದ ಚರ್ಚೆಯೊಂದರಲ್ಲಿ ಸರಳವಾಗಿ ವಿವರಿಸುತ್ತಾ, “ಎಐ ಒಂದು ಮೂಲಭೂತ ನಾಗರಿಕ ಹಾಗೂ ಮೂಲಸೌಕರ್ಯಾತ್ಮಕ ಬುದ್ಧಿಮತ್ತೆಯ ಬದಲಾವಣೆ.

ವಿಜ್ಞಾನದ ಇತಿಹಾಸದಲ್ಲಿ ಸ್ಟೀಮ್ ಎಂಜಿನ್, ವಿದ್ಯುತ್ ಮತ್ತು ಇಂಟರ್ನೆಟ್‌ನಂಥ ಮೂಲಸೌಕರ್ಯ ಬದಲಾವಣೆಗಳು ಜಾಗತಿಕ ಅಭಿವೃದ್ಧಿಯನ್ನು ವೇಗಗೊಳಿಸಿದಂತೆ, ಎಐ ಕೂಡ ಅಂಥದೇ ಕ್ರಾಂತಿಯನ್ನು ಸೃಷ್ಟಿಸಲಿದೆ; ಎಐ ಸಹಾಯದಿಂದ ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಅಗಾಧ ಗಾತ್ರದ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತಿದ್ದು, ಇದು ಉತ್ಪಾದಕತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ" ಎಂದು ಅಭಿಪ್ರಾಯಪಟ್ಟರು.

ಇನ್ನು ತಾಂತ್ರಿಕವಾಗಿ ಹೇಳಬೇಕೆಂದರೆ ಕೃತಕ ಬುದ್ಧಿಮತ್ತೆಯು ಮಾನವನಂತೆ ಯೋಚಿಸಲು, ಕಲಿಯಲು ಮತ್ತು ತೀರ್ಮಾನ ತೆಗೆದುಕೊಳ್ಳಲು ಯಂತ್ರಗಳಿಗೆ ಸಾಮರ್ಥ್ಯ ನೀಡುವ ತಂತ್ರಜ್ಞಾನ. ಈ ತಂತ್ರಜ್ಞಾನದಲ್ಲಿ ಯಂತ್ರಗಳು ತಮ್ಮಲ್ಲಿರುವ ಮಾಹಿತಿಯಿಂದ ಕಲಿತು, ಅನುಭವದ ಆಧಾರದ ಮೇಲೆ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುತ್ತ ಬೆಳೆಯುತ್ತವೆ. ಕೃತಕ ಬುದ್ಧಿಮತ್ತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಸಲಾಗು‌ ತ್ತಿದೆ.

ಇದನ್ನೂ ಓದಿ: Prakash Hegde Column: ಮಾಲಿನ್ಯದ ವಿರುದ್ಧ ವಿಕಸಿತ ಭಾರತದ ಅನಿವಾರ್ಯ ಹೋರಾಟ

ಕೃತಕ ಬುದ್ಧಿಮತ್ತೆಯ ಬಗೆಗೆ ಚರ್ಚಿಸುವ ಮೊದಲು ಅದರ ರಚನಾ ಸ್ವರೂಪವನ್ನು ತಿಳಿದುಕೊಳ್ಳಬೇಕು. ಕೇಕ್ʼನಂತೆಯೇ ಪದರಗಳಿಂದ ನಿರ್ಮಿತವಾಗಿರುವ ಸಂಕೀರ್ಣ ವ್ಯವಸ್ಥೆಯಿದು. ಕೆಳಗೆ ತಿಳಿಸಿರುವ ಪದರಗಳು ಒಂದಕ್ಕೊಂದು ಅವಲಂಬಿತವಾಗಿದ್ದು ಪರಿಣಾಮಕಾರಿಯಾಗಿರಲು ಒಟ್ಟಾಗಿ ಕಾರ್ಯನಿರ್ವಹಿಸಬೇಕು:

ಅಡಿಪಾಯ/ಇಂಧನ ಪದರ: ಡೇಟಾ ಕೇಂದ್ರಗಳು ಕಾರ್ಯನಿರ್ವಹಿಸಲು ಅಗತ್ಯವಿರುವ ಅಪಾರ ವಿದ್ಯುತ್ ಮತ್ತು ಶಕ್ತಿಯ ಅವಶ್ಯಕತೆಯನ್ನು ಪ್ರತಿನಿಧಿಸುತ್ತದೆ.

