ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಜೀವಗಳನ್ನು ಉಳಿಸುತ್ತಿರುವ ಪ್ರೇಮಪ್ರಸಂಗದ ಫಲ

ಶಸ್ತ್ರವೈದ್ಯರು ತಮ್ಮ ಕೈಗಳನ್ನು, ಉಪಕರಣಗಳನ್ನು ಹಾಗೂ ಶಸ್ತ್ರಚಿಕಿತ್ಸಾ ಅವಧಿಯಲ್ಲಿ ನೂರಕ್ಕೆ ನೂರರಷ್ಟು ಕ್ರಿಮಿರಾಹಿತ್ಯ ಪರಿಸರ (ಏಸೆಪ್ಟಿಕ್ ಕಂಡೀಷನ್) ವನ್ನು ಪರಿಪಾಲಿಸಬೇಕು. ಅಕಸ್ಮಾತ್ ಎಲ್ಲಾದರೂ ದೋಷವುಂಟಾಗಿ ಸೋಂಕು ತಲೆದೋರಿದರೆ, ಆ ಸೋಂಕನ್ನು ಸಕಾಲದಲ್ಲಿ ಪರಿಣಾಮ ಕಾರಿಯಾಗಿ ನಿಗ್ರಹಿಸಲು ಸೂಕ್ತ ಪ್ರಬಲ ಪ್ರತಿಜೈವಿಕ ಔಷಧಿಗಳು ಇರಬೇಕು.

ಜೀವಗಳನ್ನು ಉಳಿಸುತ್ತಿರುವ ಪ್ರೇಮಪ್ರಸಂಗದ ಫಲ

ಹಿಂದಿರುಗಿ ನೋಡಿದಾಗ

naasomeswara@gmail.com

ಒಬ್ಬ ಪ್ರಿಯಕರನು ತನ್ನ ಪ್ರೇಯಸಿಗಾಗಿ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ, ಷಹಜಹಾನನು ಮುಮ್ತಾಜ್ ಮಹಲಳಿಗಾಗಿ ಕಟ್ಟಿಸಿದ ತಾಜಮಹಲ್. ಪಿಯರಿ ಕ್ಯೂರಿ ತನ್ನ ಸ್ವಂತ ಸಂಶೋಧನೆಯನ್ನು ಬಿಟ್ಟು, ಮೇಡಂ ಕ್ಯೂರಿಯೊಡನೆ ಆಕೆಯ ಸಂಶೋಧನೆಯಲ್ಲಿ ತೊಡಗಿ ಇಬ್ಬರೂ ನೊಬೆಲ್ ಪಾರಿತೋಷಕವನ್ನು ಪಡೆದರು.

ಬ್ರಿಟನ್ನಿನ ಎಂಟನೆಯ ಕಿಂಗ್ ಎಡ್ವರ್ಡ್, ತನ್ನ ಪ್ರೇಯಸಿ ವ್ಯಾಲಿಸ್ ಸಿಂಪ್ಸನ್‌ಳನ್ನು ಮದುವೆ ಯಾಗಲು ಸಿಂಹಾಸನವನ್ನೇ ತೊರೆದ. ಲಡ್ವಿಗ್ ವಾನ್ ಬಿಥೋವನ್, ವಿಶ್ವ ವಿಖ್ಯಾತ ಪಿಯಾನೊ ವಾದಕ ಹಾಗೂ ಸಂಯೋಜಕ. ಇವನು ಆಂಟೋನಿಯೊ ಬ್ರೆಂಟಾನೊ ಎಂಬ ಪ್ರೇಯಸಿಗಾಗಿ ಬರೆದ ಪತ್ರವು ಎಷ್ಟು ಭವ್ಯವಾಗಿದೆ ಎಂದರೆ, ಈ ಪತ್ರವನ್ನು ಆಧರಿಸಿ ಕಾದಂಬರಿಗಳು ರಚನೆಯಾಗಿವೆ ಹಾಗೂ ಚಲನಚಿತ್ರಗಳು ನಿರ್ಮಾಣವಾಗಿವೆ.

ಹೀಗೆ ಅಸಂಖ್ಯ ಪ್ರೇಮಕಥನಗಳಲ್ಲಿ ಬಹಳ ಗಮನೀಯವಾದ ಪ್ರೇಮಕಥನವೆಂದರೆ ಡಾ.ವಿಲಿಯಮ್ ಸ್ಟೀವರ್ಡ್ ಹಾಲ್‌ಸ್ಟೆಡ್ ಹಾಗೂ ಕೆರೋಲಿನ ಹ್ಯಾಂಪ್ಟನ್ ಅವರ ಪ್ರೇಮಪ್ರಸಂಗ. ಹಾಲ್‌ಸ್ಟೆಡ್ ತನ್ನ ಪ್ರೇಯಸಿ ಹಾಗೂ ಮಡದಿಗಾಗಿ ಮಾಡಿದ ಒಂದು ಆವಿಷ್ಕಾರ, ಇಂದಿಗೂ ಕೋಟ್ಯಂತರ ಜೀವವನ್ನು ಉಳಿಸುತ್ತಿದೆ.

