ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 5th Test: ಯಶಸ್ವಿ ಜೈಸ್ವಾಲ್‌ ಶತಕ, ಮೂರನೇ ದಿನ ಭಾರತ ತಂಡಕ್ಕೆ ಮೇಲುಗೈ!

IND vs ENG 5th Test Day 3 Highlights: ಯಶಸ್ವಿ ಜೈಸ್ವಾಲ್‌ (118 ರನ್‌) ಶತಕ ಹಾಗೂ ಮೊಹಮ್ಮದ್‌ ಸಿರಾಜ್‌ (11ಕ್ಕೆ 1) ಅವರ ಮಾರಕ ಬೌಲಂಗ್‌ ದಾಳಿಯ ನೆರವಿನಿಂದ ಭಾರತ ತಂಡ, ಐದನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಪ್ರಾಬಲ್ಯವನ್ನು ಸಾಧಿಸಿದೆ. ಭಾರತ ನೀಡಿದ 374 ರನ್‌ಗಳ ಗುರಿಯನ್ನು ಹಿಬಾಲಿಸಿದ ಇಂಗ್ಲೆಂಡ್‌, ಒಂದು ವಿಕೆಟ್‌ ನಷ್ಟಕ್ಕೆ 50 ರನ್‌ ಗಳಿಸಿದೆ.

ಯಶಸ್ವಿ ಜೈಸ್ವಾಲ್‌ ಶತಕ, ಮೂರನೇ ದಿನ ಭಾರತಕ್ಕೆ ಮೇಲುಗೈ!

ಓವಲ್‌ ಟೆಸ್ಟ್‌ ಗೆಲ್ಲಲು ಭಾರತ ತಂಡಕ್ಕೆ 9 ವಿಕೆಟ್‌ ಅಗತ್ಯವಿದೆ.

Profile Ramesh Kote Aug 3, 2025 12:08 AM

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಅತ್ಯಂತ ತೀವ್ರ ಕುತೂಹಲವನ್ನು ಕೆರಳಿಸಿದೆ. ಯಶಸ್ವಿ ಜೈಸ್ವಾಲ್‌ (Yashasvi Jaiswal) ಭರ್ಜರಿ ಶತಕ ಹಾಗೂ ಮೊಹಮ್ಮದ್‌ ಸಿರಾಜ್‌ (Mohammed Siraj) ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, ಓವಲ್‌ ಟೆಸ್ಟ್‌ ಪಂದ್ಯದ ಮೂರನೇ ದಿನ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಗೆಲ್ಲಲು ಭಾರತ ತಂಡಕ್ಕೆ 9 ವಿಕೆಟ್‌ಗಳ ಅಗತ್ಯವಿದ್ದರೆ, ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ಇನ್ನುಳಿದ ಎರಡು ದಿನಗಳಲ್ಲಿ 324 ರನ್‌ಗಳ ಅಗತ್ಯವಿದೆ. ಹಾಗಾಗಿ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂದು ಭಾನುವಾರ ನಿರ್ಧಾರವಾಗಲಿದೆ.

ಇಲ್ಲಿನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ 374 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡಕ್ಕೆ ಬೆನ್‌ ಡಕೆಟ್‌ ಹಾಗೂ ಝ್ಯಾಕ್‌ ಕ್ರಾವ್ಲಿ 50 ರನ್‌ಗಳ ಜೊತೆಯಟವನ್ನು ಆಡುವ ಮೂಲಕ ಉತ್ತಮ ಆರಂಭವನ್ನೇ ತಂದುಕೊಟ್ಟಿದ್ದರು. ಆದರೆ, ಮೂರನೇ ದಿನದಾಟ ಮುಗಿಯಲು ಇನ್ನೊಂದು ಎಸೆತ ಬಾಕಿ ಇರುವಾಗ ಮೊಹಮ್ಮದ್‌ ಸಿರಾಜ್‌, ಝ್ಯಾಕ್‌ ಕ್ರಾವ್ಲಿ (14) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಆ ಮೂಲಕ ಇಂಗ್ಲೆಂಡ್‌ 13.5 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 50 ರನ್‌ ಗಳಿಸಿದೆ. ಅತ್ಯುತ್ತಮ ಬ್ಯಾಟ್‌ ಮಾಡಿದ ಬೆನ್‌ ಡಕೆಟ್‌ ಅಜೇಯ 34 ರನ್‌ ಗಳಿಸಿದ್ದು, ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

IND vs ENG: ಓವಲ್‌ ಟೆಸ್ಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌!

ಭಾರತ ತಂಡ 369 ರನ್‌ಗಳಿಗೆ ಆಲ್‌ಔಟ್‌

ಶನಿವಾರ ಬೆಳಿಗ್ಗೆ ಎರಡು ವಿಕೆಟ್‌ ನಷ್ಟಕ್ಕೆ 75 ರನ್‌ಗಳಿಂದ ಮೂರನೇ ದಿನದಾಟವನ್ನು ಆರಂಭಿಸಿದ್ದ ಭಾರತ ತಂಡ, ಯಶಸ್ವಿ ಜೈಸ್ವಾಲ್‌ ಶತಕ ಮತ್ತು ಆಕಾಶ್ ದೀಪ್‌, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರ ಅರ್ಧಶತಕಗಳ ಬಲದಿಂದ ದ್ವಿತೀಯ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ 396 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ಗೆ ಅಂತಿಮ ಇನಿಂಗ್ಸ್‌ನಲ್ಲಿ 374 ರನ್‌ಗಳ ಗುರಿಯನ್ನು ನೀಡಿತ್ತು.



