ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಐದು ವ್ಯಂಜನಗಳ ಸಂಯಕ್ತಾಕ್ಷರವೂ ಪಂಚಾಮೃತವೇ !

ಒಂದು ಉದ್ಧರಣೆಯಷ್ಟು ಜೇನು, ಎರಡು ಉದ್ಧರಣೆಗಳಷ್ಟು ತುಪ್ಪ, ನಾಲ್ಕು ಉದ್ಧರಣೆಗಳಷ್ಟು ಸಕ್ಕರೆ, ಎಂಟು ಉದ್ಧರಣೆಗಳಷ್ಟು ಮೊಸರು, ಮತ್ತು ಹದಿನಾರು ಉದ್ಧರಣೆಗಳಷ್ಟು ಹಾಲು. ಇದು ಕ್ರಮಬದ್ಧ ಪ್ರಮಾಣ. ಉದ್ಧರಣೆಯ ಮಾನವನ್ನು ನಾನಿಲ್ಲಿ ಆಯ್ದುಕೊಂಡದ್ದು ಪೂಜಾಪರಿಸರದ ಪವಿತ್ರ ಭಾವನೆ ಮನದಲ್ಲಿ ಬರಲಿ ಅಂತಷ್ಟೇ.

ತಿಳಿರುತೋರಣ

ಅಶ್ವತ್ಥ, ಬಿಲ್ವ, ವಟ(ಆಲ), ಧಾತ್ರೀ(ನೆಲ್ಲಿ), ಅಶೋಕ- ಈ ಐದು ವೃಕ್ಷಪ್ರಭೇದಗಳಿರುವ ಅರಣ್ಯ ಪಂಚವಟೀ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ- ಈ ಐದು ಮಾನವ ಶರೀರ ರಚನೆಯ ಪಂಚಕೋಶಗಳು. ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ- ಈ ಐವರು ಪ್ರಾತಃಸ್ಮರಣೀಯ ಪಂಚ ನಾರಿಯರು. ಅರವಿಂದ(ಕಮಲ), ಅಶೋಕ, ಚೂತ(ಮಾವು), ನವಮಲ್ಲಿಕಾ, ನೀಲೋತ್ಪಲ- ಈ ಐದು ಹೂವುಗಳಿಂದಾದ ಪಂಚ ಬಾಣಗಳು. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ- ಪಂಚ ಪ್ರಾಣಗಳು.

ಅಧಿಷ್ಠಾನ, ಕರ್ತಾ, ಕರಣ, ಚೇಷ್ಟಾ, ದೈವ ಎಂಬ ಪಂಚಕಾರಣಗಳು. ರೂಪ, ರಸ, ಗಂಧ, ಸ್ಪರ್ಶ, ಶಬ್ದ ಎಂಬ ಪಂಚ ತನ್ಮಾತ್ರಗಳು. ಶತದ್ರು, ವಿಪಾಶಾ, ಇರಾವತೀ, ಚಂದ್ರಭಾಗಾ, ವಿತಸ್ತಾ- ಪಂಚನದಗಳು (ಪಶ್ಚಿಮಾಭಿಮುಖ ಹರಿಯುವವು ಆದ್ದರಿಂದ ‘ನದ’ ಪುಲ್ಲಿಂಗ; ನದಿ ಅಲ್ಲ). ಅಥವಾ ಈಗಿನ ಸಟ್ಲೆಜ್, ಬಿಯಾಸ್, ರಾವೀ, ಚೆನಾಬ್, ಝೀಲಮ್ ನದಗಳಿಂದಾದ ಪಂಜಾಬ್.

ಹೀಗೆ ಐದು ವಸ್ತು/ವಿಷಯಗಳ ಪುಂಜಗಳು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನೇಕವಿವೆ. ಬೇರೆ ಸಂಖ್ಯೆಗಳವೂ ಇವೆಯೆನ್ನಿ, ಆದರೆ ಐದರವು ತುಸು ಹೆಚ್ಚೇ ಇವೆಯೇನೋ. ಪಂಚೇಂದ್ರಿಯ, ಪಂಚಾಗ್ನಿ, ಪಂಚಾಂಗ, ಪಂಚತಂತ್ರ, ಪಂಚಭೂತ, ಪಂಚಲೋಹ, ಪಂಚಾಯತನ, ಪಂಚೋಪಚಾರ... ಹೀಗೆ ನೆನಪಿಸಿಕೊಂಡರೆ ತುಂಬ ಇವೆ.

ಅಂಥವುಗಳಲ್ಲೊಂದು ಪಂಚಾಮೃತ. ಸನಾತನ ಪರಂಪರೆಯಲ್ಲಿ ಪೂಜೆ-ಪುನಸ್ಕಾರಗಳ ಆಚರಣೆ ಯಲ್ಲಿ ಪಂಚಾಮೃತದ ಪಾತ್ರ ಹಿರಿದು. “ಶರ್ಕರಾದುಗ್ಧಘೃತದಧಿಮಧುಘಟಿತಮ್" ಎಂದು ಸಂಸ್ಕೃತ ದಲ್ಲಿ ಅದರ ವ್ಯಾಖ್ಯೆ ಅಥವಾ ಡೆಫಿನಿಷನ್. ಪ್ರಾಚೀನ ಧಾರ್ಮಿಕ ಗ್ರಂಥಗಳಲ್ಲಿ “ದುಗ್ಧಂ ಚ ಶರ್ಕರಾ ಚೈವ ಘೃತಂ ದಧಿ ತಥಾ ಮಧು| ಪಂಚಾ ಮೃತಮಿದಂ ಪ್ರೋಕ್ತಂ ವಿಧೇಯಂ ಸರ್ವಕರ್ಮಸು" ಮತ್ತು “ಗವ್ಯಮಾಜ್ಯಂ ದಧಿ ಕ್ಷೀರಂ ಮಾಕ್ಷಿಕಂ ಶರ್ಕರಾನ್ವಿತಮ್| ಏಕತ್ರ ಮಿಲಿ ತಂ ಜ್ಞೇಯಂ ದಿವ್ಯಂ ಪಂಚಾಮೃತಂ ಪರಮ್" ಮುಂತಾಗಿ ಶ್ಲೋಕ ರೂಪದಲ್ಲಿ ಪಂಚಾಮೃತದ ಗುಣಗಾನವಿದೆ.