ಗಣನಾ ಮೂಲಸೌಕರ್ಯ: ತರಬೇತಿ ಮತ್ತು ನಿರ್ವಹಣೆಗೆ ಅಗತ್ಯವಾದ ಕಚ್ಚಾ ಗಣನಾ ಶಕ್ತಿಯನ್ನು ಒದಗಿಸುವ ವಿಶೇಷ ಪ್ರೊಸೆಸರ್‌ಗಳು (ಎನ್ವಿಡಿಯಾ ಕಂಪನಿಯ ಜಿಪಿಯು) ಹಾಗೂ ಡೇಟಾವನ್ನು ವೇಗವಾಗಿ ವಿನಿಮಯಗೊಳಿಸಲು ಅಗತ್ಯವಾದ ನೆಟ್‌ವರ್ಕಿಂಗ್ ಉಪಕರಣಗಳಿರುವ ಹಾರ್ಡ್‌ವೇರ್ ಪದರವಿದು.

ಡೇಟಾ ಕೇಂದ್ರಗಳು: ಕಾರ್ಖಾನೆಯೆನ್ನಬಹುದಾದ ಪದರವು ಡೇಟಾವನ್ನು ಸಂಗ್ರಹಿಸು ವುದು ಮತ್ತು ‘ಎಐ’ ಮಾದರಿಗಳಿಗೆ ತರಬೇತಿ ನೀಡುವ ಡೇಟಾ ಕೇಂದ್ರಗಳು ಹಾಗೂ ವರ್ಚುವಲೈಸ್ಡ್ ಕ್ಲೌಡ್ ಪರಿಸರಗಳನ್ನು ಹೊಂದಿರುತ್ತವೆ.

ಎಐ ಮಾದರಿಗಳು: ಜ್ಞಾನಾತ್ಮಕ ಮಿದುಳು ಎನ್ನಲಾಗುವ ಈ ಪದರದಲ್ಲಿ ಮೂಲಭೂತ ಲಾರ್ಜ್ ಲ್ಯಾಂಗ್ವೇಜ್ ಮಾದರಿಗಳು (ಚಾಟ್ ಜಿಪಿಟಿ), ಪರಿಣಾಮಕಾರಿ, ಸುರಕ್ಷಿತ ಮತ್ತು ನಿಖರವಾಗಿಸುವ ತರಬೇತಿ, ಸೂಕ್ಷ್ಮ ಹೊಂದಾಣಿಕೆಯ ಕಾರ್ಯಾಚರಣೆಗಳನ್ನು ನಡೆಸಲಾಗುತ್ತವೆ.

ಅನ್ವಯಿಕೆ/ಬಳಕೆ: ಕೇಕ್‌ನ ಐಸಿಂಗ್ ಎನ್ನಬಹುದಾದ ಉತ್ತುಂಗದ ಪದರವು ಬಳಕೆ ದಾರರೊಂದಿಗೆ ವ್ಯವಹರಿಸುತ್ತದೆ. ಇದರಲ್ಲಿ ಚಾಟ್‌ಬಾಟ್‌ಗಳು/ವರ್ಚುವಲ್ ಅಸಿಸ್ಟೆಂಟ್‌ ಗಳು, ಆರೋಗ್ಯ, ಶಿಕ್ಷಣ, ಕೃಷಿ, ಹಣಕಾಸು ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಒದಗಿಸುತ್ತವೆ.

ತಂತ್ರಜ್ಞಾನದ ಎಲ್ಲಾ ಐದು ಪದರಗಳ ಮೇಲೂ ಗಮನಹರಿಸುವ ಮೂಲಕ ಭಾರತವು ಉನ್ನತ ಮಟ್ಟದ ‘ಎಐ’ಗೆ ಸಿದ್ಧ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಸ್ಥಾಪಿಸಿಕೊಳ್ಳುತ್ತಿದೆ.

