ಪದಸಾಗರ
ಇಸ್ರೇಲ್‌ನ ಏರ್‌ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದವರು ಗೈಡ್ ಆವಿ ಬಿರಾನ್. ಆ ಕ್ಷಣದಿಂದ ಆತ ನಮ್ಮನ್ನು ಬೀಳ್ಕೊಡುವ ತನಕ ನಾನ್‌ಸ್ಟಾಪ್ ಆಗಿ ಮಾತನಾಡಿzರೆ. ಇಸ್ರೇಲಿನ ಇಂಚಿಂಚು ಇತಿಹಾಸ, ಪರಂಪರೆ, ಹಿರಿಮೆ, ರಾಜಕೀಯ ಪರಿಸ್ಥಿತಿ, ಯುದ್ಧ, ಅದರ ಪರಿಣಾಮ, ಹಮಾಸ್, ಹಿಜ್ಬುಲ್ಲ, ಹೌತಿಗಳ ಭಯೋತ್ಪಾದನೆ, ಅದಕ್ಕೆ ಕುಮ್ಮಕ್ಕು/ಬೆಂಬಲ ನೀಡುತ್ತಿರುವ ಮುಸಲ್ಮಾನ ದೇಶಗಳ ಮನಸ್ಥಿತಿ, ಇಸ್ರೇಲನ್ನು ವಿಲನ್ ಎಂಬಂತೆ ಬಿಂಬಿಸುತ್ತಿರೋ ಲೆಫ್ಟಿ ಮೀಡಿಯಾಗಳು.. ಹೀಗೆ ಎರಡೂವರೆ ಮೂರು ಸಾವಿರ ವರ್ಷಗಳ ಹಿಂದಿನಿಂದ ಇಂದಿನ ತನಕದ ಕತೆಯನ್ನು ಕಣ್ಣಿಗೆ ಕಟ್ಟುವ ಹಾಗೆ, ಕಣ್ಣೀರು ತುಳುಕುವ ಹಾಗೆ, ಸಾಕ್ಷ್ಯ ಸಮೇತ, ಇಸವಿಗಳ ಸಮೇತ ಆವಿ ಬಿರಾನ್ ಹೇಳುತ್ತಿದ್ದರೆ, ಮನಸಿಗೆ ಅನಿಸಿದ್ದೇನು ಗೊತ್ತಾ? ಇಸ್ರೇಲ್ ಬೇರೆ ಅಲ್ಲ ಭಾರತ ಬೇರೆ ಅಲ್ಲ!
ಹೌದು. ಆಕ್ರಮಣದ ಮೇಲೆ ಆಕ್ರಮಣಗಳಾದರೂ ಇಸ್ರೇಲ್ ಎದ್ದು ನಿಂತಿದೆ. ಇಸ್ರೇಲನ್ನು ಸರ್ವನಾಶ ಮಾಡಲು ಸಾಧ್ಯವಾಗಿಲ್ಲ. ಮುಘಲರಿಂದ ಹಿಡಿದು ಪಾಶ್ಚಿಮಾತ್ಯರ ತನಕ ಪರದೇಶಿಗಳು ಹೇಗೆ ಭಾರತವನ್ನು ನಲುಗಿಸಿದರೋ ಅದೇ ರೀತಿ ಇಸ್ರೇಲನ್ನೂ ನಲುಗಿಸಿದ್ದಾರೆ.
ಇದನ್ನೂ ಓದಿ: Naveen Sagar Column: ಹೂವನ್ನು ಒದರಿ ನಾರು ಸ್ವರ್ಗ ಸೇರದ ಕಥೆ !
‘ನಮ್ಮ ಪಾಡಿಗೆ ನಾವು ಇರ್ತೀವಿ ಬಿಟ್ಟುಬಿಡಿ’ ಅಂದರೂ ಮುಸಲ್ಮಾನ ದೇಶಗಳಿಗೆ ಇಸ್ರೇಲನ್ನು ಕಿತ್ತುಕೊಳ್ಳಬೇಕು, ಅದನ್ನೂ ಮುಸಲ್ಮಾನ ದೇಶವಾಗಿಸಿಕೊಳ್ಳಬೇಕು ಎಂಬ ಧರ್ಮಾಂಧ ದುರಾಸೆ ಹಾಗೂ ಅಮಾನವೀಯತೆ ಕರಗಿಲ್ಲ. ಭಾರತದ ಕತೆಯೂ ಇದೇ ಅಲ್ಲವೇ? ವಿಭಜನೆ ಮಾಡಿಕೊಟ್ಟರೂ ನೆಮ್ಮದಿ ಸಿಗಲಿಲ್ಲ.
