Dr N Someshwara Column: ವೈದ್ಯ ವಿಜ್ಞಾನದ ಮುಂಗೋಳಿ: ಇಮ್ ಹೋಟೆಪ್
ಸಕ್ಕಾರದಲ್ಲಿರುವ ಜೋಸರ್ ಮೆಟ್ಟಿಲಿನ ಪಿರಮಿಡ್ಡಿನ ವಾಸ್ತುಶಿಲ್ಪಿಯಾಗಿದ್ದ. ಇವುಗಳ ಜತೆಯಲ್ಲಿ ಇವನು ವಿದ್ವಾಂಸನಾಗಿದ್ದ, ಪುರೋಹಿತನಾಗಿದ್ದ ಹಾಗೂ ಸಮಸ್ತ ದೈಹಿಕ-ಮಾನಸಿಕ ಬೇನೆಗಳಿಗೆ ಉಪಶಮನವನ್ನು ನೀಡಬಲ್ಲವನಾಗಿದ್ದ. ‘ಇಮ್‌ಹೋಟೆಪ್’ ಎಂದರೆ ‘ಶಾಂತಿಯ ಜತೆಯಲ್ಲಿ ಬರು ವವನು’ ಎಂಬ ಅರ್ಥವನ್ನು ಧ್ವನಿಸುತ್ತಿತ್ತು.


ಹಿಂದಿರುಗಿ ನೋಡಿದಾಗ
naasomeswara@gmail.com
ಮಾನವನ ವೈದ್ಯಕೀಯ ಇತಿಹಾಸವನ್ನು ಕನಿಷ್ಠ 4500 ವರ್ಷಗಳ ಹಿಂದಕ್ಕೆ ಕೊಡೊಯ್ಯ ಬಹುದು. ಒಬ್ಬನೇ ಒಬ್ಬ ವ್ಯಕ್ತಿಯು ತನ್ನ ಅವಿರತ ಹಾಗೂ ಸೂಕ್ಷ್ಮ ವಿಶ್ಲೇಷಣೆಯಿಂದ ಈಜಿಪ್ಷಿಯನ್ ಮತ್ತು ರೋಮನ್ ವೈದ್ಯಕೀಯವನ್ನು ಮಾತ್ರವಲ್ಲ, ಆಧುನಿಕ ವೈದ್ಯಕೀಯ ವಿಜ್ಞಾನಕ್ಕೂ ತಳಪಾಯವನ್ನು ಹಾಕಿದ ಎಂದರೆ ಅದು ಅತಿಶಯೋಕ್ತಿಯಾಗಲಾರದು.
ಕ್ರಿ.ಪೂ.27ನೆಯ ಶತಮಾನದ ಈಜಿಪ್ಟ್ ದೇಶ. ಆಧುನಿಕ ವೈದ್ಯಕೀಯ ಪಿತಾಮಹ ಹಿಪ್ಪೋಕ್ರೇಟ್ಸ್ ಹುಟ್ಟುವುದಕ್ಕೆ ಸಾವಿರಾರು ವರ್ಷಗಳ ಮೊದಲಿನ ಕಾಲ. ಇಮ್‌ಹೋಟೆಪ್ ಎಂಬ ವೈದ್ಯನು ಈಜಿಪ್ಟಿನಲ್ಲಿ ಹುಟ್ಟಿದ. ಈತನು ‘ಮಾನವನ ವೈದ್ಯಕೀಯ ಇತಿಹಾಸದಲ್ಲಿ ದಾಖಲಾಗಿರುವ ಮೊತ್ತ ಮೊದಲ ವೈದ್ಯ’ ಎಂದು ಪ್ರತೀತಿಗೆ ಅರ್ಹನಾಗಿದ್ದಾನೆ. ಇವನು ಮಹಾ ವೈದ್ಯನಾಗಿರುವುದರ ಜತೆಯಲ್ಲಿ ಈಜಿಪ್ಟ್ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿದ್ದ.
