ಹೊಂಗನಸು
ಡಾ.ಜಗದೀಶ್ ಮಾನೆ
ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಕೆಲವು ಪುಟಗಳಿವೆ. ಅವುಗಳನ್ನು ತೆರೆದಾಗ ಮೈ ರೋಮಾಂಚನ ಗೊಳ್ಳುತ್ತದೆ. 1964ರ ಆ ದಿನಗಳು ಅಂತವು. ದೇಶ ಸ್ವಾತಂತ್ರ್ಯದ ಹೊಸ್ತಿಲಲ್ಲಿತ್ತು; ಆದರೆ ಆ ಹೊಸ್ತಿಲಿನ ಆಚೆ ಸ್ವಾತಂತ್ರ್ಯದ ಬೆಳಕು ಕಾಣುತ್ತಿದ್ದರೆ, ಈಚೆ ಗೊಂದಲ, ಅನಿಶ್ಚಿತತೆ, ಹಿಂಸಾಚಾರ ಮತ್ತು ವಿಭಜನೆಯ ಕತ್ತಲೆ ಆವರಿಸಿತ್ತು. ಯಾವುದೇ ಸವಲತ್ತುಗಳಿರಲಿಲ್ಲ. ಯಾವುದೇ ನಿಶ್ಚಿತ ನಿಯಮಗಳಿರಲಿಲ್ಲ. ಯಾವುದೇ ಸಮರ್ಪಕ ಸಂಪನ್ಮೂಲಗಳಿರಲಿಲ್ಲ.
ಕಣ್ಮುಂದೆ ಇದ್ದದ್ದು ಕೇವಲ ಹರಿದು ಹಂಚಿಹೋಗಿದ್ದ, ಅಪಾಯದ ಅಂಚಿನಲ್ಲಿದ್ದ ಒಂದು ಬೃಹತ್ ದೇಶ. ಅಂತಹ ಸಂಕಷ್ಟದ ನಡುವೆ 1946ರ ಸೆಪ್ಟೆಂಬರ್ 2ರಂದು ದೆಹಲಿಯಲ್ಲಿ ನೆಹರೂ ನೇತೃತ್ವ ದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ತಾಂತ್ರಿಕವಾಗಿ ವೈಸ್‌ರಾಯ್ ಈ ಸರ್ಕಾರದ ಮುಖ್ಯಸ್ಥನಾಗಿದ್ದ. ನೆಹರೂ ವೈಸ್‌ರಾಯ್ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯತಃ ನೆಹರೂ ಅವರೇ ದೇಶದ ಮೊದಲ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದಿದ್ದರು. ಹೊರಗಿನ ಜಗತ್ತಿಗೆ ಮೇಲ್ನೋಟಕ್ಕೆ ಭಾರತಕ್ಕೆ ಅಧಿಕಾರ ಸಿಕ್ಕಂತಾಗಿತ್ತು. ಆದರೆ ಒಳಗಿನ ವಾಸ್ತವವೇ ಬೇರೆ!
ದೇಶಕ್ಕೆ ಪ್ರಧಾನಿಯಿದ್ದರು; ಆದರೆ ತಮ್ಮದೇ ಕಚೇರಿಗೆ ಒಬ್ಬ ಸಾಮಾನ್ಯ ಗುಮಾಸ್ತನನ್ನು ನೇಮಿಸಿ ಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವೂ ಅವರಿಗಿರಲಿಲ್ಲ. ದೇಶಕ್ಕೆ ಗೃಹಮಂತ್ರಿಯಿದ್ದರು; ಆದರೆ ಅವರ ಅಧೀನದಲ್ಲಿದ್ದ ಪೊಲೀಸರೇ ಧರ್ಮದ ಆಧಾರದಲ್ಲಿ ಒಡೆದುಹೋಗಿದ್ದರು. ಸೇನೆ ಇತ್ತು; ಆದರೆ ಅದರ ಬ್ರಿಟಿಷ್ ಕಮಾಂಡರ್‌ಗಳು ದೇಶವನ್ನು ತೊರೆದುಹೋಗುವ ರಹಸ್ಯ ಯೋಜನೆ ಗಳನ್ನು ಸಿದ್ಧಪಡಿಸುತ್ತಿದ್ದರು. 1945ರ ಹೊತ್ತಿಗಾಗಲೇ ಎರಡನೇ ಜಾಗತಿಕ ಮಹಾಯುದ್ಧ ಮುಗಿದಿತ್ತು.
