ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prof R G Hegde Column: ಎಐ ದಾಳಿ ಮತ್ತು ಉನ್ನತ ಶಿಕ್ಷಣದ ಆತಂಕಗಳು

ನೌಕರಿ ಸೇರಿದರೆ ಜೀವನ ಮುಗಿಯಿತು. ಕೂದಲು ಹಣ್ಣಾಗಿ, ತಲೆ ಬೋಳಾದ ಮೇಲೆ ನಿವೃತ್ತಿಯಾಗುವುದು. 90ರ ದಶಕದಲ್ಲಿ ಇಂಜಿನಿಯರಿಂಗ್ ಪದವಿಗೆ ಬೇಡಿಕೆ ಬಂತು. ಯಾವ ಇಂಜಿನಿಯರಿಂಗ್ ಪದವಿಯೇ ಆಗಲಿ, ಕಂಪನಿಗಳು ಬಂದು ಎಲ್ಲರನ್ನೂ ತುಂಬಿಕೊಂಡು ಹೋಗುತ್ತಿದ್ದವು. ನೌಕರಿಗಳೇ ನೌಕರಿಗಳು. ಐಟಿ ಸೇವೆಗಳ ನೌಕರಿಗಳು ಎಂತಹ ಪ್ರಮಾಣದಲ್ಲಿ ಹುಟ್ಟಿಕೊಂಡವೆಂದರೆ ಎಲ್ಲ ಕಾಲೇಜುಗಳಲ್ಲಿ ‘ಪ್ಲೇಸ್‌ಮೆಂಟ್ ಸೆಲ್’ ಎನ್ನುವ ಒಂದು ನೀಲಿ ಬೋರ್ಡ್ ನೇತಾಡುತ್ತಿತ್ತು.

ಕಲಿಕಾಲ

ಪ್ರೊ.ಆರ್.ಜಿ.ಹೆಗಡೆ

ಒಂದು ಕಾಲವಿತ್ತು. ಮುಲ್ಕಿ (ಏಳನೆಯ ಇಯತ್ತೆ) ಮುಗಿಸಿದರೆ ಕನ್ನಡ ಶಾಲೆಯ ಶಿಕ್ಷಕ/ಕಿ ನೌಕರಿ ಸಿಕ್ಕಿ ಹೋಗುತ್ತಿತ್ತು. ಮುಗಿಸದಿದ್ದರೂ ಕಟಪಟೆ ಮಾಡಿದರೆ ಅಟೆಂಡರು, ಪ್ಯೂನ್, ಕಂಡಕ್ಟರು, ಡ್ರೈವರು, ಬರೆದುಕೊಳ್ಳುವ ನೌಕರಿ, ಗಾರ್ಡು, ಪೊಲೀಸ್ ಇತ್ಯಾದಿ ಆಗಿಬಿಡುತ್ತಿತ್ತು. ಎಸ್‌ಎಸ್‌ಎಲ್‌ಸಿ ಮುಗಿಸಿದರೆ ಕೇಳುವುದೇ ಬೇಡ. ಮೆರಿಟ್ ಮೇಲೆ ಪೋಸ್ಟ್‌ನಲ್ಲಿ ನೌಕರಿ ಸಿಕ್ಕಿಬಿಡುತ್ತಿತ್ತು.

ಬಿಕಾಮ್, ಬಿಎಸ್‌ಸಿ ದಾಟಿದರೆ (ಹೇಗೆ ಮುಗಿಸಿದರೂ) ಬ್ಯಾಂಕ್ ನೌಕರಿಗಳು, ಮುಂಬೈಯಲ್ಲಿ ನೌಕರಿಗಳು ಗ್ಯಾರಂಟಿ. ಬಿಎಡ್ ಮಾಡಿದರೆ ಐದಾರು ತಿಂಗಳಲ್ಲಿ ಯಾವುದಾದರೂ ಹೈಸ್ಕೂಲಿನಲ್ಲಿ ಪರ್ಮನೆಂಟ್ ನೌಕರಿ ಸಿಕ್ಕಿ ಹೋಗುತ್ತಿತ್ತು. ಪೋಸ್ಟ್ ಗ್ರಾಜುವೇಟ್ ಗೆ ಬಂದರೆ, ಎಮ್‌ಎ ಇಂಗ್ಲಿಷ್, ಎಂಎಸ್‌ಸಿ ಫಿಸಿಕ್ಸ್, ಆರ್ಗಾನಿಕ್ ಕೆಮಿಸ್ಟ್ರಿ ಇಂಥವುಗಳನ್ನು ಕಲಿತರೆ ರಿಸಲ್ಟ್ ಬರುವ ಮೊದಲೇ ನೌಕರಿ ದೊರೆತು ಹೋಗುತ್ತಿತ್ತು. ಮುಂದೆ ಐದಾರು ತಿಂಗಳಿಗೆ ಖಾಯಂ. ಪಿಎಚ್‌ಡಿ ಮಾಡಿದರಂತೂ ಕೇಳುವುದೇ ಬೇಡ!