ಸಕ್ಕಾರದಲ್ಲಿರುವ ಜೋಸರ್ ಮೆಟ್ಟಿಲಿನ ಪಿರಮಿಡ್ಡಿನ ವಾಸ್ತುಶಿಲ್ಪಿಯಾಗಿದ್ದ. ಇವುಗಳ ಜತೆಯಲ್ಲಿ ಇವನು ವಿದ್ವಾಂಸನಾಗಿದ್ದ, ಪುರೋಹಿತನಾಗಿದ್ದ ಹಾಗೂ ಸಮಸ್ತ ದೈಹಿಕ-ಮಾನಸಿಕ ಬೇನೆಗಳಿಗೆ ಉಪಶಮನವನ್ನು ನೀಡಬಲ್ಲವನಾಗಿದ್ದ. ‘ಇಮ್‌ಹೋಟೆಪ್’ ಎಂದರೆ ‘ಶಾಂತಿಯ ಜತೆಯಲ್ಲಿ ಬರುವವನು’ ಎಂಬ ಅರ್ಥವನ್ನು ಧ್ವನಿಸುತ್ತಿತ್ತು.
ಇವನ ಕಾಲಾನಂತರ ಬಂದ ಈಜಿಪ್ಷಿಯನ್, ಗ್ರೀಕ್ ಮತ್ತು ರೋಮನ್ ವೈದ್ಯಕೀಯ ಪದ್ಧತಿಗಳು ಇಮ್ ಹೋಟೆಪ್‌ನ ಹೆಸರನ್ನು ಅಮರಗೊಳಿಸಿವೆ. ಈಜಿಪ್ಟ್ ಮಹಾ ಸಾಮ್ರಾಜ್ಯವನ್ನು ಆಳಿದ ಜೋಸರ್ (ಆಳ್ವಿಕೆ: ಕ್ರಿ.ಪೂ.2686-ಕ್ರಿ.ಪೂ.2648) ಆಸ್ಥಾನದಲ್ಲಿ ಬಹುಮುಖ ಪ್ರತಿಭೆಯ ಇಮ್ ಹೋಟೆಪ್ ಬದುಕಿದ್ದ.
ಇಮ್‌ಹೋಟೆಪ್ ಬಗ್ಗೆ ಅಧಿಕೃತವಾಗಿ ತಿಳಿದಿರುವುದು ಬಹಳ ಕಡಿಮೆ. ಎರಡು ಸಮಕಾಲೀನ ದಾಖಲೆಗಳ ಮೂಲಕ, ಈತನ ಬಗ್ಗೆ ಕೆಲವು ವಿಚಾರಗಳು ತಿಳಿದುಬಂದಿವೆ. ಮೊದಲನೆಯದು ಜೋಸರ್ ವಿಗ್ರಹದ ಕೆಳಗಿರುವ ಬರಹ. ಇದು ‘ಕೆಳಗಿನ ಈಜಿಪ್ಟಿನ ಅರಸನ ಸಂಪತ್ತು’ (ಈಜಿಪ್ಟನ್ನು ಕೆಳಗಿನ ಈಜಿಪ್ಟ್ ಮತ್ತು ಮೇಲಿನ ಈಜಿಪ್ಟ್ ಎಂದು ವಿಭಜಿಸಿದ್ದರು) ಎಂಬ ಅಭಿದಾನದೊಡನೆ ಇಮ್‌ಹೋಟೆಪ್ ಬಗ್ಗೆ ಮಾಹಿತಿ ದೊರೆಯುತ್ತದೆ.
ಎರಡನೆಯದು ಸೆಖೆಂಖೆತ್ ಫ್ಯಾರೋವಿನ ಅಪೂರ್ಣ ಮೆಟ್ಟಿಲ ಪಿರಮಿಡ್ಡಿನ ಭಿತ್ತಿಯಲ್ಲಿ ಕಂಡು ಬರುವ ರೇಖಾಚಿತ್ರ. ಸೆಖೆಂಖೆತ್ ಅಕಾಲಿಕವಾಗಿ ಮರಣಿಸಿದ ಕಾರಣ, ಈ ಪಿರಮಿಡ್ಡನ್ನು ಪೂರ್ಣ ಕಟ್ಟಲಿಲ್ಲ. ಈ ಅಪೂರ್ಣ ಪಿರಮಿಡ್ಡಿನ ವಿನ್ಯಾಸಕಾರನೂ ಇಮ್‌ಹೋಟೆಪ್ ಆಗಿದ್ದ. ಇಮ್ ಹೋಟೆಪ್, ಜೋಸರನಿಗಿಂತ ಹೆಚ್ಚು ಕಾಲ ಬದುಕಿದ್ದ. ಹಾಗಾಗಿ ಜೋಸರನ ನಂತರ ಫ್ಯಾರೋ ಪಟ್ಟವನ್ನು ಏರಿದ ಸೆಖೆಂಖೆತ್ ಸಂಬಂಧಿತ ಪಿರಮಿಡ್ ನಿರ್ಮಿಸುವ ಹೊಣೆಯನ್ನು ಈತನೇ ಹೊತ್ತಿದ್ದ.
