ಒಂದೊಳ್ಳೆ ಮಾತು
ಮಹಾಭಾರತದಲ್ಲಿ ಶಕುನಿ ಎಂದರೆ ನಮಗೆ ನೆನಪಾಗುವುದು ಕಪಟ, ದ್ವೇಷ ಮತ್ತು ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾದ ಕುತಂತ್ರ. ಆದರೆ, ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ತಾಲೂಕಿನ ಪವಿತ್ರೇಶ್ವರಂ ಎಂಬ ಹಳ್ಳಿಯಲ್ಲಿ ಶಕುನಿಯ ಕಥೆಗೆ ಸಂಪೂರ್ಣ ವಿಭಿನ್ನವಾದ, ಧನಾತ್ಮಕ ಮತ್ತು ಮಾನವೀಯ ಆಯಾಮವೊಂದಿದೆ. ಇಲ್ಲಿ ಶಕುನಿಯನ್ನು ದುಷ್ಟನಾಗಿ ನೋಡದೆ, ಅವನ ಚಾಣಾಕ್ಷ ಬುದ್ಧಿ ಮತ್ತೆ, ತಂತ್ರಜ್ಞತೆ ಮತ್ತು ಜ್ಞಾನದ ಸಂಕೇತವಾಗಿ ಆರಾಧಿಸಲಾಗುತ್ತದೆ.
ಸ್ಥಳೀಯ ಜನಪದ ಕಥೆಯ ಪ್ರಕಾರ, ಪಾಂಡವರು ವನವಾಸ ಮತ್ತು ಅಜ್ಞಾತವಾಸದಲ್ಲಿದ್ದಾಗ, ಅವರನ್ನು ಹುಡುಕುತ್ತಾ ಕೌರವರು ಮತ್ತು ಶಕುನಿ ಈ ದಕ್ಷಿಣದ ಪ್ರದೇಶಕ್ಕೆ ಬರುತ್ತಾರೆ. ಈ ಕಾಡಿನ ಜಾಗಕ್ಕೆ ಬಂದಾಗ ಅವರು ತಂಗಲು ಮತ್ತು ತಮ್ಮ ಆಯುಧಗಳನ್ನು ಪರಸ್ಪರ ಹಂಚಿಕೊಳ್ಳಲು ನಿರ್ಧರಿಸುತ್ತಾರೆ.
ಮಲಯಾಳಂ ಭಾಷೆಯಲ್ಲಿ ‘ಪಗುತ್ತು’ ಎಂದರೆ ಹಂಚಿಕೊಳ್ಳುವುದು ಎಂದರ್ಥ. ಆಯುಧಗಳನ್ನು ಹಂಚಿಕೊಂಡ ಈ ಜಾಗ ಮೊದಲು ‘ಪಗುತ್ತೀಶ್ವರಂ’ ಎಂದು ಕರೆಯಲ್ಪಟ್ಟು, ಕಾಲಕ್ರಮೇಣ ಅದು ‘ಪವಿತ್ರೇಶ್ವರಂ’ ಆಗಿ ಬದಲಾಯಿತು.
ಇದನ್ನೂ ಓದಿ: Roopa Gururaj Column: ಠಾಣಾ ರಾಮ್ ಕಡ್ವಾಸರ ಅವರ ಇಪ್ಪತ್ತೊಂದು ವರ್ಷಗಳ ನಿಸ್ವಾರ್ಥ ಸೇವೆ
ಇನ್ನೊಂದು ಬಲವಾದ ನಂಬಿಕೆಯ ಪ್ರಕಾರ, ಕುರುಕ್ಷೇತ್ರ ಯುದ್ಧದಲ್ಲಿ ತಾನು ಮಾಡಿದ ತಂತ್ರಗಳು ಇಷ್ಟೊಂದು ಜನರ ಭೀಕರ ನಾಶಕ್ಕೆ ಕಾರಣವಾಯಿತಲ್ಲ ಎಂದು ಶಕುನಿ ಕೊನೆಯ ದಿನಗಳಲ್ಲಿ ತೀವ್ರ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದನು. ತನ್ನ ಪಾಪಪ್ರಕ್ಷಾಳನೆಗಾಗಿ ಮತ್ತು ಆತ್ಮದ ಶಾಂತಿಗಾಗಿ ದಕ್ಷಿಣದತ್ತ ಯಾತ್ರೆ ಬೆಳೆಸಿದ ಅವನು, ಪವಿತ್ರೇಶ್ವರಂನ ಈ ಪ್ರಶಾಂತ ಬೆಟ್ಟದ ಪ್ರದೇಶಕ್ಕೆ ಬಂದು ಶಿವನನ್ನು ಕುರಿತು ಕಠಿಣ ತಪಸ್ಸು ಆಚರಿಸಿದನು.
