ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಆಷಾಢದಲ್ಲಿ ಮೈಸೂರಿನ ಅಂದವೇ ಬೇರೆ !

ಆಷಾಢ ಮಾಸದಲ್ಲಿ ಮೈಸೂರು ಇದಕ್ಕಿದ್ದಂತೆ ಬದಲಾಗಿ ಬಿಡುತ್ತದೆ. ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಆಷಾಢ ಶುಕ್ರವಾರ ಅನ್ನದಾನ ಮಾಡುವುದು ಅತಿ ಸಾಮಾನ್ಯ ವಿಷಯವಾಗಿದೆ. ತಾಯಿ ಚಾಮುಂಡೇ ಶ್ವರಿಯು ಶಕ್ತಿದೇವತೆಯಾಗಿರುವ ಕಾರಣ ಮಾಂಸಾಹಾರವನ್ನು ಕೂಡ ಹೇರಳವಾಗಿ ಮಾಡಿ ಹಂಚಲಾಗುತ್ತದೆ. ಮೈಸೂರಿಗೆ ಹೊಸದಾಗಿ ಬಂದು ನೆಲೆ ನಿಂತ ಮೊದಲ ಆಷಾಢದಲ್ಲಿ ಇದನ್ನು ನೋಡಿ ಅಚ್ಚರಿಪಟ್ಟಿದ್ದೆ. ಇದೇನೋ ಅಬ್ಬರು, ಇಬ್ಬರು ಮಾಡಿಸುತ್ತಾರೆ ಎಂದು ಕೊಂಡಿದ್ದೆ.

ವಿಶ್ವರಂಗ

mookanahalli@gmail.com

ಆಷಾಢ ಮಾಸದಲ್ಲಿ ಮೈಸೂರು ಇದಕ್ಕಿದ್ದಂತೆ ಬದಲಾಗಿ ಬಿಡುತ್ತದೆ. ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಆಷಾಢ ಶುಕ್ರವಾರ ಅನ್ನದಾನ ಮಾಡುವುದು ಅತಿ ಸಾಮಾನ್ಯ ವಿಷಯವಾಗಿದೆ. ತಾಯಿ ಚಾಮುಂಡೇಶ್ವರಿಯು ಶಕ್ತಿದೇವತೆಯಾಗಿರುವ ಕಾರಣ ಮಾಂಸಾಹಾರವನ್ನು ಕೂಡ ಹೇರಳವಾಗಿ ಮಾಡಿ ಹಂಚಲಾಗುತ್ತದೆ. ಮೈಸೂರಿಗೆ ಹೊಸದಾಗಿ ಬಂದು ನೆಲೆ ನಿಂತ ಮೊದಲ ಆಷಾಢದಲ್ಲಿ ಇದನ್ನು ನೋಡಿ ಅಚ್ಚರಿಪಟ್ಟಿದ್ದೆ. ಇದೇನೋ ಅಬ್ಬರು, ಇಬ್ಬರು ಮಾಡಿಸುತ್ತಾರೆ ಎಂದು ಕೊಂಡಿದ್ದೆ.

ವರ್ಷಗಳು ಉರುಳುತ್ತ ಹೋದಂತೆ, ಇದು ಈ ನೆಲದ ಸಂಸ್ಕೃತಿ ಎನ್ನುವುದರ ಅರಿವಾಯ್ತು. ಉಳ್ಳವರು, ಇಲ್ಲದವರು ಎಲ್ಲರೂ ಈ ಅನ್ನದಾನ ಸಂಪ್ರದಾಯವನ್ನು ಜತನದಿಂದ ಕಾಪಾಡಿ ಕೊಂಡು ಬರುತ್ತಿದ್ದಾರೆ. ಉಳ್ಳವರು ಯಾರನ್ನೂ ಕೇಳುವ ಗೋಜಿಗೆ ಹೋಗದೆ ತಮ್ಮ ಶಕ್ತಿಯ ಅನುಸಾರ ಅನ್ನದಾನ ಮಾಡಿದರೆ, ಇಲ್ಲದವರು ಕೂಡ ಐದಾರು ಜನ ಸೇರಿ ಅಥವಾ ಹತ್ತಾರು ಜನರಲ್ಲಿ ಚಂದ ಎತ್ತಿಯಾದರೂ ಸರಿಯೇ ಅನ್ನದಾನ ಮಾಡುತ್ತಾರೆ.