ವೈದ್ಯಕೀಯ ಅಧಿದೈವ: ಇಮ್‌ಹೋಟೆಪ್ ಮರಣಿಸಿ 2000 ವರ್ಷಗಳಾದ ಮೇಲೆ, ಆತನಿಗೆ ‘ವೈದ್ಯಕೀಯ ಹಾಗೂ ಉಪಶಮನ ದೇವತೆ’ (ಗಾಡ್ ಆಫ್ ಮೆಡಿಸಿನ್ ಆಂಡ್ ಹೀಲಿಂಗ್) ಎಂಬ ಹೆಸರನ್ನು ನೀಡಿ, ಅವನನ್ನು ದೈವತ್ವಕ್ಕೆ ಏರಿಸಿದರು. ಕಾಲಕ್ರಮೇಣ ಈತನನು ‘ಥೊತ್’ ದೇವತೆಗೆ ಸರಿಸಮಾನ ಎಂದು ಪರಿಗಣಿಸಿದರು. ಥೊತ್ ದೇವತೆಯು ವಾಸ್ತುಶಿಲ್ಪ, ಗಣಿತ ಮತ್ತು ವೈದ್ಯಕೀ ಯದ ದೇವತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಗ್ರೀಕ್ ವೈದ್ಯರು ಈತನನ್ನು ತಮ್ಮ ವೈದ್ಯಕೀಯ ದೇವತೆಯಾದ ಆಸ್ಕ್ಲೆಪಿಯಸ್ ನೊಡನೆ ಸಮೀಕರಿಸಿದರು. ಒಂದಾನೊಂದು ಕಾಲದಲ್ಲಿ ‘ಆಸ್ಕ್ಲೆಪಿ ಯಸ್’ ಸಹ ಓರ್ವ ಮನುಷ್ಯ ನಾಗಿದ್ದು, ಕಾಲಕ್ರಮೇಣ ದೇವರ ಸ್ಥಾನಕ್ಕೆ ಏರಿದ್ದ.
ಎಡ್ವಿನ್ ಸ್ಮಿಥ್ ಪ್ಯಾಪಿರಸ್: ಇಮ್‌ಹೋಟೆಪ್ ಸ್ವತಃ ಬರೆದ ಎನ್ನಬಹುದಾದ ಯಾವ ವೈದ್ಯಕೀಯ ದಾಖಲೆಯು ನಮಗೆ ದೊರೆತಿಲ್ಲ. ಆದರೆ ಆತನ ಚಿಕಿತ್ಸಾ ತಂ ತ್ರವು ಪಾರಂಪರಿಕವಾಗಿ ಹರಿದು ಬಂದಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆ ಹರಿದುಬಂದ ದಾಖಲೆಗಳಲ್ಲಿ ‘ಎಡ್ವಿನ್ ಸ್ಮಿಥ್ ಸರ್ಜಿಕಲ್ ಪ್ಯಾಪಿರಸ್’ ಮುಖ್ಯವಾದದ್ದು. ಎಡ್ವಿನ್ ಸ್ಮಿತ್ (1822-1906) ಅಮೆರಿಕನ್ ಮೂಲದ ಈಜಿಪ್ಷಿಯನ್ ಸಂಸ್ಕೃತಿಯ ತಜ್ಞ.
1862ರಲ್ಲಿ ಈಜಿಪ್ಟಿನ ‘ಲುಕ್ಸೋರ್’ ಪ್ರದೇಶದಲ್ಲಿ ‘ಮುಸ್ತಫಾ ಆಘ’ ಎನ್ನುವ ವ್ಯಕ್ತಿಯಿಂದ ಪ್ಯಾಪಿರಸ್ ಸುರುಳಿಯನ್ನು ಕೊಂಡುಕೊಂಡ. ಜೇಮ್ಸ್ ಹೆನ್ರಿ ಬ್ರೆಸ್ಟೆಡ್ ಈ ದಾಖಲೆಯನ್ನು 1920ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ. ಈಗ ಈ ಸುರುಳಿಯು ‘ನ್ಯೂಯಾರ್ಕ್ ಅಕಾಡೆಮಿ ಆಫ್ ಮೆಡಿಸಿನ್’ ಸಂಸ್ಥೆಯಲ್ಲಿ ಸಂರಕ್ಷಿಸಲ್ಪಟ್ಟಿದೆ.