ಅಲ್ಲಿ ಶಕುನಿ ಕೇವಲ ತಪಸ್ವಿಯಾಗಿ ಉಳಿಯದೆ, ತನ್ನ ತೀಕ್ಷ್ಣ ಬುದ್ಧಿಮತ್ತೆಯನ್ನು ಬಳಸಿ ಸ್ಥಳೀಯ ಹಳ್ಳಿಗರ ಭೂವಿವಾದಗಳು, ಕುಟುಂಬ ಕಲಹಗಳು ಮತ್ತು ಕಷ್ಟಗಳಿಗೆ ಅತ್ಯಂತ ನ್ಯಾಯಯುತವಾದ ಪರಿಹಾರಗಳನ್ನು ನೀಡತೊಡಗಿ ದನು. ಅವನ ತಪಸ್ಸಿನ ಶಕ್ತಿ ಮತ್ತು ತಂತ್ರದ ಜ್ಞಾನದಿಂದಾಗಿ ಜನರಿಗೆ ಅವನ ಮೇಲೆ ಅಪಾರ ವಿಶ್ವಾಸ ಮೂಡಿತು. ಕೊನೆಗೆ ಅವನು ಇಲ್ಲೇ ಶಿವನ ಅನುಗ್ರಹದಿಂದ ಮೋಕ್ಷವನ್ನು ಪಡೆದನು ಎಂಬುದು ಇಲ್ಲಿನ ಜನರ ನಂಬಿಕೆ.
ಈ ಮಹಾನ್ ಬುದ್ಧಿವಂತನ ಸ್ಮರಣೆಗಾಗಿ ಸ್ಥಳೀಯ ಕುರರ್ವ ಜನಾಂಗದವರು ಅವನು ತಪಸ್ಸು ಮಾಡಿದ ಜಾಗದಲ್ಲಿ ‘ಮಾಯಂಗೋಟ್ಟು ಮಲಂಚರುವು ಮಲನಾಡಾ ದೇವಾಲಯ’ ನಿರ್ಮಿಸಿ ದರು. ಈ ದೇವಾಲಯದಲ್ಲಿ ಯಾವುದೇ ಸಾಂಪ್ರದಾಯಿಕ ವಿಗ್ರಹವಿಲ್ಲ.
ಬದಲಿಗೆ, ಶಕುನಿ ಕುಳಿತುಕೊಳ್ಳುತ್ತಿದ್ದ ಜಾಗ ಎನ್ನಲಾದ ಒಂದು ಎತ್ತರದ ಕಲ್ಲಿನ ಪೀಠವನ್ನು ಇಟ್ಟು, ಅದನ್ನೇ ಶಕುನಿಯ ಆತ್ಮ ನೆಲೆಸಿರುವ ಶಕ್ತಿಪೀಠವೆಂದು ಪೂಜಿಸಲಾಗುತ್ತದೆ. ಇಲ್ಲಿನ ಆಚರಣೆಗಳು ವೈದಿಕ ಪದ್ಧತಿಗಿಂತ ಭಿನ್ನವಾಗಿದ್ದು, ಅತ್ಯಂತ ಮುಕ್ತವಾಗಿವೆ. ಭಕ್ತರು ಶಕುನಿ ದೇವರಿಗೆ ಎಳನೀರು, ಅನ್ನ, ರೇಷ್ಮೆ ಬಟ್ಟೆಗಳೊಂದಿಗೆ ಸ್ಥಳೀಯ ಸಾರಾಯಿಯನ್ನು ಭಕ್ತಿಯಿಂದ ಅರ್ಪಿಸುತ್ತಾರೆ.
ಪ್ರತಿ ವರ್ಷ ಮಲಯಾಳಂ ತಿಂಗಳ ಮಕರಂನಲ್ಲಿ (ಜನವರಿ-ಫೆಬ್ರವರಿ) ಇಲ್ಲಿ ‘ಮಲಕ್ಕುಡ ಮಹೋ ತ್ಸವ’ ಎಂಬ ದೊಡ್ಡ ರಥೋತ್ಸವ ನಡೆಯುತ್ತದೆ. ಶ್ರೀಕೃಷ್ಣನ ತಂತ್ರ ಧರ್ಮರಕ್ಷಣೆಯ ಬೆಳಕಾದರೆ, ಶಕುನಿಯ ತಂತ್ರ ಪ್ರತೀಕಾರದ ಕತ್ತಲೆಯಾಗಿತ್ತು ಎಂಬುದು ಮಹಾಭಾರತದ ಕಥೆ. ಆದರೆ, ಪವಿತ್ರೇ ಶ್ವರಂನ ಈ ವಿಶಿಷ್ಟ ಇತಿಹಾಸವು, ಪ್ರತೀಕಾರದ ಹಾದಿ ಹಿಡಿದ ವ್ಯಕ್ತಿಯೂ ಪಶ್ಚಾತ್ತಾಪ ಮತ್ತು ಲೋಕಸೇವೆಯಿಂದ ದೈವತ್ವಕ್ಕೇರಬಹುದು ಎಂಬ ಉದಾತ್ತ ಚಿಂತನೆಯನ್ನು ಜಗತ್ತಿಗೆ ಸಾರುತ್ತದೆ.
ನಂಬಿಕೆಗಳು ಅದೇನೆ ಇರಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಿ, ಪಶ್ಚಾತ್ತಾಪ ಪಟ್ಟು, ತಿದ್ದಿ ಕೊಂಡು ಬದುಕುವುದಕ್ಕೆ ಅವಕಾಶ ಕೊಡಬೇಕು. ಬದುಕು ಎಲ್ಲರಿಗೂ ಮತ್ತೊಂದು ಅವಕಾಶ ಕೊಡುತ್ತಾ ಹೋಗುತ್ತದೆ. ಅಂತಹ ಅವಕಾಶದ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಮತ್ತೆಂದೂ ಎಡವದಂತೆ ನಮ್ಮಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಇಂತಹ ಅವಕಾಶಗಳನ್ನು ಬಳಸಿಕೊಂಡು ಮತ್ತಷ್ಟು ಮನುಷ್ಯರಾಗಿ ಬದುಕೋಣ.