ಬ್ರಿಟನ್ ಸಂಪೂರ್ಣವಾಗಿ ಆರ್ಥಿಕವಾಗಿ ದಿವಾಳಿಯಾಗಿತ್ತು. ಭಾರತದಲ್ಲಿ 1942ರ ಕ್ವಿಟ್ ಇಂಡಿಯಾ ಚಳುವಳಿ ಮತ್ತು ಆಜಾದ್ ಹಿಂದ್ ಫೌಜ್ ವಿಚಾರಣೆಗಳ ನಂತರ ಬ್ರಿಟಿಷರ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿತ್ತು. ಈ ಒತ್ತಡದಿಂದಾಗಿ ಬ್ರಿಟಿಷರು ಪ್ರಾಂತೀಯ ಮತ್ತು ಕೇಂದ್ರ ಶಾಸನ ಸಭೆಗಳಿಗೆ ಚುನಾವಣೆಗಳನ್ನು ಘೋಷಿಸಿದ್ದರು. ಆದರೆ ಅದು ಇಂದಿನಂತೆ ಎಲ್ಲರಿಗೂ ಮತದಾನದ ಹಕ್ಕು ನೀಡಿದ ಚುನಾವಣೆಯಾಗಿರಲಿಲ್ಲ.
ಇದನ್ನೂ ಓದಿ: Dr Jagadeesh Maane Column: ಮಳೆ ಎಲ್ಲಿದೆ? ರೈತನ ಕಣ್ಣಲ್ಲಿ ಸಾವಿರ ಪ್ರಶ್ನೆಗಳು!
ಆಸ್ತಿ ಹೊಂದಿದವರು, ಹೆಚ್ಚಿನ ತೆರಿಗೆ ಕಟ್ಟುವವರು, ಶ್ರೀಮಂತರು, ಜಮೀನ್ದಾರರು ಮತ್ತು ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಹೊಂದಿದ್ದಂತಹ ಕೇವಲ ಶೇ.10ರಿಂದ 12ರಷ್ಟು ಜನರಿಗೆ ಮಾತ್ರ ಮತದಾನದ ಅವಕಾಶವಿತ್ತು. ಫಲಿತಾಂಶ ಮಾತ್ರ ಭಾರತದ ರಾಜಕೀಯ ಭವಿಷ್ಯವನ್ನು ಸ್ಪಷ್ಟವಾಗಿ ಬದಲಿಸಿತು. ಸಾಮಾನ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತು.
ಮುಸ್ಲಿಮರಿಗೆ ಪ್ರತ್ಯೇಕವಾಗಿ ಮೀಸಲಾಗಿದ್ದ ಕ್ಷೇತ್ರಗಳಲ್ಲಿ ಮಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಬಹುಪಾಲು ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ ಇಡೀ ಭಾರತವನ್ನು ತಾನು ಪ್ರತಿನಿಧಿಸುವು ದಾಗಿ ಹೇಳುತ್ತಿತ್ತು. ಮುಸ್ಲಿಂ ಲೀಗ್ ಮುಸ್ಲಿಮರ ಏಕೈಕ ಧ್ವನಿ ತಾನೇ ಎಂದು ಪ್ರತಿಪಾದಿಸಿತು. ಭಾರತವನ್ನು ಒಗ್ಗಟ್ಟಾಗಿ ಉಳಿಸದೇ ಬ್ರಿಟಿಷರು ಅಧಿಕಾರವನ್ನು ಬಿಟ್ಟುಹೋಗಲು ಸಾಧ್ಯವಿದೆಯೇ ಎಂಬುದನ್ನು ಪರೀಕ್ಷಿಸುವುದಕ್ಕಾಗಿ 1946ರಲ್ಲಿ ಲಂಡನ್‌ನಿಂದ ಸ್ಟಾಫರ್ಡ್ ಕ್ರಿಪ್ಸ್ ನೇತೃತ್ವದ ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬಂದಿತ್ತು.
ಕ್ಯಾಬಿನೆಟ್ ಮಿಷನ್ ದುರ್ಬಲ ಕೇಂದ್ರ ಸರ್ಕಾರ ಮತ್ತು ಪ್ರಬಲ ಪ್ರಾಂತ್ಯಗಳನ್ನು ಹೊಂದಿರುವ ಒಕ್ಕೂಟ ವ್ಯವಸ್ಥೆಯನ್ನು ಪ್ರಸ್ತಾಪಿಸಿತು. ಆದರೆ ಯೋಜನೆಯ ವ್ಯಾಖ್ಯಾನಗಳ ಕುರಿತ ತೀವ್ರ ಭಿನ್ನಾಭಿಪ್ರಾಯಗಳು ಸಂಧಾನವನ್ನು ಮುರಿದು ಹಾಕಿದವು. ಜಿನ್ನಾ ನೇರ ಕಾರ್ಯಾಚರಣೆಗೆ ಕರೆ ನೀಡಿದರು. ಪರಿಣಾಮವಾಗಿ 1946ರ ಆಗಸ್ಟ್ 16ರಂದು ಕಲ್ಕತ್ತಾದ ಬೀದಿಗಳಲ್ಲಿ ರಕ್ತದ ನದಿ ಹರಿಯಿತು. ಕೇವಲ 22 ಗಂಟೆಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು.
