ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vinayaka V Bhat Column: ಭಾರತೀಯರಲ್ಲಿ ಮರೆಯಾಗುತ್ತಿರುವ ಅಭಿವಾದನ ಸಂಸ್ಕೃತಿ

ನಾವು ಯಾರನ್ನಾದರೂ ಭೇಟಿಯಾದಾಗ, ಗೌರವ ಸೂಚಿಸಲು ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಎಂದು ಹೇಳುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಆದರೆ, ಬಹುತೇಕ ಅದು ಪ್ರಾಮಾಣಿಕ ನಮಸ್ಕಾರವಾಗಿರುವುದಿಲ್ಲ, ಹೇಳಬೇಕು ಅಂತ ಹೇಳುವುದಾಗಿದೆ, ‘ನಮಸ್ಕಾ ರ ಸರ್, ಹೇಗಿದೀರ?’ ಅಂತ ಕೇಳುವಾಗ, ನಮಸ್ಕಾರ ಎನ್ನುವುದು ಮಾತನ್ನು ಪ್ರಾರಂಭಿಸಲು ಬಳಸುವ ಒಂದು ಪದವಷ್ಟೇ ಆಗಿರುತ್ತದೆಯೇ ವಿನಾ ಅದರ ಹಿಂದೆ ನಮಸ್ಕಾರದ ಭಾವವೇ ಇರುವುದಿಲ್ಲ

ವಿದ್ಯಮಾನ

ಯಾವುದೇ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಮಂಗಳಾರತಿ ವಿಶೇಷವಾಗಿರುತ್ತದೆ. ಕಾರಣ, ಮಂಗಳಾರತಿಯ ಬೆಳಕಿನಲ್ಲಿ ದೇವರ ಮುಖವನ್ನು ನಾವು ಸರಿಯಾಗಿ ನೋಡಿ ಆನಂದಿಸಿ, ನಮ್ಮ ಕಣ್ಣಿನ ಮುಖಾಂತರ ಆರಾಧ್ಯ ಮೂರ್ತಿಯನ್ನು ನಮ್ಮ ಹೃದಯದೊಳಗೆ ಇಳಿಸಿ ಕೊಳ್ಳಬೇಕಾದ ಸಂದರ್ಭವಾಗಿರುತ್ತೆ ಅದು. ಆದರೆ ಅದೇ ಸಂದರ್ಭದಲ್ಲಿ ನಾವು ಕಣ್ಣು ಮುಚ್ಚಿಕೊಂಡು ಧ್ಯಾನಸ್ಥರಾಗಿ ಬಿಡುತ್ತೇವೆ, ಮತ್ತೆ ಅರತಿ ತಟ್ಟೆ ನಮ್ಮ ಮುಂದೆ ಬಂದಾಗಲೇ ನಾವು ಕಣ್ಣು ತೆರೆಯುವುದು.

ನಮ್ಮ ಪಾಡೇ ಹಾಗೆ, ಎಲ್ಲಿ ಕಣ್ಣು ತೆರೆದಿರಬೇಕೋ ಅಲ್ಲಿ ಮುಚ್ಚಿಬಿಡುತ್ತೇವೆ, ಯಾವುದನ್ನು ನೋಡಬಾರದೋ ಅಂಥ ಸಂದರ್ಭಗಳಲ್ಲಿ ಕಣ್ಣನ್ನೇ ಮಿಟುಕಿಸದ ಅನಿಮಿಷರುಗಳಾಗಿ ಬಿಡುತ್ತೇವೆ. ಹಾಗೆಯೇ, ಯಾರಿಗೆ ತಗ್ಗಬೇಕೋ ಅಲ್ಲಿ ಎದೆಯುಬ್ಬರಿಸಿ ನಿಲ್ಲುತ್ತೇವೆ, ಎಲ್ಲಿ ತಲೆ ತಗ್ಗಿಸಬಾರದೋ ಅಲ್ಲಿ ಮ್ಲಾನಮುಖಿಗಳಾಗಿ ನಿಲ್ಲುತ್ತೇವೆ. ದೇವರ ಮುಂದೆ ನಿಂತು ದೇವರನ್ನು ನೋಡುವ ಬದಲು ಕಣ್ಣುಮುಚ್ಚಿ, ಕ್ರಿಶ್ಚಿಯನ್ನರಲ್ಲಿರುವಂತೆ ಎರಡು ಭುಜಗಳನ್ನು ಮುಟ್ಟುವುದು, ಕೈಯನ್ನು ಚುಂಬಿಸುವುದು, ನಮಸ್ಕಾರ ಮಾಡುವಾಗ ನೆಲವನ್ನು ಚುಂಬಿಸುವುದು ಇತ್ಯಾದಿ ವಿಪರೀತ ಆಚಾರದಲ್ಲಿ ತೊಡಗುತ್ತೇವೆ.

