ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shishir Hegde Column: ಬದುಕಲು ಕಾರಣ ಬೇಕೆಂಬುದೇ ಬಂಡಲ್‌ ಬಡಾಯಿ !

ಮುಸ್ಸಂಜೆಯ ಬೆಳಕನ್ನು ಕತ್ತಲು ಮೀರಿತ್ತು. ಮುಲ್ಲಾ ನಸ್ರುದ್ದೀನ್ ಗಾಬರಿಯಲ್ಲಿದ್ದ. ಬೀದಿ ದೀಪದ ಕೆಳಗೆ ಏನನ್ನೋ ತರಾತುರಿಯಲ್ಲಿ ಹುಡುಕುತ್ತಿದ್ದ. “ದೆವ್ವ ಓಡಾಡುವ ಈ ಹೊತ್ತಿನಲ್ಲಿ ಮುಲ್ಲಾ ಏನು ಹುಡುಕುತ್ತಿದ್ದಾನೆ" ಎಂದು ಕೇಳುತ್ತಾ ಮೂರ್ನಾಲ್ಕು ಮಂದಿ ಬಂದರು. ತಾವೂ ಹುಡುಕುವು ದರಲ್ಲಿ ಜತೆಯಾದರು. ರಸ್ತೆಯ ಅಕ್ಕಪಕ್ಕ, ತೋಡಿನಲ್ಲಿ, ಮೋರಿಯಲ್ಲಿ ಎಡೆ ಒಂದು ಗಂಟೆ ಹರಸಾಹಸ ಪಟ್ಟರೂ, ಆತ ಹುಡುಕುತ್ತಿದ್ದ ಕೀಲಿ ಮಾತ್ರ ಎಲ್ಲಿಯೂ ಸಿಗಲಿಲ್ಲ. ಆಗ ಅವರಲ್ಲೊಬ್ಬ ಸುಮ್ಮನೆ ಮಾತಿಗೆ “ಮುಲ್ಲಾ, ನಾವು ಹುಡುಕಲು ಶುರುಮಾಡಿ ತುಂಬಾ ಹೊತ್ತಾಯಿತು.

ಶಿಶಿರಕಾಲ

ನೆಮ್ಮದಿಯ ಬದುಕಿಗೆ ಮಹತ್ತರ ಉದ್ದೇಶ, ಅರ್ಥ ಇತ್ಯಾದಿ ಇರಬೇಕು ಎನ್ನುವ ವಾದವೇ ದೊಡ್ಡ ಬಂಡಲ್ ಬಡಾಯಿ!!

ಮುಸ್ಸಂಜೆಯ ಬೆಳಕನ್ನು ಕತ್ತಲು ಮೀರಿತ್ತು. ಮುಲ್ಲಾ ನಸ್ರುದ್ದೀನ್ ಗಾಬರಿಯಲ್ಲಿದ್ದ. ಬೀದಿ ದೀಪದ ಕೆಳಗೆ ಏನನ್ನೋ ತರಾತುರಿಯಲ್ಲಿ ಹುಡುಕುತ್ತಿದ್ದ. “ದೆವ್ವ ಓಡಾಡುವ ಈ ಹೊತ್ತಿನಲ್ಲಿ ಮುಲ್ಲಾ ಏನು ಹುಡುಕುತ್ತಿದ್ದಾನೆ" ಎಂದು ಕೇಳುತ್ತಾ ಮೂರ್ನಾಲ್ಕು ಮಂದಿ ಬಂದರು. ತಾವೂ ಹುಡುಕುವು ದರಲ್ಲಿ ಜತೆಯಾದರು. ರಸ್ತೆಯ ಅಕ್ಕಪಕ್ಕ, ತೋಡಿನಲ್ಲಿ, ಮೋರಿಯಲ್ಲಿ ಎಡೆ ಒಂದು ಗಂಟೆ ಹರಸಾಹಸಪಟ್ಟರೂ, ಆತ ಹುಡುಕುತ್ತಿದ್ದ ಕೀಲಿ ಮಾತ್ರ ಎಲ್ಲಿಯೂ ಸಿಗಲಿಲ್ಲ. ಆಗ ಅವರಲ್ಲೊಬ್ಬ ಸುಮ್ಮನೆ ಮಾತಿಗೆ “ಮುಲ್ಲಾ, ನಾವು ಹುಡುಕಲು ಶುರುಮಾಡಿ ತುಂಬಾ ಹೊತ್ತಾಯಿತು.