ಇದನ್ನೂ ಓದಿ: Srivathsa Joshi Column: ಪ್ರತಿ ಕಚ್ಚುವಿಕೆಯಲ್ಲಿ ಆನಂದ: ಹಿಟ್ಟಲ್ಲ, ಸೂಪರ್‌ ಹಿಟ್‌ !

ಈ ಶ್ಲೋಕಗಳಲ್ಲೂ ತಿಳಿಸಿರುವುದಿಷ್ಟೇ: ಜೇನು, ತುಪ್ಪ, ಸಕ್ಕರೆ, ಮೊಸರು, ಮತ್ತು ಹಾಲು- ಈ ಐದು ವಸ್ತುಗಳ ಮಿಶ್ರಣವೇ ಪಂಚಾಮೃತ. ಐದು ವಸ್ತುಗಳಲ್ಲಿ ಪ್ರತಿಯೊಂದೂ ಅಮೃತಸಮಾನ ಆದ್ದರಿಂದ ಪಂಚಾಮೃತ ಎಂದು ಹೆಸರು.

ದೇವರಿಗೆ ಪಂಚಾಮೃತದ ಅಭಿಷೇಕ. ಭಕ್ತರಿಗೆ ಪಂಚಾಮೃತವೇ ಪ್ರಸಾದ. ಹಾಲಿನಿಂದ ಶುದ್ಧತೆ, ಮೊಸರಿನಿಂದ ಶಕ್ತಿ, ಸಕ್ಕರೆಯಿಂದ ಸಿಹಿ ತನ, ಜೇನಿನಿಂದ ಬಾಳ್ವಿಕೆ, ತುಪ್ಪದಿಂದ ಪುಷ್ಟಿ- ಇವಿಷ್ಟು ನಮ್ಮ ಶರೀರಕ್ಕೆ ಒಳ್ಳೆಯದನ್ನೇ ಮಾಡುತ್ತವೆ ಎಂಬ ಆಶಯ.

ಪಂಚಾಮೃತವನ್ನು ತಯಾರಿಸುವಾಗ ಈ ಐದು ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಬೇಕಾದ್ದು ಮುಖ್ಯ. ಏಕೆಂದರೆ ಇವೆಲ್ಲವೂ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಇವುಗಳ ಪ್ರಮಾಣದಲ್ಲಿ ಒಂದು ಸುಂದರ ಕ್ರಮ ಇದೆ, ಕ್ರಮದಲ್ಲಿ ಕಾರಣವೂ ಇದೆ!

ಒಂದು ಉದ್ಧರಣೆಯಷ್ಟು ಜೇನು, ಎರಡು ಉದ್ಧರಣೆಗಳಷ್ಟು ತುಪ್ಪ, ನಾಲ್ಕು ಉದ್ಧರಣೆಗಳಷ್ಟು ಸಕ್ಕರೆ, ಎಂಟು ಉದ್ಧರಣೆಗಳಷ್ಟು ಮೊಸರು, ಮತ್ತು ಹದಿನಾರು ಉದ್ಧರಣೆಗಳಷ್ಟು ಹಾಲು. ಇದು ಕ್ರಮಬದ್ಧ ಪ್ರಮಾಣ. ಉದ್ಧರಣೆಯ ಮಾನವನ್ನು ನಾನಿಲ್ಲಿ ಆಯ್ದುಕೊಂಡದ್ದು ಪೂಜಾಪರಿಸರದ ಪವಿತ್ರ ಭಾವನೆ ಮನದಲ್ಲಿ ಬರಲಿ ಅಂತಷ್ಟೇ.

ಉದ್ಧರಣೆಯ ಬದಲಿಗೆ ಚಮಚ, ಸೌಟು, ಕಪ್, ಬೋಗುಣಿ, ತಪ್ಪಲೆ, ಹಂಡೆ ಯಾವ ಪ್ರಮಾಣ ವಾದರೂ ಸರಿ, ಅನುಪಾತವಷ್ಟೇ ಇಲ್ಲಿ ಮುಖ್ಯ. ಒಂದು, ಎರಡು, ನಾಲ್ಕು, ಎಂಟು, ಹದಿನಾರು- ಈ ಸಂಖ್ಯೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಇದು ದ್ವಿಮಾನ ಸಂಖ್ಯಾಪದ್ಧತಿಯನ್ನು ಅನುಸರಿಸಿದ ಪ್ರಮಾಣ.

ಎರಡರ ಘಾತ ಸೊನ್ನೆಯಿಂದ ಆರಂಭಿಸಿ ಎರಡರ ಘಾತ ನಾಲ್ಕರವರೆಗಿನ ಐದು ಸಂಖ್ಯೆಗಳು. ಇದರಲ್ಲಿ ನಮ್ಮ ಹಿರಿಯರ ಜಾಣ್ಮೆಯನ್ನು ಮೆಚ್ಚಬೇಕಾದ್ದೆಂದರೆ- ಐದು ವಸ್ತುಗಳ ಪೈಕಿ ಅತ್ಯಂತ ಸಾಂದ್ರವಾದ ಜೇನು ಮತ್ತು ತುಪ್ಪ ಕಡಿಮೆ ಪ್ರಮಾಣದಲ್ಲಿ ಇರುವುದು. ಸಕ್ಕರೆ ಕರಗಿ ಹೋಗು ವಂಥದ್ದು ಅದು ಮಧ್ಯಭಾಗದಲ್ಲಿ. ಅನಂತರದ ಸ್ಥಾನ ಮೊಸರಿಗೆ. ಅದು ದ್ರವ-ಘನಗಳ ಸಮರೂಪ.

