ತಿಳಿರು ತೋರಣ
ಅಮಿತಾಭ್ ಬಚ್ಚನ್‌ನ ‘ಡಾನ್’ ಚಿತ್ರದ ಹಾಡನ್ನೊಮ್ಮೆ ನೆನಪಿಸಿಕೊಳ್ಳಿ. ಅದೇ- “ಓ ಖಾಯಿಕೇ ಪಾನ್ ಬನಾ ರಸ್ ವಾಲಾ... ಖುಲೀ ಜಾಯೇ ಬಂದ್ ಅಕಲ್ ಕಾ ತಾಲಾ..." ಬುದ್ಧಿಶಕ್ತಿಯ ಬೀಗ ತೆರೆಯುತ್ತದಂತೆ ಬನಾರಸ್ ಪಾನ್ ತಿಂದವರಿಗೆ. ಕೊಲ್ಕತ್ತಾ ಮೀಠಾ ಪಾನ್ ತಿಂದವರಿಗೂ ಹಾಗೇ ಆಗುತ್ತದೇನೋ. ನಮ್ಮ ಮೈಸೂರು ವೀಳ್ಯದೆಲೆಯೇನು ಕಡಿಮೆಯೇ? ಎಲ್ಲ ಬಗೆಯ ಪಾನ್‌ಗಳದೂ Pan-India ಭರ್ಜರಿ ಪ್ರದರ್ಶನವೇ.
ಪಾನ್ ಎನ್ನಿ, ಬೀಡಾ ಎನ್ನಿ, ಎಲೆಯಡಿಕೆ ಎನ್ನಿ ಅಥವಾ ಸುಸಂಸ್ಕೃತವಾಗಿ ತಾಂಬೂಲ ಎನ್ನಿ, ನಮ್ಮ ಆಚಾರ-ವಿಚಾರ-ಆಹಾರ ಪರಂಪರೆಗಳಲ್ಲಿ ಅದರ ಮೆರುಗು ಅನನ್ಯ, ಅಸಾಮಾನ್ಯ. ನಾವು ಸವಿದರಷ್ಟೇ ಸಾಲದು ದೇವರೂ ಸವಿಯಲೆಂಬ ಆಶಯದಿಂದ ಪೂಜೆಯಲ್ಲಿ ನೈವೇದ್ಯ ಸಮರ್ಪಣೆ ಬಳಿಕ “ಮುಖವಾಸನಾರ್ಥೇ ಪೂಗೀಫಲ ತಾಂಬೂಲಂ ಸಮರ್ಪ ಯಾಮಿ" ಎಂದು ದೇವರಿಗೂ ‘ಸುಪಾರಿ’ ಕೊಡುವವರು ನಾವು (ಅಪಾರ್ಥ ಮಾಡ್ಕೊಳ್ಬೇಡಿ)!
ಇಂತಿರುವ ತಾಂಬೂಲ ಸಂಸ್ಕೃತಿಯು ಆರಂಭವಾದದ್ದು ಎಲ್ಲಿ, ಯಾವಾಗ? ಶತಮಾನಗಳಿಂದಲೂ ಅದು ಮುಂದುವರಿದುಕೊಂಡು ಬಂದಿದ್ದು ಹೇಗೆ? ದೇವತಾರ್ಚನ, ಭೋಜನ, ಆತಿಥ್ಯ, ಸತ್ಕಾರಗಳು ತಾಂಬೂಲ ಇಲ್ಲದೆ ಅಪರಿಪೂರ್ಣ ಎನಿಸುವುದು ಏಕೆ? ಹಿತಮಿತವಾದ ತಾಂಬೂಲ ಚರ್ವಣವು ಒಂದು ಸುಸಂಸ್ಕೃತ ಹವ್ಯಾಸ (ಚಟ ಅಲ್ಲ) ಎಂದಾದದ್ದು ಹೇಗೆ? ತಾಂಬೂಲವೆಂದು ಜಗಿಯುವ ವೀಳ್ಯದೆಲೆ, ಸುಣ್ಣ ಅಡಕೆ ಅಷ್ಟೇ ಅಲ್ಲದೆ ಐಚ್ಛಿಕವಾಗಿ ಸೇರಿಸಿಕೊಳ್ಳುವ ಇತರ ಸುಗಂಧದ್ರವ್ಯಗಳು (ತಂಬಾಕು ಅಲ್ಲ) ನಮ್ಮ ದೇಹದ ಮತ್ತು ಮನಸ್ಸಿನ ಆರೋಗ್ಯಕ್ಕೆ ಪೂರಕವೇ? ಮಾರಕವೇ? ಎಂಬಿತ್ಯಾದಿ ಪ್ರಶ್ನೆಗಳನ್ನು ನೀವು ಯಾವತ್ತಾದರೂ ಕೇಳಿಕೊಂಡಿದ್ದೀರಾ? ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೀರಾ? ಇಲ್ಲ ಅಥವಾ ಹೌದು ಅಂತಾದರೂ ಇವೆಲ್ಲ ಪ್ರಶ್ನೆಗಳಿಗೆ ಉತ್ತರವನ್ನೂ, ಅನೇಕ ಸ್ವಾರಸ್ಯಕರ ಮಾಹಿತಿಗಳನ್ನೂ ಕನ್ನಡದಲ್ಲಿ ವಿವರಿಸುವ ಬೃಹತ್ ಗ್ರಂಥವೊಂದು ಇಂದು (ರವಿವಾರ, 29 ಮಾರ್ಚ್ 2026) ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗುತ್ತಿದೆ.
ಇದನ್ನೂ ಓದಿ: Srivathsa Joshi Column: ಬರಿ, ಬರಿಯುತ್ತ ಬರಿ...ಕೋಸಂಬರಿ ರೀತಿಯೂ ಬರಿ !
