ಇದೇ ಅಂತರಂಗ ಸುದ್ದಿ
ಕೆಲವು ವರ್ಷಗಳ ಹಿಂದಿನ ಪ್ರಸಂಗವಿದು. ಅಂದು ನಾನು ‘ವಿಜಯ ಕರ್ನಾಟಕ ಆಫೀಸಿಗೆ ಎಂದಿ ನಂತೆ ಬೆಳಗ್ಗೆ ಹತ್ತು ಗಂಟೆಗೆ ಆಗಮಿಸಿದಾಗ, ಸುಮಾರು ಐದಾರು ಜನ ನನ್ನ ಭೇಟಿಗೆ ಕುಳಿತಿದ್ದು ದ್ದನ್ನು ನೋಡಿದೆ. ಇಂಟರ್ ಕಾಮ್‌ನಲ್ಲಿ ಸೆಕ್ಯುರಿಟಿಯವ, ‘ಸಾರ್, ಧಾರವಾಡ ಸನಿಹದ ಗ್ರಾಮ ದಿಂದ (ಪ್ರಾಯಶಃ ಗರಗ) ನಿಮ್ಮನ್ನು ನೋಡಲು ಆರು ಮಂದಿ ಬಂದಿದ್ದಾರೆ’ಎಂದ. ಅವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದೆ. ಅವರೆಲ್ಲರೂ ನನ್ನ ಮುಂದೆ ಕುಳಿತರು. ಎಲ್ಲರ ಮುಖ ದಲ್ಲೂ ಬಿಗುಮಾನವಿತ್ತು. ಯಾರೂ ಮಾತಾಡುತ್ತಿರಲಿಲ್ಲ.
‘ಏನು ಯಜಮಾನರೇ, ಬಂದ ವಿಷಯವೇನು?’ ಎಂದು ಕೇಳಿದೆ. ಆಗ ಎಲ್ಲರೂ ಒಂದೇ ಸಮನೆ ಏರಿದ ದನಿಯಲ್ಲಿ ಮಾತಾಡಲಾರಂಭಿಸಿದರು. ಆಗ ನಾನು, ‘ಯಾರಾದರೂ ಒಬ್ಬರು ಮಾತ್ರ ಮಾತಾಡಿ’ಎಂದೆ. ಅದಕ್ಕೆ ಅವರಬ್ಬರು, ‘ನೋಡಿ ಸಾರ್, ಇವರು ನಮ್ಮೂರ ಹಿರಿಯರು. ಇವರು ನಿಧನರಾಗಿದ್ದಾರೆ ಎಂದು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದೀರಲ್ಲ. ನೀವು ನಂಬುವುದಿಲ್ಲ ಅಂತ ಅವರನ್ನು ಕರೆದುಕೊಂಡು ಬಂದಿದ್ದೇವೆ. ಇವರಿಗೆ ಎಂಬತ್ತೇಳು ವರ್ಷ ವಯಸ್ಸು. ಇವರು ಬದುಕಿದ್ದಾರೆ ಅಂತ ಖಾತ್ರಿ ಆತೇನ್ರೀ ಸರ’ ಎಂದರು. ನನಗೆ ಪಿಚ್ಚೆನಿಸಿತು. ಆ ಕ್ಷಣ ಏನು ಮಾತಾಡಿ ದರೂ ಅದಕ್ಕೆ ಅರ್ಥವಿಲ್ಲ ಎಂದೆನಿಸಿಬಿಟ್ಟಿತು. ಆದರೂ ಏನಾದರೂ ಹೇಳಲೇ ಬೇಕಲ್ಲ? ‘ನಮ್ಮಿಂದ ತಪ್ಪಾಗಿದೆ. ಕ್ಷಮಾ ಇರಲಿ’ ಎಂದೆ.