ಎಡ್ವಿನ್ ಸ್ಮಿತ್ ಪ್ಯಾಪಿರಸ್ ಸುರುಳಿಯು 4.68 ಮೀಟರ್ (15.3) ಉದ್ದವಿತ್ತು. ಪ್ರತಿಯ ಮುಂಭಾಗ ದಲ್ಲಿ 17 ಕಾಲಂಗಳಲ್ಲಿ 377 ಸಾಲುಗಳು ಹಾಗೂ ಹಿಂಭಾಗದಲ್ಲಿ 5 ಕಾಲಂಗಳಲ್ಲಿ 97 ಸಾಲುಗಳಿ ದ್ದವು. ಈ ಪ್ರತಿಯಲ್ಲಿರುವ ಮೂಲ ಬರಹವು ಕ್ರಿ.ಪೂ.300-ಕ್ರಿ.ಪೂ.2500 ಕಾಲಕ್ಕೆ ಸೇರಿರಬಹುದು. ಬಹುಶಃ ಮೂಲಪ್ರತಿಯನ್ನು ಈಜಿಪ್ಷಿಯನ್ ಸಂಸ್ಕೃತಿಯ ಪ್ರಖ್ಯಾತ ವೈದ್ಯ ಇಮ್‌ಹೋಟೆಪ್ ಸ್ವಯಂ ಬರೆದಿರಬೇಕು ಎನ್ನುವುದು ತಜ್ಞರ ಅಭಿಮತ. ಈ ಪ್ರತಿಯ ಕಾಲಮಾನ ಕ್ರಿ.ಪೂ.1600. ಇದರಲ್ಲಿ ‘ಹೈರಾಟಿಕ್’ ಎನ್ನುವ ಈಜಿಪ್ಷಿಯನ್ ಚಿತ್ರಲಿಪಿಯ ಭಾಷೆಯಿದೆ.
ಇದನ್ನು ಬಲದಿಂದ ಎಡಕ್ಕೆ ಬರೆದಿರುವರು. ಬರೆಯಲು ಕಪ್ಪು ಮತ್ತು ಕೆಂಪು ಶಾಯಿಯನ್ನು ಬಳಸಿರುವರು. ನಕಲುಪ್ರತಿಯ ಮುಂಭಾಗದಲ್ಲಿ ಮನುಷ್ಯರಿಗೆ ಸಂಭವಿಸುವ 48 ಶಸ್ತ್ರವೈದ್ಯಕೀಯ ಪ್ರಕರಣಗಳ ವಿವರಣೆಯಿದೆ. ಹಿಂಭಾಗದಲ್ಲಿ ಎಂಟು ಮಂತ್ರಗಳು ಹಾಗೂ ಐದು ಔಷಧಗಳ ವಿವರಣೆಯಿದೆ.
ಇದು ಬಹುಶಃ ‘ಸೈನ್ಯದಲ್ಲಿ ಕೆಲಸ ಮಾಡುವ ವೈದ್ಯರ ಕೈಪಿಡಿ’ಯ ಹಾಗೆ ಕಾಣುತ್ತದೆ. ತಲೆಯಿಂದ ಕಾಲಿನವರೆಗೆ, ಮನುಷ್ಯನ ವಿವಿಧ ಭಾಗಗಳಿಗೆ ಸಂಭವಿಸಬಹುದಾದ ಗಾಯಗಳ ವಿವರಣೆಯು ಕ್ರಮಬದ್ಧವಾಗಿದೆ. ಪ್ರತಿಯೊಂದು ಗಾಯಕ್ಕೆ ಒಂದು ಶೀರ್ಷಿಕೆಯಿದೆ. ಉದಾ: ‘ತಲೆಯಲ್ಲಿ ಬಾಯಿ ಬಿಟ್ಟುಕೊಂಡಿರುವ ಗಾಯವು, ಮೂಳೆಯವರೆಗೆ ವ್ಯಾಪಿಸಿ, ಕಪಾಲವನ್ನು ಸೀಳಿರುವಾಗ, ನೀಡ ಬೇಕಾದ ಚಿಕಿತ್ಸಾ ವಿವರ’. ಇಂಥ ಗಾಯಗಳ ನಿಗದಿತ ಅಧ್ಯಯನ ಕ್ರಮದ ವಿವರವಿದೆ.
