ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ದೇಶದ ಪ್ರಪ್ರಥಮ ಮತದಾರ

ಮೂಲತಃ ಶಾಲಾ ಶಿಕ್ಷಕರಾಗಿದ್ದ ನೇಗಿಯವರು, ಮತಗಟ್ಟೆ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದರು. ಮತ ದಾನ ಆರಂಭವಾಗುತ್ತಿದ್ದಂತೆ, ಮೊದಲು ಮತದಾನ ಮಾಡಿ, ‘ಭಾರತದ ಪ್ರಪ್ರಥಮ ಮತದಾರ’ ಎಂಬ ಅಭಿದಾನಕ್ಕೆ ಪಾತ್ರರಾದರು. 1951ರಿಂದ ಶುರುಮಾಡಿ ಅವರು ತಮ್ಮ 105ನೇ ವಯಸ್ಸಿನಲ್ಲಿ 2022ರಲ್ಲಿ ನಿಧನರಾಗುವ ತನಕ ಪ್ರತಿ ಚುನಾವಣೆಯಲ್ಲೂ ಮತ ಹಾಕಿದ್ದಾರೆ. ಅದು ಲೋಕಸಭಾ ಚುನಾವಣೆಯೇ ಆಗಿರಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಆಗಿರಲಿ, ನೇಗಿ ಮತದಾನ ಮಾಡುವುದನ್ನು ಮರೆಯುತ್ತಿರಲಿಲ್ಲ.

ದೇಶದ ಪ್ರಪ್ರಥಮ ಮತದಾರ

ಸಂಪಾದಕರ ಸದ್ಯಶೋಧನೆ

ಯಾರು ಆ ಶ್ಯಾಮ್ ಸರನ್ ನೇಗಿ? ಅವರ ಹೆಸರನ್ನು ಎಷ್ಟು ಮಂದಿ ಕೇಳಿದ್ದಾರೋ ಗೊತ್ತಿಲ್ಲ. ಆದರೆ ಆತ ಸ್ವತಂತ್ರ ಭಾರತದ ಪ್ರಪ್ರಥಮ ಮತದಾರ ಅಂದ್ರೆ ಅಚ್ಚರಿಯಾದೀತು. 1951ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ನೇಗಿ ಮೊದಲು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ದರು. ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯ ಕಲ್ಪಾ ಎಂಬ ಊರಿನವರಾದ ನೇಗಿಯವರು, ಮತದಾನ ಆರಂಭವಾಗುತ್ತಿದಂತೆ ಮೊದಲು ಸಾಲಿನಲ್ಲಿ ನಿಂತಿದ್ದರು.

ಮೊದಲ ಚುನಾವಣೆ 1952ರಲ್ಲಿ ನಡೆದರೂ, ಹಿಮಾಚಲ ಪ್ರದೇಶದಲ್ಲಿ ಮಾತ್ರ ಆರು ತಿಂಗಳು ಮೊದಲೇ ಚುನಾವಣೆ ನಡೆದಿತ್ತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪ್ರತಿಕೂಲ ವಾತಾವರಣ ವಿರುವುದರಿಂದ, ವಿಪರೀತ ಹಿಮಪಾತವಾಗುವ ಸಾಧ್ಯತೆ ಇರುವುದರಿಂದ, ಆ ಸಮಯದಲ್ಲಿ ಚುನಾವಣೆಯನ್ನು ನಡೆಸಿದರೆ ಮತದಾನದಲ್ಲಿ ಭಾಗವಹಿಸುವುದು ಕಷ್ಟವಾಗುವುದರಿಂದ, ಆರು ತಿಂಗಳು ಮೊದಲೇ ಚುನಾವಣೆಯನ್ನು ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Vishweshwar Bhat Column: ವಿಮಾನದ ಎತ್ತರಮಾಪಕ

ಮೂಲತಃ ಶಾಲಾ ಶಿಕ್ಷಕರಾಗಿದ್ದ ನೇಗಿಯವರು, ಮತಗಟ್ಟೆ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದರು. ಮತದಾನ ಆರಂಭವಾಗುತ್ತಿದ್ದಂತೆ, ಮೊದಲು ಮತದಾನ ಮಾಡಿ, ‘ಭಾರತದ ಪ್ರಪ್ರಥಮ ಮತದಾರ’ ಎಂಬ ಅಭಿದಾನಕ್ಕೆ ಪಾತ್ರರಾದರು. 1951ರಿಂದ ಶುರುಮಾಡಿ ಅವರು ತಮ್ಮ 105ನೇ ವಯಸ್ಸಿನಲ್ಲಿ 2022ರಲ್ಲಿ ನಿಧನರಾಗುವ ತನಕ ಪ್ರತಿ ಚುನಾವಣೆಯಲ್ಲೂ ಮತ ಹಾಕಿದ್ದಾರೆ. ಅದು ಲೋಕಸಭಾ ಚುನಾವಣೆಯೇ ಆಗಿರಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಆಗಿರಲಿ, ನೇಗಿ ಮತದಾನ ಮಾಡುವುದನ್ನು ಮರೆಯುತ್ತಿರಲಿಲ್ಲ.

