ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಅಪಸ್ವರವನ್ನೇ ಮೆಲೋಡಿಯನ್ನಾಗಿಸುವ ʼಮೋದಿʼ ಮೋಡಿ

ಸಾಮಾನ್ಯವಾಗಿ ಕೆಲವೇ ಕೆಲವರಲ್ಲಿ ಮೈಮುಟ್ಟಿ ಮಾತನಾಡಿಸುವ ಸಲುಗೆಯ ಸರಳತೆ ಇರುತ್ತದೆ. ಅದು ಕೆಲವರ ವ್ಯಕ್ತಿತ್ವ. ಮೋದಿ ಮೆಲೋನಿ (ಮೆಲೋಡಿ) ಸಾಕಷ್ಟು ವೈರಲ್ ಆಗಿದ್ದರೂ ಅದು ಇಲ್ಲಿಯವರೆಗೆ ನರೇಂದ್ರ ಮೋದಿಯವರ ಗಮನಕ್ಕೆ ಬಂದಿದೆ ಎಂದು ಎಲ್ಲಿಯೂ ಅನಿಸಿರಲಿಲ್ಲ. ಈಗ ಏಕಾಏಕಿ - ಎಲ್ಲ ಮೀಟಿಂಗ್- ಗಡಿಬಿಡಿಗಳ ಮಧ್ಯೆ ಅದೊಂದು ಪಾರ್ಲೆ ಚಾಕಲೇಟ್- ‘ಮೆಲೋಡಿ’ ತೋರಿಸಿ ವೈರಲ್ ಆಗಿ ಬಿಟ್ಟಿದ್ದಾರೆ.

ಶಿಶಿರಕಾಲ

ಡೊನಾಲ್ಡ್ ಟ್ರಂಪ್‌ನಿಗೆ ಯಾರು ಏನೇ ಹೇಳಿ ವಿರೋಧಿಸಿದರೂ ಭೂತ ಮೈಮೇಲೆ ಬಂದವನಂತೆ ಆಡುತ್ತಾನೆ. ತಮಾಷೆಗಲ್ಲ- ಅವನದೇ ಪಕ್ಷದವರೂ ಅವನ ಯಾವುದೇ ಚಿಕ್ಕ ನಡೆಯ ವಿರುದ್ಧ ಮಾತನಾಡುವಂತಿಲ್ಲ. ಮಾತನಾಡಿದ್ದೇ ಆದರೆ, ಅವರ ವಿರುದ್ಧ ತನ್ನದೇ ಕ್ಯಾಂಡಿಡೇಟ್ ಬಿಟ್ಟು ಚುನಾವಣೆಯಲ್ಲಿ ಅವರನ್ನು ಸೋಲಿಸುತ್ತಾನೆ.

ಇತ್ತೀಚೆಗೆ ಟ್ರಂಪ್ ವೈಟ್ ಹೌಸ್‌ಗೆ ತಾಗಿಕೊಂಡು ಒಂದು ದೊಡ್ಡ ಸರಕಾರೀ ಸಭಾಂಗಣ - ಬಾಲ್ ರೂಮ್ ನಿರ್ಮಿಸಲು ಮುಂದಾಗಿದ್ದಾನೆ. ಅದಕ್ಕಾಗಿ ರಾತ್ರೋ ರಾತ್ರಿ ಬುಲ್ಡೋಜರ್ ತರಿಸಿ, ವೈಟ್ ಹೌಸ್‌ನ ಒಂದು ದೊಡ್ಡ ವಿಭಾಗವನ್ನೇ ನೆಲಸಮ ಮಾಡಿಬಿಟ್ಟಿದ್ದಾನೆ !

ವೈಟ್ ಹೌಸ್‌ನಂತಹ ಐತಿಹಾಸಿಕ ಕಟ್ಟಡವನ್ನು ಧ್ವಂಸ ಮಾಡಿದ್ದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟಿಗೆ ಹೋದರು. ಕೋರ್ಟ್ - ವೈಟ್ ಹೌಸ್ ಯಾರಪ್ಪನ ಸ್ವತ್ತೂ ಅಲ್ಲ, ಇದನ್ನು ಕೆಡವಿದ್ದು ಸರಿಯಲ್ಲ ಎಂದಿತು. ವೈಟ್ ಹೌಸ್‌ನಲ್ಲಿ ಬಂದುಳಿಯಲಷ್ಟೇ ಅಧ್ಯಕ್ಷನಿಗೆ ಅಧಿಕಾರ, ಅದು ಬಿಟ್ಟು ವೈಟ್ ಹೌಸ್ ಟ್ರಂಪ್ ಸ್ವತ್ತಲ್ಲ ಎಂದಿತು.

ಟ್ರಂಪ್ ಇದನ್ನೂ ಅವಮಾನವೆಂದೇ ಸ್ವೀಕರಿಸಿದ. ಈಗ - ನೆಲಸಮ ಮಾಡಿಯಾಗಿದೆ, ಸರಕಾರಿ ದುಡ್ಡು ಬೇಡ, ತನ್ನ ಸ್ವಂತ ದುಡ್ಡಲ್ಲಿ ದೊಡ್ಡ ಸಭಾಂಗಣ ನಿರ್ಮಿಸಿಯೇ ಸಿದ್ಧ ಎಂದು ಸುಪ್ರೀಂ ಕೋರ್ಟ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾನೆ, ಮೀಡಿಯಾ ಎದುರು ದಿನಕ್ಕೊಮ್ಮೆ ಬಂದು ಹೂಂ ಕರಿಸುತ್ತಾನೆ.