ಮೊದಲು ಗಾಯದ ವೀಕ್ಷಣೆ, ವಾಸನೆಯ ಆಘ್ರಾಣ, ಸ್ಪರ್ಶಸಂವೇದನಾ ಪರೀಕ್ಷೆ, ನಾಡಿಯ ಪರೀಕ್ಷೆ, ರೋಗನಿದಾನ ಮತ್ತು ರೋಗದ ಮುನ್ನರಿವು. ರೋಗದ ಮುನ್ನರಿವು ಎಂದರೆ, ರೋಗಿಯು ಬದುಕು ತ್ತಾನೆಯೋ ಇಲ್ಲವೋ ಎನ್ನುವುದನ್ನು ಮೊದಲೇ ಹೇಳುವಿಕೆ (ಪ್ರೋಗ್ನೋಸಿಸ್). ವೈದ್ಯರು ಮೂರು ರೀತಿಯ ಮುನ್ನರಿವನ್ನು ನೀಡುತ್ತಿದ್ದರು.
ಮೊದಲನೆಯದು ‘ನಾನು ಚಿಕಿತ್ಸೆಯನ್ನು ನೀಡಿ ಗುಣಪಡಿಸಬಲ್ಲ ಗಾಯಗಳು’. ಎರಡನೆಯದು ‘ನಾನು ಚಿಕಿತ್ಸೆಯನ್ನು ನೀಡಲು ಪ್ರಯತ್ನಿಸಿ ಗುಣಪಡಿಸಬಹುದಾದ ಗಾಯಗಳು’ ಹಾಗೂ ‘ಚಿಕಿತ್ಸೆ ಯನ್ನು ನೀಡುವ ಪ್ರಯತ್ನವನ್ನು ಮಾಡಬಾರದ ಗಾಯಗಳು’. ಕೊನೆಯಲ್ಲಿ ನಿಗದಿತ ಗಾಯಕ್ಕೆ ಚಿಕಿತ್ಸೆಯನ್ನು ನೀಡಲು ಲಭ್ಯವಿರುವ ವಿವಿಧ ಆಯ್ಕೆಗಳ ಮಾಹಿತಿ, ಮುನ್ನರಿವಿಗೆ ಅಗತ್ಯವಾದ ವಿಶ್ಲೇಷಣೆಯ ಮಾಹಿತಿ- ಹೀಗೆ ಇಂದಿನ ಆಧುನಿಕ ವೈದ್ಯಕೀಯ ವಿಧಾನಗಳನ್ನು ಹೋಲುವ ಕ್ರಮಬದ್ಧ ವಿವರಣೆಯು ಅಂದಿನ ಈಜಿಪ್ಷಿಯನ್ ವೈದ್ಯಕೀಯವು ತಲುಪಿದ್ದ ಉತ್ತುಂಗಕ್ಕೆ ಪ್ರತೀಕವಾಗಿದೆ.
ಗಾಯಗಳಿಗೆ ಸೂಕ್ತ ಚಿಕಿತ್ಸಾ ವಿವರಣೆಯಿದೆ. ತುಟಿ, ಗಂಟಲು ಮತ್ತು ಭುಜದ ಗಾಯಗಳಿಗೆ ಹೊಲಿಗೆ ಯನ್ನು ಹಾಕುವುದು, ಪಟ್ಟಿಕಟ್ಟುವುದು, ದಬ್ಬೆ ಕಟ್ಟುವುದು, ಪೌಲ್ಟೀಸ್ ಹಾಕುವುದು, ಹಸಿ ಮಾಂಸ ವನ್ನು ಕಟ್ಟಿ ರಕ್ತಸ್ರಾವವನ್ನು ನಿಯಂತ್ರಿಸುವುದು, ಜೇನುತುಪ್ಪವನ್ನು ಲೇಪಿಸಿ ಸೋಂಕನ್ನು ತಡೆಗಟ್ಟು ವುದು, ತಲೆಗೆ, ಕುತ್ತಿಗೆಗೆ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದಾಗ, ಆಯಾ ಅಂಗವು ಅಲುಗದಂತೆ ಚಲನೆಯನ್ನು ನಿರ್ಬಂಧಿಸುವುದು ಇತ್ಯಾದಿ. ಇದರಲ್ಲಿ ಅಂಗರಚನೆ, ಅಂಗಕ್ರಿಯೆ ಮತ್ತು ರೋಗಸ್ಥಿತಿಯ ಬಗ್ಗೆ ಅತ್ಯಂತ ಸಹಜ ವಿವರಗಳಿವೆ.
