ಯುದ್ದಕಾಂಡ
ಲೀನಾ ಜೋಶಿ
ಇತಿಹಾಸದಲ್ಲಿ ಕೆಲ ಘಟನೆಗಳು ಒಂದು ದೇಶದ ರಾಜಕೀಯವನ್ನೇ ಅಲ್ಲ, ಸಂಪೂರ್ಣ ಜಗತ್ತಿನ ರಾಜಕೀಯ ಸಂಬಂಧಗಳನ್ನು ಬದಲಾಯಿಸುತ್ತವೆ. ಅಮೆರಿಕವು ಇರಾನ್ ಅನ್ನು, ಇರಾನ್ ಅಮೆರಿಕವನ್ನು ಈ ಪರಿ ಯಾಕೆ ದ್ವೇಷಿಸುತ್ತವೆ? ಇದು ನಮ್ಮನ್ನೆಲ್ಲ ಕಾಡುವ ಸಾಮಾನ್ಯ ಪ್ರಶ್ನೆ. ಇದರ ಉತ್ತರ ಅಷ್ಟು ಸರಳವಲ್ಲ. ಇದಕ್ಕೆ ಹಲವಾರು ಕಾರಣಗಳಿವೆ.
ಅದರಲ್ಲಿ ಒಂದು ಕಾರಣ- ಅಮೆರಿಕದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ಇರಾನ್ ಬರೋಬ್ಬರಿ 444 ದಿನಗಳ ಕಾಲ ಸೆರೆಯಲ್ಲಿಟ್ಟು ದೈಹಿಕ, ಮಾನಸಿಕ, ಚಿತ್ರ ಹಿಂಸೆ ನೀಡಿದ್ದು. Mark Bowden ಬರೆದ Guests of the Ayatollah ಎಂಬ ಪುಸ್ತಕ, ಇರಾನ್‌ನಲ್ಲಿ 444 ದಿನಗಳ ಕಾಲ ಬಂಧಿತರಾಗಿ ನರಳಿದ 53 ಅಮೆರಿಕನ್ನರ ಜೀವನ ವನ್ನು ಬಹಳ ಸ್ಪಷ್ಟವಾಗಿ ಚಿತ್ರಿಸುತ್ತದೆ.
ಸ್ವಾತಂತ್ರ್ಯದ ಮಹತ್ವವನ್ನು, ಮನುಷ್ಯನ ಬರಿದಾಗದ ವಿಶ್ವಾಸವನ್ನು, ನಾಳೆ ಎಂಬ ಮಹತ್ತರ ಕಲ್ಪನೆಯನ್ನು, ಭವಿಷ್ಯದ ಕನಸಿನೊಂದಿಗೆ ಜೀವಿಸುವ ಮನುಕುಲದ ಅಪರಿಮಿತ ವಿಶ್ವಾಸವನ್ನು ಇಂಚು ಇಂಚಾಗಿ ವರ್ಣಿಸುವ ಇದರ ಲೇಖಕನ ಪ್ರತಿಭೆಗೊಂದು ದೊಡ್ಡ ಸಲಾಂ!
ಇದನ್ನೂ ಓದಿ: Leena Joshi Column: ಸೈಕ್ಸ್-ಪಿಕೋಟ್ ಒಪ್ಪಂದ: ಮಧ್ಯಪ್ರಾಚ್ಯದ ದುರಂತದ ಮೂಲ
ಅದು 1979ರ ನವೆಂಬರ್ ತಿಂಗಳು. ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ ಒಂದು ಭಯಾ ನಕ ಘಟನೆ ನಡೆಯಿತು. ಅಮೆರಿಕವನ್ನು ನಖಶಿಖಾಂತ ದ್ವೇಷಿಸುತ್ತಿದ್ದ ಇರಾನಿನ ವಿದ್ಯಾರ್ಥಿಗಳ ಗುಂಪು ಅಮೆರಿಕದ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಿ, ಅಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕನ್ನರನ್ನು ಬಂದಿಯಾಗಿ ಇಟ್ಟುಕೊಂಡಿತು.