ಬೀದಿಬೀದಿಗಳಲ್ಲಿ ಶವಗಳ ರಾಶಿಯೇ ಬಿದ್ದಿತ್ತು. ಇಡೀ ಬಂಗಾಳ ಬೆಂಕಿಯ ಬೇಗೆಯಲ್ಲಿ ದಗದಗನೆ ಉರಿಯುತ್ತಿದ್ದ ಅದೇ ಸಂದರ್ಭದಲ್ಲಿ ನವದೆಹಲಿಯ ವೈಸ್‌ರಾಯ್ ಭವನದಲ್ಲಿ ನೆಹರೂ ಮತ್ತು ಅವರ ಸಹೋದ್ಯೋಗಿಗಳು ಮಧ್ಯಂತರ ಸರ್ಕಾರದ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸು ತ್ತಿದ್ದರು. ಆದರೆ ಮುಸ್ಲಿಂ ಲೀಗ್ ಮಧ್ಯಂತರ ಸರ್ಕಾರವನ್ನು ಬಹಿಷ್ಕರಿಸಿ ಅಧಿಕಾರ ಸ್ವೀಕಾರದಲ್ಲಿ ಭಾಗವಹಿಸಲಿಲ್ಲ. ಇತ್ತ ನೆಹರೂ ಮತ್ತು ಮಂತ್ರಿಮಂಡಲದ ಯಾವುದೇ ಸದಸ್ಯರ ಮುಖದಲ್ಲಿ ಸಂಭ್ರಮದ ಮಂದಹಾಸವಿರಲಿಲ್ಲ.
ಕಳವಳ ಮತ್ತು ಆತಂಕವೇ ಎದ್ದು ಕಾಣುತ್ತಿತ್ತು. ಹೊಸ ಸರ್ಕಾರದ ಮುಂದೆ ಸುಧಾರಣೆ ತರುವುದು ದೊಡ್ಡ ಸವಾಲಾಗಿರಲಿಲ್ಲ; ಅವರ ಮುಂದೆ ಮೂರು ಬಿಕ್ಕಟ್ಟುಗಳು ತೂಗುಗತ್ತಿಯಂತೆ ನೇತಾಡು ತ್ತಿದ್ದವು. ಮೊದಲನೆಯದು ಆಡಳಿತ ಯಂತ್ರದ ಆಂತರಿಕ ಬಂಧನ. ಬ್ರಿಟಿಷ್ ಇಂಡಿಯನ್ ಸಿವಿಲ್ ಸರ್ವೀಸ್‌ನ ಅಧಿಕಾರಿಗಳು ಇನ್ನು ಮುಂದೆ ತಮ್ಮ ಭವಿಷ್ಯ ಭಾರತದಲ್ಲಿಲ್ಲ ಎಂದು ನಿರ್ಧರಿಸಿ, ಕೆಲಸ ಮಾಡುವುದನ್ನೇ ನಿಲ್ಲಿಸಿ, ತಮ್ಮ ಪಿಂಚಣಿ ಹಾಗೂ ಪರಿಹಾರದ ಕಡತಗಳನ್ನು ಸಿದ್ಧಪಡಿಸಿ ಕೊಳ್ಳುವುದರಲ್ಲಿ ನಿರತರಾಗಿದ್ದರು.
ಎರಡನೆಯದು ಕಾನೂನು ವ್ಯವಸ್ಥೆಯ ಕುಸಿತ. ಕಲ್ಕತ್ತೆಯಿಂದ ಆರಂಭವಾಗಿದ್ದ ಹಿಂಸಾಚಾರ ಬಿಹಾರ, ಪಂಜಾಬ, ಲಾಹೋರ್, ಅಮೃತಸರ ದವರೆಗೆ ವ್ಯಾಪಿಸಿ ನಗರದಿಂದ ನಗರವನ್ನೇ ಸುಟ್ಟು ಭಸ್ಮ ಮಾಡಿತ್ತು. ಕೆಲ ಕಡೆಗಳಲ್ಲಿ ಪೊಲೀಸರೇ ಗುಂಪುಗಳ ಜೊತೆ ಸೇರಿಕೊಂಡು ಗಲಭೆಯಲ್ಲಿ ಭಾಗಿಯಾಗುತ್ತಿದ್ದರು. ಮೂರನೆಯದು ಆಹಾರದ ಅಭಾವ. 1943ರ ಬಂಗಾಳದ ಭೀಕರ ಬರಗಾಲ ದಲ್ಲಿ ಹಸಿವಿನಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದರು. ಮತ್ತೆ 1946ರ ಕೊನೆಯಲ್ಲಿ ಮಳೆ ಕೈಕೊಟ್ಟಿತು.