ಬರುಬರುತ್ತ ಸರಿಯಾಗಿ ನಮಸ್ಕಾರ ಮಾಡುವುದನ್ನೂ ನಾವು ಮರೆತು ಬಿಟ್ಟಿದ್ದೇವೆ. ಮೊದಲೆಲ್ಲ, ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಪದ್ಧತಿಯಿತ್ತು; ಈಗೀಗ ಅವರ ಮಂಡಿಯವರೆಗೆ ಮಾತ್ರ ನಮ್ಮ ಕೈ ಸಾಗುತ್ತದೆ, ಮುಂದೆ ಹೊಟ್ಟೆ ಮುಟ್ಟಿ ನಮಸ್ಕರಿಸುವ ಕಾಲ ಬಂದರೂ ಅಚ್ಚರಿಪಡಬೇಕಾಗಿಲ್ಲವನೋ!

ನಾವು ಯಾರನ್ನಾದರೂ ಭೇಟಿಯಾದಾಗ, ಗೌರವ ಸೂಚಿಸಲು ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಎಂದು ಹೇಳುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಆದರೆ, ಬಹುತೇಕ ಅದು ಪ್ರಾಮಾಣಿಕ ನಮಸ್ಕಾರವಾಗಿರುವುದಿಲ್ಲ, ಹೇಳಬೇಕು ಅಂತ ಹೇಳುವುದಾಗಿದೆ, ‘ನಮಸ್ಕಾರ ಸರ್, ಹೇಗಿದೀರ?’ ಅಂತ ಕೇಳುವಾಗ, ನಮಸ್ಕಾರ ಎನ್ನುವುದು ಮಾತನ್ನು ಪ್ರಾರಂಭಿಸಲು ಬಳಸುವ ಒಂದು ಪದವಷ್ಟೇ ಆಗಿರುತ್ತದೆಯೇ ವಿನಾ ಅದರ ಹಿಂದೆ ನಮಸ್ಕಾರದ ಭಾವವೇ ಇರುವುದಿಲ್ಲ.

ಇದನ್ನೂ ಓದಿ: Vinayaka V Bhat Column: ಪಾಕಿಸ್ತಾನವನ್ನು ಸೋಲಿಸಿದಾಗ ಸಿಗುವ ಖುಷಿಯೇ ಬೇರೆ !

ಮೊನ್ನೆ ನಮ್ಮ ಪ್ರಧಾನ ಮಂತ್ರಿಗಳು ಇಸ್ರೇಲಿಗೆ ಹೋದಾಗ ಅಲ್ಲಿನ ಪ್ರಧಾನ ಮಂತ್ರಿಗಳಾದ ಬೆಂಜಮಿನ್ ನೆತನ್ಯಾಹು ಅವರು ಮೋದಿಯವರನ್ನು ಸಂಸತ್ತಿನಲ್ಲಿ ಸ್ವಾಗತಿಸುತ್ತಾ ಒಂದು ಮಾತು ಹೇಳುತ್ತಾರೆ: “ಮೋದಿಯವರನ್ನು ಬರಮಾಡಿಕೊಳ್ಳಲು ನಾನು ಸಪತ್ನಿಕನಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ, ಅವರನ್ನು ಅಪ್ಪಿ ಸ್ವಾಗತಿಸಿದೆ. ಅನ್ಯದೇಶಗಳ ಮುಖ್ಯಸ್ಥರು ಬಂದಾಗಲೂ ನಾವು ಇದೇ ರೀತಿ ಆದರದಿಂದಲೇ ಸ್ವಾಗತಿಸುವುದು ಹೌದಾದರೂ, ಮೋದಿಯವರನ್ನು ಅಪ್ಪಿ ಆಲಿಂಗಿಸಿದಾಗ ಸಿಗುವ ಬೆಚ್ಚನೆಯ ಅನುಭವ ಬೇರೆಯವರನ್ನು ‘ಹಗ್’ ಮಾಡಿದಾಗ ಸಿಗುವುದಿಲ್ಲ. ಹಾಗಾಗಿಯೇ, ಅತ್ಯಂತ ಪ್ರಾಮಾಣಿಕ ವಾದ, ಬೆಚ್ಚನೆಯ ಅನುಭವ ನೀಡುವುದರಿಂದಾಗಿ ಜಗತ್ತಿನಾದ್ಯಂತ ‘ಮೋದಿ ಹಗ್’ ಬಹಳ ಪ್ರಸಿದ್ಧವಾಗಿದೆ" ಎಂದಿದ್ದರು.

ಕೈ ಕುಲುಕುವಾಗ, ನಮಸ್ಕಾರ ಹೇಳುವಾಗ, ಸ್ವಾಗತ ಕೋರುವಾಗ ಅಥವಾ ಅಪ್ಪಿಕೊಳ್ಳು ವಾಗ ಸೂಕ್ಷ್ಮವಾಗಿ ಗಮನಿಸಿದರೆ ಪ್ರಾಮಾಣಿಕವಾಗಿದೆಯೋ ಅಥವಾ ಕೇವಲ ತೋರ್ಗಾ ಣಿಕೆಯೋ ಎನ್ನುವುದು ಸುಲಭವಾಗಿ ತಿಳಿದುಬಿಡುತ್ತದೆ. ನಾವು ಯಾರೊಂದಿ ಗಾದರೂ ಮಾತನಾಡುವಾಗಲೂ ಅಷ್ಟೇ, ನಮ್ಮ ಮಾತಿನಲ್ಲಿ ಆತನಿಗೆ ಆಸಕ್ತಿಯಿದೆಯೋ ಇಲ್ಲವೋ ಎನ್ನುವ ವಿಷಯವನ್ನು ಅವನ ಮುಖವೇ ನಮಗೆ ತಿಳಿಸಿಬಿಡುತ್ತದೆ.