ಇದರ ಫಲವಾಗಿ, ‘ಎಐ’ ಸಿದ್ಧತೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾದ ನಂತರ ಮೂರನೇ ಸ್ಥಾನವನ್ನು ಪಡೆದಿದೆ. ಭಾರತದಲ್ಲಿ ‘ಎಐ’ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವ ಕಂಪನಿಗಳಲ್ಲಿ ರಿಲಯನ್ಸ್, ಅದಾನಿ, ಟಾಟಾ, ಇನ್ಫೋಸಿಸ್, ವಿಪ್ರೋ, ಎಲ್ ಆಂಡ್ ಟಿ, ಬಾಷ್ ಮತ್ತು ಫ್ರಾಕ್ಟಲ್ ಅನಾಲಿಸಿಸ್ ಪ್ರಮುಖವಾಗಿವೆ. ‌

ಈ ಕಂಪನಿಗಳು ಲಕ್ಷಾಂತರ ಕೋಟಿ ಹೂಡಿಕೆಯಿಂದ ಸ್ವದೇಶಿ ಸಾವರಿನ್ ‘ಎಐ’ ಮೂಲ ಸೌಕರ್ಯವನ್ನು ನಿರ್ಮಿಸುತ್ತಿವೆ. ಈ ಪ್ರಯತ್ನಗಳಲ್ಲಿ ಡೇಟಾ ಸೆಂಟರ್ ಸಾಮರ್ಥ್ಯ ವಿಸ್ತರಣೆ ಹಾಗೂ ಸ್ಥಳೀಯ ಅಗತ್ಯಗಳಿಗೆ ಹೊಂದುವ ‘ಎಐ’ ಮಾದರಿಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ವಿದೇಶಿ ಕಂಪನಿಗಳ ಮೇಲಿನ ಅವಲಂಬನೆ ಕಡಿಮೆ ಮಾಡುವಲ್ಲಿ ಇವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇತ್ತೀಚಿನ ದಿನಗಳಲ್ಲಿ ಐಟಿ ವಿಭಾಗದಲ್ಲಿ ಸುನಾಮಿ ಸೃಷ್ಟಿಸಿರುವುದು ‘ಎಐ’ನ ಮುಂದಿನ ಆವಿಷ್ಕಾರವಾದ ಅರ್ಟಿಫಿಷಿಯಲ್ ಜನರೇಟಿವ್ ಇಂಟೆಲಿಜೆ (ಎಜಿಐ). ಈ ಮುಂದುವರಿದ ತಂತ್ರಜ್ಞಾನವು ಬೃಹತ್ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಿ ಮಾದರಿಗಳನ್ನು ಗುರುತಿಸಿ, ಮಾನವನ ಸೃಜನಶೀಲತೆಗೆ ಸಮಾನವಾದ ಹೊಸ ವಿಷಯಗಳನ್ನು ಸ್ವತಂತ್ರವಾಗಿ ಉತ್ಪಾದಿಸುತ್ತದೆ.

ಅಮೆರಿಕದ ಆಂಥ್ರೊಪಿಕ್ ಸಂಸ್ಥೆ ಬಿಡುಗಡೆ ಮಾಡಿರುವ ‘ಕ್ಲಾಡ್’ ಅಂಥದೊಂದು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್. ಇದನ್ನೇ ಭಾರತದ ಹೆಚ್ಚಿನ ಐಟಿ ಕಂಪನಿಗಳು ಸಾವಿರಾರು ಎಂಜಿನಿಯರ್‌ಗಳ ಮೂಲಕ ಮಾಡುತ್ತಿರುವುದು. ‌

ಇನ್ನು ಮುಂದೆ ‘ಎಜಿಐ’ ಮಾಡೆಲ್‌ಗಳು ಕೆಲವೇ ಕುಶಲಕರ್ಮಿಗಳ ಸಹಾಯದಿಂದ ಹೆಚ್ಚು ಉತ್ಪಾದಕತೆಯನ್ನು ನೀಡುತ್ತವೆ. ಸನ್ ಮೈಕ್ರೋಸಿಸ್ಟಮ್‌ನ ಸಂಸ್ಥಾಪಕರಾದ ರಾಜ್ ಖೋಸ್ಲಾ ಅವರು ದೆಹಲಿಯ ಸಮ್ಮೇಳನದಲ್ಲಿ ಸ್ಪೋಟಕ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದರು: “ಪ್ರಸಕ್ತ ರೂಪದ ಐಟಿ ಸೇವೆಗಳು 2030ರ ವೇಳೆಗೆ ಸಂಪೂರ್ಣ ಮಾಯ ವಾಗುತ್ತವೆ. ಭವಿಷ್ಯದಲ್ಲಿ ಐಟಿ/ಬಿಪಿಒ ಸೇವೆಗಳು ನಶಿಸಿಹೋಗುತ್ತವೆ".