‘ತಾಂಬೂಲರಾಗ’ ಎಂದು ಅದರ ಹೆಸರು. ಗ್ರಂಥದ ಸಂಪಾದಕರು ನಮ್ಮೂರಿನವರು, ನನ್ನೊಬ್ಬ ಹಿರಿಯ ಹಿತೈಷಿ. ತಾಂಬೂಲ, ಅದಕ್ಕಿಂತಲೂ ಹೆಚ್ಚಾಗಿ ಈ ರೀತಿಯ ಸ್ವಾರಸ್ಯಕರ ಮಾಹಿತಿ, ನನಗೂ ಇಷ್ಟವೇ ಎಂದು ಅವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಇರಬೇಕು- ದೂರದೇಶದಲ್ಲಿರುವ ನನಗೆ ಪುಸ್ತಕದ್ದೊಂದು ಪ್ರಿವಿಲೆಜ್ಡ್ ಪ್ರಿವ್ಯೂ ಒದಗಿಸಿದ್ದಾರೆ! ಅಂಥ ಪ್ರೀತಿಯ ತಾಂಬೂಲವನ್ನು ನಾನೊಬ್ಬನೇ ಜಗಿಯುವುದು (ಸವಿಯುವುದು) ತರವಲ್ಲ ಎಂದು ಜಗದಗಲ ದಾಟಿಸುತ್ತಿದ್ದೇನೆ, ಇಂದಿನ ತಿಳಿರುತೋರಣವನ್ನು ತಾಂಬೂಲರಾಗದ್ದೇ ಕೆಲ ತಾನ-ತಂತುಗಳಿಂದ ಸಿಂಗರಿಸುವ ಮೂಲಕ.
“ತಾಂಬೂಲವನ್ನು ಕುರಿತಂತೆ ಋಷಿ-ಮುನಿಗಳು, ಘನವಿದ್ವಾಂಸರು ಬರೆದ ಸಂಸ್ಕೃತ ಶ್ಲೋಕಗಳ ಅರ್ಥವನ್ನು ವಿದ್ಯಾರತ್ನ ಅ.ರಾ.ಪಂಚಮುಖಿಯವರು ‘ತಾಂಬೂಲ’ ಎಂಬೊಂದು ಕನ್ನಡ ಕೃತಿ ಯಲ್ಲಿ ಮತ್ತು ಬಹುಶ್ರುತ ವಿದ್ವಾಂಸ ದ್ವಾರಕಾಪ್ರಸಾದ ಶಾಸ್ತ್ರಿಯವರು ‘ತಾಂಬೂಲಮಂಜರಿ’ ಎಂಬ ಹಿಂದಿ ಕೃತಿಯಲ್ಲಿ ಈ ಹಿಂದೆ ಪ್ರಕಟಿಸಿ ತಾಂಬೂಲಪ್ರಿಯರಿಗೆ ವಿಸ್ತೃತವಾದ ಅರಿವನ್ನು ನೀಡುವಲ್ಲಿ ಮಹದುಪಕಾರ ಮಾಡಿದ್ದಾರೆ. ಈ ಇಬ್ಬರೂ ವಿದ್ವಾಂಸರಿಗೂ ತಾಂಬೂಲಪ್ರಿಯರು ಕೃತಜ್ಞರಾಗಿರಬೇಕು. ಈ ಎರಡೂ ಕೃತಿಗಳಲ್ಲಿ ಸಾಂಪ್ರದಾಯಿಕ ತಾಂಬೂಲವು ಒಳಗೊಂಡಿರುವ ವೀಳ್ಯದೆಲೆ, ಅಡಕೆ, ಸುಣ್ಣ, ಖದಿರಸಾರ, ಲತಾಕಸ್ತೂರಿ, ಸುವರ್ಣದಲ, ಏಲಕ್ಕಿ, ಲವಂಗ, ಜಾಯಿ ಕಾಯಿ, ಶುಂಠಿ, ಬಾದಾಮಿ, ಕೊಬ್ಬರಿ, ದಾಲ್ಚೀನಿ, ಕರ್ಪೂರವೇ ಮೊದಲಾದ ಇಪ್ಪತ್ತೊಂದು ಬಗೆಯ ದ್ರವ್ಯಗಳನ್ನು ಕುರಿತಾದ ವಿಸ್ತೃತ ಮಾಹಿತಿ ಇದೆ.
ಆದರೆ ಈ ಕೃತಿಗಳು ಈಗಿನವರ ಓದಿಗೆ ಸುಲಭವಾಗಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಇವೆರಡೂ ಕೃತಿ ಗಳನ್ನು ಮೂಲ ಆಧಾರವಾಗಿಟ್ಟುಕೊಂಡು ರಚಿಸಿದ ಸಂಪಾದಿತ ಕೃತಿ ತಾಂಬೂಲರಾಗ. ತಾಂಬೂಲ ಮೆಲ್ಲುವುದು, ಎಲೆಯಡಕೆ ಹಾಕುವುದು ಒಂದು ಸುಸಂಸ್ಕೃತ ಹವ್ಯಾಸವಲ್ಲವೆಂದು ಮೂಗು ಮುರಿಯುವವರಿಗೆ ತಾಂಬೂಲದ ಪೌರಾಣಿಕ ಐತಿಹಾಸಿಕ ಸಾಮಾಜಿಕ ಪರಂಪರೆಯನ್ನು ತಿಳಿಸುತ್ತ, ಆಯುರ್ವೇದೀಯ ಮಹತ್ತ್ವವನ್ನು ಮನದಟ್ಟು ಮಾಡುವುದೇ ಈ ಗ್ರಂಥರಚನೆಯ ಉದ್ದೇಶ.