ಇಂಚಿಂಚೂ ಬಿಡದೆ ಹುಡುಕಿದರೂ ಇನ್ನೂ ನಿನ್ನ ಕೀಲಿ ಸಿಕ್ಕಿಲ್ಲ. ಅದು ಇಲ್ಲೇ ಕಳೆದದ್ದು ಇಲ್ಲೇ ಹೌದೆ?". ಮುಲ್ಲಾ ಉತ್ತರಿಸಲಿಲ್ಲ- ಎಲ್ಲರೂ ಮುಲ್ಲಾನ ಮುಖ ನೋಡಿದರು. ಮುಲ್ಲಾ ಮುಖದಲ್ಲಿಯೇ ಅಲ್ಲಗಳೆದು, “ಕೀಲಿ ಕಳೆದುಹೋದದ್ದು ಮನೆಯೊಳಗೆ ಎಲ್ಲೋ ಒಂದು ಕಡೆ. ಹುಡುಕೋಣ ಎಂದರೆ ಅಲ್ಲಿ ಕತ್ತಲೆ. ಇಲ್ಲಿ ಬೀದಿದೀಪವಿದೆಯಲ್ಲ, ಹೆಚ್ಚು ಬೆಳಕಿದೆ, ಹಾಗಾಗಿ ಇಲ್ಲಿ ಬಂದು ಹುಡುಕುತ್ತಿದ್ದೇನೆ!!".

ಈಗೀಗ ಎಲ್ಲರಿಗೂ- ಎಲ್ಲದರಲ್ಲೂ ಅರ್ಥ ಕಾಣಬೇಕು. ಇದೊಂದು ಬಹಳ ವಿಚಿತ್ರವಾದ ಆಧುನಿಕ ಗೀಳು. ಸಂಬಂಧಗಳು ಅರ್ಥಪೂರ್ಣವಾಗಿರಬೇಕು, ವೃತ್ತಿ ಅರ್ಥಪೂರ್ಣವಾಗಿರಬೇಕು, ಹವ್ಯಾಸ ಅರ್ಥಪೂರ್ಣವಾಗಿರಬೇಕು, ಯಾರದೇ ಜತೆ ಮಾತನಾಡಿದರೆ, ಸಮಯ ಕಳೆದರೆ ಹೀಗೆ ಮಾಡುವ ಎಲ್ಲ ಕೆಲಸಗಳೂ meaningful ಆಗಿರಬೇಕು. ಏನೋ ಒಂದು ಘನಂದಾರಿ ಅನ್ನಿಸಬೇಕು!

ಇದನ್ನೂ ಓದಿ: Shishir Hegde Column: ಬದುಕಿನಂತೆ ಉದ್ದೇಶಕ್ಕೂ ಬದಲಾಗುವ ಸ್ವಾತಂತ್ರ್ಯವಿದೆ !

ಈಗ ಯಾರೂ “ನಾನು ಹಣಕ್ಕಾಗಿ ವೃತ್ತಿ ಮಾಡುತ್ತಿದ್ದೇನೆ’ ಎನ್ನುವಂತಿಲ್ಲ. ಎಲ್ಲರಿಗೂ ತಮ್ಮ ವೃತ್ತಿ ಯು ಜಗತ್ತನ್ನು ಹೇಗೆ ಬದಲಿಸುತ್ತಿದೆ ಎಂದು ತಿಳಿಯಬೇಕು, ಹೇಳಿಕೊಳ್ಳಬೇಕು. ಮಾಡುವ ವೃತ್ತಿಯು ಸಾಮಾನ್ಯವಾದರೆ ಅದನ್ನು ಹೇಳಿಕೊಳ್ಳಲು ಏನೋ ಹಿಂಜರಿಕೆ. ಅದೆಷ್ಟೇ ದುಡಿಮೆ ಯಿರಲಿ, ಹಣ ಬರಲಿ, ಏನೇ ಸವಲತ್ತು ಇರಲಿ, ನಮ್ಮ ತಲೆಮಾರಿಗೆ ಎಲ್ಲದರಲ್ಲೂ ಏನೋ ಒಂದು ದೊಡ್ಡ ಉದ್ದೇಶ ಕಂಡುಕೊಳ್ಳದಿದ್ದರೆ ಸಮಾಧಾನವಿಲ್ಲ.

ವೃತ್ತಿ ಮಾತ್ರವಲ್ಲ, ಏನೋ ಒಂದು ಹವ್ಯಾಸ ಎಂದರೆ ಅದಕ್ಕೂ ಉದ್ದೇಶ, ಗುರಿ ಬೇಕು! ಎಷ್ಟು ಫಾಲೋವರ್ಸ್, ಎಷ್ಟು ಲೈಕ್ ಎಂದು ಹವ್ಯಾಸಕ್ಕೂ ಲೆಕ್ಕಾಚಾರ, ಅಳೆಯುವ ಮಾಪಕಗಳು. ಒಟ್ಟಾರೆ ನಾವು ಮಾಡುವ ಎಲ್ಲಾ ಕೆಲಸಗಳೂ ಬುರ್ಜ್ ಖಲೀಫಾ ಮಟ್ಟದಲ್ಲಿರಬೇಕು.