ಅನಿರೀಕ್ಷಿತವಾಗಿ ನಾವು ಯಾರದ್ದಾದರೂ ಮನೆಗೆ ಹೋದಾಗಲೂ ಅಷ್ಟೇ, ನಮ್ಮ ಬರವು ಅವರಿಗೆ ಇಷ್ಟವಾಯಿತೋ ಇಲ್ಲವೋ ಎನ್ನುವುದು ಅವರ ಮುಖಭಾವ ನೋಡಿದರೆ ನಮಗೆ ತಿಳಿದು ಬಿಡುತ್ತದೆ. ನೆತನ್ಯಾಹು ಹೇಳುವ ಬೆಚ್ಚನೆಯ ಅನುಭವ ನಮಗೂ ಎಷ್ಟೋಬಾರಿ ಅನುಭವಕ್ಕೆ ಬರುತ್ತದೆ.

ಇರಲಿ, ನಾನು ಹೇಳಹೊರಟಿರುವ ವಿಷಯ ಭಾರತೀಯರಲ್ಲಿ ಮಾತ್ರ ಕಾಣ ಸಿಗುವ ವೈಶಿಷ್ಟ್ಯಪೂರ್ಣ ಸರ್ವಸಮರ್ಪಣಾಭಾವದ ನಮಸ್ಕಾರ ಸಂಸ್ಕೃತಿಯ ಕುರಿತು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ನಮಸ್ಕಾರಕ್ಕೆ ಎಲ್ಲಿಲ್ಲದ ಮಹತ್ವವನ್ನು ಹೇಳಿದ್ದಾರೆ. ಅನ್ಯ ಧರ್ಮ-ಸಂಸ್ಕೃತಿಗಳಲ್ಲಿ ಅಭಿವಾದನ ಪದ್ಧತಿ ಇದ್ದರೂ ನಮ್ಮ ಸಂಪ್ರದಾಯ ದಲ್ಲಿರುವಷ್ಟು ವೈವಿಧ್ಯ, ವೈಜ್ಞಾನಿಕತೆ ಇಲ್ಲವೆಂತಲೇ ಹೇಳಬಹುದು.

Screenshot_7 R

ಆದರೆ ನಮಸ್ಕಾರ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ, ಅತ್ಯಂತ ಪವಿತ್ರವಾದ ಮತ್ತು ಸಾಂಪ್ರದಾಯಿಕವಾದ ಅಭಿವಾದನ ಪದ್ಧತಿಯಾಗಿದೆ. ಸಣ್ಣ ಮಕ್ಕಳಿರುವಾಗಿ ನಿಂದಲೇ, ಗುರು-ಹಿರಿಯರನ್ನು ಗೌರವಿಸುವ, ತದಂಗವಾಗಿ ನಮಸ್ಕರಿಸುವ ಸಂಸ್ಕೃತಿ ಯನ್ನು ನಮಗೆ ಕಲಿಸುತ್ತಾರೆ.

‘ನಮಃ’ ಎಂಬ ಸಂಸ್ಕೃತ ಪದದಿಂದ ಬಂದಿರುವ ಈ ಪದದ ಅರ್ಥ ವಂದನೆ, ನಮನ, ಪ್ರಣಾಮ, ಶರಣು, ಪ್ರಣಿಪಾತ ಎಂಬುದಾಗಿದೆ. ಅನ್ಯರಂತೆ ನಮಸ್ಕಾರ ಎನ್ನುವುದು ಭಾರತೀಯರಿಗೆ ಕೇವಲ ಶುಭಾಶಯ ಸೂಚಕ ಪದವಲ್ಲ; ಅದು ವಿನಯ, ಶ್ರದ್ಧೆ, ಭಕ್ತಿ ಮತ್ತು ಪರಸ್ಪರ ಗೌರವವನ್ನು ವ್ಯಕ್ತಪಡಿಸುವ ಜೀವನಕ್ರಮವಾಗಿದೆ.

ಹಿರಿಯರನ್ನು, ಗುರುಗಳನ್ನು, ದೇವತೆಗಳನ್ನು ಅಥವಾ ಆತಿಥಿಗಳನ್ನು ಭೇಟಿ ಮಾಡುವಾಗ ನಮಸ್ಕಾರ ಮಾಡುವ ಮೂಲಕ ನಾವು ಅವರಲ್ಲಿ ದೈವತ್ವವನ್ನು ಕಾಣುವುದನ್ನು ಕಲಿತಿ ದ್ದೇವೆ. ಒಂದು ಪ್ರಾಮಾಣಿಕವಾದ ನಮಸ್ಕಾರ ಅಥವಾ ಕೈಮುಗಿಯುವಿಕೆ ಎಂಥ ವೈರಿ ಯನ್ನೂ ನಮಗೆ ಗೆದ್ದುಕೊಡಬಲ್ಲದು.

