ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ವಿಮಾನದ ಎತ್ತರಮಾಪಕ

ಹಾರಾಟದ ಸಮಯದಲ್ಲಿ, ವಿಶೇಷವಾಗಿ ಒಂದು ನಿಯಂತ್ರಣ ವಲಯದಿಂದ ಇನ್ನೊಂದಕ್ಕೆ ಹೋಗುವಾಗ ಅಥವಾ ಟ್ರಾನ್ಸಿಶನ್ ಆಲ್ಟಿಟ್ಯೂಡ್ ದಾಟಿದ ನಂತರ, ಪೈಲಟ್‌ಗಳು ಸ್ಟ್ಯಾಂಡರ್ಡ್ ಒತ್ತಡ (1013.25 hPa ಅಥವಾ 29.92 inHg) ಕ್ಕೆ ಬದಲಾಯಿಸುತ್ತಾರೆ. ಹೆಚ್ಚು ಎತ್ತರದಲ್ಲಿ ಹಾರುವ ಎಲ್ಲ ವಿಮಾನಗಳು ಇದೇ ಸೆಟ್ಟಿಂಗ್ ಅನ್ನು ಬಳಸುವುದರಿಂದ, ಅವುಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

Vishweshwar Bhat Column: ವಿಮಾನದ ಎತ್ತರಮಾಪಕ

ಸಂಪಾದಕರ ಸದ್ಯಶೋಧನೆ

ವಿಮಾನವು ನೆಲದಿಂದ ಅಥವಾ ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿ ಹಾರುತ್ತಿದೆ ಎಂಬುದು ಪೈಲಟ್‌ಗಳಿಗೆ ನಿಖರವಾಗಿ ಹೇಗೆ ತಿಳಿಯುತ್ತದೆ? ಸುರಕ್ಷಿತ ಹಾರಾಟಕ್ಕೆ ವಿಮಾನ ಎಷ್ಟು ಎತ್ತರದಲ್ಲಿ ಹಾರುತ್ತಿದೆ ಎಂಬ ಸಂಗತಿ ಗೊತ್ತಿರುವುದು ಅವಶ್ಯ. ಇದಕ್ಕೆ ಆಲ್ಟಿಮೀಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಗೊತ್ತಿರಬೇಕು. ವಿಮಾನದ ಆಲ್ಟಿಮೀಟರ್ (ಎತ್ತರಮಾಪಕ) ವಿಮಾನದ ಎತ್ತರವನ್ನು ಅಳೆಯುವ ಸಾಧನ.

ಆದರೆ, ಇದರಲ್ಲಿ ಒಂದು ವಿಶೇಷ ಇದೆ- ಇದು ನೇರವಾಗಿ ಎತ್ತರವನ್ನು ಅಳೆಯುವುದಿಲ್ಲ. ಬದಲಾಗಿ, ಇದು ವಾಯು ಒತ್ತಡವನ್ನು ( air pressure) ಅಳೆದು, ಆ ಮಾಹಿತಿಯನ್ನು ಎತ್ತರವಾಗಿ ಪರಿವರ್ತಿಸು ತ್ತದೆ. ಇದರರ್ಥ, ನಿಖರವಾದ ಎತ್ತರವನ್ನು ತೋರಿಸಲು, ಆಲ್ಟಿಮೀಟರ್‌ಗೆ ಸಮುದ್ರ ಮಟ್ಟದಲ್ಲಿನ ಪ್ರಸ್ತುತ ವಾತಾವರಣದ ಒತ್ತಡ ಎಷ್ಟು ಎಂಬುದನ್ನು ತಿಳಿಸಬೇಕಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ? ಟೇಕಾಫ್‌ ಗೂ ಮೊದಲು, ಪೈಲಟ್‌ಗಳು ವಿಮಾನ ನಿಲ್ದಾಣದ ಮಾಹಿತಿ ಸೇವೆಗಳಿಂದ (ATC) ಪ್ರಸ್ತುತ ಒತ್ತಡದ ಸೆಟ್ಟಿಂಗ್ ಅನ್ನು ಪಡೆಯುತ್ತಾರೆ. ಈ ಮೌಲ್ಯವನ್ನು QNH ಎಂದು ಕರೆಯಲಾಗುತ್ತದೆ. ಇದನ್ನು ಆಲ್ಟಿಮೀಟರ್‌ನಲ್ಲಿ ಸೆಟ್ ಮಾಡಿದಾಗ, ಅದು ಸಮುದ್ರ ಮಟ್ಟದಿಂದ ವಿಮಾನದ ಎತ್ತರವನ್ನು ತೋರಿಸುತ್ತದೆ.