‘ಹಾಗೆ ಹೇಳುವುದು ಸುಲಭ. ಆದರೆ ನಾವು ಎರಡು ದಿನಗಳಿಂದ ಊಟ-ನಿದ್ದೆ ಮಾಡಿಲ್ಲ. ಊರಿನ ಮಂದಿ ಬಹಳ ಬೇಸರ ಮಾಡಿಕೊಂಡಿದ್ದಾರೆ. ಜೀವಂತ ಇರುವವರನ್ನು ಸಾಯಿಸಿಬಿಟ್ಟಿದ್ದೀರಲ್ಲ? ಇದು ಸರೀನಾ ಸಾಹೇಬ್ರೇ?’ ಎಂದು ಒಬ್ಬೊಬ್ಬರಾಗಿ ಹೇಳಲು ಆರಂಭಿಸಿದರು. ನಾನು ಏನೂ ಮಾತಾಡಲಿಲ್ಲ. ಎಲ್ಲರೂ ಒಂದು ರೌಂಡ್ ಮುಗಿಸಲಿ ಎಂದು ಸುಮ್ಮನಾದೆ. ‘ಇದನ್ನು ಹೇಳಲು ನೀವು ಬೆಂಗಳೂರಿಗೆ ಯಾಕೆ ಬರಬೇಕಿತ್ತು? ನನಗೆ ಫೋನ್ ಮಾಡಿ ಹೇಳಬಹುದಿತ್ತಲ್ಲ ಅಥವಾ ನಮ್ಮ ಹುಬ್ಬಳ್ಳಿ ಆಫೀಸಿಗೆ ಹೋಗಿ ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಬಹುದಿತ್ತಲ್ಲ. ಅಷ್ಟು ದೂರ ದಿಂದ ಯಾಕೆ ಬಂದಿರಿ.. ಛೇ .. ನಮ್ಮಿಂದ ನಿಮಗೆ ಬಹಳ ತೊಂದರೆಯಾಯಿತು. ಕ್ಷಮೆ ಇರಲಿ’ ಎಂದು ಹೇಳಿ, ದಾರಿ-ಖರ್ಚಿಗೆಂದು ಹಣ ಕೊಡಲೆಂದು ಪರ್ಸಿಗೆ ಕೈ ಹಾಕಿದೆ.
ಇದನ್ನೂ ಓದಿ: Vishweshwar Bhat Column: ಅನುವಾದವೇ ಆಧಾರ
‘ಸಾರ್, ನಮಗೆ ಅದು ಮುಖ್ಯ ಅಲ್ಲ. ನಮಗೆ ನಿಮ್ಮ ಹಣ ಬೇಡ. ನೀವು ಕೊಟ್ಟರೂ ನಾವು ತೆಗೆದು ಕೊಳ್ಳುವುದಿಲ್ಲ. ಇವರು ಸತ್ತಿಲ್ಲ ಎಂದು ನಿಮ್ಮ ಪತ್ರಿಕೆಯಲ್ಲಿ ಇವರ ಫೋಟೋ ಸಮೇತ ಪ್ರಕಟ ಮಾಡಿ ಪುಣ್ಯ ಕಟ್ಟಿಕೊಳ್ಳಿ ಸಾಕು’ ಎಂದು ಹೇಳಿದರು. ಅದಕ್ಕೆ ನಾನು ಸಮ್ಮತಿಸಿದೆ. ‘ನಾಳಿನ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ’ ಎಂದು ಹೇಳಿ ಅವರನ್ನು ಸಂತೈಸಿ, ಕಾಫಿ-ಬಿಸ್ಕತ್ ಕೊಟ್ಟು ಕಳುಹಿಸಿದೆ.
ತಕ್ಷಣ ನಮ್ಮ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡೆ. ಅವರು ರಾತ್ರಿ ಪಾಳೆಯದಲ್ಲಿದ್ದವರು ಮಾಡಿದ ಯಡವಟ್ಟಿನಿಂದ ಹೀಗಾಗಿದೆ ಎಂದು ಏನೋ ಸಮಜಾಯಿಶಿ ಕೊಟ್ಟರು. ‘ಆದದ್ದು ಆಯಿತು, ಈ ಬಗ್ಗೆ ಸ್ಪಷ್ಟನೆ ಹಾಕಿ, ಅದನ್ನು ಹುಬ್ಬಳ್ಳಿ ಆವೃತ್ತಿಯಲ್ಲಿ ಮಾತ್ರ ಪ್ರಕಟಿಸಿ ಮತ್ತು ನಾವು ಯಾರು ಸತ್ತಿದ್ದಾರೆ ಎಂದು ಪ್ರಕಟಿಸಿದ್ದೇವೋ, ಅವರ ಫೋಟೋ ಹಾಕಲು ಮರೆಯಬೇಡಿ’ ಎಂದು ಸೂಚಿಸಿದೆ. ಅದಕ್ಕೆ ಅವರು ಆಯಿತು ಎಂದರು. ಅಲ್ಲಿಗೆ ನಾನು ಆ ಪ್ರಸಂಗ ವನ್ನು ಮರೆತುಬಿಟ್ಟೆ. ಮರುದಿನ ಅದೇ ಗ್ರಾಮಸ್ಥರ ಪೈಕಿ ಬಹಳ ಮಾತಾಡುತ್ತಿದ್ದ ಒಬ್ಬರು ಫೋನ್ ಮಾಡಿ, ‘ಏನ್ ಸಾರ್, ನಮ್ಮ ಊರಿನ ಹಿರಿಯರ ಸಾವಿನ ಸುದ್ದಿ ತಪ್ಪಾಗಿ ಪ್ರಕಟವಾಗಿದೆ ಎಂದು ಹೇಳಿ ವಿಷಾದ ಕೋರಿದ್ದೀರಿ, ಸರಿ. ಆದರೆ ಮತ್ತೊಂದು ಭಾನಗಡಿ ಮಾಡಿದ್ದೀರಲ್ಲ?’ ಎಂದರು.