ನಿಮಗೆ ಅಚ್ಚರಿ ಎನ್ನಿಸಬಹುದು, ಅನ್ನ ಪ್ರಸಾದದ ಜತೆಗೆ ಕೇಸರಿಬಾತು ಅಥವಾ ಸಿಹಿ ಪೊಂಗಲ್ ಕಡ್ಡಾಯ. ಈ ಬಗ್ಗೆ ಯಾರೂ ಮಾತಾಡುವುದಿಲ್ಲ, ಆದರೆ ಇದು ಅಲಿಖಿತ ನಿಯಮ. ಆಷಾಢ ಮಾಸದ ಪ್ರತಿ ಶುಕ್ರವಾರದಲ್ಲೂ ಇದು ಸಾಮಾನ್ಯ. ಆದರೆ ಕಳೆದ ಕೆಲವು ವರ್ಷಗಳಿಂದ ಮಂಗಳ ವಾರ ಮತ್ತು ಗುರುವಾರ ಕೂಡ ಜನರು ಸ್ವ-ಇಚ್ಛೆಯಿಂದ ಅನ್ನದಾನವನ್ನು ಮಾಡುವ ಸಂಪ್ರದಾಯ ಬೆಳೆಸಿದ್ದಾರೆ.

ಅಂದರೆ ಅನ್ನದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರವೇ ಎಲ್ಲರೂ ಮಾಡಿದರೆ ಅನ್ನದಾನ ಮಾಡಲು ಸರಿಯಾದ ಜಾಗದ ಕೊರತೆಯಾಗುತ್ತದೆ ಎನ್ನುವ ಕಾರಣಕ್ಕೆ ಬೇರೆ ದಿನಗಳಲ್ಲೂ ಅನ್ನದಾನ ಮಾಡುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕಳೆದ ನಾಲ್ಕು ವರ್ಷದಿಂದ ಇದನ್ನು ಗಮನಿಸುವ ಅವಕಾಶ ನನಗೆ ಒದಗಿತು. ಈ ವರ್ಷ ನಾವೂ ಅನ್ನಪ್ರಸಾದ ವಿತರಿಸಿ ಸಂತಸಪಟ್ಟೆವು. ಕೊಡುವಾಗಿನ ಸುಖದ ಗಮ್ಮತ್ತು ಬೇರೆ, ಇರಲಿ.

ಇದನ್ನೂ ಓದಿ: Rangaswamy Mookanahalli Column: ಮೂರನೇ ಮಹಾಯುದ್ದವನ್ನು ಯಾರು ತಡೆಯಬಲ್ಲರು ?

ಮುಖ್ಯ ವಿಷಯಕ್ಕೆ ಬರೋಣ. ಒಬ್ಬ ವ್ಯಕ್ತಿಗೆ ಹೇಗೆ ವ್ಯಕ್ತಿತ್ವ ಅಥವಾ ಕ್ಯಾರೆಕ್ಟರ್ ಎನ್ನುವುದು ಇರುತ್ತದೋ, ಥೇಟ್ ಹಾಗೆಯೇ ಪ್ರತಿ ಊರು, ಹಳ್ಳಿ, ರಾಜ್ಯ ಮತ್ತು ದೇಶಕ್ಕೂ ಒಂದು ಕ್ಯಾರೆಕ್ಟರ್ ಇರುತ್ತದೆ. ಅಲ್ಲಿನ ಒಟ್ಟು ಜನರ ಭಾವನೆ, ವ್ಯಕ್ತಿತ್ವ ಆ ಊರಿನ ವ್ಯಕ್ತಿತ್ವವಾಗಿ ಬದಲಾಗಿಬಿಟ್ಟಿರುತ್ತದೆ. ಅಷ್ಟು ಸುಲಭವಾಗಿ ಆ ಊರು ತನ್ನತನವನ್ನು ಬಿಟ್ಟುಕೊಡುವುದಿಲ್ಲ.

ಆದರೆ ಯಾವಾಗ ಒಂದು ಊರಿಗೆ ವಲಸೆ ಶುರುವಾಗುತ್ತದೆ ನೋಡಿ ಆಗ ಅದು ನಿಧಾನವಾಗಿ ಬದಲಾಗಲು ಶುರುವಾಗುತ್ತದೆ. ವಲಸೆ ಹಿತಮಿತವಾಗಿದ್ದಾಗಲೂ ಊರು ತನ್ನತನವನ್ನು ಬಿಟ್ಟು ಕೊಡುವುದಿಲ್ಲ, ಬದಲಿಗೆ ವಲಸಿಗರನ್ನು ತನ್ನವರನ್ನಾಗಿ ಮಾಡಿಕೊಂಡು ಬಿಡುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಮೈಸೂರಿನಲ್ಲಿ ನೆಲೆಸಿರುವ ಮಾರ್ವಾಡಿ, ಗುಜರಾತಿ ಮತ್ತು ಜೈನ ಸಮುದಾಯದ ಜನ.