ಇಂತಹ ಅಸಂಖ್ಯ ಉದಾಹರಣೆಗಳಿವೆ- ಯಾರೇ ಏನೇ ಮಾತನಾಡಲಿ, ವಿರೋಧಿಸಲಿ- ಟೀಕೆಯನ್ನು ಸದೆಬಡಿಯುವುದೇ ತನ್ನ ಶಕ್ತಿ ಎಂಬಂತೆ ನಡೆಯುತ್ತಾನೆ ಟ್ರಂಪ್. ಆತ ಪತ್ರಕರ್ತರ ಪ್ರಶ್ನೆಯನ್ನು ಎದುರಿಸುವುದು ಕೂಡ ಹಾಗೆಯೇ. ಯಾವುದೇ ಚ್ಯಾನಲ್ ತನ್ನ ವಿರುದ್ಧ ಎಂದಾದರೆ, ತನಗೆ ಸಹ್ಯ ವಾಗದ ಪ್ರಶ್ನೆ ಕೇಳಿದರೆ - ಆ ಪತ್ರಕರ್ತರ ಬಗ್ಗೆ, ಎಲ್ಲಾ ಕ್ಯಾಮರಾ ಎದುರೇ ‘ಯು ಆರ್ ಸ್ಟುಪಿಡ್, ಯುವರ್ ಚ್ಯಾನಲ್ ಈಸ್ ಫೇಕ್’ ಎಂದುಬಿಡುತ್ತಾನೆ.

ಇದನ್ನೂ ಓದಿ: Shishir Hegde Column: ಸ್ಪರ್ಧೆ ಮುಗಿದ ಮೇಲೆ ನಮಗೆ ಅಲ್ಲೊಬ್ಬ ಸಿಗುತ್ತಾನೆ

ಅಷ್ಟೇ ಏಕೆ, ಇತ್ತೀಚೆಗೆ ಅವನ ವಿರುದ್ಧ ಟಿವಿ ಚ್ಯಾನಲ್‌ನ ನಿರೂಪಕರಿಬ್ಬರು ಹಾಸ್ಯ ಮಾಡಿದ್ದರು. ಟ್ರಂಪ್ ಬಿಡಲಿಲ್ಲ, ಅವರನ್ನು ತೆಗೆದು ಹಾಕಿ - ಎಂದು ನಿತ್ಯ ಹತ್ತಿಪ್ಪತ್ತು ಟ್ವೀಟ್ ಮಾಡಿದ್ದ! ಟ್ರಂಪ್ ಒಬ್ಬನೇ ಈ ರೀತಿಯಲ್ಲ. ಬಹುತೇಕ ಇಂದಿನ ಗಟ್ಟಿ ರಾಷ್ಟ್ರಗಳ ಸರ್ವೋಚ್ಚ ನಾಯಕರದ್ದೂ ಇದೇ ಕಥೆ. ಕೆಲವರದ್ದಂತೂ ವಿಪರೀತ.

ಸೌದಿಯ ರಾಜನ ವಿರುದ್ಧ ಮಾತನಾಡಿದ್ದಕ್ಕೆ ಜಮಾಲ್ ಕಶೋಗ್ಜಿ ಟರ್ಕಿಯ ಇಸ್ತಾಂಬುಲ್‌ನ ಸೌದಿ ರಾಯಭಾರಿ ಕಚೇರಿಯಲ್ಲಿ ಟಾಯ್ಲೆಟ್‌ನಲ್ಲಿ ತುಂಡು ತುಂಡಾಗಿ ಫ್ಲಶ್ ಆಗಿ ಹೋದ. ಉತ್ತರ ಕೊರಿಯಾದ ಸರ್ವಾಧಿಕಾರಿ ತನ್ನ ವಿರುದ್ಧ ಹೊರಟ ಚಿಕ್ಕಪ್ಪನನ್ನೇ ಗುಂಡಿಟ್ಟು ಕೊಲ್ಲಿಸಿದ, ಇನ್ನೊಬ್ಬನನ್ನು ವಿಮಾನ ನಿಲ್ದಾಣದಲ್ಲಿ ವಿಷ ಹಾಕಿ ಕೊಲ್ಲಿಸಿದ.

ರಷ್ಯಾ ಕಥೆ ನಿಮಗೆ ಗೊತ್ತೇ ಇರುತ್ತದೆ. ಅಲ್ಲಿ ಕೂಡ ಪುಟಿನ್ ವಿರುದ್ಧ ಮಾತನಾಡಿದವರು ಹೇಳ ಹೆಸರಿಲ್ಲದಂತೆ ಮಾಯವಾಗಿ ಬಿಡುತ್ತಾರೆ. ಪುಟಿನ್ ವಿರುದ್ಧ ಮಾತಾಡಿದ ಕಾರಣಕ್ಕೆ ಅಲೆಕ್ಸಿ ನೋವಲ್ನಿಯನ್ನು ಮಾಸ್ಕೋಗೆ ಹೊರಟ ವಿಮಾನದಲ್ಲಿ ವಿಷ ಉಣಿಸಲಾಯಿತು. ಪುಟಿನ್ ವಿರುದ್ಧ ಮಾತನಾಡಿದರೆ ಪ್ರಜೆ ಯಾವುದೇ ನೆಲ, ದೇಶದಲ್ಲಿರಲಿ, ಅವನನ್ನು ಅಲ್ಲಿನ ವ್ಯವಸ್ಥೆ ಬಿಡುವುದಿಲ್ಲ. ಚೀನಾ ಕಥೆಯೂ ಅಷ್ಟೇ- ಅಲಿಬಾಬಾದಂತಹ ಬೃಹತ್ ಕಂಪನಿಯನ್ನು ನಿರ್ಮಿಸಿದ ಜ್ಯಾಕ್ ಮಾನಂತವರು ಕೂಡ ಸರಕಾರಿ ಆಡಳಿತದ ವಿರುದ್ಧ ಪಿಸುಗುಡುವಂತಿಲ್ಲ.