ಇದನ್ನೂ ಓದಿ: D‌r N Someshwara Column: ವೈದ್ಯ ವಿಜ್ಞಾನದ ಮುಂಗೋಳಿ: ಇಮ್‌ ಹೋಟೆಪ್

ಅವರ ಪ್ರೇಮಕಥನವನ್ನು ಸ್ಥೂಲವಾಗಿ ತಿಳಿಯೋಣ. ಒಂದು ಶಸ್ತ್ರಚಿಕಿತ್ಸೆಯು ಯಶಸ್ವಿ ಯಾಗಬೇಕಾದರೆ, ಶಸ್ತ್ರವೈದ್ಯನಿಗೆ ತಾನು ಮಾಡಲಿರುವ ಶಸ್ತ್ರಚಿಕಿತ್ಸೆಯ ಕುರಿತು ಸಮಗ್ರ ಅರಿವು ಇರಬೇಕು ಹಾಗೂ ಸಾಕಷ್ಟು ಅನುಭವವೂ ಇರಬೇಕು. ಶಸ್ತ್ರಚಿಕಿತ್ಸೆಯನ್ನು ಸರಾಗವಾಗಿ ನಡೆಸಲು ಅನುಕೂಲಕರವಾದ ಶಸ್ತ್ರಚಿಕಿತ್ಸಾ ಕೊಠಡಿ, ಉಪಕರಣಗಳು ಹಾಗೂ ಸಹಾಯಕರು ಇರಬೇಕು.

ಶಸ್ತ್ರವೈದ್ಯರು ತಮ್ಮ ಕೈಗಳನ್ನು, ಉಪಕರಣಗಳನ್ನು ಹಾಗೂ ಶಸ್ತ್ರಚಿಕಿತ್ಸಾ ಅವಧಿಯಲ್ಲಿ ನೂರಕ್ಕೆ ನೂರರಷ್ಟು ಕ್ರಿಮಿರಾಹಿತ್ಯ ಪರಿಸರ (ಏಸೆಪ್ಟಿಕ್ ಕಂಡೀಷನ್) ವನ್ನು ಪರಿಪಾಲಿಸಬೇಕು. ಅಕಸ್ಮಾತ್ ಎಲ್ಲಾದರೂ ದೋಷವುಂಟಾಗಿ ಸೋಂಕು ತಲೆದೋರಿದರೆ, ಆ ಸೋಂಕನ್ನು ಸಕಾಲದಲ್ಲಿ ಪರಿಣಾಮಕಾರಿಯಾಗಿ ನಿಗ್ರಹಿಸಲು ಸೂಕ್ತ ಪ್ರಬಲ ಪ್ರತಿಜೈವಿಕ ಔಷಧಿಗಳು ಇರಬೇಕು. ಇವೆಲ್ಲಕ್ಕಿಂತಲೂ ಮುಖ್ಯವಾದದ್ದೆಂದರೆ, ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕಾದರೆ, ರೋಗಿಯು ಎಚ್ಚರದಪ್ಪಿರಬೇಕು. ಉತ್ತಮ ಅರಿವಳಿಕೆಯು ಶಸ್ತ್ರಚಿಕಿತ್ಸೆಯು ಪೂರ್ಣ ಮುಗಿಯುವವರಿಗೂ ತನ್ನ ಪ್ರಭಾವವನ್ನು ಬೀರುತ್ತಿರ ಬೇಕು. ಆಗ ಮಾತ್ರ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಲು ಸಾಧ್ಯ. 19ನೆಯ ಶತಮಾನದಲ್ಲಿ, ‘ನಮ್ಮ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಇರುತ್ತವೆ; ಒಂದೊಂದು ಸೂಕ್ಷ್ಮಜೀವಿಯು ಒಂದೊಂದು ಕಾಯಿಲೆಯನ್ನು ತರುತ್ತವೆ’ ಎಂಬ ತಿಳಿವಿತ್ತು.

Screenshot_2 R

ಲ್ಯೂವೆನ್ ಹಾಕ್, ಪ್ಯಾಶ್ಚರ್ ಮತ್ತು ಕಾಚ್ ಮುಂತಾದ ವಿಜ್ಞಾನಿಗಳು ಈ ಕ್ಷೇತ್ರದಲ್ಲಿ ಅದ್ಭುತವಾದ ಕೆಲಸವನ್ನು ಮಾಡಿದ್ದರು. ಜೋಸೆಫ್ ಲಿಸ್ಟರ್, ಈ ಸೂಕ್ಷ್ಮ‌ಜೀವಿಗಳನ್ನು ನಿಗ್ರಹಿಸಲು ‘ಕಾರ್ಬಾಲಿಕ್ ಆಸಿಡ್’ ಎಂಬ ರಾಸಾಯನಿಕವನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದ. ಹಾಗಾಗಿ ಅಂದಿನಿಂದ ವೈದ್ಯರು, ನಾನಾ ರೀತಿಯ ರಾಸಾಯನಿಕಗಳ ಕ್ರಿಮಿನಾಶಕ ಗುಣಗಳನ್ನು ತಿಳಿಯಲು ಹಲವು ಪ್ರಯೋಗಗಳನ್ನು ನಡೆಸಿದ್ದರು. ಆದರೂ ಅವರಿಗೆ ಮಾದರಿ ಎನ್ನಬಹುದಾದ ಪೂತಿನಾಶಕ ದ್ರಾವಣ(ಆಂಟಿ-ಸೆಪ್ಟಿಕ್ ಲೋಶನ್) ದೊರೆತಿರಲಿಲ್ಲ.