ಇದನ್ನು ಅಧ್ಯಯನ ಮಾಡಿ ತಂಬಾಕುರಹಿತ ತಾಂಬೂಲವನ್ನು ಮೆಲ್ಲುವಲ್ಲಿ ಮುಂದಿನ ಪೀಳಿಗೆ ಮನ ಮಾಡಲಿ ಎನ್ನುವುದು ನಮ್ಮ ಆಶಯ. ತಾಂಬೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ; ತಾಂಬೂಲ ಪ್ರಿಯರಾಗೋಣ" ಎಂಬ ನಿವೇದನೆಯ ‘ವೀಳ್ಯ’ವನ್ನು ಕೊಟ್ಟು ಓದುಗರನ್ನು ವಾಚನಾ ನುಸಂಧಾನಕ್ಕೆ ಆಹ್ವಾನಿಸಿದ್ದು ಚೆನ್ನಾಗಿದೆ.
ಹಾಗೆಯೇ ಮುಂದೆ ಒಂದುಕಡೆ ಬರುವ ಈ ಟಿಪ್ಪಣಿ- “ಒಂದು ಕಾಲಕ್ಕೆ ಮನೆಯ ಚಾವಡಿ, ಶುಭ ಸಮಾರಂಭಗಳ ಚಪ್ಪರದಡಿಯ ತಟ್ಟೆಗಳಲ್ಲಿ ವಿರಾಜಿಸುತ್ತಿದ್ದ ತಾಂಬೂಲದ ಪರಿಕರಗಳು ಇಂದು ‘ರೆಡಿ-ಟು-ಈಟ್’ ಆದ ಪಾನ್‌ಬೀಡಾಗಳಾಗಿ ಮಾರುಕಟ್ಟೆಯನ್ನು ಪ್ರವೇಶಿಸಿವೆ. ನಗರಗಳ ಯಾವುದೇ ಖಾನಾವಳಿ ಅಥವಾ ಉಪಾಹಾರಗೃಹಗಳ ಮುಂದೆ ಅರಳಿನಿಂತ ಕೊಡೆಯ ಕೆಳಗೊಬ್ಬ ಪಾನ್ ವಾಲಾ ಇದ್ದೇ ಇರುತ್ತಾನೆ.
ನಮ್ಮ ಆಯ್ಕೆಯ ಎಲೆಗೆ ಸುಣ್ಣ ಸವರಿ ಅಡಕೆ ಚೂರುಗಳೊಂದಿಗೆ ಪರಿಮಳ ದ್ರವ್ಯಗಳನ್ನು ಬೆರೆಸಿ ತ್ರಿಕೋನಾಕೃತಿಯಲ್ಲಿ ಅದನ್ನು ಮಡಚಿ ನಮ್ಮ ಕೈಗೆ ನೀಡುವ ಅವನ ಕೈಚಳಕಕ್ಕೆ ಬೆರಗಾಗಲೇಬೇಕು. ಈ ಪಾನ್‌ವಾಲಾ ಈಗೀಗ ವಿವಾಹಸಮಾರಂಭಗಳ ಔತಣಕೂಟದಲ್ಲೂ ಠಾಕುಠೀಕಾದ ವಸ್ತ್ರಸಂಹಿತೆಯೊಂದಿಗೆ ಕಾಣಿಸತೊಡಗಿದ್ದಾನೆ. ಇಂಥ ಪಾನ್‌ಬೀಡಾಗಳು ಗೋವಿಂದ್ ಬೀಡಾ, ಕಪೂರ್ ಬೀಡಾ, ಕುಲಿ ಬೀಡಾ, ಕತರ್ ಬೀಡಾ, ಮೋಂದ್ ಬೀಡಾ, ಗೋಂದ್ ಬೀಡಾ ಮುಂತಾದ ತರಹೇವಾರಿ ಹೆಸರುಗಳಿಂದ ಕರೆಯಲ್ಪಡುತ್ತವೆ. ಹೆಣ್ಣು ಗಂಡಿನ ಸಮಾಗಮದ ಸಮಯಕ್ಕಾಗಿಯೇ ‘ಸುಖ್ ಪಲ್ಲಂಗ್’ ಎನ್ನುವ ಪಾನ್‌ಬೀಡಾ ಈಗ ಮಾರುಕಟ್ಟೆಯಲ್ಲಿದ್ದು ಅದರ ಬೆಲೆ ಕೆಲವು ಸಾವಿರ ಗಳಷ್ಟಿದೆಯಂತೆ!
ಒಟ್ಟಾರೆಯಾಗಿ ಈ ಪಾನ್‌ಬೀಡಾ ಉದ್ಯಮವು ಕಡಿಮೆ ಬಂಡವಾಳದ ಹೆಚ್ಚು ಗಳಿಕೆಯನ್ನು ನೀಡುವ ಉದ್ಯಮವಾಗಿ ಭಾರತದಲ್ಲಿ ಸ್ಥಾಪಿತಗೊಂಡಿದೆ..." ಇದೊಂದೇ ಸಾಕು ಓದುಗರ ಮನದಲ್ಲಿ ಪಾನ್‌ಬೀಡಾ ವಿಶ್ವರೂಪ ದರ್ಶನ ಮಾಡಿಸಲಿಕ್ಕೆ. ಪುಸ್ತಕದಲ್ಲಿ ಪ್ರಸ್ತಾವಿಸದಿದ್ದರೂ- ಪಾನ್‌ವಾಲಾ ತನ್ನ ಕೈಯೊರೆಸುವ ಬಟ್ಟೆ, ಅದರ ವರ್ಣಸಂಕರ, ಜ್ವಾಲಾಮುಖಿ ಪಾನ್ ಧಗಧಗ ಉರಿಯುವಾಗಲೇ ಗ್ರಾಹಕರು ಬಾಯಿಯೊಳಗೆ ಹಾಕಿಕೊಳ್ಳುವುದು... ಮುಂತಾದ ವಿಶೇಷ ದೃಶ್ಯಗಳೂ ಕಣ್ಮುಂದೆ ಬರಲಿಕ್ಕೆ.
