ಒಂದೊಳ್ಳೆ ಮಾತು
ನಮ್ಮ ಕೈಗಡಿಯಾರದ ಮುಳ್ಳು ಸೆಕೆಂಡಿಗೆ ಒಂದು ಹೆಜ್ಜೆಯಿಡುತ್ತಾ ಟಿಕ್ ಟಿಕ್ ಎನ್ನುವಾಗ, ಈ ಇಡೀ ಜಗತ್ತಿನಲ್ಲೂ ಕಾಲ ಒಂದೇ ಲಯದಲ್ಲಿ ಸಾಗುತ್ತಿದೆ ಎಂದು ನಾವೆಲ್ಲರೂ ನಂಬಿರುತ್ತೇವೆ. ಆದರೆ ಕಾಲ ಎನ್ನುವುದು ವಿಶ್ವದೆಡೆ, ಅಷ್ಟೇ ಏಕೆ ಬ್ರಹ್ಮಾಂಡದ ಒಂದೇ ಅಲ್ಲ. ಇಪ್ಪತ್ತನೇ ಶತಮಾನ ದಲ್ಲಿ ಆಲ್ಬರ್ಟ್ ಐನ್ʼಸ್ಟೈನ್ ‘ಟೈಮ್ ಡೈಲೇಶನ್’ (ಕಾಲದ ಸಾಪೇಕ್ಷತೆ) ಸಿದ್ಧಾಂತದ ಮೂಲಕ ಜಗತ್ತಿಗೆ ಇದನ್ನು ಸಾರಿದರು. ಆದರೆ ಇದಕ್ಕೂ ಸಹಸ್ರಾರು ವರ್ಷಗಳ ಮುನ್ನವೇ ವೇದವ್ಯಾಸರು ಶ್ರೀಮದ್ಭಾಗವತದ ಒಂಬತ್ತನೇ ಸ್ಕಂಧ ಹಾಗೂ ವಿಷ್ಣುಪುರಾಣಗಳಲ್ಲಿ ಕಕುದ್ಮಿ ರಾಜನ ಕಥೆಯ ಮೂಲಕ ಬ್ರಹ್ಮಾಂಡದ ಈ ಕಾಲರಹಸ್ಯವನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ.
ಸತ್ಯಯುಗದಲ್ಲಿ ಕುಶಸ್ಥಳಿಯ (ಇಂದಿನ ದ್ವಾರಕೆ) ಕಕುದ್ಮಿ ಎಂಬ ಧೀಮಂತ ರಾಜನಿಗೆ ರೇವತಿ ಎಂಬ ಅಪ್ರತಿಮ ಸುಂದರಿ ಮತ್ತು ಸಕಲ ವಿದ್ಯಾವಂತೆಯಾದ ಮಗಳಿದ್ದಳು. ಆಕೆಯ ದಿವ್ಯ ತೇಜಸ್ಸು ಹಾಗೂ ಅಸಾಧಾರಣ ವ್ಯಕ್ತಿತ್ವಕ್ಕೆ ಸರಿಸಾಟಿಯಾದ ವರ ಭೂಮಂಡಲದಲ್ಲೂ ಸಿಗದೆ ಕಂಗಾಲಾದ ರಾಜನು, ಸೃಷ್ಟಿಕರ್ತನಾದ ಬ್ರಹ್ಮದೇವನನ್ನೇ ಮುಖಾಮುಖಿ ಭೇಟಿ ಮಾಡಿ ಸೂಕ್ತ ವರನನ್ನು ಕೇಳಲು ನಿರ್ಧರಿಸಿದನು.