ನನಗೆ ಧಸಕ್ಕೆಂದಿತು. ‘ಏನಾಯ್ತು ಸ್ವಾಮಿ?’ ಎಂದೆ. ‘ನಮ್ಮ ಊರಿನ ಹಿರಿಯರ ಫೋಟೋ ಇನ್ಯಾರದೋ ಸಾವಿನ ಸುದ್ದಿ ಜತೆ ಪ್ರಕಟವಾಗಿದೆಯಲ್ಲ?’ ಎಂದರು. ನನ್ನ ಬಾಯಿಂದ ಮಾತುಗಳೇ ಹೊರಡಲಿಲ್ಲ. ಸಾವಿರ ಚೇಳುಗಳು ಒಂದೇ ಸಮನೆ ಕುಟುಕಿದ ಅನುಭವ. ‘ಸ್ವಾಮೀ, ಕ್ಷಮಾ ಮಾಡ್ರಪ್ಪ ಮತ್ತೊಮ್ಮೆ’ ಎಂದೆ. ‘ಇಷ್ಟಕ್ಕೇ ಮತ್ತೆ ಬೆಂಗಳೂರಿಗೆ ಬರಬ್ಯಾಡ್ರಿ.. ನಾಳಿನ ಪತ್ರಿಕೆಯಲ್ಲಿ ಸರಿ ಮಾಡ್ತೇನೆ’ ಎಂದು ಹೇಳಿದೆ. ಅದಕ್ಕೆ ಆತ, ‘ಸರ್, ಏನೂ ಮಾಡಬ್ಯಾಡ್ರಿ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡ್ರಿ. ಮತ್ತೆ ನೀವು ಬರೆಯೋದು.. ಅದರಲ್ಲಿ ಇನ್ನೇನೋ ಸಮಸ್ಯೆ ಆಗೋದು.. ಮತ್ತೆ ನಾವು ಬೆಂಗಳೂರಿಗೆ ಬರೋದು.. ಯಾವ್ಡೂ ಬ್ಯಾಡ ಅಂತ ಹೇಳೋಣ ಅಂತ ನಿಮಗೆ ಫೋನ್ ಹಚ್ಚೇನಿ’ ಎಂದ. ನಾನು ‘ಉಸ್ಸಪ್ಪಾ’ ಎಂದು ತಲೆ ಮೇಲೆ ಕೈಹೊತ್ತು ಕುಳಿತು ಬಿಟ್ಟೆ. ಇತ್ತೀಚಿಗೆ ನಾನು, ಲಂಡನ್‌ನ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸಂಪಾದಕರ ಸ್ಪಷ್ಟನೆಯನ್ನು ಓದುತ್ತಿದ್ದೆ.
ಅವರು ಬರೆದಿದ್ದರು- Due to a typing error, we had published in yesterday edition that Eric Lyday was on drugs. The story should have read that Lyday was on drums. We regret the error. ಇದನ್ನು ಓದುವಾಗ ಯಾಕೋ ಮೇಲಿನ ಪ್ರಸಂಗ ನೆನಪಾಯಿತು.
ಕೋಸಂಬರಿ ಕುರಿತು
ವಿಶೇಷ ಸಂದರ್ಭದಲ್ಲಿ ಊಟದಲ್ಲಿ ಕೋಸಂಬರಿ ಇರಬೇಕು ತಾನೇ? ಈಗಂತೂ ವೈದ್ಯರು ಕುರುಕಲು ತಿಂಡಿಯನ್ನು ಸೇವಿಸುವ ಬದಲು, ಬಾಯಿ ಬೇಡಿದಾಗ, ಕೋಸಂಬರಿ ಸೇವಿಸಿ ಎಂದು ಹೇಳುವು ದುಂಟು. ಕಾರಣ ಇದು ಆರೋಗ್ಯಕ್ಕೆ ಉತ್ತಮ ಮತ್ತು ಅದನ್ನು ಸೇವಿಸುವುದರಿಂದ ಯಾವ ಅಡ್ಡ ಪರಿಣಾಮವೂ ಆಗುವುದಿಲ್ಲ. ಅಷ್ಟಕ್ಕೂ ಕೋಸಂಬರಿ ಒಂದು ಸಲಾಡ್. ಈ ಕೋಸಂಬರಿ ಹೆಸರಿನ ಮೂಲವೇನು? ಯಾವಾಗಿನಿಂದ ಈ ಹೆಸರು ಬಂತು? ಎಂಬ ಪ್ರಶ್ನೆಯನ್ನು ಯಾರೋ ‘ಕೋರ’ ವೆಬ್ ಸೈಟಿನಲ್ಲಿ ಕೇಳಿದ್ದರು. ಅದಕ್ಕೆ ನಂದೀಶ್ ಎಚ್.