ಅವನು 2020ರಲ್ಲಿ ಒಮ್ಮೆ ಕ್ಸಿ ಜಿನ್ ಪಿಂಗ್ ಮತ್ತು ಆಡಳಿತದ ವಿರುದ್ಧ ಮಾತನಾಡಿದ್ದ, ಬಹಳ ಸುದ್ದಿಯಾಗಿತ್ತು. ಅದಾದ ಮೇಲೆ- ಸುಮಾರು ನಾಲ್ಕು ತಿಂಗಳು ಅವನು ಎಲ್ಲಿದ್ದಾನೆ ಎಂದೇ ಯಾರಿಗೂ ತಿಳಿದಿರಲಿಲ್ಲ! ಇವತ್ತಿಗೂ ಜ್ಯಾಕ್ ಮಾ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಅವನು ಬದುಕಿದ್ದಾನೋ ಎಂಬುದರ ಬಗ್ಗೆಯೇ ಅನುಮಾನ ಬರುವಷ್ಟು ಆತ ಈಗ ಅಜ್ಞಾತ.

Modi 22

ಟೀಕೆಗಳನ್ನು ಹೀಗೆ ಸ್ವೀಕರಿಸುವ, ಟೀಕಿಸಿದಾಗಲೆಲ್ಲ ಶಕ್ತಿ ಪ್ರದರ್ಶನಕ್ಕೆ ಇಳಿಯುವ ನಾಯಕರು ಒಂದು ಕಡೆಯಾದರೆ, ಅಪಹಾಸ್ಯವನ್ನು ಆವೇಗವಾಗಿಸುವ, ದಾಳಿಯನ್ನು ಗಮನ ಸೆಳೆಯುವ ತಂತ್ರವಾಗಿ ಬಳಸಿಕೊಳ್ಳುವ, ಭಾವನೆಗಳನ್ನು ಸಂಪರ್ಕ ಸೇತುವೆಯಾಗಿ ಬಳಸಿಕೊಳ್ಳುವ ಮೋದಿ ಇನ್ನೊಂದು ಕಡೆ. ಈಗೊಂದು ಘಟನೆ ಸುದ್ದಿಯಲ್ಲಿದೆಯಲ್ಲ.

ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ. ಈ ಹಿಂದೆ ಅವರ ನಡುವಿನ ಕೆಮೆಸ್ಟ್ರಿ ನೋಡಿದವರು ಸಾ.ಜಾ.ದಲ್ಲಿ, ಮಾಧ್ಯಮದಲ್ಲಿ ಅವರಿಬ್ಬರ ಕಾಲೆಳೆದಿದ್ದರು, ಹೈಸ್ಕೂಲ್ ಹುಡುಗ ಹುಡುಗಿಯ ರೀತಿಯಲ್ಲಿ ಕಿಚಾಯಿಸಿದ್ದರು. ಅಸಲಿಗೆ ನರೇಂದ್ರ ಮೋದಿಯಂತೆಯೇ ಮೆಲೋನಿ ಕೂಡ ಎಲ್ಲಾ ದೇಶದ ನಾಯಕರನ್ನು ಎದುರುಗಾಣುವ, ಸ್ವೀಕರಿಸುವ ರೀತಿ touchy- feely - ಮುಟ್ಟಿ, ತಬ್ಬಿ ಮಾತನಾಡಿಸುವ ಆಪ್ತ ಸ್ವಭಾವ.

ಸಾಮಾನ್ಯವಾಗಿ ಕೆಲವೇ ಕೆಲವರಲ್ಲಿ ಮೈಮುಟ್ಟಿ ಮಾತನಾಡಿಸುವ ಸಲುಗೆಯ ಸರಳತೆ ಇರುತ್ತದೆ. ಅದು ಕೆಲವರ ವ್ಯಕ್ತಿತ್ವ. ಮೋದಿ ಮೆಲೋನಿ (ಮೆಲೋಡಿ) ಸಾಕಷ್ಟು ವೈರಲ್ ಆಗಿದ್ದರೂ ಅದು ಇಲ್ಲಿಯವರೆಗೆ ನರೇಂದ್ರ ಮೋದಿಯವರ ಗಮನಕ್ಕೆ ಬಂದಿದೆ ಎಂದು ಎಲ್ಲಿಯೂ ಅನಿಸಿರಲಿಲ್ಲ. ಈಗ ಏಕಾಏಕಿ - ಎಲ್ಲ ಮೀಟಿಂಗ್- ಗಡಿಬಿಡಿಗಳ ಮಧ್ಯೆ ಅದೊಂದು ಪಾರ್ಲೆ ಚಾಕಲೇಟ್- ‘ಮೆಲೋಡಿ’ ತೋರಿಸಿ ವೈರಲ್ ಆಗಿ ಬಿಟ್ಟಿದ್ದಾರೆ.