ತಾಂಬೂಲ, ಅದರ ಗುಣಪ್ರಯೋಜನಗಳು, ವೀಳ್ಯದೆಲೆ, ಅಡಕೆ, ಸುಣ್ಣ ಮತ್ತು ಸುಗಂಧದ್ರವ್ಯಗಳಲ್ಲಿ ಒಂದೊಂದರ ವಿಶೇಷತೆ, ತಾಂಬೂಲವನ್ನು ಯಾವಾಗ ಮೆಲ್ಲಬೇಕು ಮತ್ತು ಯಾವಾಗ/ಎಲ್ಲಿ ಮೆಲ್ಲಬಾರದು, ಯಾರು ಮೆಲ್ಲಬಹುದು ಮತ್ತು ಯಾರಿಗೆ ನಿಷೇಧ, ಯಾರಿಗೆ ಕೊಡುವ ತಾಂಬೂಲ ದಲ್ಲಿ ಎಷ್ಟು ವೀಳ್ಯದೆಲೆಗಳಿರಬೇಕು, ಎಲೆಗೆ ಸುಣ್ಣವನ್ನು ಯಾವ ಬೆರಳಿಂದ ಹಚ್ಚಬೇಕು... ಇತ್ಯಾದಿ ಪ್ರತಿಯೊಂದು ವಿವರಗಳಿರುವ ಸಂಸ್ಕೃತ ಶ್ಲೋಕಗಳು ಮತ್ತು ಅವುಗಳ ಕನ್ನಡ ಅನುವಾದ ಈ ಪುಸ್ತಕದಲ್ಲಿವೆ.
ಅಷ್ಟೇ ಅಲ್ಲ, ಶ್ಲೋಕಗಳಲ್ಲಿ ಬರುವ ಸಂಸ್ಕೃತ ಪದಗಳನ್ನು ಕನ್ನಡ ಸಮಾನಾರ್ಥದೊಡನೆ ಅಕಾರಾದಿ ಪಟ್ಟಿಯಲ್ಲಿ ಕೊಡಲಾಗಿದೆ. ಧನ್ವಂತರೀ, ತ್ರಿಮಲ್ಲಟೀಕಾ, ರಾಜನಿಘಂಟು, ಯೋಗ ಮಾಲಾ, ಸ್ಕಂದಪುರಾಣ, ರ್ಶ್ಗಾಧರ ಪದ್ಧತಿ, ಬೃಹತ್ಸಂಹಿತಾ, ಸುಶ್ರುತ ಸಂಹಿತಾ, ಮಾನಸೋಲ್ಲಾಸ... ಹೀಗೆ ಬೇರೆಬೇರೆ ಆಕರಗಳಿಂದ ಕೆಲವು ಶ್ಲೋಕಗಳ ಪಾಠಾಂತರ ಹೇಗಿದೆ ಎಂಬುದನ್ನೂ ದಾಖಲಿಸಿ ದ್ದಿದೆ. ಆ ಮಟ್ಟಿಗೆ ಇದನ್ನು ತಾಂಬೂಲ ಜ್ಞಾನಗಂಗೋತ್ರಿ ಎನ್ನಲಿಕ್ಕಡ್ಡಿಯಿಲ್ಲ.
ಉದಾಹರಣೆಗೆ, ತಾಂಬೂಲದ ತ್ರಯೋದಶ (೧೩) ಪ್ರಯೋಜನಗಳನ್ನು ಬಣ್ಣಿಸುವ ಈ ಶ್ಲೋಕವನ್ನು ಗಮನಿಸಿ: “ತಾಂಬೂಲಂ ಕಟುತಿಕ್ತಮುಷ್ಣಮಧುರಂ ಕ್ಷಾರಂ ಕಷಾಯಾ ನ್ವಿತಂ| ವಾತಘ್ನಂ ಕಫ ನಾಶನಂ ಕ್ರಿಮಿಹರಂ ದುರ್ಗಂಧಿ ನಿರ್ಣಾಶನಮ್| ವಕಸ್ಯಾಭರಣಂ ವಿಶುದ್ಧಿಕರಣಂ ಕಾಮಾಗ್ನಿ ಸಂದೀಪನಂ| ತಾಂಬೂಲಸ್ಯ ಸಖೇ ತ್ರಯೋದಶ ಗುಣಾಃ ಸ್ವರ್ಗೇಧಿಪಿ ತೇ ದುರ್ಲಭಾಃ" (ತಾಂಬೂಲ ವು ಖಾರ, ಹುಳಿ, ಸಿಹಿ, ಕಹಿ, ಉಪ್ಪು, ಮತ್ತು ಒಗರೆಂಬ ಷಡ್ರಸಗಳನ್ನು ಹೊಂದಿದೆ. ಅದು ದೇಹ ದೊಳಗಿನ ವಾತಸಂಬಂಧಿ ತೊಂದರೆಗಳನ್ನು ನೀಗಿಸಿ ಕ-ವನ್ನು ಹೋಗಲಾಡಿಸಿ, ಬಾಯಿಯೊಳಗಿನ ದುರ್ವಾಸನೆಯನ್ನು ಕಳೆದು, ಜಠರದಲ್ಲಿರುವ ಕ್ರಿಮಿಗಳನ್ನು ನಾಶ ಮಾಡುತ್ತದೆ.