ಎನ್. ಎಂಬುವವರು ಉತ್ತರಿಸಿದ್ದರು. ಅವರ ಪ್ರಕಾರ, ಸಂಸ್ಕೃತದ ಕುಸ್ತುಂಬರೀ/ಕುಸ್ತುಂಬುರು ಪದದ ಅರ್ಥ ಧನಿಯಾ ಗಿಡ. ಈ ಪದ ಕನ್ನಡಕ್ಕೆ ಬಂದು, ಅದೇ ಅರ್ಥದ ಕೊತ್ತಂಬರಿ ಆಯಿತು. ಆದರೆ ಇದೇ ಪದ ಮರಾಠಿಗೆ ಹೋದಾಗ, ಕೋಶಿಂಬೀರ್/ ಕೋಶಿಂಬರೀ/ಕೋಶಿಂಬೀರಿಕಾ ಎಂದು ಬದಲಾಯಿತು. ಅಷ್ಟೇ ಅಲ್ಲ, ಅದರ ಅರ್ಥವೂ ಸಲಾಡ್ ಅಥವಾ ಪಳಿದ್ಯ ಎಂದು ಬದಲಾಯಿತು. ಮರಾಠಿಯಿಂದ ಕನ್ನಡಕ್ಕೆ, ತಮಿಳಿಗೆ, ತುಳುಗೆ ಅದೇ ಅರ್ಥದಲ್ಲಿ ಬಂದದ್ದು ಕೋಸಂಬರಿ/ಕೋಸುಂಬರಿ/ ಕುಸುಂಬರಿ ಆಯಿತು. ಕಿಟ್ಟೆಲ್ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು, ಮರಾಠಿ-ಕನ್ನಡ ನಿಘಂಟು, ಸಂಸ್ಕೃತ ನಿಘಂಟು, ಮರಾಠಿ-ಹಿಂದೀ-ಇಂಗ್ಲಿಷ್ ನಿಘಂಟುಗಳಲ್ಲಿ ಸಹ ಕೋಸಂಬರಿ ಬಗ್ಗೆ ಪ್ರಸ್ತಾಪವಿದೆ. ಕಡಲೆಬೇಳೆ ಅಥವಾ ಹೆಸರುಬೇಳೆಯನ್ನು ನೀರಲ್ಲಿ ನೆನೆಸಿ, ಸೌತೆಕಾಯಿ, ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ನಿಂಬೆಹಣ್ಣಿನ ರಸ, ಉಪ್ಪು ಇವುಗಳನ್ನು ಕೂಡಿಸಿ ಒಗ್ಗರಣೆ ಹಾಕಿ ತಯಾರಿ ಸುವ ಒಂದು ಬಗೆಯ ತಿನಿಸೇ ಕೋಸುಂಬರಿ, ಕುಸುಂಬರಿ ಅಥವಾ ಕೋಸಂಬರಿ. ಕೋಸಂಬರಿ ಒಂದು ಸಾಂಪ್ರದಾಯಿಕ ಸಲಾಡ್ ಕೂಡ ಹೌದು. ಇದರಲ್ಲಿ ಸಾಸಿವೆ, ಉದ್ದಿನಕೊತ್ತಂಬರಿ, ಈರುಳ್ಳಿ, ತೆಂಗಿನಕಾಯಿ, ನಿಂಬೆ ರಸ ಮತ್ತು ಉಪ್ಪು ಸೇರಿಸಲಾಗುತ್ತದೆ. ಕೋಸಂಬರಿಯನ್ನು ಸಾಮಾನ್ಯವಾಗಿ ಊಟದೊಂದಿಗೆ ಸೇವಿಸಲಾಗುತ್ತದೆ. ಇದು ರುಚಿಕರ ಮತ್ತು ಆರೋಗ್ಯಕರ ಆಹಾರವಾಗಿದೆ. ಕೋಸಂಬರಿಯು ಹಸಿರು ಬೇಳೆ ಮತ್ತು ತರಕಾರಿಗಳಿಂದ ತಯಾರವಾಗುವ ಕಾರಣ, ಇದರಲ್ಲಿ ಪ್ರೋಟೀನ್, ಕಬ್ಬಿಣ, ವಿಟಮಿನ್ ಎ ಮತ್ತು ಸಿ ಇತ್ಯಾದಿ ಪೋಷಕಾಂಶಗಳಿದ್ದು, ಹಸಿವು ತಣಿಸಲು ಮತ್ತು ದೇಹಕ್ಕೆ ಪೋಷಣೆಯನ್ನು ಒದಗಿಸಲು ಸಹಾಯಕವಾಗಿದೆ.
