Rangaswamy Mookanahalli Column: ಮೂರನೇ ಮಹಾಯುದ್ದವನ್ನು ಯಾರು ತಡೆಯಬಲ್ಲರು ?
ನೀವು ಒಂದನೇ ಮಹಾಯುದ್ಧದ ನಂತರದ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಿ ನೋಡಿ ಸಾಕು, ಅಂದಿನ ಮತ್ತು ಇಂದಿನ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಹೀಗಾಗಿ ಯುದ್ಧ ಯಾವಾಗ ಬೇಕಾದರೂ ಆಗಬಹುದು. ಸಣ್ಣಪುಟ್ಟ ಗಾತ್ರದಲ್ಲಿ ನಡೆಯುತ್ತಿರುವ ಇಂದಿನ ಸಂಘರ್ಷಗಳು ದೊಡ್ಡ ಸಂಘರ್ಷಕ್ಕೆ ಎಲ್ಲರೂ ತಮ್ಮ ಶಕ್ತಿಯ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿರುವ ಪ್ರಯೋಗ ವಷ್ಟೇ.


ವಿಶ್ವರಂಗ
mookanahalli@gmail.com
ಜಗತ್ತಿನಲ್ಲಿ ನಾವು ಬಹಳಷ್ಟು ಸರ್ವಾಧಿಕಾರಿಗಳ ಬಗ್ಗೆ ಓದಿದ್ದೇವೆ. ಮಾವೋ ಸರ್ವಾಧಿಕಾರಿಗಳನ್ನ ಮೀರಿಸುವ ವ್ಯಕ್ತಿತ್ವ ಹೊಂದಿದವನು. ಇಂದಿನ ಚೀನಾ ಮಾವೋ ವಾದದ ಮೇಲೆ ಕಟ್ಟಿರುವ, ಅದೇ ಸಿದ್ಧಾಂತವನ್ನ ಪಾಲಿಸುತ್ತಿರುವ ದೇಶವಾಗಿದೆ. ಅದಕ್ಕೆ ಧರ್ಮದ ಭಯವಿಲ್ಲ, ಹಿರಿಯರ ಭಯವಿಲ್ಲ, ದಯೆ, ಕರುಣೆ ಎನ್ನುವ ಪದಗಳಿಗೆ ಅಲ್ಲಿ ಅವಕಾಶ ವಿಲ್ಲ. ಅದರ ಸಿದ್ಧಾಂತ ಒಂದೇ ‘ಜಗತ್ತನ್ನ ಆಳುವುದು’.
ಜಗತ್ತಿನ ಬಹುತೇಕ ದೇಶಗಳಂತೆ ಚೀನಾ ದೇಶವನ್ನ ಕೂಡ ರಾಜ ಮನೆತನಗಳು ಆಳು ತ್ತಿದ್ದವು. ಹೀಗೆ ಚೀನಾ ದೇಶವನ್ನ 2000 ವರ್ಷಕ್ಕೂ ಹೆಚ್ಚು ಕಾಲ ಆಳಿದ ರಾಜರ ಅಧಿಕಾರ ಅಥವಾ ಇಂಪೀರಿಯಲಿಸಂ 1911ರಲ್ಲಿ ಕೊನೆಗೊಳ್ಳುತ್ತದೆ. ದೇಶದಲ್ಲಿ ಅಶಾಂತಿ, ಕಡು ಬಡತನ ತಾಂಡವಾಡುತ್ತಿರುತ್ತದೆ. ಮಾವೋ ಝೆಡೊಂಗ್ ಅಂದಿಗೆ 18ರ ಯುವಕ.
