ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mohan Vishwa Column: 1947ರ ವಿಭಜನೆಯ ರಕ್ತಸಿಕ್ತ ಅಧ್ಯಾಯ

ವಿಭಜನೆಯ ಇತಿಹಾಸವು ಒಟ್ಟಾರೆ ಮಾನವೀಯ ದುರಂತವಾಗಿದ್ದರೂ, ಪಾಕಿಸ್ತಾನಕ್ಕೆ ಸೇರಿದ ಪ್ರದೇಶ ಗಳಿಂದ ಹಿಂದೂ ಸಿಖ್ ಜನಸಂಖ್ಯೆಯ ನಿರ್ಗಮನ ಅತ್ಯಂತ ಮಹತ್ವದ ಅಧ್ಯಾಯಗಳಲ್ಲಿ ಒಂದಾಗಿದೆ. 1940ರ ಲಾಹೋರ್ ನಿರ್ಣಯದ ನಂತರ ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆಯನ್ನು ಇಟ್ಟಿತ್ತು. 1946ರ ಚುನಾವಣೆಗಳು ಮತ್ತು ನಂತರದ ರಾಜಕೀಯ ಬೆಳವಣಿಗೆಗಳು ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸಿದವು.

ವೀಕೆಂಡ್‌ ವಿತ್‌ ಮೋಹನ್

ಅಖಂಡ ಭಾರತದ ವಿಭಜನೆ ಒಂದು ದಿನದಲ್ಲಿ ಸಂಭವಿಸಿದ ಘಟನೆ ಅಲ್ಲ. ಬ್ರಿಟಿಷರ ವಸಾಹತು ಶಾಹಿ ಆಡಳಿತ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ರಾಜಕೀಯ, ಪ್ರತ್ಯೇಕ ಮತದಾರ ವ್ಯವಸ್ಥೆ, ಸಮುದಾಯ ಆಧಾರಿತ ರಾಜಕೀಯ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದವು. ಸ್ವಾತಂತ್ರ್ಯದ ಸಂಭ್ರಮದ ಹಿಂದೆ ಲಕ್ಷಾಂತರ ಜನರ ಕಣ್ಣೀರು, ರಕ್ತ, ವಲಸೆ, ಕುಟುಂಬಗಳ ವಿಭಜನೆ ಮತ್ತು ಆಸ್ತಿಪಾಸ್ತಿಗಳ ನಾಶ ಅಡಗಿತ್ತು. ವಿಶೇಷವಾಗಿ ಪಶ್ಚಿಮ ಪಂಜಾಬ್, ಸಿಂಧ್, ವಾಯವ್ಯ ಗಡಿಪ್ರಾಂತ್ಯ ಮತ್ತು ಬಂಗಾಳದ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದ ಹಿಂದೂಗಳು ಮತ್ತು ಸಿಖ್ಖರು ಭೀಕರ ಹಿಂಸಾಚಾರವನ್ನು ಎದುರಿಸಿ ತಮ್ಮ ತಲೆತಲಾಂತರದ ಮನೆಗಳನ್ನು ತೊರೆದು ಭಾರತಕ್ಕೆ ಬರಬೇಕಾಯಿತು. ‌

ವಿಭಜನೆಯ ಇತಿಹಾಸವು ಒಟ್ಟಾರೆ ಮಾನವೀಯ ದುರಂತವಾಗಿದ್ದರೂ, ಪಾಕಿಸ್ತಾನಕ್ಕೆ ಸೇರಿದ ಪ್ರದೇಶಗಳಿಂದ ಹಿಂದೂ ಸಿಖ್ ಜನಸಂಖ್ಯೆಯ ನಿರ್ಗಮನ ಅತ್ಯಂತ ಮಹತ್ವದ ಅಧ್ಯಾಯಗಳಲ್ಲಿ ಒಂದಾಗಿದೆ. 1940ರ ಲಾಹೋರ್ ನಿರ್ಣಯದ ನಂತರ ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆಯನ್ನು ಇಟ್ಟಿತ್ತು. 1946ರ ಚುನಾವಣೆಗಳು ಮತ್ತು ನಂತರದ ರಾಜಕೀಯ ಬೆಳವಣಿಗೆಗಳು ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸಿದವು. 1946ರ ಆಗ 16ರಂದು ನಡೆದ, ಜಿನ್ನಾ ಕರೆ ಕೊಟ್ಟ ‘ಡೈರೆಕ್ಟ್ ಆಕ್ಷನ್ ಡೇ’ ನಂತರ ಕೋಲ್ಕತ್ತಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೀಕರ ಗಲಭೆಗಳು ನಡೆದವು.