1889. ಅಮೆರಿಕದ ಬಾಲ್ಟಿಮೋರ್ ಪ್ರದೇಶದಲ್ಲಿ ಜಾನ್ ಹಾಪ್ಕಿನ್ಸ್ ಸಂಸ್ಥೆಯು ತನ್ನ ಆಸ್ಪತ್ರೆಯನ್ನು ತೆರೆಯಿತು. ಈ ಆಸ್ಪತ್ರೆಯನ್ನು ಸೇರಿದ ಪ್ರಮುಖ ವೈದ್ಯರಲ್ಲಿ ವಿಲಿಯಮ್ ಸ್ಟೀವರ್ಟ್ ಹಾಲ್‌ಸ್ಟೆಡ್ ಪ್ರಮುಖನಾಗಿದ್ದ (1852-1922). ಇವನು ಶಸ್ತ್ರವೈದ್ಯನಾಗಿದ್ದ. ಹಾಗಾಗಿ ಇವನು ತನ್ನ ಶಸ್ತ್ರಚಿಕಿತ್ಸಾ ಸಹಾಯಕರನ್ನು ಆಯ್ಕೆ ಮಾಡಿಕೊಳ್ಳುವುದರ ಜತೆಯಲ್ಲಿ ನರ್ಸ್‌ಗಳನ್ನೂ ಆಯ್ಕೆ ಮಾಡಿದ.

ಹಾಗೆ ಆಯ್ಕೆ ಮಾಡಿದ ನರ್ಸ್‌ಗಳಲ್ಲಿ ಕೆರೋಲಿನ್ ಹ್ಯಾಂಪ್ಟನ್ (1861-1939) ಸಹ ಒಬ್ಬಳು. ಕೆರೋಲಿನ್ ಅಸಾಮಾನ್ಯ ನರ್ಸ್ ಆಗಿದ್ದಳು. ಅನುಪಮ ಸುಂದರಿಯಾಗಿರುವುದರ ಜತೆಯಲ್ಲಿ, ಅಪಾರ ವಿಷಯ ಪ್ರಭುತ್ವವನ್ನು ಸಾಧಿಸಿದ್ದಳು. ಅತ್ಯಲ್ಪ ಕಾಲದಲ್ಲಿ ಕೆರೋಲಿನ್ ತನ್ನ ದಕ್ಷತೆ ಯಿಂದ ನರ್ಸ್‌ಗಳ ಪ್ರಮುಖಳಾಗಿ ಆಯ್ಕೆಯಾದಳು.

ಶಸ್ತ್ರವೈದ್ಯರು, ಆಪರೇಷನ್ ಥಿಯೇಟರಿನಲ್ಲಿ ಕೆರೋಲಿನ್ ಇದ್ದಾಳೆ ಎಂದರೆ ನೆಮ್ಮದಿಯಿಂದ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದ್ದರು. ಏಕೆಂದರೆ ಶಸ್ತ್ರವೈದ್ಯರ ಎಲ್ಲ ಅಗತ್ಯಗಳನ್ನು ಅವಳು ಅರಿತಿದ್ದಳು. ಅಗತ್ಯ ವಸ್ತುಗಳನ್ನು ಕ್ಲುಪ್ತವಾಗಿ ಒದಗಿಸುತ್ತಿದ್ದಳು. ಹೀಗಿರುವಾಗ ಒಂದು ಸಮಸ್ಯೆಯು ತಲೆದೋರಿತು. ಮಾದರಿ ಕ್ರಿಮಿನಾಶಕವು ದೊರೆಯದ ಕಾರಣ, ವೈದ್ಯರು ಪೊಟಾಷಿಯಂ ಪರಮ್ಯಾಂಗನೇಟ್, ಆಕ್ಸಾಲಿಕ್ ಆಸಿಡ್ ಮತ್ತು ಮರ್ಕ್ಯುರಿಕ್ ಕ್ಲೋರೈಡ್ ಮುಂತಾದವನ್ನು ಬಳಸುತ್ತಿದ್ದರು.

ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗುವ ಶಸ್ತ್ರವೈದ್ಯರು ಹಾಗೂ ನರ್ಸುಗಳು ತಮ್ಮ ಕೈಗಳನ್ನು ಮರ್ಕ್ಯುರಿಕ್ ಕ್ಲೋರೈಡ್ ದ್ರಾವಣದಲ್ಲಿ ತೊಳೆದುಕೊಂಡು ಶಸ್ತ್ರಚಿಕಿತ್ಸೆಯನ್ನು ನೀಡುತ್ತಿದ್ದರು. ಶಸ್ತ್ರವೈದ್ಯರು ಎಷ್ಟೇ ಎಚ್ಚರಿಕೆಯನ್ನು ತೆಗೆದುಕೊಂಡರೂ, ಹಲವು ಪ್ರಕರಣಗಳಲ್ಲಿ ರೋಗಿಯ ಒಡಲಿನಲ್ಲಿ ಸೋಂಕು ತಲೆದೋರಿ ಸಾವು ನೋವಿಗೆ ಕಾರಣವಾಗಿತ್ತು. ಹಾಗಾಗಿ ಶಸ್ತ್ರವೈದ್ಯರು ಹತಾಶರಾಗಿದ್ದರು. ಆದರೆ ಬೇರೆ ದಾರಿಯಿರಲಿಲ್ಲ.