ಗೂಗಲ್ ಡೀಪ್ ಮೈಂಡ್‌ನ ಸಿಇಒ ಡೆಮಿಸ್ ಹಸ್ಸಾಬಿಸ್ ಅವರು ಅದೇ ಸಮ್ಮೇಳನದಲ್ಲಿ, “ಎಜಿಐ ವ್ಯಾಪಕವಾಗಿ ಬಳಕೆಯಾಗಲು ಐದರಿಂದ ಹತ್ತು ವರ್ಷಗಳ ಸಮಯ ಬೇಕು" ಎಂದಿದ್ದಾರೆ. ಈ ಅವಧಿಯಲ್ಲಿ ಐಟಿ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಲು ಸಾಕಷ್ಟು ಅವಕಾಶಗಳಿದ್ದು, ಉದ್ಯೋಗಗಳು ನಾಶವಾಗುವುದಕ್ಕಿಂತಲೂ ಹೊಸ ರೂಪಗಳಲ್ಲಿ ಬದಲಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದ ಐಟಿ ಕಂಪನಿಗಳು ತಮ್ಮ ವಿಶಾಲ ಹಾಗೂ ಬುದ್ಧಿವಂತ ಎಂಜಿನಿಯರ್ ವೇದಿಕೆ ಯನ್ನು ಬಳಸಿ ಜನರೇಟಿವ್ ಐಟಿ ಸೇವೆಗಳತ್ತ ತ್ವರಿತವಾಗಿ ಮರುಹೊಂದಾಣಿಕೆ ಮಾಡಿ ಕೊಳ್ಳಲು ಆಸ್ಪದವಿರುತ್ತದೆ. ‘ಡಿಸ್ರಪ್ಟಿವ್’ ಪರಿಸರವಿದ್ದರೂ ಅವುಗಳನ್ನು ಗೆಲ್ಲಲು ವಿಪುಲ ಅವಕಾಶಗಳು ಲಭ್ಯವಿರುತ್ತವೆ. ಇಂಥ ಡಿಸ್ರಪ್ಷನ್ ವಾತಾವರಣ ಸೃಷ್ಟಿಸಿರುವ ಆಂಥ್ರೋ ಪಿಕ್ ಸಂಸ್ಥೆಯು ಭಾರತದಲ್ಲಿರುವ ಅವಕಾಶಗಳ ಆಗರವನ್ನು ಅರಿತು ಬೆಂಗಳೂರಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸುವುದಾಗಿ ಸಾರಿದೆ.

ಆಂಥ್ರೋಪಿಕ್ ಕಂಪನಿಯ ಬದ್ಧ ವೈರಿಯಾದ ‘ಒಪನ್ ಎಐ’ ತಾನು ಕೂಡ ಬೆಂಗಳೂರಿ ನಲ್ಲಿ ‘ಎಐ’ ನೆಲೆ ಸ್ತಾಪಿಸುವುದಾಗಿ ಕೂಡಲೇ ಹೇಳಿದೆ. ಅನೇಕ ಬೃಹತ್ ಎಂಎನ್‌ಸಿಗಳು ಅವಕಾಶಗಳನ್ನು ಬಾಚಿಕೊಳ್ಳಲು ಭಾರತದತ್ತ ಧಾವಿಸುತ್ತಿವೆ. ಬೆಂಬಲವಾಗಿ, ಬ್ಲ್ಯಾಕ್‌ ಸ್ಟೋನ್ ನಂಥ ದೈತ್ಯ ಖಾಸಗಿ ಇಕ್ವಿಟಿ ಹಣಕಾಸು ಸಂಸ್ಥೆಗಳು ‘ಎಐ’ ಕಂಪನಿಗಳಲ್ಲಿ ಭಾರಿ ಹೂಡಿಕೆಯನ್ನು ಮಾಡಿ ‘ಎಐ’ ಕಂಪನಿಗಳ ವಿತ್ತದ ಅಂತರದ ಸೇತುವೆಯಾಗುತ್ತಿವೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಸುಮಾರು ಮುನ್ನೂರು ಬಿಲಿಯನ್ ಡಾಲರ್‌ ನಷ್ಟು ಹಣದ ಹೊಳೆಯು ‘ಎಐ’ ತಂತ್ರಜ್ಞಾನಕ್ಕೆ ಹರಿದುಬರಲಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿ ಕ್ಷಣವೂ ಹೊಸ ಆವಿಷ್ಕಾರಗಳಿಂದ ಕ್ರಾಂತಿಯಾಗುತ್ತಲೇ ಇರುತ್ತದೆ. ‘ಎಐ’ ಮತ್ತು ‘ಎಜಿಐ’ನ ನಂತರದ ಮುಂದಿನ ಆವಿಷ್ಕಾರ ‘ಏಜೆಂಟಿಕ್ ಎಐ’. ಇಲ್ಲಿ ಡಿಜಿಟಲ್ ಏಜೆಂಟ್‌ಗಳು ಕೇವಲ ಶಿಫಾರಸು ಮಾಡುವುದಲ್ಲ, ಕಾರ್ಯಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತವೆ.