ತಾಂಬೂಲವನ್ನು ಮೆಲ್ಲುವುದರಿಂದ ತುಟಿಗಳು ಕೆಂಪಗಾಗುವ ಕಾರಣದಿಂದ ಅದನ್ನು ಮಾತು ಗಾರನ ಆಭರಣವೆಂದು ಬಣ್ಣಿಸಲಾಗಿದೆ. ತಾಂಬೂಲವು ರತಿಪೂರ್ವ ಕಾಮವನ್ನು ಉದ್ದೀಪಿಸುತ್ತದೆ. ಗೆಳೆಯನೇ ಇಂಥ ಹತ್ತರ ಮೇಲ್ಮೂರು ಗುಣಗಳು ತಾಂಬೂಲಕ್ಕಿವೆ. ಇದು ಸ್ವರ್ಗದಲ್ಲಿಯೂ ದುರ್ಲಭ ವಾಗಿದೆ!).
ಊಟ ಆಗಿ ಕೈತೊಳೆದ ಕೂಡಲೇ ನೀವು ತಾಂಬೂಲ ಮೆಲ್ಲುತ್ತೀರಾದರೆ ತಪ್ಪು! “ಭುಕ್ತ್ವಾನ್ನಂ ಸಲಿಲಂ ಪೀತ್ವಾ ಗೃಹೀತ್ವಾ ಬಹುಭೇಷಜಮ್| ಪ್ರತೀಕ್ಷ್ಯ ಘಟಿಕಾಮೇಕಾಂ ತಾಂಬೂಲಂ ಭಕ್ಷಯೇ ನ್ನರಃ||" ಅಂದರೆ ಭೋಜನ, ದಾಹಶಮನಕ್ಕಾಗಿ ನೀರು, ಔಷಧಾದಿಗಳನ್ನು ಸೇವಿಸಿ ಕನಿಷ್ಠ ಒಂದು ಗಳಿಗೆ (24 ನಿಮಿಷ) ಅಂತರವನ್ನಿರಿಸಿ ತಾಂಬೂಲವನ್ನು ಸೇವಿಸಬೇಕೆಂದು ಹೇಳಲಾಗಿದೆ.
ಹಾಗೆಯೇ, ಹಾಲನ್ನು ಕುಡಿದ ತತ್‌ಕ್ಷಣ ತಾಂಬೂಲವನ್ನು ಸೇವಿಸಬಾರದು. ಎಲ್ಲಿಯವರೆಗೆ ನಾಲಗೆ ಯಲ್ಲಿ ಹಾಲಿನ ಸ್ವಾದವಿರುವುದೋ ಅಲ್ಲಿಯವರೆಗೆ. ಅದಕ್ಕೂ ಒಂದು ಶ್ಲೋಕವಿದೆ: “ತಾಂಬೂಲಂ ನೈವ ಸೇವೇತ ಕ್ಷೀರಂ ಪೀತ್ವಾ ತು ಮಾನವಃ| ಯಾವತ್ತು ಸ್ವದತೇ ಕ್ಷೀರಂ ತಾವದೇ ವೇತಿ ನಿರ್ಣಯಃ||". ಈಗ ನೀವಿದನ್ನು ಕೆ.ಎಸ್ ನರಸಿಂಹಸ್ವಾಮಿಯವರ “ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು..." ಹಾಡಿಗೆ ಅನ್ವಯಿಸಿ ಗಮನಿಸಬೇಕು.
ಅದರ ಒಂದು ಚರಣದಲ್ಲಿ “ಚಿಗುರೆಲೆ ಬಣ್ಣದ ಅಡಕೆಯ ತಂದಳು ನಾದಿನಿ ನಗುನಗುತ" ಎಂದು ಮೊದಲಿಗೆ, ಆಮೇಲಷ್ಟೇ “ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ" ಎಂದು ಬರುತ್ತದೆ. ಅಂದರೆ, ರಾಯರು ಎಲೆಯಡಕೆ ಜಗಿದಾದ ಮೇಲೆ ಕೂಡಲೇ ಹಾಲು ಕುಡಿಯಲಿಕ್ಕಡ್ಡಿ ಯಿಲ್ಲ.
ಅಷ್ಟಾದರೂ ಪಾಪ ಮಡದಿಯ ಸದ್ದೇ ಇರಲಿಲ್ಲ ಎನ್ನುವುದು ಬೇರೆಮಾತು. ಹೀಗೆ, ತಾಂಬೂಲ ವರ್ಣನೆಯ ಗುಂಗಿನಲ್ಲಿರುತ್ತಲೇ ಮನಸ್ಸು ಬೇರೆ ಹತ್ತುಹಲವು ರೋಚಕ ಸಂಗತಿಗಳನ್ನೂ ಮೆಲ್ಲುವಂತೆ ಮಾಡುವುದು ಈ ತಾಂಬೂಲರಾಗದ ಇನ್ನೊಂದು ಹಿರಿಮೆ ಎಂದು ನನಗನಿಸಿತು.