ನಾವು ಅವರಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದೇವೆಯೋ ಅದನ್ನು ಆತ ಕೊಡಲೇಬೇಕಾದ ವಿವಶತೆಗೆ ಒಂದು ನಮಸ್ಕಾರ ತಳ್ಳಬಹುದು. ಇದು ಮನುಷ್ಯರಿಗಾದರೂ ಸರಿ, ದೇವರಿಗಾ ದರೂ ಸರಿ. ನಮಸ್ಕಾರವೂ ನಮ್ಮ ಋಷಿಪರಂಪರೆ ಕಂಡುಕೊಂಡ ಒಂದು ವಿಜ್ಞಾನ ವಾಗಿದೆ. ‘ಪ್ರಣಾಮೋ ದುಃಖ ಶಮನಃ’ ಎನ್ನುವ ಮಾತಿನಂತೆ, ನಮಸ್ಕಾರವು ಅಹಂಕಾರ ಜನ್ಯವಾದ ದುಃಖಗಳಿಗೆ ಅತ್ಯಂತ ಒಳ್ಳೆಯ ಪರಿಹಾರವಾಗಿದೆ ಎನ್ನಲಾಗುತ್ತದೆ.

ನಮಸ್ಕಾರ ಮಾಡುವುದಕ್ಕೂ ನಮ್ಮಲ್ಲಿ ಸಂದರ್ಭಾನುಸಾರವಾಗಿ ಬೇರೆ ಬೇರೆ ಕ್ರಮಗಳಿವೆ ಹಾಗೂ ಆ ಎಲ್ಲ ವಿಧಾನಗಳೂ ಅರ್ಥಪೂರ್ಣವಾಗಿವೆ. ನಮ್ಮ ಸಂಸ್ಕೃತಿಯಲ್ಲಿ ಕಾಯಿಕ, ವಾಚಿಕ ಹಾಗೂ ಮಾನಸಿಕ ನಮಸ್ಕಾರಗಳು ರೂಢಿಯಲ್ಲಿವೆ. ಮಾನಸಿಕವಾದ ನಮಸ್ಕಾರ ಗಳೆಂದರೆ, ‘ನಮಸ್ಕರಿಸುತ್ತಿದ್ದೇನೆ’ ಎಂದು ಮನಸ್ಸಿನ ಅಂದುಕೊಳ್ಳುವುದಾಗಿದೆ.

ಇನ್ನು ವಾಚಿಕವಾದ ನಮಸ್ಕಾರಗಳೆಂದರೆ ‘ನಿಮಗೆ ನಮಸ್ಕಾರ’ ಅಂತ ಬಾಯಿ ಬಿಟ್ಟು ಹೇಳುವುದಾಗಿದೆ. ಉದಾಹರಣೆಗೆ ಬಹಳಜನ ಒಂದೇಕಡೆ ಇದ್ದಾಗ ಎಲ್ಲರಿಗೂ ಪಾದಾಭಿ ವಂದನ ಮಾಡುವುದು ಸಾಧ್ಯವಾಗದೇ, ‘ಸರ್ವೇಭ್ಯೋ ನಮಸ್ಕಾರಃ’ ಎನ್ನುವುದಾಗಿದೆ.

ಈ ವಾಚಿಕ ನಮಸ್ಕಾರಕ್ಕೆ ‘ನಮಃ’ ಎಂದು ಮುಕ್ತಾಯವಾಗುವ ದೇವತಾ ಶ್ಲೋಕಗಳನ್ನು ಹಾಗೂ ರುದ್ರಪಾಠದಲ್ಲಿ ಬರುವ ನಮಕ ಮಂತ್ರಗಳನ್ನೂ ಉದಾಹರಿಸಬಹುದಾಗಿದೆ. ವಿಸ್ತಾರವಾಗಿ ಹಾಗೂ ಪ್ರಧಾನವಾಗಿ ಹೇಳಿರುವುದು ಕಾಯಿಕವಾದ ಅಂದರೆ ಶರೀರವನ್ನು ಬಳಸಿ ಮಾಡುವ ನಮಸ್ಕಾರಕ್ಕೆ.

ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕವಾದ ನಮಸ್ಕಾರ ಕ್ರಮಗಳನ್ನು ನಮ್ಮಲ್ಲಿ ಗುರುತಿಸಿದ್ದಾರೆ. ತಲೆ ತಗ್ಗಿಸಿ, ಎರಡು ಕೈಗಳನ್ನು ಹೃದಯದ ಮುಂದೆ ಜೋಡಿಸುವ ಕರಜೋಡಣೆಯ ಕ್ರಮ ಅತ್ಯಂತ ಸಾಮಾನ್ಯವಾಗಿ ನಮ್ಮಲ್ಲಿದೆ. ಅದರಲ್ಲೂ ಕರೋನಾ ಕಾಲಘಟ್ಟದ ಸಂದರ್ಭದಲ್ಲಿ ವಿದೇಶಿಗರೂ ನಮ್ಮ ಈ ಕೈಮುಗಿಯುವ ಕ್ರಮವನ್ನು ಕಲಿತುಬಿಟ್ಟಿದ್ದಾರೆ.