ನೌಕರಿ ಸೇರಿದರೆ ಜೀವನ ಮುಗಿಯಿತು. ಕೂದಲು ಹಣ್ಣಾಗಿ, ತಲೆ ಬೋಳಾದ ಮೇಲೆ ನಿವೃತ್ತಿಯಾಗು ವುದು. 90ರ ದಶಕದಲ್ಲಿ ಇಂಜಿನಿಯರಿಂಗ್ ಪದವಿಗೆ ಬೇಡಿಕೆ ಬಂತು. ಯಾವ ಇಂಜಿನಿಯರಿಂಗ್ ಪದವಿಯೇ ಆಗಲಿ, ಕಂಪನಿಗಳು ಬಂದು ಎಲ್ಲರನ್ನೂ ತುಂಬಿಕೊಂಡು ಹೋಗುತ್ತಿದ್ದವು. ನೌಕರಿ ಗಳೇ ನೌಕರಿಗಳು. ಐಟಿ ಸೇವೆಗಳ ನೌಕರಿಗಳು ಎಂತಹ ಪ್ರಮಾಣದಲ್ಲಿ ಹುಟ್ಟಿಕೊಂಡವೆಂದರೆ ಎಲ್ಲ ಕಾಲೇಜುಗಳಲ್ಲಿ ‘ಪ್ಲೇಸ್‌ಮೆಂಟ್ ಸೆಲ್’ ಎನ್ನುವ ಒಂದು ನೀಲಿ ಬೋರ್ಡ್ ನೇತಾಡುತ್ತಿತ್ತು.

ಇದನ್ನೂ ಓದಿ: Prof R G Hegde Column: ಮೋದಿ ರೆಜೀಮ್ ಚೇಂಜ್ ಅಷ್ಟು ಸುಲಭವಲ್ಲ!

ಯಾವ ಪ್ರಮಾಣದಲ್ಲಿ, ಇಪ್ಪತ್ತು ಇಪ್ಪತ್ತೊಂದರ ಮಕ್ಕಳನ್ನು ಕೂಡ ಕಂಪನಿಗಳು ತುಂಬಿಕೊಂಡು ಹೋಗುತ್ತಿದ್ದವೆಂದರೆ ಮನೆಯಲ್ಲಿ ಏನೂ ಕೆಲಸ ಮಾಡದ (ಬಾರದ), ಬರೇ ಲ್ಯಾಪ್‌ಟಾಪ್ ಮುಂದೆ ಕೂಡುವ ಈ ಮಕ್ಕಳನ್ನು ತುಂಬಿಕೊಂಡು ಹೋಗುವ ಅವು ಈ ಪುಣ್ಯಾತ್ಮರಿಂದ ಏನು ಕೆಲಸ ಮಾಡಿಸುತ್ತವೆ, ಎಂದು ತಂದೆ ತಾಯಿಗಳೇ ಅಚ್ಚರಿ ಪಡುತ್ತಿದ್ದುದು ಇದೆ. ಬೇಡಿಕೆ ಹುಟ್ಟಿಕೊಂಡಿದ್ದು ನಮ್ಮ ಶಿಕ್ಷಣದ ಗುಣಮಟ್ಟದಿಂದ ಎಂದೇನೂ ಅಲ್ಲ (ಅದು ಯಾವಾಗ ಇದ್ದದ್ದೂ ಅಷ್ಟಕ್ಕಷ್ಟೇ.

ಉನ್ನತ ಶಿಕ್ಷಣದ ಗುಣಮಟ್ಟವೆಂದರೇನೆಂದು ಹೇಳುವುದೂ ಅಷ್ಟು ಸುಲಭವಲ್ಲ). ಅಂತಹ ಘಟನೆ ನಡೆದಿದ್ದು ಬೃಹತ್ ಸಾಮಾಜಿಕ/ ಆರ್ಥಿಕ ಕಾರಣದಿಂದ. ಉದಾ, ತೊಂಬತ್ತರ ದಶಕದ ಉದ್ಯೋಗ ಸೃಷ್ಟಿ ನಡೆದಿದ್ದು ಐಟಿ ಉದ್ಯಮಿಗಳ ದೂರದರ್ಶಿತ್ವದಿಂದ. ಅದಕ್ಕೆ ಸರಕಾರಗಳ ಸಹಕಾರದಿಂದ. ಮತ್ತು ಸಮಾಜ ಮತ್ತು ಜಾಬ್ ಮಾರ್ಕೆಟ್‌ನ ಸ್ವರೂಪ ಸ್ಥಿರವಾಗಿದ್ದರಿಂದ. ಈಗ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚು ಕ್ಷೇತ್ರಗಳನ್ನು ಆವರಿಸುತ್ತಿದ್ದಂತೆ ಇದಕ್ಕೆ ವಿರುದ್ಧವಾದ ಸ್ಥಿತಿ ಬಂದೊದಗುತ್ತಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು, ಸಮಾಜದ, ಶಿಕ್ಷಣದ, ನೌಕರಿಗಳ ಚಿತ್ರಣ ವ್ಯಾಪಕವಾಗಿ ಬದಲಾಗಿ ಹೋಗುತ್ತಿದೆ.