ಇದು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಚರ್ಚಿತ ಹಾಗೂ ಆಘಾತಕಾರಿ ಘಟನೆ. ಮುಂದಿನ 444 ದಿನಗಳು, ಬಂಧಿತರ ಪಾಲಿಗೆ ಅಕ್ಷರಶಃ ನರಕವಾಯಿತು. ಬಂಧಿತರನ್ನು ಮೊದಲಿಗೆ ರಾಯಭಾರ ಕಚೇರಿಯ ಇರಿಸಲಾಯಿತು. ಕೆಲವು ವಾರಗಳ ನಂತರ ಅವರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಲಾಯಿತು.
ಕೈಗಳನ್ನು ಕಟ್ಟಿ ಹಾಕಿ, ಕಣ್ಣುಗಳಿಗೆ ಬಟ್ಟೆ ಕಟ್ಟಿಸಿ, ಅವರ ಮೇಲೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಲಾಯಿತು. ಕೆಲವರನ್ನು ತಿಂಗಳುಗಳ ಕಾಲ ಒಂಟಿ ಕೊಠಡಿಗಳಲ್ಲಿ ಇರಿಸಲಾಯಿತು. ಅವರಿಗೆ ಸರಿಯಾದ ಆಹಾರವನ್ನೂ ಕೊಡುತ್ತಿರಲಿಲ್ಲ. ವಾರಗಟ್ಟಳೆ ಹಳಸಿದ ರೊಟ್ಟಿ ಮತ್ತು ನೀರನ್ನು ನೀಡಲಾಯಿತು, ಹುಳುಗಳು ತೇಲಾಡುವ ಹಾಲನ್ನು ಒತ್ತಾಯಪೂರ್ವಕವಾಗಿ ಕುಡಿಸಲಾಯಿತು.
ಅವರನ್ನು ಕೆಲವೊಮ್ಮೆ ಕುರ್ಚಿಗಳಿಗೆ ಕೈಕಾಲು ಕಟ್ಟಿ ಹಾಕಿ ದಿನಗಳ ಕಾಲ ಕುಳ್ಳಿರಿಸ ಲಾಗುತ್ತಿತ್ತು. ಕೆಲವರನ್ನು ರಾತ್ರಿಯಿಡಿ ಕೊರೆಯುವ ಚಳಿಯಲ್ಲಿ ಹೊರಗೆ ನಿಲ್ಲಿಸಲಾಗು ತ್ತಿತ್ತು. ಬಟ್ಟೆ ಬಿಚ್ಚಿ ಹೊರಗಡೆ ಗಂಟೆಗಟ್ಟಲೆ ನಿಲ್ಲಿಸಲಾಗುತ್ತಿತ್ತು. ಇನ್ನೊಂದು ಭಯಾನಕ ವಿಧಾನವೆಂದರೆ ನಕಲಿ ಮರಣದಂಡನೆ (mock execution). ಕೆಲ ಬಂಧಿತರ ತಲೆಯ ಬಳಿ ಬಂದೂಕು ಹಿಡಿದು ಈಗ ನಿಮ್ಮನ್ನು ಕೊಲ್ಲುತ್ತೇವೆ ಎಂದು ಬೆದರಿಸಲಾಗುತ್ತಿತ್ತು.
ಅವರು ತಮ್ಮ ಜೀವನದ ಕೊನೆಯ ಕ್ಷಣ ಬಂದಿದೆ ಎಂದು ಭಾವಿಸಿ ಕಣ್ಣೀರು ಹಾಕುತ್ತಿದ್ದರು. ಅವರಿಗೆ ಭಯ ಹುಟ್ಟಿಸಲು ಇಂಥ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಕೆಲವರಿಗೆ ಗುಂಡು ಹಾರಿಸುವ ನಾಟಕವನ್ನೇ ಮಾಡಲಾಗುತ್ತಿತ್ತು. ಈ ರೀತಿಯ ಭಯಾನಕ ಅನುಭವಗಳು ಹಲವರ ಮಾನಸಿಕ ಸ್ಥಿಮಿತವನ್ನು ಸಂಪೂರ್ಣವಾಗಿ ಕದಲಿಸಿಬಿಟ್ಟವು.