ಇದೆಲ್ಲ ಮೊದಲು ಮೀಮ, ಆನ್ಲೈನ್ ಹಾಸ್ಯ, ಸೆಲ್ಫಿ, ಸಾಮಾಜಿಕ ಜಾಲತಾಣದ ವ್ಯಂಗ್ಯದಂತೆ ಕಾಣಿಸಿದರೂ, ಕೆಲವೇ ಗಂಟೆಗಳಲ್ಲಿ ಅದರಾಚೆ ಬೆಳೆಯಿತು. ಇದೊಂದು ವೈರಲ್ ಡಿಪ್ಲೊಮಸಿ, ರಾಜತಾಂತ್ರಿಕತೆ, ಬಲ ಪ್ರದರ್ಶನ ಎಂದೇ ರೂಪ ಪಡೆದುಕೊಂಡಿತು. ಜನಮನ್ನಣೆಯನ್ನೂ ಪಡೆಯಿತು. ಭಾರತದಲ್ಲಿ ಮಾತ್ರವಲ್ಲ, ಇಟಲಿ ಪತ್ರಿಕೆಗಳು ಕೂಡ ಭಾರತ ಮತ್ತು ಇಟಲಿಯ ಹೊಸ ರಾಜತಾಂತ್ರಿಕ ಸಂಬಂಧ ಎಂದು ಬಣ್ಣಿಸುತ್ತಿವೆ.

ಒಟ್ಟಾರೆ ಇಡೀ ಘಟನೆಯನ್ನು ಮೋದಿ ದ್ವೇಷಿಗಳು ಆಡಿಕೊಂಡರು, ಹಿಂಬಾಲಕರು ಕೊಂಡಾಡಿ ದರು. ಅದೆಲ್ಲದರ ನಡುವೆ ಸ್ಪಾಟ್ ಲೈಟ್ ಮಾತ್ರ ಮೋದಿ ಅಂದುಕೊಂಡಂತೆ- ಮೋದಿಯ ಮೇಲೆಯೇ! ಪ್ರಚಾರ ಸಿಕ್ಕಿದ್ದು ಮಾತ್ರ ಮೋದಿಗೆ!

ಮೋದಿ ಬಲ್ಲವರಿಗೆ ಇದೆಲ್ಲ ಹೊಸತೇನಲ್ಲ. ‘ಚಾಯ್ ವಾಲಾ’ ಎನ್ನುವ ತಾತ್ಸಾರದ, ಅಲ್ಪವಾಗಿ ಕಾಣಿಸುವ ಮಾತನ್ನು ಹಿಡಿದುಕೊಂಡು ಮಾಡಿದ್ದೇನು? ಅದನ್ನೇ ತಮ್ಮ ಬಡತನದ ಮೂಲವನ್ನು ಹೇಳಲು ಬಳಸಿಕೊಂಡರು. ‘ಒಬ್ಬ ಜನಸಾಮಾನ್ಯ ದೇಶದ ನಾಯಕನಾಗಬಾರದೆ?’ ಎಂಬ ಪ್ರಶ್ನೆ ಯನ್ನು ಜನರಲ್ಲಿ ಮೂಡುವಂತೆ ಮಾಡಿದರು.

ಪ್ರತೀ ಟೀಕೆ, ಪ್ರತಿ ಕಾರ್ಟೂನ್, ಪ್ರತೀ ಟಿವಿ ಚರ್ಚೆ, ಅಂತರಾಷ್ಟ್ರೀಯ ಹೆಡ್ ಲೈನ್‌ಗಳು- ಎಲ್ಲವನ್ನು ಹುಷಾರಿತನದಿಂದ ಬಳಸಿಕೊಳ್ಳುತ್ತಾ ಹೋದರು. ಅದುವೆ ಈಗ ಮೋದಿಯ ಬಗೆಗೆ larger than life - ಅಪ್ರತಿಮ ವ್ಯಕ್ತಿತ್ವ ರೂಪ ಕೊಟ್ಟು ನಿಲ್ಲಿಸಿದೆ.

ಕರ್ನಾಟಕದವರು ಹಾಗೆ, ಕೇರಳದವರು ಹೀಗೆ, ಗುಜರಾತಿಗಳು ಹಾಗೆ ಎಂದೆಲ್ಲ ವ್ಯಾಖ್ಯಾನಿಸುವುದು ಪೂರ್ಣವಲ್ಲ. ಆದರೂ ನಿಮಗೆ ಇದನ್ನು ಹೇಳಬೇಕೆನಿಸುತ್ತಿದೆ. ನನಗೊಂದಿಷ್ಟು ಗುಜ್ಜು ಸ್ನೇಹಿತ ರಿದ್ದಾರೆ. ಎಲ್ಲರೂ ಅಮೆರಿಕಾದಲ್ಲಿ ವ್ಯಾಪಾರಸ್ಥರು. ಅವರಂದು ವಿಶೇಷ ಗುಣವನ್ನು ಗ್ರಹಿಸಿದ್ದೇನೆ. ಅದೇನೆಂದರೆ- ಅದೆಂತಹುದೇ ಪ್ರತಿಕೂಲ ಸಮಯ ಬಂದಾಗ ಉಳಿದವರು ಪಾರಾಗುವುದು ಹೇಗೆ ಎಂದು ಯೋಚಿಸಿದರೆ, ಈ ಗುಜ್ಜು ಸ್ನೇಹಿತರು ಅದರಿಂದ ತಮಗೆ ಲಾಭ ಮಾಡಿಕೊಳ್ಳುವುದು ಹೇಗೆ ಎಂದೇ ಯೋಚಿಸುತ್ತಿರುತ್ತಾರೆ.