1946ರಲ್ಲಿ ಬಿಹಾರದಲ್ಲಿ ನಡೆದ ಹಿಂಸಾಚಾರ ಹಾಗೂ 1947ರ ಮಾರ್ಚ್‌ನಲ್ಲಿ ಪಂಜಾಬ್‌ನಲ್ಲಿ ಉಂಟಾದ ಹಿಂಸಾಚಾರಗಳು ವಿಭಜನೆಯ ಮುನ್ನವೇ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎಂಬು ದನ್ನು ತೋರಿಸಿಕೊಟ್ಟಿದ್ದವು. ಆಗ 14, 1947ರಂದು ಪಾಕಿಸ್ತಾನ ಹೊಸ ರಾಷ್ಟ್ರವಾಯಿತು, ಆಗ 15ರಂದು ಭಾರತ ಸ್ವಾತಂತ್ರ್ಯ ಪಡೆಯಿತು. ಆದರೆ ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ನಿರ್ಧರಿಸಿದ ‘ರ್ಯಾಡ್‌ಕ್ಲಿ- ಅವಾರ್ಡ್’ ಅನ್ನು ಆಗ 17ರಂದು ಪ್ರಕಟಿಸಲಾಯಿತು. ಲಕ್ಷಾಂತರ ಜನರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದಾಗ ತಮ್ಮ ಊರು ಯಾವ ದೇಶಕ್ಕೆ ಸೇರಲಿದೆ ಎಂಬುದೇ ಅವರಿಗೆ ಖಚಿತವಾಗಿರಲಿಲ್ಲ.

ಬ್ರಿಟಿಷ್ ನ್ಯಾಷನಲ್ ಆರ್ಕೈವ್ಸ್ ಪ್ರಕಾರ, ಅಂತಿಮ ಗಡಿ ಆಗ 17ರಂದು ಪ್ರಕಟವಾಗಿದ್ದು, ವಿಭಜನೆ ಯ ಸುತ್ತಮುತ್ತಲಿನ ತಿಂಗಳುಗಳಲ್ಲಿ 15 ಮಿಲಿಯನ್‌ಗಿಂತಲೂ ಹೆಚ್ಚು ಜನರು ಹೊಸ ಗಡಿಗಳನ್ನು ದಾಟಿದರೆಂದು ಅಂದಾಜಿಸಲಾಗಿದೆ. ಈ ತಡವಾದ ಗಡಿ ಘೋಷಣೆಯ ಪರಿಣಾಮ ಪಂಜಾಬ್‌ನಲ್ಲಿ ಇನ್ನಷ್ಟು ಭಯ ಮತ್ತು ಗೊಂದಲ ಸೃಷ್ಟಿಯಾಯಿತು.

ಇದನ್ನೂ ಓದಿ: Mohan Vishwa Column: ಭಾರತದ ಅಣುಯುಗದ ಶಿಲ್ಪಿ ಹೋಮಿ ಭಾಭಾ

ಜನರು ನಾವು ಯಾವ ದೇಶದ ನಾಗರಿಕರಾಗುತ್ತೇವೆ? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲದೆ, ತಮ್ಮ ಜೀವ ಉಳಿಸಿಕೊಳ್ಳಲು ಸಿದ್ಧರಾಗಬೇಕಾಯಿತು. ವಿಭಜನೆಯ ಅತ್ಯಂತ ಭೀಕರ ಹಿಂಸಾಚಾರ ಪಂಜಾಬ್‌ ನಲ್ಲಿ ಸಂಭವಿಸಿತು. ಪಶ್ಚಿಮ ಪಂಜಾಬ್‌ನಲ್ಲಿದ್ದ ಹಿಂದೂ ಮತ್ತು ಸಿಖ್ ಕುಟುಂಬಗಳು ಭಾರತಕ್ಕೆ ತೆರಳಲು ಆರಂಭಿಸಿದವು. ಅದೇ ಸಮಯದಲ್ಲಿ ಪೂರ್ವ ಪಂಜಾಬ್ ಮತ್ತು ದೆಹಲಿ ಸೇರಿದಂತೆ ಭಾರತದ ಪ್ರದೇಶಗಳಿಂದ ಮುಸ್ಲಿಂ ಕುಟುಂಬಗಳು ಪಾಕಿಸ್ತಾನದತ್ತ ತೆರಳಿದವು.