Screenshot_5 R

ಐದರ ಪೈಕಿ ಅತ್ಯಂತ ದ್ರವರೂಪದ ಹಾಲು ಅಧಿಕ ಪ್ರಮಾಣದಲ್ಲಿ ಇರುವುದು. ಇದರಿಂದಾಗಿ ಒಟ್ಟು ಮಿಶ್ರಣವು ಸಾಕಷ್ಟು ದ್ರವರೂಪದಲ್ಲಿಯೇ ಇದ್ದು ದೇವರ ಮೂರ್ತಿಯ ಮೇಲೆ ಅಭಿಷೇಕಕ್ಕೆ ಸುಲಭ ವಾಗುವುದು. ತೀರ್ಥ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಣೆಗೂ ಸುಲಭವಾಗುವುದು. ಹೀಗೆ ದ್ವಿಮಾನ ಸಂಖ್ಯಾಪದ್ಧತಿಯನ್ನು ಅನುಸರಿಸಿದ ಪ್ರಮಾಣದಲ್ಲಿ ಜೇನು, ತುಪ್ಪ, ಸಕ್ಕರೆ, ಮೊಸರು, ಮತ್ತು ಹಾಲನ್ನು ಮಿಶ್ರಮಾಡಿದರೇನೇ ಶಾಸ್ತ್ರೋಕ್ತ ಪಂಚಾಮೃತ ಎನಿಸುವುದು. ಈ ಐದು ವಸ್ತು ಗಳ ಜತೆಗೆ ಅಥವಾ ಬದಲಿಗೆ ಬಾಳೆಹಣ್ಣು ಖರ್ಜೂರ ಒಣದ್ರಾಕ್ಷಿ ದಾಳಿಂಬೆ ಮತ್ತಿತರ ವಸ್ತುಗಳನ್ನು ಬೆರೆಸಿದರೆ ಅದು ಒಳ್ಳೆಯ ರಸಾಯನ ಅಥವಾ ಸ್ತ್ರೀ ಕರಣೆ ಅನಿಸೀತೇ ಹೊರತು ಶಾಸ್ತ್ರೋಕ್ತ ಪಂಚಾ ಮೃತವಾಗದು ಎಂದು ಗೊತ್ತಿರಲಿ.

ಇನ್ನೊಂದು ಗಮನಾರ್ಹ ಅಂಶವೆಂದರೆ ಜೇನು ಮತ್ತು ತುಪ್ಪ ಇವೆರಡನ್ನು ಸಮಪ್ರಮಾಣದಲ್ಲಿ ಬೆರೆಸಿದರೆ (ಪಂಚಾಮೃತದಲ್ಲಿ ಅಂತಲ್ಲ, ಒಟ್ಟಾರೆಯಾಗಿಯೂ) ಅದು ಮನುಷ್ಯದೇಹಕ್ಕೆ ವಿಷಕಾರಿ ಎನಿಸುವ ಸಾಧ್ಯತೆಗಳಿವೆ. ಈ ಅಪಾಯವನ್ನು ತಪ್ಪಿಸಲಿಕ್ಕೆಂದೇ ಪಂಚಾಮೃತದಲ್ಲಿ ಜೇನು ಮತ್ತು ತುಪ್ಪದ ಪ್ರಮಾಣ ಒಂದಕ್ಕೆ ಎರಡರಂತೆ ಇರುವುದು.

ನಮ್ಮ ಪೂರ್ವಜರು ಎಷ್ಟೆಲ್ಲ ಸೂಕ್ಷ್ಮ ವಿಷಯಗಳನ್ನು ಮನಗಂಡು ಸಂಪ್ರದಾಯಗಳನ್ನು ಅಳವಡಿಸಿಕೊಂಡಿದ್ದಾರೆಂದು ಗಮನಿಸಿದರೆ ಆಶ್ಚರ್ಯವೂ ಅವರ ಬಗ್ಗೆ ಅಭಿಮಾನವೂ ಆಗುತ್ತದೆ. ಪಂಚಾಮೃತವೆಂಬ ಈ ದಿವ್ಯ ಮಿಶ್ರಣ ಕೇವಲ ಭಕ್ತಿಪ್ರಧಾನವಾಗಿ ಮತ್ತು ರುಚಿಪ್ರಧಾನವಾಗಿ ರೂಪುಗೊಂಡಿದ್ದಲ್ಲ.

ಆರೋಗ್ಯವರ್ಧಕ ಗುಣಗಳು ಪಂಚಾಮೃತದಲ್ಲಿವೆಯೆಂದು ಆಯುರ್ವೇದ ಗ್ರಂಥಗಳು ಉಲ್ಲೇಖಿಸು ತ್ತವೆ. “ಅಜೀರ್ಣಭೂತವಾತಘ್ನಂ ಜ್ಞಾಯಂ ಪಂಚಾಮೃತಂ ಪರಮ್" ಎನ್ನಲಾಗಿದೆ ಧನ್ವಂತರೀ ನಿಘಂಟುವಿನಲ್ಲಿ. ಜೀರ್ಣಕ್ರಿಯೆಯ ಸಮಸ್ಯೆಗಳಾದ ಹಸಿವು ಕಡಿಮೆ ಇರುವುದು, ದುರ್ಬಲ ಜೀರ್ಣ ಕ್ರಿಯೆ, ಅಜೀರ್ಣ ಇತ್ಯಾದಿಗಳ ಚಿಕಿತ್ಸೆಯಲ್ಲಿ ಪಂಚಾಮೃತ ತುಂಬ ಉಪಯುಕ್ತವಾಗಿದೆ.