ಕೋಸಂಬರಿ ತಯಾರಿಸಲು, ಮೊದಲು ಬೇಳೆಯನ್ನು ನೆನೆಸಿ, ನಂತರ ಅದನ್ನು ಬೇಯಿಸಿ ತಣಿಸಿ ಕೊಳ್ಳಬೇಕು. ನಂತರ, ಸಾಸಿವೆ, ಉದ್ದಿನಕೊತ್ತಂಬರಿ, ಈರುಳ್ಳಿ, ತೆಂಗಿನಕಾಯಿ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೋಸಂಬರಿಯನ್ನು ತಣಿಸಿ ಸೇವಿಸಬೇಕು ಎಂಬ ವಿವರಗಳಿವೆ. ಕೋಸಂಬರಿಯನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು. ಕೆಲವರು ಕೋಸಂಬ ರಿಗೆ ಕ್ಯಾರೆಟ್, ಸೌತೆಕಾಯಿ, ಬೆಳ್ಳುಳ್ಳಿ ಅಥವಾ ಮೆಣಸಿನಕಾಯಿಯನ್ನೂ ಸೇರಿಸುತ್ತಾರೆ. ಕೋಸಂಬರಿ ಯನ್ನು ಸಾಮಾನ್ಯವಾಗಿ ಉಡುಪಿ ಪಾಕಪದ್ಧತಿಯಲ್ಲಿ ಸೇವಿಸಲಾಗುತ್ತದೆ.
ಶಂಖಪಾಷಾಣ ಅಂದ್ರೆ ಏನು?
ಇತ್ತೀಚೆಗೆ ಓದುಗರೊಬ್ಬರು, Ask The Editor ಅಂಕಣಕ್ಕೆಂದು ‘ಶಂಖಪಾಷಾಣ ಎಂದರೆ ಏನು?’ ಎಂಬ ಪ್ರಶ್ನೆ ಕಳಿಸಿದ್ದರು. ಆದರೆ ಆ ಅಂಕಣದಲ್ಲಿ ಈ ಪ್ರಶ್ನೆ ಸೂಕ್ತವಾಗದ್ದರಿಂದ ಅದಕ್ಕೆ ಇಲ್ಲಿ ಉತ್ತರಿಸುತ್ತಿದ್ದೇನೆ. ಅವರು ಆ ಪದದ ಅರ್ಥ ಕೇಳುವ ಬದಲು ಅದನ್ನು ಸೇವಿಸುವ ಬಗ್ಗೆ ಕೇಳಿದ್ದರೆ ಆ ಅಂಕಣದಲ್ಲಿಯೇ ಉತ್ತರಿಸುತ್ತಿದ್ದೆ, ಇರಲಿ. ನಾನು ಶಿರಸಿ ಸಮೀಪದ ಹೈಸ್ಕೂಲಿನಲ್ಲಿ ಓದುವಾಗ ನಮಗೆ ಎಸ್.ಪಿ.ಭಟ್ ಎಂಬ ಹೆಡ್ ಮಾಸ್ತರರಿದ್ದರು. ಅವರು ಸಂಸ್ಕೃತ ಪಾಠ ಮಾಡುತ್ತಿದ್ದರು. ಅವರ ಬಾಯಿಂದ ವಿಶೇಷ ಪದಗಳು ಉದುರುತ್ತಿದ್ದವು. ನಾವು ತಡವಾಗಿ ಕ್ಲಾಸಿಗೆ ಬಂದರೆ, ಗದರುತ್ತಿದ್ದರು. ‘ತಡವಾಗಿ ಬಂದಿದ್ದು ಯಾಕೆ?’ ಎಂದು ಕೇಳಿದರೆ, ನಾವು ತಲೆತಗ್ಗಿಸಿ ಸುಮ್ಮನೆ ನಿಂತಿರುತ್ತಿದ್ದೆವು. ‘ಏನ್ರಯ್ಯಾ, ಯಾಕೆ ತಡವಾಯ್ತು ಅಂತ ಬೊಗಳಿ, ಶಂಖಪಾಷಾಣ ಕುಡಿದವರಂತೆ ನಿಂತಿದ್ದೀರಲ್ಲ?’ ಎಂದು ದಬಾಯಿಸುತ್ತಿದ್ದರು. ಆಗ ನನಗೆ ಶಂಖಪಾಷಾಣ ಪದದ ಅರ್ಥ ಗೊತ್ತಿರ ಲಿಲ್ಲ. (ಇಲಿ) ಪಾಷಾಣ ಅಂದ್ರೆ ವಿಷ ಎಂದಷ್ಟೇ ಗೊತ್ತಿತ್ತು. ಶಂಖಪಾಷಾಣ ಅಂದರೂ ಏನೋ ಒಂದು ರೀತಿಯ ವಿಷ ಇದ್ದಿರಬಹುದು ಎಂದು ಅಂದುಕೊಂಡಿದ್ದೆ. ಆ ಪಾಷಾಣಕ್ಕೆ ಶಂಖವೇಕೆ ಸೇರಿಕೊಂಡಿತು ಎಂಬುದನ್ನು ತಿಳಿಯುವ ಕುತೂಹಲವಿತ್ತು. ಆದರೆ ಹೆಡ್ ಮಾಸ್ತರರಿಂದ ಬೈಸಿಕೊಳ್ಳುವಾಗ ಆ ಪದದ ಅರ್ಥವನ್ನು ಹೇಗೆ ಕೇಳುವುದು? ಅದಾದ ಬಳಿಕ ಆ ಪದ ಮರೆತೇ ಹೋಗಿತ್ತು. ಕಾರಣ ನಂತರ ಯಾರೂ ಆ ಪದ ಬಳಸಿದ್ದನ್ನು ನಾನು ಓದಿರಲಿಲ್ಲ, ಕೇಳಿರಲಿಲ್ಲ. ನಾನು ‘ವಿಜಯ ಕರ್ನಾಟಕ’ ಸಂಪಾದಕನಾಗಿದ್ದಾಗ, ತಮ್ಮ ಅಂಕಣ ಬರಹವೊಂದರಲ್ಲಿ, ಶತಾವಧಾನಿ ಆರ್.