ರೈಲುಗಳು ನಿರಾಶ್ರಿತರ ಪ್ರಮುಖ ಸಾರಿಗೆ ಮಾರ್ಗಗಳಾದವು. ಆದರೆ ಅನೇಕ ರೈಲುಗಳು ಕೊನೆಯ ನಿಲ್ದಾಣ ತಲುಪುವ ಮುನ್ನವೇ ದಾಳಿಗೆ ಒಳಗಾದವು. ‘ಘೋಸ್ಟ್ ಟ್ರೇನ್ಸ್’ ಎಂದು ನೆನಪಿಸಿಕೊಳ್ಳ ಲಾಗುವ ಕೆಲವು ರೈಲುಗಳು ಶವಗಳಿಂದ ತುಂಬಿ ಗಡಿಗೆ ತಲುಪಿದವು.

1947ರ ಸೆಪ್ಟೆಂಬರ್ ವೇಳೆಗೆ ಪಂಜಾಬ್‌ನಲ್ಲಿ ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ, ಅಧಿಕೃತವಾಗಿ ದೃಢೀಕರಿಸಲಾದ ಸಾವಿನ ಸಂಖ್ಯೆ 15000ರಷ್ಟಿದ್ದರೂ, ಈ ಸಂಖ್ಯೆ ತುಂಬಾ ಕಡಿಮೆಯಾಗಿದ್ದು ಎರಡು ಅಥವಾ ಮೂರು ಪಟ್ಟು ಹೆಚ್ಚಿರಬಹುದು ಎಂದು ಹೇಳಲಾಗಿತ್ತು. ಪಾಕಿಸ್ತಾನದ ಪಶ್ಚಿಮ ಭಾಗದಿಂದ ಭಾರತಕ್ಕೆ ಬಂದವರಲ್ಲಿ ಹಿಂದೂಗಳು ಮತ್ತು ಸಿಖ್ಖರು ದೊಡ್ಡ ಸಂಖ್ಯೆಯಲ್ಲಿದ್ದರು.

ಬ್ರಿಟಿಷ್ ನ್ಯಾಷನಲ್ ಆರ್ಕೈವ್ಸ್‌ನ ಒಂದು ಮೌಖಿಕ ಇತಿಹಾಸದ ದಾಖಲೆಯ ಪ್ರಕಾರ, ಪಶ್ಚಿಮ ಪಂಜಾಬ್‌ನಿಂದ ಸುಮಾರು 45 ಲಕ್ಷ ಹಿಂದೂ ಮತ್ತು ಸಿಖ್ಖರು ಪೂರ್ವಕ್ಕೆ, ಅಂದರೆ ಭಾರತಕ್ಕೆ ಬಂದರು. ಇವು ಕೇವಲ ಅಂಕಿಅಂಶಗಳಲ್ಲ. ಪ್ರತಿ ಸಂಖ್ಯೆಯ ಹಿಂದೆ ಒಂದು ಕುಟುಂಬವಿತ್ತು. ಒಂದು ಸಂಖ್ಯೆ ಎಂದರೆ ತನ್ನ ತಂದೆಯನ್ನು ಕಳೆದುಕೊಂಡ ಮಗು, ಗಂಡನನ್ನು ಕಳೆದುಕೊಂಡ ಮಹಿಳೆ, ತನ್ನ ಪೂರ್ವಜರ ಮನೆಯನ್ನು ಬಿಟ್ಟು ಬಂದ ವೃದ್ಧ ಅಥವಾ ತನ್ನ ಜನ್ಮಭೂಮಿಯನ್ನು ಮರಳಿ ನೋಡಲಾಗದ ನಿರಾಶ್ರಿತ.