ಮಾನಸಿಕ ಅಸ್ವಸ್ಥತೆಗಳು, ಭೂತಬಾಧೆ ಎಂದು ಹೇಳಲಾಗುವ ಸಮಸ್ಯೆಗಳು ಮತ್ತು ಸೂಕ್ಷ್ಮಜೀವಿ ಸೋಂಕುಗಳ ಚಿಕಿತ್ಸೆಯಲ್ಲೂ ಪಂಚಾಮೃತವನ್ನು ಉಪಯೋಗಿಸಲಾಗುತ್ತದೆ. ವಾತ ದೋಷ ವನ್ನೂ ಅದು ಸಮತೋಲನಗೊಳಿಸುತ್ತದೆ. ಹೊಟ್ಟೆ ಉಬ್ಬುವುದು, ನರ ಸಂಬಂಧಿತ ಸಮಸ್ಯೆಗಳು, ಸ್ನಾಯು ಕ್ಷಯ, ದೌರ್ಬಲ್ಯ ಮತ್ತು ಪೋಷಣೆಯ ಕೊರತೆಯೊಂದಿಗೆ ಸಂಬಂಧಿಸಿದ ಅಸ್ಥಿ-ಸ್ನಾಯು ಸಮಸ್ಯೆಗಳೆಲ್ಲದಕ್ಕೂ ಪಂಚಾಮೃತದಲ್ಲಿ ಔಷಧವಿದೆ.

ಗರ್ಭವತಿ ಸ್ತ್ರೀಯರಿಗೆ ಯಾವ್ಯಾವ ತಿಂಗಳು/ ನಕ್ಷತ್ರ/ ಕರಣಗಳಲ್ಲಿ ಪಂಚಾಮೃತ ಕೊಡಬೇಕು ಎಂದು ವಿವರಿಸುವ ಒಂದು ಚಂದದ ಶ್ಲೋಕವೇ ಇದೆ. ಆದ್ದರಿಂದಲೇ ಪಂಚಾಮೃತವನ್ನು ಪವಿತ್ರ ಮತ್ತು ಅತ್ಯುತ್ತಮ ಔಷಧಿಯ ಮಿಶ್ರಣವೆಂದು ಪರಿಗಣಿಸಲಾಗುತ್ತದೆ. ಇಷ್ಟೇಅಲ್ಲ, ಪಂಚಾಮೃತ ವನ್ನು ಆಯುರ್ವೇದದ ರಸಶಾಸ್ತ್ರ ಶಾಖೆಯಲ್ಲಿ ಅನೇಕ ಲೋಹೀಯ ಪದಾರ್ಥಗಳನ್ನು ಶುದ್ಧೀ ಕರಿಸುವ ದ್ರವ್ಯವಾಗಿಯೂ ಬಳಸಲಾಗುತ್ತದೆ. ‘ರಸಕರ್ಮ ಪ್ರಸಾಧಕ’ ಎಂದು ಅದನ್ನು ಬಣ್ಣಿಸ ಲಾಗಿದೆ. ಅಂದರೆ, ಲೋಹಗಳು ಮತ್ತು ಪಾದರಸ ಸಂಬಂಧಿತ ಔಷಧ ತಯಾರಿಕೆಯಲ್ಲಿ ಬಳಕೆ ಯಾಗುವ ಪದಾರ್ಥ.

ತಾಮ್ರಭಸ್ಮ ತಯಾರಿಯಲ್ಲಿ ತಾಮ್ರದ ವಿಷಗುಣವನ್ನು ತೆಗೆಯಲಿಕ್ಕೆ ಬಳಸುವುದು ಪಂಚಾಮೃತ ವನ್ನೇ. ಆ ಪ್ರಕ್ರಿಯೆಯ ಹೆಸರೇ ಅಮೃತೀಕರಣ ಎಂದು. ಮನುಷ್ಯದೇಹಕ್ಕೆ ಬೇಕಾದ ಉಪಯುಕ್ತ ಅಂಶಗಳನ್ನಷ್ಟೇ ತಾಮ್ರದಿಂದ ಪಡೆಯುವುದು ಇದರಿಂದ ಸಾಧ್ಯವಾಗುತ್ತದೆ. ಇಲ್ಲಿ ಇನ್ನೊಂದು ವಿಚಾರವನ್ನೂ ನಾವು ಗಮನಿಸಬೇಕು. ದೇವರ ವಿಗ್ರಹಕ್ಕೆ ಅಭಿಷೇಕ ಮಾಡಿದ ಪಂಚಾಮೃತವನ್ನು ತೀರ್ಥವೆಂದು ಸ್ವೀಕರಿಸುವ ಪದ್ಧತಿ ಮೌಢ್ಯದ್ದಲ್ಲ, ವೈಜ್ಞಾನಿಕ ತತ್ತ್ವವುಳ್ಳದ್ದೇ.

ವಿಗ್ರಹಗಳನ್ನು ಕಲ್ಲು-ಮಣ್ಣಿನಿಂದ ಮಾಡಿದ್ದರೂ, ಕಂಚು ಅಥವಾ ಪಂಚಲೋಹಗಳಿಂದ ಮಾಡಿದ್ದರೂ ಅದರಲ್ಲಿ ಕಬ್ಬಿಣ, ತಾಮ್ರ, ಚಿನ್ನ, ಬೆಳ್ಳಿ ಅಂಶಗಳೆಲ್ಲ ಅಲ್ಪಪ್ರಮಾಣದಲ್ಲಿ ಇದ್ದೇ ಇರುತ್ತವೆ. ಅಂತಹ ವಿಗ್ರಹಗಳಿಗೆ ಪಂಚಾಮೃತದಿಂದ ಅಭಿಷೇಕ ಮಾಡಿದಾಗ, ಆ ಲೋಹಗಳಿಂದ ಅತಿ ಸೂಕ್ಷ್ಮ ಕಣಗಳು ಪಂಚಾಮೃತದಲ್ಲಿ ಸೇರಬಹುದು. ಅದನ್ನು ಸೇವಿಸುವುದರಿಂದ, ಪಂಚಾ ಮೃತದಿಂದಾಗಿ ಆ ಲೋಹಗಳ ವಿಷಾಂಶಗಳು ಕಳೆದು ಸೂಕ್ಷ್ಮ ಪ್ರಮಾಣದ ಔಷಧಿಯ ಅಂಶಗಳು ನಮಗೆ ಲಭ್ಯವಾಗುತ್ತವೆ!

ಇದಿಷ್ಟು, ಲೋಕಕ್ಕೆಲ್ಲ ಪರಿಚಿತವಿರುವ ಪಂಚಾಮೃತ ಬಗೆಗಿನ ಕೆಲವು ಸ್ವಾರಸ್ಯಕರ ಮಾಹಿತಿ. ಈಗ, ನಿಮಗೆ ಅಷ್ಟೇನೂ ಪರಿಚಯವಿರಲಾರದ, ಅಥವಾ ಬೇರೆ ಹೆಸರಿನಿಂದ ಗೊತ್ತಿರಬಹುದಾದ ಒಂದು ಪಂಚಾಮೃತದ ಬಗ್ಗೆ ಹೇಳುತ್ತೇನೆ. ಇದು ಕೂಡ ಬಾಯಿಯಿಂದ ಹೊಟ್ಟೆಗೆ ಸೇವಿಸುವ ಒಂದು ಪದಾರ್ಥವೇ. ಆದರೆ ಆ ಪಂಚಾಮೃತದಂತೆ ದೇವರ ಪೂಜೆಯಲ್ಲಿ ಉಪಯೋಗಿಸುವ ವಸ್ತು ಇದಲ್ಲ, ಇದೇನಿದ್ದರೂ ‘ಪೇಟ್ ಪೂಜೆ’ಗೆ ಮಾತ್ರ ಸೀಮಿತ. ಆದರೆ, ಆ ಪಂಚಾಮೃತದಂತೆ ಈ ಪಂಚಾಮೃತ ದ್ದೂ ಸ್ವಲ್ಪೇಸ್ವಲ್ಪ ಪ್ರಮಾಣದಲ್ಲೇ ಸೇವನೆ.

ರುಚಿ ಮಾತ್ರ ಆಹಾ... ಅದ್ಭುತ! ಬರೀ ಸಿಹಿಯಲ್ಲ. ಸಿಹಿ, ಖಾರ, ಉಪ್ಪು, ಹುಳಿ, ಕಹಿ ಈ ಐದೂ ರುಚಿಗಳಿರುವಂಥದ್ದು. ನನ್ನ ಪ್ರಕಾರ ಪಂಚಾಮೃತ ಎಂಬ ಹೆಸರು ಇದಕ್ಕೇ ಚೆನ್ನಾಗಿ ಹೊಂದು ವುದು. ಪಂಚಾಮೃತ ಎಂದೊಡನೆ ನನಗಂತೂ ಇದರದೇ ಚಿತ್ರ ಕಣ್ಮುಂದೆ ಬಂದು ಬಾಯಿಯಲ್ಲಿ ನೀರೂರುವುದು. ನಮ್ಮ ಮನೆಯಲ್ಲಂತೂ ತಲೆ ತಲಾಂತರದಿಂದ ಬಂದಿರುವ ಈ ರೆಸಿಪಿ ಎಲ್ಲರಿಗೂ ಅಚ್ಚುಮೆಚ್ಚಿನದು.

ಸರಿ, ಇಷ್ಟೆಲ್ಲ ಬಡಿವಾರ ಬಿಲ್ಡಪ್ ಓದಿದಾಗ ನಿಮ್ಮ ಬಾಯಿಯಲ್ಲಿ ನೀರೂರಿತೋ ಏನೋ. ಈಗ ರೆಸಿಪಿಯನ್ನು ಓದಿ ಹೇಗಿರಬಹುದೆಂದು ಕಲ್ಪಿಸಿಕೊಳ್ಳಿ. ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನವನ್ನು ನೋಟ್ ಮಾಡಿಟ್ಟುಕೊಳ್ಳಿ.

ಹಸಿಮೆಣಸು 1/4 ಕೆ.ಜಿ., ಹುಣಿಸೆಹಣ್ಣು 100 ಗ್ರಾಂ, ಬೆಲ್ಲ ಹದಾ ಗಾತ್ರದ ಒಂದು ಅಚ್ಚು, ಉಪ್ಪು ಒಂದೆರಡು ಚಿಟಿಕೆ (ರುಚಿಗೆ ತಕ್ಕಷ್ಟು), ಜೀರಿಗೆ 3 ಚಮಚ, ಮೆಂತ್ಯ 3 ಚಮಚ, ಇಂಗು 1 ಚಿಟಿಕೆ, ಎಣ್ಣೆ- ಹಸಿಮೆಣಸನ್ನು ಬಾಡಿಸಲು ಬೇಕಾಗುವಷ್ಟು ಮಾತ್ರ. ಹುಣಸೆಹಣ್ಣನ್ನು ನೀರಲ್ಲಿ ನೆನೆಸಿಟ್ಟು ಚೆನ್ನಾಗಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ.