ಗಣೇಶ್ ಅವರು ‘ಶಂಖಪಾಷಾಣ’ ಎಂಬ ಪದವನ್ನು ಬಳಸಿದ್ದರು. ನನಗೆ ಆಗ ತಟ್ಟನೆ ನೆನಪಾದವರು ನನ್ನ ಹೆಡ್ ಮಾಸ್ಟರ್ ಎಸ್.ಪಿ.ಭಟ್ಟರು. ನಾನು ಅದರ ಅರ್ಥವನ್ನು ತಿಳಿದುಕೊಳ್ಳಲು ಶತಾವಧಾನಿಗಳಿಗೆ ಫೋನ್ ಮಾಡಿದೆ. ಆ ದಿನಗಳಲ್ಲಿ ಅವರು ಮೊಬೈಲ್ ಬಳಸುತ್ತಿರಲಿಲ್ಲ. ಲ್ಯಾಂಡ್ ಲೈನ್‌ಗೆ ಸಂಪರ್ಕಿಸಿದಾಗ, ಅವರ ತಾಯಿ ಫೋನ್ ಎತ್ತಿಕೊಂಡರು. ‘ಗಣೇಶ್ ಹೊರಹೋಗಿದ್ದಾನೆ’ ಎಂದು ಹೇಳಿದರು. ನನಗೆ ನಿರಾಸೆಯಾಯಿತು. ನಂತರ ನಾನು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಸಂಪರ್ಕಿಸಿದೆ. ಅವರು ಸುಮಾರು ಹತ್ತು ನಿಮಿಷ ಆ ಪದದ ಅರ್ಥವನ್ನು ವಿವರಿಸಿದ್ದು ನನ್ನ ಕಿವಿಯಲ್ಲಿ ಶಂಖನಾದದಂತೆ ಮೊಳಗುತ್ತಿದೆ. ಶಂಖಪಾಷಾಣ ಎಂದರೆ ಆರ್ಸೆನಿಕ್ ಎಂಬ ರಾಸಾಯನಿಕ. ಇದು ಒಂದು ಲೋಹವಲ್ಲದ ಪದಾರ್ಥವಾಗಿದ್ದು, ಭೂಮಿಯ ಹೊರಪದರದಲ್ಲಿ ಸಾಮಾನ್ಯವಾಗಿ ಇತರ ಖನಿಜಗಳೊಂದಿಗೆ ಸಂಯೋಜನೆಯಾಗಿ ಕಂಡುಬರುತ್ತದೆ. ಆರ್ಸೆನಿಕ್ ತನ್ನ ವಿಷಕಾರಿ ಗುಣಲಕ್ಷಣಗಳಿಗೆ ಹೆಚ್ಚು ಪ್ರಸಿದ್ಧ. ಘನಸ್ಥಿತಿಯಲ್ಲಿ ಕಂಡುಬರುವ ಆರ್ಸೆನಿಕ್, ಬೆಳ್ಳಿಯ ಬಣ್ಣದಿಂದ ಕಪ್ಪು ಬಣ್ಣದವರೆಗೆ ವಿವಿಧ ಬಣ್ಣಗಳಲ್ಲಿ ಇರಬಹುದು. ಆಯುರ್ವೇದ ರಸಶಾಸ್ತ್ರ ಗ್ರಂಥದಲ್ಲಿ ವಿಷಕ್ಕೆ ಶಂಖಪಾಷಾಣ, ಗೌರಿ ಪಾಷಾಣ ಎಂದೂ ಹೇಳಲಾಗಿದೆ. ಆರ್ಸೆನಿಕ್‌ನ ವಿಷಕಾರಿ ಗುಣದಿಂದ ಇಂದು ಅದನ್ನು ಔಷಧದಲ್ಲಿ ಬಳಸುವುದಿಲ್ಲ. ಇದನ್ನು ಕೀಟನಾಶಕಗಳು, ಗಾಜು, ಮರದ ಸಂರಕ್ಷಕಗಳು ಮತ್ತು ಅರೆವಾಹಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆರ್ಸೆನಿಕ್ ಹೆಚ್ಚಿನ ಪ್ರಮಾಣ ದಲ್ಲಿರುವ ಪದಾರ್ಥಗಳನ್ನು ಸೇವಿಸಿದರೆ ವಾಂತಿ, ಹೊಟ್ಟೆ ನೋವು, ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವ್ಯಕ್ತಿ ಸಾಯಲೂಬಹುದು. ಕೆಲವು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಆರ್ಸೆನಿಕ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಜತೆಗೆ, ಕೈಗಾರಿಕಾ ತ್ಯಾಜ್ಯ ಮತ್ತು ಕೃಷಿ ಚಟುವಟಿಕೆ ಗಳಿಂದಾಗಿ ನೀರು ಮತ್ತು ಮಣ್ಣಿನಲ್ಲಿ ಆರ್ಸೆನಿಕ್ ಮಾಲಿನ್ಯ ಉಂಟಾಗಬಹುದು. ಆರ್ಸೆನಿಕ್ ಮಾಲಿನ್ಯದಿಂದಾಗಿ ಮನುಷ್ಯರು ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆರ್ಸೆನಿಕ್ ಅನ್ನು ’ಕಿಂಗ್ ಆಫ್ ಪಾಯ್ಸನ್’ ಎಂದು ಕರೆಯುವುದುಂಟು. ವಿಚಿತ್ರ ಅಂದ್ರೆ ಇದನ್ನು ಕಾಯಿಸಿದಾಗ ಅದು ಕರಗುವುದಿಲ್ಲ. ಹಾಗಂತ ತಟ್ಟನೆ ಗಾಳಿಯಲ್ಲಿ ಆವಿಯಾಗಿ ಹೋಗುತ್ತದೆ.
ಇಂಗ್ಲಿಷ್ ಪದಕೋಶದಲ್ಲಿ Arsenic is a naturally occurring, toxic, semi metallic element that can be found in the Earth's crust, air, water, and soil. It can also be released into the environment through industrial and agricultural processes, such as mining and metal smelting ಎಂದು ವಿವರಿಸಲಾಗಿದೆ. ಪಿರಿಯಾಡಿಕ್ ಟೇಬಲ್ (ಆವರ್ತಕ ಕೋಷ್ಟಕ) ನಲ್ಲಿ ಮೂವತ್ಮೂರನೇ ಸ್ಥಾನದಲ್ಲಿರುವ ಆರ್ಸೆನಿಕ್ As ಎಂದೇ ಪರಿಚಿತ. ಪಾಷಾಣಕ್ಕೆ ವಿಷ ಎಂಬ ಅರ್ಥ ಇರುವಂತೆ, ಸಂಸ್ಕೃತ ಹಾಗೂ ಪ್ರಾಕೃತದಲ್ಲಿ ಪಾಷಾಣ ಅಂದ್ರೆ ಕಲ್ಲು, ಬಂಡೆ ಎಂಬ ಅರ್ಥವೂ ಇದೆ. ಶಂಖ ಎಂದರೆ ಸಮುದ್ರದಲ್ಲಿ ಸಿಗುವ, ಪೂಜಾಕಾರ್ಯಗಳಲ್ಲಿ ಬಳಸುವ, ವಾದ್ಯವಾಗಿ ಊದುವ, ಒಂದು ವಿಶೇಷವಾದ ಶಂಖದ ಆಕಾರದ ವಸ್ತು. ಪಾಷಾಣ ಎಂದರೆ ಕಲ್ಲು ಅಥವಾ ಬಂಡೆ. ಶಂಖಪಾಷಾಣ ಎಂದರೆ ಶಂಖದ ಆಕಾರದ ಕಲ್ಲು ಅಥವಾ ಶಂಖದಂಥ ಗುಣಗಳನ್ನು ಹೊಂದಿರುವ ಕಲ್ಲು ಎಂದರ್ಥ. ಇದು ಆರ್ಸೆನಿಕ್ ರೂಪಕ್ಕೂ ಹೋಲುತ್ತದೆ.
‘ಪರರ ವಸ್ತು ಪಾಷಾಣ’ ಎನ್ನುವ ನಾಣ್ಣುಡಿಯನ್ನು ಕೇಳಿರಬಹುದು. ಅಂದರೆ ‘ಬೇರೆಯವರ ವಸ್ತು ಕೆಲಸಕ್ಕೆ ಬಾರದ ಕಲ್ಲು’ ಎಂದರ್ಥ. ಪುರಾಣಗಳಲ್ಲಿ, ಶಂಖಪಾಷಾಣವನ್ನು ದೇವರುಗಳ ಆಯುಧ ಅಥವಾ ಅಲಂಕಾರವಾಗಿ ಚಿತ್ರಿಸಲಾಗಿದೆ. ವಿಷ್ಣು ತನ್ನ ಕೈಯಲ್ಲಿ ಶಂಖವನ್ನು ಹಿಡಿದಿರುವ ಚಿತ್ರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಶಂಖಪಾಷಾಣವನ್ನು ಧಾರ್ಮಿಕ ಆಚರಣೆಗಳಲ್ಲಿ ಶುಭ ಸಂಕೇತವಾಗಿ ಬಳಸಲಾಗುತ್ತದೆ. ಶಂಖವು ಜಯ, ವೈಭವ ಮತ್ತು ಶುದ್ಧತೆಯ ಸಂಕೇತ ವಾಗಿದ್ದರೆ, ಕಲ್ಲು ಸ್ಥಿರತೆ ಮತ್ತು ಅಚಲತೆಯ ಸಂಕೇತ.