ಹಲವೆಡೆ ಧಾನ್ಯದ ದಾಸ್ತಾನು ಖಾಲಿಯಾಗಿತ್ತು. ಅಂದು ಆಹಾರಮಂತ್ರಿಯಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು ಅಮೆರಿಕ, ಆಸ್ಟ್ರೇಲಿಯಾ, ಅರ್ಜೆಂಟೀನಾದಂತಹ ದೇಶಗಳಿಗೆ ಧಾನ್ಯದ ಹಡಗು ಗಳನ್ನು ಕಳುಹಿಸುವಂತೆ ನಿತ್ಯ ಪತ್ರಗಳ ಮೂಲಕ ಮನವಿ ಮಾಡುತ್ತಿದ್ದರು. ಇತ್ತ ದೇಶದ ಪ್ರಮುಖ ಬಂದರುಗಳಲ್ಲಿ ಕಾರ್ಮಿಕರ ಮುಷ್ಕರ ನಡೆದಿತ್ತು. ಹೀಗಾಗಿ ಬಂದ ಆಹಾರ ಧಾನ್ಯಗಳನ್ನು ಇಳಿಸುವುದಕ್ಕೂ ಆಳುಗಳು ಇರಲಿಲ್ಲ.
ಒಂದೆಡೆ ಬರ, ಮತ್ತೊಂದೆಡೆ ಗಲಭೆ, ಮಗದೊಂದೆಡೆ ನಿಷ್ಕ್ರಿಯವಾದ ಆಡಳಿತ ಇವೆಲ್ಲವನ್ನೂ ಒಟ್ಟಿಗೆ ನಿಭಾಯಿಸಿ ಸರ್ಕಾರವನ್ನು ಮುನ್ನಡೆಸುವುದು ಮಂತ್ರಿಗಳಿಗೆ ಅಸಾಧ್ಯದ ಕೆಲಸವಾಗಿತ್ತು. ಪರಿಸ್ಥಿತಿ ಹೀಗಿರುವಾಗ ಅಕ್ಟೋಬರ್ ತಿಂಗಳ ಹೊತ್ತಿಗೆ ಮತ್ತೊಂದು ದೊಡ್ಡ ಬೆಳವಣಿಗೆ ಸಂಭವಿಸಿತು. ವೈಸ್‌ರಾಯ್ ಲಾರ್ಡ್ ವೆವೆಲ್ ಮುಸ್ಲಿಂ ಲೀಗ್ ಅನ್ನು ಸರ್ಕಾರಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದರು. ಲೀಗ್ ಸದಸ್ಯರು ಸರ್ಕಾರದಲ್ಲಿ ಇಲ್ಲದೆ ಹೋದರೆ ದೇಶದಲ್ಲಿ ಮತ್ತಷ್ಟು ಗಲಭೆಗಳು ಮತ್ತು ರಕ್ತಪಾತ ಸಂಭವಿಸಬಹು ದೆಂಬುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು.
ಜಿನ್ನಾ ತಮ್ಮ ಪಕ್ಷದ ಐದು ಜನ ಸದಸ್ಯರನ್ನು ಸರ್ಕಾರಕ್ಕೆ ಕಳುಹಿಸಲು ಒಪ್ಪಿಕೊಂಡರು. ಆದರೆ ಅವರೆಲ್ಲರೂ ಅಖಂಡ ಭಾರತದ ಸಂವಿಧಾನದ ರಚನಾ ಸಭೆಯನ್ನು ಒಪ್ಪಿಕೊಳ್ಳಲಿಲ್ಲ. ಸಂಪುಟದ ಜಂಟಿ ಹೊಣೆಗಾರಿಕೆಯನ್ನು ತಿರಸ್ಕರಿಸಿ, ನಾವು ಇಲ್ಲಿಗೆ ಸರ್ಕಾರವನ್ನು ಮುನ್ನಡೆಸಲು ಬಂದಿಲ್ಲ; ಸರ್ಕಾರದಲ್ಲಿದ್ದುಕೊಂಡು ಪಾಕಿಸ್ತಾನದ ಹೋರಾಟವನ್ನು ಒಳಗಿನಿಂದಲೇ ನಡೆಸುವುದಕ್ಕಾಗಿ ಬಂದಿದ್ದೇವೆ ಎಂದು ಘೋಷಿಸಿದರು.