ನಮಸ್ಕಾರ ಮಾಡುವಾಗ ತಲೆ ತಗ್ಗಿಸುವುದು ನಮಸ್ಕರಿಸುವವನ ವಿನಯವಂತಿಕೆಯ ಹಾಗೂ ಸ್ವೀಕಾರಮಾಡುವವನ ಗೌರವದ ಸೂಚಕವಾಗಿದೆ. ಹೀಗೆ ಕರ ಜೋಡಿಸಿ ನಮಸ್ಕರಿಸುವ ವಿಧಾನವು ಸ್ತ್ರೀ-ಪುರುಷರೀರ್ವರಿಗೂ ಸಮಾನವಾಗಿ ಸಲ್ಲುವಂಥದ್ದಾಗಿದೆ.

ನಮಸ್ಕಾರ ಶಬ್ದದ ಆಧ್ಯಾತ್ಮಿಕ ಅರ್ಥವೂ ಆಳವಾಗಿದೆ. ‘ನಮಃ’ ಎಂದರೆ ‘ನ ಮಮ’ ಇದು ನನ್ನದಲ್ಲ ಎಂಬ ತ್ಯಾಗದ ಅರ್ಥಬರುತ್ತದೆ. ಅಂದರೆ, ಅಹಂಕಾರವನ್ನು ತ್ಯಜಿಸಿ ಶರಣಾಗು ವುದು. ಇಂದಿನ ಆಧುನಿಕ ಯುಗದಲ್ಲಿಯೂ ನಮಸ್ತೆ ಅಥವಾ ನಮಸ್ಕಾರ ಎಂಬ ಪದಗಳು ವಿಶ್ವದಾದ್ಯಂತ ಗೌರವದ ಅಭಿವ್ಯಕ್ತಿಯಾಗಿ ಬಳಸಲ್ಪಡುತ್ತಿವೆ.

ಯೋಗ ಮತ್ತು ಭಾರತೀಯ ಸಂಸ್ಕೃತಿಯ ಪ್ರಸಾರದಿಂದ ಇದರ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಒಟ್ಟಿನಲ್ಲಿ, ನಮಸ್ಕಾರವು ದೇಹದ ಭಂಗಿಯಷ್ಟೇ ಅಲ್ಲ; ಅದು ಮನಸ್ಸಿನ ವಿನಯ, ಆತ್ಮದ ಶುದ್ಧತೆ, ಭಕ್ತಿಯ ಅಭಿವ್ಯಕ್ತಿ ಹಾಗೂ ಆತ್ಮಸಮರ್ಪಣೆಯ ಒಂದು ದೇಹಭಾಷೆಯಾಗಿದೆ.

ಸ್ತ್ರೀಯರಿಗೆ ಪಂಚಾಂಗ ನಮಸ್ಕಾರವನ್ನು, ಅವರ ದೇಹರಚನೆ, ಆರೋಗ್ಯ ಮುಂತಾದ ಕಾರಣಗಳಿಗಾಗಿ ಉಚಿತ ಎಂದು ಗುರುತಿಸಿದ್ದಾರೆ. ಈ ರೀತಿಯ ನಮಸ್ಕಾರದಲ್ಲಿ ಎರಡು ಕೈಗಳು, ಎರಡು ಮೊಣಕಾಲುಗಳು ಹಾಗೂ ತಲೆ ಹೀಗೆ ದೇಹದ ಐದು ಅಂಗಗಳು ನೆಲಕ್ಕೆ ಸ್ಪರ್ಶಿಸುತ್ತವೆ. ಪುರುಷರಿಗೆ ಸಾಷ್ಟಾಂಗ ನಮಸ್ಕಾರವನ್ನು ಪ್ರಧಾನವಾಗಿ ಹೇಳಲಾಗಿದೆ.

ದೇವರಿಗೆ ವಂದಿಸುವಾಗ ಮಾತ್ರ ಈ ಸಾಷ್ಟಾಂಗ ನಮಸ್ಕಾರದ ಬಳಕೆಯಿದೆ. ಇನ್ನೊಬ್ಬ ಮನುಷ್ಯರಿಗೆ ನಮಸ್ಕರಿಸುವಾಗ ಈ ಅಷ್ಟಾಂಗ ನಮಸ್ಕಾರದ ಬಳಕೆಯಿಲ್ಲ ಎನ್ನುವುದು ವಿಶೇಷ. ಈ ರೀತಿಯ ನಮಸ್ಕಾರದಲ್ಲಿ ಎರಡು ಕೈಗಳು, ಎರಡು ಕಾಲುಗಳು, ಎರಡು ಮೊಣ ಕಾಲುಗಳು, ವಕ್ಷಸ್ಥಳ (ಎದೆ), ತಲೆ ಹೀಗೆ ದೇಹದ ಎಂಟು ಅಂಗಗಳು ನೆಲವನ್ನು ಸ್ಪರ್ಶಿಸ ಬೇಕಾಗುತ್ತದೆ.