ಅಂದಿನ ಬಹುತೇಕ ಚೀನಿ ಯುವಕರಂತೆ ಆತನದು ಕೂಡ ಚೈನೀಸ್ ನ್ಯಾಷನಲಿಸ್ಟ್ ಮತ್ತು ಆಂಟಿ-ಇಂಪೀರಿಯಲಿಸಂ ಮನಸ್ಥಿತಿ. ಈ ಸಮಯದಲ್ಲಿ ಆತನಿಗೆ ರಷ್ಯದ ಮಾರ್ಕ್ಸಿ-ಲೆನಿನಿಸ್ಟ್ ಸಿದ್ಧಾಂತಗಳನ್ನ ಸಾರುವ ಪುಸ್ತಕ ಓದಲು ಸಿಗುತ್ತದೆ. ಆ ಪುಸ್ತಕ ಓದಿ ಮುಗಿಸುವು ದರೊಳಗೆ ಮಾವ್ ಒಬ್ಬ ಕಟ್ಟಾ ಕಮ್ಯುನಿ ಆಗಿ ಬದಲಾಗಿರುತ್ತಾನೆ.
ಚೀನಾ ದೇಶವನ್ನ ಜಗತ್ತಿನಲ್ಲಿ ದೈತ್ಯ ಶಕ್ತಿಯನ್ನಾಗಿ ಮಾಡಬೇಕೆನ್ನುವುದು ಆತನ ಕನಸು. ಈ ಸಮಯದಲ್ಲಿ ಚೈನೀಸ್ ನ್ಯಾಷನಲಿ ಬಹು ಸಂಖ್ಯೆಯಲ್ಲಿದ್ದರು. 1919ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಫೌಂಡರ್ ಮೆಂಬರ್ ಆಗಿ ಮಾವ್ ಸೇರಿಕೊಳ್ಳುತ್ತಾನೆ.
ಇದನ್ನೂ ಓದಿ: Rangaswamy Mookanahalli Column: ಅಭಿವೃದ್ದಿ ಎನ್ನುವ ಮಾಯಾಜಿಂಕೆಯ ಬೆನ್ನತ್ತಿ ಸಿಕ್ಕಿದ್ದು ಖಿನ್ನತೆ !
ಹಂತ ಹಂತವಾಗಿ ಕಮ್ಯುನಿಸ್ಟ್ ಪಾರ್ಟಿಯನ್ನ ಬೆಳೆಸುತ್ತಾ ಹೋಗುತ್ತಾನೆ. ಮೊದಲಿ ನಿಂದಲೂ ಮಾವೋನದು ಒಂದೇ ಸಿದ್ಧಾಂತ- ‘ನಾನು ಯೋಚಿಸಿದಂತೆ ಜನ ಯೋಚಿಸ ಬೇಕು’. ನಿರ್ಧಾರಗಳನ್ನ ಎಲ್ಲರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜನ ನಾವು ತೆಗೆದುಕೊಂಡ ನಿರ್ಧಾರಗಳನ್ನ ಪಾಲಿಸಬೇಕು ಅಷ್ಟೇ ಎನ್ನುವುದು ಆ ಸಿದ್ಧಾಂತ.
1937ರಲ್ಲಿ ಜಪಾನಿಯರು ಚೀನಾದ ಮೇಲೆ ದಾಳಿ ಮಾಡುತ್ತಾರೆ. ಚೀನಾದಲ್ಲಿ ಸಿವಿಲ್ ವಾರ್ ಶುರುವಾಗುತ್ತದೆ. ಜಪಾನಿಯರು ಒಂದು ಕಡೆ, ಚೀನಿ ನ್ಯಾಷನಲಿಸ್ಟ್ ಗಳು ಇನ್ನೊಂದು ಕಡೆ. ಇವೆರಡರ ನಡುವೆ ಚೀನಿ ಜನತೆ ಕೂಡ ಆಂತರಿಕ ಕಲಹದಿಂದ, ಬಡತನ, ರೋಗ-ರುಜಿನ ಗಳಿಂದ ಬಸವಳಿದಿತ್ತು. ಮಾವೋ ಈ ಸಮಯವನ್ನ ತನ್ನ ಕಮ್ಯುನಿಸ್ಟ್ ಪಾರ್ಟಿಯನ್ನ ಸುಭದ್ರವಾಗಿ ಕಟ್ಟಲು ಉಪಯೋಗಿಸಿಕೊಳ್ಳುತ್ತಾನೆ.