ಪರಸ್ಪರ ಮಾತನಾಡಲು ಯಾರಿಗೂ ಅವಕಾಶ ನೀಡಲಿಲ್ಲ. ತಿಂಗಳುಗಟ್ಟಲೆ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಲಿಲ್ಲ. ಯಾರಿಗೂ ಪತ್ರ ಬರೆಯಲು, ಮನೆಯವ ರೊಂದಿಗೆ ಮಾತನಾಡಲು ಅವಕಾಶ ಇರಲಿಲ್ಲ. ಕೆಲವರಿಗೆ ಮನೆಗಳಿಂದ ಬಂದ ಪತ್ರ ಗಳನ್ನು ತೋರಿಸಿ ಮತ್ತೆ ಕಿತ್ತುಕೊಳ್ಳುವಂಥ ಕ್ರೂರ ಆಟವನ್ನೂ ಆಡಲಾಗುತ್ತಿತ್ತು.
ದಿನಗಳು ತಿಂಗಳುಗಳಾಗಿ, ತಿಂಗಳುಗಳು ವರ್ಷವಾಗುತ್ತಾ ಹೋದವು. ಕೆಲವರು ಬದುಕುವ ಆಸೆಯನ್ನು ಸಂಪೂರ್ಣವಾಗಿ ಕಳೆದುಕೊಂಡರು. ಕೆಲವರು ಅರೆಹುಚ್ಚರಾದರು. ಈ ಎಲ್ಲಾ ಕಷ್ಟಗಳ ನಡುವೆಯೂ ಕೆಲವರು ಮನಸ್ಸಿನಲ್ಲಿ ಪ್ರಾರ್ಥನೆ ಮಾಡುತ್ತ ಬದುಕಲು ಪ್ರಯತ್ನಿಸಿದರು.
ಕೆಲವರು ತಮ್ಮ ಕುಟುಂಬದೊಂದಿಗೆ ಕಳೆದ ಕ್ಷಣಗಳನ್ನು ನೆನೆಯುತ್ತಾ ಎದೆಗುಂದದೆ ಬದುಕಲು ಪ್ರಯತ್ನಪಟ್ಟರು. ಕೆಲವರು ಪ್ರತಿದಿನ ಮನಸ್ಸಿನಲ್ಲಿ, ‘ಇಂದು ಬದುಕಿದ್ದೇವೆ ಎಂದರೆ ನಾಳೆ ಬಿಡುಗಡೆಯಾಗಬಹುದು’ ಎಂದು ಆಶಿಸುತ್ತಿದ್ದರು.
ಕೊನೆಗೂ ಆ ದಿನ ಬಂದಿತು. 1981ರ ಜನವರಿ 20ರಂದು, 444 ದಿನಗಳ ನಂತರ ಬಂಧಿತ ರನ್ನು ಬಿಡುಗಡೆ ಮಾಡಲಾಯಿತು. ಈ ಘಟನೆ ಕೇವಲ ರಾಜಕೀಯ ಸಂಕಷ್ಟವಲ್ಲ, ಜತೆಗೆ ಮಾನವ ಸಹನೆಯ ಪರೀಕ್ಷೆಯಾಗಿತ್ತು. ಅವರು 444 ದಿನಗಳವರೆಗೆ ಕೇವಲ ಬಂಧಿತ ರಾಗಿರಲಿಲ್ಲ. ಅವರು ಪ್ರತಿದಿನವೂ ಭಯದೊಂದಿಗೆ ಬದುಕಿದ ಜೀವಂತ ಶವಗಳಾಗಿದ್ದರು.
444 ದಿನಗಳ ಕಾಲ ಭಯ, ಹಸಿವು, ಏಕಾಂತ ಮತ್ತು ಅನಿಶ್ಚಿತತೆಯ ನಡುವೆ ಬದುಕಿದ ಆ ಜನರ ಕಥೆ 20ನೇ ಶತಮಾನದ ಅಮೆರಿಕದ ಇತಿಹಾಸದಲ್ಲಿ ಒಂದು ದುಃಖಭರಿತ ಅಧ್ಯಾಯ ವಾಗಿದೆ. ಈ ಸಂಕಷ್ಟದ ಹಿಂದೆ ಇರುವ ಕಾರಣಗಳನ್ನು ಅರ್ಥಮಾಡಿಕೊಳ್ಳಲು ನಾವು 1979ರ ಇರಾನ್ ಕ್ರಾಂತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೂ ಮೊದಲು ಇರಾನ್ ದೇಶದಲ್ಲಿ ಮೊಹಮ್ಮದ್ ರೆಜಾ ಪಹ್ಲವಿ (ಶಾ) ಎಂಬ ರಾಜ ಆಡಳಿತ ನಡೆಸುತ್ತಿದ್ದ. ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳು ಶಾ ಸರಕಾರವನ್ನು ಬೆಂಬಲಿಸುತ್ತಿದ್ದವು. ಆದರೆ ದೇಶ ದೊಳಗಿನ ಅಸಮಾಧಾನ ಹೆಚ್ಚುತ್ತಿತ್ತು.