ಈಗಾಗಲೇ ಈ ನಿಟ್ಟಿನಲ್ಲಿ ವ್ಯಾಪಕ ಪ್ರಾರಂಭಿಕ ಸಂಶೋಧನೆಗಳು ದಾಪುಗಾಲಿಟ್ಟು ಮುನ್ನಡೆಯುತ್ತಿವೆ. ಈ ಹಂತದ ಡಿಸ್ರಪ್ಷನ್‌ಗಳಿಗೂ ಸಿದ್ಧವಾಗಲೇಬೇಕಾಗಿದೆ.

ಸೇಲ್ಸ್ʼ ಫೋರ್ಸ್ ಕಂಪನಿಯ ಭಾರತದ ಅಧ್ಯಕ್ಷೆ ಮತ್ತು ಸಿಇಒ (ಹಿಂದಿನ ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಅಧ್ಯಕ್ಷೆ) ಅರುಂಧತಿ ಭಟ್ಟಾಚಾರ್ಯರವರ ಮಾತಿನಂತೆ, ‘ಎಐ’ ಪ್ರಗತಿಗಳು ಮಾನವಕುಲಕ್ಕೆ ವರದಾನವಾಗಿದೆ. ‘ಎಐ’ ಕೆಲವು ಸಾಂಪ್ರದಾಯಿಕ ಉದ್ಯೋಗಗಳನ್ನು ಅನಗತ್ಯಗೊಳಿಸಬಹುದು.

ಆದರೆ ಸಮಾನಾಂತರವಾಗಿ ಪ್ರಾಂ ಎಂಜಿನಿಯರ್‌ಗಳು, ಮೆಷಿನ್ ಲರ್ನಿಂಗ್ ತಂತ್ರಜ್ಞರು ಮತ್ತು ‘ಎಐ’ ಅನುಸರಣಾಧಿಕಾರಿಗಳಂಥ ಹೊಸ ಹಾಗೂ ಹೆಚ್ಚಿನ ಮೌಲ್ಯದ ಉದ್ಯೋಗ ಗಳನ್ನು ಅದು ಸೃಷ್ಟಿಸುತ್ತದೆ. ಸಾಮಾನ್ಯ ಮತ್ತು ಪುನರಾವರ್ತಿತ ಕೆಲಸಗಳನ್ನು ಸ್ವಯಂ ಚಾಲಿತಗೊಳಿಸುವ ಮೂಲಕ, ಉದ್ಯೋಗಿಗಳು ಭಾವನಾತ್ಮಕ ಬುದ್ಧಿಮತ್ತೆ, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆ ಅಗತ್ಯವಿರುವ ಹೆಚ್ಚಿನ ಮೌಲ್ಯದ ಕೆಲಸಗಳಿಗೆ ಗಮನ ಹರಿಸಲು ಸಾಧ್ಯವಾಗುತ್ತದೆ.

ಈ ಬದಲಾವಣೆ ಪ್ರಕ್ರಿಯೆಯು ಕೆಲವಷ್ಟು ಕಠಿಣವಾದರೂ, ಅಂತಿಮವಾಗಿ ಹೆಚ್ಚು ಉತ್ಪಾದಕ, ಉತ್ತಮ ಮತ್ತು ಸಮಾವೇಶಿತ ಕೆಲಸದ ವಾತಾವರಣವನ್ನು ನಿರ್ಮಿಸುತ್ತದೆ. ‘ಎಐ’ ಎಂಬುದು ಮಾನವರನ್ನು ಸಂಪೂರ್ಣವಾಗಿ ಬದಲಿಸುವುದಕ್ಕಿಂತ, ಕೋ-ಪೈಲಟ್ ಆಗಿ ಕಾರ್ಯನಿರ್ವಹಿಸಿ ಮಾನವ ಸಾಮರ್ಥ್ಯವನ್ನು ವೃದ್ಧಿಸುತ್ತದೆ.