ಪ್ರತ್ಯೇಕ ದೇಶ ಸಿಕ್ಕರೂ ಪಾಕಿಗಳಿಗೆ, ಬಾಂಗ್ಲನ್ನರಿಗೆ ದಾಹ ತಪ್ಪಲಿಲ್ಲ. ಆಗ ಅನಿಸಿತು- ಇಸ್ರೇಲ್ ಮತ್ತು ಭಾರತದ ಮಧ್ಯೆ ಬಹಳ ಹೋಲಿಕೆ ಇದೆ. ಆದರೆ ಇರುವ ಒಂದೇ ವ್ಯತ್ಯಾಸ ಅಂದರೆ ಇಸ್ರೇಲ್ ನ ಜನರಿಗೆ ದೇಶಪ್ರೇಮವಿದೆ. ನಮ್ಮಲ್ಲಿ ಕೊರತೆ ಇರೋದು ದೇಶಪ್ರೇಮದ್ದು. ಇನ್ ಫ್ಯಾಕ್ಟ್ ದೇಶ ಪ್ರೇಮ ಭಾರತದ ಅನ್ನ ತಿಂದ ಎಲ್ಲರಿಗೂ ಇದೆ. ಆದರೆ ಅದು ಕೆಲವೊಬ್ಬರಿಗೆ ಬೇರೆ ದೇಶದ ಮೇಲಿದೆ ಅಷ್ಟೆ.
ಸ್ವಾತಂತ್ರ್ಯಾನಂತರದ ದೇಶವಿಭಜನೆಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಪದೇಪದೆ ಹುಟ್ಟುವುದು ಒಂದೇ ಪ್ರಶ್ನೆ- ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಎಂಬ ದೇಶ ಸೃಷ್ಟಿಸಿಕೊಟ್ಟ ಗಾಂಧಿ, ಅದೇ ತಳಹದಿಯ ಮೇಲೆ ಇರೋಕೆ ಭಾರತವನ್ನೇಕೆ ಬಿಡಲಿಲ್ಲ? ಜಾತ್ಯಾತೀತತೆಯ ಅಮಲು ಯಾಕೆ ಏರಿತ್ತು? ಭಾರತದ ವಿಭಜನೆ ಆಗಿದ್ದು ಒಂದೇ ಬಾರಿಯಾ? ಅಲ್ಲ. ಬಾಂಗ್ಲಾ ಹೆಸರಿನಲ್ಲಿ ಮತ್ತೊಮ್ಮೆ ವಿಭಜನೆ ಆಯ್ತು. ಬಹುಶಃ ಅದೇ ರೀತಿ ಮುಂದುವರಿದಿದ್ದರೆ ಕೇರಳ, ಕಾಶ್ಮೀರ, ಹೈದರಾಬಾದ್ ಎಲ್ಲವೂ ಪ್ರತ್ಯೇಕ ದೇಶಗಳಾಗಿ ಹೋಗುತ್ತಿದ್ದವೇನೋ!
ಇಸ್ರೇಲಿನ ಗೈಡ್ ಒಂದು ಮಾತು ಹೇಳುತ್ತಿದ್ದ- ‘ನಾವು ಜತೆಗೆ ಬದುಕೋಣ ಎಂಬ ಮಾತಾಡುತ್ತೇವೆ. ಆದರೆ ಅವರು ನಾವು ನಿಮ್ಮ ಜತೆ ಅಲ್ಲ, ಈ ನೆಲದಲ್ಲಿ ನಿಮ್ಮ ಬದಲಿಗೆ ಬದುಕುತ್ತೇವೆ ಅಂತಾರೆ. ಹೇಗೆ ಸುಮ್ಮನಿರೋಣ? ನಮ್ಮದು ಇಸ್ರೇಲ್ ಡಿಫೆನ್ಸ್ ಫೋರ್ಸ್.