ಅಂತೆಯೇ ಬದುಕಿನ ಉದ್ದೇಶ, ಕಾರಣಗಳು ಕೂಡ. ಅವ್ಯಕ್ತ ಒತ್ತಡ. ಈ ನಮ್ಮ ಎಲ್ಲ ಕೃತಿಗಳಲ್ಲಿ ಅರ್ಥಹುಡುಕುತ್ತ ಕೊನೆಯಲ್ಲಿ ಜೀವನಕ್ಕೂ ‘ಅರ್ಥ’ ಬೇಕು. ಆದರೆ ನಾವು ಇದೆಲ್ಲದರ ಹಿಂದಿನ ಉದ್ದೇಶವಾದ- ಅರ್ಥವನ್ನು ಹುಡುಕುವುದು ಎಲ್ಲಿ? ಅದು ಮಾತ್ರ- ಮುಲ್ಲಾ ನಸ್ರುದ್ದೀನ್ ಬೆಳಕಿದ್ದಲ್ಲಿ ಕೀಲಿ ಹುಡುಕಿದಂತೆ, ನಮಗೆಲ್ಲಿ ಬೇಕೋ ಅಲ್ಲಿ. ಬದುಕಿನ ಅರ್ಥವನ್ನು ಹವ್ಯಾಸದಲ್ಲಿ, ವೃತ್ತಿಯಲ್ಲಿ ಹೀಗೆ ಹೆಸರು ಎಲ್ಲಿ ಬೇಕೋ ಅಲ್ಲಲ್ಲಿ ಅರ್ಥ ಹುಡುಕಹೊರಡುತ್ತೇವೆ.

ಈ ಲೇಖನಮಾಲೆಯಲ್ಲಿ ಹಿಂದಿನ ವಾರಗಳಲ್ಲಿ ಆಂಕ್ಸೈಟಿ, ಡಿಪ್ರೆಶನ್, ಖಿನ್ನತೆಯಲ್ಲಿ ಕಾಡುವ ಬದುಕಿನ ಉದ್ದೇಶದ ಪ್ರಶ್ನೆ, ಅದಕ್ಕುತ್ತರವಾಗಿ ಅರ್ಥ, ಕಾರಣ, ಉದ್ದೇಶ ಹುಡುಕುವ ನಾಲ್ಕು ಪ್ರಶ್ನೆಗಳನ್ನು ಚರ್ಚಿಸಿದ್ದೆವು. ಖಿನ್ನತೆಯಲ್ಲಿ ಎದುರಾಗುವ ಬದುಕಿನ ಉದ್ದೇಶದ ಪ್ರಶ್ನೆ ಉತ್ತರಿಸದೆ ಬಿಟ್ಟಲ್ಲಿ ಹೆಮ್ಮರವಾಗಿ ಕಾಡುವುದು, ನಂತರ ಹೇಗೆ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎನ್ನುವು ದನ್ನು ತಿಳಿದೆವು.

2

ಹಾಗಾಗಿ ‘ಏಕೆ ಬದುಕಬೇಕು?’ ಎಂಬ ಪ್ರಶ್ನೆಗೆ ಉತ್ತರಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬೆಲ್ಲಾ ವಿವರಣೆ ನೋಡಿದೆವು. ಸರಿ- ಹೇಳಿದ ನಾಲ್ಕು ಪ್ರಶ್ನೆ ಕೇಳಿಕೊಂಡಾಯ್ತು- ಉದ್ದೇಶ ಕೂಡ ತಿಳಿದಾಯ್ತು. ಮುಂದೇನು? ಅಷ್ಟಕ್ಕೂ ಬದುಕಬೇಕೆಂದರೆ ಉದ್ದೇಶ ಇರಲೇಬೇಕೆ? ಒಮ್ಮೆ ಖಿನ್ನತೆ ಇತ್ಯಾದಿ ಪಕ್ಕಕ್ಕಿಟ್ಟು ಈ ಪ್ರಶ್ನೆಯನ್ನು ಕೇಳುವುದಾದರೆ ಬದುಕಿಗೇಕೆ ಕಾರಣದ ಹಂಗು? ಸಂತೋಷ ವಾಗಿ ಬದುಕಲು ಉದ್ದೇಶವೇಕೆ ಬೇಕು? ಈ ಉದ್ದೇಶದ್ದೇ ದೊಡ್ಡ ಸಮಸ್ಯೆ.

ನಿಮ್ಮ ಬದುಕಿನ ಉದ್ದೇಶ ಯಾವುದೋ ಒಂದು ಎಂದುಕೊಳ್ಳಿ. ಮೂರೇ ಮೂರು ಬಾರಿ ‘ಏಕೆ?’ ಎನ್ನುವ ಪ್ರಶ್ನೆಗಳು ಅದೆಂಥದ್ದೇ ಉದ್ದೇಶವನ್ನು ಮಂಡಿಯೂರಿಸಿಬಿಡುತ್ತವೆ! ನೀವೇ ನಿಮ್ಮ ಉದ್ದೇಶಕ್ಕೆ ಈ ಪ್ರಶ್ನೆಯನ್ನು ‘ಏಕಾಗಿ?’ ಎಂದು ಮೂರು ಬಾರಿ ಕೇಳಿಕೊಂಡು ನೋಡಿ! ಯಾವುದೇ ಉದ್ದೇಶ ಅರ್ಥ ಹೀನ ಎಂದೇ ಅನಿಸುತ್ತದೆ. ನೆಮ್ಮದಿಯ ಬದುಕಿಗೆ ಉದ್ದೇಶ ಕಡ್ಡಾಯವೇ? ಹೈವೇ ಪಕ್ಕದಲ್ಲಿ ಬೆಳೆದು ಅರಳಿದ ಯಾವುದೋ ಕಾಡುಹೂವಿನಲ್ಲಿ ಹೋಗಿ ಅದರ ಬದುಕಿನ ಉದ್ದೇಶ ಕೇಳಿದರೆ? ಆ ಹೂವು ತಾನೆಂದೂ ರಸ್ತೆಯನ್ನು ಸುಂದರವಾಗಿಸಲು, ಪ್ರಯಾಣಿಕರಿಗೆ ನೆಮ್ಮದಿ ಕೊಡಲು ಬದುಕಿದ್ದೇನೆ ಎನ್ನುವುದಿಲ್ಲ.