ಅವರ ವ್ಯಾಪಾರದಲ್ಲಿ ಅದೆಷ್ಟೋ ಬಾರಿ ಅವರ ಪ್ರಾಡಕ್ಟ್‌ʼಗೆ ಕೆಟ್ಟ ಪ್ರತಿಕ್ರಿಯೆ ಬರುತ್ತದೆ. ಅದನ್ನೇ ಇವರು ಬಳಸಿ ಅಡ್ವರ್ಟೈಜ್ ಮಾಡಿಬಿಟ್ಟಿದ್ದಿದೆ. ಅವರನ್ನು ಕಂಡ ನನಗೆ ಇದೆಲ್ಲ ಮೋದಿಯ ರಕ್ತಗತ ಗುಜರಾತೀ ಗುಣದಂತೆನಿಸಿದ್ದು ಸುಳ್ಳಲ್ಲ !

ಮೋದಿ ನಾವೆಲ್ಲ ಗ್ರಹಿಸಿದಂತೆ ರಕ್ಷಣಾತ್ಮಕವಾಗಿ, ಇಂತಹ ಕಾರಣಕ್ಕಾಗಿ ಹೀಗೆ ಮಾಡಿದೆ, ನಾನು ಮಾಡಿದ್ದು ಈ ಕಾರಣಕ್ಕೆ ಸರಿ ಎಂದೆಲ್ಲ ಹೇಳುವುದೇ ಇಲ್ಲ. ಯಾವುದೇ ಚಿಕ್ಕ ವಿವಾದವನ್ನೂ ಮೋದಿ ಮೊದಲು ಹೀರಿಕೊಳ್ಳುತ್ತಾರೆ, ಆನಂತರ ಸರಿಯಾದ ಸಮಯದಲ್ಲಿ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಭಾವಪೂರ್ಣತೆಯಿಂದ ಅದಕ್ಕೆ ಉತ್ತರಿಸುತ್ತಾರೆ.

ಮೋದಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ರಾಜಕೀಯ ಪಂಡಿತರು, ಪ್ರತಿಪಕ್ಷದವರು ಎಡವುದೇ ಇಲ್ಲಿ. ಕಾರ್ಯ ನೀತಿ, ಭಾಷಣಗಳಿಂದಷ್ಟೇ ಮೋದಿ ಅರ್ಥವಾಗುವುದಿಲ್ಲ. ಅಥವಾ ಮೋದಿ ಎಂಬ ಇಮೇಜ್- ಆರ್ಥಿಕತೆ, ಮೂಲಸೌಕರ್ಯ, ಕಲ್ಯಾಣ ಯೋಜನೆಗಳು, ವಿದೇಶಾಂಗ ನೀತಿ ಇವೆಲ್ಲದರ ಮೇಲೆ ಕಟ್ಟಿಕೊಂಡದ್ದಲ್ಲ. ಮೋದಿ ತನ್ನ ಇಮೇಜ್ ಕಟ್ಟಿಕೊಂಡ ರೀತಿ ಅನನ್ಯ. ಇದನ್ನೆಲ್ಲ ಬಿಜೆಪಿ, ಮೋದಿಯವರ ಪಿಆರ್ ಟೀಮ್ ಮಾಡಿದ್ದಲ್ಲ. ಇದನ್ನೆಲ್ಲ ರೂಪುಗೊಳಿಸಿಕೊಂಡವರು, ಚಲಾವಣೆ ಮಾಡುವವರು ಖುದ್ದು ಮೋದಿ. ಇದೆಲ್ಲ ಬೇರೆಯವರಿಂದ ಕಡ ತಂದ ಬುದ್ಧಿವಂತಿಕೆಯಲ್ಲ. ಹಾಗಿದ್ದರೆ ಒಳ್ಳೆಯ ಪಿಆರ್ ತಂಡ ಖರೀದಿಸಿ ಎಲ್ಲರೂ ಮೋದಿಯಾಗಿಬಿಡುತ್ತಿದ್ದರು. ಈಗಂತೂ ಮೋದಿಗಿಂತ ಹೆಚ್ಚಿನ ಹಣ ಲೋಕಲ್ ಎಂಎಲಎ ಹತ್ತಿರವೇ ಇರುತ್ತದೆ !