ಹೆಚ್ಚು ಕಡಿಮೆ ಎಲ್ಲಾ ಕ್ಷೇತ್ರಗಳಿಂದ ನೌಕರಿಗಳು ಮಾಯವಾಗುತ್ತಿವೆ. ಕಂಪನಿಗಳು, ಸರಕಾರಗಳು, ರೈಲ್ವೇಸ್, ಬ್ಯಾಂಕ್‌ಗಳು, ರಕ್ಷಣೆ ಇಂತಹ ಬೃಹತ್ ಮಾನವ ಸಂಪನ್ಮೂಲಗಳ ಅಗತ್ಯವಿದ್ದ ಕಡೆ ಕೂಡ ನೌಕರಿಗಳು ನಾಶವಾಗುತ್ತಿವೆ. ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಿದಂತೆ ಎಂತಹ, ಎಷ್ಟು ನೌಕರಿಗಳು ನಾಶವಾಗಲಿವೆ ಎನ್ನುವುದು ಊಹೆಗೂ ನಿಲುಕದ್ದು. ವಿಶೇಷವಾಗಿ ಒಳ್ಳೆಯ ಸಂಬಳದ ನೌಕರಿಗಳು ನಾಪತ್ತೆಯಾಗುತ್ತಿವೆ.

RGH 04

ಇಂತಹ ಪದವಿ ಪಡೆದರೆ ಇಂತಹ ಉದ್ಯೋಗ ಎಂಬ ಖಚಿತತೆ ಈಗ ಇಲ್ಲವೇ ಇಲ್ಲ. ಯಾವ ಪದವಿಗೂ ಉದ್ಯೋಗದ ಖಾತರಿ ಇಲ್ಲ. ಅಷ್ಟೇ ಅಲ್ಲ, ‘ಹತ್ತರಿಂದ ಐದು’ ನೌಕರಿಯ ಪರಿಕಲ್ಪನೆಯೇ ಇನ್ನು ಮುಂದೆ ಇರುವುದಿಲ್ಲ. ಹಾಗಾಗಿ ಅಂತಹ ನೌಕರಿಗೆ ಸಂಬಂಧಿಸಿದ ಕಲಿಕೆಗಳೇ ಇರುವುದಿಲ್ಲ ಎಂದು ಅನಿಸಲಾರಂಭಿಸಿದೆ.