ರಾಸಾಯನಿಕ ಸುಟ್ಟಗಾಯ: ಕೆರೋಲಿನ್ ಸಹ ತನ್ನ ಕೈಗಳನ್ನು ಮರ್ಕ್ಯುರಿಕ್ ಕ್ಲೋರೈಡ್ ದ್ರಾವಣದಲ್ಲಿ ಅದ್ದಿ ಶಸ್ತ್ರಚಿಕಿತ್ಸೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ಅವಳಿಗೆ ಕ್ರಮೇಣ ಅಲರ್ಜಿ ಯುಂಟಾಗಲು ಆರಂಭ ವಾಯಿತು.

ಚರ್ಮ ಕೆಂಪಾಗಿ, ನವೆಯಾಗಿ, ಗುಳ್ಳೆಗಳು ಬಂದು, ಗುಳ್ಳೆಗಳು ಒಡೆದು ಹುಣ್ಣಾಗಿ, ಹುಣ್ಣು ಕೈಗಳನ್ನೆಲ್ಲ ವ್ಯಾಪಿಸಿ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಾಗದಂಥ ಸ್ಥಿತಿಯು ತಲೆದೋರಿತು. ಸುಟ್ಟಗಾಯವನ್ನು ಹೋಲುತ್ತಿದ್ದ ಆಕೆಯ ಅಲರ್ಜಿಯ ಸಮಸ್ಯೆಯನ್ನು ನಿವಾರಿಸಲು ವೈದ್ಯರು ಇನ್ನಿಲ್ಲದ ಪ್ರಯತ್ನಪಟ್ಟರು. ಆದರೆ ಏನೂ ಉಪಯೋಗವಾಗಲಿಲ್ಲ. ಹಾಲ್‌ಸ್ಟೆಡ್ ‘ಕೊಲೋಡಿ ಯನ್’ ಎಂಬ ವಿಶೇಷ ದ್ರಾವಣವನ್ನು ಅವಳಿಗಾಗಿ ತಯಾರಿಸಿ ಲೇಪಿಸಿದ. ಆದರೆ ಏನೂ ಪ್ರಯೋಜನವಾಗಲಿಲ್ಲ.

ಕೊನೆಗೆ ಕೆರೋಲಿನ್, ತಾನು ನರ್ಸ್ ವೃತ್ತಿಯನ್ನೇ ತ್ಯಜಿಸುವುದಾಗಿ ಹೇಳಿದಳು. ಕೆರೋಲಿನ್ ಅನುಭವಿಸುತ್ತಿದ್ದ ಸಮಸ್ಯೆಯನ್ನು ಹಾಲ್‌ಸ್ಟೆಡ್ ಗಮನಿಸುತ್ತಿದ್ದ. ಅವಳ ಮೇಲೆ ಅವನಿಗೆ ಅಪಾರ ಪ್ರೀತಿ ಹಾಗೂ ಕರುಣೆಯುಂಟಾಯಿತು. ಅವನಿಗೆ ಕೆರೋಲಿನ್ ಕೆಲಸ ಬಿಡುವುದು ಬೇಕಿರಲಿಲ್ಲ. ಕೆಲಸದಲ್ಲಿ ಆಕೆ ತೋರುತ್ತಿದ್ದ ದಕ್ಷತೆಯು ಅವನ ಮನಸ್ಸನ್ನು ಸೆಳೆದಿತ್ತು. ಅವಳನ್ನು ಒಳಗೊಳಗೇ ಆರಾಧಿಸುತ್ತಿದ್ದನು. ಹಾಗಾಗಿ ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ. ಸೂಕ್ತ ಮಾರ್ಗವನ್ನು ಹುಡುಕಲು ಚಡಪಡಿಸುತ್ತಿದ್ದ.

ಕೈಗವಸು: ಚಾರ್ಲ್ಸ್ ಗುಡ್‌ಇಯರ್, 1839ರಲ್ಲಿ ವಲ್ಕನೀಕರಣ (ವಲ್ಕನೈಜ಼ೇಶನ್) ಎಂಬ ಪ್ರಕ್ರಿಯೆಯ ಮೂಲಕ ರಬ್ಬರ್ ತಯಾರಿಕೆಯನ್ನು ಪ್ರಮಾಣಬದ್ಧಗೊಳಿಸಿದ್ದ. ಹಾಗಾಗಿ ನಾನಾ ರೀತಿಯ ರಬ್ಬರ್ ವಸ್ತುಗಳನ್ನು ಆತ ನಿರ್ಮಿಸಿದ್ದ. ಗುಡ್‌ಇಯರ್ 1860ರಲ್ಲಿ ಮರಣಿಸಿದ. ಆದರೆ ಆತನ ಹೆಸರನ್ನೇ ಅವನ ಸಂಸ್ಥೆಗೂ ಇಟ್ಟಿದ್ದರು. ಹಾಗಾಗಿ ಹಾಲ್‌ಸ್ಟೆಡ್ ನ್ಯೂಯಾರ್ಕಿನಲ್ಲಿದ್ದ ಗುಡ್‌ಇಯರ್ ಸಂಸ್ಥೆಗೆ ಪತ್ರವನ್ನು ಬರೆದ. ಕೆರೋಲಿನ್ನಳ ಕೈಗಳ ಅಳತೆಯನ್ನು ನೀಡಿದ.