ಇದನ್ನೂ ಓದಿ: Vishweshwar Bhat Column: ವಿಮಾನಯಾನ ಮತ್ತು ಮೋಡ

ಹಾರಾಟದ ಸಮಯದಲ್ಲಿ, ವಿಶೇಷವಾಗಿ ಒಂದು ನಿಯಂತ್ರಣ ವಲಯದಿಂದ ಇನ್ನೊಂದಕ್ಕೆ ಹೋಗುವಾಗ ಅಥವಾ ಟ್ರಾನ್ಸಿಶನ್ ಆಲ್ಟಿಟ್ಯೂಡ್ ದಾಟಿದ ನಂತರ, ಪೈಲಟ್‌ಗಳು ಸ್ಟ್ಯಾಂಡರ್ಡ್ ಒತ್ತಡ (1013.25 hPa ಅಥವಾ 29.92 inHg) ಕ್ಕೆ ಬದಲಾಯಿಸುತ್ತಾರೆ. ಹೆಚ್ಚು ಎತ್ತರದಲ್ಲಿ ಹಾರುವ ಎಲ್ಲ ವಿಮಾನಗಳು ಇದೇ ಸೆಟ್ಟಿಂಗ್ ಅನ್ನು ಬಳಸುವುದರಿಂದ, ಅವುಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

QNH (Altitude above Mean Sea Level) ಎಂಬುದು ಆಲ್ಟಿಮೀಟರ್ ಸೆಟ್ ಮಾಡಿದಾಗ, ಸ್ಥಳೀಯ ವಾಯು ಒತ್ತಡವನ್ನು ಸಮುದ್ರ ಮಟ್ಟಕ್ಕೆ ಸರಿಹೊಂದಿಸಿದ ಪ್ರಮಾಣವನ್ನು ತೋರಿಸುತ್ತದೆ. ಸಮುದ್ರ ಮಟ್ಟದಿಂದ ನಿಮ್ಮ ವಿಮಾನದ ಎತ್ತರವನ್ನು ( altitude) ತೋರಿಸುತ್ತದೆ. ಟೇಕಾಫ್, ಲ್ಯಾಂಡಿಂಗ್ ಮತ್ತು ಕಡಿಮೆ ಎತ್ತರದಲ್ಲಿ ಹಾರಾಟ ಮಾಡುವಾಗ ಇದನ್ನು ಬಳಸಲಾಗುತ್ತದೆ.

ಇನ್ನೊಂದು ಸೆಟ್ಟಿಂಗ್ ಇದೆ ಅದನ್ನು QFE (Height above Airfield) ಅಂತಾರೆ. ಇದು ನಿರ್ದಿಷ್ಟ ವಿಮಾನ ನಿಲ್ದಾಣದ ಮೇಲ್ಮೈಯಲ್ಲಿನ ನಿಜವಾದ ವಾಯು ಒತ್ತಡ. ಇದನ್ನು ಸೆಟ್ ಮಾಡಿದಾಗ, ಆಲ್ಟಿಮೀಟರ್ ಆ ವಿಮಾನ ನಿಲ್ದಾಣದ ನೆಲದಿಂದ ನಿಮ್ಮ ವಿಮಾನದ ಎತ್ತರವನ್ನು ತೋರಿಸುತ್ತದೆ. ಆ ನಿಲ್ದಾಣದ ರನ್‌ವೇ ಮೇಲೆ ನಿಂತಾಗ, ಇದು ‘೦’ ಅಡಿಗಳನ್ನು ತೋರಿಸುತ್ತದೆ. ಇದನ್ನು ಹೆಚ್ಚಾಗಿ ಏರ್‌ಫೀಲ್ಡ ಸುತ್ತಮುತ್ತ ತರಬೇತಿ ಹಾರಾಟಕ್ಕಾಗಿ ಬಳಸಲಾಗುತ್ತದೆ.

ಟ್ರಾನ್ಸಿಶನ್ ಆಲ್ಟಿಟ್ಯೂಡ್ ದಾಟಿ ಮೇಲೆ ಹಾರುವಾಗ ಎಲ್ಲ ವಿಮಾನಗಳು ಒಂದೇ ಮಾನದಂಡ ವನ್ನು ಬಳಸುವುದರಿಂದ, ಅವುಗಳ ನಡುವೆ ಸುರಕ್ಷಿತವಾದ ಲಂಬ ಅಂತರ ( vertical separation) ಇರುತ್ತದೆ. ಈ ಎತ್ತರವನ್ನು ‘ಫ್ಲೈಟ್ ಲೆವೆಲ್’ ( Flight Level- FL) ಎಂದು ಕರೆಯುತ್ತಾರೆ. ಉದಾ ಹರಣೆಗೆ, FL 350 ಎಂದರೆ 35000 ಅಡಿ. ವಿಮಾನ ಟ್ರಾನ್ಸಿಶನ್ ಆಲ್ಟಿಟ್ಯೂಡ್ ದಾಟಿದಾಗ ಏನು ಮಾಡಬೇಕು? ವಿಮಾನವು ಮೇಲೇರುವಾಗ ಟ್ರಾನ್ಸಿಶನ್ ಆಲ್ಟಿಟ್ಯೂಡ್ ಅನ್ನು ದಾಟಿದ ತಕ್ಷಣ, ಪೈಲಟ್ ಸ್ಥಳೀಯ QNH ಸೆಟ್ಟಿಂಗ್‌ನಿಂದ ಸ್ಟ್ಯಾಂಡರ್ಡ್ ಸೆಟ್ಟಿಂಗ್‌ಗೆ ಬದಲಾಯಿಸಬೇಕು.