ಅದಕ್ಕೆ ಯಾವುದೇ ಹೂವಿನ ಸ್ಪರ್ಧೆಯಲ್ಲಿ ಭಾಗವಹಿಸಿ ತಾನೇ ಚಂದ ಎಂದು ಅನ್ನಿಸಿ ಕೊಳ್ಳಬೇಕಿಲ್ಲ. ಅದೆಂದೂ ತನ್ನನ್ನು ತಾನು ಭತ್ತದ ತೆನೆಗೋ, ಮಲ್ಲಿಗೆ ಹೂವಿಗೋ ಹೋಲಿಸಿ ಕೊಳ್ಳುವುದಿಲ್ಲ. ಅಥವಾ ತಾನು ಪ್ರೀತಿಯ ದ್ಯೋತಕ ಗುಲಾಬಿಯಂತಾಗಬೇಕು ಎಂದು ಕೊರಗುವು ದಿಲ್ಲ. ಅದು ಸೂರ್ಯನ ಬೆಳಕಿಗೆ ಪ್ರತಿಕ್ರಿಯಿಸುತ್ತದೆ.

ರಾತ್ರಿಯಾದರೆ ಮುದುಡಿ, ಬೆಳಗಿನ ಇಬ್ಬನಿಯಲ್ಲಿ ಬಾಗಿ, ಬೆಳಕು ಹರಿದಂತೆ ನಿಂತು ಎಲ್ಲದಕ್ಕೂ ಸಾಕ್ಷಿಯಾಗುತ್ತದೆ. ಆಮೇಲೆ ಋತು ಕಳೆಯುತ್ತಿದ್ದಂತೆ ಯಾವುದೇ ಬೇಸರವಿಲ್ಲದೆ ಅದೊಂದು ದಿನ ಬಾಡಿ ಮರೆಯಾಗಿ ಬಿಡುತ್ತದೆ. ಈಗ ಆ ಹೂವಿಗೆ ಹೋಗಿ ಜೀವನದ ಧ್ಯೇಯೋದ್ದೇಶ ಪ್ರಶ್ನಿಸಿದರೆ ಅದರಲ್ಲಿ ಯಾವುದೇ ಉತ್ತರವಿರಲಿಕ್ಕಿಲ್ಲ. ಆದರೆ ಅದರ ಅಸ್ತಿತ್ವ ಅಪೂರ್ಣವಲ್ಲ- ಅದು ಪೂರ್ಣ ಬದುಕು.

ಒಂದು ವಯಸ್ಸಿನ ನಂತರ ಬಹುತೇಕರು ಬದುಕನ್ನು ಸದಾ ಟಿಕ್‌ಟಿಕ್ ಎನ್ನುವ ಗಡಿಯಾರದಂತೆ ನೋಡಲು ಶುರುಮಾಡಿ ಬಿಡುತ್ತಾರೆ. ಎಲ್ಲದರಲ್ಲೂ ಲಾಭ ಲುಕ್ಸಾನುಗಳ ಲೆಕ್ಕಾಚಾರ, ಅಳತೆ ಮಾಪಕಗಳು. ಆದರೆ ಬದುಕು ಕಾಲಮಿತಿಯದಾದರೂ ಗಡಿಯಾರವಲ್ಲ. ಇದು ಯಾವುದೋ ಒಂದು ಸಂಗೀತದಂತೆ- ಹಾಡಿನಂತೆ.

ಯಾವುದೇ ಸಂಗೀತದ ಉದ್ದೇಶ ಮುಕ್ತಾಯಕ್ಕೆ ತಲುಪುವುದಲ್ಲ, ಯಾವುದೇ ಹಾಡಿನ ಉದ್ದೇಶ ಕೊನೆಯ ಸಾಲು ಮುಟ್ಟುವುದಲ್ಲ. ಬದುಕೆಂದರೆ ಹೋರಾಟ, ಉದ್ದೇಶದ ಆವಿಷ್ಕಾರ, ಅದರ ಸ್ಪಷ್ಟತೆ ಮತ್ತು ನೆರವೇರಿಸುವ ಯಾವುದೋ ವಿಡಿಯೋ ಗೇಮ್ ಮಿಷನ್ ಅಲ್ಲ ಅಥವಾ ಯಾವುದೋ ಕಾದಂಬರಿಯೂ ಅಲ್ಲ. ನಿತ್ಯ ಬದುಕು ಒಂದು ರೀತಿಯಲ್ಲಿ ಹವಾಮಾನದಂತೆ; ಇವತ್ತು ಮಳೆ, ನಾಳೆ ಬಿಸಿಲು, ನಾಡಿದ್ದು ಮತ್ತೆ ಮಳೆ, ಆಮೇಲೆ ಚಳಿ, ಕೆಲವೊಂದಿಷ್ಟು ದಿನ ಹಾಯೆನಿಸುವ ಸ್ಥಿತಿ.