61 ಒಕ

ವಿಭಜನೆಯ ಸಮಯದ ಸಾವಿನ ಸಂಖ್ಯೆ, ಕೆಲವು ಮೂಲಗಳ ಪ್ರಕಾರ ಸುಮಾರು 10 ಲಕ್ಷ ಎಂದು ಹೇಳಲಾಗುತ್ತದೆ. ಕೆಲವು ಅಂದಾಜುಗಳು ಅದಕ್ಕಿಂತ ಹೆಚ್ಚಾಗಿವೆ ಎಂದು ಹೇಳುತ್ತವೆ. ಅಮೆರಿಕದ ‘ನ್ಯಾಷನಲ್ ಎಂಡೋಮೆಂಟ್ ಫಾರ್ ಹ್ಯೂಮಾನಿಟೀಸ್’ ಪ್ರಕಟಿಸಿದ ವಿಭಜನೆ ಕುರಿತ ಲೇಖನವು 1.4 ಕೋಟಿಗಿಂತ ಹೆಚ್ಚು ಜನರು ತಮ್ಮ ಮನೆಗಳಿಂದ ಬೇರುಸಹಿತ ಕಿತ್ತುಕೊಂಡು ಹೋಗಿದ್ದು, ಸುಮಾರು ಮೂವತ್ತು ಲಕ್ಷ ಜನರು ಹಿಂಸಾಚಾರ, ಹಸಿವು, ಆತ್ಮಹತ್ಯೆ ಮತ್ತು ರೋಗಗಳಿಂದ ಮೃತಪಟ್ಟಿರಬಹುದೆಂದು ಅಂದಾಜಿಸುತ್ತದೆ. ಆದರೆ ಪಂಜಾಬ್‌ಗೆ ಸಂಬಂಧಿಸಿದ ಜನಸಂಖ್ಯಾ ಅಧ್ಯಯನವು ಇನ್ನೂ ಮಹತ್ವದ ಸಂಗತಿಯನ್ನು ತೋರಿಸುತ್ತದೆ.

1931, 1941 ಮತ್ತು 1951ರ ಜನಗಣತಿ ಮಾಹಿತಿಗಳನ್ನು ವಿಶ್ಲೇಷಿಸಿದ ಹಾರ್ವರ್ಡ್, ಎಂಐಟಿ ಮತ್ತು ಇತರ ಸಂಸ್ಥೆಗಳ ಸಂಶೋಧಕರು, ಪಂಜಾಬ್‌ನಲ್ಲಿ ವಿಭಜನೆಗೆ ಸಂಬಂಧಿಸಿದ ಸಾವುಗಳು ಮತ್ತು ದಾಖಲಾಗದ ವಲಸೆಯಿಂದ ಉಂಟಾದ ಜನಸಂಖ್ಯಾ ನಷ್ಟ ಸುಮಾರು 23 ಲಕ್ಷದಿಂದ 32 ಲಕ್ಷದ ನಡುವೆ ಇರಬಹುದೆಂದು ಅಂದಾಜಿಸಿದ್ದಾರೆ.

ವಿಭಜನೆಯ ಹಿಂಸಾಚಾರದಲ್ಲಿ ಮಹಿಳೆಯರು ಹೆಚ್ಚಾಗಿ ಗುರಿಯಾಗಿದ್ದರು. ಅಪಹರಣ, ಅತ್ಯಾಚಾರ, ಬಲವಂತದ ಮತಾಂತರ ಮತ್ತು ಕುಟುಂಬಗಳಿಂದ ಬೇರ್ಪಡಿಸುವ ಘಟನೆಗಳು ನಡೆದವು. ಬ್ರಿಟಿಷ್ ನ್ಯಾಷನಲ್ ಆರ್ಕೈವ್ಸ್ ನ ಸಂಗ್ರಹದಲ್ಲಿರುವ ಅಂದಾಜಿನ ಪ್ರಕಾರ, ವಿಭಜನೆಯ ಹಿಂಸಾಚಾರದಲ್ಲಿ 75000ಕ್ಕೂ ಹೆಚ್ಚು ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿರಬಹುದು ಎಂದು ಉಲ್ಲೇಖಿಸಲಾಗಿದೆ.