ಇನ್ನು ಈ ಗ್ರಂಥರಚನೆಯ ಹಿಂದಿರುವ ವ್ಯಕ್ತಿಶಕ್ತಿಗಳ ಬಗ್ಗೆಯೂ ಒಂದೆರಡು ಪ್ಯಾರಾ (ಪ್ರೀತಿಭರಿತ ಅಂತಲೂ ಅರ್ಥೈಸಿಕೊಳ್ಳಿ) ಬರೆಯುತ್ತೇನೆ. ಸಂಪಾದಕರು ನಮ್ಮೂರಿನವರು ಎಂದೆನಷ್ಟೆ? ಅವರ ಹೆಸರು ದಿವಾಕರ ಡೋಂಗ್ರೆ. ನಮ್ಮೂರ ಹೆಸರಿಗೇ ‘ವ’ ಅಕ್ಷರ ಸೇರಿಸಿ ‘ಮಾಳವ’ ಎಂದು ಕಾವ್ಯನಾಮ. ನಾಲ್ಕೈದು ದಶಕಗಳಿಂದ ಬೆಂಗಳೂರುನಿವಾಸಿ.
ಲೇಖಕ, ಕವಿ, ಸಂಘಟನಕಾರ. ಮುದ್ರಣಕ್ಷೇತ್ರದಲ್ಲಿ ತರಬೇತಿ ಪಡೆದು ಒಂದು ಪ್ರಕಾಶನ ಸಂಸ್ಥೆ ಯನ್ನೂ ನಡೆಸಿದವರು. ಚಿತ್ಪಾವನ ಸಮುದಾಯದ ‘ಭಾರ್ಗವವಾಣಿ’ ನಿಯತಕಾಲಿಕೆಯ ಸಂಪಾದಕರಾಗಿ ಕೆಲಕಾಲ ಸೇವೆ ಸಲ್ಲಿಸಿದವರು.
ಕನ್ನಡದಲ್ಲಿ ಮೂರು ಕಾದಂಬರಿಗಳು, ಚಿತ್ಪಾವನಿ ಭಾಷೆಯಲ್ಲಿ ಹಾಸ್ಯಲೇಖನಗಳು, ಕಥೆ-ಕವಿತೆ ಅಲ್ಲದೇ ಟಿವಿ-ವಾಹಿನಿಗಳಿಗಾಗಿ ಮರಾಠಿ ಧಾರಾವಾಹಿಗಳ ಕನ್ನಡ ಅನುವಾದ ಹೀಗೆ ಸಾಕಷ್ಟು ಸಾಹಿತ್ಯಕೃಷಿ ಮಾಡಿದವರು. ಅಷ್ಟಾಗಿಯೂ ಈ ತಾಂಬೂಲರಾಗದ ಮಟ್ಟಿಗೆ ತನ್ನದು ಸೃಷ್ಟಿ ಅಲ್ಲ, ಸಂಗ್ರಹಣೆ ಮತ್ತು ಸಂಕಲನ ಮಾತ್ರ ಎಂಬ ವಿನೀತಭಾವ ತೋರಿದ್ದಾರೆ.
ಸಂಸ್ಕೃತ ಶ್ಲೋಕಗಳ ನಿಖರತೆಯನ್ನು ಅವಲೋಕಿಸಿ ತಿದ್ದಿತೀಡುವಿಕೆ ಮಾಡಿ ಯೋಗ್ಯವಾದೊಂದು ಮುನ್ನುಡಿಯನ್ನೂ ಬರೆದುಕೊಟ್ಟವರು ಡಾ.ಸೂರ್ಯ ಹೆಬ್ಬಾರ್. ಇವರು ಸಂಸ್ಕೃತ ವಿದ್ವಾಂಸರು, ಪ್ರಾಧ್ಯಾಪಕರು, ಅಷ್ಟಾವಧಾನಿ ಮತ್ತು ಬೆಂಗಳೂರಿನಿಂದ ಪ್ರಕಟವಾಗುವ ‘ಸಂಭಾಷಣ ಸಂದೇಶ’ ಸಂಸ್ಕೃತ ಪತ್ರಿಕೆಯ ಸಹಸಂಪಾದಕರು. ಗ್ರಂಥಕ್ಕೆ ತೂಕ ತಂದ ಇನ್ನೊಬ್ಬ ಸಂಸ್ಕೃತ ವಿದ್ವಾಂಸ ಡಾ.ಎಂ.ಸುದರ್ಶನ ಚಿಪಳೂಣಕರ್. ಮೂಲತಃ ಕಾರ್ಕಳ ಸಮೀಪದ ದುರ್ಗದವರು.
ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಶಾಸ್ತ್ರೀ ಮತ್ತು ಆಚಾರ್ಯ ಪದವಿ, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಿಂದ ಹಸ್ತಪ್ರತಿ ಶಾಸ್ತ್ರದಲ್ಲಿ ಎಂ.ಫಿಲ್ ಪದವಿ, ಕಾವ್ಯಪ್ರಕಾಶ ಗ್ರಂಥದ ಹಸ್ತಪ್ರತಿರೂಪದ ಅಧ್ಯಯನಕ್ಕೆ ವಿದ್ಯಾವಾರಿಧಿ (ಪಿಎಚ್‌ಡಿ) ಪದವಿ. ಪ್ರಸ್ತುತ ಕೇರಳದ ಚಿನ್ಮಯ ವಿಶ್ವವಿದ್ಯಾಪೀಠದಲ್ಲಿ ಸಹಾಚಾರ್ಯರಾಗಿ ಮತ್ತು ‘ಲಿಂಗ್ವಿಸ್ಟಿಕ್ಸ್ ಆಂಡ್ ಲಿಟರರಿ ಸ್ಟಡೀಸ್’ ವಿಭಾಗದ ಮುಖ್ಯಸ್ಥರಾಗಿ ಸೇವೆ.