1937ರಿಂದ 1945ರವರೆಗೆ ಚೀನಾ ಜಪಾನಿನ ಅಧೀನದಲ್ಲಿರುತ್ತದೆ. ಆ ನಂತರ ಚೈನೀಸ್ ನ್ಯಾಷನಲಿಸ್ಟ್ ಗಳನ್ನ ಕಮ್ಯುನಿಸ್ಟರು ಸೋಲಿಸುವುದರಲ್ಲಿ ಸಫಲರಾಗುತ್ತಾರೆ. ಕೊನೆಗೆ 1949, ಅಕ್ಟೋಬರ್ 1ರಂದು ಮಾವ್ ಪೂರ್ಣ ಚೀನಾವನ್ನ ಒಂದೇ ಪಾರ್ಟಿ ಆಳುತ್ತಿರುವು ದಾಗಿ ಘೋಷಣೆ ಮಾಡುತ್ತಾನೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಹೀಗೆ ಪೂರ್ಣ ಚೀನಾವನ್ನ ತನ್ನ ಹಿಡಿತಕ್ಕೆ ತೆಗೆದು ಕೊಳ್ಳುತ್ತದೆ. ಮಾವೋ ಈ ಮಟ್ಟಕ್ಕೆ ಬರುವವರೆಗೆ ಸಾವಿರಾರು ಜನರ ಹತ್ಯೆಯನ್ನ ಮಾಡಿಸಿರುತ್ತಾನೆ. ತನ್ನ ನಿಲುವನ್ನ ವಿರೋಧಿಸಿದ, ಸಂಶಯಿಸಿದ ಯಾರನ್ನೂ ಮಾವೋ ಉಳಿಸಿದ ನಿದರ್ಶನಗಳು ಇಲ್ಲ. ಈಗ ಹೇಳಿಕೇಳಿ ಪೂರ್ಣ ಚೀನಾದ ಮೇಲಿನ ಅಧಿಕಾರ ಅವನ ಕೈಲಿತ್ತು. ಚೀನಾವನ್ನ ಪ್ರಪಂಚದ ದೈತ್ಯ ಮಿಲಿಟರಿ ಶಕ್ತಿಯನ್ನಾಗಿ ಮಾಡಬೇಕೆನ್ನು ವುದು ಆತನ ಕನಸು.
ಆತ ಒಮ್ಮೆ ‘ನನ್ನ ಕನಸಿನ ಚೀನಾ ಕಟ್ಟಲು 30 ಕೋಟಿ ಚೀನಿಯರನ್ನ ಬಲಿಕೊಡಬೇಕಾದರೆ ಅದು ಆಗಲಿ’ ಎನ್ನುವ ಹೇಳಿಕೆ ನೀಡುತ್ತಾನೆ. ಈ ರೀತಿಯ ಹೇಳಿಕೆ ನೀಡಿದಾಗ ಚೀನಾ ದೇಶದ ಜನಸಂಖ್ಯೆ 60 ಕೋಟಿ. ಅಂದರೆ ಗಮನಿಸಿ ಕಾರ್ಯಸಾಧನೆಗೆ ತನ್ನ ದೇಶದ ಅರ್ಧ ನಾಗರಿಕರ ಬಲಿಕೊಡಬೇಕಾದ ಪ್ರಸಂಗ ಬಂದರೆ ಅದಕ್ಕೂ ಸಿದ್ಧ ಎನ್ನುವ ನಾಯಕನ ಹೇಳಿಕೆ ಇದೆಯಲ್ಲ ಅದು ಆ ದೇಶದ ಬದಲಾದ ಮನಸ್ಥಿತಿಯನ್ನ ತೋರಿಸುತ್ತದೆ.
ತನ್ನ ಕಾರ್ಯಸಾಧನೆಗೆ ಅಡ್ಡಿ ಆದವರನ್ನ ಅಥವಾ ಅಡ್ಡಿ ಆಗಬಹುದು ಎಂದು ಭಾವಿಸಿ ದವರನ್ನ ಗುರುತಿಸಿ ಕೊಲ್ಲಲು ತಾನು ಸಾಕಿದ ನಿಷ್ಠಾವಂತ ಹುಡುಗರ ಸೈನ್ಯ ‘ರೆಡ್ ಆರ್ಮಿ’ ಯನ್ನ ಬಳಸಿಕೊಳ್ಳುತ್ತಾನೆ. ಹೀಗೆ ಶಿಕ್ಷಕರು, ಪತ್ರಕರ್ತರು, ಚಿಂತಕರು ಸೇರಿ ಸರಿಸುಮಾರು 550000 ಜನರನ್ನ ಕೊಲ್ಲಿಸುತ್ತಾನೆ.