1979ರಲ್ಲಿ ಜನರ ಬಂಡಾಯದಿಂದ ಶಾ ಅಧಿಕಾರದಿಂದ ಕೆಳಗಿಳಿದು ದೇಶದಿಂದ ಓಡಿ ಹೋಗಬೇಕಾಯಿತು. ಈ ಕ್ರಾಂತಿಯನ್ನು ಧಾರ್ಮಿಕ ನಾಯಕ ಆಯತೊ ಖೊಮೇನಿ ಮುನ್ನಡೆಸಿದರು. ಕ್ರಾಂತಿಯ ನಂತರ ಇರಾನ್‌ಲ್ಲಿ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆ ಯಾಯಿತು.
ಅಮೆರಿಕಕ್ಕೆ ಚಿಕಿತ್ಸೆಗಾಗಿ ತೆರಳಿದ್ದ ಶಾ, ಯಾವುದೇ ಸಮಯದಲ್ಲಿ ಇರಾನಿಗೆ ಹಿಂದಿರುಗಿ ಬಂದು ದೇಶದ ಚುಕ್ಕಾಣಿಯನ್ನು ಮತ್ತೆ ಹಿಡಿಯುವರೆಂಬ ಆತಂಕ ಇರಾನಿಯರಲ್ಲಿತ್ತು. ಅಮೆರಿಕವು ಶಾ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ಯತ್ನ ಮಾಡುತ್ತಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ, 1979ರ ನವೆಂಬರ್ 4ರಂದು ಅಮೆರಿಕದ ರಾಯಭಾರ ಕಚೇರಿಯ ಮೇಲೆ ಇರಾನಿ ಯುವಕರ ಗುಂಪು ದಾಳಿ ನಡೆಸಿತು.
ಆರಂಭದಲ್ಲಿ 66 ಜನರನ್ನು ಬಂಧಿಸಲಾಯಿತು. ನಂತರ ಮಹಿಳೆಯರು ಮತ್ತು ಆಫ್ರಿಕನ್ ಮೂಲದ ಕೆಲವರನ್ನು ಬಿಡುಗಡೆ ಮಾಡಲಾಯಿತು. ಈ ಘಟನೆ ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳನ್ನು ಸಂಪೂರ್ಣವಾಗಿ ಕೆಡಿಸಿತು. ಅಮೆರಿಕದ ಅಂದಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಬಂಧಿತರ ಬಿಡುಗಡೆಗಾಗಿ ಹಲವು ಪ್ರಯತ್ನಗಳನ್ನು ಮಾಡಿದರು.
ಮೊದಲು ಅವರು ರಾಜತಾಂತ್ರಿಕ ಮಾತುಕತೆಗಳನ್ನು ಆರಂಭಿಸಿದರು. ನಂತರ ಇರಾನ್ ಮೇಲೆ ಆರ್ಥಿಕ ಒತ್ತಡ ಹಾಕಲು ಕ್ರಮ ಕೈಗೊಂಡರು. ಅಮೆರಿಕದ ಬ್ಯಾಂಕ್‌ಗಳಲ್ಲಿ ಇರಾನ್ ಗೆ ಸೇರಿದ ಸುಮಾರು 8 ಬಿಲಿಯನ್ ಡಾಲರ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳ ಲಾಯಿತು. ಆದರೂ ಬಂಧಿತರ ಬಿಡುಗಡೆ ಸಾಧ್ಯವಾಗಲಿಲ್ಲ.
1980ರ ಏಪ್ರಿಲ್‌ನಲ್ಲಿ ಅಮೆರಿಕ ಸೇನೆ ಒಂದು ರಹಸ್ಯ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಪ್ರಯತ್ನಿಸಿತು. ಈ ಕಾರ್ಯಾಚರಣೆಗೆ ‘ಆಪರೇಷನ್ ಈಗಲ್ ಕ್ಲಾ’ (Operation Eagle Claw) ಎಂದು ಹೆಸರಿಟ್ಟಿದ್ದರು. ಆದರೆ ಈ ಕಾರ್ಯಾಚರಣೆ ವಿಫಲವಾಯಿತು.