ಇವರು ಇಲ್ಲಿನ ಸಂಸ್ಕೃತಿಯಲ್ಲಿ ಬೆರೆತು ಇಲ್ಲಿಯವರೇ ಆಗಿಹೋಗಿದ್ದಾರೆ. ಅಷ್ಟರ ಮಟ್ಟಿಗೆ ಮೈಸೂರು ಕ್ಷೇಮವಾಗಿದೆ. ಇದೇ ಮಾತನ್ನು ನಾವು ಬೆಂಗಳೂರಿನ ಬಗ್ಗೆ ಹೇಳಲಾಗುವುದಿಲ್ಲ. ಬೆಂಗಳೂರಿಗೆ ಆಗುತ್ತಿರುವ ಅನಿಯಂತ್ರಿತ ವಲಸೆಯ ಪ್ರಭಾವವಿದು. ಹೀಗಿದ್ದೂ ಬೆಂಗಳೂರು ಪೂರ್ಣ ತನ್ನತನವನ್ನು ಕೂಡ ಬಿಟ್ಟುಕೊಟ್ಟಿಲ್ಲ.

ಇಂದಿಗೂ ನಡೆಯುವ ಬೆಂಗಳೂರು ಕರಗ, ಕಡಲೇಕಾಯಿ ಪರಿಷೆಯಂಥ ಘಟನೆಗಳು ಅದಕ್ಕೆ ಸಾಕ್ಷಿಯಾಗಿವೆ. ಕಡಲೇಕಾಯಿ ಪರಿಷೆಯಲ್ಲಿ ಕನ್ನಡಿಗರು ಎಷ್ಟಿರುತ್ತಾರೋ ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚು ಇತರ ಭಾಷಿಕರು ಕೂಡ ಇರುತ್ತಾರೆ. ಆದರೂ ಬೆಂಗಳೂರು ತನ್ನ ಮೂಲ ಸಂಸ್ಕೃತಿಯಿಂದ ಇಂಚಿಚೇ ದೂರ ಸರಿಯುತ್ತಿರಲು ಕಾರಣ ವಲಸೆ ಎನ್ನುವುದು ನನ್ನ ಅಚಲ ನಂಬಿಕೆ.

ಇದರ ಜತೆಗೆ ಮುಂದಿನ ಜನಾಂಗಕ್ಕೆ ನಮ್ಮ ಆಚಾರ, ವಿಚಾರ ಮತ್ತು ಸಂಸ್ಕಾರಗಳ ಮಹತ್ವವನ್ನು ತಿಳಿ ಹೇಳುವಲ್ಲಿ ಪೋಷಕರು ಎಡವುತ್ತಿರುವುದು ಕೂಡ ಕಾಣುತ್ತದೆ. ಇಂಟರ್ನೆಟ್ ಜಗತ್ತನ್ನು ಬದಲಾಯಿಸಿಬಿಟ್ಟಿದೆ. ಯಾವುದರ ಮಾರ್ಕೆಟಿಂಗ್ ಅನ್ನು ಜೋರಾಗಿ ಮಾಡುತ್ತಾರೋ, ಇಂದಿನ ಮಕ್ಕಳು ಅದನ್ನು ನಂಬುತ್ತವೆ. ನಮ್ಮದಲ್ಲದ ಹ್ಯಾಲೋವೀನ್, ಕಾರ್ನಿವಾಲ್ ಮತ್ತಿತರ ಆಚರಣೆಗಳು ಹೆಚ್ಚಲು ಕಾರಣ ಅವುಗಳನ್ನು ಕೂಲ್ ಮತ್ತು ಹ್ಯಾಪನಿಂಗ್ ಎಂದು ಮಾರ್ಕೆಟ್ ಮಾಡಿರುವುದು. ಇದನ್ನು ಅನುಕರಿಸದೆ ಇದ್ದರೆ ಅದೇನೋ ಹಿಂದುಳಿದಂತೆ ಎನ್ನುವ ಭಾವನೆ ಯುವಜನತೆಯಲ್ಲಿ ತುಂಬಿರುವುದು ಕೂಡ ಇದೆ ಮಾರ್ಕೆಟಿಂಗ್ ತಂತ್ರ.