ಡಿಪ್ರೆಶನ್, ಆಂಕ್ಸೈಟಿ, ಬದುಕಿನ ಉದ್ದೇಶದ ಪ್ರಶ್ನೆ ಇವೆಲ್ಲ ಕಾಡಿನ ಹುಲಿ, ನರಿ ಅಥವಾ ಬೀದಿ ನಾಯಿಗೆ ಏಕೆ ಬರುವುದಿಲ್ಲ? ಬದುಕಿನಲ್ಲಿ ಉದ್ದೇಶ ಸಿಕ್ಕರೆ ಸರಿ, ಇಲ್ಲದಿದ್ದರೆ ಇಲ್ಲ. ಉದ್ದೇಶವಿಲ್ಲ ಎನ್ನುವುದು ಸಮಸ್ಯೆಯಲ್ಲ. ಉದ್ದೇಶವೇ ಇಲ್ಲವಲ್ಲ ಎನ್ನುವ ವಿಚಾರದ್ದೇ ಸಮಸ್ಯೆ.

ಸಾಮಾಜಿಕವಾಗಿ ನಾವೆಲ್ಲರೂ ಏನೋ ಒಂದು ಉದ್ದೇಶವಿರಬೇಕು ಎಂದು ನಂಬಿಕೊಂಡು ಬಿಟ್ಟಿದ್ದೇವೆ. Purpose Anxiety ಎನ್ನುವುದೊಂದಿದೆ. ಅದೇನೆಂದರೆ ಉದ್ದೇಶವಿಲ್ಲ ಎಂಬ ಕಾರಣಕ್ಕೇ ಉದ್ವೇಗಗೊಳ್ಳುವ ಸ್ಥಿತಿ. ಉದ್ದೇಶವಿಲ್ಲವೆಂದರೆ ಆ ನಾಲ್ಕು ಪ್ರಶ್ನೆಗಳನ್ನು ಕೇಳಿ ಕಂಡುಕೊಳ್ಳಬಹುದು ಎಂದೆನಲ್ಲ. ಅಷ್ಟಕ್ಕೂ ಬದುಕಿನ ಉದ್ದೇಶದ ಉದ್ದೇಶವೇನು? ಬದುಕಿನ ಉದ್ದೇಶ ಒಂದು ರೀತಿಯಲ್ಲಿ ದಿಕ್ಸೂಚಿಯ ಅಯಸ್ಕಾಂತ ಇದ್ದಂತೆ.

ನಮ್ಮ ಬದುಕು ಯಾವ ದಿಕ್ಕಿನಲ್ಲಿ ಹೋಗಬೇಕು ಎಂದು ಹೇಳುವುದಷ್ಟೇ ಅದರ ಕೆಲಸ. ಹಾಗಂತ ಹೋಗುವಾಗ ಬರೀ ದಿಕ್ಸೂಚಿ ಮಾತ್ರ ನೋಡುತ್ತಿದ್ದರೆ, ನಮ್ಮೆಲ್ಲ ಗಮನ ಅದರ ಮೇಲೆಯೇ ಕೇಂದ್ರಿತ ವಾದರೆ, ಖಂಡಿತ ದಾರಿ ತಪ್ಪುವುದಿಲ್ಲ. ಆದರೆ ಬಂದ ದಾರಿಯ ಚಂದದ ಕಲ್ಪನೆಯೂ ನಮಗಿರುವು ದಿಲ್ಲ.

ಒಮ್ಮೆ ಗಮ್ಯಸ್ಥಾನಕ್ಕೆ ಹೋಗಿ ಮುಟ್ಟಿದ ಮೇಲೆ ದಿಕ್ಸೂಚಿ ಬೇಕಾಗಿಲ್ಲ, ದಿಕ್ಸೂಚಿಗೆ ಅರ್ಥವೇ ಇರುವು ದಿಲ್ಲ. ಪ್ರಯಾಣವನ್ನು ಅನುಭವಿಸದೆ ಹೋಗಿ ಮುಟ್ಟಿದಲ್ಲಿ ತಲುಪುದಾಣ ನೀರಸವೆನಿಸುತ್ತದೆ. ಬದುಕು ಸಂಗ್ರಹಿತ ಅನುಭವವೇ ಹೊರತು ಏಣಿ ಅಲ್ಲ, ಗುಡ್ಡ- ಮೌಂಟ್ ಎವರೆ ಅಲ್ಲ. ಅದರಲ್ಲಿ ಸಂತೋಷ ಎನ್ನುವುದು ಹೋಗಿ ಮುಟ್ಟುವ, ತಲುಪುವ ಸ್ಥಿತಿ ಅಲ್ಲ.