ಈ ಘಟನೆಗಳನ್ನು ಕೇವಲ ‘ಕೋಮುಗಲಭೆ’ ಎಂಬ ಒಂದು ಪದದಲ್ಲಿ ಮುಚ್ಚಿ ಹಾಕುವುದು ಸರಿಯಲ್ಲ. ಈ ಕಾರಣದಿಂದಲೇ ವಿಭಜನೆಯ ನೆನಪುಗಳು ಇಂದಿಗೂ ಅನೇಕ ಕುಟುಂಬಗಳಲ್ಲಿ ಮೌನದ ನೋವಾಗಿ ಉಳಿದಿವೆ. ಪಂಜಾಬ್ ಮಾತ್ರವಲ್ಲ, ಸಿಂಧ್‌ನಲ್ಲಿದ್ದ ಹಿಂದೂ ಸಮುದಾಯವೂ ವಿಭಜನೆಯ ನಂತರ ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ವಲಸೆ ಬಂತು.

ಕರಾಚಿ, ಹೈದರಾಬಾದ್, ಸಕ್ಕರ್, ಮಿರ್‌ಪುರಖಾಸ್ ಮುಂತಾದ ಪ್ರದೇಶಗಳಲ್ಲಿ ವ್ಯಾಪಾರ, ಶಿಕ್ಷಣ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನೇಕ ಹಿಂದೂ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಭಾರತಕ್ಕೆ ಬಂದವು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ವಿಭಜನೆ ಯಿಂದ ಹಿಂದೂಗಳ ವಲಸೆ 1947ರ ಆಗಸ್ಟ್‌ನ ಸಂಪೂರ್ಣವಾಗಿ ಮುಗಿದಿಲ್ಲ.

ಪೂರ್ವ ಪಾಕಿಸ್ತಾನವಾಗಿದ್ದ, ಪೂರ್ವ ಬಂಗಾಳದಿಂದ ಹಿಂದೂಗಳ ಭಾರತಕ್ಕೆ ವಲಸೆ ಹಲವು ವರ್ಷಗಳ ಕಾಲ ಮುಂದುವರಿಯಿತು. ಹೀಗಾಗಿ ವಿಭಜನೆಯನ್ನು ಕೇವಲ 1947ರ ಆಗ 14 ಮತ್ತು 15ರ ಎರಡು ದಿನಗಳ ಘಟನೆ ಎಂದು ನೋಡುವುದು ಅಪೂರ್ಣ. ಭಾರತಕ್ಕೆ ಬಂದ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಹೊಸ ಜೀವನ ಆರಂಭಿಸುವುದು ಸುಲಭವಾಗಿರಲಿಲ್ಲ. ಅವರು ಮನೆ, ಭೂಮಿ, ಅಂಗಡಿ, ಉದ್ಯೋಗ, ದಾಖಲೆಗಳು ಮತ್ತು ಕೆಲವೊಮ್ಮೆ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಿ ದ್ದರು. ದೆಹಲಿ, ಅಮೃತಸರ, ಲುಧಿಯಾನಾ, ಜಲಂಧರ್, ಪಟಿಯಾಲಾ ಮತ್ತು ಇತರ ನಗರಗಳಲ್ಲಿ ನಿರಾಶ್ರಿತರ ಶಿಬಿರಗಳು ಮತ್ತು ಹೊಸ ವಸಾಹತುಗಳು ನಿರ್ಮಾಣವಾದವು.