ಎರಡನೆಯ ಕಾರಣವೆಂದರೆ ಸಮಾಜ ಮತ್ತು ಬಾಹ್ಯ ಅಂಶಗಳು ಸ್ಥಿರವಾಗಿದ್ದುದರಿಂದ ಹಿಂದಿನ ನೌಕರಿಗಳಿಗೆ ಮಧ್ಯಕಾಲದಲ್ಲಿ, ತೀವ್ರ ಬದಲಾಗಬೇಕಾದ ಸವಾಲು ಇರಲಿಲ್ಲ. ಅಗತ್ಯವಿದ್ದಲ್ಲಿ ತುಸು ತರಬೇತಿ ಪಡೆದು/ ನೀಡಿ ಇದ್ದವರನ್ನು ಇದ್ದಲ್ಲಿಯೇ ಮುಂದುವರಿಸಬೇಕಾದ ರೀತಿಯಲ್ಲಿಯೇ ನೌಕರಿ ಗಳು ಇದ್ದವು. ಉದಾಹರಣೆಗೆ ಬಿ.ಕಾಮ್. ಇಂತವನ್ನು ಕಲಿತವರು ಬ್ಯಾಂಕ್‌ಗಳಲ್ಲಿ ನಡೆದ ಕಂಪ್ಯೂಟರೀಕಣಕ್ಕೆ ಹೊಂ ದಿಕೊಂಡು ಅಲ್ಲೇ ಉಳಿದರು. ಎಐ ವಿಷಯವೇ ಬೇರೆ. ಎಐ ಜತೆ ಕೂಡಿ ಬಾಳಲು ಬೇಕಾಗುವ ಮಾನವ ಕೌಶಲಗಳು ಯಾವವು ಎನ್ನುವುದು ಅರ್ಥವಾಗುತ್ತಿಲ್ಲ. ಅಲ್ಲದೆ ಆ ಕೌಶಲಗಳು ಹಿಂದಿನಂತೆ ಕೆಲವೇ ಕೆಲವು (ಪ್ಯಾಟರ್ನ್‌ಗಳಲ್ಲಿ) ಸ್ವರೂಪಗಳಲ್ಲಿ ಉದಾ, ಆರ್ಟ್ಸ್, ಸೈನ್ಸ್, ಬ್ಯಾಂಕಿಂಗ್, ಅಕೌಂಟಿಂಗ್, ಇಂಜಿನಿಯರಿಂಗ್ ಹೀಗೆ ಬರುತ್ತಿಲ್ಲ. ಅಲ್ಲದೆ ಅಂತಹ ಕೌಶಲಗಳು ವೇಗವಾಗಿ ಬದಲಾಗುತ್ತಿರವ ತಂತ್ರಜ್ಞಾನದ ಜತೆ ಪದೇ ಪದೆ, ವರ್ಷಕ್ಕೊಮ್ಮೆ ಆರು ತಿಂಗಳಿಗೊಮ್ಮೆ ಬದಲಾಗಿ ಹೋಗಿ ಬಿಡಬಹುದು.

ಇದು ವಿಪರೀತದ ಬದಲಾವಣೆ. ಹಾಗಾಗಿಯೇ ನಮ್ಮ ಈಗಿರುವ ಸಾಂಪ್ರದಾಯಿಕ ಪದವಿಗಳು ಸಂಪೂರ್ಣವಾಗಿ ಅಪ್ರಸ್ತುತವಾಗುತ್ತಿರುವುದು. ಕಲಿತ ವಿಷಯಕ್ಕೆ ಸಂಬಂಧಿಸಿದ ನೌಕರಿಗಳೇ ಇಲ್ಲವಾಗಿ ಬಿಟ್ಟರೆ ಬೇರೊಂದು ವ್ಯವಸ್ಥೆ ಕಲ್ಪಿಸುವಷ್ಟು ಸಾಮರ್ಥ್ಯ ನಮ್ಮ ಯಾವ ಡಿಗ್ರಿಗೂ ಇಲ್ಲ. ನಮ್ಮಲ್ಲಿರುವ ಹೆಚ್ಚಿನ ಕೋರ್ಸ್‌ಗಳು ಉದಾಹರಣೆಗೆ, ಎಂಜಿನಿಯರಿಂಗ್, ಐಟಿಐ, ಎಂಬಿಎ, ಎಂಎಸ್ಸಿ, ಎಂ.ಎ, ಇಂತಹ ‘ಕಲಿಕೆಗಳು’ (ಮೋನೋ ಸ್ಕಿಲ್) ಏಕ ಕೌಶಲ ಕಲಿಕೆಗಳು.

ಒಂದು ‘ಸ್ಥಿರ’ ಸಮಾಜವನ್ನು ಗ್ರಹಿಸಿ ಬಂದಿರುವ ಕೋರ್ಸ್‌ಗಳು ಅವು. ಸಮಾಜದ, ನೌಕರಿಗಳ ಸ್ವರೂಪವೇ ಬದಲಾದರೆ ಅವು ಸಂಪೂರ್ಣವಾಗಿ ಅಸಹಾಯಕವಾಗುತ್ತವೆ. ಇದು ಸಮಸ್ಯೆ. ವಿಷಯ ವಿದ್ಯಾರ್ಥಿಗಳಿಗೂ ಗೊತ್ತಾಗಿ ಹೋದಂತಿದೆ. ಹಾಗಾಗಿ ಕಾಲೇಜು ಒಳ್ಳೆಯದು ಕೆಟ್ಟದು ಎಂಬ ಪ್ರಶ್ನೆ ಇಲ್ಲ. ಬರಲು ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿಲ್ಲ.