ನೀವು ಖುಷಿಯಿಂದಿರಬೇಕು ಎಂದರೆ ಅಕಾರಣ ಈ ಕ್ಷಣದಲ್ಲಿ ಖುಷಿಯಿಂದಿರಬಹುದು. How to be happy? ಹೇಗೆ ಖುಷಿ ಕಂಡುಕೊಳ್ಳಬೇಕು ಎನ್ನುವ ಪ್ರಶ್ನೆಗೆ ‘ಹೀಗೇ’ ಎಂಬ ಮಾರ್ಗವಿಲ್ಲ. ಆದರೆ ಇಲ್ಲಿ ಒಂದು ಗ್ರಹಿಕೆಯನ್ನು ತಿಳಿಯುವುದು ಮುಖ್ಯ. ಅದೇನೆಂದರೆ ನಮ್ಮ ಮನಸ್ಸು ಯಾವತ್ತೂ ಖುಷಿ ಯ ವಿಷಯದಲ್ಲಿ ಬಹಳ ಒರಟು. ನಮ್ಮ ವಿಕಸನದ ರೂಪುರೇಷೆಯೇ ಹಾಗಿದೆ- ಸಂತೋಷವನ್ನು ನಾವು ಮುಂದೊಂದು ಗಳಿಗೆಗೆ ಮುಂದೂಡುತ್ತಲೇ ಇರುತ್ತೇವೆ.

ಏಕೆಂದರೆ ನಮ್ಮ ಮಿದುಳು ವಿಕಸನವಾಗಿದ್ದೇ ಹಾಗೆ. ಮಿದುಳಿಗೆ ಸುತ್ತಲಿನ ಅಪಾಯ, ಸಮಸ್ಯೆಯ ಪರಿಹಾರ, ತಪ್ಪು, ಸಮಸ್ಯೆ ಇವೇ ಹೆಚ್ಚಾಗಿ ಕಾಣುವುದು. ಒಬ್ಬ ವ್ಯಕ್ತಿ ‘ನಾನು ಸಂತೋಷ ವಾಗಿರಬೇಕು’ ಎಂದು ಹೇಳಿದಾಗ ಅದರರ್ಥ ಹೆಚ್ಚಾಗಿ ‘ನನ್ನ ಈ ಸಮಸ್ಯೆ ಬಗೆಹರಿಯಬೇಕು, ನನ್ನ ಈ ಕೊರತೆ ನೀಗಬೇಕು- ಆಗ ಸಂತೋಷಕ್ಕೆ ತಾನು ಹೋಗಿಮುಟ್ಟುತ್ತೇನೆ’ ಎಂದೇ ಇರುತ್ತದೆ.

ಸಮಸ್ಯೆ, ರಗಳೆ ಮುಗಿಯವುದಿಲ್ಲ, ಮುಗಿದರೂ ಮನಸ್ಸಿನ ಹುಟ್ಟುಗುಣದಿಂದ ಅದು ಇನ್ನೊಂದ ನ್ನು ಹುಡುಕುತ್ತದೆ- ಸಂತೋಷ ಮುಂದೂಡಲ್ಪಡುತ್ತದೆ!

ಬಾಲ್ಯದಲ್ಲಿ ಎಲ್ಲರಿಗೂ ‘ಶಿಕ್ಷಣವೇ ಉದ್ದೇಶ’ ಎನ್ನಲಾಗುತ್ತದೆ. ಯೌವನದಲ್ಲಿ ಉದ್ಯೋಗ, ವ್ಯಾಪಾರ, ದುಡಿಮೆ, ಕುಟುಂಬ ಇತ್ಯಾದಿ. ಉದ್ದೇಶವೆಂದರೆ ಉತ್ಪತ್ತಿ ಎನ್ನುತ್ತದೆ ಸಮಾಜ, ಸರಕಾರ. ಈ ಇಡೀ ‘ಮೆಟ್ಟಿಲೇರುತ್ತ ಮೇಲೆ ಹೋಗುವ’ ಬದುಕಿನ ವ್ಯವಸ್ಥೆಯಲ್ಲಿ ಮಕ್ಕಳು ಕಲಿತು ದೊಡ್ಡವರಾಗಿ, ಉದ್ಯೋಗದಲ್ಲಿ/ದುಡಿಮೆಯಲ್ಲಿ ಒಂದು ಹಂತ ಮುಟ್ಟಿದಾಕ್ಷಣ ವ್ಯಕ್ತಿಗೆ ತನ್ನ ಉದ್ದೇಶದ ಪ್ರಶ್ನೆ ಯೆಳುತ್ತದೆ.