ನಾವು ನಮ್ಮ ಸೇನೆಯನ್ನು ಕಟ್ಟಿರೋದು ಡಿಫೆನ್ಸ್ ಗೋಸ್ಕರ. ನಮ್ಮ ರಕ್ಷಣೆಗೋಸ್ಕರ. ಆದರೆ ಅವರು ಸೇನೆ ಕಟ್ಟೋದೇ ಆಕ್ರಮಣಕ್ಕೋಸ್ಕರ, ಹತ್ಯಾಕಾಂಡಕ್ಕೋಸ್ಕರ’. ಆತನ ಇನ್ನೊಂದು ಮಾತು ಬಹಳ ಮಾರ್ಮಿಕವಾಗಿತ್ತು: ‘ಹಮಾಸ್, ಹೌತಿ, ಹಿಜ್ಬುಲ್‌ಗಳು, ನೆರೆದೇಶದವರು ಶಸ್ತ್ರ ಕೆಳಗಿಟ್ಟರೆ ಯುದ್ಧವೇ ಇರುವುದಿಲ್ಲ. ಆದರೆ ಇಸ್ರೇಲ್ ಶಸ್ತ್ರ ಕೆಳಗಿಟ್ಟರೆ ಇಸ್ರೇಲೇ ಇರುವುದಿಲ್ಲ!’.
ಇಸ್ರೇಲ್ ಎಂಥ ಅಪಾಯದಲ್ಲಿದೆ ಎಂಬುದಕ್ಕೆ ಇದಕ್ಕಿಂತ ವಿವರಣೆ ಬೇಕಾ? ಮನಸ್ಸು ಇಸ್ರೇಲ್‌ನಿಂದ ಇಂದಿಗೂ ಭಾರತಕ್ಕೆ ಮರಳಿಲ್ಲ. ಆದರೆ ಇಸ್ರೇಲಿನಲ್ಲಿದ್ದಾಗ ಮಾತ್ರ ಭಾರತ ಮತ್ತೆ ಮತ್ತೆ ನೆನಪಾಗು ವಂತೆ ಮಾಡುತ್ತಿತ್ತು ಇಸ್ರೇಲ್.
ನಾವೆಷ್ಟು ಸುಭದ್ರ ಕೈಗಳಲ್ಲಿದ್ದೇವೆ ಎಂಬುದರ ಜತೆಗೆ ಇಂಥ ದೇಶದಲ್ಲಿದ್ದರೂ ಈ ದೇಶಕ್ಕೇ ಗಳ ಹಿರಿಯುವ ಕೆಲಸ ಮಾಡುತ್ತಾರಲ್ಲ ಎಂದು ಇಲ್ಲಿನ ಎಡಜೀವಿಗಳು, ಬುದ್ಧಿಜೀವಿಗಳು, ಸೋಗಲಾಡಿ ಜಾತ್ಯತೀತರ ಬಗ್ಗೆ ಅಸಹ್ಯವೂ ಹುಟ್ಟುತ್ತಿತ್ತು. ಮೊನ್ನೆ ‘ದಿ ಬೆಂಗಾಲ್ ಫೈಲ್ಸ್’ ಚಿತ್ರ ನೋಡುವಾಗ ಆ ನಂತರದ ಕೆಲವು ರಿವ್ಯೂಗಳನ್ನು ನೋಡಿದಾಗ ಮತ್ತೆ ಇಸ್ರೇಲ್ ನೆನಪಾದದ್ದಕ್ಕೂ ಕಾರಣವಿತ್ತು.
ಒಂದಷ್ಟು ಲೆಫ್ಟಿ ರಿವ್ಯೂಗಳು ಪತ್ರಿಕೆಯಲ್ಲಿ ಈ ಸಿನಿಮಾವನ್ನು ‘ಸುಳ್ಳು ನೆರೇಟಿವ್ ಹುಟ್ಟು ಹಾಕುವ ಹವಣಿಕೆ’ ಅಂದಿವೆ. ‘ವಿಷದ ಬೂಸ್ಟರ್ ಡೋಸ್ ಇಂಜೆಕ್ಷನ್ ಕೊಡಲು ಹೊರಟಿರುವ ವಿವೇಕ್ ಅಗ್ನಿಹೋತ್ರಿ’ ಎಂದು ಬರೆದಿವೆ. ಕೋಮು ಸಾಮರಸ್ಯ ಹಾಳು ಮಾಡೋಕಂತಲೇ ಹೆಣೆದಿರುವ ಕಟ್ಟುಕಥೆ, ಮುಸಲ್ಮಾನ ವಿರೋಧಿ ಮನಸ್ಥಿತಿ ಹುಟ್ಟು ಹಾಕಿ ಹಿಂದೂಗಳನ್ನು ರೊಚ್ಚಿಗೆಬ್ಬಿಸಲೆಂದೇ ಸೃಷ್ಟಿಸಿರುವ ಸುಳ್ಳೂ ಅಂತಲೂ ಪುಂಖಾನುಪುಂಖ ವಿಮರ್ಶೆಗಳನ್ನು ಹರಿಬಿಡುವ ಕೆಲಸವಾಗ್ತಾ ಇದೆ.