‘ಎಐ ರಿಟ್ರೀವಲ್ ಆಗ್ಮೆಂಟೆಡ್ ಜನರೇಷನ್’ (ಅಎ) ಕೇಂದ್ರಗಳು ತಲೆ ಎತ್ತಲಿವೆ. ‘ಆರ್‌ಎಜಿ’ ಗಳು, ನವೀನ ಮತ್ತು ಸಂಬಂಽತ ಮಾಹಿತಿಯುಳ್ಳ ಡೇಟಾ ಗ್ರಂಥಾಲಯಗಳು ಅಗತ್ಯ ವಾಗಿದ್ದು, ಅವುಗಳಿಗೆ ಮಾಹಿತಿಯನ್ನು ಪೂರೈಸುವುದು ಭಾರಿ ಪ್ರಮಾಣದ, ಕಾರ್ಮಿಕಾ ಧಾರಿತ ಡೇಟಾ ಸಂಗ್ರಹ ಕಾರ್ಯವಾಗಿದೆ.

ಈ ಕೇಂದ್ರಗಳು ಬಿಪಿಒಗಳ ಬದಲಾಗಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಯಿದೆ. ಜಾಗತಿಕ ಮಟ್ಟದಲ್ಲಿ ‘ಎಐ’ ಶೃಂಗಸಭೆಗಳು ಕಳೆದ ಕೆಲವು ವರ್ಷಗಳಿಂದ ನಡೆಯು ತ್ತಿವೆ. ಹಿಂದಿನ ವರ್ಷ ಪ್ಯಾರಿಸ್‌ನಲ್ಲಿ ಇಂಥ ಸಭೆಯನ್ನು ನಡೆಸಲಾಗಿತ್ತು. ಮುಂದಿನ ಆವೃತ್ತಿ ಎನ್ನಬಹುದಾದ, ಇದೀಗ ದೆಹಲಿಯಲ್ಲಿ ಸಂಪನ್ನಗೊಂಡ ‘ಎಐ’ ಶೃಂಗಸಭೆಗೆ ಐದು ಲಕ್ಷಕ್ಕೂ ಹೆಚ್ಚು ಉತ್ಸುಕರು ಭೇಟಿಯಿತ್ತರು.

ಮಾತ್ರವಲ್ಲದೆ, ಶಿಬಿರವನ್ನು ಆಸಕ್ತರಿಗಾಗಿ ಒಂದು ಹೆಚ್ಚುವರಿ ದಿನಕ್ಕೆ ವಿಸ್ತರಿಸಿದ್ತು ವಿಶೇಷ ವಾಗಿತ್ತು. ಈ ಶೃಂಗಸಭೆಯು ಮೂರು ಮೂಲಭೂತ ಸೂತ್ರಗಳ ಮೇಲೆ ಆಧಾರಿತವಾಗಿತ್ತು: ಜನತೆ (ಜನರನ್ನು ಸಬಲಗೊಳಿಸುವುದು), ಭೂಮಿ(ಕೃಷಿಯಲ್ಲಿ ಹೆಚ್ಚು ಬುದ್ಧಿವಂತ ಮತ್ತು ದೀರ್ಘಕಾಲಿಕ ವಿಧಾನಗಳನ್ನು ಅಳವಡಿಸುವುದು), ಹಾಗೂ ಪ್ರಗತಿ (ಎಲ್ಲರಿಗೂ ಲಭ್ಯ ವಾಗುವ, ಸಮಾವೇಶಿತ ತಂತ್ರಜ್ಞಾನವನ್ನು ಉತ್ತೇಜಿಸುವುದು). ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಮಾನವ್’ ಚೌಕಟ್ಟನ್ನು ಘೋಷಿಸಿದರು.