ದಂಡವತ್ ನಮಸ್ಕಾರ ಎನ್ನುವ ಇನ್ನೊಂದು ಬಗೆಯ ನಮಸ್ಕಾರವೂ ಇದೆ. ದಂಡ ಎಂದರೆ ಕೋಲು. ದೇಹವನ್ನು ಒಂದು ಕೋಲಿನಂತೆ ನೇರವಾಗಿ ನೆಲದ ಮೇಲೆ ಹಾಕಿ, ಕೈಗಳನ್ನು ಮುಂದೆ ಚಾಚಿ ಒಂದು ಮರದ ಕೋಲು ನೆಲದ ಮೇಲೆ ಬಿದ್ದಂತೆ ಮಾಡುವ ನಮಸ್ಕಾರ ಇದಾಗಿದೆ. ಇದು ಸಂಪೂರ್ಣ ಶರಣಾಗತಿಯ ಸೂಚಕ. ಈ ನಮಸ್ಕಾರವು ಅಹಂಕಾರವನ್ನು ಸಂಪೂರ್ಣವಾಗಿ ತ್ಯಜಿಸುವುದರ ಪ್ರತೀಕವಾಗಿದೆ.

ಇನ್ನು ಪ್ರದಕ್ಷಿಣ ನಮಸ್ಕಾರ ಎನ್ನುವುದೂ ಇದೆ. ‘ಯಾನಿಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೆ’ ಹೀಗೆ ಪ್ರದಕ್ಷಿಣ ನಮಸ್ಕಾರ ಮಾಡುವುದರಿಂದ ಜನ್ಮಾಂತರಗಳಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಎನ್ನುವ ಉಕ್ತಿಯಿದೆ.

ದೇವಾಲಯಗಳಲ್ಲಾದರೆ ಗುಡಿಯ ಸುತ್ತ ಸುತ್ತಿ ಬಂದು ಸಾಷ್ಟಾಂಗ ಅಥವಾ ದಂಡವತ್ ಪ್ರಣಾಮ ಮಾಡುವುದು, ಮನೆಯ ಆದರೆ ನಮ್ಮ ಸುತ್ತಲೇ ನಾವು ಸುತ್ತಿ ಸಾಷ್ಟಾಂಗ ಅಥವಾ ದಂಡವತ್ ಪ್ರಣಾಮ ಮಾಡುವುದಾಗಿದೆ. ಹೀಗೆ ಪ್ರದಕ್ಷಿಣೆ ಬರುವಾಗ ತುಂಬಿದ ಗರ್ಭಿಣಿಯೊಬ್ಬಳು ಎಷ್ಟು ನಿಧಾನವಾಗಿ ನಡೆಯಬಲ್ಲಳೋ ಅಷ್ಟೇ ನಿಧಾನವಾಗಿ ನಡೆಯ ಬೇಕು ಎನ್ನುವ ನಿಯಮವೂ ಇದೆ.

ಅಭಿವಾದನ ನಮಸ್ಕಾರ ಅಂತ ಇನ್ನೊಂದು ಬಗೆಯ ನಮಸ್ಕಾರವೂ ಇದೆ. ಇದು ವಿಶೇಷ ವಾಗಿ ವೇದಪಾಠಿಗಳು ಅಥವಾ ಬ್ರಾಹ್ಮಣರು ಹಿರಿಯರ ಮುಂದೆ ಮಾಡುವ ನಮಸ್ಕಾರ. ತಮ್ಮ ಗೋತ್ರ, ಪ್ರವರ, ಶಾಖೆ ಇತ್ಯಾದಿಗಳನ್ನು ಹೇಳಿ ನಮಸ್ಕಾರ ಮಾಡುವ ಪದ್ಧತಿ. ಇದು ಪರಂಪರೆಯ ಗೌರವ ಮತ್ತು ವಂಶಪಾರಂಪರ್ಯದ ಸ್ಮರಣೆಯ ಉದ್ದೇಶವನ್ನು ಹೊಂದಿದೆ. ಈ ಕ್ರಮದಲ್ಲಿ, ಕತ್ರಿ ಕೈ ಅಂದರೆ ಕೈಯನ್ನು ಕತ್ತರಿಯಾಕಾರದಲ್ಲಿರಿಸಿ, ಬಲಗೈ ಯಿಂದ ಬಲಗಾಲನ್ನೂ ಎಡಗೈಯಿಂದ ಎಡಪಾದವನ್ನೂ ಸ್ಪರ್ಶಿಸಿ ಸಲ್ಲಿಸುವ ಕ್ರಮ ವಾಗಿದೆ.

ಇನ್ನು ಯೋಗಶಾಸ್ತ್ರದಲ್ಲಿ ಹೇಳಿರುವ ಸೂರ್ಯ ನಮಸ್ಕಾರವಂತೂ ಬಹಳ ಪ್ರಸಿದ್ಧ ವಾಗಿದೆ. ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ನಮಸ್ಕಾರದ ಮಹತ್ವವನ್ನು ವೇದಗಳು, ಶಾಸ್ತ್ರಗಳು, ಸ್ಮೃತಿಗಳು ಮತ್ತು ಪುರಾಣಗಳಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾದರೆ, ವೇದಗಳಲ್ಲಿ ‘ನಮಃ’ ಎಂಬ ಪದವು ಅನೇಕ ಬಾರಿ ಬರುತ್ತದೆ.