ಜನರ ಜೊತೆ ನೇರವಾದ ಮಾತುಕತೆ, ತ್ಯಾಗ, ಬಡತನ, ದೇವಾಲಯಗಳು, ಸೈನಿಕರು, ನಾಗರೀಕತೆ, ಐತಿಹಾಸಿಕ ಬಲಿದಾನ ಇವನ್ನೆಲ್ಲ ಮೋದಿ ಬಳಸಿಕೊಂಡಷ್ಟು ಇನ್ಯಾವುದೇ ರಾಜಕಾರಣಿ ಸದ್ಯಕ್ಕಂತೂ ಬಳಸಿಕೊಳ್ಳುತ್ತಿಲ್ಲ. ಮೋದಿ ಮಾತನಾಡುವ, ಎತ್ತಿಕೊಳ್ಳುವ ವಿಷಯಗಳು ಅಂಥವು. ಕೇಳಿದಾಗ ಪ್ರಜೆಗಳಿಗೆ ತಾವು ಯಾವುದೋ ದೊಡ್ಡ ಕೆಲಸದಲ್ಲಿ ಭಾಗಿಯಾಗಿದ್ದೇವೆ ಎಂದೆನಿಸುತ್ತಿ ರುತ್ತದೆ. ಅದು ದೇಶವೆಂಬ ವ್ಯವಸ್ಥೆಯ ಮಟ್ಟಿಗೆ ಬಹಳ ಮುಖ್ಯ. ಜನರು ಮೋದಿಯನ್ನು ಬೆಂಬಲಿಸುವುದು ಅವರ ರಾಜಕೀಯ ಅಧಿಕಾರ ಪ್ರಾವೀಣ್ಯತೆಗಷ್ಟೇ ಅಲ್ಲವಲ್ಲ !

ಇವಿಷ್ಟು ಮೋದಿಯವರ ಪ್ರಚಾರ ಚಾಣಕ್ಯತೆಯ ಬಗ್ಗೆ ಆಯಿತು. ಆದರೆ ನಾವಿಲ್ಲಿ ಇನ್ನೊಂದನ್ನು ಗ್ರಹಿಸಲೇಬೇಕು. ಅದೇನೆಂದರೆ ಭಾರತದಲ್ಲಿರುವ ನಾಯಕ ಮತ್ತು ಪ್ರಜೆಗಳ ನಡುವಿನ ಸಂಬಂಧದ ಬಗ್ಗೆ. ಎಲ್ಲವನ್ನೂ ವಿಶ್ಲೇಷಿಸುವ ನಾವು ಇದನ್ನೂ ವಿಶ್ಲೇಷಿಸಲೇಬೇಕು. ಒಂದು ದೇಶ ಮತ್ತು ಅದರ ನಾಯಕನ ಸರಕಾರದಾಚೆಯ ಸಂಬಂಧ.

ಒಬ್ಬ ದೇಶದ ಮುಖ್ಯಸ್ಥ ಸರಿಯಿದ್ದರೆ ಹೇಗೆ, ಸರಿಯಿಲ್ಲದಿದ್ದರೆ ಹೇಗೆ ಎಂದು ನಾನು ಕಣ್ಣಾರೆ ಕಂಡು ಅನುಭವಿಸಿದ್ದೇನೆ. ಕೊರೊನಾ ಬಂತಲ್ಲ, ಆಗ ಅಮೆರಿಕಾದಲ್ಲಿ ಇದ್ದದ್ದೂ ಇದೇ ಟ್ರಂಪ್. ಸಾಂಕ್ರಾಮಿಕದ ಹೊಸತರಲ್ಲಿ- ಕೊರೊನಾ ಅನ್ನೋದೇ ಸುಳ್ಳು ಎಂದಷ್ಟೇ ಹೇಳಿದ್ದಲ್ಲ, ಇಡೀ ದೇಶವನ್ನೇ ಗೊಂದಲದ ಗೂಡಾಗಿ ಮಾಡಿಬಿಟ್ಟಿದ್ದ.

ಇತ್ತ ನರೇಂದ್ರ ಮೋದಿ ಹಾಗೆ ಮಾಡಲಿಲ್ಲ, ಜಾಗಟೆ ಬಡಿದರು ಎಂದು ತಮಾಷೆ ಮಾಡುತ್ತೇವೆ- ಆದರೆ ಅವರು ಯಾರೂ ಮಾಡದ ಕೆಲಸವನ್ನು ಅಂದು ಮಾಡಿದ್ದರು. ಅದು ದೇಶವನ್ನು ಒಗ್ಗಟ್ಟು ಮಾಡಿದ್ದು. ಇದೆಲ್ಲ ಅದೆಷ್ಟು ಮುಖ್ಯ, ವಿಪತ್ತಿನ ಕಾಲದಲ್ಲಿ ಹೇಗೆ ವ್ಯವಹರಿಸಬೇಕು ಎಂಬುದನ್ನು ಮೋದಿ ಮಾಡಿ ತೋರಿಸಿದರೆ, ಏನನ್ನು ಮಾಡಬಾರದು ಎಂಬುದಕ್ಕೆ ಟ್ರಂಪ್ ಉದಾಹರಣೆ ಯಾಗುವಂತೆ ನಡೆದುಕೊಂಡ. ಇದೆಲ್ಲ ಎಷ್ಟು ಮುಖ್ಯ ಎಂದು ಅಮೆರಿಕದಲ್ಲಿ ಕೂತ ನನ್ನ ಅನುಭವಕ್ಕೆ ಅಂದು ಬಂದಿತ್ತು.