ಹಿಂದಿನ ವಾರದ ಲೇಖನಕ್ಕೆ ಒಬ್ಬ ಓದುಗ ಮಿತ್ರರಾದ ಸಿ.ಎಸ್. ಮೂರ್ತಿ ಹೀಗೆ ಪ್ರತಿಕ್ರಿಯಿಸಿದ್ದರು: “ಲೇಖನಮಾಲೆ ಚೆನ್ನಾಗಿ ಮೂಡಿ ಬರುತ್ತಿದೆ. ಧನ್ಯವಾದ. ನನಗೆ ಈಗ 72 ವಯಸ್ಸು. ಖಾಸಗಿ ಕಂಪನಿ ಯೊಂದರಲ್ಲಿ ಡೈರೆಕ್ಟರ್ ಹುದ್ದೆಯಲ್ಲಿದ್ದು ರಿಟೈರ್ಡ್ ಆಗಿದ್ದೇನೆ. ನೀವು ಹೇಳಿದ ನಾಲ್ಕು ಪ್ರಶ್ನೆ ಯನ್ನು ನನಗೆ ನಾನೇ ಕೇಳಿಸಿಕೊಂಡೆ. ಆದರೆ ನನಗೆ ಯಾವುದೇ ಸಮಂಜಸ ಉತ್ತರ ಸಿಗಲಿಲ್ಲ". ಮೂರ್ತಿಯವರ ಪ್ರಶ್ನೆ ಅತ್ಯಂತ ಸಮಂಜಸವಾಗಿಯೇ ಇದೆ.

ವಿಶ್ರಾಂತ ಜೀವನದಲ್ಲಿ- ಅದರಲ್ಲಿಯೂ ಸಂತೃಪ್ತಿ ಸಿಕ್ಕಲ್ಲಿ, ಕೇಳಿದ ಆ ನಾಲ್ಕು ಪ್ರಶ್ನೆಗಳಿಗೆ ಅರ್ಥ ವಿರುವುದಿಲ್ಲ. ವೃದ್ಧಾಪ್ಯ- ಬದುಕಿನ ಅರ್ಥಹೀನತೆಯ ಸ್ವಭಾವವನ್ನು ಸ್ವೀಕರಿಸುವ ಸಮಯ. ‘ಎಲ್ಲವೂ ಸರಿಯಿದೆ, ಜಗತ್ತೂ ಸರಿಯಿದೆ, ನಾನೂ ಸರಿಯಿದ್ದೇನೆ’ ಇಂದು ಅರಿವಾಗುವ ಸಮಯ. ಎಲ್ಲ ಉದ್ದೇಶಗಳನ್ನು ಮೀರುವುದು ಬದುಕಿನ ಮಹದುದ್ದೇಶ.

ಜೇಮ್ಸ್ ಸ್ಟನ್- ಪಾಶ್ಚಾತ್ಯ ತತ್ವಜ್ಞಾನಿ ಬದುಕನ್ನು ಲೈಬ್ರರಿಗೆ‌ ಹೋಲಿಸುತ್ತಾನೆ. ಲೈಬ್ರರಿ ಹುಟ್ಟಿದ ಹೊಸತರಲ್ಲಿ ಪುಸ್ತಕಗಳನ್ನು ಸಂಗ್ರಹಿಸುತ್ತದೆ. ಪುಸ್ತಕ ಸಂಗ್ರಹಣೆ ಆ ಲೈಬ್ರರಿಯ ಇಷ್ಟು ಕಾಲದ ಉದ್ದೇಶ. ಒಮ್ಮೆ ಪುಸ್ತಕಗಳೆಲ್ಲ ಬಂದು ಲೈಬ್ರರಿ ತುಂಬಿದ ಮೇಲೆ? ಆಗ ಪುಸ್ತಕ ಸಂಗ್ರಹಣೆಯ ಉದ್ದೇಶವನ್ನು ಲೈಬ್ರರಿ ಮೀರುತ್ತದೆ.

ಸುಮ್ಮನೆ ಲೈಬ್ರರಿಯಾಗಿ ನಿಂತಿರುವುದೇ ಅಲ್ಲಿಂದ ಅದರ ಉದ್ದೇಶ. ಸಂತೃಪ್ತ ಭಾವಕ್ಕೆ ರಿಟೈರ್ಡ್ ಆಗುವವರೆಗೆ, ಹಣ, ಹುದ್ದೆ, ಗಳಿಸುವವರೆಗೆ ಹೀಗೆ ಯಾವುದೋ ಒಂದಿಷ್ಟು ಘಟನೆಗಳಿಗೆ ಕಾಯ ಬೇಕಿಲ್ಲ. ಉದ್ದೇಶವನ್ನು ದಿಕ್ಸೂಚಿಯಾಗಿಸಿ ಬೇಕೆಂದಾಗಲಷ್ಟೇ ಬಳಸಿಕೊಳ್ಳಬೇಕು.