ಅಲ್ಲಿಂದಲೇ ಆಡಳಿತಾತ್ಮಕವಾಗಿ ಮಹತ್ವದ ತಿಕ್ಕಾಟಗಳು ಶುರುವಾದವು. ಮುಸ್ಲಿಂ ಲೀಗ್ ಸರ್ಕಾರ ಪ್ರವೇಶಿಸಿದಾಗ ಪ್ರಮುಖ ಖಾತೆಗಳನ್ನು ಹಂಚುವ ಸಂದರ್ಭ ಎದುರಾಯಿತು. ಗೃಹ, ವಿದೇಶಾಂಗ, ರಕ್ಷಣೆ ಮತ್ತು ಹಣಕಾಸು ಪ್ರಮುಖ ಖಾತೆಗಳಾಗಿದ್ದವು. ಸರ್ದಾರ್ ವಲ್ಲಭಭಾಯಿ ಪಟೇಲರು ಯಾವುದೇ ಕಾರಣಕ್ಕೂ ಗೃಹ ಖಾತೆಯನ್ನು ಬಿಟ್ಟುಕೊಡಲಿಲ್ಲ.
ದೇಶದ ಆಂತರಿಕ ಭದ್ರತೆ ಮತ್ತು ಗುಪ್ತಚರ ಇಲಾಖೆ ತಮ್ಮ ಕೈಯಲ್ಲಿರಬೇಕೆಂದು ಪಟ್ಟು ಹಿಡಿದರು. ನೆಹರೂ ವಿದೇಶಾಂಗ ಖಾತೆಯನ್ನು ಉಳಿಸಿಕೊಂಡರು. ಮುಸ್ಲಿಂ ಲೀಗ್‌ಗೆ ಹಣಕಾಸು ಖಾತೆ ನೀಡಲು ಕಾಂಗ್ರೆಸ್ ನಾಯಕರು ಒಪ್ಪಿಕೊಂಡರು. ಹಣಕಾಸು ನಿರ್ವಹಣೆ ಅತ್ಯಂತ ತಾಂತ್ರಿಕವಾದ ವಿಷಯ ವಾಗಿರುವುದರಿಂದ ಅದನ್ನು ನಡೆಸುವುದು ಲೀಗ್ ನಾಯಕರಿಗೆ ಕಷ್ಟಸಾಧ್ಯವಾಗಬಹುದು ಎಂದು ಕಾಂಗ್ರೆಸ್ ಅಂದುಕೊಂಡಿತು. ಹಣಕಾಸು ಸಚಿವರಾಗಿ ಲಿಯಾಕತ್ ಅಲಿ ಖಾನ್ ಆಯ್ಕೆಯಾದರು.
ನಿಯಮಾವಳಿಗಳ ಪ್ರಕಾರ ಯಾವುದೇ ಇಲಾಖೆ ಸಣ್ಣ ವೆಚ್ಚಕ್ಕೂ ಹಣಕಾಸು ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ ವಾಗಿತ್ತು. ಲಿಯಾಕತ್ ಅಲಿ ಖಾನ್ ಆ ನಿಯಮವನ್ನೇ ತನ್ನ ಅಸವನ್ನಾಗಿ ಮಾಡಿಕೊಂಡರು. ಗೃಹ, ಕೈಗಾರಿಕೆ, ಶಿಕ್ಷಣ ಹೀಗೆ ಯಾವುದೇ ಮಂತ್ರಿಗಳು ಕಳುಹಿಸಿದ ಕಡತಗಳಿಗೆ ಹಣಕಾಸು ಇಲಾಖೆಯಿಂದ ನೂರಾರು ತಾಂತ್ರಿಕ ಆಕ್ಷೇಪಗಳು ಎದುರಾ ಗುತ್ತಿದ್ದವು. ಪಟೇಲರು ತಮ್ಮ ಕಚೇರಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಕ್ಕೂ ಅನುಮತಿ ಕೇಳಿದರೆ, ಆ ಕಡತಗಳು ವಾರಗಳು, ತಿಂಗಳುಗಳ ಕಾಲ ಹಣಕಾಸು ಇಲಾಖೆಯಲ್ಲಿ ಬಿದ್ದಿರುತ್ತಿದ್ದವು. ಬಳಿಕ ಅನುಮತಿ ನಿರಾಕರಿಸಲಾಗುತ್ತಿತ್ತು.