ವಲಸೆಯಲ್ಲೂ ಬಹಳ ರೀತಿಯ ವಲಸೆಯಿದೆ. ನೀವೇ ಗಮನಿಸಿ ನೋಡಿ ಭಾರತಕ್ಕೆ ನೂರಾರು ವರ್ಷಗಳ ಹಿಂದೆ ವಲಸೆ ಬಂದ ಪಾರ್ಸಿಗಳು ಹಾಲಿನಲ್ಲಿ ಸಕ್ಕರೆ ಬೆರೆತಂತೆ ಬೆರೆತು ಹೋಗಿದ್ದಾರೆ. ಭಾರತದ ಅಭಿವೃದ್ಧಿಗೆ ಬಹಳಷ್ಟು ದೇಣಿಗೆ ನೀಡಿದ್ದಾರೆ. ಇಂಥ ವಲಸೆಯನ್ನು ಯಾರೂ ಬೇಡ ವೆನ್ನುವುದಿಲ್ಲ. ಬಾಂಗ್ಲಾದೇಶದಿಂದ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆಸುವ ವಲಸೆ ಯಾರಿಗೂ ಇಷ್ಟವಾಗುವುದಿಲ್ಲ.

ಬಂದವರು ಇಲ್ಲಿನ ನೆಲದ ಕಾನೂನು ಮತ್ತು ಸಂಸ್ಕಾರವನ್ನು ಗೌರವಿಸಬೇಕು. ಬಂದ ನೆಲದಲ್ಲೂ ‘ನಾವು ಹೇಳಿದ್ದೇ ನಡೆಯಬೇಕು, ನಾವಿರುವುದೇ ಹೀಗೆ, ಬೇಕಿದ್ದರೆ ನೀವೇ ಬದಲಾಗಿ’ ಎನ್ನುವ ಗುಣದ ವಲಸೆಯನ್ನು ಯಾರೂ ಸಹಿಸುವುದಿಲ್ಲ. ಇಂಗ್ಲೆಂಡ್ ಎಂದರೆ ಭಾರತೀಯರು ಹುಬ್ಬೇರಿಸಿ ನೋಡುತ್ತಿದ್ದ ದಿನಗಳು ಮಾಯವಾಗುವ ಹಂತಕ್ಕೆ ಇಂಗ್ಲೆಂಡ್ ಅಥವಾ ಪೂರ್ಣ ಯುನೈಟೆಡ್ ಕಿಂಗ್‌ಡಮ್ ಬಂದು ನಿಂತಿದೆ.

ರಾಜಕೀಯ ಅಸ್ಥಿರತೆ ಇಂಗ್ಲೆಂಡ್‌ನಲ್ಲಿ ಶುರುವಾಗಿ ದಶಕವಾಗುತ್ತ ಬಂದಿದೆ. ಕೇವಲ ರಾಜಕೀಯ ಅಸ್ಥಿರತೆ ಮಾತ್ರವಲ್ಲದೆ ಹತ್ತಾರು ಜ್ವಲಂತ ಸಮಸ್ಯೆಗಳು ಇಂಗ್ಲೆಂಡ್ ದೇಶವನ್ನು ಬಾಧಿಸುತ್ತಿವೆ. ಯಾವುದೇ ದೇಶದಲ್ಲಿ ವಾಸಿಸುವ ಸಿರಿವಂತರು ಆ ದೇಶವನ್ನು ಬಿಡುವ ಮಾತನಾಡುತ್ತಾರೆ ಎಂದರೆ ಅದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. ಭಾರತದಿಂದ ಹೀಗೆ ಹೊರಹೋಗಲು ಇಚ್ಛೆ ಪಡುವ ಮಿಲಿಯನೇರ್‌ಗಳ ಸಂಖ್ಯೆ ಹತ್ತಿರತ್ತಿರ ನಾಲ್ಕು ಸಾವಿರ ಎನ್ನುತ್ತದೆ ಅಂಕಿ-ಅಂಶ.