ಇದನ್ನೂ ಓದಿ; Roopa Gururaj Column: ಹನುಮಂತನನ್ನು ಸಂಪ್ರೀತಗೊಳಿಸಲು ವೀಳ್ಯದೆಲೆ ಹಾರ
ಮಗಳೊಂದಿಗೆ ಭೌತಿಕ ದೇಹದ ಬ್ರಹ್ಮಲೋಕಕ್ಕೆ ತೆರಳಿದಾಗ, ಅಲ್ಲಿ ಬ್ರಹ್ಮನು ದೇವಗಂಧರ್ವರ ದಿವ್ಯ ಗಾನಾಲಾಪನೆಯನ್ನು ತದೇಕಚಿತ್ತದಿಂದ ಆಲಿಸುತ್ತಿದ್ದನು. ಆ ಪರಮಾನಂದದ ಸಂಗೀತಕ್ಕೆ ಭಂಗ ತರಬಾರದೆಂದು ರಾಜನು ಮೌನವಾಗಿ ಕಾದು ನಿಂತನು. ಗಾನಗೋಷ್ಠಿ ಮುಗಿದ ಬಳಿಕ ರಾಜನು ತಾನು ತಂದಿದ್ದ ಭೂಮಿಯ ಶ್ರೇಷ್ಠ ರಾಜಕುಮಾರರ ಪಟ್ಟಿಯನ್ನು ಬ್ರಹ್ಮನ ಮುಂದಿಟ್ಟು, ಇವರಲ್ಲಿ ನನ್ನ ಮಗಳಿಗೆ ಯೋಗ್ಯನಾದ ವರ ಯಾರು? ಎಂದು ವಿನಮ್ರವಾಗಿ ಕೇಳಿದನು. ಆಗ ಚತುರ್ಮುಖ ಬ್ರಹ್ಮ ಮುಗುಳ್ನಕ್ಕು, ರಾಜನೇ, ನೀನು ಯಾರ ಹೆಸರುಗಳನ್ನು ತಂದಿzಯೋ ಆ ರಾಜರು, ಅವರ ಮಕ್ಕಳು, ಮೊಮ್ಮಕ್ಕಳು ಅಷ್ಟೇ ಏಕೆ, ಅವರ ಇಡೀ ಸಾಮ್ರಾಜ್ಯಗಳೇ ಭೂಮಿಯ ಮಣ್ಣಿನಲ್ಲಿ ಲೀನವಾಗಿ ಹೋಗಿವೆ.
ನೀನು ಇಲ್ಲಿ ನಿಂತು ಸಂಗೀತ ಆಲಿಸಿದ ಆ ಕೇವಲ ಒಂದು ಮುಹೂರ್ತದ ಅಲ್ಪ ಸಮಯದಲ್ಲಿ ಭೂಮಿಯ ಮೇಲೆ ಇಪ್ಪತ್ತೇಳು ಚತುರ್ಯುಗಗಳು ಉರುಳಿಹೋಗಿವೆ! ಈಗ ಭೂಮಂಡಲದಲ್ಲಿ ಸತ್ಯಯುಗ, ತ್ರೇತಾಯುಗಗಳು ಮುಗಿದು ದ್ವಾಪರಯುಗ ನಡೆಯುತ್ತಿದೆ. ತಕ್ಷಣ ಮರಳಿ ಹೋಗು, ಅಲ್ಲಿ ಮಹಾ ವಿಷ್ಣುವಿನ ಅಂಶವಾದ ಬಲರಾಮನು ನಿನ್ನ ಮಗಳಿಗೆ ತಕ್ಕ ವರನಾಗಿದ್ದಾನೆ ಎಂದನು.
ನಮ್ಮ ಪ್ರಾಚೀನ ಕಾಲಗಣನೆಯ ಗಣಿತದ ಪ್ರಕಾರ, ಬ್ರಹ್ಮನ ಹನ್ನೆರಡು ಗಂಟೆಗಳ ಒಂದು ಹಗಲು ಎಂದರೆ ಭೂಮಿಯ ಮೇಲೆ ಒಂದು ಸಾವಿರ ಚತುರ್ಯುಗಗಳು. ಕಕುದ್ಮಿ ರಾಜ ಕಳೆದ ಆ 27 ಚತುರ್ಯುಗಗಳ ಅವಧಿಯನ್ನು ಇಂದಿನ ಸಮಯಕ್ಕೆ ಪರಿವರ್ತಿಸಿದರೆ ಅದು ಬ್ರಹ್ಮಲೋಕದ ಲೆಕ್ಕದಲ್ಲಿ ಕೇವಲ ಹತ್ತೊಂಬತ್ತರಿಂದ ಇಪ್ಪತ್ತು ನಿಮಿಷಗಳು! ಆದರೆ ಭೂಮಿಯ ಮೇಲೆ ಉರುಳಿ ಹೋದ ಮಾನವ ವರ್ಷಗಳು ಸರಿಸುಮಾರು ಹನ್ನೊಂದು ಕೋಟಿ ಅರವತ್ತಾರು ಲಕ್ಷದ ನಲವತ್ತು ಸಾವಿರ ವರ್ಷಗಳು!