ಅವರು ಪ್ರಥಮ ಮತದಾರರಷ್ಟೇ ಅಲ್ಲ, ದೇಶದ ಅತ್ಯಂತ ಹಿರಿಯ ಮತದಾರ ಎಂದೂ ಕರೆಯಿಸಿ ಕೊಂಡಿದ್ದರು. 34ನೇ ಸಲ ಚುನಾವಣೆಯಲ್ಲಿ ಮತ ಹಾಕಿದ ಮೂರು ದಿನಗಳ ನಂತರ ಅವರು 2022ರ ನವೆಂಬರ್ 5ರಂದು ಅಸುನೀಗಿದರು. ಭಾರತ ಸರಕಾರ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಿತ್ತು.

2010ಲ್ಲಿ ಭಾರತದ ಚುನಾವಣಾ ಆಯೋಗದ ವಜ್ರ ಮಹೋತ್ಸವದ ಸಂದರ್ಭದಲ್ಲಿ ಆಯೋಗದ ಅಂದಿನ ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ನವೀನ ಚಾವ್ಲಾ ಖುದ್ದಾಗಿ ನೇಗಿಯವರ ನಿವಾಸಕ್ಕೆ ತೆರಳಿ ಸನ್ಮಾನಿಸಿದ್ದರು. ‘ಆ ದಿನಗಳಲ್ಲಿ ಚುನಾವಣೆ ಅಂದ್ರೆ ಜಾತ್ರೆಯ ಸಂಭ್ರಮವಿರುತ್ತಿತ್ತು. ದೇಶದ ಪ್ರತಿ ಊರಿನಲ್ಲೂ ಹಬ್ಬದ ವಾತಾವರಣವಿರುತ್ತಿತ್ತು. ಆದರೆ ಈ ದಿನಗಳಲ್ಲಿ ಚುನಾವಣೆ ಬಂದಿದ್ದೇ ಗೊತ್ತಾಗುವುದಿಲ್ಲ. ಹಾಗಂತ ಆಗಿನ ದಿನಗಳಿಗಿಂತ ಈಗ ಹಣ ಹೆಚ್ಚು ಖರ್ಚಾಗುತ್ತಿದೆ. ಚುನಾವಣಾ ಆಯೋಗ ಚುನಾವಣೆಯನ್ನು ನೀರಸಗೊಳಿಸಿ ಬಿಟ್ಟಿದೆ. ಈಗಿನ ಚುನಾವಣೆಯಲ್ಲಿ ಸಂಭ್ರಮ ಹೊರಟು ಹೋಗಿದೆ. ಅಂತ್ಯಸಂಸ್ಕಾರದಂತೆ ಭಾಸವಾಗುತ್ತದೆ’ ಎಂದು ನೇಗಿ ಆ ಸಂದರ್ಭದಲ್ಲಿ ಹೇಳಿದ್ದರು. 2014ರಲ್ಲಿ ಹಿಮಾಚಲ ಪ್ರದೇಶ ಚುನಾವಣಾ ಆಯೋಗವು ನೇಗಿಯವರನ್ನು ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು.

ಮತದಾರರಲ್ಲಿ ಜಾಗೃತಿಯನ್ನುಂಟು ಮಾಡುವ ಕಾಯಕದಲ್ಲಿ ಅವರು ತಮ್ಮನ್ನು ತೊಡಗಿಸಿ ಕೊಂಡಿದ್ದರು. ‘ಮತದಾನ ಅಂದ್ರೆ ಮತಗಳನ್ನು ದಾನ ಮಾಡುವುದಲ್ಲ. ನಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದು. ಅದೊಂದು ಪರಮಪವಿತ್ರ ಕಾರ್ಯ. ಯಾವ ಕಾರಣ ಕ್ಕೂ ಮತದಾನದಲ್ಲಿ ಭಾಗವಹಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು’ ಎಂದು ನೇಗಿ ಹೇಳುತ್ತಿದ್ದರು. ಯಾರಾದರೂ ಮತದಾನದಲ್ಲಿ ಭಾಗವಹಿಸದಿರುವ ಸಂಗತಿ ಅವರಿಗೆ ಗೊತ್ತಾದರೆ ಅವರ ಮನೆಗೆ ಹೋಗಿ, ಮತದಾನದಲ್ಲಿ ಭಾಗವಹಿಸದೇ ಇದ್ದಿದ್ದು ಯಾಕೆ ಎಂಬ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತಿದ್ದರು. ಮತದಾರರಲ್ಲಿ ಜಾಗೃತಿಯನ್ನುಂಟು ಮಾಡಲು ‘ಗೂಗಲ್ ಇಂಡಿಯಾ’ ನೇಗಿಯವರ ಸೇವೆಯನ್ನು ಬಳಸಿಕೊಂಡಿತ್ತು.