1947ರ ವಿಭಜನೆಯ ದೊಡ್ಡ ಪಾಠವೆಂದರೆ, ರಾಜಕೀಯ ಧ್ರುವೀಕರಣ ಸಾಮಾನ್ಯ ಜನರ ಬದುಕಿಗೆ ತಲುಪಿದಾಗ ಅದರ ಬೆಲೆ ಭಯಾನಕವಾಗಬಹುದು. ರಾಜಕೀಯ ನಾಯಕರು ನಕ್ಷೆಯಲ್ಲಿ ಗಡಿಗಳನ್ನು ಎಳೆಯಬಹುದು; ಆದರೆ ಆ ಗಡಿಗಳ ಪರಿಣಾಮವನ್ನು ಅನುಭವಿಸುವವರು ಸಾಮಾನ್ಯ ಜನರು. ಇಂದು 1947ರ ಇತಿಹಾಸವನ್ನು ನೆನಪಿಸಿಕೊಳ್ಳುವಾಗ ಹಿಂದೂಗಳ ನೋವನ್ನು ನಿರ್ಲಕ್ಷಿಸುವುದು ಅನ್ಯಾಯ. ವಿಭಜನೆಯ ಸಂದರ್ಭದಲ್ಲಿ ಹಿಂದೂಗಳು ಮತ್ತು ಸಿಖ್ಖರು ಭೀಕರವಾಗಿ ಬಲಿಯಾದರು.

ಪಾಕಿಸ್ತಾನದ ಪಶ್ಚಿಮ ಭಾಗಗಳಿಂದ ಹಿಂದೂ ಮತ್ತು ಸಿಖ್ ಸಮುದಾಯಗಳ ಬೃಹತ್ ಪ್ರಮಾಣದ ನಿರ್ಗಮನವು ಪ್ರತ್ಯೇಕವಾಗಿ ದಾಖಲಿಸಬೇಕಾದ ಇತಿಹಾಸದ ವಾಸ್ತವ. 1947ರ ಅಖಂಡ ಭಾರತ ವಿಭಜನೆ ಮಾನವ ಜನಾಂಗದ ದೊಡ್ಡ ದುರಂತ. ಅದು ಕೋಟ್ಯಂತರ ಜನರ ಸ್ಥಳಾಂತರ, ಲಕ್ಷಾಂತರ ಜನರ ಸಾವು, ಸಾವಿರಾರು ಕುಟುಂಬಗಳ ಚದುರಿಕೆ ಮತ್ತು ತಲೆಮಾರುಗಳವರೆಗೆ ಉಳಿದ ಮಾನಸಿಕ ಗಾಯಗಳ ಕಥೆ. ಆಗ 14 ಪಾಕಿಸ್ತಾನದ ಉದಯ; ಆಗ 15 ಭಾರತದ ಸ್ವಾತಂತ್ರ್ಯ; ಆಗ 17 ರ್ಯಾಡ್‌ಕ್ಲಿ- ಗಡಿ ಘೋಷಣೆ. ಈ ಮೂರು ದಿನಗಳ ನಡುವೆ ನಡೆದ ಘಟನೆಗಳು ಒಂದು ಉಪಖಂಡದ ಜನಸಂಖ್ಯೆಯನ್ನೇ ಬದಲಿಸಿದವು.

ಹಿಂದೂಗಳ ಮೇಲೆ ನಡೆದ ಹಿಂಸಾಚಾರ, ಸಿಖ್ಖರ ಮೇಲಿನ ದೌರ್ಜನ್ಯ, ಇವೆಲ್ಲವನ್ನೂ ದಾಖಲೆ ಗಳೊಂದಿಗೆ ನೆನಪಿಸಿಕೊಳ್ಳಬೇಕು. ಇತಿಹಾಸವನ್ನು ಮರೆಮಾಚುವುದು ಪರಿಹಾರವಲ್ಲ; ಅದನ್ನು ದ್ವೇಷಕ್ಕೆ ಬಳಸುವುದೂ ಪರಿಹಾರವಲ್ಲ. ಸತ್ಯವನ್ನು ಒಪ್ಪಿಕೊಳ್ಳುವುದು, ಬಲಿಪಶುಗಳ ನೋವಿಗೆ ಗೌರವ ನೀಡುವುದು ಮತ್ತು ಮುಂದಿನ ಪೀಳಿಗೆಗೆ ಹಿಂಸೆಯ ಅಪಾಯವನ್ನು ತಿಳಿಸುವುದೇ 1947ರ ಬಲಿಪಶುಗಳಿಗೆ ನೀಡುವ ನಿಜವಾದ ಗೌರವ.

ಮೋಹನ್‌ ವಿಶ್ವ

View all posts by this author