ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಬದುಕಲ್ಲಿ ಸೋಲೊಪ್ಪದೆ ಗೆದ್ದ ಪ್ರೇರಣಾದಾಯಿ ಪ್ರಸಿದ್ಧರು

ಆತ್ಮಚರಿತ್ರೆ ಓದಿದಂತಾಗಬೇಕು ಎಂಬ ಉದ್ದೇಶದಿಂದ ಬೇಕಂತಲೇ ಉತ್ತಮ ಪುರುಷ ಏಕವಚನದಲ್ಲಿ ನಿರೂಪಣೆ. ಐನೂರು ಪುಟಗಳ ಪುಸ್ತಕ ಓದುವುದಕ್ಕೂ ಒಂದೇ ಅಂಕಣದಲ್ಲಿ ಒಂಬತ್ತು ಮಂದಿಯ ಸ್ವಗತಗಳನ್ನು ಓದುವುದಕ್ಕೂ ಅಜಗಜಾಂತರ ಇದೆಯೆಂದು ಗೊತ್ತು; ಆದರೂ “ಸೋಹಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ" ಎಂದು ವಿಷ್ಣುಸಹಸ್ರನಾಮದಲ್ಲಿ ಹೇಳಿರುವಂತೆ, ಇವುಗಳನ್ನು ಏಕಶ್ಲೋಕೀ ಆಟೊಬಯೊಗ್ರಾಫಿಗಳು ಎನ್ನೋಣ

ತಿಳಿರುತೋರಣ

ಅನುಭವಗಳ ರಸಪಾಕವಿರುವ ಆತ್ಮಚರಿತ್ರೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ - ಎಂದು ನರೇಂದ್ರ ಮೋದಿಯವರು ಇತ್ತೀಚೆಗೆ ಒಂದು ಭಾಷಣದಲ್ಲಿ ಹೇಳಿದ್ದರು. ಮುಖ್ಯವಾಗಿ ಈಗಿನ ತಲೆಮಾರಿನವರು, ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ರೀಲುಗಳ ‘ಶಾರ್ಟ್‌ಕಟ್ ಕಲ್ಚರ್’ಅನ್ನು ಅನುಸರಿಸುವುದಕ್ಕಿಂತ, ನಿಮ್ಮಿಷ್ಟದ ಸಾಧಕರ ಜೀವನಗಾಥೆಗಳನ್ನು ಓದಿ ಪ್ರೇರಣೆ ಪಡೆದುಕೊಳ್ಳಿ ಎಂದು ಮೋದಿಯವರ ಮಾತಿನ ಇಂಗಿತ.

ರೀಲುಗಳಿಂದಲೇ ಕಾಲಹರಣ ಎನ್ನುವಾಗ ಬಹುಶಃ ನಾವೆಲ್ಲರೂ ಹೆಗಲು ಮುಟ್ಟಿಕೊಳ್ಳಬೇಕಾಗು ತ್ತದೆ. ಅಷ್ಟರಮಟ್ಟಿಗೆ ಬೂದಿ ನಮ್ಮನ್ನೂ ತಗಲಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಇಂದಿನ ಅಂಕಣದಲ್ಲಿ ಒಂದು ವಿನೂತನ ಪ್ರಯೋಗ. ಒಂಬತ್ತು ಮಂದಿ ವಿಶ್ವವಿಖ್ಯಾತರ ಜೀವನಗಾಥೆ ಗಳದ್ದೊಂದು ಗೊಂಚಲು.

ಆತ್ಮಚರಿತ್ರೆ ಓದಿದಂತಾಗಬೇಕು ಎಂಬ ಉದ್ದೇಶದಿಂದ ಬೇಕಂತಲೇ ಉತ್ತಮ ಪುರುಷ ಏಕವಚನ ದಲ್ಲಿ ನಿರೂಪಣೆ. ಐನೂರು ಪುಟಗಳ ಪುಸ್ತಕ ಓದುವುದಕ್ಕೂ ಒಂದೇ ಅಂಕಣದಲ್ಲಿ ಒಂಬತ್ತು ಮಂದಿಯ ಸ್ವಗತಗಳನ್ನು ಓದುವುದಕ್ಕೂ ಅಜಗಜಾಂತರ ಇದೆಯೆಂದು ಗೊತ್ತು; ಆದರೂ “ಸೋಹ ಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ" ಎಂದು ವಿಷ್ಣುಸಹಸ್ರನಾಮದಲ್ಲಿ ಹೇಳಿರುವಂತೆ, ಇವುಗಳನ್ನು ಏಕಶ್ಲೋಕೀ ಆಟೊಬಯೊಗ್ರಾಫಿಗಳು ಎನ್ನೋಣ. ಅಂದಹಾಗೆ ಈ ಒಂಬತ್ತರಲ್ಲಿ ಎಂಟು ಮಂದಿ ಅಮೆರಿಕನ್ನರು, ಒಬ್ಬಾಕೆ ಬ್ರಿಟಿಷ್. ಈ ಆಯ್ಕೆ ದೇಶಭಾಷೆಗಳ ತಾರತಮ್ಯಕ್ಕಾಗಿ ಅಲ್ಲ. ವೈಫಲ್ಯಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಸಾಧಿಸಿದ್ದಕ್ಕೆ ಉತ್ತಮ ನಿದರ್ಶನಗಳು ಅಂತಷ್ಟೇ.

ಇದನ್ನೂ ಓದಿ: Srivathsa Joshi Column: ಆಪರೇಷನ್‌ ಸಿಂದೂರ್‌ ಪುಸ್ತಕ ಬರೆದ ಲೆ.ಜ| ಧಿಲ್ಲೊನ್‌ ಜೊತೆ

  1. ಥಾಮಸ್ ಆಲ್ವಾ ಎಡಿಸನ್: “ನೀವು ಒಂದೆರಡು ಬಾರಿ ವಿಫಲರಾಗಿದ್ದಕ್ಕೇ ಉತ್ಸಾಹ ಕಳೆದು ಕೊಂಡಿದ್ದೀರಾ? ಸರಳವಾದ ಗಣಿತದ ಸಮಸ್ಯೆಗೂ ಉತ್ತರ ಹೇಳಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಮೇಷ್ಟ್ರು ನಿಮ್ಮನ್ನು ‘ನೀನು ದಡ್ಡ’ ಎಂದು ಜರೆದಿದ್ದಾರೆಯೇ? ಬೇಸರಿಸದಿರಿ. ನಾನೂ ಬುದ್ಧಿವಂತ ಆಗಿದ್ದವನೇನಲ್ಲ. ನನ್ನ ಬಾಲ್ಯದಲ್ಲಿ ಶಿಕ್ಷಕರೇ ನನ್ನನ್ನು ‘ಏನನ್ನೂ ಕಲಿಯಲು ಸಾಧ್ಯವಾಗದಷ್ಟು ದಡ್ಡ; ನಿನ್ನಿಂದ ಏನೂ ಸಾಧಿಸಲಿಕ್ಕಾಗದು’ ಎಂದು ಬೈದಿದ್ದರು.

12ನೇ ವಯಸ್ಸಿನಲ್ಲಿಯೇ ಔಪಚಾರಿಕ ಶಿಕ್ಷಣವನ್ನು ನಿಲ್ಲಿಸಬೇಕಾಯ್ತು. ಅಷ್ಟೇಅಲ್ಲ, ಆವಿಷ್ಕಾರಗಳ ಪ್ರಯತ್ನಗಳಲ್ಲೂ ನಾನು ಸಾವಿರ ಬಾರಿ ವಿಫಲನಾದವನು. ಮೊದಲೆರಡು ಉದ್ಯೋಗಗಳಲ್ಲಿ ಕೆಲಸ ಕಳೆದುಕೊಂಡವನು. ಒಮ್ಮೆಯಂತೂ ಮೇಲಧಿಕಾರಿಯ ಮೇಜಿನ ಮೇಲೆ ಆಮ್ಲವನ್ನು ಸುರಿದು ಬಿಟ್ಟಿದ್ದರಿಂದ ಹಾಗಾಗಿತ್ತು. ಆದರೂ ನಾನು ಕೈಚೆಲ್ಲಲಿಲ್ಲ; ವೈಫಲ್ಯಗಳು ನನ್ನನ್ನು ಕುಗ್ಗಿಸುವುದಕ್ಕೆ ನಾನು ಬಿಡಲಿಲ್ಲ. ನನ್ನ ಬಗ್ಗೆ ಬರುತ್ತಿದ್ದ ಟೀಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಬಹುತೇಕ ಹಣವಿಲ್ಲದ ಸ್ಥಿತಿಯಲ್ಲಿದ್ದರೂ, ನನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಕೊನೆಗೆ, ನನ್ನ ಪೀಳಿಗೆಯ ಅತ್ಯಂತ ಯಶಸ್ವಿ ಆವಿಷ್ಕಾರಕರಲ್ಲಿ ಒಬ್ಬನಾದೆ. ಚಲನಚಿತ್ರ ಕ್ಯಾಮೆರಾದಿಂದ ಹಿಡಿದು ವಿದ್ಯುತ್ ಬಲ್ಬ್‌ವರೆಗೆ ಅನೇಕ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದೆ. ಒಂದು ವೇಳೆ ವೈಫಲ್ಯ ಗಳಿಂದಾಗಿ ಕೈಚೆಲ್ಲಿದ್ದರೆ, ಬಹುಶಃ ನೀವೆಲ್ಲ ಇಂದಿಗೂ ರಾತ್ರಿ ಬೆಳಕಿಗೆ ಮೇಣದಬತ್ತಿ ಬಳಸುತ್ತಿದ್ದಿ ರೇನೋ!"

  1. ಕರ್ನಲ್ ಹಾರ್ಲಂಡ್ ಸ್ಯಾಂಡರ್ಸ್: “ವಯಸ್ಸಾಯ್ತು ಇನ್ನು ನಾನು ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂಬ ನೆಪ ಹೇಳುವವರಲ್ಲಿ ನೀವೂ ಒಬ್ಬರಾಗಿದ್ದರೆ, ಮತ್ತೊಮ್ಮೆ ಯೋಚಿಸಿ. ವಿಶ್ವಪ್ರಸಿದ್ಧ ಕೆಂಟಕಿ ಫ್ರೈಡ್ ಚಿಕನ್ ಸಂಸ್ಥೆಯ ಸ್ಥಾಪಕನಾಗಿ ನಾನಿದನ್ನು ಹೇಳುತ್ತಿದ್ದೇನೆ. ನನ್ನ ಕನಸನ್ನು ನನಸಾಗಿಸಲಿಕ್ಕೆ ಆರಂಭಿಸಿದ್ದೇ 65ನೇ ವಯಸ್ಸಿನಲ್ಲಿ! ಸಾಮಾನ್ಯವಾಗಿ ಈ ವಯಸ್ಸಿ ನಲ್ಲಿ ಹೆಚ್ಚಿನವರು ನಿವೃತ್ತರಾಗಿ, ತಮ್ಮ ಜೀವನದ ಉಳಿದ ವರ್ಷಗಳನ್ನು ವಿಶ್ರಾಂತಿಯಿಂದ ಕಳೆಯಲು ಬಯಸುತ್ತಾರೆ. ಆದರೆ ನಾನು ನಿವೃತ್ತಿ ಸೌಲಭ್ಯಗಳನ್ನು ಪಡೆದ ಬಳಿಕ, ಬಂದ ಮೊದಲ ಸಾಮಾಜಿಕ ಭದ್ರತಾ ಚೆಕ್‌ನ 105 ಡಾಲರ್ ಬಳಸಿಕೊಂಡು ಹೊಸ ಉದ್ಯಮ ಆರಂಭಿಸಿದೆ.

ಫ್ರೈಡ್ ಚಿಕನ್ ತಯಾರಿಯ ನನ್ನ ವಿಶಿಷ್ಟ ವಿಧಾನವನ್ನು ರೆಸ್ಟೋರೆಂಟ್ ಮಾಲೀಕರು ಇಷ್ಟಪಡು ತ್ತಾರೆಂಬ ನಂಬಿಕೆಯಿತ್ತು. ಮಾರಾಟ ಹೆಚ್ಚಾದಾಗ, ಸ್ವಲ್ಪ ಲಾಭಾಂಶ ಸಿಗಬಹುದೆಂಬ ವಿಶ್ವಾಸ ವಿತ್ತು. ಆದರಿದು ಸುಲಭದ ಕೆಲಸವಾಗಿರಲಿಲ್ಲ. ಕೆಂಟಕಿ ರಾಜ್ಯದಾದ್ಯಂತ ಕಾರಿನಲ್ಲಿ ಸಂಚರಿಸುತ್ತ, ಒಂದೊಂದೇ ರೆಸ್ಟೋರೆಂಟ್‌ನ ಬಾಗಿಲು ತಟ್ಟುತ್ತಿದ್ದೆ. ಕೆಲವೊಮ್ಮೆ ಕಾರಿನಲ್ಲಿಯೇ ಮಲಗುತ್ತಿದ್ದೆ. ಆದರೆ ಒಬ್ಬ ವೃತ್ತಿಪರ ವ್ಯಕ್ತಿಯಂತೆ ಕಾಣಬೇಕೆಂದು ಯಾವಾಗಲೂ ಬಿಳಿ ಬಣ್ಣದ ಸೂಟ್ ಧರಿಸು ತ್ತಿದ್ದೆ. ಇಂದು ಕೆಎಫ್‌ʼಸಿ ಎಷ್ಟು ಪ್ರಸಿದ್ಧವಾಗಿದೆ ಎಂದು ನಿಮಗೆಲ್ಲರಿಗೂ ಗೊತ್ತಿದೆ. ಆರಂಭದಲ್ಲಿ ನನ್ನ ಯೋಜನೆಯನ್ನು ಸಾವಿರ ಜನ ತಿರಸ್ಕರಿಸಿದ್ದರು. ನಾನು ಧೃತಿಗೆಡಲಿಲ್ಲ. ಕೊನೆಗೂ ಯಾರಾದರೂ ಯೆಸ್ ಎನ್ನುವವರೆಗೆ ನನ್ನ ಪ್ರಯತ್ನವನ್ನು ಬಿಡಲಿಲ್ಲ. ನೆನಪಿಡಿ: ಯಶಸ್ಸಿಗೆ ವಯಸ್ಸಿನ ಮಿತಿಯಿಲ್ಲ. ನೀವು ಪ್ರಯತ್ನಿಸುವುದನ್ನು ನಿಲ್ಲಿಸದಿರುವವರೆಗೆ, ನಿಮ್ಮ ಯಶಸ್ಸಿನ ಕಥೆ ಆರಂಭವಾಗುವುದು ಸಾಧ್ಯವಿದೆ."

3. ಸ್ಟೀವ್ ಜಾಬ್ಸ್: “ನೀವು ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟವರೇ? ನಾನೂ ಅಂಥವನೇ! ಆದರೆ ದೊಡ್ಡ ಕನಸುಗಳನ್ನು ಕಾಣುವುದನ್ನು ನಿಲ್ಲಿಸಲಿಲ್ಲ. 19ನೇ ವಯಸ್ಸಿನಲ್ಲಿ ನನ್ನ ಸ್ನೇಹಿತ ಡ್ಯಾನ್ ಕೊಟ್ಕೆ ಜೊತೆ ಸೇರಿ ರೀಡ್ ಕಾಲೇಜಿನ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದೆ. ಭಾರತಕ್ಕೆ ಹೋಗಲು ನಿರ್ಧರಿಸಿದೆ, ಆಧ್ಯಾತ್ಮಿಕ ಜ್ಞಾನವನ್ನು ಹುಡುಕಲಿಕ್ಕೆ! ಈ ಅನುಭವವು ನನ್ನ ಮುಂದಿನ ಜೀವನ ಮತ್ತು ನಾನು ರೂಪಿಸಿದ ಅನೇಕ ಯೋಜನೆಗಳ ಮೇಲೆ ಬಹಳ ಪ್ರಭಾವ ಬೀರಿತು.

ನಾನೊಬ್ಬ ದೂರದೃಷ್ಟಿಯುಳ್ಳ, ಪರಿಪೂರ್ಣತೆ ಬಯಸುವ ವ್ಯಕ್ತಿಯಾಗಿದ್ದೆ. ಆರಂಭಿಕ ವರ್ಷ ಗಳಲ್ಲಿ ನನ್ನನ್ನು ಗೌರವದಿಂದಲೇ ನೋಡುತ್ತಿದ್ದರೂ, 30 ವರ್ಷವಾದಾಗ, ನಾನೇ ಕಟ್ಟಿದ್ದ ಆಪಲ್ ಕಂಪನಿ ನನ್ನನ್ನು ಕೆಲಸದಿಂದ ವಜಾಗೊಳಿಸಿತು!

ಒಮ್ಮೆ ಯೋಚಿಸಿ: ನೀವು ಶೂನ್ಯದಿಂದ ಕಟ್ಟಿದ ಸಂಸ್ಥೆಯೇ ಒಂದು ದಿನ ನಿಮ್ಮ ವಿರುದ್ಧ ತಿರುಗಿ ನಿಂತರೆ ಹೇಗಿರುತ್ತದೆ? ನೀವು ಅವಮಾನಿತರಾಗಿ, ಖಿನ್ನರಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಿರುದ್ಯೋಗಿಯಾಗಿ ಉಳಿಯುವ ಪರಿಸ್ಥಿತಿ ಬಂದರೆ? ಇಂತಹ ಕಠಿನ ಪರಿಸ್ಥಿತಿಯನ್ನು ನಾನು ಎದುರಿಸಿದೆ. ಅದನ್ನು ಮೀರಿ ನಿಂತೆ, ಯಶಸ್ವಿಯಾದೆ. ನನ್ನನ್ನು ವಜಾಗೊಳಿಸಿದ 11 ವರ್ಷಗಳ ಬಳಿಕ, ಆಪಲ್ ಕಂಪನಿ ದಿವಾಳಿಯಾಗುವ ಅಂಚಿಗೆ ತಲುಪಿದ್ದಾಗ ನನ್ನ ಬಳಿಗೆ ಮರಳಿ ಬಂದಿತು. ಆಮೇಲೆ ಅದನ್ನು ಮತ್ತೆ ಎತ್ತರಕ್ಕೆ ಕೊಂಡೊಯ್ಯುವುದು ಸಾಧ್ಯವಾಯ್ತು. ಹೊಸ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನಗಳ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿ ಆಪಲ್ ಬೆಳೆಯುವಂತಾಯ್ತು."

  1. ಆಲ್ಬರ್ಟ್ ಐನ್‌ಸ್ಟೀನ್: “ನನಗೆ ನಾಲ್ಕು ವರ್ಷ ವಯಸ್ಸಾಗುವವರೆಗೂ ಸರಿಯಾಗಿ ಮಾತನಾ ಡುವ ಸಾಮರ್ಥ್ಯ ಬೆಳೆದಿರಲಿಲ್ಲ. ಏನೋ ಗಂಭೀರವಾದ ಸಮಸ್ಯೆ ಇರಬಹುದೆಂದು ತಂದೆ-ತಾಯಿಗೂ ಅನಿಸಿತ್ತು. ಅಷ್ಟೇ ಅಲ್ಲ, ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೆ ಶಿಕ್ಷಕರು ನನ್ನನ್ನು ಅವಿಧೇಯ, ಅಚ್ಚುಕಟ್ಟಿಲ್ಲದವ ಮತ್ತು ಸೋಮಾರಿ ಎಂದು ಪರಿಗಣಿಸುತ್ತಿದ್ದರು.

ನನ್ನಲ್ಲಿ ಆಸಕ್ತಿಯ ಕೊರತೆ ಇದ್ದದ್ದು ನಿಜ. ಪುಸ್ತಕದಲ್ಲಿರುವ ವಿಷಯಗಳನ್ನು ಹಾಗೆಯೇ ಕಂಠಪಾಠ ಮಾಡುವುದು ನನಗೆ ಮನಸ್ಸಿರಲಿಲ್ಲ. ಬದಲಾಗಿ, ವಿಷಯಗಳ ಹಿಂದಿರುವ ಕಾರಣಗಳನ್ನು ತಿಳಿದು ಕೊಳ್ಳಲು ಇಷ್ಟಪಡುತ್ತಿದ್ದೆ. ಆಕಾಶವು ನೀಲಿ ಆಗಿರುವುದೇಕೆ? ದಿಕ್ಸೂಚಿಯ ಸೂಜಿ ಯಾವಾಗಲೂ ಒಂದೇ ದಿಕ್ಕಿನತ್ತ ತೋರಿಸುವುದೇಕೆ? ಅಂತೆಲ್ಲ ಯೋಚಿಸುತ್ತಿದ್ದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಗಳನ್ನು ಶಾಲೆಯಲ್ಲಿ ಕಲಿಸುತ್ತಿರಲಿಲ್ಲ.

11 ವರ್ಷದವನಿದ್ದಾಗ ಮ್ಯಾಕ್ಸ್ ಟಾಲ್ಮುಡ್ ಎಂಬ ಯುವಕನ ಪರಿಚಯವಾಯಿತು. 21 ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಮ್ಯಾಕ್ಸ್ ನನಗೆ ವಿಜ್ಞಾನ ಮತ್ತು ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಪರಿಚಯಿಸಿದರು. ಈ ರೀತಿಯ ಮುಕ್ತ ಮತ್ತು ಆಸಕ್ತಿದಾಯಕ ಕಲಿಕೆಯ ವಾತಾವರಣದಲ್ಲಿ ನನ್ನ ಪ್ರತಿಭೆ ಅರಳಿತು. ಮ್ಯಾಕ್ಸ್‌ಗೆ ಗೊತ್ತಾಗುವಷ್ಟರಲ್ಲಿ, ನಾನು ಅವರಿಗೆ ತಿಳಿದಿರಬಹುದಾದ ಜ್ಞಾನವನ್ನೂ ಮೀರಿ ಮುಂದೆ ಸಾಗಿದ್ದೆ!

ಆದ್ದರಿಂದ, ನಿಮ್ಮ ಇಂದಿನ ಸ್ವಭಾವ ಅಥವಾ ನಿಮ್ಮಲ್ಲಿರುವ ಕೊರತೆಗಳೇ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದೇನಲ್ಲ. ನಿಮ್ಮೊಳಗಿನ ಕುತೂಹಲ, ಕಲಿಯುವ ಆಸಕ್ತಿ ಮತ್ತು ನಿಮ್ಮ ಸಾಮರ್ಥ್ಯ ವನ್ನು ಬೆಳೆಸಿಕೊಳ್ಳುವ ಮನೋಭಾವವಿದ್ದರೆ ಅದೇ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ." 5. ಅಬ್ರಹಾಂ ಲಿಂಕನ್: “ನನ್ನ ಜೀವನದಲ್ಲಿ ಅನೇಕ ವೈಫಲ್ಯಗಳನ್ನು ಎದುರಿಸಿದ್ದೇನೆ. ಒಂದರ ಹಿಂದೆ ಮತ್ತೊಂದು, ಅಂತ್ಯವೇ ಇಲ್ಲವೆಂಬಂತೆ! ಎಳವೆಯಲ್ಲೇ ನನ್ನ ತಾಯಿ ನಿಧನರಾದರು.

ನಾನು ಆರಂಭಿಸಿದ ವ್ಯಾಪಾರ ವಿಫಲವಾಯಿತು. ಶಾಸನಸಭೆಗೆ ಸ್ಪರ್ಧಿಸಲು ಯತ್ನಿಸಿ ಸೋತೆ. ಉದ್ಯೋಗವನ್ನೂ ಕಳೆದುಕೊಂಡೆ. ಕಾನೂನು ಕಾಲೇಜಿಗೆ ಸೇರಬೇಕೆಂದಿದ್ದೆ, ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಸ್ವಂತ ವ್ಯಾಪಾರ ಆರಂಭಿಸಲು ಪ್ರಯತ್ನಿಸಿದೆ, ಅದಕ್ಕಾಗಿ ಸ್ನೇಹಿತ ರಿಂದ ಸಾಲ ಪಡೆದೆ, ವರ್ಷದ ಕೊನೆಯಲ್ಲಿ ದಿವಾಳಿತನ ಎದುರಿಸಬೇಕಾಯಿತು. ಆದರೆ ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ. 1834ರಲ್ಲಿ ಮತ್ತೊಮ್ಮೆ ಶಾಸನಸಭೆಗೆ ಸ್ಪರ್ಧಿಸಿದೆ, ಈ ಬಾರಿ ಗೆದ್ದೆ!

ಮಾರನೆ ವರ್ಷ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗಲು ಸಿದ್ಧನಾದೆ, ದುರದೃಷ್ಟವ ಶಾತ್ ಪ್ರಿಯತಮೆ ನಿಧನಳಾದಳು. ಈ ಆಘಾತದಿಂದ ತೀವ್ರ ಮಾನಸಿಕ ಕುಸಿತಕ್ಕೆ ಒಳಗಾದೆ. ಆರು ತಿಂಗಳು ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲಿದ್ದೆ. ಚುನಾವಣೆಯಲ್ಲಿ ಸೋಲುಗಳು ನನ್ನ ಆಶಾಭಾವನೆಯನ್ನು ಕಸಿದುಕೊಳ್ಳಲಿಲ್ಲ. ಪ್ರಯತ್ನವನ್ನು ಮುಂದುವರಿಸಿದೆ. ಕೊನೆಗೆ, 1860ರಲ್ಲಿ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದೆ. ಅಸಂಖ್ಯಾತ ಕಷ್ಟಗಳು, ಸೋಲುಗಳು ಮತ್ತು ವೈಫಲ್ಯಗಳ ನಡುವೆಯೂ ಒಂದು ರಾಷ್ಟ್ರದ ದಿಕ್ಕನ್ನೇ ಬದಲಿಸಿದ ವ್ಯಕ್ತಿಯಾಗಿ ನಾನಿತ್ತ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಸಂತಸವಿದೆ."

6. ಓಪ್ರಾ ವಿನ್ ಫ್ರೆ: “ನೀವು ಬಡವರಾಗಿರಬಹುದು, ನಿಮ್ಮ ತಂದೆ-ತಾಯಿ ಜವಾಬ್ದಾರಿಯಿಂದ ನಡೆದುಕೊಳ್ಳದೇ ಇರಬಹುದು, ನೀವು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರಬಹುದು, ಅಥವಾ ನಿಮ್ಮ ಚರ್ಮದ ಬಣ್ಣದ ಕಾರಣದಿಂದ ಜನರು ನಿಮ್ಮನ್ನು ತಿರಸ್ಕರಿಸಬಹುದು ಇವುಗಳಲ್ಲಿ ಯಾವುದೂ ನಿಮ್ಮನ್ನು ಕುಗ್ಗಿಸಲು ಬಿಡಬೇಡಿ. ನನ್ನ ಬಾಲ್ಯ ಸುಂದರವಾಗಿರಲಿಲ್ಲ. 9 ವರ್ಷದವಳಿದ್ದಾಗ ಸೋದರ ಸಂಬಂಧಿಗಳಿಂದ ಮತ್ತು ತಾಯಿಯ ಕೆಲ ಸ್ನೇಹಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದೆ. 14ನೇ ವಯಸ್ಸಿನಲ್ಲಿ ಗರ್ಭಿಣಿಯಾದೆ; ಮಗು ಶೈಶವಾವಸ್ಥೆಯಲ್ಲೇ ಮೃತಪಟ್ಟಿತು.

ಆದಾಗ್ಯೂ, ಚರ್ಚ್‌ನಲ್ಲಿ ಮಾತನಾಡುವ ಮತ್ತು ಜನರನ್ನು ಆಕರ್ಷಿಸುವ ವಿಶಿಷ್ಟ ಪ್ರತಿಭೆ ಬೆಳೆಸಿ ಕೊಂಡೆ. 1971ರಲ್ಲಿ ಟೆನ್ನೆಸ್ಸಿ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದೆ. ಆಮೇಲೆ ರೇಡಿಯೋ ಮತ್ತು ಟಿವಿ ಪ್ರಸಾರ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿದೆ. ಬಾಲ್ಟಿಮೋರ್‌ನ ಟಿವಿ ಕೇಂದ್ರವೊಂದರಲ್ಲಿ ಸಂಜೆಯ ಸುದ್ದಿವಾಚಕಿ ಯಾಗಿ ಮೊದಲ ಅವಕಾಶ ದೊರೆಯಿತು. ಸ್ವಲ್ಪ ಸಮಯದಲ್ಲೇ ಕೆಲಸ ದಿಂದ ವಜಾಗೊಳಿಸಿದರು. ಪ್ರತಿಭೆ ಇರಲಿಲ್ಲ ಎಂಬ ಕಾರಣದಿಂದಲ್ಲ; ಬದಲಾಗಿ, ನಾನು ಟಿವಿಗೆ ‘ಸೂಕ್ತಳಲ್ಲ’ ಎಂದು ಪರಿಗಣಿಸಲಾಯಿತು. ಈ ಅನುಭವ ಅವಮಾನಕರವೂ ಮುಜುಗರದ್ದೂ ಆಗಿತ್ತು. ಆಮೇಲೂ ಲೈಂಗಿಕ ಕಿರುಕುಳಕ್ಕೆ ಒಳಗಾದೆ.

ಅಡೆತಡೆಗಳು, ಸಂಕಷ್ಟಗಳು ಮತ್ತು ಸವಾಲುಗಳು ನನ್ನನ್ನು ಸೋಲಿಸದಂತೆ ನೋಡಿಕೊಂಡೆ. ಶಿಕಾಗೊ ಟಿವಿಯಲ್ಲಿ ಕಾರ್ಯಕ್ರಮದ ನಿರೂಪಕಿಯಾಗಿ ಕೆಲಸ ಪ್ರಾರಂಭಿಸಿದೆ. ಕೇವಲ ಒಂದು ತಿಂಗಳಲ್ಲೇ ವೀಕ್ಷಕರ ಸಂಖ್ಯೆ ಆಕಾಶಕ್ಕೇರಿತು. 1986ರಲ್ಲಿ ದಿ ಓಪ್ರಾ ವಿನ್ ಫ್ರೆ ಶೋ ಆರಂಭ ವಾಯಿತು. ಆ ಕಾಲದಲ್ಲಿ ಬಹುತೇಕ ಟಾಕ್-ಶೋ ನಿರೂಪಕರು ಕ್ಷುಲ್ಲಕ ಮತ್ತು ವಿವಾದಾತ್ಮಕ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರು. ಆದರೆ ನಾನು ಮಧ್ಯಮವರ್ಗದ ಜನರ ಜೀವನ ಹಾಗೂ ಸ್ವ-ಅಭಿವೃದ್ಧಿ ಮತ್ತು ಆತ್ಮೋನ್ನತಿಯಂತಹ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಚುರುಕಾದ ಹಾಸ್ಯಪ್ರಜ್ಞೆ ಮತ್ತು ಆತ್ಮೀಯ ಸ್ವಾಗತದ ಶೈಲಿ ಪ್ರೇಕ್ಷಕರ ಮನಗೆದ್ದಿತು. ಟಾಕ್-ಶೋ ನಿರೂಪಕಿಯಾಗಿ ನನ್ನ ಪ್ರತಿಭೆ, ಉದ್ಯಮಶೀಲತೆಯ ಕೌಶಲದೊಂದಿಗೆ ಸೇರಿಕೊಂಡು, ಮೂರು ಬಿಲಿಯನ್ ಡಾಲರ್ ಗಳ ನಿವ್ವಳ ಸಂಪತ್ತನ್ನು ತಂದುಕೊಟ್ಟಿತು. ಹಾಗಾಗಿ ವೈಫಲ್ಯ, ದುರದೃಷ್ಟಕರ ಅನುಭವ ನಿಮ್ಮನ್ನು ತಡೆಯುವ ಗೋಡೆಯಲ್ಲ; ಯಶಸ್ಸಿನತ್ತ ಏರಲು ಮೆಟ್ಟಿಲೆಂದು ತಿಳಿಯಿರಿ."

7. ಹೆನ್ರಿ ಫೋರ್ಡ್: “ವೈಫಲ್ಯ ಅಷ್ಟು ಕೆಟ್ಟದ್ದೇನಲ್ಲ. ವೈಫಲ್ಯದಿಂದಲೂ ನಾವು ಬಹಳಷ್ಟು ಕಲಿಯಬಹುದು. ನಾನು ಅನೇಕ ಬಾರಿ ವಿಫಲನಾಗಿದ್ದೆ. ಆದರೆ ಕಲಿತ ಪಾಠಗಳನ್ನು ಸದುಪಯೋಗ ಪಡಿಸಿಕೊಂಡೆ. ಅದರ ಫಲವಾಗಿ, ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಒಂದು ಅದ್ಭುತ ಕಂಪನಿಯನ್ನು ಕಟ್ಟಿ ಬೆಳೆಸುವುದು ಸಾಧ್ಯವಾಯ್ತು. ಆಟೋಮೊಬೈಲ್ ಉದ್ಯಮದಲ್ಲಿ ಪ್ರಾಬಲ್ಯ ವನ್ನು ಸ್ಥಾಪಿಸುವಂತಹ ಯಶಸ್ಸಿನ ಸೂತ್ರವನ್ನು ಕಂಡುಕೊಳ್ಳುವ ಮೊದಲು ಅನೇಕ ದೊಡ್ಡ ಹಿನ್ನಡೆಗಳನ್ನು ಎದುರಿಸಿದ್ದೇನೆ.

ಫೋರ್ಡ್ ಮೋಟರ್ ಕಂಪನಿಯನ್ನು ಆರಂಭಿಸುವುದಕ್ಕೆ ಮುನ್ನ ದಿವಾಳಿತನವನ್ನೂ ಅನುಭವಿ ಸಿದ್ದೆ. ಮೊದಲ ಮಾಡೆಲ್ ಟಿ ಕಾರನ್ನು ತಯಾರಿಸುವಾಗಲೂ ಸಾಕಷ್ಟು ಸವಾಲುಗಳು ಎದುರಾಗಿ ದ್ದವು. ಉದ್ಯಮಿಯಾಗಿ ಆರಂಭದಲ್ಲಿ ವಿಫಲನಾದರೂ, ಯಶಸ್ವಿಯಾಗಬೇಕೆಂಬ ಸಂಕಲ್ಪವನ್ನು ಎಂದಿಗೂ ಕೈಬಿಡಲಿಲ್ಲ. ಅವಿರತ ಪ್ರಯತ್ನ, ತಾಳ್ಮೆ ಮತ್ತು ದೃಢಸಂಕಲ್ಪದ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬನಾಗುವುದು ಸಾಧ್ಯವಾಯ್ತು. ವೈಫಲ್ಯವು ಅಂತ್ಯವಲ್ಲ; ಅದು ಇನ್ನಷ್ಟು ಬುದ್ಧಿವಂತಿಕೆಯಿಂದ ಮತ್ತೆ ಆರಂಭಿಸುವ ಅವಕಾಶ ಎನ್ನುವುದು ನಾನು ನಿತ್ಯ ಜಪಿಸುವ ಮಂತ್ರ."

8. ಜೆ.ಕೆ.ರೌಲಿಂಗ್: “ನಾನೇನೂ ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವಳಲ್ಲ. ನನ್ನ ಆರಂಭಿಕ ಜೀವನ ಯಾವುದೇ ರೀತಿಯಲ್ಲೂ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಎಡಿನ್ ಬರ್ಗ್‌ನಲ್ಲಿ ಇಲಿಗಳ ಕಾಟದಿಂದ ತುಂಬಿದ್ದ ಒಂದು ಅಪಾಟ್ ಮೆಂಟ್‌ನಲ್ಲಿ ವಾಸಿಸುತ್ತಿದ್ದ ಕಾಲವೂ ಇತ್ತು! ಒಬ್ಬಂಟಿ ತಾಯಿಯಾಗಿ, ಜೀವನ ನಿರ್ವಹಿಸಲು ಬೇಕಾದಷ್ಟು ಹಣ ಸಂಪಾದಿಸುವುದಕ್ಕೂ ಕಷ್ಟ ಪಡುತ್ತಿದ್ದೆ. ಒಟ್ಟಿನಲ್ಲಿ ಹೇಳುವುದಾದರೆ, ಜೀವನ ಅತ್ಯಂತ ದುಃಖಕರವಾಗಿತ್ತು.

ಉದ್ಯೋಗವಿಲ್ಲದ ಸ್ಥಿತಿಯಲ್ಲಿ, ನನ್ನ ಮೊದಲ ಪುಸ್ತಕವನ್ನು ಬರೆಯುವಾಗ ಒಂದೆಡೆ ಮಗುವನ್ನು ನೋಡಿಕೊಳ್ಳುತ್ತಾ, ಮತ್ತೊಂದೆಡೆ ಟೈಪ್‌ರೈಟರ್‌ನಲ್ಲಿ ಬರೆಯುತ್ತಾ ಎರಡನ್ನೂ ನಿಭಾಯಿಸ ಬೇಕಾಗಿತ್ತು. ಅದೂ ಸಹ ಮನೆಯ ಆರಾಮದಲ್ಲಿ ಅಲ್ಲ; ಒಂದು ಕಾಫಿ ಅಂಗಡಿಯಲ್ಲಿ ಕುಳಿತು ಬರೆಯಬೇಕಾಗಿತ್ತು. ಇಂದು ನೀವೆಲ್ಲ ಪ್ರೀತಿಸುವ ಹ್ಯಾರಿ ಪಾಟರ್ ಸರಣಿಯ ಮೊದಲ ಪುಸ್ತಕವಾದ ಹ್ಯಾರಿ ಪಾಟರ್ ಆಂಡ್ ದ ಫಿಲಾಸಫರ್ಸ್ ಸ್ಟೋನ್ ಆರಂಭದಲ್ಲಿ ಯಶಸ್ಸನ್ನು ಕಾಣಲಿಲ್ಲ. ಪ್ರಕಟಣೆಗೆ ಮುನ್ನ ಆ ಪುಸ್ತಕ ಹನ್ನೆರಡು ಬಾರಿ ತಿರಸ್ಕಾರಕ್ಕೆ ಒಳಗಾಯ್ತು. ಆದರೆ ಕೊನೆಗೆ ಅದೇ ಪುಸ್ತಕ ಭಾರೀ ಯಶಸ್ಸನ್ನು ಗಳಿಸಿತು. ನನ್ನ ದೃಢಸಂಕಲ್ಪ ಮತ್ತು ಛಲವೇ ನನ್ನನ್ನು ಬಡತನದಿಂದ ಅಪಾರ ಶ್ರೀಮಂತಿಕೆಯತ್ತ ಕರೆದೊಯ್ದಿತು ಎಂದಷ್ಟೇ ಹೇಳಬಲ್ಲೆ."

9. ವಾಲ್ಟ್ ಡಿಸ್ನಿ: “ಕೆಲವೊಮ್ಮೆ, ನಮ್ಮ ಜೀವನದಲ್ಲಿ ನಾವು ಬಯಸಿದ ರೀತಿಯಲ್ಲಿ ಯಾವುದೂ ನಡೆಯುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಇಡೀ ಜಗತ್ತೇ ನಮ್ಮ ವಿರುದ್ಧವಾಗಿದೆ ನಮ್ಮ ಜೀವನವೇ ಸಂಪೂರ್ಣ ಗೊಂದಲಮಯವಾಗಿದೆ ಎಂದೆನಿಸುತ್ತದೆ. ನನಗೂ ಈ ಅನುಭವವಾಗಿತ್ತು. ಜೀವನ ಸುಲಭವಾಗಿರಲಿಲ್ಲ. ಅನೇಕ ವೈಫಲ್ಯಗಳು ಎದುರಾದುವು. ಒಂದು ಕಾಲದಲ್ಲಿ ಪತ್ರಿಕೆಯ ಸಂಪಾದಕ ನಾಗಿದ್ದಾಗ, ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಮೇಲಧಿಕಾರಿಯ ಪ್ರಕಾರ, ನನಗೆ ಕಲ್ಪನಾಶಕ್ತಿಯ ಕೊರತೆಯಿತ್ತು ಮತ್ತು ನನ್ನ ಆಲೋಚನಾಶಕ್ತಿ ಹರಿತವಾಗಿರಲಿಲ್ಲ ಅಂತೆ. ಸ್ವಂತ ಉದ್ಯಮವನ್ನು ಆರಂಭಿಸಲು ಯತ್ನಿಸಿದರೆ ಅದು ಯಶಸ್ಸನ್ನು ಪಡೆಯುವ ಮೊದಲೇ ದಿವಾಳಿತನವನ್ನು ಎದುರಿಸಬೇಕಾಯಿತು. ಅಕ್ಷರಶಃ ಎಲ್ಲವನ್ನೂ ಕಳೆದುಕೊಂಡಿದ್ದೆ.

ನನ್ನ ಬಳಿ ಉಳಿದಿದ್ದದ್ದು ಒಂದಷ್ಟು ಕನಸುಗಳು ಮತ್ತು ಮಹತ್ತ್ವಾಕಾಂಕ್ಷೆಗಳು ಮಾತ್ರ. ಆದರೂ, ಪ್ರಯತ್ನಗಳಿಂದ ಬೇಸತ್ತಿರಲಿಲ್ಲ. ಯಶಸ್ಸು ಸಿಗುವವರೆಗೂ ಹೊಸಹೊಸ ಆಲೋಚನೆಗಳನ್ನು ಪ್ರಯತ್ನಿಸುತ್ತಲೇ ಇದ್ದೆ. ಕೊನೆಗೂ ಯಶಸ್ಸು ನನ್ನ ಪಾಲಾದಾಗ, ಅದರ ಪ್ರಮಾಣ ಅಪಾರ ವಾಗಿತ್ತು. ಇಂದು ವಾಲ್ಟ್ ಡಿಸ್ನಿ ಕಂಪನಿಯ ಚಲನಚಿತ್ರಗಳು, ಥೀಮ್‌ಪಾರ್ಕ್‌ಗಳು, ಜಗತ್ತಿನಾದ್ಯಂತ ಮಾರಾಟವಾಗುವ ವಿವಿಧ ಉತ್ಪನ್ನಗಳು ಪ್ರತಿವರ್ಷ ಬಿಲಿಯನ್‌ಗಟ್ಟಲೆ ಡಾಲರ್‌ಗಳ ಆದಾಯ ಗಳಿಸುತ್ತಿವೆ. ವೈಫಲ್ಯಗಳು ನಮ್ಮ ಕನಸುಗಳನ್ನು ಕೊನೆಗೊಳಿಸುವುದಿಲ್ಲ. ನಾವು ಪ್ರಯತ್ನಿಸುವು ದನ್ನು ನಿಲ್ಲಿಸದಿದ್ದರೆ, ಅದೇ ವೈಫಲ್ಯಗಳು ನಮ್ಮ ಯಶಸ್ಸಿನ ಮೆಟ್ಟಿಲುಗಳಾಗಬಹುದು."

ಅವರಿವರ ಜೀವನಗಾಥೆಗಳೇಕೆ, ಚಹ ಮಾರುತ್ತಿದ್ದ ಹುಡುಗನೊಬ್ಬ ದೇಶದ ಪ್ರಧಾನಿಯಾಗಿದ್ದಾನೆ. 30ಕ್ಕೂ ಹೆಚ್ಚು ದೇಶಗಳಿಂದ ಅತ್ಯುನ್ನತ ನಾಗರಿಕ ಪುರಸ್ಕಾರ ಪಡೆದಿದ್ದಾನೆ. ದೇಶವಾಸಿ ನೀಚರ ಮರ್ಯಾದೆಗೆಟ್ಟ ನೀಚತನವನ್ನು ಲೆಕ್ಕಿಸದೆ, ತನಗೆ ಅಂತ ಚಿಕ್ಕಾಸನ್ನೂ ಮುಟ್ಟದೆ, ಎಲ್ಲವನ್ನೂ ದೇಶದ ಏಳಿಗೆಗಾಗಿ ಮುಡಿಪಾಗಿಟ್ಟು ಮುಂದಡಿಯಿಡುತ್ತಿದ್ದಾನೆ. ಬೇರೇನು ಬೇಕು ನಿದರ್ಶನ! ಆಗಬೇಕಿರುವುದು ಅನುಸರಣ ಅಷ್ಟೇ.

ಶ್ರೀವತ್ಸ ಜೋಶಿ

View all posts by this author