ಇದರೊಂದಿಗೆ ಈ ಚಿತ್ರ ಪ್ರೇಕ್ಷಕರಿಂದ ತಿರಸ್ಕರಿಸಲ್ಪಟ್ಟಿದೆ ಎಂಬ ವರ್ಡಿಕ್ಟ್ ಅನ್ನು ಕೂಡ ಪತ್ರಿಕೆಯ ವಿಮರ್ಶಕರೇ ಕೊಟ್ಟು ಚಿತ್ರವನ್ನು ಮುಗಿಸಲು ಹೊರಟಿದ್ದಾರೆ. ಈ ಚಿತ್ರವನ್ನು ಸೆನ್ಸಾರ್ ಮಂಡಳಿ ಕ್ಲಿಯರ್ ಮಾಡಿದ್ದು ತಪ್ಪು, ಚಿತ್ರವನ್ನು ನೋಡೋಕೆ ಬಂದವರು ದೃಶ್ಯಗಳನ್ನು ರೀಲ್ಸ್ ಮಾಡಿ ಹೊರಜಗತ್ತಿಗೆ ತಲುಪಿಸುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆಯ ಒಬ್ಬ ವಿಮರ್ಶಕ ದುಃಖ ಪಡುತ್ತಿದ್ದ.
ಅವನ ದುಃಖ ಪೈರೆಸಿ ಬಗ್ಗೆ ಅಲ್ಲ. ಸತ್ಯ ಹೆಚ್ಚು ಜನಕ್ಕೆ ತಲುಪುತ್ತಿದೆಯಲ್ಲ ಎಂಬುದು. ‘ದಿ ಬೆಂಗಾಲ್ ಫೈಲ್ಸ್’ ನಿಜಕ್ಕೂ ಒಂದು ದಿಟ್ಟ ಚಿತ್ರ. ‘ಕಾಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿ’, ‘ತಾಷ್ಕೆಂಟ್ ಫೈಲ್ಸ್’ ಇವೆಲ್ಲವೂ ಕಣ್ಣೀರು ತರಿಸಿದಂತೆ ಈ ಚಿತ್ರವೂ ಕಣ್ಣೀರು ತರಿಸುತ್ತದೆ. ರೋಷವನ್ನೂ ಉಕ್ಕಿಸುತ್ತದೆ. ಗಾಂಧಿಯಂಥ ಗಾಂಧಿಗಳ ಬಗ್ಗೆ ಅಸಹ್ಯವನ್ನೂ ಹುಟ್ಟಿಸುತ್ತದೆ. ಆದರೆ ನೆನಪಿರಲಿ ಈ ಎಲ್ಲಾ ಸಿನಿಮಾಗಳಲ್ಲೂ ತೋರಿಸಿರೋದು ವಾಸ್ತವದ ಕೇವಲ ಹತ್ತು ಪರ್ಸೆಂಟ್ ಅಂಶ ಮಾತ್ರ.
‘ದಿ ಬೆಂಗಾಲ್ ಫೈಲ್ಸ್’ನಲ್ಲಿ ತೋರಿಸಿರೋದಂತೂ ಕೇವಲ ಒಂದು ಪರ್ಸೆಂಟ್. ಹಾಗಾದರೆ ನೋಡು ಗರೇ ಅಂದಾಜಿಸಬೇಕು ಅಸಲಿ ಕ್ರೌರ್ಯ ಹೇಗಿದ್ದಿರಬಹುದು ಅಂತ. ಒಂದು ಡೈಲಾಗ್ ಇದೆ ಈ ಸಿನಿಮಾದಲ್ಲಿ: ‘ಈ ಸೋ ಕಾಲ್ಡ್ ಅಲ್ಪಸಂಖ್ಯಾತರು ಹತ್ತು ಪರ್ಸೆಂಟ್ ಇದ್ದರೆ ತಮ್ಮ ಹಕ್ಕುಗಳನ್ನು ಕೇಳ್ತಾರೆ.