MANAV ಎಂದರೆ ಮಾನವಕೇಂದ್ರಿತ, ಜವಾಬ್ದಾರಿಯುತ ಮತ್ತು ನೈತಿಕ ಕೃತಕ ಬುದ್ಧಿಮತ್ತೆ ಬಳಕೆಯನ್ನು ಉತ್ತೇಜಿಸುವ ಭಾರತೀಯ ‘ಎಐ’ ಉಪಕ್ರಮ. ಶೃಂಗಸಭೆಯ ಮುಖ್ಯ ರೂಪಶಿಲ್ಪಿಯಾಗಿ ಭಾರತ ಹೊರಹೊಮ್ಮಿದ್ದು, ಜಾಗತಿಕ ದಕ್ಷಿಣಾರ್ಧ ಗೋಳದ ದೇಶಗಳ ಮುಂಚೂಣಿಯ ಶಕ್ತಿಯೆಂದೆನಿಸಿದೆ. ಮಹಾಸಮ್ಮೇಳನದಲ್ಲಿ 300ಕ್ಕೂ ಅಧಿಕ ಪ್ರದರ್ಶಕರು, 500ಕ್ಕೂ ಹೆಚ್ಚು ಜಾಗತಿಕ ‘ಎಐ’ ನಾಯಕರು, 20 ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದ ರಿಂದಾಗಿ ಇದು ಇತಿಹಾಸದ ಅತಿ ದೊಡ್ಡ ಜಾಗತಿಕ ‘ಎಐ’ ಸಮ್ಮೇಳನವೆಂದು ಪ್ರಚಲಿತ ವಾಯಿತು.

ಎಂಬತ್ತಕ್ಕೂ ಅಧಿಕ ದೇಶಗಳು ತಾಂತ್ರಿಕ/ವ್ಯಾವಹಾರಿಕ ನಿರ್ಣಯಕ್ಕೆ ಒಪ್ಪಿಗೆ ನೀಡಿವೆ. ಭಾರತವು ಅಮೆರಿಕ ನೇತೃತ್ವದ ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟಕ್ಕೆ ಹನ್ನೊಂದನೇ ಸದಸ್ಯನಾಗಿ ಅಽಕೃತವಾಗಿ ಸೇರ್ಪಡೆಯಾಗಿದೆ.

‘ಎಐ’ ಸ್ವೀಕಾರವು ದಾಖಲೆ ಮಟ್ಟದಲ್ಲಿ ವೇಗವಾಗಿ ವೃತ್ತಿ, ಲಿಂಗ ಮತ್ತು ಕೆಲಸದ ವೈಖರಿಯ ಮೇಲೆ ಅವಲಂಬಿತವಾಗಿ ಪ್ರಗತಿಯಾಗುತ್ತಿದೆ. ಹಣಕಾಸು ಮತ್ತು ಲೆಕ್ಕಪತ್ರ ಕ್ಷೇತ್ರಗಳ ವೃತ್ತಿಪರರು ‘ಎಐ’ಯನ್ನು ಅತಿ ಕಡಿಮೆ ಬಳಸುವವರಾಗಿದ್ದರೆ, ಪತ್ರಕರ್ತರು, ಸಾಫ್ಟ್‌ʼವೇರ್ ಎಂಜಿನಿಯರ್‌ಗಳು ಮತ್ತು ಮಾರುಕಟ್ಟೆ ವೃತ್ತಿಪರರು ‘ಎಐ’ಯನ್ನು ಅತ್ಯಂತ ವ್ಯಾಪಕವಾಗಿ ಬಳಸುತ್ತಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ‘ಒಪನ್ ಎಐ’ ಕಂಪನಿಯ ಮುಖ್ಯಸ್ಥರಾದ ಸ್ಯಾಮ್ ಆಲ್ಟ್‌ಮನ್ ಅವರು, “ಚ್ಯಾಟ್ ಜಿಪಿಟಿಗೆ ಭಾರತದಲ್ಲಿ ಪ್ರತಿ ವಾರ ಹತ್ತು ಕೋಟಿಗಿಂತ ಹೆಚ್ಚು ಸಕ್ರಿಯ ಬಳಕೆದಾರರಿದ್ದಾರೆ" ಎಂದರು.

