ಒಂದೊಳ್ಳೆ ಮಾತು
rgururaj628@gmail.com
ಕೃಷ್ಣ ಹದಿನಾರು ಸಾವಿರದ ಎಂಟು ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾನೆ., ಇವನ ಸಂಸಾರ ಹೇಗಿರಬಹುದು ಎಂಬ ಕುತೂಹಲಕ್ಕೆ ನಾರದರು ಒಮ್ಮೆ ದ್ವಾರಕಾ ನಗರಿಯನ್ನು ಪ್ರವೇಶಿಸಿದರು. ಅದ್ಭುತವಾದ ನಗರಿ ಅತ್ಯಾಕರ್ಷಕವಾಗಿತ್ತು. ವೈಭವದಿಂದ ಕೂಡಿದ ಪ್ರತಿ ಮನೆಯಲ್ಲೂ ಹೆಂಡತಿ, ಮಕ್ಕಳ ಉಪಚಾರದಲ್ಲಿ, ಪೂಜೆ ಆತಿಥ್ಯದಲ್ಲಿ ಕೃಷ್ಣ ತಲ್ಲೀನನಾಗಿದ್ದ.
ಪ್ರತಿ ಮನೆಯಲ್ಲೂ ಕೃಷ್ಣನ ರೂಪ. ಪ್ರತಿ ಬಾರಿ ನಾರದರನ್ನು ನೋಡಿದಾಗಲೂ ಇದೇನು ಪೂಜ್ಯರೇ ಬಂದಿದ್ದೀರಿ ಎಂದು ಹೊಸದಾಗಿ ಮಾತನಾಡಿಸಿ ಅವರಿಗೆ ಉಪಚಾರ ಮಾಡುತ್ತಿದ್ದ. ನಾರದರಿಗೆ ಆಶ್ಚರ್ಯವಾದರೂ.. ಮತ್ತೆ ಬರುವೆ ಎಂದು ನೆಪ ಹೂಡಿ ಮುಂದಿನ ಮನೆಗೆ ಹೋಗುತ್ತಿದ್ದರು ಅಲ್ಲಿಯೂ ಅದೇ ಕಥೆ. ಅಂತೂ ಹಟ ಬಿಡದೆ ಅವರೂ ಎಲ್ಲಾ ಮನೆಗಳಲ್ಲೂ ಇದ್ದ ಕೃಷ್ಣನನ್ನು ಕಂಡು ಮಾತನಾಡಿಸುತ್ತಾ ಕೊನೆಯ ಮನೆಗೆ ಬಂದರು.
ಅಲ್ಲಿಯೂ ಮಡಿಯುಟ್ಟ ಕೃಷ್ಣ ಪೂಜೆಗೆ ಅಣಿ ಮಾಡುತ್ತಿದ್ದ. ಇವರನ್ನು ಕಂಡು ವಿಶೇಷ ಆದರ ದಿಂದ ಬನ್ನಿ ನಾರದರೇ ಏನು ವಿಶೇಷ. ಇಲ್ಲೀವರೆಗೆ ಆಗಮಿಸಿದ್ದುದರ ಕಾರಣವೇನು ಒಳ್ಳೇ ಸಮಯ ಕ್ಕೇ ಬಂದಿದ್ದೀರಿ. ಇನ್ನೇನು ಪೂಜೆ ಮಾಡುವವನಿದ್ದೆ. ನಿಮ್ಮಂತಹ ಜ್ಞಾನಿಗಳು ಬಂದಿರುವುದು ನನ್ನ ಭಾಗ್ಯ. ಬನ್ನಿ ಆರತಿ ಮಾಡೋಣ ಎಂದು ಕರೆದ.
ಇದನ್ನೂ ಓದಿ: Roopa Gururaj Column: ಭೀಮನ ಅಹಂಕಾರ ಅಡಗಿಸಿದ ಆಂಜನೇಯ
ಹೇ ಕೃಷ್ಣ. ನೀನೇ ಸೃಷ್ಟಿಕರ್ತ. ಈ ಸೃಷ್ಟಿ, ಸ್ಥಿತಿ ಲಯಗಳ ಕಾರಣಕರ್ತ. ಎಲ್ಲದಕ್ಕೂ ನೀನೇ ಸರ್ವಸ್ವ. ಹೀಗಿರುವಾಗ ನೀನು ಯಾರನ್ನು ಪೂಜಿಸುವುದು! ಎಂದರು. ಕೃಷ್ಣ ನಕ್ಕುಬಿಟ್ಟ. ನಾರದರೇ. ನಾನು ಪ್ರತಿನಿತ್ಯ ಪೂಜೆ ಮಾಡುತ್ತೇನೆ. ಅದು ಯಾರು ಎಂದು ನೋಡಬೇಕೇನು? ನಾರದರು ಆಶ್ಚರ್ಯದಿಂದ ಕೇಳಿದರು. ನೀನು ಪೂಜಿಸುವ ಆ ಶಕ್ತಿ ಯಾವುದು ಎಂದು ನೋಡ ಬೇಕು.
ಕೃಷ್ಣ : ಬನ್ನಿ ತೋರಿಸುತ್ತೇನೆ. ಎಂದು ದೇವರ ಕೋಣೆಗೆ ಕರೆದೊಯ್ದ. ದೇವರ ಕೋಣೆಯ ಚೌಕಟ್ಟುಗಳು ಬಂಗಾರದ್ದಾಗಿತ್ತು. ಮಂಟಪವೂ ಬಂಗಾರ. ಮಂಟಪಕ್ಕೆ ವಜ್ರ, ವೈಢೂರ್ಯ, ಮುತ್ತು ರತ್ನಗಳಿಂದ ಅಲಂಕರಿಸಲಾಗಿತ್ತು. ಮಂಟಪದ ಒಳಗೆ ಏಳೆಂಟು ಬಂಗಾರದ ಡಬ್ಬಿಗಳಿ ದ್ದವು.