ಇದು ಕೇವಲ ಬುದ್ಧಿವಂತರು ಅಥವಾ ಜ್ಞಾನಿಗಳು ಎನ್ನಿಸಿಕೊಂಡವರ ಲೆಕ್ಕವಷ್ಟೆ. ಮಾವೋ ಹೀಗೆ ಎಷ್ಟು ಜನರನ್ನ ಕೊಂದಿರಬಹದು ಎನ್ನುವ ನಿಖರ ಲೆಕ್ಕ ಯಾರ ಬಳಿಯಿಲ್ಲ. ಒಟ್ಟು ನಾಲ್ಕು ಕೋಟಿ ಜನರ ಸಾವಿಗೆ ಮಾವೋ ಕಾರಣನಾಗಿದ್ದಾನೆ ಎನ್ನುವ ಒಂದು ಅಂದಾಜಿನ ಲೆಕ್ಕಾಚಾರವನ್ನ ಇತಿಹಾಸ ಕಟ್ಟಿಕೊಡುತ್ತದೆ.
ಮಾವೋ ತನ್ನ ಮಾರ್ಗದರ್ಶಕ ರಷ್ಯಾ ಹೇಳಿದಂತೆ ಕೇಳುವುದನ್ನ 1927ರ ವೇಳೆಗೆ ನಿಲ್ಲಿಸಿ ಬಿಟ್ಟಿದ್ದ. ರಷ್ಯಾ ನೆಲದಲ್ಲಿ ನಡೆದ ರೀತಿಯ ಕ್ರಾಂತಿ ಚೀನಾದಲ್ಲಿ ಆಗಲು ಸಾಧ್ಯ ವಿಲ್ಲ. ಇಲ್ಲಿ ಪಾರ್ಟಿಯನ್ನ ಹೇಗೆ ಬೆಳೆಸಬೇಕು ಎನ್ನುವುದು ನನಗೆ ಗೊತ್ತು ಎನ್ನುವ ಧಾರ್ಷ್ಟ್ಯದ ಮಾತುಗಳನ್ನ ಹೇಳಿದ್ದ. ಹೀಗೆ ತನ್ನದೇ ಆದ ಥಿಯರಿಗಳಿಂದ ಇಂದು ಕಮ್ಯುನಿಸ್ಟ್ ಪಾರ್ಟಿಯಲ್ಲಿ ‘ಮಾವೋಯಿಸಂ’ ಎನ್ನುವ ಹೊಸ ಸಿದ್ಧಾಂತ ಹುಟ್ಟಿಕೊಂಡಿದೆ.
ಮಾವೋಯಿಸಂ ಹೇಳುವುದು ಜನರನ್ನ ನಿಯಂತ್ರಣದಲ್ಲಿಡುವುದು, ಯಾವುದೇ ವಿದೇಶಿ ಚಿಂತನೆ ದೇಶದಲ್ಲಿ ನುಸುಳದ ಹಾಗೆ ನೋಡಿಕೊಳ್ಳುವುದು, ಇವರ ತತ್ವ ಸಿದ್ಧಾಂತಕ್ಕೆ ಎದುರಾಡಿದವರನ್ನ ಕೊಲ್ಲುವುದು, ಚಿಕ್ಕ ಮಕ್ಕಳಿಂದ ಈ ಸಿದ್ಧಾಂತವನ್ನ ಅವರ ಬದುಕಿನ ರೀತಿಯನ್ನಾಗಿ ಬೆಳೆಸುವುದು. ಇದು ನಿಜವಾದ ಸಿದ್ಧಾಂತ. ಹೊರಗಡೆ ಸಮಾನತೆ ತರುವುದು, ಬಡತನ ಹೋಗಲಾಡಿಸುವುದು ಇಂಥ ಸಂದೇಶಗಳನ್ನ ಮುದ್ರಿಸಿ ಈತ ತನ್ನ ಜನರಿಗೆ ಹಂಚಿದ ರೆಡ್ ಬುಕ್ ಇಂದಿನವರೆಗೂ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮುದ್ರಿತ ಪುಸ್ತಕ ಎನ್ನುವ ಹೆಗ್ಗಳಿಕೆ ಉಳಿಸಿಕೊಂಡಿದೆ.
