ಒಂದೊಳ್ಳೆ ಮಾತು
ಮನುಷ್ಯನ ಅಹಂಕಾರದಿಂದ ಹೊರಡುವ ಒಂದು ಆಡುಮಾತು ಬದುಕಿನ ದಿಕ್ಕನ್ನೇ ಹೇಗೆ ಬದಲಿಸಿ ಬಿಡುತ್ತದೆ ಮತ್ತು ಹೊರಗಿನ ಆಡಂಬರವನ್ನು ನೋಡಿ ಮಾಡುವ ತೀರ್ಮಾನ ಎಂತಹ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಗುಣಾಢ್ಯನ ಜೀವನದ ಪ್ರಸಂಗವೇ ಸಾಕ್ಷಿ. ಪ್ರತಿಷ್ಠಾನಪುರದ ಸಾತವಾಹನ ಮಹಾರಾಜನ ಆಸ್ಥಾನದಲ್ಲಿ ಗುಣಾಢ್ಯನೆಂಬ ಮಹಮೇಧಾವಿ ಪ್ರಧಾನ ವಿದ್ವಾಂಸ ನಾಗಿದ್ದ ಕಾಲವದು.
ಒಮ್ಮೆ ರಾಜನು ರಾಣಿಯರೊಂದಿಗೆ ಜಲಕ್ರೀಡೆಯಾಡುತ್ತಿದ್ದಾಗ, ಪ್ರಧಾನ ರಾಣಿಯು ನೀರು ಎರಚು ವುದನ್ನು ತಡೆಯಲು ಸಂಸ್ಕೃತದಲ್ಲಿ ಮೋದಕೈ ಸ್ತಾಡಯ (ಮಾ + ಉದಕೈಃ ತಾಡಯ; ಅಂದರೆ ‘ನೀರಿನಿಂದ ಹೊಡೆಯಬೇಡ’) ಎಂದು ನುಡಿ ದಳು. ಆದರೆ ಸಂಸ್ಕೃತದ ಸಂಧಿಕಾರ್ಯ ತಿಳಿಯದ ರಾಜನು, ಸಿಹಿತಿಂಡಿ ಯಾದ ‘ಮೋದಕ’ ಗಳಿಂದ ಹೊಡೆಯಲು ಮುಂದಾಗಿ ರಾಣಿಯ ಮುಂದೆ ಹಾಸ್ಯಕ್ಕೀಡಾದನು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ರಾಜನು ತನಗೆ ತಕ್ಷಣವೇ ಸಂಸ್ಕೃತ ಕಲಿಸಬೇಕೆಂದು ಆಸ್ಥಾನದ ವಿದ್ವಾಂಸರಿಗೆ ಆಜ್ಞಾಪಿಸಿದನು.
ಇದನ್ನೂ ಓದಿ: Roopa Gururaj Column: ವರುಣದೇವನ ಅಹಂಕಾರ ಮುರಿದ ಉತಥ್ಯ ಮಹರ್ಷಿಗಳ ತಪಶ್ಯಕ್ತಿ
ಆಗ ಗುಣಾಢ್ಯನು, ವ್ಯಾಕರಣ ಕಲಿಯಲು ಕನಿಷ್ಠ ಆರು ವರ್ಷಗಳು ಬೇಕು ಎಂದಾಗ, ಮತ್ತೊಬ್ಬ ಪಂಡಿತ ಶರ್ವವರ್ಮನು ನಾನು ಆರೇ ತಿಂಗಳಲ್ಲಿ ರಾಜನಿಗೆ ಸಂಸ್ಕೃತ ಕಲಿಸುತ್ತೇನೆ ಎಂದು ಸವಾಲೆಸೆದನು. ಈ ಮಾತಿನಿಂದ ಅಹಂ ಕೆರಳಿದ ಗುಣಾಢ್ಯನು, ನೀನೇನಾದರೂ ಆರು ತಿಂಗಳಲ್ಲಿ ಕಲಿಸಿದರೆ, ನಾನು ಸಂಸ್ಕೃತ, ಪ್ರಾಕೃತ ಸೇರಿದಂತೆ ಲೋಕದ ಸಕಲ ಮಾನವ ಭಾಷೆಗಳನ್ನು ಶಾಶ್ವತ ವಾಗಿ ತ್ಯಜಿಸುತ್ತೇನೆ! ಎಂದು ಆವೇಶದಿಂದ ಪಣ ತೊಟ್ಟನು. ಆದರೆ ಶರ್ವವರ್ಮ ಅಲ್ಪಾವಧಿಯ ರಾಜನನ್ನು ಪಂಡಿತನನ್ನಾಗಿಸಿದಾಗ, ಆಡಿದ ಮಾತಿಗೆ ಬದ್ಧನಾಗಿ ಗುಣಾಢ್ಯ ಮೌನವ್ರತ ತೊಟ್ಟು ಕಾಡಿಗೆ ತೆರಳಬೇಕಾಯಿತು.