ಕೃಷ್ಣ ಡಬ್ಬಿಗಳನ್ನು ತೋರಿಸಿ ಇವುಗಳನ್ನೇ ಪೂಜಿಸುತ್ತೇನೆ ಎಂದ. ಕೃಷ್ಣ ಡಬ್ಬಿಯ ಮುಚ್ಚಳ ತೆಗೆದ. ಅದರಲ್ಲಿ ಮಣ್ಣಿತ್ತು. ನಾರದರು ಬಿಟ್ಟಕಣ್ಣಿಂದ ಮಣ್ಣು ನೋಡಿ ‘ಕೃಷ್ಣ ನೀನು ಮಣ್ಣನ್ನು ಪೂಜಿಸುತ್ತೀಯೇ!’ ಕೃಷ್ಣ ಹೇಳಿದ.
ನಾರದರೇ. ಇದು ಅಂತಿಂಥ ಮಣ್ಣು ಎಂದು ತಿಳಿಯಬೇಡಿ. ಇದು ನನ್ನ ಭಕ್ತರ ಪಾದಧೂಳಿ. ಇದನ್ನು ನಾನು ಪೂಜಿಸುತ್ತೇನೆ. ಭಕ್ತರ ಪ್ರೀತಿ, ಭಕಿಯ ಪಾಶದ ಅಂಕುರದೊಳಗೆ ನಾನಿದ್ದೇನೆ ಎಂದ. ನಾರದರಿಗೆ ಇದನ್ನು ಕೇಳಿ ಕಣ್ಣೀರು ಧಾರೆಯಾಗಿ ಸುರಿಯಿತು.
ಹೇ ಪರಮಾತ್ಮ.. ನಿನ್ನನ್ನು ಎಷ್ಟು ಸ್ತುತಿಸಿದರೂ ಅದು ಅಲ್ಪವೇ. ಕೃಷ್ಣ ಕೃಷ್ಣ. ಎಂದು ನೂರು ಬಾರಿ ಹೇಳಿದರು. ಅಲ್ಲೇ ಪಕ್ಕದಲ್ಲಿ ಮತ್ತೊಂದು ಪುಟ್ಟ ಡಬ್ಬಿ ಇತ್ತು. ನಿಜವಾದ ಗುರುಭಕ್ತರು ಹೇಗಿರುತ್ತಾರೆ, ನಾರದರೇ ಈ ಪುಟ್ಟ ಡಬ್ಬಿಯಲ್ಲೇನಿದೆ ನೋಡುವುದಿಲ್ಲವೇ? ಸಾಕು ಕೃಷ್ಣ. ನಿನ್ನನ್ನು ಅರಿಯುವುದು, ನಿನ್ನ ದರ್ಶನವಾಗುವುದಕ್ಕಿಂತ ಮಿಗಿಲಾದದ್ದು ಇನ್ನೇನಿದೆ. ನಿನ್ನನ್ನೇ ಧ್ಯಾನಿಸು ವುದೇ ನನಗೆ ಬಂದ ಭಾಗ್ಯ. ಇಷ್ಟು ಸಾಕು ಈ ನಾರದನಿಗೆ ಎಂದರು.
ಎಲ್ಲವನ್ನೂ ತಿಳಿಯಲೇಬೇಕಲ್ಲವೇ ನಾರದರೇ. ನೋಡಿ ಕಟ್ಟ ಕಡೆಯ ಡಬ್ಬಿ ಎಂದು ಅದರ ಮುಚ್ಚಳ ತೆಗೆದ. ಅದರಲ್ಲಿ ಒಂದು ಚಿಟಿಕೆ ಮಣ್ಣಿತ್ತು. ನಾರದರು ಆಶ್ಚರ್ಯದಿಂದ ಕೇಳಿದರು. ಒಂದು ಚಿಟಿಕೆ ಇದೆಯಲ್ಲ ಯಾರದ್ದು ?
ಕೃಷ್ಣ ಹೇಳಿದ. ಸದಾ ನನ್ನ ಧ್ಯಾನದಲ್ಲಿಯೇ ಸಂಚಾರಿಯಾಗಿರುವ ನನ್ನ ಪರಮ ಭಕ್ತನಾದ ನಾರದರ ಪಾದಧೂಳಿ. ನಾರದರಿಗೆ ದುಃಖ ತಡೆಯಲಾರದೇ ಹೇ ಪ್ರಭೋ! ಎಂದು ಕೃಷ್ಣನ ಪಾದ ಹಿಡಿದರು. ನಾವು ಸಂಬಂಧಗಳಲ್ಲಿ ನಿಷ್ಕಲ್ಮಶ ಪ್ರೀತಿಯಿಂದ ನಮ್ಮನ್ನು ಸಮರ್ಪಿಸಿಕೊಂಡಾಗ ಅದರ ನೂರು ಪಟ್ಟು ಪ್ರೀತಿ ನಮಗೆ ದೊರೆಯುತ್ತದೆ ಎಂಬುದಕ್ಕೆ ಮೇಲಿನ ಕಥೆ ಸಾಕ್ಷಿ.
ನಮ್ಮಲ್ಲಿರುವ ಸಮರ್ಪಣಾ ಭಾವ, ಪ್ರಾಮಾಣಿಕ ಪ್ರೀತಿಗೆ ಒಂದಲ್ಲ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ. ಯಾರಲ್ಲದಿದ್ದರೂ ಭಗವಂತ ಅದನ್ನು ನೋಡಿಯೇ ನೋಡುತ್ತಾನೆ.