ಇಪ್ಪತ್ತು ಪರ್ಸೆಂಟ್ ಇದ್ದರೆ ತಮ್ಮದೇ ಅಭ್ಯರ್ಥಿಯನ್ನು ರಾಜಕೀಯಕ್ಕೆ ತರುತ್ತಾರೆ. ಮೂವತ್ತು ಪರ್ಸೆಂಟ್ ದಾಟಿತು ಅಂದುಕೊಳ್ಳಿ, ಪ್ರತ್ಯೇಕ ದೇಶವನ್ನೇ ಕೇಳ್ತಾರೆ’. ಈ ಡೈಲಾಗಿನಲ್ಲಿ ಒಂದು ಕರೆಕ್ಷನ್ ಹಾಕಬೇಕಿತ್ತು. ಅವರು ಕೇಳುವುದಿಲ್ಲ. ಎದೆಗೆ ಕೋವಿಯಿಟ್ಟು, ಮೇಲಿಂದ ಬಾಂಬಿಟ್ಟು ಕಿತ್ತುಕೊಳ್ಳುತ್ತಾರೆ!
ಇದು ಕಾಲ್ಪನಿಕ ಸಂಭಾಷಣೆ ಅಂತೂ ಅಲ್ಲ. ಇದು ನಮ್ಮ ಕಣ್ಣೆದುರು ನಿಂತಿರುವ ಕಠೋರ ವಾಸ್ತವ. ಚಿತ್ರದುದ್ದಕ್ಕೂ ಇಂಥ ಹಲವು ಹಾರ್ಡ್ ಹಿಟ್ಟಿಂಗ್ ದೃಶ್ಯಗಳಿವೆ, ಸಂಭಾಷಣೆಗಳಿವೆ. ಎಬಡ ಹಿಂದೂಗಳಿಗೆ ಇದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇಲ್ಲೀತನಕ ತಿರುಚಿಟ್ಟ, ಬಚ್ಚಿಟ್ಟ ಇತಿಹಾಸದ ಅಸಲೀಯತ್ತು ದೇಶಕ್ಕೆ ಸಿನಿಮಾಗಳ ಮೂಲಕ ತಿಳಿಯುತ್ತಿದೆಯಲ್ಲ ಎಂದು ಚಡಪಡಿಸುತ್ತಿದ್ದಾರೆ.
ಸಿನಿಮಾವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ನಿಜ ಹೇಳುವುದಾದರೆ, ಇದು ಪಾಕಿಸ್ತಾನಿ ಮನಸ್ಥಿತಿಯ ಪ್ರತಿಯೊಬ್ಬ ಕ್ರಿಮಿಗೂ ಬಹಳ ರುಚಿಸುವ ಸಿನಿಮಾ. ಹಿಂದೂಗಳನ್ನು ಹಿಂಸಿಸುವ, ಕೊಲ್ಲುವ ದೃಶ್ಯಗಳನ್ನು, ಹಿಂದೂಗಳ ಸಂಕಟವನ್ನು ಚಪ್ಪರಿಸಿಕೊಂಡು ನೋಡಬಹುದು.
ವಿಪರ್ಯಾಸವೆಂದರೆ, ಸೌಜನ್ಯಾ ಹತ್ಯೆಗೆ ಮರುಗುವ ನಾಟಕವಾಡುತ್ತಿರುವ ಮಂದಿಗೆ, ಈ ರೀತಿ ಅಮಾಯಕ ಹಿಂದೂ ಹೆಣ್ಮಕ್ಕಳ ದಾರುಣ ಅತ್ಯಾಚಾರ ಹತ್ಯೆಗಳ ಬಗ್ಗೆ ಮರುಕ ಹುಟ್ಟುವುದಿಲ್ಲ. ಈ ಹತ್ಯೆಗಳು, ಅತ್ಯಾಚಾರಗಳು ನಡೆದೇ ಇಲ್ಲ ಅನ್ನುತ್ತವೆ.