ಕನಿಷ್ಠ ಪಕ್ಷ 10 ಲಕ್ಷ ಡಾಲರ್ ಹೂಡಿಕೆ ಮಾಡುವ ಶಕ್ತಿಯಿದ್ದವರನ್ನು ಭಾರತದಲ್ಲಿ ಮಿಲಿಯನೇರ್ ಎಂದು ಗುರುತಿಸಲಾಗುತ್ತದೆ. ಈ ಹಿಂದೆ ಈ ರೀತಿಯ ಮಿಲಿಯನೇರ್‌ಗಳು ಹೋಗುತ್ತಿದ್ದ ದೇಶ ಇಂಗ್ಲೆಂಡ್. ಇಂದಿಗೆ ಇಂಗ್ಲೆಂಡ್ ಅಲ್ಲಿನ ಜನಕ್ಕೆ ಬೇಡವಾದ ದೇಶವಾಗುತ್ತಿದೆ. ಭಾರತದಿಂದ ಹೊರ ಹೋಗುತ್ತಿರುವ ಸಾಹುಕಾರರ ಮೆಚ್ಚಿನ ತಾಣ ಯುನೈಟೆಡ್ ಅರಬ್ ಕಿಂಗ್ಡಮ್, ಅದರಲ್ಲೂ ದುಬೈ ಇಂಥವರಿಗೆ ಸ್ವರ್ಗ ಎನ್ನಿಸುತ್ತಿದೆ.

ನಿಮಗೆ ಆಶ್ಚರ್ಯ ಎನ್ನಿಸಬಹುದು 2024ರಲ್ಲಿ ಇಂಗ್ಲೆಂಡ್ ದೇಶದಿಂದ 9500ಕ್ಕೂ ಹೆಚ್ಚಿನ ಶ್ರೀಮಂತರು ದೇಶ ಬಿಡಲು ತಯಾರಿ ನಡೆಸಿದ್ದಾರೆ. ಕೆಲವು ದಶಕಗಳ ಹಿಂದೆ ಏಷ್ಯಾ, ಯುರೋಪು ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಶ್ರೀಮಂತ ಜನರು ಇಂಗ್ಲೆಂಡ್ ದೇಶದಲ್ಲಿ ನೆಲೆ ಕಂಡುಕೊಳ್ಳಲು ಬಯಸುತ್ತಿದ್ದರು.

ದಶಕದಲ್ಲಿ ಅದು ಬದಲಾಗಿ ಹೋಗಿದೆ. ಇಂಗ್ಲೆಂಡ್ ತನ್ನ ಹಿಂದಿನ ಆಕರ್ಷಣೆ ಉಳಿಸಿಕೊಂಡಿಲ್ಲ. ಸೂರ್ಯ ಮುಳುಗದ ನಾಡು ಎನ್ನುವ ಹೆಮ್ಮೆಯಿಂದ ಬೀಗುತ್ತಿದ್ದ ಬ್ರಿಟಿಷರು (ಜಗತ್ತಿನಾದ್ಯಂತ ತಮ್ಮ ವಸಾಹತು ಇದೆ, ಈ ಕಾರಣದಿಂದ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ ಎನ್ನುವ ಹೆಮ್ಮೆಯಿಂದ ಈ ರೀತಿ ಹೇಳುತ್ತಿದ್ದರು), ತಮ್ಮ ದೇಶವನ್ನು ತೊರೆಯಲು ಕಾರಣಗಳೇನಿರಬಹುದು? ಎನ್ನುವುದನ್ನು ನೋಡ ಹೊರಟಾಗ ಸಿಕ್ಕ ಕಾರಣಗಳು ಅನೇಕ.

ಹೆಚ್ಚಾಗುತ್ತಿರುವ ಕ್ರೈಂ ಪ್ರಕರಣಗಳು: ಇಂಗ್ಲೆಂಡ್ ಕಳೆದ ಒಂದು ದಶಕದಲ್ಲಿ 6.74 ಮಿಲಿಯನ್ ಅಪರಾಧಗಳನ್ನು ತನ್ನ ಪೊಲೀಸ್ ಠಾಣೆಯಲ್ಲಿ ನೊಂದಾಯಿಸಿಕೊಂಡಿವೆ. ಈ ಸಂಖ್ಯೆ ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚು. ಹಿಂದೆ ದಾಖಲಾದ ಅಪರಾಧ ಪ್ರಕರಣಗಳಲ್ಲಿ 15 ಪ್ರತಿಶತ ಪ್ರಕರಣಗಳು ಸಾಲ್ವ ಆಗುತ್ತಿದ್ದವು. ಈಗ ಪ್ರಕರಣ ಹೆಚ್ಚಿರುವ ಕಾರಣ ಸಾಲ್ವ ಆಗುವ ಕೇಸುಗಳ ಪ್ರತಿಶತ ಕೇವಲ 5ಕ್ಕೆ ಇಳಿದಿದೆ.