ಮಿದುಳನ್ನು ಆವರಿಸಿರುವ ಮಿದುಳುಪೊರೆಗಳ (ಮೆನಿಂಜೆಸ್) ವಿವರ, ಮಿದುಳಿನ ಮೇಲ್ಮೈ ರಚನೆಯ ವಿವರ, ಮಿದುಳು ಮೇರುದ್ರವ (ಸೆರೆಬ್ರೋಸ್ಪೈನಲ್ ಫ್ಲೂಯಿಡ್), ಕಪಾಲಾಂತರ್ಗತ ರಕ್ತನಾಳಗಳ ಮಿಡಿತ ಇತ್ಯಾದಿಗಳ ವಿವರಣೆಯಿದೆ. ಮಿದುಳಿಗೆ ಪೆಟ್ಟು ಬಿದ್ದರೆ, ಪೆಟ್ಟು ಬಿದ್ದ ಸ್ಥಳ ವನ್ನು ಆಧರಿಸಿ, ದುಷ್ಪರಿಣಾಮವು ಶರೀರದ ನಿಗದಿತ ಅಂಗಗಳ ಮೇಲಾಗುತ್ತದೆ (ಪಾರ್ಶ್ವ ವಾಯು) ಎನ್ನುವುದರ ವಿವರಣೆಯಿದೆ. ಒಟ್ಟಿನಲ್ಲಿ ಈ ವಿವರಣೆಯು ಆಧುನಿಕ ವೈದ್ಯಕೀಯ ಪಠ್ಯಪುಸ್ತಕ ವನ್ನು ಹೋಲುತ್ತದೆ
ಎಂದರೆ ಅದು ಅತಿಶಯೋಕ್ತಿಯಾಗಲಾರದು. ಇಂದು ಈ ವಿವರಣೆಯ ಮಹತ್ವವನ್ನು ನಾವು ತಿಳಿಯುವುದು ಕಷ್ಟ. ಏಕೆಂದರೆ ಇಂದಿಗೆ ಸುಮಾರು 5000 ವರ್ಷಗಳ ಹಿಂದೆ ಮನುಷ್ಯನ ಶರೀರ ಮತ್ತು ಗಾಯಗಳ ಬಗ್ಗೆ ಇಷ್ಟು ತಿಳಿದಿದ್ದರು ಎಂದರೆ, ಅವರು ಬುದ್ಧಿವಂತಿಕೆಯಲ್ಲಿ ನಮಗಿಂತ ಏನೂ ಕಡಿಮೆಯಿರಲಿಲ್ಲ ಎನ್ನುವುದು ಋಜುವಾತಾಗುತ್ತದೆ. 200 ರೋಗಗಳು: ಆಧುನಿಕ ಈಜಿಪ್ಷಿ ಯನ್ ತಜ್ಞರ ಅನ್ವಯ, ಆತನು ಸುಮಾರು 200 ರೋಗಗಳ ರೋಗನಿದಾನ ಹಾಗೂ ಚಿಕಿತ್ಸೆಯನ್ನ ಬಲ್ಲವನಾಗಿದ್ದನಂತೆ. ನಾವು 200 ಎಂಬ ಸಂಖ್ಯೆಯನ್ನು ಸಾಂಕೇತಿಕವಾಗಿ ಸ್ವೀಕರಿಸುವುದು ಒಳ್ಳೆಯದು.
ಇಮ್‌ಹೋಟೆಪ್, ಶರೀರದ ಎಲ್ಲ ಭಾಗಗಳಿಗೆ ಬರುವ ನಾನಾ ರೋಗಗಳನ್ನು ಗುಣಪಡಿಸಬಲ್ಲವ ನಾಗಿದ್ದ ಎನ್ನುವುದನ್ನು ತಿಳಿಸುವುದಷ್ಟೇ ಈ ಸಂಖ್ಯೆಯ ವಿಶೇಷ. ಕ್ರಿ.ಪೂ.1550ರ ಕಾಲದಲ್ಲಿ ರಚನೆಯಾದ ‘ಈಬರ್ಸ್ ಪ್ಯಾಪಿರಸ್’ ಎನ್ನುವುದು ಸುಮಾರು 700 ರೋಗಗಳಿಗೆ ಚಿಕಿತ್ಸೆಯನ್ನು ಸೂಚಿಸುತ್ತದೆ.