ಕಾನೂನು ಸಮಾಜದಲ್ಲಿ ಸುವ್ಯವಸ್ಥೆಯನ್ನು ರೂಪಿಸಬಲ್ಲದು. ಆದರೆ ಅದೆಷ್ಟೇ ಗಟ್ಟಿಯ ಕಾನೂನು ವ್ಯವಸ್ಥೆ ಕೂಡ ದೇಶವನ್ನು ಒಂದಾಗಿಸುವುದಿಲ್ಲ. ಒಬ್ಬ ಜನ ಸಾಮಾನ್ಯ ಅದೆಂದೂ ಪ್ರತ್ಯಕ್ಷ ಕಾಣದ ದೇಶದ ನಾಯಕನ ಜೊತೆ ನೇರ ಸಂವಹಿಸಿದ ರೀತಿಯ ಅನುಭವ ಪಡೆಯುವುದು ಬಹಳ ಅಪರೂಪ. ನೀವೇ ಒಮ್ಮೆ ಚೀನಾ, ರಷ್ಯಾ, ಯುಕೆ, ಅಮೆರಿಕಾ ಈ ದೇಶದ ನಾಯಕರ ಇತ್ತೀಚಿನ ನಡೆನುಡಿಯನ್ನು ನೆನಪು ಮಾಡಿಕೊಳ್ಳಿ.

ಅದರಲ್ಲೂ ಯುದ್ಧ ಸನ್ನಿವೇಶದಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿ. ಆಗ ಮೋದಿ ಸಂಪೂರ್ಣ ವಿಭಿನ್ನವಾಗಿ ಕಾಣಿಸುತ್ತಾರೆ. ಅದು ಮೋದಿಯನ್ನು ಉಳಿದ ಜಾಗತಿಕ ನಾಯಕರಿಂದ ಪ್ರತ್ಯೇಕಿಸು ತ್ತದೆ. ಅಲ್ಲದೇ ಮೋದಿ ಮುನ್ನಡೆಸುತ್ತಿರುವ ದೇಶ ಭಾಷೆ, ಜಾತಿ, ಧರ್ಮ, ಪಂಗಡಗಳ ವೈವಿಧ್ಯದ್ದು. ಇಂತಹ ದೇಶವನ್ನು ಇನ್ನು ಹೇಗೆ ಮುನ್ನಡೆಸಬೇಕಿತ್ತು? ದೇಶ, ಮೋದಿ ಇವೆಲ್ಲದರ ಜೊತೆ ನಾಗರಿಕನ ಭಾವಬಂಧ ಬಹಳ ಅಪರೂಪದ್ದು.

ಮೋದಿ ಆಡಳಿತದಲ್ಲಿರುವಾಗ ಯಾರು ಏನೇ ಹೇಳಲಿ, ಮುಂದೊಬ್ಬ ಯಾರೇ ನಾಯಕನಾಗಿ ಬಂದರೂ ಅವರನ್ನು ಮೋದಿಯ ಜೊತೆಯೇ ಹೋಲಿಸುವುದು ಪಕ್ಕಾ. ಇದೆಲ್ಲದರ ನಡುವೆ ಮೋದಿಯನ್ನು ಕಂಡರಾಗದ ಒಂದು ಪಂಗಡವೂ ನಮ್ಮ ನಡುವೆಯೇ ಇದೆ. ನಾನು ಹೇಳುತ್ತಿರು ವುದು ಕಾಂಗ್ರೆಸ್ ಇತ್ಯಾದಿ ರಾಜಕೀಯ ಪಕ್ಷಗಳ ಅನಿವಾರ್ಯ ವಿರೋಧದ ಬಗ್ಗೆ ಅಲ್ಲ. ಜನಸಾಮಾನ್ಯರ ಕೆಲವರಿಗೆ ಮೋದಿ ಕಂಡರಾಗದು.

ಮೋದಿಯೇ ಸರ್ವಸ್ವ, ಮೋದಿ ಮಾಡಿದ್ದೇ ಸರಿ ಎನ್ನುವ ಪಂಗಡ ಒಂದು ಕಡೆಯಾದರೆ ಇನ್ನೊಂದು ಕಡೆ ಮೋದಿಯನ್ನು ದ್ವೇಷಿಸುವವರದ್ದು. ಇವರ ದೊಡ್ಡ ಸಮಸ್ಯೆಯೆಂದರೆ ಹೆಚ್ಚಿನವರದ್ದು ಆಕಾರಣ ದ್ವೇಷ. ಯಾವುದೋ ಓಬಿರಾಯನ ಕಾಲದ ಆಲದ ಮರದಂತಹ ವೈಚಾರಿಕತೆಗೆ ಜೋತು ಬಿದ್ದು ದ್ವೇಷ.

ಸಾಮಾನ್ಯವಾಗಿ ಯೋಚಿಸದೇ ಪ್ರೀತಿಸುವವರು ಆಗೀಗ ಅಂಧಭಕ್ತರೆಂದು ಟೀಕೆಗೊಳಗಾಗುತ್ತಿರು ತ್ತಾರೆ. ಹಾಗೆ ಟೀಕಿಸುವುದು ಸರಿಯೇ ಹೌದು. ಯಾವುದೇ ನಾಯಕನೆಡೆಗಿನ ಅಂಧ ಭಕ್ತಿ ದೇಶಕ್ಕೆ ಒಳ್ಳೆಯದಲ್ಲ. ಆದರೆ ಅಂಧದ್ವೇಷ? ಪತ್ರಿಕೆ ಮಾಧ್ಯಮದ ಹೊರತಾಗಿ ಜನರ ಪಲ್ಸ ಅರ್ಥ ಮಾಡಿ ಕೊಳ್ಳಲು ಸಾ.ಜಾ. ನೋಡುತ್ತಿದ್ದರೆ ಯಾವತ್ತೂ ಇವರಿಬ್ಬರ ನಡುವೆ ಅಲ್ಲಿ ನಿತ್ಯ ಸಮರ ನಡೆದೇ ಇರುತ್ತದೆ.