ಹೆಲಿಕಾಪ್ಟರ್ ಮತ್ತು ವಿಮಾನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ಅಮೆರಿಕ ನ್ ಸೈನಿಕರುಸಾವನ್ನಪ್ಪಿದರು. ಇದರಿಂದ ಅಮೆರಿಕ ಸರಕಾರಕ್ಕೆ ದೊಡ್ಡ ಅವಮಾನ ಎದುರಾಯಿತು ಮತ್ತು ಬಂಧಿತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು.
ಬಂಧಿತರ ಬಿಡುಗಡೆ ವಿಳಂಬವಾಗಿದ್ದರಿಂದ, ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಜನಪ್ರಿಯತೆ ಕುಸಿಯಿತು, ಮತ್ತೊಮ್ಮೆ ಅಧ್ಯಕ್ಷ ಗಾದಿಗೇರುವ ಅವರ ಪ್ರಯತ್ನ ನೆಲಕಚ್ಚಿತು. 444 ದಿನಗಳ ಕಾಲ ಮುಂದುವರಿದ ಈ ಸಂಕಷ್ಟ ಕೊನೆಗೆ ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹಾರವಾಯಿತು.
ಅಲ್ಜೀರಿಯಾ ದೇಶದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ ನಡೆಯಿತು. 1981ರ ಜನವರಿ 20ರಂದು 53 ಬಂಧಿತರನ್ನು ಬಿಡುಗಡೆ ಮಾಡಲಾಯಿತು. ಅದೇ ದಿನ ಅಮೆರಿಕದಲ್ಲಿ ಹೊಸ ಅಧ್ಯಕ್ಷ ರೊನಾಲ್ಡ್ ರೇಗನ್ ಅಧಿಕಾರ ಸ್ವೀಕರಿಸಿದರು. ಈ ಘಟನೆ ಜಗತ್ತಿನ ರಾಜಕೀಯದಲ್ಲಿ ದೊಡ್ಡ ಪರಿಣಾಮ ಬೀರಿತು. ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳು ಇನ್ನಷ್ಟು ಹದಗೆಟ್ಟವು, ಮತ್ತೆಂದೂ ಸರಿಪಡಿಸಲಾಗದ ಪರಿಸ್ಥಿತಿ ನಿರ್ಮಾಣವಾಯಿತು.
ರಾಯಭಾರ ಕಚೇರಿಯಿಂದ ತಪ್ಪಿಸಿಕೊಂಡ 6 ಜನ 1979ರ ನವೆಂಬರ್ 4ರಂದು ಟೆಹ್ರಾನ್ ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಆಕ್ರಮಿಸಿದಾಗ ಬಹುತೇಕ ಎಲ್ಲ ಸಿಬ್ಬಂದಿಗಳನ್ನು ಬಂಧಿಸಲಾಯಿತು. ಆದರೆ ಆ ಗೊಂದಲದ ನಡುವೆ 6 ಅಮೆರಿಕನ್ ರಾಜತಾಂತ್ರಿಕರು ತಪ್ಪಿಸಿಕೊಂಡರು. ಆಗ ಇರಾನ್ ನಲ್ಲಿನ ಪರಿಸ್ಥಿತಿ ಅಪಾಯಕಾರಿ ಮಟ್ಟಕ್ಕೆ ಏರಿತ್ತು, ಅಮೆರಿಕನ್ನರನ್ನು ಕಂಡರೆ ಗುಂಡು ಹೊಡೆಯಬೇಕೆನ್ನುವ ಮನಸ್ಥಿತಿ ಅದಾಗಿತ್ತು. ಆ ಸಮಯದಲ್ಲಿ ಕೆನಡಾದ ರಾಯಭಾರಿ ಕೆನ್ ಟೇಲರ್ ಅವರಿಗೆ ರಹಸ್ಯವಾಗಿ ಆಶ್ರಯ ನೀಡಿದರು. ಸುಮಾರು ಮೂರು ತಿಂಗಳುಗಳ ಕಾಲ 6 ಮಂದಿ ಅಡಗಿಕೊಂಡೇ ಬದುಕಿದರು.