ಇವೆಲ್ಲವೂ ಇಮ್‌ಹೋಟೆಪ್ ಕಾಲದಿಂದಲೇ ಹರಿದುಬಂದ ಅವನ ‘ಅನುಭವಧಾರೆ’ ಎನ್ನುವುದು ತಜ್ಞರ ಅಭಿಮತ. ತನ್ನ ಕಾಲಕ್ಕಿಂತ ಮುಂದೆ: ಇಮ್‌ಹೋಟೆಪ್, ತನ್ನ ಕಾಲಕ್ಕಿಂತ ಬಹಳ ಮುಂದಿದ್ದ. ಒಬ್ಬ ರೋಗಿಯು ತನ್ನ ಬಳಿ ಬಂದ ಕೂಡಲೇ ಅವನನ್ನು ಪರೀಕ್ಷಿಸಬೇಕಾದ ವಿಧಿ ವಿಧಾನಗಳನ್ನು ಸ್ಪಷ್ಟವಾಗಿ ರೂಪಿಸಿದ್ದ. ಮೊದಲು ರೋಗಿಯ ರೋಗ ಚರಿತ್ರೆಯನ್ನು ಕ್ರಮಬದ್ಧ ವಾಗಿ ಸಂಗ್ರಹಿಸಬೇಕಾಗಿತ್ತು.
ಆನಂತರ ರೋಗಿಯ ಶರೀರವನ್ನು ಅಡಿಯಿಂದ ಮುಡಿಯವರೆಗೆ ಪರೀಕ್ಷಿಸಬೇಕಾಗಿತ್ತು. ರೋಗ ಚರಿತ್ರೆ ಮತ್ತು ಶರೀರ ಪರೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಬೇಕಾಗಿತ್ತು ಹಾಗೂ ಆ ರೋಗದ ಬಗ್ಗೆ ಸಾಧ್ಯವಿರುವ ಮುನ್ನರಿವನ್ನು ಗ್ರಹಿಸಬೇಕಾಗಿತ್ತು- ಇವನ್ನು ಕ್ರಮಬದ್ಧ ವಾಗಿ ಮಾಡಲೇಬೇಕಾದ ಅಗತ್ಯವನ್ನು ಇಮ್‌ಹೋಟೆಪ್ ಒತ್ತಿ ಹೇಳಿದ್ದ.
ಮೂಲಿಕೆಗಳ ಚಿಕಿತ್ಸೆ ಮತ್ತು ಪೌಲ್ಟೀಸ್: ಇವು ಅವನ ಜೀವನದ ಅನುಭವಜನ್ಯ ಮಾಹಿತಿಯ ಸಂಗ್ರಹವಾಗಿತ್ತು. ಪೌಲ್ಟೀಸನ್ನು ವಿಲ್ಲೋ ಮರದ ತೊಗಟೆ, ಸಾಂಬ್ರಾಣಿ ಮತ್ತು ಜೇನಿನ ಮಿಶ್ರಣ ದಿಂದ ತಯಾರಿಸುತ್ತಿದ್ದರು.
ಶಸ್ತ್ರ ಚಿಕಿತ್ಸೆಗಳು: ಶಸ್ತ್ರಚಿಕಿತ್ಸೆಯ ನಂತರ, ರಾಳವನ್ನು (ರೆಸಿನ್) ಪ್ರತಿಜೈವಿಕ ಔಷಧಗಳ ರೂಪದಲ್ಲಿ ಲೇಪಿಸಿ, ಮೇಲೆ ಲಿನನ್ ಬಟ್ಟೆಯ ಬ್ಯಾಂಡೇಜ್ ಕಟ್ಟುತ್ತಿದ್ದರು.
ಮಾಟ ಮತ್ತು ಮಂತ್ರಗಳು: ಬಹುಶಃ ಇಮ್‌ಹೋಟೆಪ್ ನಿಗೆ ಮನೋದೈಹಿಕ ಬೇನೆಗಳ ಕಲ್ಪನೆ ಇದ್ದಿರಬೇಕು ಎಂದು ಕಾಣುತ್ತದೆ. ಹಾಗಾಗಿ ತನಗೆ ಅಜ್ಞಾತವೆನಿಸಿದ ರೋಗಗಳನ್ನು ಗುಣಪಡಿಸಲು ನಾನಾ ವಿಧಿ ವಿಧಾನಗಳನ್ನೊಳಗೊಂಡ ಮಾಟ ಹಾಗೂ ಶಕ್ತಿಯುತ ಮಂತ್ರಗಳನ್ನು ಜಪಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದನು.