ಅಂಗೈ ಮತ್ತು ಬೆರಳುಗಳ ಜತೆಯಲ್ಲಿ ಮಣಿಕಟ್ಟನ್ನೂ ಆವರಿಸುವಂಥ, ಅತ್ಯಂತ ತೆಳುವಾದ ಒಂದು ರಬ್ಬರ್ ಕೈಗವಸನ್ನು ತಯಾರಿಸಿಕೊಡುವಂತೆ ಹೇಳಿದ. ಅವರು ಎಂದಿಗೂ ರಬ್ಬರ್ ಕೈಗವಸುಗಳನ್ನು ತಯಾರಿಸಿರಲಿಲ್ಲ. ಅವರಿಗೂ ಇದು ಒಂದು ಸವಾಲಿನ ಕೆಲಸವಾಗಿತ್ತು. ಹಾಗಾಗಿ ವಿಶೇಷ ಮುತುವರ್ಜಿಯನ್ನು ವಹಿಸಿ ಅತ್ಯಂತ ತೆಳುವಾದ ರಬ್ಬರ್ ಕೈಗವಸನ್ನು ಅವರು ತಯಾರಿಸಿ ಕೊಟ್ಟರು.

ಕೆರೋಲಿನ್ ಆ ರಬ್ಬರ್ ಕೈಗವಸನ್ನು ಧರಿಸಿದಳು. ಆಪರೇಶನ್ ಥಿಯೇಟರಿನಲ್ಲಿ ಎಲ್ಲರೂ ಬೆರಗಾಗಿ ಕೆರೋಲಿನ್ನಳ ಹೊಸ ಅವತಾರವನ್ನು ನೋಡಿದರು. ಕೆರೋಲಿನ್ ಮರ್ಕ್ಯುರಿಕ್ ಕ್ಲೋರೈಡಿನಲ್ಲಿ ತನ್ನ ಕೈಗಳನ್ನು ತೊಳೆದುಕೊಂಡಳು. ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಳು. ಅವಳಿಗೆ ಏನೂ ತೊಂದರೆಯಾಗಲಿಲ್ಲ. ಹಾಗಾಗಿ ರಬ್ಬರ್ ಗವಸು ಧರಿಸಿ ತನ್ನ ಕೆಲಸವನ್ನು ಮುಂದುವರಿಸಿದಳು. ಹಾಲ್ ಸ್ಟೆಡ್ ಸಂತುಷ್ಟನಾಗಿದ್ದ. ತನ್ನವಳ ನೋವನ್ನು ನಿವಾರಿಸಿದ ಹೆಮ್ಮೆ ಹಾಗೂ ತೃಪ್ತಿಯಿತ್ತು. ಅವಳನ್ನು ಮತ್ತಷ್ಟು ಆಳವಾಗಿ ಪ್ರೀತಿಸಲು ಆರಂಭಿಸಿದ. ಕೆರೋಲಿನ್ ಸಹ ಹಾಲ್‌ಸ್ಟೆಡ್‌ನನ್ನು ಹೊಸ ದೃಷ್ಟಿಯಿಂದ ನೋಡಲಾರಂಭಿಸಿದಳು. ಅವಳಿಗೂ ಪ್ರೇಮ ಅಂಕುರವೊಡೆಯಿತೆನ್ನಬಹುದು. ಇಬ್ಬರ ಪ್ರೇಮಕಾವ್ಯವು ತ್ವರಿತವಾಗಿ ಅರಳಲಾರಂಭಿಸಿತು. ಮಹಾನ್ ಕೊಡುಗೆ: ಹಾಲ್‌ಸ್ಟೆಡ್ ತನ್ನ ಪ್ರೇಯಸಿಗೆ ನೀಡಿದ ಕೈಗವಸಿನ ಕೊಡುಗೆ, ಶಸ್ತ್ರವೈದ್ಯಕೀಯ ಜಗತ್ತನ್ನೇ ಬದಲಾಯಿಸುತ್ತದೆ ಎಂದು ಸ್ವತಃ ಹಾಲ್‌ಸ್ಟೆಡ್ ಆಗಲಿ ಅಥವಾ ಕೆರೋಲಿನ್ ಆಗಲಿ ಕನಸು ಮನಸಿನಲ್ಲಿ ಎಣಿಸಿರಲಿಲ್ಲ. ಕೆರೋಲಿನ್ ರಬ್ಬರ್ ಕೈಗವಸನ್ನು ಧರಿಸುವುದನ್ನು ನೋಡಿ, ಶಸ್ತ್ರವೈದ್ಯಕೀಯ ತಂಡದಲ್ಲಿದ್ದ ವೈದ್ಯರು ಹಾಗೂ ನರ್ಸುಗಳು ತಮಗೂ ಕೈಗವಸುಗಳು ಬೇಕು ಎಂದು ಆಗ್ರಹಿಸಿದರು. ಹಾಲ್‌ಸ್ಟೆಡ್ ಎಲ್ಲರಿಗೂ ಅವರವರ ಕೈ ಅಳತೆಯ ಕೈಗವಸುಗಳನ್ನು ತರಿಸಿದ. ಕೈಗವಸುಗಳ ಮೂಲ ಉದ್ದೇಶ ರಾಸಾಯನಿಕ ಸುಡುಗಾಯ (ಕೆಮಿಕಲ್ ಬರ್ನ್ಸ್) ವನ್ನು ತಡೆಗಟ್ಟುವುದಾಗಿತ್ತು. ಇದರ ಜತೆಯಲ್ಲಿ ಈಗ, ಶಸ್ತ್ರವೈದ್ಯರು ಹಾಗೂ ನರ್ಸುಗಳ ಕೈಚರ್ಮವು ಶಸ್ತ್ರಚಿಕಿತ್ಸೆಯ ಪ್ರದೇಶ ದೊಡನೆ ನೇರವಾಗಿ ಸಂಪರ್ಕಕ್ಕೆ ಬರುತ್ತಿರಲಿಲ್ಲ. ಒಂದು ತಡೆಗೋಡೆ ಏರ್ಪಟ್ಟಿತು. ಹಾಗಾಗಿ, ಯಾರದಾದರೂ ಕೈಗಳ ಮೇಲಿದ್ದ ರೋಗಕ್ರಿಮಿಗಳು, ಮರ್ಕ್ಯುರಿಕ್ ಕ್ಲೋರೈಡಿನ ಆಮ್ಲೀಯ ತೀವ್ರತೆಯನ್ನು ಬದುಕುಳಿದಿದ್ದ ರೋಗಜನಕಗಳು ಈಗ ಶಸ್ತ್ರಕ್ರಿಯಾ ಪ್ರದೇಶವನ್ನು ತಲುಪುವುದು ಅಸಾಧ್ಯವಾಯಿತು.