ಕೆಳ ಮಧ್ಯಮ ವರ್ಗದ ಎವರ್‌ಗ್ರೀನ್ ಕೋರ್ಸ್‌ಗಳಾಗಿದ್ದ ಟಿಸಿಎಚ್, ಬಿಎಡ್, ಇಂಗ್ಲೀಷ್ ಎಂಎ, ಎಂಎಸ್‌ಸಿ ಫಿಸಿಕ್ಸ್ ಇವುಗಳಿಗೆ ಕಿಮ್ಮತ್ತೇ ಇಲ್ಲ. ಉಳಿದ ಪೋಸ್ಟ್ ಗ್ರಾಜುವೇಟ್ ಕೋರ್ಸ್‌ಗಳನ್ನಂತೂ ಬಿಡಿ. ಕಂಪ್ಯೂಟರ್ ಪದವಿಗಳು ಬಿಸಿಎ, ಎಂಸಿಎ, ಎಂಬಿಎ, ಪಿಜಿ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್, ಎಂಎಸ್‌ಸಿ ಇಲೆಕ್ಟ್ರಾನಿಕ್ಸ್, ಎಂಟೆಕ್, ಎಂಎಸ್‌ಗಳನ್ನು ಮಾತಾಡಿಸುವವರಿಲ್ಲ. ಇಂಜಿನಿಯರಿಂಗ್‌ಗೆ ಬೇಡಿಕೆ ಇಲ್ಲ. ಇರುವವರನ್ನೂ ಕಂಪನಿಗಳು ತೆಗೆದುಹಾಕುತ್ತಿವೆ. ನೌಕರಿ ಸಿಕ್ಕರೂ ಕೂಡ ಸಂಬಳದಲ್ಲಿ ಇಳಿಕೆಯಾಗಿದೆ.

ಕಾಯಂ ಆಗುವುದು ಇತ್ಯಾದಿ ಇಲ್ಲವೇ ಇಲ್ಲ. ವಿಶೇಷವಾಗಿ ಪೋಸ್ಟ್ ಗ್ರಾಜುವೇಟ್ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ಮಂಗಳೂರು ವಿಶ್ವವಿದ್ಯಾಲಯ ಕಳೆದ ವರ್ಷ ಹಲವು ಕೋಸ್ ಗಳನ್ನು ರದ್ದು ಮಾಡಿದ ಸುದ್ದಿ ಬಂದಿತ್ತು. (ಈ ವಿದ್ಯಾರ್ಥಿಗಳು ಎಲ್ಲಿ ಹೋಗುತ್ತಿದ್ದಾರೆ ಎನ್ನುವ ಅಂದಾಜು ಕೂಡ ಸಿಗುತ್ತಿಲ್ಲ. ಅದೊಂದು ಚಿದಂಬರ ರಹಸ್ಯ.)ಐಐಟಿಗಳಲ್ಲಿ ಕೂಡ ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ ಆಕರ್ಷಣೆ ಇಲ್ಲ. ಎಂಬಿಬಿಎಸ್‌ಗೆ ಹೋಗಲೂ (ಶ್ರೀಮಂತರನ್ನು ಬಿಟ್ಟು) ಜನ ವಿಚಾರ ಮಾಡುತ್ತಿದ್ದಾರೆ. ಅಲ್ಲಿ ಕಲಿಕೆಗೆ ಹೂಡಿಕೆ ಮಾಡಿದ ದುಡ್ಡು ವಾಪಸ್ ಬರುತ್ತದೆ ಎಂಬ ಧೈರ್ಯ ವಿಲ್ಲ.

ದಂತವೈದ್ಯ ಸೀಟ್‌ಗಳಂತೂ ಖಾಲಿಯೋ ಖಾಲಿ. ಅರ್ಥವೆಂದರೆ ನೌಕರಿಗಳ ವಾತಾವರಣದಲ್ಲಿ ಬಂದಿರುವ ಭಾರಿ ಬದಲಾವಣೆಯ ಬೆನ್ನೇರಿ ನಮ್ಮ ಸಾಂಪ್ರದಾಯಿಕ ಪದವಿಗಳು, ಮತ್ತು ಕಲಿಕೆಯೇ ಅಪ್ರಸ್ತುತವಾಗಿ ಹೋಗುತ್ತಿದೆ. ಪಿಎಚ್‌ಡಿ ಡಿಗ್ರಿಗಳೇ ಅಪ್ರಸ್ತುತ. ಕೃತಕ ಬುದ್ಧಿಮತ್ತೆ ರಿಸರ್ಚನ್ನು ಕೆಲವೇ ಕ್ಷಣಗಳಲ್ಲಿ ಮಾಡಿಕೊಡುತ್ತದೆ. ಇದರ ವಾಸನೆ ನಮ್ಮ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಬಡಿದಿದೆ.

ಪರಿಣಾಮವಾಗಿ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು, ಕಾಲೇಜುಗಳಿಗೆ, ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ವಿದ್ಯಾರ್ಥಿಗಳೇ ಬರದೆ ಬಾಗಿಲು ಹಾಕುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಈ ವರ್ಷವೇ ಬೇಡಿಕೆ ಬಹಳ ಕಡಿಮೆಯಿತ್ತು ಎಂಬ ವರದಿಗಳಿವೆ. ಅಂದರೆ ಕ್ರಮೇಣ ನಮ್ಮ ಬಿಲ್ಡಿಂಗ್‌ಗಳು, ಲ್ಯಾಬ್‌ಗಳು, ಲೈಬ್ರರಿಗಳು ಪ್ರೊಫೆಸರ್‌ಗಳು ಎಲ್ಲವೂ ಅಪ್ರಸ್ತುತವಾಗಿ ಹೋಗಿಬಿಡಬಹುದು.

ಉನ್ನತ ಶಿಕ್ಷಣದ ಬೃಹತ್ ಮಾರುಕಟ್ಟೆಯೇ ಕುಸಿದು ಹೋಗಿ ಬಿಡಬಹುದು. ಸ್ಥಿತಿ ಅಷ್ಟು ಗಂಭೀರ ವಾಗಿದೆ. ಪೂರ್ತಿ ಬದಲಾವಣೆ ನಾಳೆಯೇ ಅಥವಾ ಈ ವರ್ಷವೇ ಆಗುವುದಿಲ್ಲ. ಆದರೆ ಆರಂಭ ಆಗಿದೆ. ಮತ್ತು ಹತ್ತು ವರ್ಷಗಳಲ್ಲಿ ಬದಲಾವಣೆಯ ಪೂರ್ಣ ಚಂಡಮಾರುತ ಅಪ್ಪಳಿಸಲಿದೆ. ಎಐ ಭಾರದಡಿ ಸಮಗ್ರವಾಗಿ ನೌಕರಿಗಳ, ಶಿಕ್ಷಣದ, ಸಾಮಾಜಿಕ ವ್ಯವಸ್ಥೆಯೇ ಕುಸಿದುಬೀಳಲಿದೆ. ಈಗ ನಾವು ಏನುಮಾಡಬಹುದು? ತುರ್ತಾಗಿ ಮಾಡಬೇಕಿರುವ ಕೆಲಸ ಬದಲಾವಣೆಯ ಸ್ವರೂಪ ಹೇಗಿರಬ ಹುದೆಂದು ಗ್ರಹಿಸಲು ಪ್ರತ್ನಿಸುವುದು. ಭವಿಷ್ಯದ ನೌಕರಿಗಳು ಹೇಗಿರಬಹುದೆಂಬುದನ್ನು ಗ್ರಹಿಸಲು ಪ್ರಯತ್ನಿಸುವುದು. ಈ ಕೆಲಸದಲ್ಲಿ ಕನ್ಪೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (CII), ಅಸೋಸಿಯೇಷನ್ ಆಪ್ ಇಂಡಿಯನ್ ಸಾಫ್ಟ್‌ʼವೇರ್ ಇಂಡಸ್ಟ್ರೀಸ್ (Assocham) ಇಂತವು ಮಾರ್ಗದರ್ಶನ ಮಾಡಬಹುದು. ‌

ಇದನ್ನು ರಾಷ್ಟ್ರೀಯ ನೀತಿ ಆಯೋಗ ಕೂಡ ಕೈಗೆತ್ತಿಕೊಳ್ಳಬೇಕು. ಏಕೆಂದರೆ ಈಗಾಗಲೇ ಹೇಳಿದ ಹಾಗೆ ವಿಷಯ ಕೇವಲ ಶಿಕ್ಷಣಕ್ಕೆ ಸಂಬಂಧಿಸಿದ್ದಲ್ಲ. ಕಾಮನ್ ಸೆನ್ಸ್‌ಗೆ ಹೊಳೆಯುವ ವಿಷಯವೆಂದರೆ ಬಹುಶಃ ಕೃತಕ ಬುದ್ಧಿಮತ್ತೆಯನ್ನು ಒದಗಿಸುವ ಸೇವೆಗಳು, ಅಂತಹ ಕಂಪನಿಗಳು ದೊಡ್ಡ ಪ್ರಮಾಣ ದಲ್ಲಿ ಹುಟ್ಟಿಕೊಳ್ಳಬಹುದು. ಮತ್ತು ಕೃಷಿಯಿಂದ ಹಿಡಿದು ಬಾಹ್ಯಾಕಾಶದವರೆಗೆ ಹುಟ್ಟಿಕೊ ಳ್ಳಲಿರುವ ಎಐ ಟೂಲ್‌ಗಳು ಮತ್ತು (ಪರಿಕರಗಳು) ಸೇವೆಗಳು ಬೇರೆ ಬೇರೆ ರೀತಿಯೇ ಇರಬಹುದು.