ಸ್ವಚ್ಛತೆ: ಪ್ರತಿಯೋರ್ವ ರೋಗಿಗೆ ಸ್ವಚ್ಛತೆಯ ಮಹತ್ವವನ್ನು ವಿವರಿಸುತ್ತಿದ್ದ ಹಾಗೂ ಗಾಯಗಳ ಆರೈಕೆಯ ಬಗ್ಗೆ ತಿಳಿವಳಿಕೆಯನ್ನು ನೀಡುತ್ತಿದ್ದ.
ದೇವಾಲಯ ಆಸ್ಪತ್ರೆಗಳು: ಇಮ್‌ಹೋಟೆಪ್ ಮರಣಾನಂತರ ಆತನ ಹೆಗ್ಗಳಿಕೆಯು ನಾನಾ ರೀತಿಯಲ್ಲಿ ಮುಂದುವರಿಯಿತು.
- ಇಮ್‌ಹೋಟೆಪ್‌ನ ದೇವಾಲಯಗಳನ್ನು ಕಟ್ಟಿದರು. ಕೈಯಲ್ಲಿ ಪ್ಯಾಪಿರಸ್ ಹಾಳೆಯನ್ನು ಹಿಡಿದುಕೊಂಡು ಕುಳಿತಿರುವ ಮೂರ್ತಿಗಳು ನಿರ್ಮಾಣವಾದವು.
- ಜನರು ಇಮ್‌ಹೋಟೆಪ್‌ನಿಗೆ ಪತ್ರವನ್ನು ಬರೆದು, ತಮ್ಮ ಅನಾರೋಗ್ಯವನ್ನು ಗುಣಪಡಿಸುವಂತೆ ಪ್ರಾರ್ಥಿಸುತ್ತಿದ್ದರು.
- ರೋಗಿಗಳು ತಮ್ಮ ದೇಹದ ಯಾವ ಭಾಗವು ರೋಗಗ್ರಸ್ತವಾಗಿದೆಯೋ, ಆ ಅಂಗದ ಸೂಕ್ಷ್ಮರೂಪ ವನ್ನು ಜೇಡಿಮಣ್ಣು ಇಲ್ಲವೇ ಕಂಚಿನಿಂದ ತಯಾರಿಸಿ ಅದನ್ನು ಇಮ್‌ಹೋಟೆಪ್‌ನ ವಿಗ್ರಹಕ್ಕೆ ಅರ್ಪಿಸುತ್ತಿದ್ದರು.
- ಆ ದೇವಾಲಯಗಳೇ ವೈದ್ಯಕೀಯ ವಿದ್ಯಾಲಯಗಳು ಹಾಗೂ ಆಸ್ಪತ್ರೆಗಳಾದವು.
ವೈದ್ಯವಿದ್ಯಾರ್ಥಿಗಳಿಗೆ ಕ್ರಮಬದ್ಧವಾಗಿ ಶಿಕ್ಷಣ ನೀಡುವ ಪದ್ಧತಿಯು ಜಾರಿಗೆ ಬಂದಿತು. ಅಲ್ಲಿಯೇ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು.
- ಇವು ಗ್ರೀಕರ ಆಸ್ಕ್ಲೆಪಿಯಾನುಗಳ ಆದಿ ಸ್ವರೂಪಗಳಾಗಿದ್ದವು.
ಸಾರಾಂಶ: ಮಾನವನ ವೈದ್ಯಕೀಯ ಇತಿಹಾಸವನ್ನು ಕನಿಷ್ಠ 4500 ವರ್ಷಗಳ ಹಿಂದಕ್ಕೆ ಕೊಡೊಯ್ಯಬಹುದು.
ಒಬ್ಬನೇ ಒಬ್ಬ ವ್ಯಕ್ತಿಯು ತನ್ನ ಅವಿರತ ಹಾಗೂ ಸೂಕ್ಷ್ಮ ವಿಶ್ಲೇಷಣೆಯಿಂದ ಈಜಿಪ್ಷಿಯನ್ ಮತ್ತು ರೋಮನ್ ವೈದ್ಯಕೀಯವನ್ನು ಮಾತ್ರವಲ್ಲ, ಆಧುನಿಕ ವೈದ್ಯಕೀಯ ವಿಜ್ಞಾನಕ್ಕೂ ತಳಪಾಯ ವನ್ನು ಹಾಕಿದ ಎಂದರೆ ಅದು ಅತಿಶಯೋಕ್ತಿಯಾಗಲಾರದು.