ಒಟ್ಟಾರೆ ಅಪರಾಧಗಳು ಹೆಚ್ಚಾಗುತ್ತಿವೆ. ಇದಕ್ಕೆ ಎಗ್ಗಿಲ್ಲದೆ ಹರಿಯಲು ಬಿಟ್ಟ ವಲಸೆ ಕೂಡ ಕಾರಣ. ಯುರೋಪಿನ ಅತಿ ಬಡದೇಶಗಳಿಂದ ಬಂದು ಇಂಗ್ಲೆಂಡ್‌ನಲ್ಲಿ ಸೇರಿಕೊಂಡಿರುವ ಜನ, ಕೆಲಸವಿಲ್ಲದ, ಆದಾಯವಿಲ್ಲದ ಕಾರಣ ಅಪರಾಧಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೆಂಡಿನ ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎನ್ನುವುದಕ್ಕೆ ಒಂದು ಘಟನೆಯನ್ನು ಹೇಳುತ್ತಾರೆ.

ಇದು ನಿಜವಾಗಿ ನಡೆದದ್ದೋ ಅಥವಾ ಬ್ರಿಟಿಷರ ಅತಿ ಹೆಚ್ಚು ಲಿಬರಲ್ ಮನಸ್ಥಿತಿಯನ್ನು ಹೀಯಾಳಿಸಲು ಸೃಷ್ಟಿಸಿದ್ದೋ ಎನ್ನುವ ಮಟ್ಟಿಗೆ ಇದು ವೈರಲ್ ಆಗಿತ್ತು. ಅದೇನೆಂದರೆ ಅಫ್ಘಾನಿಸ್ತಾನ ದಿಂದ ಇಂಗ್ಲೆಂಡಿಗೆ ಬಂದ ವಲಸಿಗನೊಬ್ಬ ಅಲ್ಲಿನ ಹೆಣ್ಣು ಮಗಳೊಬ್ಬಳ ಮೇಲೆ ಅತ್ಯಾಚಾರ ಮಾಡುತ್ತಾನೆ. ಕೋರ್ಟಿನಲ್ಲಿ ಪಾಪ ಆಫ್ಘಾನ್ ಪ್ರಜೆ, ಆತನ ದೇಶದಲ್ಲಿ ಮಹಿಳೆಯರು ಈ ರೀತಿಯ ಬಟ್ಟೆ ತೊಡುವುದಿಲ್ಲ. ಇದನ್ನು ನೋಡಿ ಆತನಿಗೆ ಕಲ್ಚರಲ್ ಶಾಕ್ ಆಗಿದೆ. ಆದ ಕಾರಣ ಅವನು ಅತ್ಯಾಚಾರ ಮಾಡಿದ್ದಾನೆ ಎನ್ನುವ ಹೇಳಿಕೆ ನೀಡಿ ಆತನನ್ನು ಶಿಕ್ಷಿಸದೆ ಬಿಡುತ್ತಾರೆ.

ಆತನಿಗೆ ಇಂಗ್ಲೆಂಡ್ ಕಲ್ಚರ್ ಬಗ್ಗೆ ತಿಳಿವಳಿಕೆ ಹೇಳಲು ತರಗತಿ ಏರ್ಪಾಡು ಮಾಡುತ್ತಾರೆ. ಅಪರಾಧಿಗಳು ಒಂದಲ್ಲ ಒಂದು ಕಾರಣದಿಂದ ಶಿಕ್ಷೆಗೆ ಗುರಿಯಾಗದೆ ಬಚಾವು ಆಗುತ್ತಿರುವುದು ಇಂಗ್ಲೆಂಡಿನ ಬಗ್ಗೆ ಇಂಥ ಕಥೆ ಹುಟ್ಟಲು ಸಹಾಯ ಮಾಡಿವೆ. ವಾತಾವರಣ ಕೂಡ ಕಾರಣವಾಗಿದೆ: ವರ್ಷದಲ್ಲಿ ಕೇವಲ 1400 ಗಂಟೆಗಳು ಮಾತ್ರ ಸೂರ್ಯನ ದರ್ಶನ ಭಾಗ್ಯ ಇಲ್ಲಿನ ಜನರಿಗೆ ಲಭಿಸುತ್ತದೆ. ಅಂದರೆ ಹೆಚ್ಚು ಕಡಿಮೆ ವರ್ಷದ ಎರಡು ತಿಂಗಳು ಮಾತ್ರ ಬೇಸಿಗೆ. ಉಳಿದ ತಿಂಗಳುಗಳಲ್ಲಿ ಚಳಿ ಮತ್ತು ಮಳೆ ಎರಡೂ ಬದುಕನ್ನು ಹೈರಾಣಾಗಿಸುತ್ತವೆ. ಹೀಗಾಗಿ ಹೆಚ್ಚಿನ ಹಣ ಉಳ್ಳವರು ಸಹಜವಾಗೇ ಉತ್ತಮ ವಾತಾವರಣ ಇರುವ ಸ್ಪೇನ್, ಇಟಲಿ, ದುಬೈ ಕ ಡೆಗೆ ಮುಖ ಮಾಡಿದ್ದಾರೆ.