ಜನರ ಮನದಲ್ಲಿ ಸ್ಥಾನ ಪಡೆಯಲು ಸಾಹುಕಾರರ, ಜಮೀನುದಾರರ ಹತ್ಯೆ ಮಾಡುವುದು ಇವರ ತಂತ್ರಗಳಾಗಿತ್ತು. ಜನರ ಮೈಂಡ್ ರೀಡಿಂಗ್ ಮತ್ತು ಅವರ ಆಲೋಚನೆಗಳನ್ನು ಮ್ಯಾನುಪುಲೇಟ್ ಮಾಡುವುದು ಕಾರ್ಯಸಾಧನೆಗೆ ಅತ್ಯಂತ ಮುಖ್ಯ ಎನ್ನವುದು ಈತನ ಪ್ರತಿಪಾದನೆ.
1949ರಿಂದ 16 ವರ್ಷಗಳ ಕಾಲ ಆತನನ್ನ ವಿರೋಧಿಸುವರು ಯಾರೂ ಇರಲಿಲ್ಲ. ಆತನ ಡೆಪ್ಯೂಟಿ ಅಂದರೆ ರಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ ಲಿಯೂ ಶಾವೋಕಿ, ಮಾವ್‌ನ ಕಲ್ಚರಲ್ ರೆವಲ್ಯೂಷನ್‌ಗೆವಿರುದ್ಧವಾಗಿ 1965ರಲ್ಲಿ ಧ್ವನಿ ಎತ್ತುತ್ತಾನೆ. ಪಾರ್ಟಿಯಲ್ಲಿ ಪ್ರಸಿದ್ಧನಾಗಿದ್ದ ಅವನನ್ನ ತಕ್ಷಣ ಏನೂ ಮಾಡುವುದಿಲ್ಲ.
ನಿಧಾನವಾಗಿ ಅವನನ್ನ ಕಡೆಗಣಿಸುತ್ತಾ ಬರುತ್ತಾನೆ. ಕೊನೆಗೆ ಆತನ ತೇಜೋವಧೆ ಮಾಡಿದ್ದು ಅಲ್ಲದೆ, ಆತನ ಸಾವು ಅತ್ಯಂತ ನಿಧಾನ ಮತ್ತು ಯಾತನಾಮಯವಾಗಿರಬೇಕು ಎಂದು ಫರ್ಮಾನು ಹೊರಡಿಸುತ್ತಾನೆ. ಆತನ ನರಳುವಿಕೆಯನ್ನ ಚಿತ್ರೀಕರಿಸಿ ಅದನ್ನ ಮಾವ್ ಖುಷಿಯಿಂದ ನೋಡುತ್ತಿದ್ದಂತೆ. ಜಗತ್ತಿನಲ್ಲಿ ನಾವು ಬಹಳಷ್ಟು ಸರ್ವಾಧಿಕಾರಿಗಳ ಬಗ್ಗೆ ಓದಿದ್ದೇವೆ.