ಸಚೇತಕ ಕುರಿತು
ಮೊದಲ ಬಾರಿಗೆ ‘ರೌಂಡ್ ಟೇಬಲ್ ಕಾನೆರೆನ್ಸ್’ ನಡೆದಾಗ, ಕನ್ನಡದಲ್ಲಿ ಅದನ್ನು ಹೇಗೆ ಅನುವಾದಿ ಸುವುದು ಎಂಬ ಜಿಜ್ಞಾಸೆ ಮೂಡಿ, ಕೊನೆಗೆ ಸಿದ್ದವನಹಳ್ಳಿ ಕೃಷ್ಣ ಶರ್ಮ ಅವರು ‘ದುಂಡುಮೇಜಿನ ಸಭೆ, ದುಂಡುಮೇಜಿನ ಪರಿಷತ್ತು’ ಎಂದು ಟಂಕಿಸಿದರು. ಆ ಪದ ಈಗಲೂ ಬಳಕೆಯಲ್ಲಿದೆ. ಅದು ಮೂಲ ಆಂಗ್ಲಪದಕ್ಕಿಂತ ಹೆಚ್ಚು ಆಪ್ತವೆನಿಸುವಂತಿದೆ. Whip ಅಥವಾ Chief Whip ಪದಕ್ಕೆ ಸಚೇತಕ ಅಥವಾ ಮುಖ್ಯ ಸಚೇತಕ ಎಂದು ಯಾರು ಅನುವಾದ ಮಾಡಿದರೋ ಗೊತ್ತಿಲ್ಲ. ಇದೂ ಸಹ ಒಳ್ಳೆಯ ಅನುವಾದವೇ. ‘ಪದಾರ್ಥ ಚಿಂತಾಮಣಿ’ ಕೃತಿಯಲ್ಲಿ ಪಾವೆಂ ಆಚಾರ್ಯರು, ಸಚೇತಕ ಪದದ ಬಗ್ಗೆ ಹೀಗೆ ಬರೆದಿದ್ದಾರೆ - ಈ ಶಬ್ದವನ್ನು ಇಂಗ್ಲಿಷ್ ಭಾಷೆಯಲ್ಲಿ ರಾಜಕಾರಣದಲ್ಲಿ ಉಪಯೋಗಿಸುವ Whip ಎಂಬ ಅಧಿಕಾರವನ್ನು ಸೂಚಿಸಲು ಕನ್ನಡದಲ್ಲಿ ಅನುವಾದ ಮಾಡಿ ಕೊಂಡಿದ್ದಾರೆ. Whip ಎಂದರೆ ರಾಜಕೀಯ ಪಕ್ಷದಲ್ಲಿ ಶಿಸ್ತನ್ನು ಕಾಪಾಡುವುದಕ್ಕಾಗಿ ನೇಮಕಗೊಂಡ ಅಧಿಕಾರಿ ಎಂದರ್ಥ. ಅವನು ಸಮಯ ಬಂದಾಗ ರಾಜಕೀಯ ಪಕ್ಷದ ಎಲ್ಲ ಸದಸ್ಯರೂ ಸದನದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು. Whip ಶಬ್ದಕ್ಕೆ ಚಾವಟಿ ಎಂಬ ಅರ್ಥವೂ ಇದೆ. ಕುದುರೆಗಾಡಿ ಯನ್ನು ನಡೆಸುವವನು, ಕುದುರೆಯನ್ನು ಓಡಿಸುವ ಚಾವಟಿಯೂ ಆಗಬಹುದು. ಸಂಸ್ಕೃತದಲ್ಲಿ ಯೂ ಆ ಅರ್ಥವೇ ಇದೆ. ಚೈತನ್ಯವನ್ನುಂಟುಮಾಡುವ ಶಕ್ತಿಯುಳ್ಳ ವನು ಎಂದರ್ಥ. ಈ ಕಾರಣದಿಂದ ಆ ಶಬ್ದವನ್ನು ಅರ್ಥವತ್ತಾಗಿ ಆರಿಸಿದ್ದಾರೆ. ಅದು ರಾಜಕೀಯ ವಾಗಿಯೂ ಅರ್ಥವತ್ತಾಗಿದೆ.