ತೆರಿಗೆ ನೀತಿ: ಇಂಗ್ಲೆಂಡ್‌ನಲ್ಲಿ ಆದಾಯ ತೆರಿಗೆ 45 ಪ್ರತಿಶತದವರೆಗೆ ಹೋಗುತ್ತದೆ. ಅಂದರೆ ನೀವು ಹೆಚ್ಚು ಗಳಿಸಿದರೆ ಅತಿ ಹೆಚ್ಚು ಹಣವನ್ನು ತೆರಿಗೆಯ ರೂಪದಲ್ಲಿ ನೀಡಬೇಕಾಗುತ್ತದೆ. 100 ರುಪಾಯಿ ಸಂಪಾದನೆಯಲ್ಲಿ 45 ರುಪಾಯಿ ಸರಕಾರಕ್ಕೆ ನೀಡಬೇಕು ಎನ್ನುವುದನ್ನು ಶ್ರೀಮಂತರಿಗೆ ಅರಗಿಸಿ ಕೊಳ್ಳಲು ಆಗುವುದಿಲ್ಲ. ಇದರಿಂದ ಅವರಿಗೆ ಹೆಚ್ಚಿನ ಸವಲತ್ತು ಕೂಡ ಇಲ್ಲ. ಹೀಗೆ ಶ್ರೀಮಂತರಿಂದ ಪಡೆದ ಹಣವನ್ನು ಇತರ ದೇಶಗಳಿಂದ ಬಂದ ವಲಸಿಗರನ್ನು ಕಾಪಾಡಲು ಬಳಸುತ್ತಿzರೆ ಎನ್ನುವುದು ಇವರ ಕೂಗು. ಒಟ್ಟಾರೆ ಆದಾಯ ತೆರಿಗೆ ಇಲ್ಲದ ದುಬೈ ಇಲ್ಲಿನ ಶ್ರೀಮಂತರ ಕಣ್ಣಿಗೆ ಅತ್ಯುತ್ತಮ ಜಾಗವಾಗಿ ಕಾಣುತ್ತಿದೆ. ಅಲ್ಲದೆ ಉತ್ತರಾಧಿಕಾರ ತೆರಿಗೆ ಅಂದರೆ ಇನ್ಹೆರಿಟೆ ಟ್ಯಾಕ್ಸ್ 40 ಪ್ರತಿಶತವಿದೆ. ಗಮನಿಸಿ ನಿಮ್ಮ ನಂತರ ನಿಮ್ಮ ಮನೆಯನ್ನು‌ ಮಕ್ಕಳು ಅವರ ಹೆಸರಿಗೆ ವರ್ಗಾಯಿಸಿ ಕೊಳ್ಳಲು 40 ಪ್ರತಿಶತ ತೆರಿಗೆ ನೀಡಬೇಕು. ಮನೆಯ ಮೌಲ್ಯ 325000 ಪೌಂಡಿಗಿಂತ ಕಡಿಮೆಯಿದ್ದರೆ ಇದು ಅನ್ವಯವಾಗುವುದಿಲ್ಲ.