ಅದೇ ರೀತಿ, ಕೆಳಗೆ ಇಳಿಯುವಾಗ ಟ್ರಾನ್ಸಿಶನ್ ಲೆವೆಲ್ ದಾಟಿದಾಗ, ಸ್ಟ್ಯಾಂಡರ್ಡ್ ಸೆಟ್ಟಿಂಗ್‌ನಿಂದ ಸ್ಥಳೀಯ QNHಗೆ ಮರಳಿ ಬದಲಾಯಿಸಬೇಕು. ಇಂಥ ಸಂದರ್ಭದಲ್ಲಿ ಒಂದು ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಆಲ್ಟಿಮೀಟರ್ ಸೆಟ್ಟಿಂಗ್ ನಲ್ಲಿ ಒಂದು ಹೆಕ್ಟೋಪಾಸ್ಕಲ್ ( hPa ) ವ್ಯತ್ಯಾಸವಾದರೆ, ಎತ್ತರದಲ್ಲಿ ಸುಮಾರು 30 ಅಡಿಗಳಷ್ಟು ದೋಷ ಉಂಟಾಗುತ್ತದೆ.

ಉದಾಹರಣೆಗೆ, ನಿಜವಾದ QNH 1005 hPa ಇರುವಾಗ, ಪೈಲಟ್ ತಪ್ಪಾಗಿ 1010 hPa ಎಂದು ಸೆಟ್ ಮಾಡಿದರೆ ( 5 hP ಹೆಚ್ಚು), ಆಲ್ಟಿಮೀಟರ್ ನಿಜವಾದ ಎತ್ತರಕ್ಕಿಂತ ಸುಮಾರು 150 ಅಡಿ (5 30) ಹೆಚ್ಚು ತೋರಿಸುತ್ತದೆ. ಕೆಟ್ಟ ಹವಾಮಾನದಲ್ಲಿ ಇಳಿಯುವಾಗ ಇದು ಅತ್ಯಂತ ಅಪಾಯಕಾರಿ. ಅಮೆರಿಕದಲ್ಲಿ ಪೈಲಟ್‌ಗಳು 18000 ಅಡಿ ಎತ್ತರದಲ್ಲಿ ಸ್ಟ್ಯಾಂಡರ್ಡ್ ಒತ್ತಡಕ್ಕೆ ಬದಲಾಯಿಸುತ್ತಾರೆ.

ಆದರೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ಟ್ರಾನ್ಸಿಶನ್ ಆಲ್ಟಿಟ್ಯೂಡ್ 3000 ಅಥವಾ 5000 ಅಡಿಗಳಷ್ಟು ಕಡಿಮೆ ಇರುತ್ತದೆ. ಇದಕ್ಕೆ ಜಾಗತಿಕವಾಗಿ ಯಾವುದೇ ಏಕರೂಪ ನಿಯಮವಿಲ್ಲ. ವಾಯುಪ್ರದೇಶಗಳಲ್ಲಿ, ಪ್ರತಿಯೊಬ್ಬ ಪೈಲಟ್ ಸರಿಯಾದ ಸೆಟ್ಟಿಂಗ್ ಹೊಂದಿರುವುದು ಅತ್ಯಗತ್ಯ. ಒಬ್ಬ ಪೈಲಟ್ ತಪ್ಪು ಸೆಟ್ಟಿಂಗ್ ಹೊಂದಿದ್ದರೆ, ವಿಮಾನಗಳ ನಡುವಿನ ಸುರಕ್ಷಿತ ಅಂತರದಲ್ಲಿ ನೂರಾರು ಅಡಿಗಳ ವ್ಯತ್ಯಾಸ ಉಂಟಾಗಿ, ವೇಗವಾಗಿ ಚಲಿಸುವ ವಿಮಾನಗಳಿಗೆ ಅಪಾಯವಾಗ ಬಹುದು.