ವಿಶೇಷವಾಗಿ ಶ್ರೀ ರುದ್ರ ಮಂತ್ರದ ‘ನಮಕ’ ಭಾಗದಲ್ಲಿ ‘ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ’ ಮುಂತಾಗಿ ಈಶ್ವರನ ಪ್ರತಿ ನಾಮಗಳಿಗೆ ಮೊದಲು ‘ನಮಃ’ ಪದವನ್ನು ಬಳಸಿ ಮಂತ್ರವನ್ನು ಹೆಣೆಯಲಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಶ್ಲೋಕ: ‘ಮನ್ಮನಾ ಭವ ಮದ್ಭಕ್ತೋ ಮಧ್ಯಾಜೀ ಮಾಂ ನಮಸ್ಕುರು’ ಅಥವಾ ‘ತಸ್ಮಾತ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶ ಮೀಡ್ಯಮ್’ ಇತ್ಯಾದಿ ನಮಸ್ಕಾರ ಸೂಚಕ ವಾಕ್ಯಗಳ ಉಲ್ಲೇಖವಿದೆ.

ಹಿರಿಯರಿಗೆ, ಗುರುಗಳಿಗೆ ಮತ್ತು ಬ್ರಾಹ್ಮಣರಿಗೆ ನಮಸ್ಕಾರ ಮಾಡುವುದರಿಂದ ದೊರಕುವ ಲಾಭವನ್ನು ಮನುಸ್ಮೃತಿಯಲ್ಲಿ ಹೀಗೆ ವಿವರಿಸಲಾಗಿದೆ: ‘ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾ ಯಶೋ ಬಲಮ’ ಅಂದರೆ, ಯಾರು ಹಿರಿಯರಿಗೆ ಸದಾ ನಮಸ್ಕಾರ ಮಾಡಿ ಸೇವೆ ಮಾಡುತ್ತಾರೋ ಅವರಲ್ಲಿ ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲವು ವೃದ್ಧಿಯಾಗುತ್ತದೆ.

ಇನ್ನು ಭಾಗವತ ಮಹಾಪುರಾಣದಲ್ಲಿ ‘ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದ‌ ಸೇವನಂ ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ’ ಎಂದು ಭಕ್ತಿಯ ಒಂಬತ್ತು ವಿಧಗಳನ್ನು ಹೇಳುವಾಗ ‘ವಂದನಂ’ ಎನ್ನುವುದು ನಮಸ್ಕಾರವನ್ನೇ ಸೂಚಿಸುತ್ತದೆ.

ಮೂಲತಃ ನಮಸ್ಕಾರ ಎನ್ನುವುದಕ್ಕೆ ಬಹಳ ವಿಸ್ತಾರವಾದ ಅರ್ಥವಿವರಣೆಯಿದೆ. ಅದು ಶರಣಾಗತಿಯ, ದಾಸ್ಯತ್ವದ ಸಂಕೇತ. ಅದು ದೇಹಾಭಿಮಾನವನ್ನು ತೊರೆದು ತನ್ನನ್ನೇ ತಾನು ಸಮರ್ಪಿಸಿಕೊಳ್ಳುವುದರ ಲಕ್ಷಣವಾಗಿದೆ. ‘ನಿಮಗೊಂದು ದೊಡ್ಡ ನಮಸ್ಕಾರ, ಓಹೋಹೋ ನಮಸ್ಕಾರ, ಬರಬೇಕು, ದೊಡ್ದಜನ’ ಎಂಬಲ್ಲ ಒಂದು ರೀತಿಯ ವ್ಯಂಗ್ಯವೂ ಇದೆ. ಇನ್ನು ಯಾರಿಗೆ ಮೊದಲು ನಮಸ್ಕರಿಸಬೇಕು ಎನ್ನುವುದನ್ನು ಒಂದು ಸುಭಾಷಿತ ಬಹಳ ಸುಂದರವಾಗಿ ಹೇಳುತ್ತದೆ.

‘ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಂ. ಮುಖಃಪ್ರಕ್ಷಾಲನಾತ್ ಪೂರ್ವೇ ಪಾದಪ್ರಕ್ಷಾಲನಂ ಕುರು’. ಒಂದು ಜಾಗದಲ್ಲಿ ನಾಲ್ಕುಜನವಿದ್ದಾಗ, ಮೊದಲಿಗೆ ದುರ್ಜನರಿಗೆ ನಮಸ್ಕಾರ ಮಾಡಿ ಆಮೇಲೆ ಸಜ್ಜನರಿಗೆ ನಮಸ್ಕಾರ ಮಾಡಿ ಎನ್ನುತ್ತದೆ ಈ ಸುಭಾಷಿತ.

ಇನ್ನು ನಮಸ್ಕಾರಗಳಲ್ಲಿ ಒಂದಷ್ಟಕ್ಕೆ ನಿಷಿದ್ಧಗಳನ್ನೂ ಹೇಳಲಾಗಿದೆ. ನಮ್ಮ ಕೆಲ ರಾಜಕಾರಣಿಗಳು ಮಾಡುವ ಹಾಗೆ ಒಂದು ಹಸ್ತದಿಂದ ನಮಸ್ಕಾರ ಮಾಡಬಾರದು ಎನ್ನುವುದು ನಮ್ಮಲ್ಲಿಯ ವಿಧಿ, ಹಾಗೆ ಒಂದು ಕೈಯಿಂದ ಮಾಡುವ ನಮಸ್ಕಾರವು ಅಗೌರವ ಎಂದು ಪರಿಗಣಿತವಾಗುತ್ತದೆ.