ಹಣದುಬ್ಬರ ಮತ್ತು ಏರುತ್ತಿರುವ ಬೆಲೆಗಳು: ಬ್ರೆಕ್ಸಿಟ್ ನಂತರ ಒಂದೇ ಸಮನೆ ಏರುತ್ತಿರುವ ಬೆಲೆಗಳು ಇಲ್ಲಿನ ಜನರನ್ನು ಕಂಗಾಲಾಗಿಸಿವೆ. ಹಣದುಬ್ಬರ ಬಹಳ ಹೆಚ್ಚಾಗಿದೆ. ಕೈಯಲ್ಲಿರುವ ಹಣ ವೇಗವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಹೂಡಿಕೆ ಮಾಡಲು ಕೂಡ ಸ್ಥಿರ ಸರಕಾರದ ಕೊರತೆಯಿದೆ. ಹೀಗಾಗಿ ಜನರಲ್ಲಿ, ಅದರಲ್ಲೂ ಉಳ್ಳವರಲ್ಲಿ ತಲ್ಲಣ ಶುರುವಾಗಿದೆ. ಹೀಗಾಗಿ ದೇಶ ಬಿಡುವುದು ಎಲ್ಲಾ ರೀತಿಯಲ್ಲೂ ಸರಿಯಾದ ನಿರ್ಧಾರ ಎನ್ನುವ ಅಭಿಪ್ರಾಯಕ್ಕೆ ಅವರು ಬರುತ್ತಿದ್ದಾರೆ.

ಎನರ್ಜಿ ಬಡತನ: ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಮಯದಿಂದ ಶುರುವಾದ ಎನರ್ಜಿ ಬೆಲೆ ಹೆಚ್ಚಳ ಮತ್ತು ಅದರ ಕೊರತೆ ಚಳಿ ದೇಶವಾದ ಇಂಗ್ಲೆಂಡ್ ಜನರನ್ನು ಬಹಳ ಸತಾಯಿಸಿದೆ. ಚಳಿಯನ್ನು ತಾಳಲಾರದೆ ಸತ್ತವರ ಸಂಖ್ಯೆ ಕೂಡ ಬಹಳವಿದೆ. ರಾಜಕೀಯ ಅನಿಶ್ಚಿತತೆ ಎನ್ನುವ ತೂಗುಯ್ಯಾಲೆ ನೆತ್ತಿಯ ಮೇಲಿರುವ ಕಾರಣ ಎನರ್ಜಿ ಕೊರತೆಯಲ್ಲಿ ಬದಲಾವಣೆ ಕಾಣುವುದು ಸಾಧ್ಯವಿಲ್ಲ. ಹೀಗಾಗಿ ಉಳ್ಳವರು ಜಾಗ ಬದಲಾವಣೆ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ.

ಒತ್ತಡದ ಜೀವನ: ಒಟ್ಟಾರೆ ಇಂಗ್ಲೆಂಡ್‌ನಲ್ಲಿನ ಬದುಕು ಬಹಳ ಒತ್ತಡದ ಬದುಕು ಎನ್ನು ವಂತಾಗಿದೆ. ಉಳ್ಳವರು ದೇಶ ಬಿಡುವ ಹವಣಿಕೆಯಲ್ಲಿದ್ದಾರೆ. ಈ ರೀತಿ ದೇಶ ಬಿಡಲಾಗದವರು ಅಲ್ಲಿ ಬದುಕಲಾಗದ ಸ್ಥಿತಿಯಲ್ಲಿದ್ದಾರೆ. ಗಳಿಸಿದ ಹಣವೆ ಕ್ಷಣಮಾತ್ರದಲ್ಲಿ ಖರ್ಚಾಗುತ್ತದೆ. ವರ್ಷಗಳು ಕೆಲಸ ಮಾಡಿ ಕೂಡ ಕೈಯಲ್ಲಿ ನಯಾಪೈಸೆ ಉಳಿತಾಯವಿಲ್ಲ, ಹೂಡಿಕೆಯಿಲ್ಲ ಎನ್ನುವಂತಾಗಿದೆ. ನಾವೇಕೆ ದುಡಿಯುತ್ತಿದ್ದೇವೆ ಎನ್ನುವ ಪ್ರಶ್ನೆ ಕೇಳಿಕೊಳ್ಳುವ ಮಟ್ಟಕ್ಕೆ ಬದುಕು ಬದಲಾಗಿದೆ. ಹೀಗಾಗಿ ಸಾಧ್ಯವಾದವರು ದೇಶ ಬಿಡುವ ನಿರ್ಧಾರಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ. ಇಂಗ್ಲೆಂಡ್ ತನ್ನತನವನ್ನು ಕಳೆದುಕೊಂಡು ದಶಕಗಳಾಗಿದೆ. ವಲಸೆ ಅದಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಬೇರೆಡೆ ವಲಸೆ ಹೋಗಲು ಬಯಸುತ್ತಿದ್ದಾರೆ ಎನ್ನುವುದು ಮಾತ್ರ ವಿಪರ್ಯಾಸ.

ರಂಗಸ್ವಾಮಿ ಎಂ

View all posts by this author