ಭಾರತದಂತಹ ದೊಡ್ಡ ಜನಸಂಖ್ಯೆ ಇರುವ, ಜನಸಂಖ್ಯೆಯ ಸ್ವರೂಪ ಸಂಕೀರ್ಣ ವಾಗಿರುವ, ಸೇವಾ ಉದ್ಯಮ, ಟೂರಿಸಂ, ಕೇಟರಿಂಗ್ ಸೇವೆ ದೊಡ್ಡ ಉದ್ಯಮವಾಗಿರುವ ನಮ್ಮ ದೇಶದಲ್ಲಿ ಎಐ ಬಳಕೆಯ ಸ್ವರೂಪ ಅಮೇರಿಕದಲ್ಲಿಗಿಂತ ಬೇರೆ ರೀತಿಯೇ ಆಗಿರಬಹುದು. ಇಂತಹ ವಿಷಯವನ್ನೆಲ್ಲ ಗಮನಿಸಿ ನಾವು ಇರುವ ಕೋರ್ಸ್‌ಗಳನ್ನು ಬದಲಾಯಿಸಬೇಕು/ ತೆಗೆದುಹಾಕಬೇಕು/ ಬೇರೆ ಕೋರ್ಸ್‌ ಗಳನ್ನು ಆರಂಭಿಸಬೇಕು. ಇನ್ನೊಂದು ವಿಷಯ.

ನಮ್ಮಲ್ಲಿ ಈಗಿರುವ ಎಲ್ಲ ಕೋರ್ಸ್‌ಗಳು ಏಕಕೌಶಲದವು (ಮೋನೋ ಸ್ಕಿಲ್). ಯಾವ ಕೌಶಲವೂ ಇಲ್ಲ ಎಂಬ ಗೊಣಗಾಟವೂ ಇದೆ. ಉದಾ. ಎಂಕಾಮ್, ಎಂಎಸ್‌ಸಿ ಎಂಎ ಇಂತಹವು. ಇಂತಹ ಪದವಿಗಳ ಜತೆ ಒಂದೆರಡು ಕೋ ಡಿಗ್ರಿ ಅಥವಾ ಡಿಪ್ಲೋಮಾಗಳನ್ನು ಕಂಪಲ್ಸರಿಯಾಗಿ ಜೋಡಿಸಿ ಕಲಿಕೆಯನ್ನು ರಿಪೇರಿ ಮಾಡಿ ಎರಡು ಮೂರು ಬೇರೆ ಬೇರೆ ರೀತಿಯ (ಒಂದು ಲೋಕಲ್, ಒಂದು ಗ್ಲೋಬಲ್, ಒಂದು ಸ್ವಯಂ ಉದ್ಯೋಗ,) ಕೌಶಲಗಳನ್ನು ಉನ್ನತ ಶಿಕ್ಷಣದೊಳಗೆ ಇಂಟಿಗ್ರೇಟ್‌ ಗೊಳಿಸಬೇಕು.

ಏಕಕೌಶಲದಿಂದ ಬಹುಕೌಶಲ ಕಲಿಕೆಗೆ ಪರಿವರ್ತಿಸಲು, ಅವನ್ನು ಪ್ರಸ್ತುತಗೊಳಿಸಲು ಸಾಧ್ಯ ವಿದೆಯೇ ಎಂಬುದನ್ನು ತುರ್ತಾಗಿ ಗಮನಿಸಬೇಕು. ಮತ್ತೆ ಕಲಿಕೆಯನ್ನು ನಿಜವಾಗಿಯೂ ‘ಹ್ಯಾಂಡ್ಸ್ ಆನ್’ ಎಕ್ಸ್‌ಪೀರಿಯನ್ಸ್‌ಗಳಿರುವ ಕೋರ್ಸ್‌ಗಳನ್ನಾಗಿ ಬದಲಾಯಿಸಬೇಕು. ಹೀಗೆ ಮಾಡಿದರೆ ಪ್ರಸ್ತುತ ಇರುವ ದೊಡ್ಡ ಪ್ರಮಾಣದ ಶೈಕ್ಷಣಿಕ ಮೂಲಭೂತ ಸೌಲಭ್ಯಗಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗಬಹುದು. ನಂತರ ನೋಡಿಕೊಂಡು ಕೋರ್ಸುಗಳನ್ನು ಸಂಪೂರ್ಣವಾಗಿ ಬದಲಾಯಿಸ ಬಹುದು. ಈ ಎಲ್ಲ ವಿಷಯವನ್ನು ನಾವು ಏಕೆ ಗಂಭೀರವಾಗಿ ತೆಗೆದು ಕೊಳ್ಳಬೇಕು ಎನ್ನುವುದಕ್ಕೆ ಕಾರಣಗಳಿವೆ.