ವಾಸ್ತವವಾಗಿ ಸರ್ಕಾರ ಎನ್ನುವುದು ಎಲ್ಲರೂ ಒಂದೇ ಸೂರಿನಡಿ ಕುಳಿತು ಒಂದು ತಂಡವಾಗಿ ಕೆಲಸ ಮಾಡುವುದು. ಆದರೆ ಇಲ್ಲಿ ಹಾಗಾಗಲಿಲ್ಲ. ಒಂದೇ ಮನೆಯಲ್ಲಿ ಪರಸ್ಪರ ಮಾತನಾಡದೆ, ಮುಖ ತಿರುಗಿಸಿಕೊಂಡು ಬದುಕುವ ಶತ್ರುಗಳ ಕುಟುಂಬದಂತಾಗಿತ್ತು. ನೆಹರೂ ತಮ್ಮ ನಿವಾಸದಲ್ಲಿ ಸಂಪುಟದ ಅನೌಪಚಾರಿಕ ಸಭೆಗಳನ್ನು ಕರೆಯುತ್ತಿದ್ದರು. ಆದರೆ ಮುಸ್ಲಿಂ ಲೀಗ್‌ನ ಯಾವುದೇ ಸದಸ್ಯರು ಆ ಸಭೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಬದಲಿಗೆ ಅವರೆಲ್ಲ ನೇರವಾಗಿ ವೈಸ್‌ರಾಯ್ ಜೊತೆಗೆ ವ್ಯವಹಾರ ಗಳನ್ನು ನಡೆಸುತ್ತಿದ್ದರು.
ನೆಹರೂ ವಿದೇಶಿ ನಾಯಕರನ್ನು ಭೇಟಿ ಮಾಡಿ ಒಪ್ಪಂದ ಮಾಡಿಕೊಳ್ಳಲು ಬಯಸಿದಾಗ ಹಣಕಾಸಿನ ಅನುಮೋದನೆ ಸಿಗುತ್ತಿರಲಿಲ್ಲ. ಪಟೇಲರು ಗಲಭೆಪೀಡಿತ ಪ್ರದೇಶಗಳಿಗೆ ಪೊಲೀಸ್ ತುಕಡಿಗಳನ್ನು ಕಳುಹಿಸಲು ಹೆಚ್ಚಿನ ಅನುದಾನ ಕೇಳಿದರೆ ಆ ಕಡತಗಳು ಧೂಳು ಹಿಡಿಯುತ್ತಿದ್ದವು. ಹೀಗಾಗಿ ಇಡೀ ಆಡಳಿತ ಯಂತ್ರವೇ ಕುಸಿದುಬಿದ್ದಿತ್ತು. ಈ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಉತ್ತುಂಗ ಕ್ಕೇರಿದ್ದು 1947ರ ಮಾರ್ಚ್ ತಿಂಗಳಲ್ಲಿ. ಆಗ ಲಿಯಾಕತ್ ಅಲಿ ಖಾನ್ ದೇಶದ ಬಜೆಟ್ ಮಂಡಿಸಿದರು.
ವ್ಯಾಪಾರ ಮತ್ತು ಕೈಗಾರಿಕೆಗಳ ಅತಿಯಾದ ಲಾಭಗಳ ಮೇಲೆ ಭಾರಿ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗಿತ್ತು. ಮೇಲ್ನೋಟದಲ್ಲಿ ಅದು ಉತ್ತಮ ಅನಿಸಿದರೂ, ಇದರ ಆಂತರಿಕ ಹೊಡೆತ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಬೆಂಬಲ ನೀಡುತ್ತಿದ್ದ ಬಿರ್ಲಾ, ಟಾಟಾ ಹಾಗೂ ಇನ್ನಿತರ ಭಾರತೀಯ ಕಂಪನಿಗಳ ಮೇಲೆ ಬಿದ್ದಿತ್ತು. ಹೀಗಾಗಿ ಬಜೆಟ್ ಸಂಪುಟದಲ್ಲಿ ದೊಡ್ಡ ಕಂದಕವನ್ನೇ ಸೃಷ್ಟಿಸಿತು. ಪಟೇಲ್ ಹಾಗೂ ನೆಹರೂ ಈ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದರು. ಆದರೆ ಹಣಕಾಸು ಸಚಿವರ ಅಧಿಕಾರ ವ್ಯಾಪ್ತಿಯ ಮುಂದೆ ಅವರ ಆಕ್ಷೇಪಣೆಗಳು ಫಲ ನೀಡಲಿಲ್ಲ. ಇತಿಹಾಸಕಾರರು ಹಾಗೂ ಅಂದಿನ ನಾಯಕರ ಆತ್ಮಕಥನಗಳು ಆ ಅವಽಯ ಮಾನಸಿಕ ಒತ್ತಡವನ್ನು ಸ್ಪಷ್ಟವಾಗಿ ದಾಖಲಿಸಿವೆ.
ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ತಮ್ಮ ಪ್ರಸಿದ್ಧ ಕೃತಿಯಲ್ಲಿ ಅಂದಿನ ನಿತ್ಯದ ಅವಮಾನ, ಕಡತಗಳ ತಿರಸ್ಕಾರ, ಸಂಪೂರ್ಣ ಆಡಳಿತಾತ್ಮಕ ಅಸಹಾಯಕತೆ ಹಾಗೂ ಸರ್ದಾರ್ ಪಟೇಲರ ಯೋಜನಾ ಲಹರಿಯನ್ನೇ ಬದಲಾಯಿಸುವಂತಹ ವಿಚಾರಗಳನ್ನು ದಾಖಲಿಸಿದ್ದಾರೆ. ಸರ್ದಾರ್ ಪಟೇಲರು ಅತ್ಯಂತ ವ್ಯವಹಾರಿಕ ಮತ್ತು ನೇರ ಆಡಳಿತಗಾರರಾಗಿದ್ದರು. ಅವರಿಗೆ ಈ ನಿಷ್ಕ್ರಿಯತೆಯನ್ನು ಸಹಿಸುವುದು ಸಾಧ್ಯವಾಗುತ್ತಿರಲಿಲ್ಲ. ಒಂದೇ ಸರ್ಕಾರದಲ್ಲಿದ್ದು ಪ್ರತಿನಿತ್ಯ ಜಗಳವಾಡುವುದಕ್ಕಿಂತ, ಇಡೀ ಆಡಳಿತ ಕುಸಿದುಬಿದ್ದು ದೇಶ ಅರಾಜಕತೆಗೆ ಜಾರುವುದಕ್ಕಿಂತ, ವಿಭಜನೆಯನ್ನು ಒಪ್ಪಿಕೊಳ್ಳುವುದೇ ಒಳ್ಳೆಯದು ಎನ್ನುವ ನಿರ್ಧಾರಕ್ಕೆ ಪಟೇಲರು ಬಂದಿದ್ದರು.
ಮೌಲಾನಾ ಅಬುಲ್ ಕಲಾಂ ಆಜಾದ್, ಸಾವರ್ಕರ್ ಹಾಗೂ ಆರ್‌ಎಸ್‌ಎಸ್ ಮುಖಂಡರೆಲ್ಲರೂ ದೇಶ ವಿಭಜನೆಯನ್ನು ತಡೆಯಲು ಕೊನೆಯ ಕ್ಷಣದವರೆಗೂ ಪ್ರಯತ್ನಿಸಿದರು. ಆದರೆ ವಾಸ್ತವ ರಾಜಕೀಯ ಮತ್ತು ಆಡಳಿತಾತ್ಮಕ ವೈಫಲ್ಯಗಳು ಅವರ ವಾದವನ್ನು ಮೀರಿ ಬೆಳೆದಿದ್ದವು. ಆ ಹನ್ನೊಂದು ತಿಂಗಳ ಮಧ್ಯಂತರ ಸರ್ಕಾರದ ಮಹತ್ವವನ್ನು ಕೇವಲ ವೈಫಲ್ಯದ ದೃಷ್ಟಿಯಿಂದ ನೋಡಿದರೆ ನಮಗೆ ಇತಿಹಾಸದ ಅರ್ಧ ಸತ್ಯ ಮಾತ್ರ ಸಿಗುತ್ತದೆ. ಕಲ್ಪನೆಗೂ ಮೀರಿದ ಕೋಮು ದ್ವೇಷ, ಸಚಿವಾಲಯಗಳ ಒಳಗಿನ ಆಂತರಿಕ ಅಸಹಕಾರ, ಆಹಾರದ ಬರ ಮತ್ತು ಬ್ರಿಟಿಷರ ಬೇಜವಾಬ್ದಾರಿಯುತ ನಿರ್ಗಮನದ ನಡುವೆಯೂ ಆ ಮಧ್ಯಂತರ ಸರ್ಕಾರ ಭಾರತದ ಕಲ್ಪನೆಯು ಸಂಪೂರ್ಣವಾಗಿ ಮುಳುಗಿ ಹೋಗುವುದನ್ನು ತಡೆದಿತ್ತು. ಆ ಹನ್ನೊಂದು ತಿಂಗಳ ಸರ್ಕಾರದ ಅವಧಿಯಲ್ಲಿ ಭಾರತ ಸಂವಿಧಾನ ರಚನಾ ಸಭೆಯೂ ತನ್ನ ಕೆಲಸವನ್ನು ಪ್ರಾರಂಭಿಸಿತ್ತು.