ಜೈಸ್ವಾಲ್‌-ಆಕಾಶ್‌ ಜುಗಲ್‌ಬಂದಿ

ಎರಡನೇ ದಿನ ನಾಯಕ ಶುಭಮನ್‌ ಗಿಲ್‌ ಬದಲು ನೈಟ್‌ ವಾಚ್‌ಮ್ಯಾನ್‌ ಆಗಿ ಕ್ರೀಸ್‌ಗೆ ಬಂದಿದ್ದ ಆಕಾಶ್‌ ದೀಪ್‌ ನಿರೀಕ್ಷೆಗೂ ಮೀರಿದ ಆಟವನ್ನು ಪ್ರದರ್ಶಿಸಿದರು. ಇವರು 66 ರನ್‌ಗಳ ತಮ್ಮ ಚೊಚ್ಚಲ ಅರ್ಧಶತಕದ ಜೊತೆಗೆ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಜೊತೆ ಮುರಿಯದ ಮೂರನೇ ವಿಕೆಟ್‌ಗೆ 107 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ತದ ನಂತರ ಜೇಮಿ ಓವರ್ಟನ್‌ಗೆ ವಿಕೆಟ್‌ ಒಪ್ಪಿಸಿದರು.



ಆರನೇ ಟೆಸ್ಟ್‌ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್‌

ಕಳೆದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಯಶಸ್ವಿ ಜೈಸ್ವಾಲ್‌, ಓವಲ್‌ ಟೆಸ್ಟ್‌ಗೂ ಮುನ್ನ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಅದರಂತೆ ಪ್ರಥಮ ಇನಿಂಗ್ಸ್‌ನಲ್ಲಿಯೂ ಕೇವಲ ಎರಡು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಆ ತಪ್ಪು ಮಾಡಲಿಲ್ಲ. ಅವರು ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದರು. ಅವರು ಆಡಿದ 164 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 118 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ ಆರನೇ ಶತಕವನ್ನು ಪೂರ್ಣಗೊಳಿಸಿದರು.

IND vs ENG: ಚೊಚ್ಚಲ ಅರ್ಧಶತಕ ಬಾರಿಸಿ ಬೆನ್‌ ಡಕೆಟ್‌ರನ್ನು ಅಪ್ಪಿಕೊಂಡ ಆಕಾಶ್‌ ದೀಪ್‌!

ಮತ್ತೊಮ್ಮೆ ಭಾರತಕ್ಕೆ ಆಸರೆಯಾದ ಜಡೇಜಾ-ವಾಷಿಂಗ್ಟನ್‌

ಇನ್ನು ಮೂರನೇ ದಿನ ನಾಯಕ ಶುಭಮನ್‌ ಗಿಲ್‌ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕನ್ನಡಿಗ ಕರುಣ್‌ ನಾಯರ್‌ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸುವ ಮೂಲಕ ತಮಗೆ ಸಿಕ್ಕ ಮತ್ತೊಂದು ಅವಕಾಶವನ್ನು ಕೈ ಚೆಲ್ಲಿಕೊಂಡರು. ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ (53 ರನ್‌, 77 ಎಸೆತಗಳು) ಹಾಗೂ ವಾಷಿಂಗ್ಟನ್‌ ಸುಂದರ್‌ (53 ರನ್‌, 46 ಎಸೆತಗಳು) ತಲಾ ಅರ್ಧಶತಕಗಳ ಮೂಲಕ ಭಾರತ ತಂಡಕ್ಕೆ ಮತ್ತೊಮ್ಮೆ ಆಸರೆಯಾದರು. ಕೊನೆಯಲ್ಲಿ ಧ್ರುವ್‌ ಜುರೆಲ್‌ 34 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದರು.



ಇಂಗ್ಲೆಂಡ್‌ ತಂಡದ ಪರ ಜಾಶ್‌ ಟಾಂಗ್‌ 5 ವಿಕೆಟ್‌ ಸಾಧನೆ ಮಾಡಿದರೆ, ಗಸ್‌ ಅಟ್ಕಿನ್ಸನ್‌ 3 ಹಾಗೂ ಜೇಮಿ ಓವರ್ಟನ್‌ 2 ವಿಕೆಟ್‌ ಕಿತ್ತರು.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಇಂಗ್ಲೆಂಡ್‌ ತಂಡ 247 ರನ್‌ಗಳಿಗೆ ಪ್ರಥಮ ಇನಿಂಗ್ಸ್‌ ಅನ್ನು ಮುಗಿಸಿತ್ತು. ಆ ಮೂಲಕ 23 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದಿತ್ತು.