ಅಮೆರಿಕದ ನಂತರ ಭಾರತವು ಈ ವೇದಿಕೆಯ ಅತ್ಯಂತ ಸಕ್ರಿಯ ಮಾರುಕಟ್ಟೆ; ಇಲ್ಲಿ ಗಮನಾರ್ಹ ವಿಷಯವೆಂದರೆ, ಪ್ರಸ್ತುತ 900 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಚ್ಯಾಟ್ ಜಿಪಿಟಿ, ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಮ್, ಟಿಕ್‌ಟಾಕ್ ಅಥವಾ ನೆಟ್‌ಫ್ಲಿಕ್ಸ್‌ಗಳಿಗಿಂತಲೂ ಬಹಳ ಕಡಿಮೆ ಅವಧಿಯಲ್ಲಿ ಈ ಮಟ್ಟ ವನ್ನು ತಲುಪಿ, ‘ಎಐ’ ನಮ್ಮ ಜೀವನದಲ್ಲಿ ದೈನಂದಿನ ಕಾರ್ಯಗಳಿಗೆ ಅನಿವಾರ್ಯ ಮಾಧ್ಯಮವೆನಿಸಿದೆ.

ಚ್ಯಾಟ್ ಜಿಪಿಟಿಗೆ ಸ್ಪರ್ಧಿಯಾಗಿ ಜಾಗತಿಕ ಮಟ್ಟದಲ್ಲಿ ಗೂಗಲ್‌ನ ಜೆಮಿನೈ, ಮೈಕ್ರೋ ಸಾಫ್ಟ್‌ʼನ ಕ್ಯಾಪಿಲೋಟ್, ಮೆಟಾದ ಮಾ ವೇದಿಕೆಗಳು ಪೈಪೋಟಿ ನಡೆಸಿವೆ. ಇವೆಲ್ಲವನ್ನೂ ಚ್ಯಾಟ್ ಜಿಪಿಟಿಯಷ್ಟು ವೇಗವಾಗಲ್ಲದಿದ್ದರೂ ವ್ಯಾಪಕವಾಗಿ ಬಳಸಲಾಗುತ್ತಿದ್ದು, ಅವು ತ್ವರಿತವಾಗಿ ಎಡೆ ವಿಸ್ತರಿಸುತ್ತಿವೆ.

‘ಸರ್ವಮ ಎಐ’ ಮತ್ತು ‘ಭಾರತ್‌ಜೆನ್’ ನಮ್ಮ ದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ಪ್ರಮುಖ ಜನರೇಟಿವ್ ‘ಎಐ’ ಪ್ರಯತ್ನಗಳಾಗಿವೆ. ಸರ್ವಮ್ ಮಾದರಿಗಳು, ಭಾರತಕ್ಕೆ ಹೊಂದುವ ಸಂಭಾಷಣಾತ್ಮಕ ‘ಎಐ’ ಪರಿಹಾರಗಳತ್ತ ಗಮನ ಹರಿಸಿದೆ.

ಭಾರತ್‌ಜೆನ್ ಯೋಜನೆಯು ಭಾರತೀಯ ಭಾಷೆಗಳು, ಸಂಸ್ಕೃತಿ ಮತ್ತು ಸಾರ್ವಜನಿಕ ಡೇಟಾವನ್ನು ಒಳಗೊಂಡ ಸ್ವದೇಶಿ ಮಾದರಿಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ಶಿಕ್ಷಣ, ಆಡಳಿತ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಬಳಸಬಹುದಾದ ‘ಎಐ’ ಪರಿಹಾರಗಳನ್ನು ನೀಡಲು ಪ್ರಯತ್ನಿಸುತ್ತಿದೆ.

ಮೇಲೆ ಉಲ್ಲೇಖಿಸಲಾದ ಚರ್ಮಕುಟೀರಕ್ಕೆ ಕೆಲ ದಿನಗಳ ನಂತರ ಮತ್ತೆ ಭೇಟಿಯಿತ್ತಿದ್ದೆ. ಪರಿಚಯದ ಆ ಶ್ರಮಿಕನಿಗೆ ಕೃತಕ ಬುದ್ಧಿಮತ್ತೆಯ ಕುರಿತಾಗಿ ಸರಳಭಾಷೆಯಲ್ಲಿ ತಿಳಿ ಹೇಳಿದೆ. ಅವನ ಸುಕ್ಕುಗಟ್ಟಿದ ಮುಖದಲ್ಲಿ ಮೂಡಿದ ಮಂದಹಾಸದ ಗೆರೆಗಳು, ವಿಷಯವು ಅವನಿಗೆ ಅರ್ಥವಾಯಿತೆಂಬ ಸಂದೇಶ ನೀಡಿದವು....

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪ್ರಚಲಿತ

ವಿದ್ಯಮಾನಗಳ ವಿಶ್ಲೇಷಕರು)