ಹಾಗಾಗಿ ಯಾರೂ ನಿರೀಕ್ಷಿಸದ ಒಂದು ಹೊಸ ಲಕ್ಷಣವು ಪ್ರಕಟವಾಯಿತು. ಈಗ ಅವರು ನಡೆಸುತ್ತಿದ್ದ ಬಹುಪಾಲು ಶಸಚಿಕಿತ್ಸೆಗಳು ಯಶಸ್ವಿಯಾಗುತ್ತಿದ್ದವು. ಸೋಂಕು ಪ್ರಮಾಣವು ಹಠಾತ್ತನೇ ಕಡಿಮೆಯಾಗಿತ್ತು. ಸೂಕ್ಷ್ಮಗ್ರಾಹಿಯಾಗಿದ್ದ ಡಾ.ಜೋಸೆಫ್ ಬ್ಲಡ್‌ಗುಡ್ ಎಂಬ ವೈದ್ಯನು ಈ ಬಗ್ಗೆ ಒಂದು ಅಧ್ಯಯನವನ್ನೇ ನಡೆಸಿದ. ಕೈಗವಸುಗಳ ಬಳಕೆಯು ಶಸ್ತ್ರಕ್ರಿಯಾ ಸೋಂಕನ್ನು ನಿಲ್ಲಿಸಿದ್ದೇ‌ ಅಲ್ಲದೆ, ಸಾವಿನ ಪ್ರಮಾಣವನ್ನು ಗಣನೀಯವಾಗಿ ಇಳಿಸಿತು (ಶೇ.17ರಿಂದ ಶೇ.2ಕ್ಕೆ). ಈತನು ತನ್ನ ಫಲಿತಾಂಶವನ್ನು ಪ್ರಕಟಿಸುತ್ತಿದ್ದಂತೆಯೇ ಶಸ್ತ್ರವೈದ್ಯಕೀಯ ಜಗತ್ತು ಬೆರಗಾಯಿತು.

ಒಂದು ದಶಕದ ಒಳಗೆ ಜಗತ್ತಿನ ಎಲ್ಲ ವೈದ್ಯರು ಕೈಗವಸುಗಳನ್ನು ಬಳಸಲಾರಂಭಿಸಿದರು. ಕೈಗವಸುಗಳು ಆಪರೇಷನ್ ಥಿಯೇಟರಿನ ಹೊರಗೂ, ಎಲ್ಲೆಲ್ಲಿ ಕ್ರಿಮಿರಾಹಿತ್ಯವನ್ನು ಕಾದಿಟ್ಟು ಕೊಳ್ಳಬೇಕಾಗಿತ್ತೋ, ಅಲ್ಲೆಲ್ಲಾ ಬಳಕೆಗೆ ಬಂದಿತು. ಗುಡ್‌ಇಯರ್ ಸಂಸ್ಥೆಯು ತನ್ನ ಕೈಗವಸುಗಳ ನಿರ್ಮಾಣದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿತು. ವಿವಿಧ ಗಾತ್ರದ ಕೈಗವಸುಗಳನ್ನು ತಯಾರಿಸಿ ಮುಕ್ತ ಮಾರುಕಟ್ಟೆಗೆ ಬಿಟ್ಟಿತು.

ಧ್ರುವಗಳ ವಿವಾಹ: ಹಾಲ್‌ಸ್ಟೆಡ್ ಹಾಗೂ ಕೆರೋಲಿನ್, ಜೂನ್ 4, 1891ರಂದು ದಕ್ಷಿಣ ಕೆರೋಲಿನದ ಕೊಲಂಬಿಯದಲ್ಲಿರುವ ಟ್ರಿನಿಟಿ ಎಪಿಸ್ಕೋಪಲ್ ಚರ್ಚಿನಲ್ಲಿ ಮದುವೆಯಾದರು. ಹಾಲ್‌ಸ್ಟೆಡ್ ಶ್ರೀಮಂತ ವ್ಯಾಪಾರಿಗಳ ಕುಟುಂಬದಿಂದ ಬಂದಿದ್ದ. ಕೆರೋಲಿನ್ ಸಿವಿಲ್ ವಾರ್ ಜನರಲ್ ಹಾಗೂ ದಕ್ಷಿಣ ಕೆರೋಲಿನದ ರಾಜ್ಯಪಾಲನಾಗಿದ್ದ ಮುಮ್ಮಡಿ ವೇಡ್ ಹ್ಯಾಂಪ್ಟನ್ ಕುಟುಂಬಕ್ಕೆ ಸೇರಿದವಳಾಗಿದ್ದಳು.