ಹಾಗಾಗಿ ಅದು ಹೊಸ ಪುಣ್ಯಫಲಗಳನ್ನು ಕೊಡುವುದರ ಬದಲಿಗೆ, ಇದ್ದ ಪುಣ್ಯವನ್ನೂ ಕಳೆದುಬಿಡುತ್ತದೆಯಂತೆ (ಏಕಹಸ್ತ ಪ್ರಣಾಮಂಚ ಹಂತಿ ಪುಣ್ಯಂ ಪುರಾಕ್ರತಂ). ಪ್ರಧಾನಿ ಮೋದಿಯವರಂತೆ, ತಲೆತಗ್ಗಿಸಿ ನಡು ಬಗ್ಗಿಸಿ ಎರಡೂ ಕರಗಳನ್ನು ಜೋಡಿಸುವುದು ಶಾಸ್ತ್ರ ರೀತ್ಯವಾಗುತ್ತದೆ. ವಿಧಾನವನ್ನು ಮನವರಿಕೆ ಮಾಡುವುದು ಸುಲಭ ಎನ್ನುವ ಕಾರಣಕ್ಕೆ ಹೀಗೆ ಚಿರಪರಿಚಿತ ಹೆಸರು ಹೇಳಿದ್ದೇನಷ್ಟೇ!

ಯಾರೂ ಅನ್ಯಥಾಭಾವಿಸಬೇಕಿಲ್ಲ. ಚುನಾವಣಾ ಪ್ರಚಾರ ಸಭೆಗಳಲ್ಲಿ ಹೆಚ್ಚು ಬಳಕೆ ಯಾಗುವ, ಎರಡೂ ಕೈಯೆತ್ತಿ ತಲೆಯ ಮೇಲೆ ಕೈಮುಗಿಯುವ ಒಂದು ಬಗೆಯ ವಿಶಿಷ್ಟ ನಮಸ್ಕಾರ ಪದ್ಧತಿಯೂ ನಮ್ಮಲ್ಲಿದೆ.

ಹಾಗೆ ನೋಡಿದರೆ ಈ ಥರ ಎರಡೂ ಕೈ ಎತ್ತಿ ಶರಣಾಗತಿಯ ನಮಸ್ಕಾರವನ್ನು ಮೊದಲು ಬಳಸಿದವಳು ಹಾಗೂ ನಮಗೆ ಕಲಿಸಿದವಳು ಮಹಾಭಾರತದ ದ್ರೌಪದಿ. ತುಂಬಿದ ಸಭೆ ಯಲ್ಲಿ ಒಂಟಿ ವಸ್ತ್ರ ಧರಿಸಿದ್ದ ದ್ರೌಪದಿಯ ವಸಾಪಹರಣವಾಗುವಾಗ, ಇನ್ನು ತನ್ನ ವಸ್ತ್ರ ವನ್ನು ತಾನು ರಕ್ಷಿಸಿಕೊಳ್ಳಲಾರೆ, ಮರ್ಯಾದೆ ಉಳಿಯದು ಎನ್ನುವುದು ಖಾತ್ರಿಯಾದಾಗ, ಸಭೆಯಲ್ಲಿರುವ ಐವರು ಗಂಡಂದಿರು ಅಥವಾ ಹಿರಿಯರಾದ ಭೀಷ್ಮ-ದ್ರೋಣಾದಿಗಳೂ ನಿರುಪಾಯರಾಗಿದ್ದಾರೆ ಎಂದು ತಿಳಿದಾಗ, ತನ್ನ ದೇಹಭಾವವನ್ನೂ ಮರೆತು ‘ಹಾ ಕೃಷ್ಣದ್ವಾರಕಾವಾಸಿನ್ ಕ್ವಾಸಿ ಯಾದವ ನಂದನ ಇಮಾಂ ಅವಸ್ಥಾಂ ಸಂಪ್ರಾಪ್ತಾಂ ಅನಾಥಂ ಕಿಮುಪೇಕ್ಷಸೇ’ ಎಂದು ಸರ್ವಸಮರ್ಪಣಾ ಭಾವದಿಂದ ಎರಡೂ ಕೈ ಎತ್ತಿ ಮುಗಿದಾಗ ಅವಳ ಅಂಬರ ಅಕ್ಷಯವಾಯಿತು ಎನ್ನುವುದನ್ನು ನಾವು ಕೇಳಿದ್ದೇವೆ. ಇದು ನಮಸ್ಕಾರಕ್ಕಿರುವ ಶಕ್ತಿ, ಸಮರ್ಪಣೆಗಿರುವ ಸಾಮರ್ಥ್ಯಹಾಗೂ ನಿರಹಂಕಾರ ಭಾವಕ್ಕೆ ಸಿಗುವ ನಿಶ್ಚಿತ ಫಲ...

ವಿನಾಯಕ ವೆಂ ಭಟ್ಟ

View all posts by this author