ಅಗಾಧ ಶಕ್ತಿ ಮತ್ತು ಗುರುತ್ವವಿರುವ ಲೋಕಗಳಲ್ಲಿ ಕಾಲದ ಚಲನೆ ಅತ್ಯಂತ ನಿಧಾನವಾಗಿರುತ್ತದೆ ಎಂಬ ಭೌತವಿಜ್ಞಾನದ ಸತ್ಯವನ್ನು ವ್ಯಾಸರು ಅಂದೇ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದರು. ಕಾಲದ ಈ ಬೃಹತ್ ವಿಸ್ತಾರವನ್ನು ಅರಿತಾಗ ನಮ್ಮ ಒಳಗಿನ ಅಹಂಕಾರವೆಷ್ಟು ಕ್ಷುಲ್ಲಕ ಎಂಬ ಸತ್ಯ ಮನವರಿಕೆಯಾಗುತ್ತದೆ.
ಬ್ರಹ್ಮಾಂಡದ ಅನಂತ ಕಾಲಗಣನೆಯಲ್ಲಿ ನಮ್ಮ ಎಪ್ಪತ್ತೋ ಎಂಬತ್ತೋ ವರ್ಷಗಳ ಆಯುಷ್ಯ ಒಂದು ಕಣ್ಣು ಮಿಟುಕಿಸುವ ಕ್ಷಣಕ್ಕಿಂತಲೂ ಸಣ್ಣದು. ನನ್ನ ಸಮಯ, ನನ್ನ ಆಸ್ತಿ, ನನ್ನ ಅಧಿಕಾರ, ನನ್ನ ಪ್ರತಿಷ್ಠೆ ಎಂದು ಬೀಗುವ ನಾವು ಕಾಲದ ಅನಂತ ಪರದೆಯ ಮೇಲೆ ಕ್ಷಣಾರ್ಧ ಬಂದು ಮರೆಯಾಗುವ ಒಂದು ಪುಟ್ಟ ನೆರಳು ಮಾತ್ರ.
ಬ್ರಹ್ಮಲೋಕದ ಇಪ್ಪತ್ತು ನಿಮಿಷಗಳ ಭೂಮಿಯ ಮಹಾ ಸಾಮ್ರಾಜ್ಯಗಳೇ ಧೂಳಿಪಟವಾಗಿ ಕಣ್ಮರೆಯಾದಂತೆ, ನಾವು ಹೊತ್ತು ತಿರುಗುವ ದ್ವೇಷ, ಕೋಪ, ಮತ್ಸರ ಮತ್ತು ಅಹಂಭಾವಗಳಿಗೂ ಶಾಶ್ವತ ನೆಲೆ ಇಲ್ಲ. ಕಾಲದ ಈ ಸಾಪೇಕ್ಷತೆಯನ್ನು ಅರ್ಥಮಾಡಿಕೊಂಡು, ಸಿಕ್ಕಿರುವ ಅಲ್ಪ ಆಯುಷ್ಯದಲ್ಲಿ ಅಹಂ ಕಳಚಿ, ಪ್ರೀತಿ ಮತ್ತು ಕೃತಜ್ಞತೆಯಿಂದ ಬದುಕುವುದೇ ನಿಜವಾದ ಸಾರ್ಥಕ ಬದುಕು.