ಮಾನವ ಭಾಷೆಗಳನ್ನು ಬಳಸಲಾಗದ ಅನಿವಾರ್ಯತೆಯಲ್ಲಿ, ಆತ ವಿಂಧ್ಯಾಟವಿಯ ಅರಣ್ಯ ವಾಸಿಗಳ ಆಡುಮಾತಾಗಿದ್ದ ‘ಪೈಶಾಚೀ ಪ್ರಾಕೃತ’ ವನ್ನು ಕಲಿತನು. ಬರೆಯಲು ಶಾಯಿಯಿಲ್ಲದೆ ಸ್ವಂತ ರಕ್ತವನ್ನೇ ಮಸಿಯಾಗಿಸಿಕೊಂಡು, ಬರೋ ಬ್ಬರಿ ಏಳು ವರ್ಷಗಳ ಕಾಲ ತಪಸ್ಸಿನಂತೆ ಏಳು ಲಕ್ಷ ಶ್ಲೋಕಗಳ ‘ಬೃಹತ್ಕಥೆ’ಯನ್ನು ರಚಿಸಿದನು. ಮನುಕುಲಕ್ಕೆ ಬೆಳಕಾಗಲೆಂದು ಆ ಗ್ರಂಥವನ್ನು ಶಿಷ್ಯರ ಮೂಲಕ ಸಾತವಾಹನನಿಗೆ ಕಳುಹಿಸಿ ಕೊಟ್ಟನು. ಆದರೆ ರಾಜನಿಗೆ ಕಂಡಿದ್ದು ಕೇವಲ ರಕ್ತದ ಕಲೆಗಳು ಮತ್ತು ಒರಟಾದ ಕಾಡುಭಾಷೆ ಮಾತ್ರ. ಇದು ರಕ್ತಸಿಕ್ತವಾದ ನೀರಸ ಬರಹ ಎಂದು ಅಹಂಕಾರದಿಂದ ತಿರಸ್ಕರಿಸಿದನು. ತನ್ನ ಜೀವತೇಜಸ್ಸಿಗೆ ಬೆಲೆ ಸಿಗಲಿಲ್ಲವೆಂದು ನೊಂದ ಗುಣಾಢ್ಯನು ಅಗ್ನಿಕುಂಡವನ್ನು ಹೊತ್ತಿಸಿ, ಒಂದೊಂದೇ ಎಲೆಯ ಕಥೆಯನ್ನು ಓದುತ್ತಾ ಬೆಂಕಿಗೆ ಹಾಕತೊಡಗಿ ದನು. ಅವನ ಕಥಾರಸಕ್ಕೆ ಮಾರುಹೋದ ಕಾಡಿನ ಪ್ರಾಣಿ-ಪಕ್ಷಿಗಳು ಆಹಾರ-ನೀರು ಬಿಟ್ಟು ಕಣ್ಣೀರಿಡುತ್ತಾ ನಿಂತವು.
ಪ್ರಾಣಿಗಳ ಒಣಗಿದ ಮಾಂಸದ ಜಾಡು ಹಿಡಿದು ರಾಜನು ಕಾಡಿಗೆ ಓಡಿಬರುವಷ್ಟರಲ್ಲಿ ಆರು ಲಕ್ಷ ಶ್ಲೋಕಗಳು ಭಸ್ಮವಾಗಿದ್ದವು! ಉಳಿದದ್ದು ಕೇವಲ ಒಂದು ಲಕ್ಷ ಶ್ಲೋಕಗಳಷ್ಟೇ. ವಜ್ರದಂತಹ ಕೃತಿಯನ್ನು ಕಂದು ಎಸೆದ ತನ್ನ ಅeನಕ್ಕೆ ರಾಜ ತಲೆತಗ್ಗಿಸಿ ಪಶ್ಚಾತ್ತಾಪಪಟ್ಟನು. ಕೋಪದ, ಆವೇಶದ ಆಡುವ ದುಡುಕಿನ ಮಾತು ನಮ್ಮನ್ನೇ ಸಂಕೋಲೆಗೆ ದೂಡುತ್ತದೆ.
ಗುಣಾಢ್ಯನ ಅಹಂಕಾರದ ಸವಾಲು ಅವನನ್ನು ಸಮಾಜ ಮತ್ತು ಸ್ವಂತ ಭಾಷೆಯಿಂದಲೇ ದೂರ ತಳ್ಳಿದಂತೆ ನಾವು ಕೂಡ ಅನೇಕ ಬಾರಿ ಇಂತಹ ಅವಮಾನಗಳನ್ನು ಕೇವಲ ಉಡಾಫೆಯ ಮಾತು ಗಳಿಂದ ಅನುಭವಿಸಿರುತ್ತೇವೆ. ಮಾತು ಹೊರಡುವ ಮುನ್ನ ನಾವು ಅದರ ಯಜಮಾನರು, ಹೊರ ಬಂದ ಮೇಲೆ ಅದೇ ನಮ್ಮ ಯಜಮಾನ.
ರಾಜನಂತೆ ನಾವೂ ಸಹ ಹೊರಗಿನ ಭಾಷೆ, ವೇಷ ಅಥವಾ ಸರಳತೆಯನ್ನು ನೋಡಿ ವ್ಯಕ್ತಿಗಳ ಸಾಮರ್ಥ್ಯವನ್ನು, ಅವರ ನಿಸ್ವಾರ್ಥ ಒಲವನ್ನು ಅಳೆದುಬಿಡುತ್ತೇವೆ. ಕಣ್ಣೆದುರಿಗಿರುವ ನೈಜ ಮೌಲ್ಯಗಳನ್ನು ನಿರ್ಲಕ್ಷಿಸಿ, ಅವು ಕೈತಪ್ಪಿ ಹೋದ ನಂತರ ಕಣ್ಣೀರಿಡುವುದರಲ್ಲಿ ಅರ್ಥವಿಲ್ಲ. ಆವೇ ಶದ ಮಾತು ಮತ್ತು ಆಡಂಬರದ ನಿರ್ಣಯ- ಇವೆರಡೂ ಬದುಕಿನಲ್ಲಿ ಕಳೆದು ಕೊಳ್ಳುವುದೇ ಹೆಚ್ಚು. ನಾಲಗೆಯ ಮೇಲೆ ಹಿಡಿತ ಹಾಗೂ ಇತರರ ಆಂತರಿಕ ಗುಣವನ್ನು ಗೌರವಿ ಸುವ ಸಂಯಮವೇ ನಿಜವಾದ ನೆಮ್ಮದಿಯ ಮೂಲ.