ಮಾವೋ ಸರ್ವಾಧಿಕಾರಿಗಳನ್ನ ಮೀರಿಸುವ ವ್ಯಕ್ತಿತ್ವ ಹೊಂದಿದವನು. ಇಂದಿನ ಚೀನಾ ಮಾವೋ ವಾದದ ಮೇಲೆ ಕಟ್ಟಿರುವ, ಅದೇ ಸಿದ್ಧಾಂತವನ್ನ ಪಾಲಿಸುತ್ತಿರುವ ದೇಶವಾಗಿದೆ. ಅದಕ್ಕೆ ಧರ್ಮದ ಭಯವಿಲ್ಲ, ಹಿರಿಯರ ಭಯವಿಲ್ಲ, ದಯೆ, ಕರುಣೆ ಎನ್ನುವ ಪದಗಳಿಗೆ ಅಲ್ಲಿ ಅವಕಾಶವಿಲ್ಲ. ಅದರ ಸಿದ್ಧಾಂತ ಒಂದೇ ‘ಜಗತ್ತನ್ನ ಆಳುವುದು’. ಇದು ಇಂದು-ನಿನ್ನೆಯದಲ್ಲ 1911ರಲ್ಲಿ 18ರ ಹುಡುಗನ ಮನಸ್ಸಿನಲ್ಲಿ ಮೊಳೆತು ಬೀಜವಾದದ್ದು.
ಇಂದು ಅದು ರಕ್ತಬೀಜಾಸುರನಂತೆ ತನ್ನ ಸಂತಾನವನ್ನ ಹೆಚ್ಚಿಸಿಕೊಂಡಿದೆ. ಎಲ್ಲಾ ಇಸಂಗಳು ಅವನತಿ ಹೊಂದಲೇಬೇಕು. ಇಂಪೀರಿಯಲಿಸಂ 2 ಸಾವಿರ ವರ್ಷದ ನಂತರ ಕೊನೆಯಾಯ್ತು. ಹೀಗೆ ಎಷ್ಟೇ ವರ್ಷವಾಗಲಿ ಎಲ್ಲದಕ್ಕೂ ಕೊನೆ ಇದ್ದೇ ಇರುತ್ತದೆ. ಮಾವೋಯಿಸಂ ಕೂಡ ಕೊನೆಗಾಣುತ್ತದೆಯೇ? ಎನ್ನುವುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ. ಆದರೆ ಚೀನಾ ಇಂದು ಅಂದಿನಂಥ ಪಕ್ಕಾ ಕಮ್ಯುನಿಸ್ಟ್ ದೇಶವಾಗಿ ಉಳಿದಿಲ್ಲ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿದೆ. ಅದು ಅಮೆರಿಕ ದೇಶಕ್ಕಿಂತ ದೊಡ್ಡ ಕ್ಯಾಪಿಟಲಿಸ್ಟ್ ದೇಶವಾಗಿ ಬದಲಾಗಿದೆ.
ಬಂಡವಾಳಶಾಹಿ ದೇಶಗಳನ್ನು ವರ್ತಕರು ಆಳಲು ಶುರುಮಾಡುತ್ತಾರೆ. ತಮ್ಮ ಬಳಿ ಇರುವ ಹಣದ ಬಲದಿಂದ ನಿಧಾನವಾಗಿ ರಾಜಕೀಯ ಕ್ಷೇತ್ರದಲ್ಲಿ ಮೂಗು ತೂರಿಸಲು ಶುರು ಮಾಡುವ ಇವರು ಒಂದಷ್ಟು ಸಮಯದ ನಂತರ ಅವರೇ ಅಥವಾ ಅವರಿಗೆ ಬೇಕಾದ ನಿಷ್ಠಾವಂತರನ್ನೇ ರಾಜಕೀಯಕ್ಕೆ ತರುತ್ತಾರೆ.
ಯಾವಾಗ ವ್ಯಾಪಾರಿಗಳು ರಾಜಕೀಯದಲ್ಲಿ ಮತ್ತು ಪಾಲಿಸಿ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆಯುತ್ತಾರೆ, ಆಗೆ ಆ ದೇಶಗಳ ಸಾಮಾನ್ಯ ಪ್ರಜೆಯ ಜೀವನ ಕಷ್ಟವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಅಮೆರಿಕ. ಇಂದಿಗೆ ಅಮೆರಿಕ ದೇಶದ ಸಾಮಾನ್ಯ ಪ್ರಜೆಯ ಜೀವನ ಬಹಳ ಕಷ್ಟಕರವಾಗಿದೆ. ಅಲ್ಲಿನ ಹಣದುಬ್ಬರ ಆತನ ಎಲ್ಲಾ ದುಡಿಮೆಯನ್ನು ನುಂಗಿ ನೀರು ಕುಡಿಯುತ್ತಿದೆ.