ತಾಂಬೂಲಚರ್ವಣದ ನಡುವೆ ಗ್ರಾಮೀಣ ಜನರಲ್ಲಿನ ಜೀವನಾನುಭವಗಳು ಕೌಟುಂಬಿಕ ಸಂಗತಿ ಗಳ ಆದಾನಪ್ರದಾನದ ವಿಚಾರಗಳನ್ನು ಆಧುನಿಕ ಕಾಲಕ್ಕೆ ಅನ್ವಯವಾಗುವ ಶ್ಲೋಕಗಳ ರೂಪ ದಲ್ಲಿ ಮಂಡಿಸಿರುವುದು ಇವರ ಕೊಡುಗೆ. ತಾಂಬೂಲ ಸಂಸ್ಕೃತಿಯನ್ನು ಲಘುವಾಗಿ ಕಾಣುವ ನಗರವಾಸಿ ಯುವಕನೋರ್ವನಿಗೆ ನೆರೆಮನೆಯ ಯಜಮಾನ ಮತ್ತು ಅವನ ಮಗಳು ತಾಂಬೂಲದ ಮಹತ್ತ್ವವನ್ನು ತಿಳಿಸುತ್ತಾರೆ.
ಮುಂದೆ ಕೆಲ ದಿನಗಳಲ್ಲಿ ಆ ಯುವಕನು ಅದೇ ಯುವತಿಯಲ್ಲಿ ಅನುರಕ್ತನಾಗಿ ವಿವಾಹ ನಿಶ್ಚಯ ವಾಗುತ್ತದೆ. ಅವರಿಬ್ಬರ ಹೆತ್ತವರು ತಾಂಬೂಲವನ್ನು ವಿನಿಮಯ ಮಾಡಿಕೊಳ್ಳುವ ಸರಸ ಸನ್ನಿವೇಶದ ಶ್ಲೋಕಗಳಿವು. ಹಾಗಿದ್ದರೆ ಇದೊಂದು ಬರೀ ಸಂಸ್ಕೃತಭೂಯಿಷ್ಠ ಗ್ರಂಥ ಇರಬಹುದು, ನಮಗೆಲ್ಲ ತಲೆಮೇಲಿಂದ ಹಾದು ಹೋಗುವಂಥದಿರಬಹುದು ಅಂದುಕೊಳ್ಳಬೇಡಿ!
‘ತಾಂಬೂಲರಾಗ’ದ ದ್ವಿತೀಯಾರ್ಧದಲ್ಲಿ ಬೇರೆಯೇ ರೀತಿಯಲ್ಲಿ ಮೌಲ್ಯವರ್ಧನ ಮಾಡಿರುವವರು ಸಸ್ಯಶಾಸ್ತ್ರದ ಪ್ರಾಧ್ಯಾಪಕ ಗಣೇಶ ಶೆಂಡ್ಯೆ. ಔಷಧಿಯ ಸಸ್ಯವಿಜ್ಞಾನ, ಸಸ್ಯಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವೀಧರ. ಸಸ್ಯಜನ್ಯ ಔಷಧಿ ಮತ್ತು ಸೌಂದರ್ಯ ವರ್ಧಕಗಳ ತಯಾರಿಕೆ ಕಂಪನಿಯಲ್ಲಿ ಸಂಶೋಧನೆ ಮತ್ತು ಗುಣಮಟ್ಟ ಪರೀಕ್ಷೆ, ತದನಂತರ ಉಜಿರೆ ಧ.ಮಂ. ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪನ, ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ ನಡೆಸುವ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಏಳನೇ ಸ್ಥಾನ, ಪ್ರಸ್ತುತ ಚಿಕ್ಕಮಗಳೂರಿನ ಐಡಿಎಸ್‌ಜಿ ಸರಕಾರಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ. ತಾಂಬೂಲದ ಪ್ರಧಾನ ಘಟಕಗಳಾದ ವೀಳ್ಯದೆಲೆ, ಅಡಕೆ, ಸುಣ್ಣ, ಮತ್ತಿತರ ಸುಗಂಧದ್ರವ್ಯಗಳ ಸಸ್ಯಶಾಸ್ತ್ರೀಯ ಮತ್ತು ಔಷಧಿಯ ಗುಣಗಳನ್ನು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಎಳೆಎಳೆಯಾಗಿ ವಿವರಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.
ತಾಂಬೂಲವನ್ನು ‘ಕೇವಲ ಮೆಲ್ಲುವುದಲ್ಲ, ಅರಿತು ಮೆಲ್ಲೋಣ’ ಎಂಬ ಅವರ ಧೋರಣೆ/ಕಳಕಳಿ ಓದುಗರಿಗೆ ಆಪ್ತವೆನಿಸುತ್ತದೆ. ತಂಬಾಕುರಹಿತ ತಾಂಬೂಲದಿಂದ ಯಾವುದೇ ಹಾನಿಯಿಲ್ಲ ಎಂಬ ಅಭಯವನ್ನೂ ನೀಡುತ್ತದೆ. ಅವರ ಕನ್ನಡ ಭಾಷೆ, ಪದಸಂಪತ್ತು, ನಿರೂಪಣಾಶೈಲಿ ಸಹ ಉತ್ಕೃಷ್ಟ. ‘ಎಲೆಅಡಕೆಯ ರಾಗರಂಜಿತ ಪರಂಪರೆ’, ‘ಪೂರ್ವಕ್ಕೆ ನಿಕಟವೀ ಪೂಗರಸ’, ‘ಭುಜಗಲತೆಯ ದಶಾವತಾರಗಳು’, ‘ಸುಣ್ಣ: ವಕ್ರೀಭವನಗೊಂಡ ಸಪ್ತಸಾಗರಗಳ ಹೊಳಪು’, ‘ಏಲಕ್ಕಿ: ತಾಂಬೂಲದ ಸುವಾಸನೆಯ ಅರಸಿ’, ‘ಲವಂಗ: ಸುಗಂಧಲೋಕದ ಸಾರ್ವಭೌಮ’ ಮುಂತಾಗಿ ಒಂದೊಂದು ಶೀರ್ಷಿಕೆಯೂ ಆಕರ್ಷಕ.