ದಾರಿ ತಪ್ಪಿದ್ದೇವೆಯೇ, ಇಲ್ಲವೇ ಎಂಬುದಕ್ಕಷ್ಟೇ ದಿಕ್ಸೂಚಿ ಸೀಮಿತ. ದಿಕ್ಸೂಚಿಯೇ ಪ್ರಯಾಣವಲ್ಲ, ಗಮ್ಯಸ್ಥಾನವಲ್ಲ, ಬದಲಿಗೆ ಸಲಕರಣೆ ಮಾತ್ರ. ಅದಿಲ್ಲದಿದ್ದರೆ ದಾರಿ ತಪ್ಪಬಹುದು. ಉದ್ದೇಶವನ್ನು ಪಕ್ಕಕ್ಕಿಟ್ಟಾಗ ಮಾತ್ರ ‘ನಿಜಬದುಕು’ ಕಾಣಿಸಿಕೊಳ್ಳುತ್ತದೆ. ಆದರೆ ಪ್ರತಿಯೊಂದು ದಾರಿಯೂ ಎಲ್ಲೋ ಒಂದು ಕಡೆ- ನೋಡದ ಜಾಗಕ್ಕೆ ಹೋಗಿ ಮುಟ್ಟುವುದರಿಂದ ಕೊನೆಯಲ್ಲಿ ಯಾವುದೂ ಮುಖ್ಯ ವಾಗುವುದಿಲ್ಲ.

ದಿಕ್ಸೂಚಿಯೂ ಬೇಡದ ವಸ್ತುವಾಗಿಬಿಡುತ್ತದೆ. ಉದ್ದೇಶ ಹಕ್ಕಿ ಮರಿಯಿದ್ದಂತೆ- ಸ್ವಲ್ಪ ಸಡಿಲ ಮಾಡಿದರೆ ಹಾರಿ ಹೋಗುತ್ತದೆ. ತೀರಾ ಗಟ್ಟಿಯಾಗಿ ಹಿಡಿದುಕೊಂಡರೆ ಮೊದಲು ಅದು ಕಚ್ಚುತ್ತದೆ, ಕೂಗುತ್ತದೆ, ಆಮೇಲೆ ಉಸುರುಗಟ್ಟಿ ಸಾಯುತ್ತದೆ. ಚಿಕ್ಕ ಮಕ್ಕಳು ಆಟವಾಡುವಾಗ ಅಲ್ಲಿ ಉದ್ದೇಶ ವಿರುವು ದಿಲ್ಲ, ಕಾರಣಗಳಿರುವುದಿಲ್ಲ, ಆದರೆ ಅಲ್ಲಿ ಸಂಪೂರ್ಣ ಸಂತೋಷವಿರುತ್ತದೆ. ಏಕೆ? ಏಕೆಂದರೆ ಅಲ್ಲಿ ಸಂಪೂರ್ಣ ಭಾಗವಹಿಸುವಿಕೆ ಇದೆ.

ಬದುಕು ಭಾಗವಹಿಸುವಿಕೆಯನ್ನು ಬಯಸುತ್ತದೆಯೇ ವಿನಾ ಗೆಲುವನ್ನಲ್ಲ. ಬದುಕು ಮ್ಯಾರಥಾನ್ ಅಲ್ಲ, ಮೌಂಟ್ ಎವರೆ ಅಲ್ಲ, ವೃತ್ತಿ- ಯಾವುದೇ ಏಣಿ ಮೆಟ್ಟಿಲಲ್ಲ (career ladder). ಇನ್ನೊಬ್ಬರು, ಸೋಷಿಯಲ್ ಮೀಡಿಯಾ ನಮ್ಮ ಬದುಕಿನ ಕನ್ನಡಿಯಲ್ಲ, ಮಾಪಕವಲ್ಲ. ಬದುಕು ಸೋಮವಾರ ದಿಂದ ಶುಕ್ರವಾರದವರೆಗೆ ಕಾಯುವ ‘ವೇಟಿಂಗ್ ರೂಮ್’ ಅಲ್ಲ.

ಖುಷಿಗಾಗಿ ವಾರಾಂತ್ಯಕ್ಕೆ ಬರಬೇಕಿಲ್ಲ. ಈ ಕ್ಷಣದಲ್ಲಿ ನಮ್ಮೆದುರಿಗೆ ಸಂಭವಿಸುತ್ತಿರುವುದೇ ಬದುಕು. ವ್ಯಕ್ತಿ ತಾನು ಬೇರೇನೋ ಆಗುವುದನ್ನು ಬಯಸುವುದನ್ನು ನಿಲ್ಲಿಸಿದಾಕ್ಷಣ ಉಳಿಯುವ ಸ್ವಾಭಾವಿಕ ಸ್ಥಿತಿಯೇ ಸಂತೋಷದ ಸ್ಥಿತಿ. ಸಂತೋಷದಿಂದ, ನೆಮ್ಮದಿಯಿಂದ ಇರಲು ನಮ್ಮಲಿಲ್ಲದ ಯಾವು ದನ್ನೂ ಹುಡುಕಿ ಪಡೆಯಬೇಕಾಗಿಲ್ಲ. ಈ ಕ್ಷಣ, ಯಾವುದೇ ಕ್ಷಣ ಬಯಸಿದಲ್ಲಿ ಸಂತೋಷದಿಂದಿರ ಬಹುದು!

ಚಿಯರ್ಸ್ ಟು ಲೈಫ್.

(ಮುಗಿಯಿತು)

ಶಿಶಿರ್‌ ಹೆಗಡೆ

View all posts by this author