ಭಾರತದ ಪ್ರಜಾಪ್ರಭುತ್ವದ ಅಡಿಪಾಯಗಳು ರೂಪುಗೊಂಡಿದ್ದು ಇದೇ ಬಿಕ್ಕಟ್ಟಿನ ದಿನಗಳಲ್ಲಿ ಎಂಬುದನ್ನು ನಾವಿಂದು ಮರೆಯುವಂತಿಲ್ಲ. ಆಗಸ್ಟ್ 15ರ ಮಧ್ಯರಾತ್ರಿ ಅಧಿಕಾರ ಹಸ್ತಾಂತರ ವಾದಾಗ ದೇಶವನ್ನು ತಕ್ಷಣ ಮುನ್ನಡೆಸುವುದಕ್ಕಾಗಿ ಕನಿಷ್ಠ ಮಟ್ಟದ ಸಾಂಸ್ಥಿಕ ಚೌಕಟ್ಟನ್ನು ಅದೇ ಮಧ್ಯಂತರ ಸರ್ಕಾರ ಉಳಿಸಿಕೊಂಡು ಬಂದಿತ್ತು. ಅಂದು ಹರಿದುಹಂಚಿ ಹೋಗಿದ್ದ ವ್ಯವಸ್ಥೆಯು ಉಳಿದುಕೊಂಡಿರದೆ ಇದ್ದಿದ್ದರೆ, ನಂತರದ ದಿನಗಳಲ್ಲಿ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಪಟೇಲರ ಬೃಹತ್ ಸಾಹಸ ಸಾಧ್ಯವಾಗುತ್ತಿರಲಿಲ್ಲ.
ಇಂದು ಬಲಿಷ್ಠ ಕೇಂದ್ರ ಸರ್ಕಾರವಿದೆ. ರಾಜ್ಯಗಳ ಮೇಲೆ ಕೇಂದ್ರಕ್ಕೆ ಅಪಾರವಾದ ಅಧಿಕಾರಗಳಿವೆ. ತುರ್ತು ಪರಿಸ್ಥಿತಿಯ ಅಧಿಕಾರಗಳಿವೆ. ಏಕರೂಪದ ಐಎಎಸ್, ಐಪಿಎಸ್ ಅಧಿಕಾರಿಗಳ ವ್ಯವಸ್ಥೆಯಿದೆ. ಬಲಿಷ್ಠವಾದ ಸಶಸ್ತ್ರ ಪಡೆಗಳಿವೆ. ಇವೆಲ್ಲವೂ ನಮ್ಮ ಸಂವಿಧಾನದಲ್ಲಿ ಇಷ್ಟೊಂದು ಆಳವಾಗಿ ಬೇರೂರಲು ಕಾರಣವೇನು ಎಂಬುದರ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ?! ಭಾರತದ ಸಂವಿಧಾನವು ಕೇಂದ್ರ ಸರ್ಕಾರಕ್ಕೆ ಇಷ್ಟೊಂದು ಬಲಿಷ್ಠವಾದ ಅಧಿಕಾರಗಳನ್ನು ನೀಡಿರುವುದಕ್ಕೆ ಕಾರಣ ನಮ್ಮ ಸಂವಿಧಾನದ ಶಿಲ್ಪಿಗಳು.
ಅಂಬೇಡ್ಕರ್ ಅವರು ಆ ಹನ್ನೊಂದು ತಿಂಗಳಲ್ಲಿ ಮಧ್ಯಂತರ ಸರ್ಕಾರದ ಸಂಪೂರ್ಣ ಅಸಹಾಯ ಕತೆಯನ್ನು ಕಣ್ಣಾರೆ ಕಂಡಿದ್ದರು. ಹೀಗಾಗಿ ಅಧಿಕಾರ ಕೇವಲ ಹೆಸರಿಗೆ ಮಾತ್ರ ಇರಬಾರದು; ಆಡಳಿತ ಯಂತ್ರವನ್ನು ಗಟ್ಟಿಯಾಗಿಸಬೇಕು. ಇಲ್ಲದೆ ಹೋದರೆ ಇಡೀ ದೇಶ ಕ್ಷಣಾರ್ಧದಲ್ಲಿ ಕುಸಿದು ಬೀಳಬಹುದು ಎಂಬುದಕ್ಕೆ ಆ ಹನ್ನೊಂದು ತಿಂಗಳ ಆಡಳಿತದ ಇತಿಹಾಸವೇ ಸಾಕ್ಷಿ. ಇಂದಿನ ಭಾರತದ ಅಧಿಕಾರ ಹಾಗೂ ಸಂವಿಧಾನದ ಪ್ರತಿಯೊಂದು ನಿಯಮದ ಹಿಂದೆ 1946ರ ಆ ಸಂಕಷ್ಟದ ದಿನಗಳ ಕರಾಳ ನೆನಪುಗಳು ನಮ್ಮಲ್ಲಿ ಇನ್ನೂ ಜೀವಂತವಾಗಿವೆ.