ಹಸಿಮೆಣಸನ್ನು ತೊಟ್ಟು ತೆಗೆದು ಸಣ್ಣಗೆ ಹೆಚ್ಚಿ (ಉದ್ದುದ್ದ ಹೆಚ್ಚುವುದಕ್ಕಿಂತ ಅಡ್ಡಕ್ಕೆ, ಚಕ್ರಗಳಂತೆ ಹೆಚ್ಚುವುದು ಉತ್ತಮ) ಎಣ್ಣೆಯಲ್ಲಿ ಹುರಿಯಬೇಕು. ಗಮನಿಸಿ- ಕರಿಯುವುದಲ್ಲ, ಹುರಿಯುವುದು. ಚೆನ್ನಾಗಿ ಹುರಿದ ಮೆಣಸಿನಕಾಯಿ ಬಾಣಲೆಯಲ್ಲಿರುವಾಗಲೇ ಹುಣಿಸೆರಸ ಸೇರಿಸಿ ಉಪ್ಪು, ಇಂಗು, ಪುಡಿಮಾಡಿದ ಬೆಲ್ಲವನ್ನೂ ಹಾಕಿ ಚೆನ್ನಾಗಿ ಕುದಿಸಿ. ಒಲೆಯ ಜ್ವಾಲೆ ಮೀಡಿಯಂ ಆಗಿರಲಿ. ಇದೇ ಟೈಮಲ್ಲಿ ಕ್ವಿಕ್ಕಾಗಿ ಜೀರಿಗೆ-ಮೆಂತ್ಯವನ್ನು ಪುಡಿ ಮಾಡಿಟ್ಟುಕೊಳ್ಳಿ.

ಒಲೆಯ ಮೇಲಿನ ಮಿಶ್ರಣ ದಪ್ಪವಾಗುತ್ತ ಬರುತ್ತಿದ್ದಂತೆಯೇ ಇಳಿಸುವ ಮುನ್ನ ಜೀರಿಗೆ ಮತ್ತು ಮೆಂತ್ಯ ಪುಡಿ ಹಾಕಿ ಬಾಣಲೆಯನ್ನು ಒಲೆಯಿಂದ ಇಳಿಸಿ. ಆರಿದ ಮೇಲೆ ಮಿಶ್ರಣವನ್ನು ಗಾಜಿನ ಜಾಡಿಯಲ್ಲಿ ತುಂಬಿಸಿಡಿ. ಬೇಕಿದ್ದರೆ “ಪಂಚಾಮೃತ(ತಿಳಿರುತೋರಣ ಜ್ಞಾನಾಮೃತ)" ಎಂದು ಲೇಬಲ್ ಹಚ್ಚಿ!

ತಯಾರಿಸಿದ ದಿನಕ್ಕಿಂತ ಒಂದೆರಡು ದಿನ ಬಿಟ್ಟು ತೆರೆದು ಬಳಸತೊಡಗಿದರೆ ಒಳ್ಳೆಯದು. ಬಿಸಿಬಿಸಿ ಅನ್ನಕ್ಕೆ ಒಂದು ಚಮಚದಷ್ಟು ಪಂಚಾಮೃತ ಬಡಿಸಿಕೊಂಡು, ಒಂದಿಷ್ಟು ತುಪ್ಪ ಅಥವಾ ಕೊಬ್ರಿ ಎಣ್ಣೆಯನ್ನೂ ಹಾಕಿ ಕಲಸಿದರೆ... ಪಂಚಾಮೃತದಲ್ಲಿ ಹಸಿಮೆಣಸಿನ ಚಕ್ರಾಕಾರಗಳಿರುತ್ತವಲ್ವಾ ಅವನ್ನೂ ಸರಿಯಾಗಿ ಕಿವುಚಿ ರಸೋತ್ಪತ್ತಿ ಹೆಚ್ಚಿಸಿಕೊಂಡರೆ... ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!

ದೋಸೆ, ಚಪಾತಿ, ಪೂರಿಗೆ ಹಚ್ಚಿ ತಿನ್ನಲಿಕ್ಕೂ ಸೂಪರ್ ಆಗಿರುತ್ತದೆ. ಜಾಡಿಯಲ್ಲಿ ಹಾಕಿಟ್ಟರೆ ಒಂದೆರಡು ತಿಂಗಳ ಕಾಲ ಕೆಡದೆ ಉಳಿಯಬಲ್ಲುದು. ನಮ್ಮನೇಲಂತೂ ಅಷ್ಟೆಲ್ಲ ದಿನಗಳವರೆಗೆ ಉಳಿಯುವ ಸಾಧ್ಯತೆಯೇ ಇಲ್ಲ, ತೀವ್ರ ಬೇಡಿಕೆಯುಳ್ಳ ವ್ಯಂಜನ ಆದ್ದರಿಂದ.

ಹಾಂ! ವ್ಯಂಜನ ಎಂದಾಗ ನೆನಪಾಯ್ತು. ಇಂದಿನ ಅಂಕಣದ ತಲೆಬರಹದಲ್ಲಿ ಹೇಳಹೊರಟಿದ್ದೇ ಬೇರೆಯೇ ವ್ಯಂಜನಗಳ ಬಗ್ಗೆ. ಇದುವರೆಗೂ ಕೊಂಕಣ ಸುತ್ತಿದ್ದೇ ಆಯ್ತು. ಈಗ ಮೈಲಾರ ಪ್ರವೇಶ. ವರ್ಣಮಾಲೆಯಲ್ಲಿ ವ್ಯಂಜನ ಎಂದರೇನೆಂದು ನಿಮಗೆ ಗೊತ್ತೇ ಇದೆ. ‘ಕ’ದಿಂದ ‘ಮ’ವರೆಗಿನ 25 ವರ್ಗೀಯ ವ್ಯಂಜನಗಳು, ‘ಯ’ದಿಂದ ‘ಳ’ವರೆಗಿನ 9 ಅವರ್ಗೀಯ ವ್ಯಂಜನಗಳು. ವ್ಯಂಜನಕ್ಕೆ ಸ್ವರ ಸೇರಿ ಪೂರ್ಣಾಕ್ಷರ ಆಗುವುದು.

ಕೆಲವೊಮ್ಮೆ ಪದದ ಕೊನೆಯಲ್ಲಿ ವ್ಯಂಜನಕ್ಕೆ ಸ್ವರ ಸೇರದೆ ಅದು ವ್ಯಂಜನವಾಗಿಯೇ ಉಳಿಯ ಬಹುದು. ಅದನ್ನು ಅರ್ಧಾಕ್ಷರ ಎನ್ನುತ್ತೇವೆ. ಒಂದಕ್ಕಿಂತ ಹೆಚ್ಚು ವ್ಯಂಜನಗಳು ಕೂಡಿ ಅವುಗಳ ಜತೆಗೊಂದು ಸ್ವರ ಸೇರಿದ್ದನ್ನು ಸಂಯುಕ್ತಾಕ್ಷರ ಎನ್ನುತ್ತೇವೆ.