ಅದೇ ಸಮಯದಲ್ಲಿ ಚೀನಾ ಅಮೆರಿಕಗಿಂತ ಒಂದು ಪಟ್ಟು ಹೆಚ್ಚು ಬಂಡವಾಳಶಾಹಿ ದೇಶವಾಗಿ ಕೂಡ ತನ್ನ ಉದ್ದಿಮೆದಾರರ ಮೇಲೆ ಬಹಳಷ್ಟು ಹಿಡಿತವನ್ನು ಹೊಂದಿದೆ. ಮೂಲದಲ್ಲಿರುವ ಮಾವೊ ಸಿದ್ಧಾಂತದ ಬೇರುಗಳು ಅದೆಷ್ಟು ಭದ್ರ ಎನ್ನುವುದಕ್ಕೆ ಜಾಕ್ ಮಾ ಪರಿಸ್ಥಿತಿ ನಮ್ಮ ಕಣ್ಣ ಮುಂದಿದೆ.
ಇವತ್ತಿಗೆ ಚೀನಾ ಅದೆಷ್ಟು ಬಲಶಾಲಿ ಎಂದರೆ ಅದರ ಮೇಲೆ ಬಯಸಿ ಕೂಡ ಅಮೆರಿಕ ಯುದ್ಧವನ್ನು ಸಾರಲಾರದು. ಇಂದಿನ ದಿನದ ಯುದ್ಧವನ್ನು ನಿರ್ಣಯಿಸುವುದು ಮಿಲಿಟರಿ ಶಕ್ತಿಯಲ್ಲ, ಮಿಲಿಟರಿ ಅಧಿಕಾರಿಗಳು ಕೂಡ ಅಲ್ಲ, ದೇಶದ ಪ್ರಧಾನಿ ಅಥವಾ ಪ್ರೆಸಿಡೆಂಟ್ ಅಲ್ಲವೇ ಅಲ್ಲ! ನಿಮಗೆ ಅಚ್ಚರಿ ಆದೀತು, ಇವತ್ತು ಯುದ್ಧವನ್ನು ನಿರ್ಧರಿಸುವುದು ವ್ಯಾಪಾರ, ಉದ್ದಿಮೆದಾರ. ಅಮೆರಿಕದ ಹೂಡಿಕೆದಾರರ ಎಣಿಕೆಗೆ ಸಿಗಲಾರದಷ್ಟು ಹಣ ಚೀನಾದಲ್ಲಿ ಹೂಡಿಕೆಯಾಗಿದೆ. ಟ್ರಂಪ್ ಸ್ವತಃ ಉದ್ಯಮಿ, ಹೀಗಾಗಿ ಆತ ಯುದ್ಧದ ನಿರ್ಣಯವನ್ನು ಮಾಡಬಲ್ಲರು. ಇವತ್ತಿಗೆ ನಮ್ಮ ಕಣ್ಣಿಗೆ ಕಾಣುವ ಇರಾನ್ ಮೇಲಿನ ದಾಳಿ, ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ, ಮುಗಿಯದ ರಷ್ಯಾ ಮತ್ತು ಉಕ್ರೇನ್ ಯುದ್ಧ, ಇತ್ತೀಚಿಗೆ ಉಲ್ಬಣದ ಸ್ಥಿತಿಗೆ ಹೋಗಿದ್ದ ಭಾರತ- ಪಾಕಿಸ್ತಾನದ ಸ್ಥಿತಿ ಇವೆಲ್ಲವೂ ದೊಡ್ಡ ಚಿತ್ರದ ಹಿಂದೆ ನಡೆಯುವ ಸಣ್ಣ ಪುಟ್ಟ ಘಟನೆಗಳು.