ಈ ನೂತನ ದಂಪತಿಗಳ ಗುಣಲಕ್ಷಣಗಳು ಮಾತ್ರ ಉತ್ತರ ಮತ್ತು ದಕ್ಷಿಣ ಧ್ರುವಗಳಾಗಿದ್ದವು. ಹಾಲ್‌ಸ್ಟೆಡ್, ಸದಾ ಅಚ್ಚುಕಟ್ಟನ್ನು ನಿರೀಕ್ಷಿಸುತ್ತಿದ್ದ. ಅವನು ಸದಾ ಯುರೋಪಿಯನ್ ಸೂಟನ್ನು ಹಾಗೂ ಫ್ರೆಂಚರು ಮಡಿಗೊಳಿಸಿದ್ದ ಷರ್ಟುಗಳನ್ನು ಧರಿಸುತ್ತಿದ್ದ. ಕೆರೋಲಿನ್, ತನ್ನ ಅಗತ್ಯಕ್ಕೆ ಸೂಕ್ತವಾದ ಅತ್ಯಂತ ಸರಳವಾದ ಉಡುಪನ್ನು ಧರಿಸುತ್ತಿದ್ದಳು.

ಕೆರೋಲಿನ್ ಕುದುರೆಯ ಸವಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಳು. ತೋಟಗಾರಿಕೆ ಎಂದರೆ ಪಂಚಪ್ರಾಣ. ಹಾಲ್‌ ಸ್ಟೆಡ್, ಅಸಾಧಾರಣ ಬುದ್ಧಿವಂತನಾಗಿದ್ದ. ಸದಾ ಏಕಾಂತದಲ್ಲಿರಲು ಬಯಸುತ್ತಿದ್ದ. ತನ್ನ ಎಲ್ಲ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದಂತೆ ಕರಾರುವಾಕ್ಕಾಗಿ ನಿರ್ವಹಿಸುತ್ತಿದ್ದ. ಹೀಗೆ ಇವರಿಬ್ಬರ ದೈನಂದಿನ ಬದುಕು ಸಂಪೂರ್ಣ ಭಿನ್ನವಾಗಿದ್ದರೂ, ಅವರ ನಡುವೆ ಗಾಢಪ್ರೇಮವು ಹೆಮ್ಮರ ಸ್ವರೂಪದಲ್ಲಿ ಬೆಳೆದಿತ್ತು.

ಬ್ಲೂ ರಿಡ್ಜ್ ಪರ್ವತ ಸಾಲಿನಲ್ಲಿ ತಮ್ಮ ಮಧುಚಂದ್ರವನ್ನು ಪೂರ್ಣಗೊಳಿಸಿದ ಹಾಲ್‌ಸ್ಟೆಡ್ ದಂಪತಿಗಳು, ಉತ್ತರ ಕೆರೋಲಿನದಲ್ಲಿ 2000 ಎಕರೆಗಳ ಎಸ್ಟೇಟನ್ನು ಕೊಂಡುಕೊಂಡರು. ತಮ್ಮ ನಗರದ ಜಂಜಡಗಳಿಂದ ಮುಕ್ತಿಯನ್ನು ಪಡೆಯಲು ಈ ಹಸಿರನ್ನು ಅರಸಿಕೊಂಡು ಬರುತ್ತಿದ್ದರು.

ಕೆರೋಲಿನ್ ತನ್ನ ತೋಟಗಾರಿಕಾ ಕೌಶಲವನ್ನು ಕಾರ್ಯರೂಪಕ್ಕೆ ತಂದಳು. ಹಾಲ್‌ಸ್ಟೆಡ್, ಜಗತ್ತಿನ ಅಪರೂಪದ ಮರಗಳನ್ನು ತನ್ನ ಎಸ್ಟೇಟಿನಲ್ಲಿ ಬೆಳೆಸುವ ಹೊಸ ಹವ್ಯಾಸವನ್ನು ರೂಢಿಸಿಕೊಂಡ. ಇಲ್ಲಿಯೂ ಇವರ ವೈಯಕ್ತಿಕ ಜೀವನಶೈಲಿಯು ವಿಚಿತ್ರವಾಗಿಯೇ ಮುಂದುವರಿಯಿತು. ಹಾಲ್ ಸ್ಟೆಡ್, ಎರಡನೆಯ ಮಹಡಿಯಲ್ಲಿ ವಾಸಿಸಿದರೆ, ಕೆರೋಲಿನ್ ಮೂರನೆಯ ಮಹಡಿಯಲ್ಲಿ ಇರುತ್ತಿದ್ದಳು. ರಾತ್ರಿಯ ಊಟದ ವೇಳೆ ಮಾತ್ರ ಇವರು ಸಂಧಿಸುತ್ತಿದ್ದರು. ಗಂಟೆಗಟ್ಟಲೇ ಬೌದ್ಧಿಕ ಸಂಭಾಷಣೆಯಲ್ಲಿ ನಿರತರಾಗುತ್ತಿದ್ದರು.