ಒಂದನೆಯದು, ನಮ್ಮೆ ದುರಿನಲ್ಲಿ ಒಂದು ಬೃಹತ್ ಜೆನ್ ಝೀ ಪಡೆ ಹಸಿದು, ಸಿಟ್ಟಿನಲ್ಲಿ ಕುಳಿತಿದೆ. ಶಿಕ್ಷಣದಲ್ಲಿ ಹುರುಳಿಲ್ಲ ಎಂಬ ವಾಸನೆ ಅದಕ್ಕೆ ಬಡಿದಿದೆ. ಇದು ತುಂಬಾ ಸೂಕ್ಷ್ಮವಾದ, ಭಾವನಾ ತ್ಮಕವಾದ ವಿಷಯ ಕೂಡ. ನಾವು ಈಗ ಮೊದಲಿನಂತೆ ತಡಮಾಡಿ, ಗೊಂದಲ ಮಾಡಿದರೆ ದೇಶದಲ್ಲಿ ಬೃಹತ್ ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಯಾ ಗಿಬಿಡಬಹುದು. ಕೆಲವು ದೇಶಗಳಲ್ಲಿ ಕಂಡು ಬಂದಿರುವ ರೀತಿಯ ಜೆನ್ ಝೀ ಕೋಲಾಹಲ ಇಲ್ಲಿಯೂ ಸಂಭವಿ ಸಿಬಿಡಬಹುದು.

ಹಾಗಾಗಿ ಇದು ಕೇವಲ ಶೈಕ್ಷಣಿಕ ಸವಾಲು ಅಲ್ಲ. ರಾಜಕೀಯ ಸವಾಲು ಕೂಡ. ನಿಜ ಹೇಳಬೇಕೆಂದರೆ ಕೆಲವೇ ದಿನಗಳ ಹಿಂದೆ ನಡೆದ, ಪೇಪರ್ ಲೀಕ್‌ನ ವಿರುದ್ಧದ ಜೆನ್ ಝೀ ಹೋರಾಟ ದೊಡ್ಡ ಬೆಂಕಿಯಾಗಿ ಹೋಗಿಬಿಡಬಹುದು ಎಂಬ ಆತಂಕ ನಮಗಿತ್ತು. ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ದೊಡ್ಡ ಹುಳುಕುಗಳಿವೆ. ಪಾಪ, ಜೆನ್ ಝೀಗೆ ಅದೆಲ್ಲ ಗೊತ್ತಿಲ್ಲ. ಹಾಗಾಗಿ ಅದು ಪೇಪರ್ ಲೀಕ್ ವಿರುದ್ಧ ಗಲಾಟೆ ಹೊಡೆದು ಶಿಕ್ಷಣ ಸಚಿವರ ರಾಜೀನಾಮೆ ಪಡೆದು ಸಂಭ್ರಮಿಸಿ ಸುಮ್ಮನಾಗಿ ಬಿಟ್ಟಿತು.

ಪೇಪರ್ ಲೀಕ್‌ಗಿಂತ ದೊಡ್ಡ ವಿಷಯಗಳು, ಮೆರಿಟ್, ಸಿಲಬಸ್, ಕಲಿಸುವಿಕೆ, ಪರೀಕ್ಷೆ ಇಂತಹ ವಿಷಯಗಳಿಗೆ ಜೆನ್ ಝೀ ಕೈ ಹಾಕಿದರೆ ನಮ್ಮ ‘ವ್ಯವಸ್ಥೆಗಳು’ ಗಂಭೀರ ಸಂಕಟವನ್ನು ಅನುಭವಿಸ ಲಿವೆ. ಎರಡನೆ ವಿಷಯ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಬೃಹತ್ ಶೈಕ್ಷಣಿಕ ಮೂಲಭೂತ ಸೌಕರ್ಯ ನಿರುಪಯೋಗಕ್ಕೆ ಬೀಳುತ್ತದೆ. ಇದು ಸಣ್ಣ ವಿಷಯವಲ್ಲ. ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣವನ್ನು ಬದುಕಿಸುವುದಿದ್ದರೆ ನಾವು ಔಟ್ ಆಫ್ ದ ಬಾಕ್ಸ್ ಯೋಚಿ ಸಲೇಬೇಕಿದೆ. ಮತ್ತು ಈ ಕೆಲಸಗಳನ್ನೆಲ್ಲ ನಾವು ಶೀಘ್ರವಾಗಿ ಸಾಧಿಸಬೇಕಿದೆ. ಏಕೆಂದರೆ ಎಐ ಕೋವಿಡ್ ವೇಗದಲ್ಲಿ ಮುನ್ನಗ್ಗುತ್ತಿದೆ.