ನೀವು ಒಂದನೇ ಮಹಾಯುದ್ಧದ ನಂತರದ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಿ ನೋಡಿ ಸಾಕು, ಅಂದಿನ ಮತ್ತು ಇಂದಿನ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಹೀಗಾಗಿ ಯುದ್ಧ ಯಾವಾಗ ಬೇಕಾದರೂ ಆಗಬಹುದು. ಸಣ್ಣಪುಟ್ಟ ಗಾತ್ರದಲ್ಲಿ ನಡೆಯುತ್ತಿರುವ ಇಂದಿನ ಸಂಘರ್ಷಗಳು ದೊಡ್ಡ ಸಂಘರ್ಷಕ್ಕೆ ಎಲ್ಲರೂ ತಮ್ಮ ಶಕ್ತಿಯ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿರುವ ಪ್ರಯೋಗವಷ್ಟೇ.
ಈ ನಿಟ್ಟಿನಲ್ಲಿ ನೋಡಿದಾಗ ಕೂಡ ಚೀನಾ ತನ್ನ ಗೆಲುವನ್ನು ದಾಖಲಿಸಿಕೊಳ್ಳುತ್ತಿದೆ. ಅಮೆರಿಕದ ಶಕ್ತಿ ಸಾಮರ್ಥ್ಯ ಅದಕ್ಕೆ ಗೊತ್ತಾಗಿದೆ. ತನ್ನ ಮಿಲಿಟರಿ ಆಯುಧಗಳ ಶಕ್ತಿಯನ್ನು ಅದು ಪಾಕಿಸ್ತಾನದ ಮೂಲಕ ಭಾರತದ ಮೇಲೆ ಪ್ರಯೋಗಿಸಿ ಕಂಡುಕೊಂಡಿದೆ. ಇಸ್ರೇಲ್ ಶಕ್ತಿಯೇನು ಅಂತ ಅದಕ್ಕೆ ಗೊತ್ತಿದೆ. ಯುದ್ಧವಾದಲ್ಲಿ ರಷ್ಯಾ ತನ್ನ ಬೆನ್ನಿಗೆ ನಿಲ್ಲಲಿದೆ ಎನ್ನುವುದು ಕೂಡ ಚೀನಾಗೆ ಗೊತ್ತಿದೆ.
ಅದು ಸದ್ದಿಲ್ಲದೇ ಡೇಟಾ ಕಲೆಕ್ಷನ್‌ನಲ್ಲಿ ತೊಡಗಿದೆ. ಜಗತ್ತಿನಾದ್ಯಂತ ಆಗುತ್ತಿರುವ ಎಲ್ಲಾ ಸಂಘರ್ಷಗಳ ಹಿಂದೆ ದೊಡ್ಡ ಸಂಘರ್ಷಕ್ಕೆ ತಾಲೀಮು ನಡೆಯುತ್ತಿದೆ ಎನ್ನುವುದರ ಅರಿವು ಕೂಡ ಅದಕ್ಕಿದೆ. ಹೀಗಾಗಿ ಚೀನಾ ಹೆಚ್ಚು ಗದ್ದಲವಿಲ್ಲದೆ ಡೇಟಾ ಯುದ್ಧವನ್ನು ಸಂಗ್ರಹ ತಡೆಯುವ ಮಾಡುತ್ತಿದೆ.
ಶಕ್ತಿಯಿರುವುದು ಏಕೆಂದರೆ ಡೇಟಾಗೆ, ಹೂಡಿಕೆದಾರರಿಗೆ ಮತ್ತು ಉದ್ದಿಮೆದಾರರಿಗೆ ಮಾತ್ರ. ಇಂದಿಗೆ ಈ ಮೂರು ಹೆಚ್ಚಿರುವುದು ಚೀನಾದಲ್ಲಿ ಎನ್ನುವುದು ರಹಸ್ಯವೇನಲ್ಲ. ಮಾವೋ ಕನಸು ನಿಜ ಮಾಡುವಲ್ಲಿ ಚೀನಾ ನಡೆದುಬಂದ ದಾರಿ, ಈಗ ಹಿಡುತ್ತಿರುವ ಹೆಜ್ಜೆ ರೋಚಕವಾಗಿದೆ. ಸದ್ಯದ ಮಟ್ಟಿಗೆ ಬಂಡವಾಳ ಪ್ಲಸ್ ಮಾವೋಯಿಸಂ ಬ್ಲೆಂಡ್ ಗೆಲ್ಲುತ್ತಿದೆ.