ಕನ್ನಡದಲ್ಲಾದರೆ ಒತ್ತಕ್ಷರ ಎನ್ನುವುದೇ ರೂಢಿ, ಕನ್ನಡ ಲಿಪಿಯಲ್ಲಿ ಅಂಥ ಸಂದರ್ಭದಲ್ಲಿ ಮುಖ್ಯ(ಮೊದಲ) ವ್ಯಂಜನದ ಕೆಳಗೆ ಎರಡನೆಯನ್ನು ಒತ್ತಿನಂತೆ ಬರೆಯುವುದರಿಂದ. ನನಗದು ಭಾರತದ ನಕ್ಷೆಯ ಕೆಳಗೆ ಶ್ರೀಲಂಕಾ ಇದ್ದಂತೆ ಅಂತಲೇ ಅನಿಸುವುದು. ಅಂದಮಾತ್ರಕ್ಕೆ ಋ-ಕಾರದ ವಟೃಸುಳಿ ಮತ್ತು ಐ-ತ್ವದ ಚಿಹ್ನೆಯನ್ನೂ ವ್ಯಂಜನದ ಕೆಳಗೆ ಬರೆಯುವುದಾದರೂ ಅವು ಒತ್ತಕ್ಷರ ಗಳಲ್ಲವೆಂದು ಗೊತ್ತಿರಬೇಕು.

ಇಲ್ಲಿ ಇನ್ನೂ ಒಂದು ಸ್ವಾರಸ್ಯ ಇದೆ. ಅಚ್ಚಕನ್ನಡ (ಮತ್ತು ತದ್ಭವ) ಪದಗಳಲ್ಲಾದರೆ ಸಜಾತೀಯ ಸಂಯುಕ್ತಾಕ್ಷರವಷ್ಟೇ ಸಾಧ್ಯ. ಅಂದರೆ ಮುಖ್ಯ ವ್ಯಂಜನ ಮತ್ತು ಕೆಳಗಡೆ ಬರೆಯಲ್ಪಡುವ ವ್ಯಂಜನ ಅದೇ ಆಗಿರುವುದು. ಉದಾಹರಣೆಗೆ ‘ಅಕ್ಕ’ ಪದದಲ್ಲಿ ‘ಕ್ಕ’; ‘ಅಮ್ಮ’ ಪದದಲ್ಲಿ ‘ಮ್ಮ’; ‘ಅಯ್ಯ’ ಪದದಲ್ಲಿ ‘ಯ್ಯ’; ‘ಕಳ್ಳ’ ಪದದಲ್ಲಿ ‘ಳ್ಳ’ ಇತ್ಯಾದಿ. ಆ ದೃಷ್ಟಿಯಿಂದಲೂ ನಮ್ಮ ಕನ್ನಡ ಭಾಷೆ ಸರಳ ಮತ್ತು ಸುಂದರ. ಸಂಸ್ಕೃತ ಮೂಲದ ಪದಗಳಲ್ಲಿ ಹಾಗಲ್ಲ. ಬೇರೆಬೇರೆ ವ್ಯಂಜನಗಳು ಸೇರಿ ಸಂಯುಕ್ತಾಕ್ಷರ ಆಗಬಹುದು.

ಉದಾಹರಣೆಗೆ ‘ವಿಶ್ವ’ ಪದದಲ್ಲಿ ‘ಶ್ವ’; ‘ಪತ್ರಿಕೆ’ ಪದದಲ್ಲಿ ‘ತ್ರಿ’; ‘ವ್ಮಾಯ’ ಪದದಲ್ಲಿ ‘’; ‘ಮಧ್ಯಾಹ್ನ’ ಪದದಲ್ಲಿ ‘ಧ್ಯಾ’ ಮತ್ತು ‘ಹ್ನ’. ಕೆಲವೊಮ್ಮೆ ಎರಡಲ್ಲ ಮೂರು ವ್ಯಂಜನಗಳಿರುವ ಸಂಯುಕ್ತಾಕ್ಷರ ಇರುತ್ತದೆ. ಉದಾಹರಣೆಗೆ ‘ಲಕ್ಷ್ಯ’ ಪದದಲ್ಲಿ ‘ಕ್ಷ್ಯ’; ‘ಕಾಕುತ್ಸ್ಥ’ ಪದದಲ್ಲಿ ‘ತ್ಸ್ಥ’; ‘ಉಚ್ಛ್ರಾಯ’ ಪದದಲ್ಲಿ ‘ಚ್ಛ್ರಾ’, ‘ರಾಷ್ಟ್ರಕೂಟ’ ಪದದಲ್ಲಿ ‘ಷ್ಟ್ರ’ ಇತ್ಯಾದಿ. ತೀರ ಅಪರೂಪದಲ್ಲಿ ಮೂರಲ್ಲ ನಾಲ್ಕು ವ್ಯಂಜನಗಳು ಸೇರಿ ಸಂಯುಕ್ತಾಕ್ಷರ ಆಗುವುದೂ ಇದೆ.

ಸಂಸ್ಕೃತ ಶ್ಲೋಕಗಳಲ್ಲಿ, ಸ್ತೋತ್ರಗಳಲ್ಲಿ ಇಂಥವು ಅಪರೂಪಕ್ಕೊಮ್ಮೆ ಕಾಣಸಿಗುತ್ತವೆ. ಉಚ್ಚರಿಸು ವಾಗ ನಮ್ಮ ನಾಲಗೆ ತೊಡರುವುದಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ‘ಭ್ಕ್ಷ್ವು’ (ತಿನ್ನು, ಉಣ್ಣು ಎಂಬ ಅರ್ಥ) ಪದ. ಇದರಲ್ಲಿ ಇದು , ಕ್, ಷ್, ವ್ ಎಂಬ ನಾಲ್ಕು ವ್ಯಂಜನಗಳು ಒಟ್ಟುಸೇರಿರುವ ಸಂಯುಕ್ತಾಕ್ಷರ.