ಅಮೆರಿಕದ ಗುಪ್ತಚರ ಸಂಸ್ಥೆ Central Intelligence Agency (CIA) ಈ 6 ಜನರನ್ನು ಸುರಕ್ಷಿತವಾಗಿ ಅಮೆರಿಕಕ್ಕೆ ರವಾನಿಸಲು ಒಂದು ವಿಚಿತ್ರ ಯೋಜನೆ ರೂಪಿಸಿತು. ಸಿಐಎ ಏಜೆಂಟ್ ಟೋನಿ ಮೆಂಡೆಜ್ ಒಂದು ವಿಭಿನ್ನವಾದ ಪ್ಲಾನ್ ಮಾಡಿದರು. ಅವರು ಈ 6 ಜನರನ್ನು ಹಾಲಿವುಡ್ ಚಿತ್ರತಂಡದ ಸದಸ್ಯರಂತೆ ಬಿಂಬಿಸಿ ಇರಾನ್‌ನಿಂದ ಹೊರಗೆ ಕರೆದೊಯ್ಯಬೇಕೆಂದು ನಿರ್ಧರಿಸಿದರು.
ಸಿಐಎ ಕೃತಕ ಸಿನಿಮಾ ಯೋಜನೆ ಸೃಷ್ಟಿಸಿತು. ಆ ಸಿನಿಮಾಕ್ಕೆ Argo ಎಂದು ಹೆಸರಿಸ ಲಾಯಿತು. ಹಾಲಿವುಡ್‌ನಲ್ಲಿ ನಕಲಿ ಸಿನಿಮಾ ಕಂಪನಿ, ಪೋಸ್ಟರ್, ಸ್ಕ್ರಿಪ್ಟ್, ಪ್ರಚಾರ ಎಲ್ಲ ವನ್ನೂ ಸಿದ್ಧಪಡಿಸಿದರು. 6 ಅಮೆರಿಕನ್ನರಿಗೆ ಹೊಸ ಪಾಸ್‌ಪೋರ್ಟ್‌ಗಳನ್ನು ನೀಡಲಾ ಯಿತು. ಅವರನ್ನು ಕೆನಡಾದ ಸಿನಿಮಾ ನಿರ್ಮಾಣ ತಂಡದ ಸದಸ್ಯರೆಂದು ಬಿಂಬಿಸ ಲಾಯಿತು.
1980ರ ಜನವರಿಯಲ್ಲಿ ಅವರನ್ನು ಟೆಹ್ರಾನ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅವರ ಕೈಯಲ್ಲಿ ಸಿನಿಮಾ ಸ್ಕ್ರಿಪ್ಟ್ ಮತ್ತು ಇತರ ದಾಖಲೆಗಳಿದ್ದವು. ಇರಾನ್ ಅಧಿಕಾರಿಗಳು ಅವರ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದರು, ಅದೊಂದು ಉದ್ವಿಗ್ನ ಕ್ಷಣ. ಯಾರಾದರೂ ಅನುಮಾನಪಟ್ಟರೆ ಅವರ ಜೀವಕ್ಕೆ ಅಪಾಯವಿತ್ತು. ಕೊನೆಗೂ ವಿಮಾನ ಹಾರಿತು, ಅವರೆಲ್ಲ ಸುರಕ್ಷಿತವಾಗಿ ಇರಾನ್ ದೇಶದಿಂದ ಹೊರಬಂದಿದ್ದರು. ಈ ಕಾರ್ಯಾ ಚರಣೆಯನ್ನು ಗುಪ್ತಚರ ಇತಿಹಾಸದಲ್ಲಿ ಅತ್ಯಂತ ವಿಚಿತ್ರ ಮತ್ತು ಧೈರ್ಯಶಾಲಿ ಕಾರ್ಯಾ ಚರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಘಟನೆ ಆಧರಿಸಿ ನಂತರ Argo ಎಂಬ ಪ್ರಸಿದ್ಧ ಹಾಲಿವುಡ್ ಸಿನಿಮಾ ಕೂಡ ನಿರ್ಮಾಣವಾಯಿತು.
Guests of the Ayatollah ಕೇವಲ ಒಂದು ಪುಸ್ತಕವಲ್ಲ; ಅದು ಮಾನವ ಸಹನೆ, ಭಯ ಮತ್ತು ಆಸೆಯ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಅದ್ಭುತ ಕೃತಿ.
(ಲೇಖಕಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ)