ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಡ್ರಗ್‌ ಡೀಲರ್‌ʼಗಳ ಆರ್ಥಿಕ ಸ್ಥಿತಿ

ಸಮಾಜಶಾಸ್ತ್ರಜ್ಞ ಸುಧೀರ್ ವೆಂಕಟೇಶ್ ಅವರು ಚಿಕಾಗೋದ ಒಂದು ಗ್ಯಾಂಗ್ ಜತೆ ಸುದೀರ್ಘ ಕಾಲ ಕಳೆದರು. ಅನಿರೀಕ್ಷಿತವಾಗಿ ಅವರಿಗೆ ಆ ಗ್ಯಾಂಗ್‌ನ ಹಳೆಯ ಲೆಕ್ಕಪತ್ರದ ಪುಸ್ತಕಗಳು ಸಿಕ್ಕವು. ಆ ಅಂಕಿ-ಅಂಶಗಳನ್ನು ವಿಶ್ಲೇಷಿಸಿದಾಗ ಆಘಾತಕಾರಿ ಸತ್ಯಗಳು ತಿಳಿದವು. ಡ್ರಗ್ ಗ್ಯಾಂಗ್‌ಗಳು ಯಾವುದೋ ಒಂದು ದೊಡ್ಡ ಕಂಪನಿಯಂತೆ ಕೆಲಸ ಮಾಡುತ್ತವೆ.

ಸಂಪಾದಕರ ಸದ್ಯಶೋಧನೆ

ಫ್ರೀಕೋನಾಮಿಕ್ಸ್ ಪುಸ್ತಕದ ಅತ್ಯಂತ ರೋಚಕ ಅಧ್ಯಾಯವೆಂದರೆ, ‘ಡ್ರಗ್ ಡೀಲರ್‌ಗಳ ಆರ್ಥಿಕ ಸ್ಥಿತಿ’. ನಮಗೆ ಸಿನಿಮಾಗಳಲ್ಲಿ ಡ್ರಗ್ ಮಾರುವವರೆಲ್ಲರೂ ದೊಡ್ಡ ಬಂಗಲೆ, ಐಷಾರಾಮಿ ಕಾರು ಗಳಲ್ಲಿ ಓಡಾಡುವಂತೆ ತೋರಿಸಲಾಗುತ್ತದೆ. ಆದರೆ, ಸ್ಟೀವನ್ ಲೆವಿಟ್ ಮತ್ತು ಸುಧೀರ್ ವೆಂಕಟೇಶ್ ಅವರ ಸಂಶೋಧನೆ ಬೇರೆಯದೇ ಕಥೆ ಹೇಳುತ್ತದೆ.

ಸಮಾಜಶಾಸ್ತ್ರಜ್ಞ ಸುಧೀರ್ ವೆಂಕಟೇಶ್ ಅವರು ಚಿಕಾಗೋದ ಒಂದು ಗ್ಯಾಂಗ್ ಜತೆ ಸುದೀರ್ಘ ಕಾಲ ಕಳೆದರು. ಅನಿರೀಕ್ಷಿತವಾಗಿ ಅವರಿಗೆ ಆ ಗ್ಯಾಂಗ್‌ನ ಹಳೆಯ ಲೆಕ್ಕಪತ್ರದ ಪುಸ್ತಕಗಳು ಸಿಕ್ಕವು. ಆ ಅಂಕಿ-ಅಂಶಗಳನ್ನು ವಿಶ್ಲೇಷಿಸಿದಾಗ ಆಘಾತಕಾರಿ ಸತ್ಯಗಳು ತಿಳಿದವು. ಡ್ರಗ್ ಗ್ಯಾಂಗ್‌ಗಳು ಯಾವುದೋ ಒಂದು ದೊಡ್ಡ ಕಂಪನಿಯಂತೆ ಕೆಲಸ ಮಾಡುತ್ತವೆ.

ಟಾಪ್ ಲೀಡರ್‌ಗಳು ಪಿರಮಿಡ್‌ನ ತುತ್ತತುದಿಯಲ್ಲಿರುತ್ತಾರೆ. ಇವರು ತಿಂಗಳಿಗೆ ಲಕ್ಷಾಂತರ ಡಾಲರ್ ಸಂಪಾದಿಸುತ್ತಾರೆ. ಲೋಕಲ್ ಲೀಡರ್‌ಗಳು ತಮ್ಮ ಏರಿಯಾದ ಜವಾಬ್ದಾರಿ ಹೊತ್ತಿರುತ್ತಾರೆ ಮತ್ತು ಇವರ ಸಂಪಾದನೆಯೂ ಉತ್ತಮವಾಗಿರುತ್ತದೆ.

ಇದನ್ನೂ ಓದಿ:Vishweshwar Bhat Column: ಫ್ರೀಕೋನೊಮಿಕ್ಸ್‌ ಕುರಿತು

ಫುಟ್ ಸೋಲ್ಜರ್ಸ್ ಬೀದಿ ಬದಿಯಲ್ಲಿ ನಿಂತು ಡ್ರಗ್ ಮಾರುವವರು. ಇವರ ಸಂಖ್ಯೆ ಅತಿ ಹೆಚ್ಚು. ಅಂಕಿಅಂಶಗಳ ಪ್ರಕಾರ, ಈ ಕೆಳಹಂತದ ಡೀಲರ್‌ಗಳು ಗಂಟೆಗೆ ಕೇವಲ ಮುನ್ನೂರು ರುಪಾಯಿ ಸಂಪಾದಿಸುತ್ತಿದ್ದರು. ಆ ಸಮಯದಲ್ಲಿ ಅಮೆರಿಕದಲ್ಲಿ ಕಾನೂನುಬದ್ಧವಾಗಿ ನಿಗದಿಯಾಗಿದ್ದ ‘ಕನಿಷ್ಠ ವೇತನ’ಕ್ಕಿಂತಲೂ ಇದು ಕಡಿಮೆಯಾಗಿತ್ತು!

ಅಂದರೆ, ಒಬ್ಬ ಮ್ಯಾಕ್ಡೊನಾಲ್ಡ್ಸ್ ಹೋಟೆಲ್ ಕೆಲಸಗಾರ ಇವರಿಗಿಂತ ಹೆಚ್ಚು ಮತ್ತು ಸುರಕ್ಷಿತವಾಗಿ ಸಂಪಾದಿಸುತ್ತಿದ್ದ. ಇಷ್ಟೊಂದು ಅಪಾಯಕಾರಿ ಕೆಲಸ ಮಾಡಿದರೂ ಕೈಯಲ್ಲಿ ಹಣ ಉಳಿಯು ತ್ತಿರಲಿಲ್ಲ. ತಮ್ಮ ದೈನಂದಿನ ಊಟ ಮತ್ತು ವಸತಿಯ ಖರ್ಚನ್ನು ಭರಿಸುವಷ್ಟು ಆದಾಯ ಅವರಿಗೆ ಇರಲಿಲ್ಲ.

ಹೀಗಾಗಿಯೇ, ಅವರು ಅನಿವಾರ್ಯವಾಗಿ ತಮ್ಮ ತಾಯಿಯ ಮನೆಯ ವಾಸಿಸಬೇಕಾಗಿತ್ತು. ‘ಡ್ರಗ್ ಲಾರ್ಡ್’ ಎಂಬ ಬಿರುದಿದ್ದರೂ ಮನೆಯಲ್ಲಿ ತಾಯಿ ಹಾಕಿದ ಅನ್ನವನ್ನೇ ತಿನ್ನಬೇಕಾದ ಪರಿಸ್ಥಿತಿ ಅವರದಾಗಿತ್ತು. ಈ ಕೆಲಸದಲ್ಲಿ ಸಾಯುವ ಅಥವಾ ಜೈಲಿಗೆ ಹೋಗುವ ಸಾಧ್ಯತೆ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಇತ್ತು. ಆದರೂ ಇವರು ಈ ಕೆಲಸ ಮಾಡುತ್ತಿದ್ದದ್ದು ಯಾಕೆ? ಇವರೆಲ್ಲರೂ ‘ಒಂದಲ್ಲ ಒಂದು ದಿನ ನಾನು ಗ್ಯಾಂಗ್ ಲೀಡರ್ ಆಗುತ್ತೇನೆ ಮತ್ತು ಶ್ರೀಮಂತನಾಗುತ್ತೇನೆ’ ಎಂಬ ಆಸೆಯಿಂದ ಕೆಲಸ ಮಾಡುತ್ತಿದ್ದರು.

ಇದು ಒಂಥರಾ ‘ಅಮೆರಿಕನ್ ಐಡಲ್’ ಸ್ಪರ್ಧೆಯಿದ್ದಂತೆ; ಲಕ್ಷಾಂತರ ಜನರಲ್ಲಿ ಒಬ್ಬರು ಮಾತ್ರ ಸ್ಟಾರ್ ಆಗುತ್ತಾರೆ, ಉಳಿದವರು ಬರಿಗೈಲಿ ಉಳಿಯುತ್ತಾರೆ. ಅರ್ಥಶಾಸ್ತ್ರದಲ್ಲಿ ಇದನ್ನು ‘ಟೂರ್ನ ಮೆಂಟ್ ಎಫೆಕ್ಟ್’ ಎನ್ನಲಾಗುತ್ತದೆ. ಮೇಲಿರುವ ಒಂದು ಸ್ಥಾನಕ್ಕಾಗಿ ಕೆಳಗಿರುವ ನೂರಾರು ಜನ ಅತಿ ಕಡಿಮೆ ಸಂಬಳಕ್ಕೆ, ಪ್ರಾಣದ ಹಂಗು ತೊರೆದು ದುಡಿಯುತ್ತಾರೆ. ಗ್ಯಾಂಗ್ ಲೀಡರ್ ಆಗುವ ಕನಸು ಇವರನ್ನು ಆ ಬಡತನದಲ್ಲೂ ಡ್ರಗ್ ಮಾರುವಂತೆ ಪ್ರೇರೇಪಿಸುತ್ತದೆ.

ಡ್ರಗ್ ವ್ಯವಹಾರವು ಹೊರಗಿನಿಂದ ಆಕರ್ಷಕವಾಗಿ ಕಂಡರೂ, ಶೇ.99ರಷ್ಟು ಜನರಿಗೆ ಅದು ಕೇವಲ ಬಡತನ ಮತ್ತು ಸಾವಿನ ಹಾದಿಯಾಗಿರುತ್ತದೆ. ಶ್ರೀಮಂತಿಕೆ ಎಂಬುದು ಕೇವಲ ಬೆರಳಣಿಕೆಯಷ್ಟು ನಾಯಕರಿಗೆ ಮಾತ್ರ ಸೀಮಿತ ಎಂಬುದು ಈ ಪುಸ್ತಕ ಬಿಚ್ಚಿಡುವ ಕಹಿ ಸತ್ಯ. ಡ್ರಗ್ ಮಾರಾಟದ ಈ ವ್ಯವಸ್ಥೆಯು ಸಾಫ್ಟ್‌ʼವೇರ್ ಕಂಪನಿ ಅಥವಾ ಸಿನಿಮಾ ರಂಗದಂತೆಯೇ ಕೆಲಸ ಮಾಡುತ್ತದೆ.

ಸಾವಿರಾರು ಜನ ಜೂನಿಯರ್ ಆರ್ಟಿಸ್ಟ್‌ಗಳು ಅಥವಾ ಪ್ರೋಗ್ರಾಮರ್‌ಗಳು ಭವಿಷ್ಯದಲ್ಲಿ ತಾವೊ ಬ್ಬರೇ ದೊಡ್ಡ ಸ್ಟಾರ್ ಅಥವಾ ಸಿಇಒ ಆಗುತ್ತೇವೆಂಬ ಕನಸು ಕಾಣುತ್ತಾರೆ. ಈ ಡ್ರಗ್ ಡೀಲರ್‌ಗಳು ಕೂಡ ಅಷ್ಟೇ. ಅವರು ಪಡೆಯುವ ಸಂಬಳ ಅಲ್ಪವಾದರೂ, ಗ್ಯಾಂಗ್‌ನಲ್ಲಿ ಮೇಲೆ ಹೋದಂತೆ ಸಿಗುವ ಬೃಹತ್ ಮೊತ್ತದ ಆಸೆಗೆ ಬಿದ್ದು ಈ ಅಪಾಯಕಾರಿ ಜೀವನವನ್ನು ಮುಂದುವರಿಸುತ್ತಾರೆ.

ಸಂಶೋಧನೆಯ ಪ್ರಕಾರ, ಒಬ್ಬ ‘ಫುಟ್ ಸೋಲ್ಜರ್’ (ಕೆಳಹಂತದ ಮಾರಾಟಗಾರ) ಗ್ಯಾಂಗ್ ಲೀಡರ್ ಆಗುವ ಸಾಧ್ಯತೆ ಅತ್ಯಲ್ಪವಾಗಿದ್ದರೂ, ಆ ಸಣ್ಣ ಭರವಸೆಯೇ ಅವರ ಪ್ರಚೋದನೆಯಾಗಿರುತ್ತದೆ. ಈ ಡೀಲರ್‌ಗಳು ಸಮಾಜದಲ್ಲಿ ತಮ್ಮ ಪ್ರಭಾವ ತೋರಿಸಲು ಅಥವಾ ‘ಗತ್ತು’ ಪ್ರದರ್ಶಿಸಲು ಇರುವ ಅಲ್ಪ ಹಣವನ್ನು ದುಬಾರಿ ಬಟ್ಟೆ, ಚೈನ್ ಅಥವಾ ಗ್ಯಾಜೆಟ್‌ಗಳ ಮೇಲೆ ಖರ್ಚು ಮಾಡುತ್ತಾರೆ.

ಇವರು ಕಾನೂನುಬಾಹಿರ ಕೆಲಸ ಮಾಡುವುದರಿಂದ ಇವರಿಗೆ ಬ್ಯಾಂಕ್ ಖಾತೆಗಳು ಇರುವುದಿಲ್ಲ ಅಥವಾ ಉಳಿತಾಯ ಮಾಡುವ ಶಿಸ್ತು ಇರುವುದಿಲ್ಲ. ದಿನದ ಕೊನೆಯಲ್ಲಿ ಕೈಯಲ್ಲಿ ಹಣವಿಲ್ಲದ ಕಾರಣ, ಅವರು ಅನಿವಾರ್ಯವಾಗಿ ಅಮ್ಮನ ಮನೆಯಲ್ಲಿ ಉಳಿಯಬೇಕಾಗುತ್ತದೆ. ಅಮ್ಮನ ಮನೆ ಅವರಿಗೆ ಕೇವಲ ವಸತಿಯಲ್ಲ, ಅದೊಂದು ‘ಸಬ್ಸಿಡಿ’ ಇದ್ದಂತೆ. ತಾಯಿ ನೀಡುವ ಉಚಿತ ಊಟ ಮತ್ತು ವಸತಿಯೇ ಅವರ ಈ ಕಡಿಮೆ ಆದಾಯದ ಜೀವನವನ್ನು ಸರಿದೂಗಿಸುತ್ತದೆ.

ವಿಶ್ವೇಶ್ವರ ಭಟ್‌

View all posts by this author