ಉಡುಪಿಯಲ್ಲಿ ಕೃಷ್ಣದೇವಾಲಯದ ಪಕ್ಕದಲ್ಲಿರುವ ಗೀತಾಮಂದಿರದಲ್ಲಿ ಉಪಾಹಾರಗೃಹಕ್ಕೆ ‘ಕುರು ಭ್ಕ್ಷ್ವು ’ಎಂದೇ ಹೆಸರಿಟ್ಟಿದ್ದಾರೆ. ಅವು ಮಧ್ವಾಚಾರ್ಯರ ಕೃತಿಯೊಂದರ ಮೊದಲೆರಡು ಪದಗಳೂ ಹೌದು. ನಾಲ್ಕು ವ್ಯಂಜನಗಳ ಇನ್ನೊಂದು ಸಂಯುಕ್ತಾಕ್ಷರ ನೆನಪಾಗುವುದು ಭಗವದ್ಗೀತೆ ಯ 8ನೇಯ ಅಧ್ಯಾಯದ 12ನೇಯ ಶ್ಲೋಕದಲ್ಲಿ. ಅದರ ಮೂರನೆಯ ಚರಣದಲ್ಲಿ “ಮೂರ‍್ಧ್ನ್ಯಾ ಧಾಯಾತ್ಮನಃ ಪ್ರಾಣಮ್" ಎಂದು ಬರುತ್ತದೆ. ಇಲ್ಲಿ ರ‍್ಧ್ನ್ಯಾ ಇದು ರ್, ಧ್, ನ್, ಯ್ ಎಂಬ ನಾಲ್ಕು ವ್ಯಂಜನಗಳು ಒಟ್ಟುಸೇರಿರುವ ಸಂಯುಕ್ತಾಕ್ಷರ. ನಾಲ್ಕರದ್ದೇ ಅಪರೂಪ ಎಂದು ಕೊಂಡಿರಾದರೆ ಐದು ವ್ಯಂಜನಗಳು ಸೇರಿ ಆದ ಸಂಯುಕ್ತಾಕ್ಷರವೂ ಸಂಸ್ಕೃತದಲ್ಲಿದೆ!

ನನ್ನ ಸೀಮಿತ ತಿಳಿವಳಿಕೆಯಲ್ಲಿ ನನಗೆ ಗೊತ್ತಿರುವ ಒಂದೇ ಒಂದು ಉದಾಹರಣೆಯೆಂದರೆ ‘ಕಾರ‍್ತ್ಸ್ನ್ಯ’ ಎಂಬ ಪದ. ಇದರಲ್ಲಿ ರ್, ತ್, ಸ್, ನ್, ಯ್ ಎಂಬ ಐದು ವ್ಯಂಜನಗಳಿಂದಾದ ಸಂಯುಕ್ತಾಕ್ಷರವಿದೆ. ಇದು ಸಕಲ ಅಥವಾ ಸಂಪೂರ್ಣ ಎಂಬ ಅರ್ಥದ ‘ಕೃತ್ಸ್ನ’ ವಿಶೇಷಣ ಪದವನ್ನು ನಾಮಪದವಾಗಿಸಿದ ರೂಪ.

‘ಕರುಣವನ್ನು ‘ಕಾರುಣ್ಯ ಮಾಡಿದಂತೆ. ಚಂಚಲವನ್ನು ‘ಚಾಂಚಲ್ಯ’ ಮಾಡಿದಂತೆ. ಕಾರ‍್ತ್ಸ್ನ್ಯ ಎಂದರೆ ಪರಿಪೂರ್ಣತೆ, ಸಮಗ್ರತೆ ಎಂದು ಅರ್ಥ. ಇಂಗ್ಲಿಷ್‌ನಲ್ಲಾದರೆ ಟೊಟಾಲಿಟಿ. ವಾಲ್ಮೀಕಿ-ರಾಮಾಯಣದಲ್ಲಿ “ತಾಂ ಕಥಾಂ ಶ್ರೋತುಮಿಚ್ಛಾಮಿ ವಿಸ್ತರೇಣ ಚ ಮೈಥಿಲಿ| ಯಥಾನುಭೂತಂ ಕಾರ‍್ತ್ಸ್ನ್ಯೆನ ತನ್ಮೇ ತ್ವಂ ವಕ್ತುಮರ್ಹಸಿ||" ಮತ್ತು “ತೌ ರಾಜಪುತ್ರೌ ಕಾರ‍್ತ್ಸ್ನ್ಯೆನ ಧರ್ಮ್ಯ ಮಾಖ್ಯಾನಮುತ್ತಮಮ್| ವಾಚೋವಿಧೇಯಂ ತತ್ಸರ್ವಂ ಕೃತ್ವಾ ಕಾವ್ಯಮನಿನ್ದಿತೌ||" ಮುಂತಾದ ಶ್ಲೋಕಗಳಲ್ಲಿ ಈ ‘ಕಾರ‍್ತ್ಸ್ನ್ಯ’ ಪದ ಮತ್ತು ಅದರಿಂದಾಗಿ ಐದು ವ್ಯಂಜನಗಳ ಸಂಯುಕ್ತಾಕ್ಷರ ಬರುತ್ತದೆ. ನನ್ನಂಥ ಅಕ್ಷರಮೋಹಿತರಿಗೆ, ಭಾಷೆ ಹುಚ್ಚಿನವರಿಗೆ ಇದೂ ಒಂಥರದ ಪಂಚಾಮೃತವೇ!

ಶ್ರೀವತ್ಸ ಜೋಶಿ

View all posts by this author