ಮೋದಿ ದ್ವೇಷಿಸುವವರ ಸಮಸ್ಯೆ ಎಂದರೆ ಅವರಿಗೆ ಮೋದಿಯನ್ನು ದ್ವೇಷಿಸಲು ಗಟ್ಟಿಯಾದ ಕಾರಣಗಳಿಲ್ಲ. ಅಷ್ಟಾಗಿಯೂ ಮೋದಿ ಮಾಡಿದ್ದೇ ಸರಿ, ಮೋದಿಯೇ ದೇವರು ಎಂದು ನಾನು ಹೇಳುವುದಿಲ್ಲ. ದೇಶ ಕಂಡ ಅಪ್ರತಿಮ ನಾಯಕ ಹೌದು, ಆದರೆ ಮೋದಿಯೊಳಗೂ ಒಬ್ಬ ಸಾಮಾನ್ಯ ರಾಜಕಾರಣಿಯೇ ಇರಬಹುದು. ಆದರೆ ಅದೆಲ್ಲೂ ಪ್ರಕಟವಾಗದಿದ್ದಲ್ಲಿ, ಅದೆಲ್ಲೂ ದೃಗ್ಗೋಚರವಾಗದಿದ್ದಲ್ಲಿ ಅದು ಇದೆಯೆಂದು ನಂಬುವುದು ಮೂರ್ಖತನ.

ಮೋದಿ ದ್ವೇಷ ಮತ್ತು ಮೋದಿ ಪ್ರೇಮವನ್ನೇ ಕೆಲವರು ತಮ್ಮ ಐಡೆಂಟಿಟಿ - ಗುರುತು ಎಂದು ಭಾವಿಸುತ್ತಾರೆ. ಅದೇ ಕಾರಣಕ್ಕೆ ಮೋದಿ ಮಾಡಿದ್ದು ಸರಿ ಎಂದು ಒಬ್ಬರೆಂದರೆ ಇನ್ನೊಬ್ಬರು ನೀನು ಅಂಧಭಕ್ತ ಎಂದು ವಾದಕ್ಕಿಳಿಯುವುದು. ಇಬ್ಬರಿಗೂ ಅವರೇ ನಂಬಿಕೊಂಡ ಮೋದಿ ಹೌದೆಂದಾಗ ಬೇಕು.

ಯಾವುದೇ ದೇಶವಿರಲಿ, ರಾಜ್ಯವಿರಲಿ - ಅಲ್ಲಿನ ಪ್ರಜೆ ಅಲ್ಲಿನ ಸರ್ವೋಚ್ಚ ನಾಯಕನನ್ನು ಪ್ರೀತಿಸ ಬೇಕು, ಗೌರವಿಸಬೇಕು. ಅಮೆರಿಕಾವಿರಲಿ, ಭಾರತವಿರಲಿ, ಚೀನಾವಿರಲಿ- ದೇಶಪ್ರೇಮ ದೇಶ ಕಟ್ಟಲು ಅವಶ್ಯಕ. ಮಾತ್ರವಲ್ಲ ನಾವೇ ಕಟ್ಟಿಕೊಂಡ ನಮ್ಮ ವ್ಯವಸ್ಥೆಯ ಮೇಲಿನ ನಿರಂತರ ನಂಬಿಕೆ ಕೂಡ ಬಹಳ ಮುಖ್ಯ. ಮೋದಿ ಮಾಡಿದ್ದೇ ಸರಿಯೇ? ಮಾಡುವುದಕ್ಕೆಲ್ಲ ದೈವಾಂಶ ಹೇರಿ ನೋಡಬೇಕೆ? ಇಲ್ಲ.

ದೇಶ ನಿಲ್ಲುವುದೇ ಈ ಸಮತೋಲನದಲ್ಲಿ. ತಾತ್ವಿಕವಾಗಿ ಒಪ್ಪದವರು ಇನ್ನಷ್ಟು ಜಾಸ್ತಿಯಾಗಬೇಕು, ಮೋದಿಯನ್ನು ಪ್ರಶ್ನಿಸುತ್ತಲೇ ಇರಬೇಕು. ಮೋದಿಯ ನಂತರ ಇನ್ನೊಬ್ಬ ಆ ಸ್ಥಾನಕ್ಕೆ ಬಂದರೆ ಅವರನ್ನೂ ಪ್ರಶ್ನಿಸಬೇಕು, ಪ್ರೀತಿಸಬೇಕು, ಗೌರವಿಸಬೇಕು. ಇದೆಲ್ಲವೂ ಒಳ್ಳೆಯ ಪ್ರಜಾಪ್ರಭುತ್ವದ ಸ್ಪಷ್ಟ ಲಕ್ಷಣ!

ಶಿಶಿರ್‌ ಹೆಗಡೆ

View all posts by this author