‘ಬೆಂಗಾಲ್ ಫೈಲ್ಸ್’ ಮನರಂಜನೆ ಕೊಡುವ ಚಿತ್ರವಲ್ಲ. ಇದರಲ್ಲಿ ಹಾಡು, ರೊಮ್ಯಾ, ಕಾಮಿಡಿಗಳಿಲ್ಲ. ಚಿತ್ರದ ಅವಧಿಯೂ ಚಿಕ್ಕದಿಲ್ಲ. ಎಂಬತ್ತು ವರ್ಷದ ಹಿಂದೆ ನಡೆದ ಕಥೆ ಮಾತ್ರವಲ್ಲ ಎಂಬತ್ತು ವರ್ಷದಿಂದ ಬಂಗಾಳದಲ್ಲಿ ನಡೆಯುತ್ತಿರುವ ವಾಸ್ತವವನ್ನು ಹಸಿಹಸಿಯಾಗಿ ಹೇಳಲಾಗಿದೆ.
ಯಾವುದೂ ಕಾಲ್ಪನಿಕವಲ್ಲ. ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದರೆ, ಅದಕ್ಕೂ ಒಂದು ವರ್ಷ ಮುನ್ನ ಬಂಗಾಳ ಸ್ವಾತಂತ್ರ್ಯವನ್ನು ಕಳೆದುಕೊಂಡಿತು. ಇಂದಿಗೂ ಬಂಗಾಳ ಅಪಾಯದಲ್ಲಿದೆ. ದೇಶದ್ರೋಹಿ ಅಧಿಕಾರದಾಹಿ ರಾಜಕಾರಣಿಗಳಿಂದಾಗಿ ಇಂದಿಗೂ ಬಂಗಾಳ ಭಾರತದ ಕೈತಪ್ಪಿ ಹೋಗುವ ಅಪಾಯದ ಇದೆ. ಪ್ರಿಸೈಸ್ ಆಗಿ ಹೇಳೋದಾದರೆ ಬಂಗಾಳದಲ್ಲಿ ಅಂದಿನಿಂದ ಇಂದಿನ ತನಕ ಅಪಾಯದಲ್ಲಿರುವವರು ರಿಯಲ್ ಹಿಂದೂಗಳೇ!
ಈ ಜಾಗೃತಿಯನ್ನು ಹುಟ್ಟಿಸುತ್ತಿರುವುದಕ್ಕೆ ವಿವೇಕ್ ಅಗ್ನಿ ಹೋತ್ರಿ ಕೋಮುವಾದಿ. ವಿಷದ ಬೂಸ್ಟರ್ ಇಂಜೆಕ್ಷನ್ ಕೊಡುತ್ತಿರುವವ. ಇದರಲ್ಲಿ ಹಳೆಯ ಕಥೆ ಹೇಳಿ, ಯಾಕೆ ಮತ್ತೆ ಪ್ರಚೋದಿ ಸುತ್ತಿದ್ದಾರೆ ಎಂದು ಕೇಳೋ ಹಾಗೆಯೇ ಇಲ್ಲ. ವರ್ತಮಾನದಲ್ಲೂ ಬಂಗಾಳ ಇದೇ ಪರಿಸ್ಥಿತಿಯಲ್ಲಿದೆ. ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಈ ಕ್ಯಾನ್ಸರ್ ಬಂಗಾಳವನ್ನು ತಿಂದುಕೊಳ್ಳುವುದು ಮಾತ್ರವಲ್ಲ ಬಂಗಾಳಕ್ಕಟ್ಟಿಂದ ರಾಜ್ಯಗಳಿಗೂ ಹಬ್ಬುತ್ತದೆ.
ಇಸ್ರೇಲಿನಲ್ಲಿ ಹೀಗೇ ಮಾತಿನ ಮಧ್ಯೆ ಗೈಡ್‌ನನ್ನು ಕೇಳಿದೆ- ‘ಇಷ್ಟೆಲ್ಲ ಇಸ್ರೇಲ್ ಸುತ್ತಿದರೂ ಒಂದು ಸಿನಿಮಾ ಪೋಸ್ಟರ್ ಕಾಣಲಿಲ್ಲ. ಸಿನಿಮಾ ಬ್ಯಾನರ್, ಕಟೌಟ್ ಏನೂ ಕಾಣಲಿಲ್ಲ. ಇಲ್ಲಿ ಸಿನಿಮಾ ಇಂಡಸ್ಟ್ರಿಯೇ ಇಲ್ಲವಾ?’ ಅಂತ. ಹೌದು ಇಸ್ರೇಲಿನ ಒಂದು ತುದಿಯಿಂದ ಇನ್ನೊಂದು ತುದಿಯ ತನಕ ಸುತ್ತಿದರೂ ನನಗೆ ಕಂಡದ್ದು ಅಲ್ಲಿನ ಸೈನಿಕರ ಚಿತ್ರಗಳು, ಇಸ್ರೇಲ್‌ನ ಬಾವುಟಗಳು, ಹಮಾಸ್ ಗಳು ಹೊತ್ತೊಯ್ದಿರುವ ಇಸ್ರೇಲ್‌ನ ಒತ್ತೆಯಾಳುಗಳ ಚಿತ್ರಗಳು ಮಾತ್ರ.