“ದಿವಾಕರ ಡೋಂಗ್ರೆಯವರು ಸಂಶೋಧಕ ಹೃದಯದ ಕವಿ; ಗಣೇಶ ಶೆಂಡ್ಯೆಯವರು ಕವಿ ಹೃದಯದ ಸಂಶೋಧಕ. ಇಬ್ಬರೂ ಸೇರಿ ಹೊರತಂದ ಈ ಕೃತಿ ತಾಂಬೂಲ ರಸದಂತೆ ಸರ್ವತೋ ಮುಖವಾಗಿ ನಮ್ಮನ್ನು ರಂಜಿಸುತ್ತದೆ" ಮುನ್ನುಡಿಯ ಷರಾ ಅಕ್ಷರಶಃ ಒಪ್ಪತಕ್ಕ ಮಾತು.
ತಾಂಬೂಲರಾಗ ಅಲ್ಲದೆ ದಿವಾಕರ ಡೋಂಗ್ರೆಯವರ ಮತ್ತೆರಡು ಕೃತಿಗಳು- ‘ಗಾಂಧಾರಿ’ ಪೌರಾಣಿಕ ಕಾದಂಬರಿ, ‘ಕಥಾ ಷೋಡಶಿ’ ಕಥಾಸಂಕಲನ ಸಹ ಇಂದು ಬಿಡುಗಡೆಯಾಗುತ್ತವೆ. ಅವು ನನ್ನ ಚಹದ ಕಪ್ಪಲ್ಲ ಎಂದು ಅವರಿಗೂ ಗೊತ್ತು, ತಾಂಬೂಲರಾಗವನ್ನಷ್ಟೇ ನನಗೆ ರುಚಿ ತೋರಿಸಿದ್ದಾರೆ.
ಬೆಂಗಳೂರಿನಲ್ಲಿ ಜಯನಗರದ ವಿವೇಕ ಆಡಿಟೋರಿಯಂನಲ್ಲಿ ಬೆಳಗಿಂದ ಸಂಜೆವರೆಗೂ ಕಾರ್ಯ ಕ್ರಮ. ಪುಸ್ತಕ ಲೋಕಾರ್ಪಣೆಯ ವೇದಿಕೆಯಲ್ಲಿ ‘ಪದ್ಮಭೂಷಣ’ ಶತಾವಧಾನಿ ಡಾ. ರಾ.ಗಣೇಶ ಇರುತ್ತಾರೆ. ಕನ್ನಡದ ಖ್ಯಾತ ಲೇಖಕಿ, ನನಗೂ ಆತ್ಮೀಯರಾದ ಜಯಶ್ರೀ ದೇಶಪಾಂಡೆ ಸಹ ಇರುತ್ತಾರೆ.
ಭೋಜನಾನಂತರ ಭಾವಗೀತೆಗಳ ಗಾಯನ, ರಂಗವಲ್ಲಿ ಕೈಚಳಕ, ತಾಂಬೂಲರಾಗಕ್ಕೆ ಮುಖಪುಟ ರಚಿಸಿದ ದಾವಣಗೆರೆಯ ಶಾಂತಯ್ಯ ಪರಡಿಮಠರಿಂದ ಚಿತ್ರರಚನೆ, ಚಿತ್ಪಾವನ ಯಕ್ಷಮಿತ್ರರಿಂದ ‘ಶ್ರೀಕೃಷ್ಣ ಸಂಧಾನ’ ಯಕ್ಷಗಾನ ತಾಳಮದ್ದಳೆ... ಹೀಗೆ ಕಾರ್ಯಕ್ರಮವೈವಿಧ್ಯ. ಥೇಟ್ ತಾಂಬೂಲ ದಂತೆಯೇ ಸರ್ವತೋಮುಖ ಮನೋರಂಜನೆ.
ತಾಂಬೂಲ ಸೇವನೆಯೂ ಇದ್ದೇ ಇರುತ್ತದೆಂದು ಬೇರೆ ಹೇಳಬೇಕಿಲ್ಲವಷ್ಟೆ? ಕಾರ್ಯಕ್ರಮದ ಬಗ್ಗೆ, ಕೃತಿಗಳ ಬಗ್ಗೆ, ಮುಖ್ಯವಾಗಿ ತಾಂಬೂಲರಾಗವನ್ನು ನೀವೂ ಸವಿಯಬೇಕೆಂದು ನನ್ನ ಆಶಯ ವಾದ್ದರಿಂದ ಪುಸ್ತಕದ ಲಭ್ಯತೆಯ ಬಗ್ಗೆ ನೀವು ದಿವಾಕರ ಡೋಂಗ್ರೆಯವರನ್ನೇ ಸಂಪರ್ಕಿಸಬೇಕು.
ದೂರವಾಣಿ: +916360916937. ಮಿಂಚಂಚೆ: dongremalava70@gmail. com ಬನಾರಸ್ ಪಾನ್ ತಿಂದರೆ ಬುದ್ಧಿಶಕ್ತಿಯ ಬೀಗ ತೆರೆಯುತ್ತದೆಂದು ಡಾನ್ ಹಾಡಿದ್ದನಷ್ಟೆ? ತಾಂಬೂಲರಾಗ ಓದಿದರೆ ತಾಂಬೂಲದ ಬಗೆಗಿನ ಅರಿವೆಂಬ ತಿಜೋರಿಯ ಬೀಗ ತೆರೆಯುತ್ತದೆಂದು ಈಗ ನಾನ್ ಹೇಳ್ತಿದ್ದೇನೆ!