ಇಬ್ಬರೂ ಪರಸ್ಪರರನ್ನು ಗೌರವಿಸುತ್ತಿದ್ದರು, ಪರಸ್ಪರರಲ್ಲಿದ್ದ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಕೊಂಡಿದ್ದರು. ಹಾಲ್‌ಸ್ಟೆಡ್, ಹಲವು ತಿಂಗಳುಗಳ ಕಾಲ ಶಸ್ತ್ರಚಿಕಿತ್ಸಾ ಲೋಕದಲ್ಲಿ ಮುಳುಗಿರುತ್ತಿದ್ದ. ಜಾನ್ ಹಾಪ್ಕಿನ್ಸ್‌ನಲ್ಲಿ ಭವಿಷ್ಯದ ವೈದ್ಯರಿಗೆ ತರಬೇತಿಯನ್ನು ನೀಡುವುದರಲ್ಲಿ ಎಲ್ಲವನ್ನೂ ಮರೆಯುತ್ತಿದ್ದ. ಆಗ ಕೆರೋಲಿನ್ ಒಬ್ಬಳೇ, ಇಡೀ ಎಸ್ಟೇಟನ್ನು ನಿಭಾಯಿಸುತ್ತಿದ್ದಳು. ಪರಸ್ಪರ ಪ್ರೇಮ ಪತ್ರವನ್ನು ಬರೆಯುತ್ತಿದ್ದರು. ನಿಪ್ ಮತ್ತು ಟಕ್ ಎಂಬ ಡ್ಯಾಶುಂಡ್ ನಾಯಿ ಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ ಅವರಿಗೆ ಮಕ್ಕಳಾಗಲಿಲ್ಲ.

ಚಟ: ಅಂದಿನ ದಿನಗಳಲ್ಲಿ ವೈದ್ಯರು ಸ್ವಯಂ ವೈದ್ಯಕೀಯ ಪ್ರಯೋಗಗಳಿಗೆ ಈಡು ಮಾಡಿಕೊಳ್ಳು ವುದು ಸಹಜವಾಗಿತ್ತು. ಪರಿಣಾಮಕಾರಿಯಾದ ನೋವು ನಿವಾರಕಗಳನ್ನು ಕಂಡುಹಿಡಿ ಯುವ ಹಿನ್ನೆಲೆಯಲ್ಲಿ ಹಾಲ್‌ಸ್ಟೆಡ್ ಕೊಕೇನ್ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದ. ಕೊನೆಗೆ ಕೊಕೇನಿಗೆ ದಾಸನಾದ. ಕೆರೋಲಿನ್, ಮೈಗ್ರೇನ್ ತಲೆನೋವಿನಿಂದ ನರಳುತ್ತಿದ್ದಳು. ಒಂಟಿಯಾಗಿ ಇರಲು ಬಯಸುತ್ತಿದ್ದಳು.

ಅರೆತಲೆನೋವಿನಿಂದ ಉಪಶಮನವನ್ನು ಪಡೆಯಲು ಮಾರ್ಫಿನ್ ಮೊರೆ ಹೊಕ್ಕಳು. ಹೀಗೇ ಇಬ್ಬರೂ ರಾಸಾಯನಿಕ ಚಟಗಳಿಗೆ ತುತ್ತಾದರೂ, ಅವರ ನಡುವಿನ ಪ್ರೇಮ ಮಾತ್ರ ಇನಿತೂ ಕಡಿಮೆಯಾಗಲಿಲ್ಲ. ಅವರು ಪರಸ್ಪರ ಬರೆಯುತ್ತಿದ್ದ ಪ್ರೇಮಪತ್ರಗಳಲ್ಲಿ ಇದು ವ್ಯಕ್ತವಾಗಿದೆ. ಹಾಲ್‌ಸ್ಟೆಡ್ ತನ್ನ 70ನೆಯ ಪರಿಪಕ್ವ ವಯಸ್ಸಿನಲ್ಲಿ ಮರಣಿಸಿದ (1922).

ಒಂಟಿಯಾದ ಕೆರೋಲಿನ್, ತನ್ನ ಎಸ್ಟೇಟಿನಲ್ಲಿಯೇ ಉಳಿದಳು. ಸಾರ್ವಜನಿಕ ಬದುಕಿನಿಂದ ದೂರ ಉಳಿದ ಕೆರೋಲಿನ್, 16 ವರ್ಷಗಳ ನಂತರ 1939ರಲ್ಲಿ ತೀರಿಕೊಂಡಳು. ಒಂದು ಪ್ರೇಮಕಥೆಯು, ಶಸ್ತ್ರವೈದ್ಯಕೀಯ ಕೈಗವಸುಗಳಿಗೆ ಜನ್ಮನೀಡಿ, ಇಂದಿಗೂ ಕೋಟ್ಯಂತರ ಜನರ ಜೀವವನ್ನು ಉಳಿಸು ತ್ತಿರುವ ಕಥನಕ್ಕಿಂತಲೂ ಮಿಗಿಲಾದ ಮತ್ತೊಂದು ಕಥನವಿಲ್ಲ ಎಂದರೆ ಅದು ಅತಿಶಯೋಕ್ತಿಯಾಗ ಲಾರದು.