ಅವು ಹೆಜ್ಜೆಹೆಜ್ಜೆಗೂ ಕಾಣಸಿಗುತ್ತವೆ. ಐವತ್ತು ಇಸ್ರೇಲಿ ಸಿವಿಲಿಯನ್ಸ್ ಸೆರೆಯಾಗಿ ಆರು ನೂರಾ ಎಂಬತ್ತು ದಿನಗಳು ಕಳೆದಿವೆ ಎಂದು ದಿನವೂ ನಂಬರ್ ಹಾಕಿಕೊಂಡು ಅಲ್ಲಿನ ಪ್ರಜೆಗಳು ಓಡಾಡು ತ್ತಾರೆ. ಕಪ್ಪು ಪಟ್ಟಿ ಧರಿಸುವ ಹಾಗೆ. ಅವರ ಪಾಲಿಗೆ ಸೈನಿಕರು, ತಮ್ಮ ದೇಶದ ನಾಗರಿಕರು ಅಂದರೆ ಸರ್ವಸ್ವ. ಅವರಿಗೆ ಬೇರೆ ಹೀರೋಗಳಿಲ್ಲ. ಗೈಡ್ ಕೂಡ ಅದನ್ನೇ ಹೇಳಿದ- ‘ಇಲ್ಲಿ ರಿಯಲ್ ಹೀರೋ ಗಳನ್ನು ಗೌರವಿಸುತ್ತೇವೆ, ಸಿನಿಮಾದವರನ್ನಲ್ಲ.
ರಾಜಕೀಯ ವ್ಯಕ್ತಿಗಳನ್ನೂ ನಾವಿಲ್ಲಿ ವಿಶೇಷವಾಗಿ ನೋಡುವುದಿಲ್ಲ. ನಮ್ಮಲ್ಲಿ ಸಿನಿಮಾಗಳಿಲ್ಲ ಅಂತೇನಿಲ್ಲ. ದೇಶಭಕ್ತಿಯ, ಸೈನಿಕರ ಕುರಿತ ಸಿನಿಮಾಗಳು ಹೆಚ್ಚು ತಯಾರಾಗುತ್ತವೆ. ಇಲ್ಲಿನ ನಾಗರಿಕರೂ ಇಷ್ಟಪಡುವುದು ಅಂಥ ಸಿನಿಮಾಗಳನ್ನೇ’ ಅಂತ. ಭಾರತದ ಸಿನಿಮಾಗಳೂ ಇಲ್ಲಿ ಬರ್ತವೆ ಅಂತ ಹೇಳಿ, ‘ಅಮರನ್’ ಚಿತ್ರದ ಫೋಟೋವನ್ನು ಮೊಬೈಲಲ್ಲಿ ತೋರಿಸಿದ.
ಇದನ್ನು ಇಲ್ಲಿನ ಜನ ಇಷ್ಟಪಟ್ಟರು ಅಂದ. ಅಲ್ಲಿನ ನಾಗರಿಕರ ಬಗ್ಗೆ ಹೆಮ್ಮೆ ಅನಿಸಿತು. ನಮ್ಮ ದೇಶ ತುಂಬ ಕಲಿಯುವುದಿದೆ ಇಸ್ರೇಲಿನಿಂದ. ಬೇಸರವೆಂದರೆ, ನಮ್ಮವರು ಪ್ಯಾಲೆಸ್ತೀನ್ ಉಳಿಸಲು ಹೊರಟಿದ್ದಾರೆ. ರಾಫಾ ಬಗ್ಗೆ ಕಂಬನಿ ಮಿಡಿಯುತ್ತಿದ್ದಾರೆ. ಇಂಥವರಿಂದ ಭಾರತದ ಬಗ್ಗೆ ಕಾಳಜಿ ಗೌರವ ನಿರೀಕ್ಷಿಸುವುದೇ ಮೂರ್ಖತನ ಅಲ್ಲವೇ?